ಅಪ್ಪಯ್ಯ ತೋಟದಲ್ಲಿ ಎಲ್ಲಾದರೂ ಒಂದೆರಡು ದೊಡ್ಡ ಜೇನುನೊಣಗಳನ್ನು ನೋಡಿದರೆ ಅವುಗಳನ್ನು ಹಿಂಬಾಲಿಸಿ ಹೋಗಿ ಅವುಗಳ ಗೂಡಿರುವ ಜಾಗ ಪತ್ತೆ ಹಚ್ಚುತ್ತಿದ್ದರು. ಅಮವಾಸ್ಯೆಗೆ ಎದುರಾಗಿ (ಹುಣ್ಣಿಮೆಗೆ ಎದುರಾಗಿ ಸರಿಯಾಗಿ ನೆನಪಿಲ್ಲ) ಜೇನುತಟ್ಟಿ ತೆಗೆದರಷ್ಟೇ ಪೂರ್ತಿ ತುಪ್ಪವಿರುವ ರಸಭರಿತ ಜೇನು ಸಿಗುವುದೆಂಬ ಲೆಕ್ಕಾಚಾರ ಹಿಂದಿನವರಿಗೆ ತಿಳಿದಿತ್ತು.
ಪ್ರಕೃತಿಯ ಬಗ್ಗೆ ಕಣಕಣದ ಮಾಹಿತಿಕಣಜ ಕೆದಕುವ ಮನವುಳ್ಳವರು ಪೂರ್ಣಚಂದ್ರ ತೇಜಸ್ವಿಯವರು ಬರೆದ ಪುಸ್ತಕಗಳ ಪ್ರಿಯರಾಗಿರುತ್ತಾರೆ. ಪ್ರಕೃತಿಯ ಒಂದು ಸಪ್ಪಳವನ್ನೂ ಹಪ್ಪಳ ತಿನ್ನುವಾಗ ಬರುವ ಸಶಬ್ಧ ರುಚಿಯಂತೆ ಚಿತ್ರಿಸುವ ಕಲೆ ಪೂರ್ಣಚಂದ್ರರಿಗೆ ಒಲಿದಿದೆ. ಒಲಿದಿದೆ ಅಂದರೆ ತಪ್ಪಾಗಬಹುದು, ಅವರು ನಿಸರ್ಗವನ್ನು ಅಷ್ಟು ಸೂಕ್ಷ್ಮವಾಗಿ ಆಸ್ವಾದಿಸಿಯೇ ನಮ್ಮ ಮುಂದೆ ತೆರೆದಿಡುವರು ಎನ್ನಬೇಕಾಗುತ್ತದೆ.
ಇರಲಿ… ಅವರ ಕುರಿತು ಬರೆವಷ್ಟು ಪ್ರಬುದ್ಧಳಾಗಿಲ್ಲ ನಾನಿನ್ನೂ. ಆದರೆ ಅವರ ಬರಹಗಳಲ್ಲಿ ಬರುವ ಹೀರೋ ನನ್ನಪ್ಪಯ್ಯನ ಪಡಿಯಚ್ಚು. ಅದಂತೂ ಕೆಲವು ಬಾರಿ ಸಾಬೀತಾಗಿದೆ.
ಅಪ್ಪಯ್ಯ ಬೇಸಾಯಗಾರರಾದ್ದರಿಂದ, ಮತ್ತು ಹಳ್ಳಿಯಲ್ಲಿ ಹುಟ್ಟಿ ಬೆಳೆದದ್ದರಿಂದ ಅವರಿಗೆ ಮರ, ಗಿಡ, ಗಡ್ಡೆ, ಬಳ್ಳಿ, ಹೂವು, ಹಣ್ಣು, ನದಿ, ಹಳ್ಳ ಇತ್ಯಾದಿಗಳು ಚಿರಪರಿಚಿತ. ಜೊತೆಗೆ ಹುಳ ಹುಪ್ಪಟೆ, ಹಾವಿನ ಪ್ರಭೇದಗಳು, ಕೀಟಗಳು, ಪಕ್ಷಿಗಳು, ಪ್ರಾಣಿಗಳನ್ನು ಸಣ್ಣಹಿಡಿದು (ಇಂಚಿಂಚೂ) ಗಮನಿಸಿ, ಅವುಗಳ ಜೀವನವನ್ನು, ಆಹಾರ ಕ್ರಮವನ್ನು ತಿಳಿದುಕೊಂಡಿದ್ದರು.
ಅವುಗಳಲ್ಲಿ ಮುಖ್ಯವಾಗಿ ಜೇನುಹುಳುಗಳ ಎಲ್ಲಾ ಪ್ರಭೇದ, ಅವುಗಳ ಆಯಸ್ಸು, ಅವಗಳ ಜೀವನ ರೀತಿ, ಗೂಡಿನ ಆಕೃತಿ, ಜೇನುತುಪ್ಪ ಮಾಡುವ ಕಾಲ, ಅದನ್ನು ತೆಗೆಯುವ ಕೌಶಲ್ಯಗಳನ್ನು ಬಲ್ಲವರಾಗಿದ್ದರು.
