ಬೆಳೆದು ಬೆಳಗಲಿ ಭಾರತ |
ನನ್ನಾತ್ಮನಿರ್ಭರ ಭಾರತ ||
ಅಂಕೆ ಸೂತ್ರವ ಮರೆತ ಮಾನವ
ಮೆರೆದ ಹಮ್ಮಿನ ಜಾಲದಿ
ಅಗೋಚರ ಕ್ರಿಮಿಯೊಂದದು
ಕೆಡವಿತವನನು ಮಾಯದಿ |
ದುಡಿದು ತಿನ್ನುವ ಕೈಗಳೆಲ್ಲವು ಬೇಡಿ ಬದುಕುವ ಕಾಲವು
ಕಾಲ್ನಡಿಗೆಗೆ ದಾರಿ ಸವೆದು ಸೊರಗಿಹೋದವು ಕಂಗಳು ||
ಬೆಳೆದು ಬೆಳಗಲಿ ಭಾರತ |
ನನ್ನಾತ್ಮನಿರ್ಭರ ಭಾರತ ||
ಜಗವೆ ತಲ್ಲಣಗೊಂಡ ವೇಳೆಗೆ ಭಾರತಾಂಬೆ ಕಣ್ತೆರೆದಳು
ಬಂದಿಯಾಗುತ ಬೇಲಿಯೊಳಗೆ ತಾನೆ ಸಾವನು ಗೆದ್ದಳು |
ಆದರಿದು ವಿಶೇಷವಲ್ಲವು ಮುಂದೆ ಇರುವುದೇ ಸಾಹಸ
ಬದುಕು ಬರ್ಬರವಾದ ಕ್ಷಣದಲಿ
ಹೊಳೆಯುತಿರುವುದು ಆಗಸ ||
ಬೆಳೆದು ಬೆಳಗಲಿ ಭಾರತ |
ನನ್ನಾತ್ಮನಿರ್ಭರ ಭಾರತ ||
ಕೊಡವಿ ಕಾರಿರುಳನಿಂದು ಎದ್ದು ನಿಲ್ಲಲೆಬೇಕಿದೆ
ಜನ್ಮಭೂಮಿಯ ಋಣವನರಿತರೆ
ಅಲ್ಲೆ ಬಯಸುವ ಫಲವಿದೆ |
ಸ್ವಾಭಿಮಾನವು ಸೇರಿ ಹೊಮ್ಮುವ
ಸಂಘ ಶಕ್ತಿಯ ಸಮಯವು
ಬಾಳ ಸತ್ತ್ವವ ಸಾರಿ ಹೇಳುವ ಋಷಿಪರಂಪರೆ ಸತ್ಯವು ||
ಬೆಳೆದು ಬೆಳಗಲಿ ಭಾರತ |
ನನ್ನಾತ್ಮನಿರ್ಭರ ಭಾರತ ||
ಯುಗದಾಚೆಗೂ ಯೋಗವಿದ್ಯೆಯ
ಜಗಕೆ ಸಾರಿದ ಹೆಮ್ಮೆಯು
ಪುಣ್ಯಭೂಮಿಯ ದಿವ್ಯಶಕ್ತಿಗೆ ವಿಶ್ವವೇ ತಲೆಬಾಗಲು |
ಪರರ ಜೋಳಿಗೆಗಿಣುಕಬಾರದು
ಆತ್ಮಾಭಿಮಾನದ ಛಲವ ಹೊತ್ತು
ಬೇಡಿ ಪಡೆಯುವ ಬಯಕೆಗಿಂತ
ನೀಡಿ ಗಳಿಸುವ ಪುಣ್ಯ ಸಂಪತ್ತು ||
ಬೆಳೆದು ಬೆಳಗಲಿ ಭಾರತ |
ನನ್ನಾತ್ಮನಿರ್ಭರ ಭಾರತ ||
ಗುಡಿಯ ಒಳಗಿನ ಪುಟ್ಟ ಹಣತೆಯೆ
ಭರತಮಾತೆಗೆ ದೀವಿಗೆ
ಹಸಿರೆ ಹೊನ್ನು ಆಸರೆಯೆ ಮಣ್ಣು
ದುಡಿದು ಉಣ್ಣುವ ಕರ್ಮಿಗೆ |
ಎಲ್ಲ ಇರುವ ಪುಣ್ಯಭೂಮಿಯು
ನಮಗೆ ಭಾಗ್ಯವಿಧಾತೆಯು
ಮತ್ತೆ ಮೆರೆಯಲಿ ಮಣ್ಣ ಸತ್ತ್ವವು
ಜಗಕೆ ಜ್ಯೋತಿಯೆ ನಿತ್ಯವು ||
ಜಗಕೆ ಜ್ಯೋತಿಯೆ ನಿತ್ಯವು ||
ಬೆಳೆದು ಬೆಳಗಲಿ ಭಾರತ |
ನನ್ನಾತ್ಮನಿರ್ಭರ ಭಾರತ ||