ಖನಕ ವಿದುರರ ಅಪ್ತ ಎನ್ನುವುದು ನನಗೆ ಹೊಸ ವಿಷಯವಾಗಿತ್ತು. ಅವನು ವಾರಣಾವತಕ್ಕೆ ಬಂದುದೇ ಇಲ್ಲವಾದರೆ ಸುರಂಗ ಕೊರೆದವರಾರು? ಅದನ್ನು ಕಲ್ಲುಮಣ್ಣಿನಿಂದ ಮುಚ್ಚಿದವರಾರು? ಮುಚ್ಚುವದೇ ಆದರೆ ಕೊರೆದುದೇಕೆ? ಅಥವಾ ಸುರಂಗಮಾರ್ಗ ಪೂರ್ಣಗೊಳ್ಳಲೇ ಇಲ್ಲವೆ? ಹೀಗೆ ಯೋಚಿಸುತ್ತ ಮಲಗಿದವನಿಗೆ ರಾತ್ರಿ ಯಾವುದೋ ಗಳಿಗೆಯಲ್ಲಿ ನಾನು ಮಾಡಿದ ತಪ್ಪು ಹೊಳೆಯಿತು.
ನಾನು ಗೊಲ್ಲರ ಹಟ್ಟಿಯಿಂದ ಬಂದು ನಾಲ್ಕು ದಿನಗಳು ಕಳೆದಿರಬಹುದಷ್ಟೆ. ನನಗೆ ಹಸ್ತಿನಾವತಿಯಿಂದ ಚರನೊಬ್ಬನ ಮೂಲಕ ಒಂದು ಸಂದೇಶ ಬಂತು. ಅದನ್ನು ಸಂದೇಶ ಎನ್ನುವುದಕ್ಕಿಂತಲೂ ಆದೇಶ ಎನ್ನುವುದೇ ಸೂಕ್ತ. ಹಸ್ತಿನಾವತಿಯ ಪ್ರಧಾನ ರಕ್ಷಣಾಧಿಕಾರಿ ಕಳುಹಿಸಿದ ಒಕ್ಕಣೆ ಅದು. ಪಾಂಡುಪುತ್ರರು ಮರಣಿಸಿದ ಕಾರಣ ವಾರಣಾವತದ ಸಂಪೂರ್ಣ ಆಡಳಿತದ ಹೊಣೆಯನ್ನು ರಾಜಧಾನಿಯಿಂದ ನಿರ್ವಹಿಸಲಾಗುವುದೆಂದೂ, ಇಲ್ಲಿಯವರೆಗೆ ನನಗಿದ್ದ ರಕ್ಷಣಾಧಿಕಾರಿಯ ಅಧಿಕಾರ ಹಸ್ತಿನಾವತಿಯ ಪ್ರಭುತ್ವದ ಸ್ವಾಧೀನವೆಂದೂ, ಈ ಕುರಿತು ಸ್ಪಷ್ಟ ಮಾರ್ಗದರ್ಶನ ಪಡೆಯುವುದಕ್ಕಾಗಿ ಶೀಘ್ರ ಹಸ್ತಿನಾವತಿಗೆ ಬಂದು ಪ್ರಧಾನಾಧಿಕಾರಿಯನ್ನು ಕಾಣಬೇಕೆಂದೂ ಅದರಲ್ಲಿತ್ತು. ಇಂತಹುದೆಲ್ಲ ಅಸಹಜವಲ್ಲ. ಹಾಗಾಗಿ ಕ್ಷಿಪ್ರವಾಗಿ ಪ್ರಯಾಣಕ್ಕೆ ಸನ್ನದ್ಧನಾದೆ.
ಅದಕ್ಕೂ ಮುನ್ನ ಧರ್ಮಾಧಿಕಾರಿಯನ್ನೊಮ್ಮೆ ನೋಡಬೇಕಿತ್ತು. ಅವರ ಭವನಕ್ಕೆ ತೆರಳಿ ವರ್ತಮಾನವನ್ನು ಸಾದ್ಯಂತ ನಿವೇದಿಸಿದೆ. ಒಂದು ಕ್ಷಣ ಚಿಂತಿಸಿದ ಅವರು, “ಹೀಗೇನು? ಇದು ಅನಿರೀಕ್ಷಿತವಲ್ಲ. ನನಗೆ ನಿನ್ನ ಮೇಲಿದ್ದ ನಿಯಂತ್ರಣ ಇನ್ನು ಮುಂದೆ ಹಸ್ತಿನಾವತಿಯ ಪ್ರಭುತ್ವದ ಕೈಗೆ ಹೋಗುತ್ತದೆ. ಇಲ್ಲಿಯವರೆಗೆ ರಕ್ಷಣೆ ಮತ್ತು ನ್ಯಾಯ ಒಟ್ಟಾಗಿದ್ದವು. ಮುಂದೆ ಅವೆರಡೂ ಪ್ರತ್ಯೇಕವಾಗುವಂತೆ ತೋರುತ್ತದೆ. ಇರಲಿ, ನಾವೇನು ಮಾಡಲಾದೀತು? ನೀನು ಹಸ್ತಿನಾವತಿಗೆ ಹೋಗಿ ಬಾ” ಎಂದರು.
