ಬಾಗಿಲು ಸಣ್ಣಗೆ ಶಬ್ದ ಆದಾಗ ವಿಶ್ವ ಬಾಗಿಲು ತೆಗೆಯಲು ಹೋದ. ಟಿವಿ ಮುಂದೆ ನ್ಯೂಸ್ ನೋಡುತ್ತಾ ಕುಳಿತಿದ್ದ ಅವನಿಗೆ ಕರೋನಾ ಭೀತಿ ಇತ್ತು. ವಿಶಾಲು ಸಹ ಹೆದರಿದ್ದಳು.
“ರೀ, ಏಕ್ದಂ ತೆಗೀಬೇಡ್ರೀ ಬಾಗಿಲು’’
“ಯಾಕಮ್ಮಾ, ಏನು ಭಯ ಹಗಲು ಹೊತ್ತಲ್ಲಿ?”
“ಒಂದ್ವೇಳೆ ಕರೋನಾ ವೈರಸ್ ಬಂದಿದ್ರೆ ಏನು ಗತಿ?” ಎಂದಳು.
ವಿಶ್ವ ನಕ್ಕ. ‘‘ಅಲ್ಲ, ಕರೋನಾ ವೈರಸ್ ಬಾಗಿಲು ಬಡಿದು ಬರುತ್ತೇನು?” ಎಂದು ಕೇಳಿದ. ವಿಶಾಲು ಕರೋನಾ ಕತೆಯನ್ನು ಸವಿಸ್ತಾರವಾಗಿ ಹೇಳಿದಳು.
“ನಮ್ಮ ಎದುರು ಮನೆ ವೆಂಕಣ್ಣ ಅಂಡ್ ಫ್ಯಾಮಿಲಿ ಚೀನಾಗೆ ಹೋಗಿತ್ತು. ಚೀನಾದಿಂದ ಬರ್ತಾ ಕರೋನಾ ಭೂತ ಮೆಟ್ಕೊಂಡಿದೆ. ಅವರ್ನ ಹಡಗಲ್ಲಿ ಬಂಧಿಸಿ ಸಮುದ್ರದಲ್ಲೇ ಇಟ್ಟಿದ್ದಾರೆ.”
“ಹಿಂದಿನ ಕಾಲದಲ್ಲಿ ಪ್ಲೇಗು, ಸಿಡುಬು ಬರೋವರ್ನ ಮನೆ ಆಚೆ ಇಡ್ತಾ ಇದ್ರಲ್ಲ, ಹಂಗಾ?’’
ಶಸ್ತ್ರಾಭ್ಯಾಸ
“ಹೌದು, ಒಬ್ಬರಿಗೆ ಕರೋನಾ ಬಂದ್ರೆ ಪಕ್ಕದವರಿಗೆ ಬಂದ್ಬಿಡುತ್ತಂತೇರೀ, ಇದು ಹೆಚ್1ಎನ್1 ಜ್ವರದ ಥರ. ತಗೊಳ್ಳಿ ಮಾಸ್ಕ್ ಹಾಕ್ಕೊಳ್ಳಿ. ಉಸಿರಾಡೋಕೂ ತೆಗೀಬೇಡಿ, ಕಾಫಿ ಕುಡಿಯೋಕೂ ತೆಗೀಬೇಡಿ’’ ಎಂದಳು.
‘‘ಮಾಸ್ಕ್ ತೆಗೀದೆ ಕಾಫಿ ಕುಡಿಯೋದು ಹೇಗೆ..?’’ ಎಂದು ವಿಶ್ವ ತಲೆ ಕೆಡಿಸಿಕೊಂಡ. ವಿಶಾಲು ಸ್ಟ್ರಾಪೈಪ್ ತಂದಳು. ಕಾಫಿ ಕಪ್ಗೆ ಸ್ಟ್ರಾ ಪೈಪ್ ಹಾಕಿ ಮಾಸ್ಕ್ಗೆ ಸಣ್ಣ ತೂತು ಮಾಡಿ ಕೊಳವೆ ಸೆಟ್ ಮಾಡಿ ಕೊಟ್ಟಳು.
