* ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು, ವಿಜಾಪುರ
ನಮ್ಮ ಬದುಕು ಒಂದು ಅಖಂಡ ಪ್ರವಾಹ. ಪ್ರತಿಕ್ಷಣವೂ ಅದು ಹರಿಯುತ್ತದೆ. ಹರಿದುಹೋದ ಕ್ಷಣವನ್ನು ಎಂದೂ ಮರಳಿ ಪಡೆಯಲಾಗದು; ಅಥವಾ ಹರಿಯುವ ಕ್ರಮವನ್ನು ನಿಯಂತ್ರಿಸಲೂ ಆಗದು. ಎಷ್ಟೇ ವೇಗದಿಂದ ಓಡುವ ವಾಹನಗಳನ್ನು ನಾವು ನಿಲ್ಲಿಸಬಹುದು. ಅಷ್ಟೇ ಏಕೆ, ಇಂದಲ್ಲ ನಾಳೆ ಈ ಪ್ರಚಂಡ ಪೃಥ್ವಿಯನ್ನು ನಿಲ್ಲಿಸಬಹುದು. ಆದರೆ ನಿರಂತರ ಹರಿಯುವ ಈ ಬದುಕಿನ ಪ್ರವಾಹವನ್ನು ನಾವು ನಿಲ್ಲಿಸಲಾರೆವು. ಏಕೆಂದರೆ ಹರಿಯುವಿಕೆಯೇ ಜೀವನ.
ಇಂಥ ಬದುಕನ್ನು ನಾವು ಕ್ಷಣವರ್ತಿಯಾಗಿ ಅನುಭವಿಸುತ್ತೇವೆ. ಆದರೆ ಅದನ್ನು ಇಡಿಯಾಗಿ ಅನುಭವಿಸಿದರೆಯೇ ಬದುಕಿನ ಭವ್ಯತೆಯ, ದಿವ್ಯತೆಯ ಅನುಭವವಾಗುವುದು. ಕಾವೇರಿ ನದಿಯು ಲಕ್ಷಾಂತರ ವರ್ಷಗಳಿಂದ ಹರಿಯುತ್ತಿರುವುದು. ನಾವು ಒಂದು ದಿನ, ಒಂದು ಘಳಿಗೆ ಕಾವೇರಿ ನದಿಯನ್ನು ನೋಡಿ ‘ನಾನು ಅಖಂಡ ಕಾವೇರಿಯನ್ನು ನೋಡಿದೆ, ಅನುಭವಿಸಿದೆ’ಎಂದು ಹೇಳಲಾಗದು. ಹಾಗೆಯೇ ಜೀವನವೂ ಒಂದು ಸುಂದರ ಕಾವೇರಿ.
ಜೀವನದ ಒಂದೆರಡು ಕ್ಷಣಗಳನ್ನು ಅವಲೋಕಿಸಿದರೆ, ಅನುಭವಿಸಿದರೆ ನಾವು ಇಡಿಯಾದ ಬದುಕನ್ನು ಅನುಭವಿಸಿದಂತಾಗುವುದಿಲ್ಲ. ಈ ಜೀವನವು ಅಸಂಖ್ಯ ಅನುಭವಗಳ ಪ್ರವಾಹ. ಈ ಕ್ಷಣದ ಅನುಭವ, ಮತ್ತೊಂದು ಕ್ಷಣದ ಅನುಭವ ಬೇರೆಬೇರೆ. ಈ ವಿಭಿನ್ನ ಅನುಭವಗಳ ಮಧ್ಯೆ ಸುಂದರ ಸಾತತ್ಯವಿದೆ. ಅದು ‘ನಾನು’ ಎಂಬ ಭಾವ. ಈ ಭಾವ, ಅನುಭವ ಇಲ್ಲವಾದರೆ ಬದುಕೇ ಇಲ್ಲ.
ಅನುಭವದಲ್ಲಿ ಎರಡು ಅಂಶಗಳು: (1) ಜ್ಞಾನಾಂಶ, (2) ಭಾವನಾಂಶ. ನಾವು ನೋಡುವ, ಮಾಡುವ, ಹೇಳುವ-ಕೇಳುವ ಮೊದಲಾದ ನಮ್ಮ ಎಲ್ಲ ಕ್ರಿಯೆಗಳಲ್ಲಿ ಭಾವವು ಬೆರೆತರೆ ಆ ಕ್ರಿಯೆಗಳಲ್ಲಿ ಒಂದು ಬಗೆಯ ಮಾಧುರ್ಯ ನಿರ್ಮಾಣವಾಗುತ್ತದೆ. ಅದರಿಂದ ಆ ಕ್ರಿಯೆಗಳು ಜಡಕ್ರಿಯೆಗಳಾಗದೆ ಸಂತಸದ ಸುಮಧುರ ಕ್ಷಣಗಳಾಗುತ್ತವೆ; ಬದುಕು ಆನಂದಪೂರ್ಣವಾಗುತ್ತದೆ. ಈ ಭಾವಾಂಶವೇ ಎಲ್ಲ ಜೀವಿಗಳಲ್ಲಿ ಇರುವ ಸುಂದರಾಂಶ.
ಒಂದು ಸುಂದರ ಹೂವನ್ನು ಯಾರು ಬೆಳೆಸಿದರೇನು? ಯಾರು ಗಳಿಸಿದರೇನು? ಅದನ್ನು ಕಂಡು ಸಂತಸಪಡಲು ಬರುತ್ತದೆ. ಅದು ಅನುಭವಿಯ ಲಕ್ಷಣ. ಅಂಥ ಅನುಭವಶೀಲ ಹೃದಯದ ಕೊರತೆಯಿಂದಾಗಿ ಮನುಷ್ಯ ಪರಸ್ಪರ ದ್ವೇಷಿಸುತ್ತಾನೆ; ಜೀವನದ ಸೌಂದರ್ಯ, ಸಂತಸ ಕಳೆದುಕೊಳ್ಳುತ್ತಾನೆ……. ಜೀವನದ ಸಮೃದ್ಧಿ ಹಾಗೂ ಸಂತೋಷಕ್ಕೆ ಕಾರಣ ಬಾಹ್ಯಸಿರಿಯಲ್ಲ, ಹೃದಯದ ಸಿರಿ. ಅದು ಅನುಭವ!
[ಪೂಜ್ಯ ಸ್ವಾಮಿಗಳ ‘ಬದುಕು’ ಪ್ರವಚನ ಸಂಕಲನದಿಂದ.
ಸಂಪಾದಕರು: ಡಾ ಶ್ರದ್ದಾನಂದ ಸ್ವಾಮಿಗಳು.
ಕೃಪೆ: ಜ್ಞಾನಯೋಗ ಫೌಂಡೇಶನ್, ವಿಜಾಪುರ.]