ನಾನು ನನ್ನ ಮನೆಗೆ ಬಂದಾಗ ಶಿಲಾಮುಖ ಕಾದಿದ್ದ.
“ಪ್ರಭುಗಳೆ, ನಿಮ್ಮ ಆದೇಶದಂತೆ ಸುರಂಗ ನಿರ್ಮಾಣದಲ್ಲಿ ಪರಿಣತರಾದವರು ಯಾರಿದ್ದಾರೆ ಎಂದು ಹುಡುಕುತ್ತಿದ್ದೆವು. ವಾರಣಾವತದಲ್ಲಿ ಕೆಲವರಿದ್ದಾರೆ. ಆದರೆ ಅವರೆಲ್ಲ ಸುಟ್ಟುಹೋದ ಅರಮನೆಯ ಸುರಂಗವನ್ನು ನಿರ್ಮಾಣ ಮಾಡುವಷ್ಟು ಕುಶಲರಲ್ಲ. ಅವರಲ್ಲಿ ಒಂದಿಬ್ಬರು ಹಿರಿಯರು ಹೇಳುವಂತೆ ಅದನ್ನು ನಿರ್ಮಿಸುವ ಕೌಶಲ್ಯವಿದ್ದರೆ ಅದು ಖನಕ ಎಂಬವನಲ್ಲಿ ಮಾತ್ರವಂತೆ. ಆದರೆ ಆವನಿರುವುದು ಹಸ್ತಿನಾವತಿಯ ಸೂತರ ಕೇರಿಯಲ್ಲಿ. ಅವನಲ್ಲದೆ ಬೇರೆಯವರಿಂದ ಈ ಕಾರ್ಯ ಅಸಾಧ್ಯ ಎನ್ನುವುದು ಮಾತ್ರ ಸತ್ಯ ಎನ್ನುತ್ತಾರವರು”
ಇದು ಇನ್ನೊಂದು ತೊಡಕನ್ನು ಉಂಟುಮಾಡುವಂತೆ ತೋರಿತು. ಸುರಂಗದ ರಹಸ್ಯವನ್ನು ತಿಳಿಯಬೇಕಿದ್ದರೆ ಖನಕನನ್ನು ನಾನು ಮಾತನಾಡಿಸಲೇಬೇಕಿತ್ತು. ಹೇಗೂ ಹಸ್ತಿನಾವತಿಗೆ ಹೊರಟಿದ್ದೇನೆ. ಅವನನ್ನು ಕಂಡು ರಹಸ್ಯವನ್ನು ತಿಳಿದೇ ಬರುತ್ತೇನೆ
ಎಂದುಕೊಂಡು ಹೊರಡುವ ಸನ್ನಾಹಕ್ಕೆ ತೊಡಗಿದೆ. ಶೀಘ್ರಗತಿಯ ಉತ್ತಮಾಶ್ವಗಳನ್ನು ಹೂಡಿದ ರಥದಲ್ಲಿ ಸಾರಥಿಯೊಬ್ಬನನ್ನು ಮಾತ್ರ ಕರೆದುಕೊಂಡು ಹೊರಟೆ. ಸುದೀರ್ಘ ಪ್ರಯಾಣಕ್ಕೆ ಬೇಕಾದ ಸಾಮಗ್ರಿಗಳು ರಥದಲ್ಲಿದ್ದವು. ಮಜಲುಗಳ ಪ್ರಯಾಣವಾದ್ದರಿಂದ ಕುದುರೆಗಳು ಆಯಾಸಗೊಂಡರೆ ಅವುಗಳನ್ನು ಪಥಮಧ್ಯದಲ್ಲಿ ಬದಲಿಸುವ ಅನುಕೂಲವೂ ಇತ್ತು. ಮರುದಿನ ಪ್ರಾತಃಕಾಲದಲ್ಲಿ ಹೊರಟುಬಿಟ್ಟೆ.