ಈಗ ಈ ಕಾಡುತ್ಪನ್ನ ತೆಗೆದರೆ ದಂಡ ವಿಧಿಸುವರು. ಆದರೆ ಮೂವತ್ತು, ನಲವತ್ತು ವರ್ಷಗಳ ಹಿಂದೆ ಕಾನೂನು ಈಗಿನಂತೆ ಕಟ್ಟುನಿಟ್ಟಾಗಿ ಇರಲಿಲ್ಲ.
ಸಂಬಂಧಗಳಲ್ಲಿ ಹೊಟ್ಟೆಕಿಚ್ಚು ತುಸುವಿತ್ತಷ್ಟೆ
ಜೇನುತುಪ್ಪ ಪಂಚಾಮೃತಕ್ಕೆ, ಜೌಷಧ ತಯಾರಿಗೆ ಮತ್ತು ಹಲಸಿನಹಣ್ಣಿನ ದೋಸೆ, ಕಡುಬು, ಮುಳಕಕ್ಕೆ ನಂಚಿಕೊಳ್ಳಲು, ಚಿಕ್ಕಮಕ್ಕಳಿಗೆ ಏನಾದರೂ ತಿನ್ನುವ ಆಸೆಯಾದಾಗ ಸಣ್ಣ ತಟ್ಟೆಯಲ್ಲಿ ಒಂದು ಚಮಚೆಯಷ್ಟು ಹಾಕಿ ನೆಕ್ಕಲು ಕೊಡುತ್ತಿದ್ದ ಮಧುರ ದ್ರವ್ಯವಾಗಿತ್ತು.
ಇದನ್ನು ಈಗಿನಂತೆ ಹಣಕೊಟ್ಟು ಖರೀದಿಸುವ ಪ್ರಮೇಯವೇ ಇರಲಿಲ್ಲ ನಮ್ಮ ಮನೆಯಲ್ಲಿ. ಅಪ್ಪಯ್ಯ ಸ್ವತಃ ಕಾಡುಜೇನಿನ ಜಾಡುಹಿಡಿದು, ಅದರ ತುಪ್ಪವನ್ನು ಮನೆಗೆ ತರುವ ಯೋಜನೆ ರೂಪಿಸುತ್ತಿದ್ದ ಪರಿಯೇ ಬಹುರೋಚಕ!
ಅಪ್ಪಯ್ಯ ತೋಟ ಸುತ್ತುವಾಗ, ಕಾಡು ಗುಡ್ಡಗಳಲ್ಲಿ ಕೆಲಸ ಮಾಡುವಾಗ, ಆ ನೀರವ ಮೌನದ ಹಳ್ಳಿಯಲ್ಲಿ ಜೇನುಗುಂಪಿನ ಸದ್ದು ಕೇಳಿದರೆ, ಆ ಶಬ್ದದ ಜಾಡು ಹಿಡಿದೇ…ಅವು ಗೂಡು ಕಟ್ಟಿದ ಸ್ಥಳ ಪತ್ತೆ ಹಚ್ಚುತ್ತಿದ್ದರು. ಮಿಸ್ರಿ ಜಿಗ, ಕೋಲು ಜಿಗವಾದರೆ ಹೆಚ್ಚು ಅಪಾಯವಿರಲಾರದು. ಅದೇ ಹೆಜ್ಜಿಗ, ಮುಡಿಜಿಗ, ಹುಲಿಜಿಗವಾದರೆ ಅವುಗಳ ತಟ್ಟಿ ಬಳಿ ಸುಳಿದಾಡುವುದೇ ಅಪಾಯ!
ಸಣ್ಣ ಜಾತಿಯ ಜೇನುಗಳದ್ದು ಗೂಡೂ ಸಣ್ಣದಾಗಿದ್ದು, ಕೈಗೆಟುಕುವ ಜಾಗದಲ್ಲಿ ಇರುತ್ತದೆ. ಅದರಲ್ಲಿ ಸಿಗುವ ಜೇನುತುಪ್ಪವೂ ಒಂದು ಕೇಜಿ (kg) ಒಳಗೆ.
