ಉರಿಯುವ ದೀಪಕ್ಕೆ ಬೆಲೆ ಇರಬಹುದು. ಆದರೆ ಉರಿದುಹೋಗುವ ಕರ್ಪೂರಕ್ಕೆ ಬೆಲೆ ಕಡಮೆಯೇನೂ ಇಲ್ಲ. ಬೆಳಕು ಕೊಡುವ ಕಾರ್ಯದಲ್ಲಿ ಅದು ತನ್ನನ್ನೇ ತಾನು ಸುಟ್ಟುಕೊಂಡು ಇಲ್ಲದಂತಾಗಿ ಮಾಡಿಕೊಳ್ಳುತ್ತದೆ. ಸತ್ಕಾರ್ಯದಲ್ಲಿ ತನ್ನನ್ನು ಕಳೆದುಕೊಳ್ಳುವ ಅದಕ್ಕೆ ಹೆಚ್ಚಿನ ಬೆಲೆ ಇದೆ. ದೇವಸ್ಥಾನದ ಶಿಖರ ಎಲ್ಲರಿಗೂ ಗೋಚರಿಸಬಹುದು. ಅದರ ಅಡಿಗಲ್ಲು ಅಗೋಚರವಾಗಿರಬಹುದು. ಆದರೆ ಕಣ್ಣಿಗೆ ರಾಚುವಶಿಖರಕ್ಕೆ ಕಣ್ಣಿಗೆ ಕಾಣದ ಬುನಾದಿಯೇ ಆಧಾರ ಎಂಬುದನ್ನು ನಾವು ಮರೆಯಬಾರದು.
ಮನುಷ್ಯನಿಗೆ ತನ್ನ ಹೆಸರು ಎಲ್ಲ ಕಡೆ ಪ್ರಸಿದ್ಧಿಯಾಗಬೇಕು, ನನ್ನ ಹೆಸರು ಅಜರಾಮರವಾಗಬೇಕೆಂಬ ಹಂಬಲ ಬಹಳ ಪ್ರಾಚೀನವಾದದ್ದು. ತಾನು ಅಳಿದರೂ ಪರವಾಗಿಲ್ಲ, ಆದರೆ ತನ್ನ ಹೆಸರು ಉಳಿಯಬೇಕೆಂಬುದೆ ಹಲವರ ಹಂಬಲ. ತನ್ನ ಹೆಸರಿಗಾಗಿ ಮನುಷ್ಯ ಏನು ಮಾಡಲೂ ಹೇಸುವುದಿಲ್ಲ. ಸಂಸ್ಕøತದಲ್ಲೊಂದು ಸುಭಾಷಿತವಿದೆ –
‘ಘಟಂ ಛಿಂದ್ಯಾತ್, ಪಟಂ ಛಿಂದ್ಯಾತ್ ಕುರ್ಯಾದ್ವಾಗಾರ್ದಭ ಸ್ವರಮ್|
ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವ||’
ಎಂಬುದಾಗಿ. ‘ಮಡಿಕೆಯನ್ನು ಒಡೆ, ಬಟ್ಟೆಯನ್ನು ಹರಿ ಅಥವಾ ಕತ್ತೆಯಂತೆ ಕಿರಿಚು. ಒಟ್ಟಿನಲ್ಲಿ ಯಾವುದೋ ಒಂದು ವಿಧದಲ್ಲಿ ಪ್ರಸಿದ್ಧ ಪುರುಷನಾಗು’ ಎಂದು ಸುಭಾಷಿತ ತಿಳಿಸಿದಂತೆ ಮನುಷ್ಯನಿಗೆ ಪ್ರಸಿದ್ಧಿಯ ಹುಚ್ಚು ಪ್ರಬಲವಾದದ್ದು.
ಪ್ರಚಾರದ ಹಂಬಲಿಕೆ
ಓರ್ವ ಬಡ ಸ್ತ್ರೀ ಸುಂದರವಾದ ಬಂಗಾರದ ಬಳೆಯೊಂದನ್ನು ಖರೀದಿಸಿದಳು. ತನ್ನ ಜೀವನವಿಡೀ ಅದಕ್ಕಾಗಿ ಹಣ ಕೂಡಿಟ್ಟಿದ್ದಳು. ಅದನ್ನು ತೋರಿಸಿಕೊಳ್ಳುವ ಆಶೆಯಿಂದ ತನ್ನ ಹಳ್ಳಿಯ ಎಲ್ಲೆಡೆ ಹೋದಳು. ಆದರೇನು ಮಾಡುವುದು ಯಾರೂ ಆಕೆಯ ಬಳೆಯ ಬಗ್ಗೆ ಮಾತನ್ನೇ ಆಡಲಿಲ್ಲ. ಅಲ್ಲಿ ಎಲ್ಲರೂ ಹಣವಂತರೇ ಇದ್ದರು. ಹಾಗಾಗಿ ಅವರಿಗೆ ಆಕೆಯ ಬಳೆ ಒಂದು ದೊಡ್ಡ ವಿಷಯವೆಂದು ಎನಿಸಲಿಲ್ಲ. ಆಕೆಗೆ ಬಲು ನಿರಾಶೆ ಆಯಿತು. ಬಂದವಳೇ ತನ್ನ ಬಡ ಗುಡಿಸಿಲಿಗೆ ಬೆಂಕಿಇಟ್ಟು ಎದೆ ಎದೆ ಬಡಿದುಕೊಂಡು ನಾನು ಹಾಳಾದೆ ಎಂದು ಚೀರತೊಡಗಿದಳು. ಆಗ ಜನರೆಲ್ಲರೂ ಆಕೆಯ ಗುಡಿಸಲಿನ ಮುಂದೆ ಒಟ್ಟುಗೂಡಿದರು. ಆಗ ಅಲ್ಲೊಬ್ಬಾತ ಹೇಳಿದ – “ನಿನ್ನ ಗುಡಿಸಲು ಸುಟ್ಟು ಹೋಗುತ್ತಿರುವುದು ನೋಡಿದರೆ ಬೇಸರ ಆಗುತ್ತಿದೆ. ಆದರೆ ನಿನ್ನ ಕೈಯಲ್ಲಿ ಸುಂದರವಾದ ಬಂಗಾರದ ಬಳೆಯಿದೆ” ಎಂದ.
ಆಗ ಆಕೆ ಹೇಳಿದಳು: “ನೀನು ಮೊದಲೇ ಅದನ್ನು ಕಂಡಿದ್ದರೆ ನನ್ನ ಮನೆ ಸುಡುವುದನ್ನು ತಡೆಯಬಹುದಿತ್ತು. ಯಾರಾದರೂ ನನ್ನ ಬಳೆಯ ಬಗ್ಗೆ ಕೇಳಿದರೆ ಸಾಕೆಂದು ಮನ ತವಕಿಸುತ್ತಿತ್ತು. ಏನಾದರೂ ಮಾಡಿ ಪ್ರಚಾರ ಮಾಡಲೇಬೇಕೆಂದು ತನ್ನ ಈ ಗುಡಿಸಲು ಮನೆಗೆ ಬೆಂಕಿ ಇಟ್ಟೆ. ಎಲ್ಲರೂ ಬಂದೇ ಬರುವರು, ಯಾರಾದರೂ ಕೇಳಿಯೇ ಕೇಳುವರು ಎಂದು ಹೀಗೆ ಮಾಡಿದೆ. ಪರವಾಗಿಲ್ಲ, ನನ್ನ ಭಾರ ಕಳೆಯಿತು.
ಯಾರೋ ಒಬ್ಬರಾದರೂ ನನ್ನ ಬಳೆಯನ್ನು ಹೊಗಳಿದರಲ್ಲ ಸಾಕು. ಈ ಬಳೆ ನನ್ನ ಇಡೀ ಜೀವನದ ಗಳಿಕೆ-ಸಾಧನೆ” ಎಂದು. ಸಮಾಜದಲ್ಲಿ ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಜುಟ್ಟಿಗೆ ಮಲ್ಲಿಗೆ’ ಎನ್ನುವವರೇ ಅಧಿಕಮಂದಿ ಕಂಡುಬರುತ್ತಾರೆ.
ತನ್ನ ವ್ಯಕ್ತಿತ್ವವನ್ನು ಉನ್ನತಿಗೇರಿಸಿ ಸಮಾಜಮುಖಿಯಾಗಿ, ಪರೋಪಕಾರಿಯಾಗಿ ಬದುಕಿ ತನ್ನ ಹೆಸರನ್ನು ಜನರಿಗೆ ಪರಿಚಯಿಸುವುದಕ್ಕಿಂತ, ವಾಮಮಾರ್ಗದಲ್ಲೆ ತನ್ನ ಹೆಸರನ್ನು ಜನಪ್ರಿಯಗೊಳಿಸುವ ಅಪೇಕ್ಷೆ ಎಲ್ಲ ಕಡೆ ಕಂಡುಬರುತ್ತಿದೆ. ಜಗತ್ತು ನನ್ನನ್ನು ಗುರುತಿಸಬೇಕು, ಸಮಾಜ ನನ್ನನ್ನು ಸದಾ ಹೊಗಳುತ್ತಿರಬೇಕೆಂಬುದು ಮನುಷ್ಯನ ಆಸೆ. ಇದೊಂದು ರೀತಿಯ ದಾಹ. ಒಂದು ರೋಗ.