ನನ್ನ ಸಾರಥಿ ಪರಿಣತನಿದ್ದ. ಚೆನ್ನಾಗಿ ಪಳಗಿದ, ಸಶಕ್ತ ಕುದುರೆಗಳನ್ನು ರಥಕ್ಕೆ ಕಟ್ಟಿದ್ದರಿಂದ ಪಯಣ ವೇಗವಾಗಿ ಸಾಗಿತು. ಎರಡು ಮಜಲುಗಳಲ್ಲಿ ನಾನು ಹಸ್ತಿನಾವತಿಯ ಹೊರಬಾಹೆಯನ್ನು ಸೇರಿದೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ನಾನು ಬಂದ ವಿಚಾರವನ್ನು ನಿವೇದಿಸಿಕೊಂಡು, ಯಾರನ್ನು ಭೇಟೆಯಾಗುವುದಿದೆಯೋ ಅವರಲ್ಲಿ ಅವಕಾಶವನ್ನು ಕೋರಿ ಮನವಿ ಸಲ್ಲಿಸಬೇಕು. ಆ ಬಳಿಕ ಅವರು ಸೂಚಿಸುವಲ್ಲಿ ಉಳಿದುಕೊಳ್ಳಬೇಕು. ಹಸ್ತಿನಾವತಿಯಲ್ಲಿ ಅನ್ನಪಾನ ಹಾಗೂ ಮಲಗುವುದಕ್ಕೆ ಸ್ಥಳ ಒದಗಿಸುವ ಸತ್ರಗಳು ಹಲವಾರಿದ್ದವು. ಅಂತಹ ಒಂದು ಸ್ಥಳವನ್ನು ಬಂದವನಿಗೆ ಸೂಚಿಸಲಾಗುತ್ತಿತ್ತು. ನಾನು ಈ ಕ್ರಮವನ್ನು ಪಾಲಿಸಲಿಲ್ಲ.
ನನ್ನ ದೂರದ ಬಂಧುವೊಬ್ಬ ಅರಮನೆಯ ಉದ್ಯೋಗದಲ್ಲಿದ್ದ. ನಾನು ಅವನ ಮನೆಯಲ್ಲಿ ಉಳಿದುಕೊಳ್ಳುವ ಯೋಚನೆ ಮಾಡಿದೆ. ನನ್ನ ವಿಶ್ವಾಸಕ್ಕೆ ಅರ್ಹನಾದ ಅವನಿಂದ ಕೌರವರ ಮುಂದಿನ ನಡೆಯ ಕುರಿತು ಏನಾದರೂ ವಿವರ ದೊರೆಯಬಹುದೇನೊ ಎಂಬ ಮುಂದಾಲೋಚನೆಯೂ ಇತ್ತು. ಇದರಿಂದ ನನ್ನ ಶೋಧಕಾರ್ಯಕ್ಕೆ ಅನುಕೂಲ ಆದೀತು ಎಂದು ಭಾವಿಸಿದೆ. ಹಾಗಾಗಿ ಪುರಪ್ರವೇಶ ಮಾಡುತ್ತಿದ್ದಂತೆ ನನ್ನ ಆ ಬಂಧುವಿನ ಮನೆಗೆ ಹೋಗುವಂತೆ ಸಾರಥಿಗೆ ಸೂಚಿಸಿದೆ.
ಅವನ ಭವನಕ್ಕೆ ತಲುಪಿದಾಗ ಸಾಯಂಕಾಲದ ಹೊತ್ತು. ಬಂಧು ಅಗಷ್ಟೆ ತನ್ನ ಕರ್ತವ್ಯ ಮುಗಿಸಿ ಬಂದಿದ್ದ. ನನ್ನನ್ನು ಕಂಡು ಅವನಿಗೆ ಸಂತೋಷವಾಯಿತು. ಆದರೋಪಚಾರಗಳ ಬಳಿಕ ಮೊಗಸಾಲೆಯಲ್ಲಿ ಕುಳಿತು ಮಾತನಾಡುತ್ತಿದ್ದೆವು. ನಾನು ಕೇಳಿದೆ, “ವಾರಣಾವತದ ಪ್ರಕರಣ ನಿನಗೂ ತಿಳಿದಿರಬಹುದು. ಅಲ್ಲಿನ ಅರಮನೆಯ ಒಳಗಿನ ಕೊಠಡಿಯೊಂದರಿಂದ ಸುರಂಗ ಕೊರೆಯಲಾಗಿದೆ. ಬಹು ನಿಷ್ಣಾತನ ಕೆಲಸವದು. ಬಳಿಕ ಅದನ್ನು ಮುಚ್ಚಿಹಾಕಿದ್ದಾರೆ. ಇದು ಕೊರೆದವನದೇ ಕೆಲಸವೋ ಅಥವಾ ಅನ್ಯೋದ್ದೇಶಕ್ಕೆ ಬೇರೆಯವರು ಮಾಡಿದರೋ ಎಂಬುದು ತಿಳಿಯುತ್ತಿಲ್ಲ. ಖನಕ ಎಂಬವನು ಈ ಬಗೆಯ ಕೆಲಸಗಳಲ್ಲಿ ಪ್ರಸಿದ್ಧನಂತೆ. ಅವನೇ ಈ ಸುರಂಗ ನಿರ್ಮಾಣ ಮಾಡಿದ್ದಾನೆ ಎನ್ನುವುದು ನನ್ನ ಅಂಬೋಣ. ಅವನನ್ನು ಕಂಡು ಈ ವಿಚಾರವನ್ನು ಮಾತನಾಡಬೇಕಿದೆ. ನೀನು ಅವನನ್ನು ಬಲ್ಲೆಯ?”
