ಕಡಲ ತಡಿಯ ಭಾರ್ಗವನೆ
ಸಿಡಿಲ ನುಡಿಯ ಓ ಶಿವನೆ |
ಕಡೆದ ಬೆಣ್ಣೆ ಮನದವನೆ
ಪೊಡಮಡುವೆನು ನಿನಗೆ ||೧||
ಸದಭಿಮಾನಿ ಕನ್ನಡಿಗನೆ
ಪೊಡವಿಯಗಲ ಸುಳಿದವನೆ |
ಹೃದಯಗಳನು ಮಿಡಿದವನೆ
ಪೊಡಮಡುವೆನು ನಿನಗೆ ||೨||
ಬದುಕನರಿತ ದ್ರಷ್ಟಾರನೆ
ಬದುಕನೊಲಿದ ಕತೆಗಾರನೆ |
ಬದುಕಿಗರ್ಥ ಬರೆದವನೆ
ಪೊಡಮಡುವೆನು ನಿನಗೆ ||೩||
ಕಡಲಿನಾಳವಳೆದವನೆ
ಒಡಲಿನಾಳಕಿಳಿದವನೆ |
ನುಡಿಗೆ ಹಿರಿಮೆ ತಂದವನೆ
ಪೊಡಮಡುವೆನು ನಿನಗೆ ||೪||
ಛಲವೆ ನಿನ್ನ ಜೊತೆಗಾರ
ಒಲವೆ ನಿನಗೆ ಓಂಕಾರ |
ಹಲವು ಕಲೆಯ ಗುಡಿಕಾರ
ಪೊಡಮಡುವೆನು ನಿನಗೆ ||೫||
ನಡೆವ ವಿಶ್ವಕೋಶ ನೀನು
ಜಡರ ನಡುವೆ ಜ್ಞಾನಿ ನೀನು |
ಹುಡುಕುಗಣ್ಣ ವಿಜ್ಞಾನಿ ನೀನು
ಪೊಡಮಡುವೆನು ನಿನಗೆ ||೬||
ನಿನ್ನ ಮತಿಗೆ ನೀನೆ ಸಾಟಿ
ನಿನ್ನನೋದುವವರು ಕೋಟಿ |
ಎನ್ನ ಎದೆಯ ವೀಣೆ ಮೀಟಿ
ಪೊಡಮಡುವೆನು ನಿನಗೆ ||೭||
(`ಕಡಲ ತೀರದ ಭಾರ್ಗವ’ ಕಾರಂತರಿಗೊಂದು ನುಡಿನಮನ)