ಡಿ.ವಿ.ಜಿ. ತಮ್ಮ ಕಗ್ಗವೊಂದರಲ್ಲಿ ಬರೆಯುತ್ತಾರೆ –
ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ?|
ಕಸದೊಳಗೆ ಕಸವಾಗಿ ಹೋಹನಲೆ ನೀನು?||
ಮುಸುಕಲೀ ಧರೆಯ ಮರೆವೆನ್ನನ್, ಎನ್ನುತ ಬೇಡು |
ಮಿಸುಕದಿರು ಮಣ್ಣಿನಲಿ – ಮಂಕುತಿಮ್ಮ || (ಕಗ್ಗ-654)
ಕೀರ್ತಿಯ ಕನವರಿಕೆ
ನನ್ನ ಹೆಸರು ಪ್ರಖ್ಯಾತವಾಗಬೇಕು, ಪ್ರಸಿದ್ಧಿಗೆ ಬರಬೇಕು, ಎಲ್ಲರೂ ನನ್ನನ್ನು ಹೊಗಳಬೇಕು ಎಂಬ ಆಶಾಪಿಶಾಚಿ ನಿನ್ನನ್ನು ನೀನೇ ಮರೆಯುವಂತೆ ಮಾಡುತ್ತದೆ. ನಿನ್ನ ಕಾಲ ಬಂದಾಗ ಕಸದಲ್ಲಿ ಕಸವಾಗಿ, ಮಣ್ಣಲ್ಲಿ ಮಣ್ಣಾಗಿ ಅಥವಾ ಬೂದಿಯಾಗಿ ಹೋಗಿ ಬಿಡುವವನಲ್ಲವೇ ನೀನು? ಆಮೇಲೆ ನಿನ್ನನ್ನು ಕೇಳುವವರಾರು? ಬಾಹುಬಲಿಯ ಅಣ್ಣನಾದ ಭರತ ಚಕ್ರವರ್ತಿ ಅನುಭವಿಸದ ಭೋಗವಿಲ್ಲ. ಪ್ರಪಂಚವೆಲ್ಲವನ್ನು ಗೆದ್ದು ಉತ್ತರ ಹಿಮಾಲಯಕ್ಕೆ ಬಂದಾಗ ಅವನಿಗೆ ಅಲ್ಲಿ ತನ್ನ ಪ್ರಶಸ್ತಿಯನ್ನು ಬರೆಸಬೇಕೆಂದು ಆಸೆಯಾಯಿತಂತೆ. ಅಷ್ಟು ಹೇರಳವಾದ ಬಂಡೆಗಳಿದ್ದ ಹಿಮಾಲಯದಲ್ಲೂ ಅವನ ಪ್ರಶಸ್ತಿ ಬರೆಸುವುದಕ್ಕೆ ಒಂದಾದರೂ ಬಂಡೆ ಸಿಕ್ಕಲಿಲ್ಲವಂತೆ. ಏಕೆಂದರೆ ಹಿಂದಿನ ಚಕ್ರವರ್ತಿಗಳ ಪ್ರಶಸ್ತಿಗಳಿಂದ ಎಲ್ಲ ಬಂಡೆಗಳೂ ತುಂಬಿಹೋಗಿದ್ದವು. ಅದನ್ನು ಕಂಡ ಭರತ ಚಕ್ರವರ್ತಿಗೆ ತನಗಿಂತ ಹಿಂದೆ ಎಷ್ಟು ಜನ ಕೀರ್ತಿ ಪಡೆದಿದ್ದರು ಎಂದು ನೋಡಿ ನಾಚಿಕೆಯಾಯಿತಂತೆ. ಆದರೂ ಅವನ ಆಸೆ ಹೋಗಲಿಲ್ಲ. ಯಾವುದೋ ಒಂದು ಬಂಡೆಯ ಮೇಲಿದ್ದುದನ್ನು ಅಳಿಸಿ ತನ್ನ ಹೆಸರನ್ನು ಬರೆಯಿಸಿಬಿಟ್ಟನಂತೆ. ಮುಂದೆ ಮತ್ತೊಬ್ಬ ಬಂದು ಅದನ್ನು ಅಳಿಸಿಹಾಕಬಹುದೆಂಬ ವಿವೇಕ ಅವನಿಗೆ ಮೂಡಲಿಲ್ಲ. ಹೀಗೆ ಭರತ ಚಕ್ರವರ್ತಿ ತನ್ನ ಹೆಸರಿಗಾಗಿ ಬಸವಳಿದ. ಯಥಾರ್ಥವನ್ನು ತಿಳಿಯಬೇಕೆನ್ನುವವನು ಈ ಧರೆಯ ಮರೆವು ಎನ್ನನ್ ಮುಸಕಲಿ, ಎಂದರೆ ಈ ಲೋಕದ ಮರೆವು ನನ್ನ ಪಾಲಿಗೂ ಬರಲಿ, ಅದು ನನ್ನನ್ನು ಸ್ಮರಿಸಿಕೊಳ್ಳುವುದೂ ಬೇಡ ಎಂದು ಬೇಡಬೇಕಂತೆ. ಕೀರ್ತಿಗೋಸ್ಕರ ನೀನು ಒದ್ದಾಡಬೇಡ. ಮಣ್ಣಿನಲ್ಲಿ ಒಂದಾದ ಮೇಲೆ ಅಲ್ಲಿ ಹೆಸರಿಗಾಗಿ ಹಂಬಲಿಸತಕ್ಕದ್ದಲ್ಲ ಎಂಬುದು ತಿಮ್ಮನ ಅಭಿಪ್ರಾಯ. ಈ ಜಗತ್ತೆ ನಶ್ವರವಾಗಿರುವಾಗ, ಈ ಜಗತ್ತಿನಲ್ಲಿ ಎಲ್ಲವೂ ನಶ್ವರವಾಗಿರುವಾಗ ನಮ್ಮ ಹೆಸರು, ಕೀರ್ತಿ ಶಾಶ್ವತವಾಗಿರುವುದಾದರೂ ಹೇಗೆ!?
ತನಗೆ ಹೆಸರು ಬೇಕು ಎನ್ನುವ ವ್ಯಕ್ತಿಗಳು ಇದ್ದ ಹಾಗೆ ತನಗೆ ಹೆಸರು ಬೇಡ ಎನ್ನುವ ವ್ಯಕ್ತಿಗಳೂ ಸಮಾಜದಲ್ಲಿದ್ದಾರೆ. ಆದರೆ ಅವರು ಮರುಭೂಮಿಯಲ್ಲಿ ಓಯಸಿಸ್ ಇದ್ದಂತೆ. ಹೆಸರಿಗಾಗಿ ಹಂಬಲಿಸುವ ಜನರು ಹೇರಳವಾಗಿದ್ದರೂ ತಮ್ಮ ಹೆಸರನ್ನು ಮರೆಮಾಚುವ ಜನರು ವಿರಳವಾದರೂ ಇದ್ದಾರೆ ಎನ್ನುವುದೇ ಸಂತೋಷದ ವಿಷಯ. ಎಲೆಮರೆಯ ಕಾಯಿಯಂತೆ ಇವರು ಸಮಾಜಕ್ಕಾಗಿ ತನ್ನ ಜೀವನವನ್ನೆ ಸವೆಸುತ್ತಾರೆ. ಇವರು ಮಾಡಿದ ಕೆಲಸ ಕಾಣುತ್ತದೆಯೆ ವಿನಾ ಅವರ ಹೆಸರು ಎಲ್ಲೂ ಕಂಡುಬರುವುದಿಲ್ಲ. ಆದರೆ ಇವರ ಸಂಖ್ಯೆ ‘ಇಲ್ಲ’ ಎಂದು ನಿಷ್ಕಾಳಜಿ ಮಾಡಿ ಹೇಳುವಷ್ಟು ತುಂಬ ಸಣ್ಣದಿದೆ. ಆದರೆ ವಿರಳವಾದ ಇಂತಹ ವ್ಯಕ್ತಿಗಳು ಸಮಾಜದಲ್ಲಿ ಬೀರುವ ಪ್ರಭಾವ ಮಾತ್ರ ಅಗಾಧವಾದದ್ದು.
ಉರಿಯುವ ದೀಪಕ್ಕೆ ಬೆಲೆ ಇರಬಹುದು. ಆದರೆ ಉರಿದುಹೋಗುವ ಕರ್ಪೂರಕ್ಕೆ ಬೆಲೆ ಕಡಮೆಯೇನೂ ಇಲ್ಲ. ಬೆಳಕು ಕೊಡುವ ಕಾರ್ಯದಲ್ಲಿ ಅದು ತನ್ನನ್ನೇ ತಾನು ಸುಟ್ಟುಕೊಂಡು ಇಲ್ಲದಂತಾಗಿ ಮಾಡಿಕೊಳ್ಳುತ್ತದೆ. ಸತ್ಕಾರ್ಯದಲ್ಲಿ ತನ್ನನ್ನು ಕಳೆದುಕೊಳ್ಳುವ ಅದಕ್ಕೆ ಹೆಚ್ಚಿನ ಬೆಲೆ ಇದೆ. ದೇವಸ್ಥಾನದ ಶಿಖರ ಎಲ್ಲರಿಗೂ ಗೋಚರಿಸಬಹುದು. ಅದರ ಅಡಿಗಲ್ಲು ಅಗೋಚರವಾಗಿರಬಹುದು. ಆದರೆ ಕಣ್ಣಿಗೆ ರಾಚುವ ಶಿಖರಕ್ಕೆ ಕಣ್ಣಿಗೆ ಕಾಣದ ಬುನಾದಿಯೇ ಆಧಾರ ಎಂಬುದನ್ನು ನಾವು ಮರೆಯಬಾರದು. ಹೆಸರು ಬೇಕು ಎನ್ನುವವನು ಸಣ್ಣವನಾಗುತ್ತಾನೆ, ಬೇಡ ಎನ್ನುವವನು ದೊಡ್ಡವನೆನಿಸುತ್ತಾನೆ. ನಾನು ಹೆಸರುವಾಸಿಯಾಗಬೇಕೆಂಬುದರ ಹಿಂದೆ ನಮ್ಮ ಅಹಂಕಾರ ಅಡಗಿದೆ. ಹೆಸರಿನ ತ್ಯಾಗ ಎನ್ನುವುದು ಸಣ್ಣ ತ್ಯಾಗವಲ್ಲ. ‘ನಾನು’ ಎಂಬುದರ ತ್ಯಾಗವೇ ಅಹಂಕಾರದ ನಾಶ, ಅದೇ ಅಧ್ಯಾತ್ಮ ಸಾಧನೆ.