‘‘ಇದು ಅಭ್ಯಾಸ ಆಗಲಿ ಅಂತ ಮಾಡ್ತಿರೋದು ಕಣ್ರೀ, ಕರೋನ ಬಂದ ಕಾಲಕ್ಕೆ ಸುಲಭ ಆಗುತ್ತೆ’’
‘‘ಬರೋ ಮೊದಲೇ ಇಷ್ಟೆಲ್ಲಾ ವ್ಯವಸ್ಥೇನಾ..?’’
‘‘ಹೌದು, ಮಳೆ ಬರೋ ಮೊದಲು ಮನೆ ಹೆಂಚು ಸರಿಮಾಡಬೇಕು. ಅದು ಜಾಣತನ’’ ಎಂದು ವಿಶಾಲು ಬೀಗಿದಳು.
ಸಾಯೋಕೆ ಸೇವಿಂಗ್ಸ್!
‘‘ಸಾಯೋದನ್ನೂ ಅಭ್ಯಾಸ ಮಾಡಿಕೊಳ್ಳುವ ಕಾಲ ಬಂತಲ್ಲಪ್ಪ’’ ಎಂದು ವಿಶ್ವ ಯೋಚಿಸಿದ. ದುಬಾರಿ ನರ್ಸಿಂಗ್ ಹೋಮ್ಗಳಿಗೆ ದಾಖಲಾಗುವಾಗ ಒಂದು ಲಕ್ಷ ರೂಪಾಯಿ ಡಿಪಾಸಿಟ್ ಕಟ್ಟಿ, ವಾರ್ಡ್ಗೆ ಎಂಟ್ರಿ ತಗೋಬೇಕು. ಅದಕ್ಕಾಗಿ ಪ್ರತಿ ತಿಂಗಳೂ ಸೇವಿಂಗ್ಸ್….! ಸಾಯೋ ಕಾಲಕ್ಕೆ ಡಾಕ್ಟರ್ಗೆ ಕೊಡಲು ಸೇವಿಂಗ್ಸು….! ಕೆಲವರು ಡಾಕ್ಟರ್ ಜೊತೆ ಜಾಯಿಂಟ್ ಅಕೌಂಟ್ ಮಾಡಿದ ಉದಾಹರಣೆಗಳೂ ಇವೆ.’’
ವೆಂಕಣ್ಣ ಫ್ಯಾಮಿಲಿ ಚೀನಾ ನೋಡಿ ಬರಲು ಪ್ರವಾಸಕ್ಕೆ ಹೋಗಿ ಬಂದವರು. ಚೀನಾದಿಂದ ಬಂದವರಿಗೆ ನಮ್ಮ ದೇಶ ಸುಲಭವಾಗಿ ಪ್ರವೇಶ ಕೊಡುತ್ತಿಲ್ಲ. ಸಮುದ್ರದಲ್ಲೇ ಲಂಗರು ಹಾಕಿ ನಿಲ್ಲಿಸಿದರೆ ಊಟ-ತಿಂಡಿ ಗತಿ ಏನು..? ಆಹಾರ ಎಲ್ಲಿ ಸಿಗುತ್ತೆ. ಸಮುದ್ರಕ್ಕೆ ಗಾಳ ಹಾಕಿ ತೇಲುವ ತರಕಾರಿಗಳನ್ನು ಬೇರೆಯವರು ತಿನ್ನಬಹುದು. ಆದರೆ ವೆಂಕಣ್ಣ ಫ್ಯಾಮಿಲಿ ಅದನ್ನು ಮುಟ್ಟುವುದಿಲ್ಲ. ಮಗಳಿಗೆ ಮೀನಾಕ್ಷಿ, ಕುಕ್ಕುಟ ಕುಮಾರಿ ಎಂದೂ ಸಹ ಹೆಸರಿಟ್ಟಿಲ್ಲ.
