ನಲುವತ್ತರ ಗಡಿಯಲ್ಲಿ ಆತಂಕದ ನೆರಳು ಹೌದು, ನಲುವತ್ತರ ಹತ್ತಿರ ಬರುತ್ತಾ ಕನ್ನಡಿಯ ಮುಂದೆ ನಿಂತಾಗ ನೆತ್ತಿಯಲ್ಲಿ ಮಿನುಗುವ ಬಿಳಿಗೂದಲು ಸಣ್ಣ ಎಚ್ಚರಿಕೆ ನೀಡಲು ಪ್ರಾರಂಭಿಸುತ್ತದೆ. ಇನ್ನೊಂದಷ್ಟು ಗಮನಿಸಿದರೆ ಶರೀರದ ತೂಕ ಏರಿದ್ದು ಗೋಚರವಾಗುತ್ತದೆ. ಗಂಡಸರಿಗಾದರೂ ಅಷ್ಟೇ. ಉರುಟು ಚೆರಿಗೆಯಂತಾದ ಹೊಟ್ಟೆ ಅಣಕಿಸುತ್ತದೆ. ಟಿ-ಶರ್ಟ್ ಹಾಕಿಕೊಂಡಾಗಲಂತೂ ಹೊಟ್ಟೆಯನ್ನು ಎಷ್ಟು ಒಳಗೆಳೆದುಕೊಳ್ಳುವುದು ಸಾಧ್ಯವೋ ಅಷ್ಟೂ ಪ್ರಯತ್ನ ನಡೆಯುತ್ತದೆ ಭಗೀರಥನ ಹಾಗೆ.
ಮೊನ್ನೆ ಗೆಳೆಯ ಶಶಾಂಕನಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಯಾವುದೋ ವಿಚಾರ ಮಾತನಾಡುತ್ತ “ಅಲ್ಲ ಮಾರಾಯ, ಇನ್ನೆರಡು ವರ್ಷ ಕಳೆದರೆ ನಮಗೆ ನಲುವತ್ತು ಭರ್ತಿ ಆಗಲಿಕ್ಕಾಯ್ತು. ಈಗ ಮಾಡದೇ ಇನ್ನೂ ಹತ್ತು ವರ್ಷ ಕಳೆದ ಮೇಲೆ ಮಾಡುತ್ತೇನೆ ಎಂದರೆ ಆದೀತಾ? ಈಗ ವೇಷಮಾಡಿದ ಹಾಗೆ ಆಗ ಮಾಡಲು ಶರೀರ ಕೇಳೀತಾ? ಪುರುಷರಿಗಾದರೂ ನಲುವತ್ತೆಂಬುದು ದೊಡ್ಡ ವಯಸ್ಸಲ್ಲ, ನಿಜ. ನಮಗೆ ಹಾಗಲ್ಲವಲ್ಲ?” ಎಂದೆ. ‘ಮಹರಾಯಿತೀ, ನಿನಗೂ ನಲುವತ್ತರ ಭಯ ಕಾಡತೊಡಗಿತಾ?’ ಎಂದ, ಶಶಾಂಕ. ನನಗರ್ಥವಾಗಲಿಲ್ಲ. ಹಾಗೇನಿಲ್ಲವಲ್ಲ ಎಂದೆ. “ನೀನು ಇಲ್ಲವೆಂದರೂ ನಿನ್ನ ಧ್ವನಿ ಅದುವೇ. ಗಾಬರಿ ಪಡುವಂಥದ್ದಲ್ಲ. ಆದರೆ ನಲುವತ್ತರ ಹತ್ತಿರ ಸಮೀಪಿಸುತ್ತಿದ್ದೇವೆ ಎಂದಾಗ ಆಂತರ್ಯದಲ್ಲಿ ಸಣ್ಣದೊಂದು ಆತಂಕ ಕಾಡಲಾರಂಭಿಸುತ್ತದೆ. ಸಾಧನೆಯ ಪಥದಲ್ಲಿ ಹಿಂದೆಯೂ ಅಲ್ಲದೆ ಮುಂದೆಯೂ ಅಲ್ಲದೆ ಮಧ್ಯದಲ್ಲಿರುತ್ತೇವೆ. ಇದು ಸಹಜವೇ” ಎಂದ. ಅವನ ಮಾತುಗಳು ದಿನವಿಡೀ ಕಿವಿಯಲ್ಲಿ ಗುಂಯಿಗುಡಲು ತೊಡಗಿದವು.