ಹೊಸಮನಿಯವರ ಹೆಸರತ್ಯಾಗ
ಕೆಲವು ವರ್ಷಗಳ ಹಿಂದೆ ನಡೆದ ಘಟನೆಯಿದು. ಹಾವೇರಿಯಲ್ಲಿ ಆಗ ಜನಸಾಮಾನ್ಯರ ಮುಂದಾಳು ಹೊಸಮನಿ ಸಿದ್ಧಪ್ಪನವರು ಅಲ್ಲಿಯ ನಗರಸಭೆಯ ಅಧ್ಯಕ್ಷರಾಗಿದ್ದರು. ಅವರು ಅಪ್ರತಿಮರು. ತಾವು ವಹಿಸಿಕೊಂಡ, ಇಲ್ಲವೆ ತನಗೆ ವಹಿಸಿಕೊಟ್ಟ ಕೆಲಸ ಯಾವುದೇ ಇದ್ದರೂ ಅದನ್ನು ಚೊಕ್ಕ ಚಿನ್ನವಾಗಿ ಮಾಡುತ್ತಿದ್ದರು. ಅವರು ಶಿಸ್ತುಬದ್ಧ, ತತ್ತ್ವಬದ್ಧ ಜೀವನವನ್ನು ನಡೆಸಿದ್ದರು. ಜನಸಾಮಾನ್ಯರಲ್ಲಿ ಸಮಾನತೆಯನ್ನು ಕಂಡಿದ್ದರು. ಮಹಾತ್ಮಾ ಗಾಂಧಿಯವರು ಕೈಗೆತ್ತಿಕೊಳ್ಳುವ ಮೊದಲೇ ಅಸ್ಪøಶ್ಯತಾ ನಿವಾರಣೆ ಪ್ರಶ್ನೆಯನ್ನು ಅವರು ಕೈಗೆತ್ತಿಕೊಂಡು ಆಚರಣೆಗೆ ತಂದಿದ್ದರು.
ನಗರಾಧ್ಯಕ್ಷರಾಗಿದ್ದ ಅವರು, ತಮ್ಮ ಊರಿನ ಹೈಸ್ಕೂಲಿಗಾಗಿ ಒಂದು ಭವ್ಯ ಕಟ್ಟಡವನ್ನು ಕಟ್ಟಿಸಿದರು. ತಮ್ಮ ಅಧಿಕಾರದ ಅವಧಿಯಲ್ಲಿ ಒಂದು ಸಣ್ಣ ಕಟ್ಟಡವನ್ನು ಕಟ್ಟಿಸಿದವರೂ ಕೂಡ ಅಲ್ಲಿಯ ಫಲಕದ ಮೇಲೆ ತಮ್ಮ ಹೆಸರು ದೊಡ್ಡದಾಗಿ ಬರಬೇಕೆಂದು ಅಪೇಕ್ಷಿಸುತ್ತಾರೆ. ಆದರೆ ಈ ಹೊಸಮನಿಯವರಿಗೆ ತಮ್ಮ ಹೆಸರಿನ ಬಗೆಗೆ ಸಂಪೂರ್ಣ ನಿರ್ಮೋಹ ಇದ್ದಿತು.
ಸಾಮಾನ್ಯವಾಗಿ ಒಂದು ನಗರಸಭೆ, ಇಲ್ಲವೆ ಒಂದು ಮಹಾನಗರಪಾಲಿಕೆಯಲ್ಲಿ ಇಂಥ ಕೆಲಸ ಏನಾದರೂ ನಡೆದರೆ, ಆಗ ಅಧಿಕಾರ ವಹಿಸಿಕೊಂಡವರೆಲ್ಲರೂ ತಮ್ಮ ಹೆಸರನ್ನು ಕಲ್ಲಿನಲ್ಲಿ ಕೆತ್ತಿಸಿ, ಆ ಕಟ್ಟಡದ ಗೋಡೆಯಲ್ಲಿಯೇ ಭದ್ರವಾಗಿ ಇರಬೇಕೆನ್ನುತ್ತಾರೆ.
ಹಾವೇರಿ ಹೈಸ್ಕೂಲು ಸಿದ್ಧವಾದಾಗ ಹೊಸಮನಿ ಸಿದ್ಧಪ್ಪನವರು ತಮ್ಮ ಹೆಸರನ್ನು ಕೆತ್ತಿಸಿ ಅಲ್ಲಿ ಇರಿಸಬೇಕೆನ್ನಲಿಲ್ಲ. “ನನ್ನ ಹೆಸರನ್ನು ಬರೆಸಿಕೊಳ್ಳಲು, ಇದೇನು ನನ್ನ ತಂದೆಯ ಆಸ್ತಿಯೇ? ಸಾರ್ವಜನಿಕ ಹಣದಿಂದ ಈ ಕಟ್ಟಡ ಆಗಿದೆ. ಅದರ ಮೇಲೆ ನನ್ನ ಹೆಸರು ಏಕೆ ಇರಬೇಕು? ಯಾವುದು ಜನರದೋ, ಅದು ಜನರಿಗಾಗಿಯೇ ಉಳಿಯಬೇಕು. ಯಾವ ವ್ಯಕ್ತಿಯೂ ಅದನ್ನು ತನ್ನದನ್ನಾಗಿ ಮಾಡಿಕೊಳ್ಳಬಾರದು.”
ಹೆಸರಿನ ಮೋಹಕ್ಕೆ ದೇಶದಲ್ಲಿ ಅನೇಕ ಜನರು, ಅನೇಕ ಬಗೆಯ ವರ್ತನೆಯನ್ನು ತೋರಿದ್ದಾರೆ. ತಮ್ಮ ಹೆಸರು ಇರಬಾರದೆನ್ನುವ ತ್ಯಾಗವನ್ನು ಹೊಸಮನಿಯವರು ತೋರಿಸಿದಂತೆ ತೋರಿಸಿದವರು ಬಹಳ ವಿರಳ.
ಅನಾಮಧೇಯರು
ಈ ದೇಶದ ಹಿರಿಯರು ಹೆಸರಿಗಾಗಿ ಕೆಲಸ ಮಾಡುತ್ತಿರಲಿಲ್ಲ. ತಮ್ಮ ಅದ್ಭುತ ಕೆತ್ತನೆಯಿಂದ ಅಲೌಕಿಕವೆನ್ನುವ ಬೇಲೂರು, ಹಳೇಬೀಡು, ಅಜಂತಾ, ಎಲ್ಲೋರಾದಂತಹ ಅಸಂಖ್ಯಾತ ದೇವಾಲಯಗಳನ್ನು ಕಟ್ಟಿದವರು ಯಾರು? ತಮ್ಮ ಅದ್ಭುತ ಕೆತ್ತನೆಯಿಂದ ಅಲೌಕಿಕವೆನ್ನುವ ದೇವಾಲಯಗಳನ್ನು ನಿರ್ಮಿಸಿದ ಎಷ್ಟೋ ಜನ ಶಿಲ್ಪಿಗಳು ಯಾರೆನ್ನುವುದು ನಮಗೆ ಗೊತ್ತಿಲ್ಲ. ಶ್ರವಣಬೆಳಗೊಳದ ಬಾಹುಬಲಿ ಸ್ವಾಮಿಯ ವಿಗ್ರಹವನ್ನು ಕೆತ್ತಿದ ಶಿಲ್ಪಿ ಯಾರೆನ್ನುವುದು ಇಂದಿಗೂ ಯಾರೊಬ್ಬರು ಅರಿಯರು. ಕೆಲ ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಸ್ಥಾಪಿಸಿದ ಬಾಹುಬಲಿಯ ಮೂರ್ತಿಯನ್ನು ಕೆತ್ತಿದವರು ರಾಷ್ಟ್ರಪ್ರಶಸ್ತಿ ವಿಜೇತ ಕಾರ್ಕಳದ ರಂಜಾಳ ಗೋಪಾಲ ಶೆಣೈ ಎಂಬುದಾಗಿ ಎಲ್ಲರಿಗೂ ಗೊತ್ತಿದೆ. ಆದರೆ ನೂರಾರು ವರ್ಷಗಳ ಹಿಂದೆಯೇ ಕಾರ್ಕಳದ ಗೊಮ್ಮಟನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಯಾರೆಂದು ಯಾರಿಗೂ ಗೊತ್ತಿಲ್ಲ.
ಅನೇಕ ವಿದ್ವಾಂಸರು ಪತಂಜಲಿಯ ಕಾಲವನ್ನು ಕ್ರಿ.ಪೂ. 2ನೇ ಶತಮಾನವೆಂದು ಹೇಳುವವರಾದರೂ ಅವನ ಕಾಲ ನಿರ್ದಿಷ್ಟವಾಗಿ ತಿಳಿಯದು. ಋಷಿಗಳು ಬಹುಸಂಖ್ಯಾತ ವಿಷಯಗಳ ಮೇಲೆ ಎಷ್ಟೊಂದು ಆಳವಾದ ದೃಷ್ಟಿಯಿಂದ ಪ್ರಕರಣ ಗ್ರಂಥಗಳನ್ನು ರಚಿಸಿರುವರೆಂದರೆ ಯುಗಯುಗಗಳು ಕಳೆದ ಮೇಲೂ ಅವರು ಹಳೆಯ ರೀತಿಯವರು ಎನ್ನಿಸಲಾಗಿಲ್ಲ; ಆದಾಗ್ಯೂ ಈ ಋಷಿಗಳು ತಮ್ಮ ಗ್ರಂಥಗಳಿಗೆ ತಮ್ಮ ಕಾಲದ ಹಾಗೂ ತಮ್ಮದೇ ಹೆಸರಿನ ಮುದ್ರೆಯನ್ನು ಅಳವಡಿಸಲು ಯತ್ನಿಸಲಿಲ್ಲವೆಂಬುದನ್ನು ಕಂಡು ಅನಂತರದ ಇತಿಹಾಸಕಾರರು ನಿಬ್ಬೆರಗಾಗಿದ್ದಾರೆ. ಋಷಿಗಳಿಗೆ ತಮ್ಮ ಕಿರಿದಾದ ಆಯುರ್ಮಾನ ಅನಂತ ಜೀವನದ ಕೇವಲ ಮಿಣುಕುಗಳಂತೆ ತಾತ್ಕಾಲಿಕ ಪ್ರಾಮುಖ್ಯವುಳ್ಳದ್ದು ಮಾತ್ರ ಎಂದೂ, ಸತ್ಯವು ಮಾತ್ರ ಕಾಲಾತೀತವಾದದ್ದು,
ಅದಕ್ಕೆ ತಮ್ಮದೇ ವೈಯಕ್ತಿಕ ಮುದ್ರೆಯನ್ನು ಹಾಕುವುದು ಸಾಧ್ಯವಿಲ್ಲ ಮತ್ತು ಅದು ತಮ್ಮ ವೈಯಕ್ತಿಕ ಸಂಪತ್ತಲ್ಲ ಎಂದೂ ತಿಳಿದಿತ್ತು.
ಹೀಗೆ ಇವರೆಲ್ಲರೂ ತಮ್ಮ ಹೆಸರಿನ ಬಗ್ಗೆ ನಿರ್ಲಿಪ್ತರಾಗಿದ್ದರು. ಹಿಂದಿನ ಕಾಲದವರು ದಾನವನ್ನೂ ಗುಪ್ತವಾಗಿ ಮಾಡುತ್ತಿದ್ದರು. ಬಲಗೈಯಿಂದ ಕೊಟ್ಟದ್ದು ಎಡಗೈಗೆ ಗೊತ್ತಾಗುತ್ತಿರಲಿಲ್ಲ.
ಎಡಗೈ ದಾನ
ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ಕರಾಚಿಯಲ್ಲಿ ಒಂದು ಆಸ್ಪತ್ರೆಯ ನಿರ್ಮಾಣಕ್ಕಾಗಿ ಬಿರುಸಿನ ಧನಸಂಗ್ರಹ ನಡೆದಿತ್ತು. ಕಾರ್ಯಕರ್ತರು ದೇಣಿಗೆಯನ್ನರಸಿ ಜಮ್ಶೇಟಜೀ ಮೆಹತಾ ಎಂಬ ಮಹನೀಯರಲ್ಲಿಗೆ ಹೋದರು. ಅವರಿಗೆ ಈ ಪ್ರೋತ್ಸಾಹಕ ಮಾತನ್ನೂ ಹೇಳಿದರು: “ಆಸ್ಪತ್ರೆಗಾಗಿ ರೂ. 10,000 ಅಥವಾ ಅದಕ್ಕೆ ಮೇಲ್ಪಟ್ಟು ದಾನ ಮಾಡುವವರ ಹೆಸರನ್ನು ಆಸ್ಪತ್ರೆಯ ಪ್ರಮುಖ ಸ್ಥಳದಲ್ಲಿ ಅಮೃತಶಿಲೆಯ ಫಲಕದಲ್ಲಿ ಪ್ರಕಟಿಸಲಾಗುತ್ತದೆ.” ಅದನ್ನು ಕೇಳಿ ಮೆಹತಾ ಮುಗುಳ್ನಕ್ಕರು. ಒಳಗೆ ಹೋಗಿ ಹಣದ ನೋಟುಗಳನ್ನು ತಂದು ಕಾರ್ಯಕರ್ತರ ಕೈಯಲ್ಲಿರಿಸಿದರು. ಅವರು ಎಣಿಸಿದರು. ಸಂದೇಹ ಬಂದು ಮತ್ತೆ ಎಣಿಸಿದರು. ಮೂರನೆಯ ಬಾರಿಯೂ ಎಣಿಸಿದ ಮೇಲೆ ಹೇಳಿದರು: “ಮೆಹತಾಜೀ, ಇದರಲ್ಲಿ 9900 ಇದೆ. ಇನ್ನೂ ನೂರು ರೂಪಾಯಿ ಕೊಟ್ಟರೆ ನಿಮ್ಮ ಹೆಸರನ್ನು ಅಮೃತಶಿಲಾ ಫಲಕದಲ್ಲಿ ಉಲ್ಲೇಖಿಸುತ್ತೇವೆ.” ಅದಕ್ಕೆ ಮೆಹತಾ ಉತ್ತರಿಸಿದರು: “ಅದು ಬೇಡವೆಂದೇ ನಾನು ನೂರು ರೂಪಾಯಿ ಕಡಮೆ ಕೊಟ್ಟಿರುವುದು. ಧನಿಕರ ಹೆಸರು ಹಾಗೆಲ್ಲ ಆಸ್ಪತ್ರೆಯಲ್ಲಿ ದಾಖಲೆಗೊಂಡರೆ ಉಳಿದ ದಾನಿಗಳಿಗೆ ಸಂಕೋಚವುಂಟಾದೀತು. ಹೆಸರು ಬರಲೆಂದೇ ಹಣ ಕೊಟ್ಟರೆ ಅದು ಸ್ವಾರ್ಥವಾದೀತೇ ವಿನಾ ದಾನವೆನಿಸುವುದಿಲ್ಲ. ದಯವಿಟ್ಟು ಇಷ್ಟನ್ನು ಮಾತ್ರ ಸ್ವೀಕರಿಸಿರಿ.” ಹೆಸರಿನ ಬಗ್ಗೆ ಮೆಹತಾರ ನಿರ್ಲಿಪ್ತತೆ ಉದಾತ್ತವಾದದ್ದು. ಆದರೆ ಹೆಸರಿನ ಬಗ್ಗೆ ನಿರ್ಲಿಪ್ತತೆಯನ್ನು ವಿಡಂಬನೆ ಮಾಡುವವರೂ ಇದ್ದಾರೆ.
ಸಹಿ ಇಲ್ಲದ ಚೆಕ್
ಒಂದು ನಗರದ ಜನರು ವಿದ್ಯಾಸಂಸ್ಥೆಗೆ ಹೊಂದಿಕೊಂಡಂತೆ ಬಡವರಿಗೆ ಉಚಿತ ವೈದ್ಯಕೀಯ ನೆರವು ನೀಡುವ ಆಸ್ಪತ್ರೆಯೊಂದಿಗೆ ದೇವಸ್ಥಾನವೊಂದನ್ನು ನಿರ್ಮಿಸಲು ಬಯಸಿದರು. ಅದು ಒಂದು ಕೋಟಿ ರೂಪಾಯಿ ಅಂದಾಜು ವೆಚ್ಚದ ಯೋಜನೆ. ಧನ ಸಂಗ್ರಹ ಸಮಿತಿಯ ಸದಸ್ಯರು ದೇಣಿಗೆಗಾಗಿ ಒಬ್ಬ ಶ್ರೀಮಂತ ಸೇಟ್ಜಿಯನ್ನು ಭೇಟಿ ಮಾಡಿದರು. ಆ ಸೇಟನು ಸ್ವಭಾವತಃ ಜಿಪುಣನಾಗಿದ್ದನು. ‘ದೇವಸ್ಥಾನದ ಯೋಜನೆಗೆ ನೀವೇ ಮೊದಲ ದೇಣಿಗೆದಾರರಾಗಬೇಕೆಂದು ಬಯಸಿದ್ದೇವೆ. ನಿಮ್ಮನ್ನು ದೇವರು ಸಮೃದ್ಧ ಶ್ರೀಮಂತಿಕೆಯಿಂದ ಆಶೀರ್ವದಿಸಿದ್ದಾನೆ. ನಮ್ಮ ಯೋಜನಾ ವೆಚ್ಚದ ಶೇಕಡಾ ಒಂದರಷ್ಟನ್ನು ನೀಡಿ’ ಎಂದು ಪ್ರಾರ್ಥಿಸಿದರು.
‘ಆದರೆ ಒಟ್ಟು ವೆಚ್ಚ ಎಷ್ಟಾಗಬಹುದು?’ ಸೇಟಜಿ ಪ್ರಶ್ನಿಸಿದ. ‘ಒಟ್ಟು ಯೋಜನೆಯ ಅಂದಾಜು ವೆಚ್ಚ ಒಂದು ಕೋಟಿ ರೂಪಾಯಿಗಳು.’ ಅವರು ವಿವರಿಸಿದರು, ಅದರ ಶೇಕಡ ಒಂದರಷ್ಟು ಮೊತ್ತ ಒಂದು ಲಕ್ಷ ರೂಪಾಯಿಗಳು.’