ಸಣ್ಣ ಜೇನಿನ ತುಪ್ಪ ತೆಗೆಯಲು ಮುಸ್ಸಂಜೆ ತಯಾರಿ ಮಾಡಬೇಕಾದ್ದು ಒಂದು ಹರಿತ ಕತ್ತಿ, ಒಂದು ಹೊಗೆಯಾಡಿಸುವ ಸೂಡಿ, ಬೆಂಕಿಪೆÇಟ್ಟಣ, ಒಂದು ಸಣ್ಣ ಬಕೆಟ್. ಮತ್ತೊಂದು ಸಾಧಾರಣ ಬೆಳಕಿರುವ ಬ್ಯಾಟರಿ ಇದ್ದರೆ ಸಾಕು. ಅಪ್ಪಯ್ಯ ಒಬ್ಬರೇ ಹೋಗಿ ತಟ್ಟಿಗೆ ಹೊಗೆ ಹಿಡಿದು, ಜೇನುಹುಳಗಳೆಲ್ಲ ಗೂಡಿನಿಂದ ಕಾಲ್ಕಿತ್ತ ಮೇಲೆ, ಹರಿತ ಕತ್ತಿಯಿಂದ ಆ ಜೇನುತುಪ್ಪ ತುಂಬಿದ ತಟ್ಟಿಯನ್ನು ಕೊಯ್ದು ಬಕೆಟ್ನಲ್ಲಿ ತುಂಬಿಸಿಕೊಂಡು ಮನೆಗೆ ಬರುತ್ತಿದ್ದರು. ಈ ಸಣ್ಣ ಜೇನಿನ ತುಪ್ಪದ ಬಣ್ಣ ಹದಾ ಚಿನ್ನದ ಬಣ್ಣ ಮತ್ತು ಅತೀ ಅಂಟೂ ಇರದ ತೆಳ್ಳಗಿನ ದ್ರವವಾಗಿರುತ್ತದೆ. ಇದು ಔಷಧ ಯೋಗ್ಯ ಜೇನು. ಚಪ್ಪರಿಸಿ ತಿನ್ನಲು ಇದು ಅಷ್ಟೇನು ರುಚಿಯಲ್ಲ!
ಅದೇ ಮುಡಿ ಜಿಗ, ಹೆಜ್ಜಿಗ, ಹುಲಿ ಜಿಗವಾದರೆ ದಟ್ಟ ಕಾಡಿನ ನಡುವೆಯೇ ಹೆಚ್ಚು ಗೂಡು ಕಟ್ಟುತ್ತವೆ. ನಮ್ಮ ಮನೆಯ ಆಸುಪಾಸು ಹೊಳೆ, ಮತ್ತು ಎತ್ತರೆತ್ತರ ಮರ ಇರುವ ಹಾಡಿಗಳು, ಬಯಲು, ಬಯಲಿನಾಚೆಗೂ ಮತ್ತೆ ಬೃಹದಾಕಾರದ ಮರಗಳಿರುವ ಕಾಡು ಗುಡ್ಡಗಳು.
ಅಪ್ಪಯ್ಯ ತೋಟದಲ್ಲಿ ಎಲ್ಲಾದರೂ ಒಂದೆರಡು ದೊಡ್ಡ ಜೇನುನೊಣಗಳನ್ನು ನೋಡಿದರೆ ಅವುಗಳನ್ನು ಹಿಂಬಾಲಿಸಿ ಹೋಗಿ ಅವುಗಳ ಗೂಡಿರುವ ಜಾಗ ಪತ್ತೆ ಹಚ್ಚುತ್ತಿದ್ದರು. ಅಮವಾಸ್ಯೆಗೆ ಎದುರಾಗಿ (ಹುಣ್ಣಿಮೆಗೆ ಎದುರಾಗಿ ಸರಿಯಾಗಿ ನೆನಪಿಲ್ಲ) ಜೇನುತಟ್ಟಿ ತೆಗೆದರಷ್ಟೇ ಪೂರ್ತಿ ತುಪ್ಪವಿರುವ ರಸಭರಿತ ಜೇನು ಸಿಗುವುದೆಂಬ ಲೆಕ್ಕಾಚಾರ ಹಿಂದಿನವರಿಗೆ ತಿಳಿದಿತ್ತು. ಜೇನುಗಳು ಅಮಾವಾಸ್ಯೆಯ ರಾತ್ರಿ ಅಥವಾ ಅದರ ಹಿಂದೆ ಮುಂದಿನ ಒಂದೆರೆಡು ದಿನಗಳಲ್ಲಿ ಸಂಭ್ರಮದಿಂದ ಹೀರಲು ಈ ಜೇನುತುಪ್ಪವನ್ನು ಸಂಗ್ರಹಿಸುವುದಂತೆ. ಇದೆಲ್ಲಾ ವೈಜ್ಞಾನಿಕವಾಗಿ ಸಾಬೀತಾದ ಸತ್ಯಗಳು ನಮ್ಮ ಅನಕ್ಷರಸ್ಥ ಹಳ್ಳಿಗರಿಗೂ ತಿಳಿದಿತ್ತು. ಇದು ಸೋಜಿಗ!