ಭಯ ಇರಬೇಕು, ಆದರೆ ಈ ಲೆವೆಲ್ಗೆ ಅಲ್ಲ….! ಯೋಚಿಸುತ್ತಾ ಕುಳಿತಿರುವಾಗ ಬಾಗಿಲು ಶಬ್ದ ಆಯಿತು. ವಿಶ್ವ ಬಾಗಿಲು ತೆಗೆದ. ಗೆಳೆಯ ಮೋಹನ ಬಂದಿದ್ದ.
ಸೌಜನ್ಯ ಶೂರತೆ
“ಏನಪ್ಪಾ ಗಂಡ ಹೆಂಡ್ತೀರು ಆರಾಮವಾಗಿ ಇರೋವಾಗ ನಾನು ತರಲೆ ಮಾಡೋಕೆ ಕರಡಿ ಥರ ಬಂದೆ ಅಂತ ಬೇಸರ ಇಲ್ಲ ತಾನೇ?’’ ಎಂದು ಮೋಹನ ಕೇಳಿದ.
‘‘ಬೇಸರ ಆದರೂ ಹೇಳುವಂತಿಲ್ಲ ಮೋಹನ, ಇದು ಭಾರತೀಯರ ಸೌಜನ್ಯ….! ನೆರೆರಾಷ್ಟ್ರಗಳಿಂದ ಕದ್ದು ಬಂದು ನಮ್ಮಲ್ಲಿ ಆಶ್ರಯ ಪಡೆದು ನಮ್ಮ ಅನ್ನ ಕಿತ್ತುಕೊಳ್ಳುವವರಿಗೂ ನಾವು ರೇಷನ್ ಕಾರ್ಡು, ಓಟರ್ ಐ.ಡಿ. ಕೊಡೋ ಸಹೃದಯರು’’ ಎಂದು ವಿಶ್ವ ನಕ್ಕ.
‘‘ಭಾನುವಾರ ಬಿಡುವಾಗಿ ಇರ್ತೀಯಾ ಅಂತ ಬಂದೆ, ಕಾಫಿ ಕೊಟ್ರೆ ಸಾಕು’’ ಎಂದ ಮೋಹನ.
“ಭಾನುವಾರ ಯಾರಾದ್ರೂ ವಕ್ಕರಿಸ್ತಾರಲ್ಲ, ಜಾಸ್ತಿ ಡಿಕಾಕ್ಷನ್ ಹಾಕಿರ್ತೀವಿ. ಆ ಚಾನ್ಸ್ ಈ ಸಲ ನಿನಗಷ್ಟೇ’’ ಎಂದಾಗ ಮೋಹನ್ಗೆ ಶಾಕ್ ಆಗಲಿಲ್ಲ. ಏಕೆಂದರೆ ಇವೆಲ್ಲಾ ಮಾಮೂಲಿ ಡೈಲಾಗ್ಗಳು.
“ನಿನಗೊಂದು ಮುಖ್ಯವಾದ ವಿಷ್ಯ ಹೇಳೋಕೆ ಅಂತ ಬಂದೆ’’ ಎಂದು ಮೋಹನ ಹೇಳಿದಾಗ ವಿಶ್ವನಿಗೆ ಕುತೂಹಲ. ಮೋಹನ ಅತ್ತಿತ್ತ ನೋಡಿದ, ಮೆಲುದನಿಯಲ್ಲಿ ಹೇಳಿದ.
“ಕರೋನಾ ವೈರಸ್ಸು ಎಲ್ಲಾ ಕಡೆ ಹಬ್ತಾ ಇದೆಯಂತೆ. ಭಾರತಕ್ಕೆ ಬರೋಕೆ ಅದಕ್ಕೂ ಭಯ. ನಮ್ಮಲ್ಲಿ ಈವರೆಗೆ ಅಟ್ಯಾಕ್ ಆಗಿಲ್ಲ….’’
“ಯಾರೋ ಒಬ್ಬರಿಬ್ಬರು ಸತ್ರು ಅಂತ ಸುದ್ದಿ ಇದೆ.’’