ತತ್ಕ್ಷಣವೆ ಸೇಟ್ಜಿ ಚೆಕ್ ಪುಸ್ತಕವನ್ನು ಹೊರತೆಗೆದು ಒಂದು ಲಕ್ಷ ರೂಪಾಯಿಗಳನ್ನು ಬರೆದು ಅವರ ಕೈಗಿತ್ತು ಮನೆಯೊಳಕ್ಕೆ ಹೋಗಿಬಿಟ್ಟನು. ಸದಸ್ಯರು ಬೆರಗಾಗಿ ಹೋದರು. ಇಷ್ಟೊಂದು ಕ್ಷಿಪ್ರ ಪ್ರತಿಕ್ರಿಯೆಯನ್ನು ಅವರು ನಿರೀಕ್ಷಿಸಿರಲಿಲ್ಲ. ಒಂದು ಲಕ್ಷ ರೂಪಾಯಿಗಳನ್ನು ಕೇಳಿದರೆ ಆತ ಹತ್ತು ಸಾವಿರ ರೂಪಾಯಿಗಳನ್ನು ಕೊಡಬಹುದೆಂದು ನಿರೀಕ್ಷಿಸಿದ್ದರು.
ಇದ್ದಕ್ಕಿದ್ದಂತೆ ಅವರಲ್ಲೊಬ್ಬ ಸದಸ್ಯನು ಚೆಕ್ಕಿಗೆ ರುಜುವನ್ನೆ ಹಾಕಿಲ್ಲದಿರುವುದನ್ನು ಗಮನಿಸಿದನು. ಅವರು ಸೇಟ್ಜಿ ಬಳಿಗೆ ಓಡಿ ಹೋಗಿ ಹೇಳಿದರು: “ಸ್ವಾಮಿ ಕೈ ತಪ್ಪಿನಿಂದ ತಾವು ಚೆಕ್ಕಿಗೆ ರುಜು ಮಾಡುವುದನ್ನು ಮರೆತುಬಿಟ್ಟಿದ್ದೀರಿ.”
‘ಅದು ಕೈತಪ್ಪಲ್ಲ’ ಸೇಟ್ಜಿ ಹೇಳಿದ; “ಧರ್ಮಕಾರ್ಯಗಳಿಗೆ ನೀಡಿದ ದೇಣಿಗೆಗಳು ಅನಾಮಿಕವಾಗಿರಬೇಕೆಂದು ಪವಿತ್ರಗ್ರಂಥಗಳು ಹೇಳುತ್ತವೆ. ಹಾಗೆಯೇ ನನ್ನ ದೇಣಿಗೆಯೂ ಅನಾಮಿಕವಾಗಿರಲಿ.”
ಅಜರಾಮರರು
ನಮ್ಮ ವ್ಯಕ್ತಿತ್ವವನ್ನು ಉದಾತ್ತಗೊಳಿಸಿ ಸಮಾಜದಲ್ಲಿ ಆದರ್ಶವಾಗಿ ಬದುಕಿದರೆ ಆತನ ಹೆಸರು ಇತಿಹಾಸದಲ್ಲಿ ಚಿರಸ್ಥಾಯಿಯಾಗುತ್ತದೆ. ನಾನು ಸುಳ್ಳೇ ಹೇಳುವುದಿಲ್ಲ ಅಂದರೆ ‘ಸತ್ಯಹರಿಶ್ಚಂದ್ರನ ಮೊಮ್ಮಗ ನೀನು’ ಎನ್ನುವುದು, ಪರಸ್ತ್ರೀಯರನ್ನು ನೋಡಿ ಜೊಲ್ಲು ಸುರಿಸುವುದೇ ಇಲ್ಲವೆಂದಾಗ ‘ಈತ ಶ್ರೀರಾಮಚಂದ್ರನ ಅಪರಾವತಾರ’ ಎನ್ನುವುದು, ಯಾವುದೇ ಕೆಲಸ ಮಾಡಿಯೇ ಮಾಡುತ್ತೇನೆ ಎಂದು ದೃಢವಾಗಿ ನಿಶ್ಚಯಿಸಿ ಕೆಲಸ ಸಾಧಿಸಿದಾಗ ‘ಈತನ ಭಗೀರಥ ಪ್ರಯತ್ನದಿಂದ ಆ ಕೆಲಸ ಆಯಿತು’ ಎನ್ನುವುದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಸತ್ಯಕ್ಕೆ ಹರಿಶ್ಚಂದ್ರ, ಮರ್ಯಾದೆಗೆ ಶ್ರೀರಾಮ, ಪ್ರತಿಜ್ಞೆಗೆ ಭೀಷ್ಮ, ಪ್ರಯತ್ನಕ್ಕೆ ಭಗೀರಥ ಹೀಗೆ ಒಂದೊಂದು ಜೀವನ ಮೌಲ್ಯಕ್ಕಾಗಿ ಇವರು ಜೀವನ ಸವೆಸಿದರು. ಇವರಾರು ಇತಿಹಾಸದಲ್ಲಿ ತಮ್ಮ ಹೆಸರು ಅಜರಾಮರವಾಗಬೇಕೆಂದು ಮೌಲ್ಯಕ್ಕಾಗಿ ಬದುಕಿದವರಲ್ಲ. ಬದಲಾಗಿ ಮೌಲ್ಯಕ್ಕಾಗಿ ಬದುಕಿದ್ದರಿಂದ ಅವರ ಹೆಸರು ಇತಿಹಾಸದಲ್ಲಿ ಅಜರಾಮರವಾಯಿತು.
ಹೆಸರನ್ನು ಬಯಸದವನ ಹೆಸರನ್ನು ಜನ ಮರೆಯುವುದಿಲ್ಲ. ಹೆಸರು ಬಯಸಿದವನ ಹೆಸರನ್ನು ಜನ ಮರೆಯುತ್ತಾರೆ. ಆದರೆ ಕೆಲವರು ಜನ ನನ್ನನ್ನು ಮರೆಯಬಾರದೆಂದು ತಾನು ಮಾಡಿದ ದಾನಕ್ಕಿಂತ ದುಪ್ಪಟ್ಟು ಖರ್ಚು ಮಾಡಿ ಪತ್ರಿಕೆಯಲ್ಲಿ ಪ್ರಚಾರ ಕೊಡುತ್ತಾರೆÉ. ತನ್ನ ಹೆಸರು ಅಜರಾಮರವಾಗಬೇಕೆಂದು ಬದುಕಿರುವಾಗಲೆ ತನ್ನ ಪುತ್ಥಳಿಯನ್ನು ಅಲ್ಲಲ್ಲಿ ಸ್ಥಾಪಿಸುತ್ತಾನೆ.
ಪುತ್ಥಳಿಯ ಆಸೆ
ಆಫ್ರಿಕದ ಘಾನದಲ್ಲಿ ಎನ್ಕ್ರೂಮಾ ಅವರು ಎರಡು ಸಾವಿರಕ್ಕಿಂತಲೂ ಹೆಚ್ಚು ತಮ್ಮ ಪ್ರತಿಮೆಗಳನ್ನು ಸ್ಥಾಪಿಸಿಕೊಂಡರು. ಅವರು ಹೋದರು, ಅವರ ಹಿಂದೆಯೇ ಆ ಎಲ್ಲ ಪ್ರತಿಮೆಗಳೂ ಹೋದವು.
ಕೆರೇಬಿಯನ್ ದ್ವೀಪ ದೇಶಗಳಲ್ಲಿ ಒಂದಾದ ಹೈತಿಯಲ್ಲಿ ದುವಾರಿಯರ್ ಎಂಬ ಒಬ್ಬ ಸರ್ವಾಧಿಕಾರಿ ಇದ್ದ. ಆ ದೇಶದಲ್ಲಿ ದುವಾರಿಯರ್ ಅಲ್ಲದ ರಸ್ತೆ, ಚೌಕ, ಬಡಾವಣೆ ಯಾವುದೂ ಇರಲಿಲ್ಲ. ಇಡಿಯ ದೇಶವೇ ದುವಾರಿಯರ್ಮಯವಾಗಿ ಹೋಗಿದ್ದಿತು. ಕಣ್ಣು ಹಾಕಿದ ಕಡೆಗಳಲ್ಲೆಲ್ಲ ಇಡೀ ದೇಶದ ತುಂಬ ಅವರ ಪ್ರತಿಮೆಗಳೇ ಕಾಣುತ್ತಿದ್ದವು. ಅಲ್ಲಿ ಈಗ ದುವಾರಿಯರ್ ಹೆಸರಿನ ಅವಶೇಷವೊಂದೂ ಉಳಿದಿಲ್ಲ. ಆದರೆ ಇಂತಹ ಅನುಭವದಿಂದ ಜನ ಪಾಠ ಕಲಿಯುವುದಿಲ್ಲ. ಮಾಯಾವತಿಯು ತನ್ನ ಹೆಸರು ಶಾಶ್ವತವಾಗಿರಬೇಕೆಂಬ ಹಪಾಹಪಿಯಿಂದ ಉತ್ತರ ಪ್ರದೇಶದಲ್ಲಿ ಹಲವಾರು ತನ್ನ ಪ್ರತಿಮೆಗಳನ್ನು ಸ್ಥಾಪಿಸಿದಳು. ಆದರೆ ಈ ಪ್ರತಿಮೆಗೆ ಎನ್ಕ್ರೊಮೊ, ದುವಾರಿಯರ್ ಪ್ರತಿಮೆಗೆ ಆದ ದುರವಸ್ಥೆ ಆಗುತ್ತದೆ ಎಂಬುದು ಆಕೆಗೆ ತಿಳಿದಿಲ್ಲ. ಹೆಸರಿನ ಹುಚ್ಚು ಇತಿಹಾಸವನ್ನು ಮರೆಸುತ್ತದೆ.
