ಎನಗೆ ಭೋಗ ಭಾಗ್ಯ ಬೇಡ
ಎನಗೆ ಜಪವು ತಪವು ಬೇಡ
ಎನಗೆ ನಿಮ್ಮ ತೊತ್ತು ಸೇವೆ ನಿತ್ಯವಾಗಲೈ || ||ಪ||
ಎನ್ನ ಕಂದಿಸುತ್ತ ಬಹಳ
ಎನ್ನ ಬಾಧಿಸುತ್ತ ಬಿಡದೆ
ಎನ್ನನೊಂದು ನೆವಗಳಿಂದ ಕಾಡಿದವರಿಗೆ |
ಎನ್ನ ಕೊಂದಡವರಿಗೆಲ್ಲ
ಎನ್ನ ಪೂಜೆ ಫಲಗಳೆಲ್ಲ
ಉನ್ನತದೊಳಗವರಿಗಾಗಿ ಸುಖದಿ ಬಾಳಲಿ || ||1||
ಹಿಂದೆಯೆನ್ನ ಬೈದವರಿಗೆ
ಮುಂದೆಯೆನ್ನ ಬೈದವರಿಗೆ
ಕುಂದದೆಲ್ಲ ಜನರ ನಡುವೆ ಬೈದಡವರಿಗೆ |
ಇಂದುಧರನ ಕರುಣದಿಂದೆ
ಅಂದಣವನು ಏರುವಂತೆ
ಕುಂದದೊಲೆದು ಅವರಿಗೆಲ್ಲ ಭೋಗವಾಗಲಿ|| ||2||
ಹಿಂಗದೆನ್ನ ನಿಂದಿಸಿದ ಜ
ನಂಗಳೆಲ್ಲ ಸುಖದೊಳಿರುವ
ಹಾಂಗೆ ಶಿವನು ಅವರಿಗೆಲ್ಲ ಭಾಗ್ಯವೀಯಲಿ|
ಮಂಗಳಾತ್ಮ ಷಡಕ್ಷರಿಯ
ಲಿಂಗ ನಿನ್ನ ತೊತ್ತು ಸೇವೆ
ಸಾಂಗಮಾಗಿ ಧರೆಯೊಳೆನಗೆ ನಿತ್ಯವಾಗಲಿ|| ||3||