ನನ್ನ ಪ್ರಶ್ನೆಗೆ ವಿಳಂಬಿಸದೆ ಅವನು ಉತ್ತರಿಸಿದ, “ಹೌದು ನಾನು ಅವನನ್ನು ಬಲ್ಲೆ. ಅವನು ವಾರಣಾವತದಲ್ಲಿ ಸುರಂಗ ಕೊರೆದಿದ್ದಾನೆ ಎನ್ನುವಿಯೇನು? ಇಲ್ಲಯ್ಯ..ಹಾಗಿರಲಾರದು.
ಯಾಕೆಂದರೆ ಆ ಸಮಯದಲ್ಲಿ ಅವನ ಆರೋಗ್ಯದಲ್ಲಿ ವ್ಯತ್ಯಯವಾಗಿ ತನ್ನ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಅವನು ಮಹಾಮಂತ್ರಿ ವಿದುರರ ಅಪ್ತ. ಅವನಿಗೆ ವಿದುರರ ವೈದ್ಯರಿಂದಲೇ ಚಿಕಿತ್ಸೆ ನಡೆಯುತ್ತಿತ್ತು. ಅರಮನೆಯಿಂದಲೇ ಅದಕ್ಕೆ ಹೊನ್ನು ಸಂದಿದೆ. ಇದನ್ನು ನಾನು ಚೆನ್ನಾಗಿ ಬಲ್ಲೆ. ಆ ವಿಚಾರದಲ್ಲಿ ಖಚಿತವಾಗಿ ಹೇಳಬಲ್ಲೆ. ಅವನಂತೂ ಆ ಸಮಯದಲ್ಲಿ ಇಲ್ಲೇ ಇದ್ದ. ಖನಕ ಅದನ್ನು ಮಾಡಿರುವುದು ಅಶಕ್ಯ” ಎಂದನವ.
ಖನಕ ವಿದುರರ ಅಪ್ತ ಎನ್ನುವುದು ನನಗೆ ಹೊಸ ವಿಷಯವಾಗಿತ್ತು. ಅವನು ವಾರಣಾವತಕ್ಕೆ ಬಂದುದೇ ಇಲ್ಲವಾದರೆ ಸುರಂಗ ಕೊರೆದವರಾರು? ಅದನ್ನು ಕಲ್ಲುಮಣ್ಣಿನಿಂದ ಮುಚ್ಚಿದವರಾರು? ಮುಚ್ಚುವದೇ ಆದರೆ ಕೊರೆದುದೇಕೆ? ಅಥವಾ ಸುರಂಗಮಾರ್ಗ ಪೂರ್ಣಗೊಳ್ಳಲೇ ಇಲ್ಲವೆ? ಹೀಗೆ ಯೋಚಿಸುತ್ತ ಮಲಗಿದವನಿಗೆ ರಾತ್ರಿ ಯಾವುದೋ ಗಳಿಗೆಯಲ್ಲಿ ನಾನು ಮಾಡಿದ ತಪ್ಪು ಹೊಳೆಯಿತು. ಆ ಸುರಂಗ ಮಾರ್ಗ ಎಲ್ಲಿ ತೆರೆಯುತ್ತದೆ ಎಂಬುದನ್ನು ಶೋಧಿಸಬೇಕಿತ್ತು. ಛೇ ಚಾಣಾಕ್ಷ ಎಂಬ ಹೆಸರು ಪಡೆದ ನನಗೆ ಇಷ್ಟು ಹೆಡ್ಡುತನವೆ? ವಾರಣಾವತಕ್ಕೆ ಮರಳಿದ ಕೂಡಲೇ ಅದನ್ನು ಶೋಧಿಸಬೇಕು ಎಂಬ ನಿರ್ಣಯ ಮಾಡಿದೆ.
*******
ಮರುದಿನ ಸೂರ್ಯ ಉದಯಿಸಿದ ಕೆಲವೇ ಗಳಿಗೆಗಳಲ್ಲಿ ನಾನು ಹಸ್ತಿನಾವತಿಯ ಪ್ರಧಾನ ರಕ್ಷಣಾಧಿಕಾರಿಯ ಭವನದ ಹೆಬ್ಬಾಗಿಲಲ್ಲಿ ಕಾಯುತ್ತಿದ್ದೆ. ಬಾಗಿಲು ತೆರೆದೊಡನೆ ನಾನು ಬಂದಿರುವುದನ್ನು ನಿವೇದಿಸಿ ಅವರನ್ನು ಕಂಡು ಶೀಘ್ರ ವಾರಣಾವತಕ್ಕೆ ಮರಳುವುದು ನನ್ನ ಆಶಯವಾಗಿತ್ತು. ಅನತಿ ಸಮಯದಲ್ಲಿ ಮಹಾದ್ವಾರದ ಪಕ್ಕದ ಕಿಂಡಿ ಬಾಗಿಲೊಂದು ತೆರೆದು ರಾಜಭಟನೊಬ್ಬ ಕಾಣಿಸಿಕೊಂಡ. “ನೀವು ವಾರಣಾವತದಿಂದ ಬಂದವರೇನು?” “ಹೌದಪ್ಪಾ. ನಾನು ಅಲ್ಲಿನ ರಕ್ಷಣಾಧಿಕಾರಿ. ಪ್ರಧಾನ ರಕ್ಷಣಾಧಿಕಾರಿಗಳನ್ನು ಕಾಣಬೇಕೆಂದು ಆದೇಶವಿದೆ ನನಗೆ” ಎಂದೆ.
ಅವನು ಗೊತ್ತಿದೆ ಎಂಬಂತೆ ತಲೆದೂಗಿ, “ಸರಿ, ಅವರು ನಿಮ್ಮನ್ನು ಕಾಣಬಯಸಿದ್ದಾರೆ. ನನ್ನ
ಜೊತೆಗೆ ಬನ್ನಿ. ನಿಮ್ಮ ಶಸ್ತ್ರಗಳನ್ನು ರಥದಲ್ಲಿ ಬಿಟ್ಟು ಬನ್ನಿ. ಇಲ್ಲಿನ ನಿಯಮ” ಎಂದ. ನಾನು ಸಾರಥಿಯನ್ನು ಕರೆದು, ನನ್ನ ಆಯುಧಗಳನ್ನು ಅವನಿಗೊಪ್ಪಿಸಿ, ನನ್ನನ್ನು ನಿರೀಕ್ಷಿಸುತ್ತಿರುವಂತೆ ಆದೇಶಿಸಿದೆ. ರಾಜಭಟ ನನ್ನನ್ನು ಅದೇ ಕಿಂಡಿ ಬಾಗಿಲಿನಿಂದ ಒಳಗೆ ಕರೆದೊಯ್ದ. ಮಹಾದ್ವಾರದ ಪಕ್ಕದ ಮೊಗಸಾಲೆಯ ಸಂದಿನಲ್ಲಿ ಮುಂದೆ ಸಾಗಿದ. ನಾನು ಹಿಂಬಾಲಿಸಿದೆ.
ಹತ್ತಾರು ಹೆಜ್ಜೆ ಸಾಗಿದ ಬಳಿಕ ಒಂದು ದ್ವಾರದ ಒಳಗೆ ನಸುಳಿದ. ನಾನು ಅನುಸರಿಸಿ ಒಳಗೆ ಹೆಜ್ಜೆಯಿಟ್ಟೆ. ಆ ಭಾಗದಲ್ಲಿ ತುಸು ಕತ್ತಲಿತ್ತು. ಅದೆಲ್ಲಿಂದಲೋ ಬಂದ ಒಂದಿಬ್ಬರು ಶಸ್ತ್ರಪಾಣಿಗಳು ನಮ್ಮನ್ನು ಸೇರಿಕೊಂಡರು. ಮುಂದುವರಿದಂತೆ ಮತ್ತಿಬ್ಬರು ಹಿಂಬಾಲಿಸಿ ಬಂದರು. ನನಗೇನೊ ಸಂಶಯವಾಗಿ ಪ್ರಶ್ನಿಸಲೆಂದು ದನಿಯೆತ್ತಿದೆನಷ್ಟೆ. ಇದ್ದಕ್ಕಿದ್ದ ಹಾಗೆಯೇ ನನ್ನ ತಲೆಯ ಮೇಲಿಂದ ಮುಖ ಮುಚ್ಚುವಂತೆ ದಪ್ಪನೆಯ ಕಂಬಳಿಯೊಂದು ಬಿತ್ತು. ಎರಡೂ ಕೈಗಳನ್ನು ಬಲವಾದ ಹಸ್ತಗಳು ಬಿಗಿ ಹಿಡಿದವು. ಅವರ ಶಕ್ತಿಯನ್ನು ಮೀರಿ ಬಿಡಿಸಿಕೊಳ್ಳಬಹುದಿತ್ತು. ಆದರೆ ನನ್ನ ತಲೆಯ ಮೇಲೆ ಪ್ರಹಾರವೊಂದು ಬಿತ್ತು. ಅಷ್ಟೇ. ನನ್ನ ಪ್ರಜ್ಞೆ ತಪ್ಪಿತು.