“ಚೀನಾಕೆ ಹೋಗಿ ಲಗ್ಗೇಜ್ ಜೊತೆ ವೈರಸ್ ಕರ್ಕೊಂಡು ಬಂದವರು ಸತ್ರು…. ಅಷ್ಟೇ…. ಇಲ್ಲಿರೋವರಿಗೆ ಅದು ಹಬ್ತಾ ಇಲ್ಲ, ಹರಡ್ತಾ ಇಲ್ಲ…. ಯಾಕೆ ಗೊತ್ತಾ….?’’ ಎಂದು ಕೇಳಿದಾಗ ವಿಶ್ವನಿಗೆ ಆಶ್ಚರ್ಯ ಆಯ್ತು.
ಮೋಹನ ಪುರಾಣ
“ನೀನು ಹ್ಯಾಗೂ ಆಯುರ್ವೇದಿಕ್ ಪಂಡಿತ ಮೋಹನ. ಹೇಗೆ ಅನ್ನೋದು ನಿನಗೆ ಗೊತ್ತಿರುತ್ತೆ. ಹೇಳು ಪರವಾಗಿಲ್ಲ….’’ ಮೋಹನ ಒಂದು ಪುರಾಣ ಕತೆಯನ್ನು ಶುರು ಮಾಡಿದ.
“ಪುರಾಣ ಕಾಲದಲ್ಲಿ ಕ್ಷೀರಸಮುದ್ರ ಅಂತ ಒಂದಿತ್ತು. ಸಮುದ್ರದ ತುಂಬಾ ಗಟ್ಟಿ ಹಾಲು….!
‘‘ಶುದ್ಧ ಎಮ್ಮೆ ಹಾಲು ಲೀಟರ್ಗೆ 42 ರೂಪಾಯಿ ಆಗಿದೆ ಕಣ್ರೀ.’’
‘‘ಅಂಥ ಹಾಲು! ಅಮೃತ ಅಂಬೋ ಬೆಣ್ಣೆಗಾಗಿ ಸಮುದ್ರಮಂಥನ ಆಯ್ತು. ಈ ಕಡೆ ರಾಕ್ಷಸರು, ಆ ಕಡೆ ದೇವತೆಗಳು. ಮಂದರ ಪರ್ವತಕ್ಕೆ ವಾಸುಕಿಯನ್ನು ಹಾಕಿ ಕಟ್ಟಿ ‘ಗರ್ರಾ ಗರ್ರಾ’ ಅಂತ ಮಜ್ಜಿಗೆ ಕಡೆಯುವಂತೆ ಕಡೆದರು. ಆಗ ಬಂದ ಎಂಟು ಐಟಮ್ಮುಗಳಲ್ಲಿ ಮುಖ್ಯವಾದ್ದು ಯಾವ್ದು ಹೇಳು.’’
‘‘ಎಂಟಲ್ಲ, ಇನ್ನೂ ಜಾಸ್ತಿ ಬಂದಿವೆ….’’
‘‘ನಾವು ಬಳಸ್ತಿರೋ ಮುಖ್ಯವಾದ ಎಂಟು ಐಟಮ್ಗಳು ಮಾತ್ರ ಹೇಳು’’ ಎಂದ ಮೋಹನ.
“ಗೊತ್ತು, ಮೊದಲು ಬಂದಿದ್ದು ವಿಷ. ಅದು ಅಬಕಾರಿ ಇಲಾಖೆಗೆ ಹೋಗಿ ಬಾಟೆಲ್ಗಳಲ್ಲಿ ಸೇರಿಕೊಳ್ತು’’ ಎಂದು ವಿಶ್ವ ಹೇಳಿದಾಗ ವಿಶಾಲೂ ಸಹ ನಕ್ಕಳು. ಅವಳಿಗೂ ಅಬಕಾರಿ ಇಲಾಖೆ ಬಗ್ಗೆ ಗೊತ್ತು.
‘‘ಹೌದು ಕಣ್ರೀ, ಡ್ರಿಂಕ್ಸ್ನ ಸ್ಲೋಪಾಯ್ಸನ್
ಅಂತಾರೆ. ರಂಗಣ್ಣನವರ ಮೊಮ್ಮಗ ಕುಡಿದು ಕುಡಿದು ಸತ್ತ’’ ಎಂದು ಉದಾಹರಣೆ ಹೇಳಿದಳು.