ಹೀಗೆ ದೊಡ್ಡ ಜೇನುಗೂಡು ಪತ್ತೆಹಚ್ಚಿದ ದಿನ ಅಪ್ಪಯ್ಯನ ಯೋಜನೆ ಮತ್ತು ತಯಾರಿ ಬಹು ಜಾಗೃತೆಯಿಂದ ನಡೆಯುತ್ತಿತ್ತು. ಮುಖ್ಯವಾಗಿ ನಮ್ಮ ಮನೆ ಕೆಲಸದಾಳಾದ ಮಂಜು, ನಾಗು, ಕಂಪದ ಸೀನ ಹಾಗೂ ರಾಗಿಮಕ್ಕಿ ಮಂಜು, ಇವರೊಡನೆ ಗುಪ್ತ ಮಾತುಕತೆಯಾಗುತ್ತಿತ್ತು. ಸಂಜೆಯಾಗುತ್ತಿದ್ದಂತೆ ಬ್ಯಾಟರಿಗಳಿಗೆ ಹೊಸ ಶೆಲ್ ಹಾಕಿ ಅದರ ಬೆಳಕಿನ ತೀವ್ರತೆಯನ್ನು ಪರೀಕ್ಷಿಸುತ್ತಿದ್ದರು. ಮನೆಯಾಳು ಮಂಜು ದೊಡ್ಡ ದೊಡ್ಡ ತೆಂಗಿನ ಓಲಿ, ಚಾಂಪರ್ಕೆ ಸೇರಿಸಿ ಬಿಗಿದು.. ಒಂದೋ, ಎರಡೋ ಗಟ್ಟಿಯಾದ ಸೂಡಿ ತಯಾರಿಸುತ್ತಿದ್ದರು. ಅಪ್ಪಯ್ಯ ಎರಡು ಕತ್ತಿಯನ್ನು ಉಜ್ಜುಕೊರಡಿಗೆ ಹಾಕಿ ತಿಕ್ಕಿ ಪಳ ಪಳ ಹೊಳೆವಂತೆ ಹರಿತಗೊಳಿಸಿ ಇಡುತ್ತಿದ್ದರು. ಹಾಗೆಯೇ ಬಾವಿಯ ರಾಟೆ, ಹಗ್ಗವನ್ನು ತೆಗೆದು ಈ ವಸ್ತುಗಳೊಂದಿಗೆ ಇಡುತ್ತಿದ್ದರು. ಕಂಬಳಿ ಒಂದು ಜೊತೆಗಿರುತ್ತಿತ್ತು. ಹಾಗೇ ಅಗಲ ಬಾಯಿಯ ಚರಿಗೆ, ಬಕೆಟ್ ಒಂದೊಂದು.
ಕತ್ತಲು ಕವಿಯಲು ಆರಂಭಿಸಿದೊಡನೆ ಇವರು ನಾಲ್ವರು, ಅಪ್ಪಯ್ಯ, ಈ ಎಲ್ಲಾ ಪರಿಕರಗಳನ್ನು ಒಬ್ಬೊಬ್ಬರು ಒಂದೊಂದು, ಎರಡೆರಡು ಹಿಡಿದು ಸದ್ದಿರದ ಹೆಜ್ಜೆ ಹಾಕುತ್ತ ಕಾಡಿನೊಳಗೆ ಕತ್ತಲನ್ನೂ ಲೆಕ್ಕಿಸದೇ ನಡೆಯುತ್ತಿದ್ದರು. ಮನೆಯ ನಾಯಿಗಳು, ನಾನು, ಅಕ್ಕ. ನಾವಿಬ್ಬರೂ ಆಗ ಒಂದು, ಎರಡನೆಯ ತರಗತಿಯವರು. ತಂಗಿಯಂದಿರಿಬ್ಬರು ಚಿಕ್ಕವರಾದ್ದರಿಂದ ಅವರನ್ನು ಮನೆಯಲ್ಲಿ ಅಮ್ಮನೊಂದಿಗೆ ಬಿಟ್ಟು ಹೊರಡುತ್ತಿದ್ದೆವು. ಕಾಲಿಗೆ ಚಪ್ಪಲಿಗಳೂ ಇರದ ದಿನಗಳವು. ನನಗೂ, ಅಕ್ಕನಿಗೂ ಯುದ್ದಕ್ಕೆ ಹೊರಟ ಅನುಭವ, ಆತಂಕ. ಆದರೂ ಭಂಡ ಧೈರ್ಯದಿಂದ ಅಪ್ಪಯ್ಯನ ಜೊತೆ ಕತ್ತಲಲ್ಲಿ ಹೆಜ್ಜೆ ಹಾಕಿ, ಜೇನುಗೂಡು ಇರುವ ಮರದ ಬುಡದಲ್ಲಿ ಹೋಗಿ ನಿಲ್ಲುತ್ತಿದ್ದೆವು. ಆ ಮರದ ಕೆಳಗೆ ಅಪ್ಪಯ್ಯ ಜಾಡು ಹಿಡಿದು ಹೋದಾಗಲೇ ತರಗೆಲೆಯನ್ನೆಲ್ಲ ಗುಡಿಸಿ, ಸಣ್ಣ ಪೆÇದೆ ಗಿಡಗಳನ್ನೆಲ್ಲ ಸವರಿ ಚೊಕ್ಕಮಾಡಿ ಬರುತ್ತಿದ್ದರು. ಮುಗಿಲೆತ್ತರದ ಮರ, ನೀರವ ಮೌನದ ಕತ್ತಲ ರಾತ್ರಿ, ಪ್ರಕಾಶಮಾನವಾದ ಬ್ಯಾಟರಿಯಿಂದ ಅರೆಕ್ಷಣ ಬಿಡುವ ಬೆಳಕಿಗೆ ಆ ಬೃಹತ್ ಮರಗಳು ದೊಡ್ಡ ರಾಕ್ಷಸನಂತೆ ತೋರುತ್ತಿತ್ತು ನನಗೂ ಅಕ್ಕನಿಗೂ. ಅಪ್ಪಯ್ಯ ಸೊಂಟಕ್ಕೆ ಆ ಬಾವಿಯ ಹಗ್ಗ ಸುತ್ತಿಕೊಂಡು, ಹರಿತ ಕತ್ತಿ ಸಿಕ್ಕಿಸಿಕೊಂಡು, ಬೆಂಕಿಪೆÇಟ್ಟಣ ಪಂಚೆಗೆ ಕಟ್ಟಿಕೊಂಡು, ಮರ ಏರಲು ತಯಾರಾಗಿ ಮರಕ್ಕೆ ನಮಸ್ಕರಿಸಿ ನಿಂತಾಗ ನಮ್ಮೆದೆಯಲ್ಲಿ ಪುಕುಪುಕು ಶುರು. ಮನೆಯಾಳು ಮಂಜು ಆ ಬಾವಿ ಹಗ್ಗದ ಮತ್ತೊಂದು ತುದಿಗೆ, ಮನೆಯಲ್ಲಿ ಕಟ್ಟಿ ತಂದ ಸೂಡಿ ಕಟ್ಟಿ ತಯಾರಿಗೊಳಿಸುತ್ತಿದ್ದರು. ಕಂಬಳಿಯನ್ನು ನಮ್ಮಲ್ಲಿ ಹಿಡಿದುಕೊಳ್ಳಲು ಹೇಳಿ…ಜೇನುಹುಳುಗಳು ಬಂದೆರಗಿದರೆ ಕಂಬಳಿ ಮೈಮೇಲೆ ಹೊದ್ದು ತಪ್ಪಿಸಿಕೊಳ್ಳುವುದು ಹೇಗೆಂದು ತರಬೇತಿ ನೀಡುವುದು ರಾಗಿಮಕ್ಕಿ ಮಂಜುವಿನ ಕೆಲಸ! ನಾಗು ಮತ್ತು ಕಂಪದ ಶೀನ ಚರಿಗೆ ಮತ್ತು ಬಕೆಟ್ ಮರದ ಮೇಲೆ ಹೇಗೆ ಕೊಡುವುದೆಂದು ಪ್ಲಾನ್ ಮಾಡುತ್ತಿದ್ದರು. ನಮ್ಮೊಂದಿಗೆ ಬಂದ ನಾಯಿಗಳು ಜೋರಾಗಿ ಕೂಗಿದರೆ ಅವುಗಳಿಗೆ ಪೆಟ್ಟು ಕೊಡುತ್ತಿದ್ದರು. ಅವುಗಳು ಈ ಸೂಕ್ಷ್ಮತೆ ಅರಿತುಕೊಂಡು ಕಯ್ ಕಯ್ ಎಂದು ಹಿಂದೆ ಮುಂದೆ ಸುತ್ತುತ್ತಾ ಒಮ್ಮೊಮ್ಮೆ ಕುಳಿತು ಎದ್ದು ಮಾಡುತ್ತಿದ್ದವು. ಅಪ್ಪಯ್ಯ ಅದು ಹೇಗೋ ಏನೋ ಕತ್ತಲಲ್ಲೇ ಆ ಬಹುಎತ್ತರದ ಮರ ಏರಿ ..ಮಂಜೂ …ಎಂದೊಡನೆ ಪ್ರಖರ ಬ್ಯಾಟರಿಯ ಕಿರಣಗಳು ಜೇನುಗೂಡಿನ ಜಾಗಕ್ಕೆ ಬೀಳುತ್ತಿತ್ತು. ಹೆಚ್ಚಾಗಿ ಈ ಜೇನುಗೂಡುಗಳು ದಪ್ಪವಾಗಿ ಅಡ್ಡಲಾಗಿ ಟಿಸಿಲೊಡೆದ ಮರದ ರೆಂಬೆಗಳಲ್ಲಿ ನೇತಾಡಿಕೊಂಡಿರುವಂತೆ ಕಟ್ಟಿರುತ್ತವೆ. ಅಪ್ಪಯ್ಯ ಆ ಗೂಡಿಗೆ ಕೈಗೆಟುಕುವಷ್ಟು ದೂರದಲ್ಲಿ ಅವರು ನಿಲ್ಲಲು ಅಥವಾ ಕುಳಿತುಕೊಳ್ಳಲು ಜಾಗ ಭದ್ರಪಡಿಸಿಕೊಂಡು ಸೂಡಿಗೆ ಬೆಂಕಿ ಹಿಡಿಸುತ್ತಿದ್ದರು. ಅದು ದಟ್ಟ ಹೊಗೆ ಉಗುಳಲು ಪ್ರಾರಂಭವಾದೊಡನೆ, ಆ ಸೂಡಿಯನ್ನು ಬೃಹದಾಕಾರದ ಆ ಜೇನುತಟ್ಟಿಯ ಕೆಳಗೆ ನಿಧಾನಗತಿಯಲ್ಲಿ ತೆಗೆದುಕೊಂಡು ಹೋಗಿ ಹಿಡಿವ ಪರಿ…ನಮ್ಮ ಮೈ ಕೂದಲೆಲ್ಲ ನೆಟ್ಟಗಾಗುತ್ತಿತ್ತು. ಗುಯ್ಗುಡುತ್ತಾ ಜೇನುಗಳು ಗುಂಪುಗುಂಪಾಗಿ ತಟ್ಟಿಗೆ ಬರುವ ಹೊಗೆಯಿಂದ ಉಸಿರು ಕಟ್ಟಿ ಹಾರಾಟ ಶುರುಮಾಡುತ್ತವೆ. ಎಲ್ಲ ಜೇನುಗಳು ಒಮ್ಮೆಲೆ ಎದ್ದು ಅಬ್ಬರಿಸಿ ಗುಯ್ಗುಟ್ಟುವಾಗ ಎಲ್ಲಾದರೂ, ತಮಗೆ ಅಪಾಯ ತಂದೊಡ್ಡಿದವರ ಸುಳಿವು
ಸಿಕ್ಕರೆ ಆಕ್ರಮಣ ಮಾಡುತ್ತವೆ. ಆ ಸುಳಿವು ಸಿಗದಂತೆ ಹೊಗೆಯ ಸೂಡಿಯನ್ನು ನಾಜೂಕಾಗಿ ಹಿಡಿಯುವ ಕಲೆ ಅಪ್ಪಯ್ಯನಿಗೆ ಗೊತ್ತಿತ್ತು. ಒಂದು ಹಂತಕ್ಕೆ ಎಲ್ಲಾ ಜೇನುಗಳು ಗೂಡಿನಿಂದ ಹಾರಿಹೋದ ನಂತರ ಅಪ್ಪಯ್ಯ ಮರದ ಮೇಲಿನಿಂದ ಮಾತನಾಡುತ್ತಿದ್ದರು. ಕೆಳಗಿರುವವರು ಅವರ ಕೇಳಿಕೆಗಳನ್ನು ಪೂರೈಸುವ ಕೆಲಸ ಮಾಡಬೇಕು. ಯಾರೂ ಮಾತನಾಡುವಂತೆ ಇರಲಿಲ್ಲ. ಅಪ್ಪಯ್ಯ ಮೇಲಿಂದ ರಾಟೆ ಮೂಲಕ ಹಗ್ಗ ಕೆಳಗಿಳಿಸಿದೊಡನೆ ಚರಿಗೆ ಅಥವಾ ಬಕೆಟ್ ಆ ಹಗ್ಗಕ್ಕೆ ಕಟ್ಟಿ ..ಆಯ್ತು ಎಂದ ತಕ್ಷಣ ಅಪ್ಪಯ್ಯ ಅದನ್ನು ಮರದ ಮೇಲೆ ಎಳೆದುಕೊಂಡು ಆ ಜೇನುಗೂಡಿನ ಕೆಳಭಾಗದಲ್ಲಿ ಸರಿಯಾಗಿ ಕೂರಿಸಿ,ಹರಿತ ಕತ್ತಿಯಿಂದ ತಟ್ಟಿಯು ಮರಕ್ಕಂಟಿದ ಜಾಗವನ್ನು ಕತ್ತರಿಸಿ, ಆ ಬಕೆಟ್ ಒಳಗೆ ತುಂಬಿಸಿ, ಕೆಳಗೆ ಇಳಿಸುತ್ತಿದ್ದರು. ಬೃಹತ್ ತಟ್ಟಿಗಳಾಗಿದ್ದರೆ ಮಧ್ಯಭಾಗದಲ್ಲಿ ಕತ್ತರಿಸಿ, ಒಮ್ಮೆ ಕೆಳಗಿಳಿಸಿ, ಮತ್ತೆ ಚರಿಗೆಯನ್ನು ಹಗ್ಗಕ್ಕೆ ಕಟ್ಟಿ ಮೇಲೆ ಕೊಡಬೇಕು. ಹೀಗೆ ಜೇನುತಟ್ಟಿ ಸುರಕ್ಷಿತವಾಗಿ ಮರದ ಬುಡಕ್ಕೆ ಬಂದ ಮೇಲೆ ಅಪ್ಪಯ್ಯ, ಸೂಡಿಯನ್ನು, ಹಗ್ಗವನ್ನು ಕೆಳಗಿಳಿಸಿ ಅವರು ಮರ ಇಳಿದು ಕೆಳಗೆ ಬರುವಾಗ ಮೈ ಎಲ್ಲ ಬೆವರಿ, ಪಂಚೆಯೆಲ್ಲ ಹಿಂಡುವಷ್ಟು ಒದ್ದೆಯಾಗಿರುತ್ತಿದ್ದರು. ಅಲ್ಲೊಂದು, ಇಲ್ಲೊಂದು ಜೇನು ಕಚ್ಚಿದ್ದೂ ಇದೆ ಕೆಲವೊಮ್ಮೆ. ಹೀಗೆ ಅಪ್ಪಯ್ಯ ಮರದಿಂದ ಇಳಿದ ಮೇಲೆ ಮತ್ತೆ ಜೇನುತುಪ್ಪದೊಂದಿಗೆ, ಹಿಡಿದುಕೊಂಡು ಹೋದ ಎಲ್ಲ ಸಾಮಾಗ್ರಿಗಳನ್ನು ಹೊತ್ತು ಮನೆಗೆ ಬರುವಾಗ ಯುದ್ಧಗೆದ್ದ ಸಂಭ್ರಮ.