ಮತ್ತೆ ಎಚ್ಚರವಾದಾಗ ಕತ್ತಲು ತುಂಬಿದ ಕೋಣೆಯೊಂದರಲ್ಲಿ ಬಿದ್ದಿದ್ದೆ. ಏಟು ಬಿದ್ದ ಜಾಗದಲ್ಲಿ ನೋವಾಗುತ್ತಿತ್ತು. ಕೈಕಾಲುಗಳನ್ನು ಕದಲಿಸಲಾರದಷ್ಟು ಬಿಗಿಯಾಗಿ ಸರಪಳಿಗಳಿಂದ ಬಂಧಿಸಿದ್ದರು. ಎಲ್ಲಿದ್ದೇನೆ ಎಂಬ ಪರಿವೆ ನನಗಾಗಲಿಲ್ಲ. ನನ್ನನ್ನು ಯಾರು, ಯಾಕೆ ಹೀಗೆ ಬಂಧಿಸಿದ್ದಾರೆ ಎನ್ನುವ ಕಲ್ಪನೆಯೂ ನನಗಾಗಲಿಲ್ಲ. ವಾರಣಾವತದ ರಕ್ಷಣಾಧಿಕಾರಿ ನಾನು ಎಂಬ ತಿಳಿವಳಿಕೆ ಬಂಧಿಸಿದವರಿಗಂತೂ ಇದ್ದಿರಬೇಕು. ಈ ಬಂಧನದ ಪರಿಣಾಮಗಳನ್ನು ಅವರು ಅರಿತಿರಲೇಬೇಕು. ಆದರೂ ಹೀಗೆ ಮಾಡಿದ್ದಾರೆ ಎಂದರೆ ತಪ್ಪು ಗ್ರಹಿಕೆಯಿಂದಲ್ಲ, ಉದ್ದೇಶ ಪಟ್ಟು ಮಾಡಿದ್ದಿದು. ಯಾಕೆ?
ಎಷ್ಟು ಪ್ರಯತ್ನಿಸಿದರೂ ಈ ಬಂಧನದಿಂದ ನಾನು ಬಿಡಿಸಿಕೊಳ್ಳುವ ಸಾಧ್ಯತೆಯಿಲ್ಲ ಅನ್ನುವುದು ಸ್ಪಷ್ಟ. ಮೈಯ ಬಂಧನವಲ್ಲದೆ ಕಗ್ಗತ್ತಲ ಕೊಠಡಿಯ ಬಾಗಿಲು ಕೂಡ ಮುಚ್ಚಿತ್ತು. ಹೊರಗಿನಿಂದ ಅಗುಳಿ ಹಾಕಿದ್ದಾರೆ ಎಂದು ಊಹಿಸಿದೆ. ಇಲ್ಲಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದ ಮೇಲೆ ಮೌನವಾಗಿ ಬಿದ್ದಿರುವುದಲ್ಲದೆ ಬೇರೇನು ತಾನೇ ಮಾಡಲಾದೀತು? ಸರಪಳಿಯ ಬಂಧನವಲ್ಲದಿದ್ದರೆ ನಿಶ್ಶಸ್ತ್ರನಾದರೂ ನಾಲ್ಕಾರು ಮಂದಿ ಕಟ್ಟಾಳುಗಳನ್ನು ಎದುರಿಸಿ ಉರುಳಿಸುವ ಸಾಮಥ್ರ್ಯ ನನ್ನಲ್ಲಿತ್ತು. ಹಾಗೂ ಅದಕ್ಕೆ ಬೇಕಾದ ಕ್ರಮಶಿಕ್ಷಣವನ್ನೂ ಪಡೆದಿದ್ದೆ. ಆದರೂ ಅವರೇನು ಮಾಡುತ್ತಾರೆಂದು ಅಸಹಾಯಕನಾಗಿ ನಿರೀಕ್ಷಿಸುವುದು ಮಾತ್ರ ನನ್ನ ಪಾಲಿನ ಆಯ್ಕೆ ಈಗ.
ಬಿದ್ದಲ್ಲಿಯೇ ಏನೇನೋ ಊಹೆಗಳನ್ನು ಮಾಡುತ್ತಾ ಉಳಿದೆ. ನನ್ನನ್ನು ಇಲ್ಲಿ ಕೆಡವಿ ಎಷ್ಟು ಕಾಲವಾಯಿತು ಎಂಬ ಅರಿವೂ ನನಗಾಗಲಿಲ್ಲ. ಹೊಟ್ಟೆ ಹಸಿಯುತ್ತಿದ್ದುದರಿಂದ ಮಧ್ಯಾಹ್ನ ದಾಟಿರಬೇಕು ಎಂದು ತರ್ಕಿಸಿದೆ. ಬಂಧಿಸಿದವರಿಗೆ ನನ್ನಿಂದ ಏನೋ ಕಾರ್ಯವಾಗಬೇಕಿದೆ ಅಥವಾ ಏನನ್ನೋ ತಿಳಿಯಬೇಕಿದೆ. ಹಾಗಾಗಿ ಸೆರೆಯಲ್ಲಿಟ್ಟಿದ್ದಾರೆ. ದ್ವೇಷವೋ ಅಥವಾ ಅನ್ಯೋದ್ದೇಶವೋ ಆಗಿದ್ದರೆ ಹೀಗೆ ಬಿಡುತ್ತಿರಲಿಲ್ಲ. ನನ್ನನ್ನು ಕೊಲ್ಲುವ ಉದ್ದೇಶ ಇವರಿಗಿಲ್ಲ. ಕೊಲ್ಲುವುದಿದ್ದರೆ ಇಷ್ಟು ಹೊತ್ತಿನ ಒಳಗೆ ತಲೆ ಹಾರಿಸುತ್ತಿದ್ದರು. ಇನ್ನೂ ಕೊಂದಿಲ್ಲ ಅಂದರೆ ಸದ್ಯ ನನಗೆ ಪ್ರಾಣಾಪಾಯವಿಲ್ಲ ಎಂದರ್ಥ.
ಇವರು ಯಾರು?
ನನ್ನಿಂದ ಇವರಿಗೆ ಆಗ ಬೇಕಿರುವುದೇನು?
ಹಸ್ತಿನಾವತಿಯ ಪ್ರಭುಗಳ ಅಥವಾ ಪ್ರಧಾನ ರಕ್ಷಣಾಧಿಕಾರಿಯ ಕಡೆಯವರಂತೂ ಅಲ್ಲ. ಅವರಿಗೆ ನನ್ನನ್ನು ಹೀಗೆ ಮೋಸದಿಂದ ಬಂಧಿಸಿ ಕೆಡಹುವ ಅಗತ್ಯವಿಲ್ಲ. ಅಂತಹ ಅಪರಾಧವನ್ನು ನಾನು ಮಾಡಿದ್ದೂ ಇಲ್ಲ. ನನ್ನ ರಾಜನಿಷ್ಠೆ ಪ್ರಶ್ನಾತೀತ. ಇವರಾರೋ ಹೊರಗಿನವರು ಎಂದು ತರ್ಕಿಸಿದೆ. ನನ್ನನ್ನು ಗೋಪ್ಯವಾದ ಅವರ ಸ್ವಾರ್ಥಕ್ಕೆ ಬಳಸುವ ಯೋಜನೆ ಇರಬೇಕು. ಒಮ್ಮೆಈ ಸರಪಳಿಯಿಂದ ಬಿಡಿಸಿಕೊಂಡರೆ ನನ್ನನ್ನು ಸೆರೆಯಲ್ಲಿಟ್ಟ ದುರುಳರಿಗೆ ಈ ಮಿತ್ರನ ಪರಾಕ್ರಮವೇನು ಅಂತ ತೋರಿಸಿಕೊಡುತ್ತಿದ್ದೆ. ಏನು ಮಾಡಲಿ? ಹೇಗೆ ಇಲ್ಲಿಂದ ಪಾರಾಗಲಿ? ಹತ್ತಾರು ಪ್ರಶ್ನೆಗಳು, ಸಂದಿಗ್ಧಗಳು ನನ್ನನ್ನು ಪೀಡಿಸುತ್ತಿದ್ದವು. ಚಿಂತಿಸಿ ಚಿಂತಿಸಿ ದಣಿವಾಯಿತೇ ವಿನಾ ಯಾವ ಪರಿಹಾರವೂ ಹೊಳೆಯಲಿಲ್ಲ.
ಇದ್ದಕ್ಕಿದ್ದಂತೆ ದಡಾರ್ ಎಂದು ಬಾಗಿಲು ತೆರೆಯಿತು. ಒಂದಿಷ್ಟು ಬೆಳಕೂ ಬಂತು. ಹಗಲಿನ ಬೆಳಕಲ್ಲ, ದೀವಟಿಗೆಯ ಬೆಳಕು. ಅಂದರೆ ಈಗ ಕತ್ತಲಾಗಿದೆ ಎಂದುಕೊಂಡೆ. ದೀವಟಿಗೆಯ ಜತೆಗೆ ಅದನ್ನು ಹಿಡಿದವನು, ಅವನ ಬೆನ್ನಿಗೆ ಇಬ್ಬರು ಕತ್ತಿ ಹಿರಿದ ಕಟ್ಟಾಳುಗಳು ಕಾಣಿಸಿದರು. ಅವರು ಒಳಗೆ ಬಂದು ಸರಿದು ನಿಂತು ಇನ್ನೊಬ್ಬನಿಗೆ ದಾರಿ ಮಾಡಿಕೊಟ್ಟರು. ಅವನೂ ಒಳಬಂದ. ಅವನ ಹೆಜ್ಜೆಗಳ ದನಿಯೇ ಯಾರೋ ಉನ್ನತ ಸ್ಥಾನದಲ್ಲಿರುವವನು ಎಂಬುದನ್ನು ಸೂಚಿಸುತ್ತಿತ್ತು. ಆದರೆ ಆ ಮಂದ ಬೆಳಕಿನಲ್ಲಿ ಯಾರ ಮುಖದ ರೇಖೆಗಳೂ ಸ್ಫುಟವಾಗಲಿಲ್ಲ. ಅಲ್ಲದೆ ಕೊನೆಗೆ ಬಂದವನು ತನ್ನ ಮುಖದ ಮೇಲೆ ಉತ್ತರೀಯವನ್ನು ಸುತ್ತಿಕೊಂಡಿದ್ದ. ಬಂದವರೆಲ್ಲ ನೆಲದಲ್ಲಿ ಬಿದ್ದಿದ್ದ ನನ್ನ ಎದುರು ಕೊಂಚ ದೂರದಲ್ಲಿ ನಿಂತರು. ನಾನು ಮೌನವಾಗಿ ನೋಡುತ್ತಿದ್ದೆ.