ನಾಮಬಲ
ಮಹಾಪುರುಷರನ್ನು ಹೇಗೆ ಅಳೆಯಬೇಕು ಎನ್ನುವುದಕ್ಕೆ ಅಮೆರಿಕದಲ್ಲಿ ಒಂದು ಮಾಪು ಗೊತ್ತುಪಡಿಸಿದ್ದಾರೆ. ಒಬ್ಬ ಮನುಷ್ಯ ಎಂಥವನೆನ್ನುವುದನ್ನು ನಿರ್ಣಯಿಸುವುದಕ್ಕೆ ಕೆಲವೊಂದು ಕಾಲಾವಧಿ ಬೇಕಾಗುತ್ತದೆ. ಸಮಕಾಲೀನ ಜೀವನದಲ್ಲಿ ದೊಡ್ಡವರಾಗಿ ಕಂಡಿರುವ ಎಷ್ಟೋ ಜನರು ಕಾಲ ಪರೀಕ್ಷೆಯಲ್ಲಿ ದೊಡ್ಡವರಾಗಿ ಉಳಿದಿಲ್ಲ. ವಾಷಿಂಗ್ಟನ್ ನಗರದಲ್ಲಿ ಒಂದು ‘ಕೀರ್ತಿ ಭವನ – ಹಾಲ್ ಆಫ್ ಫೇಮ್’ ಇದೆ. ಅಲ್ಲಿ ಒಬ್ಬನ ಭಾವಚಿತ್ರ ಬರಬೇಕಾದರೆ, ಅವನು ಕಾಲವಾಗಿ ಕನಿಷ್ಠ 50 ವರ್ಷಗಳಾದರೂ ಕಳೆದಿರಬೇಕು. 50 ವರ್ಷಗಳಷ್ಟು ಸಮಯ ಸವೆದ ಅನಂತರ ಅವನ ಪ್ರತೀತಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದರೆ, ಅಂಥವನ ಚಿತ್ರ ಮಾತ್ರ ಅಲ್ಲಿ ಬರುತ್ತದೆ. ಸಮಕಾಲೀನರ ಕಣ್ಣಿಗೆ ದೊಡ್ಡವರಾಗಿ ಕಾಣುವ ಎಷ್ಟೋ ಜನರು ಸಮಯದ ಕಣ್ಣಿಗೆ ದೊಡ್ಡವರಾಗಿ ಕಾಣುವುದಿಲ್ಲ.
ಇಂದು ಹೆಸರಿನ ಹುಚ್ಚು ಎಷ್ಟಿದೆ ಎಂದರೆ ದೇವಸ್ಥಾನಕ್ಕೆ ಕೊಡುವ ಚಿಕ್ಕಪುಟ್ಟ ದಾನಕ್ಕೂ ತಮ್ಮ ಹೆಸರನ್ನು ಹಚ್ಚಬೇಕೆಂದು ಅಪೇಕ್ಷೆ ಪಡುತ್ತಾರೆ. ಟ್ಯೂಬ್ಲೈಟನ್ನು ದಾನಕೊಟ್ಟರೆ ಅದರ ಮೇಲೆ ತಮ್ಮ ಹೆಸರು ಬರೆದು ಟ್ಯೂಬ್ಲೈಟಿನ ಬೆಳಕನ್ನೆ ಕತ್ತಲನ್ನಾಗಿಸುವ ಹುಚ್ಚರಿದ್ದಾರೆ. ಭಕ್ತನೊಬ್ಬ ದೇವಸ್ಥಾನಕ್ಕೆ ಹೋಗಿ ಪೂಜಾರಿಯ ಹತ್ತಿರ ಹೇಳಿದ:
ಭಕ್ತ: ನಾನು ದೇವಾಲಯಕ್ಕೆ ಫ್ಯಾನ್ ಅನ್ನು ಕಾಣಿಕೆಯನ್ನಾಗಿ ನೀಡಬೇಕೆಂದಿದ್ದೇನೆ. ಆದರೆ ಒಂದು ಶರತ್ತು.
ಪೂಜಾರಿ : ಏನದು?
ಭಕ್ತ : ಭಕ್ತರು ದೇವಾಲಯಕ್ಕೆ ಬಂದಾಗ ಫ್ಯಾನ್ ಆಫ್ ಮಾಡಿರಬೇಕು.
ಪೂಜಾರಿ: ಯಾಕೆ?
ಭಕ್ತ: ಫ್ಯಾನ್ ಮೇಲೆ ಇರೋ ನನ್ನ ಹೆಸರು ಅವರಿಗೆ ಕಾಣಬೇಡವೇ?
ಹೆಸರಿನಲ್ಲೇನಿದೆ ಎಂದು ಹಲವರು ಪ್ರಶ್ನಿಸುತ್ತಾರೆ. ಮನುಷ್ಯನನ್ನು ಗುರುತಿಸಲು ಹಾಗೂ ಕರೆಯಲು ಹೆಸರು ಬೇಕೆ ವಿನಾ ಅದಕ್ಕಿಂತ ಹೆಚ್ಚಿನ ಮಹತ್ತ್ವ ಅದಕ್ಕಿಲ್ಲ. ಮನುಷ್ಯನ ವ್ಯಕ್ತಿತ್ವಕ್ಕೆ ಮಹತ್ತ್ವವೇ ವಿನಾ ಆತನ ಹೆಸರಿಗಲ್ಲ. ಸೆಗಣಿಗೆ ಪರಿಮಳಯುಕ್ತ ಹೆಸರನ್ನು ಕೊಟ್ಟ ಮಾತ್ರಕ್ಕೆ ಅದು ತನ್ನ ದುರ್ಗಂಧ ಕಳೆದುಕೊಂಡು ಸುಗಂಧವೆನಿಸುವುದಿಲ್ಲ. ‘ಗುಲಾಬಿಗೆ ಯಾರಾದರೂ ಕಣಿಗಲೆ ಎಂದರೆ ಅದರ ಸುಗಂಧವಾಗಲಿ, ಸುಕುಮಾಲತೆಯಾಗಲಿ ಕಡಮೆಯಾಗುವುದೆ?’ ಎಂದು ಷೇಕ್ಸ್ಪಿಯರ್ ಕವಿ ಕೇಳಿದ. ಆದರೆ ಅವನೇ ತನ್ನ ನಿಜವಾದ ಹೆಸರನ್ನು ಒಂದು ಕೊಲೆಯ ಪ್ರಕರಣಕ್ಕಾಗಿ ಮುಚ್ಚಿಟ್ಟು ಬೇರೆ ಹೆಸರಿನಿಂದ ಜೀವನವನ್ನೆಲ್ಲಾ ಕಳೆಯಬೇಕಾಯಿತು. ಅದಕ್ಕಾಗಿ ಅವನು ‘ಹೆಸರಿನಲ್ಲೇನಿದೆ?’ ಎಂದು ಹೇಳಿರಬಹುದು ಎಂಬುದು ಕೆಲವರ ಅಭಿಪ್ರಾಯ.
ಹೆಸರಿನಲ್ಲೇನಿದೆ ಎಂದು ಷೇಕ್ಸ್ಪಿಯರ್ ಹೇಳಿದ್ದರೂ ಹೆಸರಿನ ವ್ಯಾಮೋಹ ಆತನಿಗೆ ಚೆನ್ನಾಗಿ ಗೊತ್ತಿತ್ತು. ಅವನದೇ ಇಂಗ್ಲೆಂಡಿನಲ್ಲಿ ‘ಹೆನ್ರಿ’ ಮತ್ತು ‘ರಿಚರ್ಡ್’ ಎಂಬ ಹೆಸರಿನ ಅನೇಕ ರಾಜರು ಆಗಿ ಹೋದರು. ಅವರಿಗೇನು ಬೇರೆ ಹೆಸರು ಗೊತ್ತಿರಲಿಲ್ಲವೇ? ಭಾರತದಲ್ಲೂ ‘ವಿಕ್ರಮಾದಿತ್ಯ’ ಅರಸರ ಸಂಖ್ಯೆ ಎಷ್ಟೆಂದರೆ ಅವರಲ್ಲಿ ಪರಾಕ್ರಮಶಾಲಿಯಾದ, ವಿಜಯ ವೈಭವಶಾಲಿಯಾದ ವಿಕ್ರಮಾದಿತ್ಯ ಯಾರು ಎಂದು ಕಂಡುಹಿಡಿಯುವುದೇ ಕಠಿಣವಾಗಿದೆ.
ಈ ಹೆಸರಿನ ಹುಚ್ಚಿಗೆ ಮೋಹಿತರಾಗದವರೆ ಇಲ್ಲ ಎನ್ನಬಹುದು. ಇದಕ್ಕೆ ಕವಿಗಳು, ಕಲಾಕಾರರು, ಸಾಹಿತಿಗಳು ಹೊರತಾಗಿಲ್ಲ. ಪ್ರಾಯಶಃ ಮನುಷ್ಯನಿಗೆ ತನ್ನ ದೇಹ ಹಾಗೂ ಹೆಸರಿನ ಬಗ್ಗೆ ಇರುವಷ್ಟು ಮೋಹ ಬೇರೆ ಯಾವುದರಲ್ಲೂ ಇರಲಿಕ್ಕಿಲ್ಲ. ಎಷ್ಟೋ ಬಾರಿ ನಮ್ಮ ಹೆಸರಿನ ಅರ್ಥಕ್ಕೂ ನಮ್ಮ ನಮ್ಮ ಜೀವನದ ಅನುಭವಕ್ಕೂ ತಾಳಮೇಳವೇ ಇರುವುದಿಲ್ಲ.