ಮನೆಗೆ ಬಂದು ಮುಂದಿನ ಚಾವಡಿಯಲ್ಲಿ ಈ ಎಲ್ಲ ಪರಿಕರಗಳನ್ನು ಇಟ್ಟು ಅಪ್ಪಯ್ಯ ಸ್ನಾನಕ್ಕೆ ಹೋಗುತ್ತಿದ್ದರು. ಸ್ನಾನ ಮಾಡಿ, ಮತ್ತೆ ಜೇನಿನ ತಟ್ಟಿ ಇರುವ ಚಾವಡಿಗೆ ಬರುತ್ತಿದ್ದರು. ಆಗ ನಾವಿಷ್ಟೂ ಜನ ಆ ಚಾವಡಿಯಲ್ಲಿ ಕುಳಿತು ಜೇನು ತಿನ್ನಲು ಕಾಯಿತ್ತಿದ್ದೆವು. ಈಗ ನಮ್ಮ ಅಮ್ಮ ಶುದ್ಧವಾದ ಶುಭ್ರ ಹತ್ತಿಯ ಪಂಚೆ, ಅಗಲ ಬಾಯಿಯ ಬೊಗಣಿ, ಮತ್ತೆ ಹರಿವಾಣ ತಂದು ಈ ಚಾವಡಿಯಲ್ಲಿ ಇಡುವರು. ನಮ್ಮ ತಂಗಿಯಂದಿರೂ ನಮ್ಮ ಜೊತೆಯಾಗುವರು. ಅಪ್ಪಯ್ಯ ಮತ್ತೆ ಆ ರಸಪೂರಿತ ಜೇನಿನ ತಟ್ಟಿಯನ್ನು ಸ್ವಲ್ಪಸ್ವಲ್ಪವೇ ಕತ್ತರಿಸಿ ತೆಗೆದು, ಅಗಲಪಾತ್ರೆಯ ಮೇಲೆ ಹಾಸಿದ ಬಿಳಿ ಬಟ್ಟೆಯ ಮೇಲೆ ಜೇನನ್ನು ಹಿಂಡುವಾಗ, ನಮ್ಮ ಬಾಯಲ್ಲಿ ನೀರೂರಲು ಶುರು. ದಪ್ಪವಾದ ತುಪ್ಪ, ಕೆಂಪು ಒತ್ತಿದ ಹೊನ್ನಿನ ಬಣ್ಣದ ಆ ಅಂಟುರಸ ಅಪ್ಪಯ್ಯನ ಕೈಯಿಂದ ಧಾರೆಧಾರೆಯಾಗಿ ಸುರಿದು ಬಿಳಿಯ ಪಂಚೆಯ ಮೇಲೆ ಬೀಳುವಾಗ ನೋಡುವುದೇ ಬಹು ಚಂದ. ಚಿಕ್ಕ ಪುಟ್ಟ ಕಸಗಳೆಲ್ಲ ಆ ಪಂಚೆಯ ಮೇಲೆ ನಿಂತರೆ, ಜೇನು ಪಾತ್ರೆಯ ಒಳ ಸೇರುತ್ತಿತ್ತು. ಬೃಹತ್ ಜೇನಾದರೆ ಒಂದು ಡಬ್ಬ…ಅಂದರೆ ಇಪ್ಪತ್ತೈದು ಲೀಟರ್ ವರೆಗೆ ಒಂದೇ ಗೂಡಿನಿಂದ ಜೇನು ಸಂಗ್ರಹವಾದದ್ದೂ ಇದೆ. ಹೀಗೆ ಪೂರ್ತಿ ಹಿಂಡಿದ ನಂತರ, ನಮಗೆಲ್ಲ ತಟ್ಟೆಯಲ್ಲಿ ಹದವರಿತು ಜೇನು ಸುರುವಿ ಕೊಡಿತ್ತಿದ್ದರು. ಮಕ್ಕಳಾದ ನಾವೆಲ್ಲ ಶುದ್ದ ಜೇನು ಆಸ್ವಾದಿಸಿ ಖುಷಿಪಟ್ಟ ರಾತ್ರಿಗಳು ಹಲವು. ಈ ಕೆಲಸದಾಳುಗಳಿಗೂ ಒಂದೊಂದು ಸೌಟು ಜೇನು ಸವಿಯಲು ಸಿಗುತ್ತಿತ್ತು. ರಾಗಿ ಮಕ್ಕಿ ಮಂಜು ಎಂಬ ಆಳು ಎರಡು ಮೂರು ಸಿದ್ದೆ (200 ಎಮ್.ಎಲ್. ಎರಡು-ಮೂರು ಲೋಟ) ಜೇನುತುಪ್ಪ ಒಂದೇ ಬಾರಿಗೆ ಕುಡಿಯುತ್ತಿದ್ದರು. ಜೇನು ಹೆಚ್ಚು ಸವಿದರೆ ಉಷ್ಣ, ಮೈಉರಿ ಬರತ್ತೆ. ಆದರೆ ಇವರಿಗೆ ಏನೂ ಆಗುತ್ತಿರಲಿಲ್ಲ. ಜೇನು ಹಿಂಡಿದ ನಂತರ ಸಿಗುವ ಮೇಣವೂ ಬಹು ಉಪಯೋಗಿ.