ದೀವಟಿಗೆಯ ಭಟರು ಹತ್ತಿರ ಬಂದು, ನನ್ನ ಮುಖ ಸರಿಯಾಗಿ ಕಾಣುವಂತೆ ಬೆಳಕು ಹಿಡಿದರು. ನನ್ನ ಮುಖ ಎಲ್ಲರಿಗೂ ಕಾಣುತ್ತಿತ್ತು. ನನಗೆ ಮಾತ್ರ ಯಾರನ್ನೂ ಸರಿಯಾಗಿ ಕಾಣುತ್ತಿರಲಿಲ್ಲ. ಒಂದು ನಿಗೂಢ ಜಗತ್ತಿನಲ್ಲಿರುವಂತೆ ಅನಿಸತೊಡಗಿತು. ಅಪರಾಧಿಗಳನ್ನು ಹಿಡಿದು ಶಿಕ್ಷಿಸಿ ಪ್ರಜೆಗಳನ್ನು ರಕ್ಷಿಸುವ ಹೊಣೆ ಹೊತ್ತ ನನ್ನಂತಹ ಅಧಿಕಾರಿಗೆ ಇದೆಂತಹ ಪಾಡು ಬಂತು! ವಾರಣಾವತದ ನನ್ನ ಜೀವನವು ಕಳೆದುಹೋದ ಕನಸಿನಂತೆ ಕಂಡಿತು. ಇನ್ನೂ ಏನೇನು ಯೋಚನೆಗಳು ಬರುತ್ತಿದ್ದವೋ ಏನೋ. ಅಷ್ಟರಲ್ಲಿ ಕರ್ಕಶ ಧ್ವನಿಯೊಂದು ಮೊಳಗಿತು.
“ನೀನೇ ಏನು ವಾರಣಾವತದಲ್ಲಿ ಬೂದಿಯನ್ನು ಕೆದಕುತ್ತಿದ್ದವನು? ಮಿತ್ರ ಅಲ್ಲವೆ ನಿನ್ನ ಹೆಸರು?”
“ನನ್ನನ್ನು ಪ್ರಶ್ನಿಸುತ್ತಿರುವವರು ಯಾರು ಎಂದು ತಿಳಿಯಬಹುದೆ?” ಮೃದುವಾಗಿ ಕೇಳಿದೆ.
“ಅಗತ್ಯವಿಲ್ಲ. ಪ್ರಶ್ನಿಸುವ ಅಧಿಕಾರ ಇದ್ದವರು ಎಂದು ತಿಳಿದುಕೊ ಸಾಕು. ಶೋಧನೆಯ ಕಾರ್ಯದಲ್ಲಿ ಅತ್ಯಾಸಕ್ತಿಯನ್ನು ಹೊಂದಿರುವೆಯಂತೆ? ಅದೇನು ಅಷ್ಟು ಕಾತರ ನಿನಗೆ ಅದರಲ್ಲಿ?”
“ನನ್ನ ಕರ್ತವ್ಯವನ್ನಷ್ಟೆ ನಾನು ಮಾಡುತ್ತಿದ್ದೇನೆ. ಎಷ್ಟು ಅಗತ್ಯವೋ ಅಷ್ಟು ಆಸಕ್ತಿ ನನಗಿದೆ. ಅದು ನನ್ನ ಕರ್ತವ್ಯ. ನಿಮಗೂ ಅದಕ್ಕೂ ಸಂಬಂಧವೇನು?”
ನನ್ನ ಮಾತು ಮುಗಿಯುತ್ತಿದ್ದ ಹಾಗೆಯೇ ಸೆರಮನೆಯ ಕೋಣೆ ನಡುಗುವಂತೆ ಅವನ ಅಟ್ಟಹಾಸ ಮೊಳಗಿತು.
(ಸಶೇಷ)