‘‘ಮೊದಲು ವಿಷ ಬಂತು. ಆಮೇಲೆ ಏನೇನೋ ಬಂತು….!’’ ಎಂದ ವಿಶ್ವ.
“ಏನೇನೋ ಅಲ್ಲ ಲಕ್ಷ್ಮಿ, ಕುದುರೆ, ಐರಾವತ, ಕಾಮಧೇನು ಮುಖ್ಯವಾಗಿ ಒಂದು ಮರ ಬಂತು. ಯಾವ ಮರ ಹೇಳು.’’
ವಿಶಾಲು ತಲೆ ಕೆರೆದುಕೊಂಡಳು. ಅವಳಿಗೆ ಗೊತ್ತಾಗಲಿಲ್ಲ. ಮಾವಿನಮರಾನಾ, ಹುಣಿಸೆಮರಾನಾ ಅಂತ ಕನ್ಫ್ಯೂಸ್ ಆಗಿತ್ತು.
‘‘ಬೆಳ್ಳಗೆ ಮಲ್ಲಿಗೆ ಹೂಗಳಿದ್ದಂತೆ ಮರದ
ಫೋಟೋ ನೋಡಿದ್ದೀನಿ’’ ಎಂದಾಗ ಮೋಹನ ನಕ್ಕ.
“ಮಲ್ಲಿಗೆ ಮರ ಅಲ್ಲ. ಅದು ದೈವದತ್ತವಾದ ಮರ. ಕಾಮಧೇನು ಥರ ಪೂಜ್ಯವಾದ ಮರ. ಸುಗಂಧ ನೀಡೋ ಮರ. ಕೃಷ್ಣನಿಗೆ ಬಹಳ ಪ್ರಿಯವಾದ ಮರ’’ ಎಂದು ಕ್ಲೂ ಕೊಟ್ಟ.
‘‘ಓಹ್, ಗೊತ್ತಾಯ್ತು. ಪಾರಿಜಾತ ಮರ.’’
ಪಾರಿಜಾತ ಮಹಾತ್ಮೆ
“ಹೌದು, ಪಾರಿಜಾತ ಮರ ಬಂತು. ಆ ಪಾರಿಜಾತದಲ್ಲಿರೋ ಔಷಧೀಯ ಗುಣ ಗೊತ್ತಾ? ಕರೋನಾ ವೈರಸ್ನ ಓಡಿಸುತ್ತೆ. ಇದು ಆಯುರ್ವೇದದಲ್ಲಿ ಪ್ರೂವ್ ಆಗಿದೆ. ಜ್ವರದ ಹೆಸರು ಬೇರೆ ಇರಬಹುದಷ್ಟೆ. ಭಾರತದಲ್ಲಿ ಪಾರಿಜಾತ ಮರಗಳು ಜಾಸ್ತಿ ಇವೆ. ಕೃಷ್ಣನ ಪೂಜೆಗೆ ಅದರ ಹೂಗಳನ್ನು ಬಳಸ್ತಾರೆ.’’
ವಿಶ್ವ ‘ತಾನು ಆ ಮರ ಎಲ್ಲಿ ನೋಡಿದ್ದೀನಿ’ ಅಂತ ತಲೆ ಕೆರೆದುಕೊಳ್ಳುತ್ತಿದ್ದ. ವಿಶಾಲು ಸೂಚನೆ ಕೊಟ್ಟಳು.
“ಅದೇರೀ, ದೇವಸ್ಥಾನಗಳ ಹತ್ರ ಹೂವು ಕೆಳಗಡೆ ಉದುರಿರುತ್ತಲ್ಲ. ಒಂಥರಾ ಆರೆಂಜ್ ತೊಟ್ಟು ಇರುತ್ತೆ. ರಂಗಮ್ಮನವರ ಮನೆ ಮುಂದೆ ಸದಾ ಹೂಗಳು ಬಿದ್ದಿರುತ್ತೆ. ಅದೇ ಪಾರಿಜಾತ ಮರ’’ ಎಂದಳು. ವಿಶ್ವನಿಗೆ ನೆನಪಿಗೆ ಬಂತು.