ನಾಮಕರಣ
ಪಾಟಲೀಪುತ್ರದ ಹೊರವಲಯದಲ್ಲಿ ಆಶ್ರಮ ನಿರ್ಮಿಸಿಕೊಂಡು ಜ್ಞಾನಾರ್ಜನೆ, ಜ್ಞಾನ ಪ್ರಸರಣದಲ್ಲೂ ಸಂತೋಷ ಕಾಣುತ್ತ ಆ ಆಚಾರ್ಯರು ಬದುಕು ಸವೆಸುತ್ತಿದ್ದರು. ಅವರಿಗೆ ನೂರಾರು ಮಂದಿ ಶಿಷ್ಯಂದಿರಿದ್ದರು. ಶಿಷ್ಯರಲ್ಲೊಬ್ಬನ ಹೆಸರು ದುರ್ಗುಣ. ಅವನ ತಂದೆ-ತಾಯಿಗಳು ಯಾವ ಕಾರಣಕ್ಕೆ ಅವನಿಗೆ ಆ ಹೆಸರನ್ನು ಇರಿಸಿದ್ದರೋ! ದುರ್ಗುಣನಿಗಂತೂ ತನ್ನ ಹೆಸರಿನ ಬಗ್ಗೆ ಅತೀವ ದುಃಖವಿತ್ತು. ‘ದುರ್ಗುಣಾ ಇಲ್ಲಿ ಬಾ’, ‘ದುರ್ಗುಣಾ ನೀರು ತಾ’, ‘ಕಂಠಪಾಠ ಮಾಡಿದ್ದೀಯಾ ದುರ್ಗುಣಾ’ ಎಂದೆಲ್ಲ ಆಚಾರ್ಯರು ಹೆಸರು ಹಿಡಿದು ಕರೆಯುವಾಗ ಅವನಿಗೆ ಅವಮಾನವಾಗುತ್ತಿತ್ತು. ಸಹಪಾಠಿಗಳಲ್ಲಿ ಕೆಲವರು ಅವನನ್ನು ಮೂದಲಿಸಿಯೂ ಇದ್ದರು.
ಒಂದು ದಿನ ದುರ್ಗುಣ ಗುರುಗಳ ಬಳಿ ಸಾರಿ ಹೇಳಿದ: “ಗುರುಗಳೇ, ದುರ್ಗುಣ ಎಂಬ ನನ್ನ ಹೆಸರು ಬಹಳ ವಿಚಿತ್ರವಾದದ್ದು. ನನಗೆ ಅದರಿಂದ ತುಂಬಾ ತೊಂದರೆಯಾಗುತ್ತಿದೆ. ನನಗೆ ಒಂದು ಒಳ್ಳೆಯ ಹೆಸರನ್ನು ಇರಿಸಿ ಪುನರ್ ನಾಮಕರಣ ಮಾಡಿರಿ.” ಗುರುಗಳಿಗೆ ದುರ್ಗುಣನ ಆಂತರ್ಯ ತಿಳಿಯಿತು. ಅವರು “ಸರಿ, ನಿನ್ನ ಅಳಲು ಅರ್ಥವಾಯಿತು ದುರ್ಗುಣ. ನಿನಗೆ ಹೊಸ ಹೆಸರನ್ನು ಇರಿಸೋಣ. ಆದರೆ ಒಂದು ಶರತ್ತು. ನಿನಗೆ ಬೇಕೆನಿಸಿದಲ್ಲಿಗೆ ಹೋಗು, ಅತ್ಯುತ್ತಮ ನಾಮವನ್ನು ತಿಳಿದುಕೋ. ಅದನ್ನೇ ನಿನಗೆ ಇರಿಸುತ್ತೇನೆ’’ ಎಂದರು.
ದುರ್ಗುಣ ಆಶ್ರಮದಿಂದ ಹೊರಟ. ಹತ್ತಿರದ ಹಳ್ಳಿಯಲ್ಲಿ ಒಂದು ಮನೆಯ ಮುಂದೆ ಜನರು ಗುಂಪುಗೂಡಿರುವುದು ಕಾಣಿಸಿತು. ದುರ್ಗುಣ ತಾನೂ ಅಲ್ಲಿಗೆ ಹೋದ, ಏನಾಯಿತೆಂದು ವಿಚಾರಿಸಿದ. ಆ ಮನೆಯ ಯಜಮಾನನ ಮಗ, ಸಣ್ಣವಯಸ್ಸಿನವನು ತೀರಿಕೊಂಡಿದ್ದ. ದುರ್ಗುಣ ಮರಣಿಸಿದ ಯುವಕನ ಹೆಸರೇನೆಂದು ಅವರಲ್ಲೊಬ್ಬನನ್ನು ಪ್ರಶ್ನಿಸಿದ. ‘ಚಿರಂಜೀವಿ’ ಎಂಬುದು ಆತನ ಹೆಸರಾಗಿತ್ತು. “ಚಿರಂಜೀವಿ ಎಂಬ ಹೆಸರಿನವನೇ ಸತ್ತನೇ” ಎಂದು ದುರ್ಗುಣ ಚಕಿತನಾಗಿ ಕೇಳಿದರೆ, “ಹೆಸರಿಗೂ ಹುಟ್ಟು-ಸಾವಿಗೂ ಯಾವ ಸಂಬಂಧವೂ ಇಲ್ಲವಯ್ಯಾ, ಅಷ್ಟೂ ತಿಳಿಯದೆ ನಿನಗೆ” ಎಂದು ಗುಂಪಿನಲ್ಲಿದ್ದ ಯಾರೋ ಗದರಿಸಿದರು. ಮನಸ್ಸಿನಲ್ಲಿಯೇ ಅದೇನನ್ನೋ ಯೋಚಿಸುತ್ತ ದುರ್ಗುಣ ಮುಂದೆ ಪಾದ ಬೆಳೆಸಿದ.
ಹಳ್ಳಿಯ ಒಂದು ಮನೆಯಿಂದ ಬಾಲಕಿಯೊಬ್ಬಳ ಅಳು ಕೇಳಿ ಬರುತ್ತಿತ್ತು. ಮನೆಯ ಮಾಲೀಕ ಆ ಹುಡುಗಿಯನ್ನು ಥಳಿಸುತ್ತಿದ್ದ. ಆ ಮಾಲೀಕನಲ್ಲಿ ಥಳಿಸಲು ಕಾರಣ ಕೇಳಿದ. ಆ ಮಾಲೀಕ ಹೇಳಿದ; “ಆಕೆಯ ತಂದೆ ಈತನಿಂದ ಸಾಲ ಪಡೆದುಕೊಂಡಿದ್ದ. ಆದರೆ ತೀರಿಸಲು ಆತನಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಆ ಬಾಲಕಿ ಜೀತದಲ್ಲಿದ್ದಾಳೆ’’ ದುರ್ಗುಣ ಕುತೂಹಲದಿಂದ ಬಾಲಕಿಯ ಹೆಸರನ್ನು ಕೇಳಿದರೆ ‘ಲಕ್ಷ್ಮಿ’ ಎಂಬ ಉತ್ತರ ಸಿಕ್ಕಿತು. ‘ಲಕ್ಷ್ಮಿ’ ಎಂಬ ಹೆಸರಿನ ಬಾಲಕಿಯ ತಂದೆಗೆ ಪುತ್ರಿಯನ್ನು ಜೀತಕ್ಕಿರಿಸುವಷ್ಟು ಬಡತನವೇ’ ಎಂದು ವಿಷಾದಿಸುತ್ತ ದುರ್ಗುಣ ಮುಂದಕ್ಕೆ ನಡೆದ. ಹೆಸರು ವ್ಯಕ್ತಿಯನ್ನು ಗುರುತಿಸುವುದಕ್ಕೆ ಮಾತ್ರವೇ ಇರುವುದು ಎಂಬ ಸತ್ಯ ಅದಾಗಲೇ ಮನದಟ್ಟಾಯಿತು.
ಆಶ್ರಮಕ್ಕೆ ತೆರಳಲೆಂದು ದುರ್ಗುಣ ಕಾಡಿನಲ್ಲಿ ನಡೆಯುತ್ತಿದ್ದಾಗ ದಾರಿತಪ್ಪಿದ ವ್ಯಕ್ತಿಯೊಬ್ಬ ಅವನನ್ನು ತಡೆದು ಹಳ್ಳಿಯತ್ತ ತೆರಳಲು ದಾರಿ ಕೇಳಿದ. ಹಾದಿ ತೋರಿಸಿದ ದುರ್ಗುಣ ಕುತೂಹಲದಿಂದ ಅವನ ಹೆಸರು ಕೇಳಿದರೆ, ‘ದರ್ಶನ’ ಎಂದು ಉತ್ತರಿಸಿದನಾತ. ಹೆಸರಿಗೂ ವ್ಯಕ್ತಿಯ ಗುಣಾವಗುಣಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ದುರ್ಗುಣನಿಗೆ ಖಚಿತವಾಯಿತು.
ಆಶ್ರಮಕ್ಕೆ ಮರಳಿದ ದುರ್ಗುಣ ಗುರುಗಳ ಬಳಿ ತಾನು ಕಂಡದ್ದೆಲ್ಲವನ್ನೂ ವಿವರಿಸಿದ. ಮತ್ತೆಂದೂ ಆತ ತನ್ನ ಹೆಸರನ್ನು ಬದಲಾಯಿಸಬೇಕೆಂದು ಗುರುಗಳ ಹತ್ತಿರ ಹೇಳಲಿಲ್ಲ.