ಈ ರೀತಿ ಬೃಹತ್ ಜೇನು ತೆಗೆಯಲು ಕನಿಷ್ಠ ಎರಡು ಮೂರು ಗಂಟೆಯ ಸಮಯ ಬೇಕಾಗುತ್ತಿತ್ತು.
ಮುಂಜಾಗೃತೆ ಬಹುಮುಖ್ಯ!
ಜೇನುತುಪ್ಪ ತುಂಬಿದ ತಟ್ಟಿ ಮರದಿಂದ ಕೆಳಗೆ ಇಳಿಸುವಾಗ, ಅದು ಏರಪೇರಾಗಿ, ಬಕೆಟ್ನಿಂದ ಕವುಚಿ ಬೀಳುವ ಸಾಧ್ಯತೆಗಳು ಇರುತ್ತದೆ. ಹಾಗಾದಾಗ ಪಟ್ಟ ಶ್ರಮವೆಲ್ಲ ವ್ಯರ್ಥ. ಜೇನೆಲ್ಲ ಚೆಲ್ಲಾಪಿಲ್ಲಿಯಾಗಿ ಖಾಲಿ ಬಕೆಟ್ ಹಿಡಿದು ಮನೆಗೆ ಬರಬೇಕಾಗುತ್ತದೆ. ಹಾಗೆಯೇ ಕೆಲವೊಮ್ಮೆ ಜೇನುಹುಳುಗಳು ಪೂರ್ತಿ ತುಪ್ಪ ಕುಡಿದು ಕೇವಲ ಖಾಲಿ ತಟ್ಟಿಯಲ್ಲಿ ಮುಂದಿನ ತುಪ್ಪ ತಯಾರಿಕೆಗೆ ವಾಸ ಮಾಡುವ ಸಂಭವವೂ ಇರುತ್ತದೆ. ಹೀಗಿನ ತಟ್ಟಿ ತೆಗೆದರೂ ಪ್ರಯೋಜನ ಇಲ್ಲ. ಕೇವಲ ಮೇಣವಷ್ಟೇ ಸಿಗುತ್ತದೆ ಹೀಗಾದಾಗ. ವರ್ಷದಲ್ಲಿ ಮೂರು ನಾಲ್ಕು ಈ ಬೃಹತ್ ಗಾತ್ರದ ಜೇನು ತೆಗೆವಾಗ, ಒಮ್ಮೊಮ್ಮೆ ಇಂತಹ ಅಚಾತುರ್ಯಗಳು ನಡೆದು ನಿರಾಸೆಯಾಗಿದ್ದು ಇವೆ. ಆದರೆ ಇಂತಹ ಸಂದರ್ಭ ಎದುರಾಗಿದ್ದು ಅಪ್ಪಯ್ಯನ ಬದುಕಿನ ಅವಧಿಯಲ್ಲಿ ತೆಗೆದ ಜೇನುತುಪ್ಪಗಳ ನೂರನೇ ಒಂದು ಭಾಗದಷ್ಟು ಸಲ ಮಾತ್ರ.
ಅಪ್ಪಯ್ಯನ ಜೇನು ಪ್ರೀತಿ, ಆ ಕತ್ತಲಲ್ಲಿ ಮರವೇರುವ ಕೌಶಲ್ಯ, ಅವರ ಅಂದಾಜಿನ ಲೆಕ್ಕಾಚಾರ ಇವೆಲ್ಲ ಯಾರೂ ಹೇಳಿಕೊಟ್ಟು ಅಥವಾ ಯಾರಿಂದ ಕಲಿತು ಬಂದ ವಿದ್ಯೆಯಲ್ಲ. ಕಂಡು ಕಲಿತ ಅವರ ಗೃಹಿಸುವ ಚತುರತೆ ಮತ್ತು ದೈಹಿಕ ಬಲ, ಆತ್ಮವಿಶ್ವಾಸ ಬಲು ಉನ್ನತ ಸ್ತರದ್ದು. ಅಪ್ಪಯ್ಯನಿಗೆ ಅಪ್ಪಯ್ಯನೇ ಸಾಟಿ. ಈಗ ಹೇಳಿ ತೇಜಸ್ವಿ ಕಥೆಗಳಲ್ಲಿ ಬರುವ ಹಲವು ಹೀರೋಗಳ ಪೈಕಿ ನಮ್ಮ ಅಪ್ಪಯ್ಯ ಕೂಡ ಒಬ್ಬ ಹೀರೋ ಅಂದದ್ದು ತಪ್ಪಾ!?