ಮೋಹನ ಮುಂದುವರಿಸಿದ. “ಅದೇ ಮರ…. ಪಾರಿಜಾತ ಮರದ 15 ಹೂವು, 15 ಎಲೆ ಬಿಸಿ ನೀರಲ್ಲಿ ಅರ್ಧ ಗಂಟೆ ಚೆನ್ನಾಗಿ ಕುದಿಸಬೇಕು. ಅದಕ್ಕೆ ಸ್ವಲ್ಪ ಜೀರಿಗೆ, ಶುಂಠಿ ಬೆರೆಸಬೇಕು. ಎರಡು ಲೋಟ ಇರೋ ನೀರು ಅರ್ಧ ಲೋಟಕ್ಕೆ ಕುದಿಸಿ ಇಳಿಸಬೇಕು. ಅನಂತರ ಸೋಸಿ ಆರಿಸಿ ಅದನ್ನು ತೆಗೆದು ಫ್ರಿಜ್ಜಲ್ಲಿ ಇಟ್ಕೊಂಡು ದಿನಕ್ಕೆ ಎರಡು ಸ್ಪೂನ್ ಬೆಳಿಗ್ಗೆ ಎದ್ದ ತಕ್ಷಣ ಸೇವಿಸ್ತಾ ಇದ್ರೆ ಯಾವ ಜ್ವರವೂ ಬರೊಲ್ಲ.’’
‘‘ಅಷ್ಟು ಶಕ್ತಿ ಇದೆಯಾ..?’’
ಮೋಹನ ನಗುತ್ತಾ ಹೇಳಿದ. “ಮಂಗನಿಂದ ಮನುಷ್ಯನಿಗೆ ಕ್ಯಾಸನೂರು ಮಂಗನ ಕಾಯಿಲೆ ಬರುತ್ತೆ. ಹಂದಿಗೆ ಬರುತ್ತೆ, ಆಮೇಲೆ ಮನುಷ್ಯನಿಗೆ. ಕೋಳಿಗೆ ಬಂದು ಮನುಷ್ಯನಿಗೆ ಬರುತ್ತೆ. ಕರೋನಾ ಹಂಗಲ್ಲ. ಚೀನಾಗೆ ಬಂದು ಅನಂತರ ಬೇರೆ ಕಡೆಗೆ ಹರಡುತ್ತೆ. ರೋಗ ಇರೋ ಯಾವುದೇ ಬ್ಯಾಕ್ಟೀರಿಯಾನ ಪಾರಿಜಾತ ಕಷಾಯದಿಂದ ದೂರ ಇಡಬಹುದು. ಅಂಥ ಒಂದು ಬಲವಾದ ಪವಿತ್ರ ಮರ ನಮ್ಮಲ್ಲೇ ಇದೆ’’ ಎಂದಾಗ ವಿಶ್ವನಿಗೆ ಖುಷಿಯಾಯ್ತು.
ರಂಗಮ್ಮನಿಗೆ ಮರದ ಔಷಧೀಯ ಗುಣದ ಬಗ್ಗೆ ತಿಳಿಸಿ ಅದನ್ನು ಜೋಪಾನ ಮಾಡಿ ಎಂದು ತಿಳಿಸಲು ವಿಶ್ವ, ವಿಶಾಲು ಹೊರಟರು.
ರಂಗಮ್ಮನ ಮನೆ ಮುಂದೆ ಆಘಾತ ಕಾದಿತ್ತು. ರಸ್ತೆ ಅಗಲೀಕರಣ ಮಾಡಿ, ಮೆಟ್ರೋ ರೈಲು ಓಡಿಸಲು ಆ ರಸ್ತೆಯ ಅನೇಕ ಮರಗಳನ್ನು ಕಡಿಯಲಾಗಿತ್ತು. ಅವುಗಳ ನಡುವೆ ರಂಗಮ್ಮನ ಪಾರಿಜಾತ ಮರವೂ ನೆಲಕ್ಕೆ ಉರುಳಿತ್ತು.