ತನ್ನ ವ್ಯಕ್ತಿತ್ವದಿಂದ ತನ್ನ ಹೆಸರನ್ನು ನಾಲ್ಕು ಜನರು ಗುರುತಿಸಿ, ಗೌರವಿಸುವಂತೆ ಮಾಡುವುದು ತಪ್ಪೇನಲ್ಲ. ಆದರೆ ಇಂದು ನಮ್ಮ ಜನರು ವ್ಯಕ್ತಿತ್ವವನ್ನು ಉದಾತ್ತಗೊಳಿಸದೆ ಇನ್ನೊಬ್ಬರು ಮಾಡಿದ ಕೆಲಸವನ್ನು ತಮ್ಮದೆಂದು ತೋರಿಸಿ ತಾನು ಜನಪ್ರಿಯನಾಗುವ ಕೆಟ್ಟ ಹಾದಿಯನ್ನು ಹಿಡಿದಿದ್ದಾರೆ. ಅಷ್ಟು ಮಾತ್ರವಲ್ಲ, ತನ್ನ ಹೆಸರನ್ನು ಜನಪ್ರಿಯಗೊಳಿಸುವ ಭರದಲ್ಲಿ ಈ ಹಿಂದೆ ಸಾಧನೆ ಮಾಡಿದ ಮಹನೀಯರ ಹೆಸರನ್ನು ಜನಮಾನಸದಿಂದ ದೂರಗೊಳಿಸುತ್ತಿದ್ದಾರೆ.
ಅದಲುಬದಲಾದ ಹೆಸರು
ಬೆಂಗಳೂರಿನಲ್ಲಿ ಸಾರ್ಕ್ ಸಭೆ ನಡೆಯಿತು. ಆ ಶೃಂಗ ಸಭೆಗೆ ಬಂದ ಸಾರ್ಕ್ ದೇಶದ
ಅತಿರಥ ಮಹಾರಥಿಗಳನ್ನು ವಿಶ್ರಾಂತಿಗೋಸುಗ ನಂದೀ ಬೆಟ್ಟಕ್ಕೆ ಕರೆದೊಯ್ದರು. ಆ ಬೆಟ್ಟದಲ್ಲಿದ್ದ ಕಬ್ಬನ್ಹೌಸ್, ಒಂದು ರಾತ್ರಿ ಕಳೆಯುವುದರೊಳಗೇ, ಜವಾಹರ ಭವನವಾಗಿ ಪರಿವರ್ತನೆಗೊಂಡಿತು. ಅದನ್ನು ಬದಲಿಸಿದ ಜನರಿಗೆ ತಾವು ಇತಿಹಾಸಕ್ಕೆ ಎಸಗಿದ ಅಪಚಾರದ ಕಲ್ಪನೆ ಇರಲಾರದು. ಹಳೆಯ ಮೈಸೂರು ಸಂಸ್ಥಾನದ ದುರ್ದಿನಗಳಲ್ಲಿ ಕನ್ನಡ ಆಡಳಿತವನ್ನು ಆರಂಭಿಸಿದ ಆದ್ಯ ಪುರುಷ ಈ ಕಬ್ಬನ್. ಅವನು ರಾಜ್ಯದ ಹಣಕಾಸಿನ ಸ್ಥಿತಿಯನ್ನು ಸುಗಮಗೊಳಿಸಿ, ರಾಜ್ಯದ ತುಂಬೆಲ್ಲ 1,800 ಮೈಲು ರಸ್ತೆ ನಿರ್ಮಿಸಿದ ಆ ದಾರಿಗಳಲ್ಲಿ ಸೇತುವೆಗಳನ್ನು ಕಟ್ಟಿಸಿದ. ತನ್ನ ಸರಕಾರೀ ಜೀವನದ 60 ವರ್ಷಗಳಲ್ಲಿ ಅವನು ಒಂದು ದಿನವೂ ರಜೆಯನ್ನು ಪಡೆಯಲಿಲ್ಲ. ಒಂದು ದಿನವೂ ತನ್ನ ದೇಶಕ್ಕೆ ಹೋಗಿ ಬರಲಿಲ್ಲ.
ಇಂದು ದೇಶದಲ್ಲಿ ಬಹುತೇಕ ನಗರ, ಬಡಾವಣೆ, ರಸ್ತೆ, ಸೇತುವೆ, ವಿಶ್ವವಿದ್ಯಾನಿಲಯಕ್ಕೆ ನೆಹರೂ, ಇಂದಿರಾಗಾಂಧಿ, ರಾಜೀವಗಾಂಧಿಯ ಹೆಸರನ್ನಿಟಿದ್ದಾರೆ. ಹೆಸರಿನ ಹುಚ್ಚು ಕೇವಲ ರಾಜಕಾರಣಿಗಳಿಗೆ ಮಾತ್ರವಲ್ಲ, ಜನಸಾಮಾನ್ಯರೂ ಇಂತಹ ರೋಗದಿಂದ ಬಳಲುತ್ತಿದ್ದಾರೆ. ನಾವು ಎಲ್ಲಿ ಹೋದರೂ, ಯಾವ ಕಾರ್ಯಕ್ರಮಕ್ಕೆ ಹೋದರೂ ನಮ್ಮನ್ನು ಇತರರು ಮಾತನಾಡಿಸಬೇಕು. ಮರ್ಯಾದೆ ಕೊಡಬೇಕೆಂದು ಅಪೇಕ್ಷಿಸುತ್ತೇವೆ. ಸಾಮಾನ್ಯ ವ್ಯಕ್ತಿಗಳಂತೆ ನಾವು ಬದುಕುವುದೇ ಇಲ್ಲ. ನಾವು ಬೇರೆಯವರಿಗಿಂತ ವಿಶೇಷ ವ್ಯಕ್ತಿ. ನಮ್ಮ ಸಣ್ಣ ಸಾಧನೆಯನ್ನೂ ಜನ ಗುರುತಿಸಬೇಕು, ಗೌರವಿಸಬೇಕೆಂದು ಹಾತೊರೆಯುತ್ತೇವೆ. ಮನುಷ್ಯನಲ್ಲಿ ಮಾತ್ರ ಈ ಹೆಸರಿನ, ಕೀರ್ತಿಯ ಹುಚ್ಚು. ಈ ದೃಷ್ಟಿಯಿಂದಲೆ ತಿಮ್ಮ ತಮ್ಮ ಕಗ್ಗವೊಂದರಲ್ಲಿ ವಿವರಿಸುತ್ತಾರೆ:
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ |
ಫಲ ಮಾಗುವಂದು ತುತ್ತೂರಿ ದನಿಯಿಲ್ಲ ||
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ |
ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮ || (ಕಗ್ಗ 661)
ಇತರರು ನಮ್ಮನ್ನು ಹೊಗಳಿ ನಾವು ಪ್ರಸಿದ್ಧಿ ಪಡೆಯಬೇಕೆಂಬ ಹಂಬಲ ನಮಗೆ. ನಾವಾಡುವ ಮಾತುಗಳಲ್ಲಿ ಸ್ವಪ್ರಶಂಸೆಯ ಮಾತುಗಳ ಭಾಗವೇ ಹೆಚ್ಚಾಗಿರುತ್ತದೆ ಎಂದರೆ ಉತ್ಪ್ರೇಕ್ಷೆಯಲ್ಲ. ನಾನು ಎಷ್ಟು ಜಾಣತನದಿಂದ ಕೆಲಸ ಮಾಡಿಬಿಟ್ಟೆ, ನಾನು ಇನ್ನೊಬ್ಬನನ್ನು ಹೇಗೆ ಬಾಯಿ ಮುಚ್ಚಿಸಿದೆ – ಹೀಗೆ ಏನೇನೋ ವಿಚಾರಗಳಲ್ಲಿ ನಮ್ಮ ಪ್ರತಿಭೆಯನ್ನು ನಾವೇ ಹೊಗಳಿಕೊಳ್ಳುತ್ತೇವೆ. ಆದರೆ ಜಗತ್ತಿಗೆ ಮಹದುಪಕಾರವನ್ನು ಮಾಡುವ ಪ್ರಕೃತಿಯ ಕ್ರಿಯೆಗಳು ನಡೆಯುವಾಗ ಯಾವ ಒಂದು ಸದ್ದೂ ಕೇಳಿಬರುವುದೇ ಇಲ್ಲ. ಭೂಮಿಯಲ್ಲಿ ನೆಟ್ಟ ಬೀಜದಿಂದ ಚಿಗುರು ಒಡೆಯುವಾಗ, ಕಾಯಿ ಹಣ್ಣಾಗುವಾಗ ಯಾವ ವಾದ್ಯಘೋಷವೂ ಕೇಳಿ ಬರುವುದಿಲ್ಲ. ಸೂರ್ಯಚಂದ್ರರು ಉದಯಿಸುವಾಗ ಯಾವ ಸದ್ದೂ ಇಲ್ಲ. ಅಂಥಾದ್ದರಲ್ಲಿ ನಿನ್ನ ಸ್ವಪ್ರಶಂಸೆ ಹಾಸ್ಯಾಸ್ಪದವಾಗಿ ಕಾಣುವುದಿಲ್ಲವೇ? ಆದದ್ದರಿಂದ ನಿನ್ನ ತುಟಿಯನ್ನು ಹೊಲಿದುಕೊಂಡು ಮೌನವಾಗಿರುವುದೇ ಸರಿ.
ಕೇವಲ ಮಾತಿನಿಂದ ಮಾತ್ರ ಮೌನವಲ್ಲ. ತಾನು ಹೆಸರುವಾಸಿಯಾಗಬೇಕೆಂಬ ಮನೋ ವಾಂಛೆಯಿಂದಲೂ ಮೌನವಾದರೆ ಮನುಷ್ಯನಿಗೆ ಗೌರವ ತಾನಾಗಿ ಒದಗಿ ಬರುತ್ತದೆ. ಅಂತಹವರ ಹೆಸರೆ ಇತಿಹಾಸದಲ್ಲಿ ಅಜರಾಮರವಾಗುತ್ತದೆ.