ಒಂದೇ ಧ್ವನಿ
ಕೆಲವು ದಿನಗಳಿಂದಲೂ ಆಪ್ತ ಗೆಳತಿಗೊಂದು ಕಸಿವಿಸಿ. “ಮೇಡಂ, ನನ್ನ ಮೊಬೈಲ್ ಕ್ಯಾಮರಾ ನನಗೆ ಬಹಳವೇ ಮೋಸಮಾಡಿದೆ, ನೋಡಿ. ಮುಖವೆಲ್ಲ ನುಣುಪಾಗಿರುವಂತೆ ಇದು ತೋರಿಸುತ್ತದೆ. ಆದರೆ ಕನ್ನಡಿಯಲ್ಲಿ ನೋಡಿಕೊಂಡರೆ ಹಾಗಿಲ್ಲ. ಕಣ್ಣುಗಳ ಸಮೀಪ
ಹಾ..ಗೆ ನೆರಿಗೆಗಟ್ಟುತ್ತಿದೆ. ವಯಸ್ಸಾಗುತ್ತಿದೆ ನನಗೆ ಎನ್ನುವ ಲಕ್ಷಣ ಅಲ್ವಾ ಇದು? ಎರಡೆ ಮಹಡಿ ಹತ್ತಿಬಂದರೂ ಉಶ್ಶಪ್ಪ ಎನ್ನುವಷ್ಟು ದಣಿವಾಗುತ್ತಿದೆ. ಎರಡು ಗಂಟೆ ಎಡೆಬಿಡದೆ ತರಗತಿ ತೆಗೆದುಕೊಂಡರೆ ಉಸಿರು ಸಿಕ್ಕಿಹಾಕಿಕೊಂಡು ಗಂಟಲೆಲ್ಲ ಒಣಗಿದಂತೆ ಆಗುತ್ತದೆ. ಮೊದಲೆಲ್ಲ ಹೀಗಿರಲಿಲ್ಲ ಗೊತ್ತಾ?” – ಮೊದಮೊದಲು ಅವರು ಹೀಗೆನ್ನುತ್ತಿದ್ದರೆ ನಾನು ಬರಿದೇ ತಮಾಷೆ ಮಾಡುತ್ತಿದ್ದೆ. “ಅಲ್ಲ, ಮಕ್ಕಳಿಬ್ಬರೂ ಇಂಜಿನಿಯರಿಂಗ್ ಮಾಡುತ್ತಿದ್ದಾರೆ, ಆದರೂ ಮೊದಲಬಾರಿಗೆ ನಿಮ್ಮನ್ನು ನೋಡಿದವರು ‘ಪಾಪು ಏನ್ಮಾಡ್ತಿದೆ?’ ಎಂದು ಕೇಳುವಷ್ಟು ಯಂಗ್ ಇದ್ದೀರಿ. ಮತ್ತೇನಾಗಬೇಕು ನಿಮಗೆ? ಬಿಡುವಿನ ವೇಳೆಯೇ ಜಾಸ್ತಿಯಾಯಿತೇನೊ. ಒಂದಷ್ಟು ಹೊಸ ಪುಸ್ತಕಗಳನ್ನು ಓದಿ. ಇಷ್ಟವಾಗುವ ಹಾಡು ಕೇಳಿ. ಬರಿಯ ಚೆಲುವಿನ ಬಗ್ಗೆ ಯಾಕೆ ಯೋಚನೆ?” ಎಂದು ಸಲಹೆಕೊಡುತ್ತಿದ್ದೆ. ಅವರು ಅಷ್ಟಕ್ಕೇ ಸುಮ್ಮನಾಗದೆ, “ಮೇಡಂ, ಇನ್ನು ನಾಲ್ಕು ವರ್ಷ ಕಳೆಯುವಷ್ಟರಲ್ಲಿ ಮಗಳಿಗೆ ಮದುವೆ ಮಾಡಬೇಕು. ನಾವಿನ್ನೂ ಬಾಡಿಗೆಮನೆಯಲ್ಲಿ ಇದ್ದೇವೆ. ಇಷ್ಟು ವರ್ಷಗಳಲ್ಲಿ ಸೈಟ್ ಇದ್ದರೂ ಮನೆಕಟ್ಟಿಸಿಕೊಳ್ಳುವ ಯೋಗ ನಮಗಿಲ್ಲ” ಎಂದು ಮುಂತಾಗಿ ಬೇಸರಿಸಿಕೊಳ್ಳುತ್ತಿದ್ದರು. “ಸಂತೋಷವಾಗಿ ಇರುವುದಕ್ಕೆ ದಾರಿಗಳು ಹಲವಾರು ಇವೆಯಲ್ಲ.. ಅವೆಲ್ಲ ಬಿಟ್ಟು – ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ ಎಂದು ಶುರುಮಾಡ್ತೀರಿ ನೀವು”. ನಾನೇನೋ ಸದಾ ಸುಖಿ, ಸಂತೋಷಿ ಎಂಬಂತೆ ಪೋಸ್ಕೊಟ್ಟು ಉಪದೇಶ ಶುರು ಮಾಡುತ್ತಿದ್ದೆ. ಶಶಾಂಕನಲ್ಲಿ ಮಾತಾಡಿದ ಬಳಿಕ ಅರ್ಥವಾದದ್ದೆಂದರೆ ನನ್ನ ಮಾತುಗಳಿಗೂ ನನ್ನ ಗೆಳತಿಯ ಮಾತುಗಳಿಗೂ ಯಾವ ವ್ಯತ್ಯಾಸವೂ ಇಲ್ಲ. ಸಮಯ ಸಂದರ್ಭ ಬೇರೆ ಇರಬಹುದು, ಆದರೆ ಧ್ವನಿ ಇಬ್ಬರದ್ದೂ ಒಂದೇ.
ಹೌದು, ನಲುವತ್ತರ ಹತ್ತಿರ ಬರುತ್ತಾ ಕನ್ನಡಿಯ ಮುಂದೆ ನಿಂತಾಗ ನೆತ್ತಿಯಲ್ಲಿ ಮಿನುಗುವ ಬಿಳಿಗೂದಲು ಸಣ್ಣ ಎಚ್ಚರಿಕೆ ನೀಡಲು ಪ್ರಾರಂಭಿಸುತ್ತದೆ. ಇನ್ನೊಂದಷ್ಟು ಗಮನಿಸಿದರೆ ಶರೀರದ ತೂಕ ಏರಿದ್ದು ಗೋಚರವಾಗುತ್ತದೆ. ಗಂಡಸರಿಗಾದರೂ ಅಷ್ಟೇ. ಉರುಟು ಚೆರಿಗೆಯಂತಾದ ಹೊಟ್ಟೆ ಅಣಕಿಸುತ್ತದೆ. ಟಿ-ಶರ್ಟ್ ಹಾಕಿಕೊಂಡಾಗಲಂತೂ ಹೊಟ್ಟೆಯನ್ನು ಎಷ್ಟು ಒಳಗೆಳೆದುಕೊಳ್ಳುವುದು ಸಾಧ್ಯವೋ ಅಷ್ಟೂ ಪ್ರಯತ್ನ ನಡೆಯುತ್ತದೆ ಭಗೀರಥನ ಹಾಗೆ. ಮುಖದಲ್ಲಿ ಮೊದಲಿನ ನಯ ಮಾಯವಾಗುವುದೂ ನಿಧಾನವಾಗಿ ಕಾಣುತ್ತದೆ. ಕಣ್ಣ ಸುತ್ತಲೂ ಮೂಡುವ ಕಪ್ಪು ವರ್ತುಲ ಕಳೆದ ಇಷ್ಟೂ ವರ್ಷಗಳಲ್ಲಿ ಹಲವು ಕಾರಣಗಳಿಂದಾಗಿ ನಿದ್ದೆಗೆಟ್ಟದ್ದನ್ನು ಹೇಳುತ್ತದೆ. ಒರಟಾಗತೊಡಗಿದ ಕೈಗಳು, ಒಡೆಯಲಾರಂಭಿಸಿದ ಹಿಮ್ಮಡಿ ಎಲ್ಲವೂ ಬದುಕಿನ ಭಾರವನ್ನು ತಾವು ಸಮರ್ಥವಾಗಿ ಹೊರುತ್ತಿದ್ದೇವೆ ಎಂಬುದನ್ನು ತೋರಿಸಿಕೊಡುತ್ತವೆ. ಗಮನಿಸುತ್ತ ಬಂದರೆ ನಮಗರಿವಿಲ್ಲದೆಯೆ ಯೌವನದ ಎಳಸುತನ ದಾಟಿ ಬದುಕಿನ ಮುಖ್ಯ ಮಜಲನ್ನು ತಲಪಿದ್ದು ಅರಿವಿಗೆ ಬರುತ್ತದೆ.
ಬದುಕಿನ ಜಂಜಡ
ಒಂದೆಡೆ ಮನೆಯಲ್ಲಿ ಹಿರಿಯರಾದ ತಂದೆತಾಯಿಯರನ್ನು ನೋಡಿಕೊಳ್ಳಬೇಕು. (ಕೆಲವರಿಗೆ ಅಜ್ಜ ಅಜ್ಜಿಯೂ ಇರಬಹುದು). ಇನ್ನೊಂದೆಡೆಯಲ್ಲಿ ಮಕ್ಕಳು ಈಗಿನ್ನೂ ಬದುಕನ್ನು ಬೆರಗುಕಂಗಳಿಂದ ನೋಡುವವರು. ಅವರ ಕನಸುಗಳನ್ನು ನನಸಾಗಿಸುವ, ಅವರ ಸಾಧನೆಯ ಪಥ ಸುಲಭವಾಗುವಂತೆ ಮಾಡುವ ಬದ್ಧತೆಯ ಜೊತೆಗೆ ಹಿರಿಯರ ನಿರೀಕ್ಷೆಗಳನ್ನೂ ತಲಪುವ ಒತ್ತಡ. ನಮ್ಮಿಂದಾಗಿ ಅವರು ನೋಯಬಾರದು ಎಂಬ ಕಳಕಳಿ. ಹಾಗೆಂದು ವೃತ್ತಿಯ ಕುರಿತು ಕೊಡಬೇಕಾದ ಗಮನದಿಂದಾಗಿ ಅವರೊಂದಿಗೆ ಕುಳಿತು ಹರಟುವುದಕ್ಕೆ ಸಾಕಷ್ಟು ಸಮಯವಿಲ್ಲದೆ ಆಗುವ ಪರದಾಟ ಅನುಭವಿಸಿಯೇ ತೀರಬೇಕು. ‘ನಮ್ಮ ಬದುಕಿನ ಒತ್ತಡ ಅವರಿಗರ್ಥವಾಗುವುದಿಲ್ಲ’ ಎಂದುಕೊಂಡು ಕೊಸರಿಕೊಂಡರೆ ತಪ್ಪಾದೀತು. ಅವರ ಬದುಕಿನ ಒತ್ತಡ ನಮಗರ್ಥವಾಗಿತ್ತೇ?
ವೃತ್ತಿಬದುಕಾದರೂ ಅಷ್ಟೇ. ಒಂದೆಡೆ ನಮ್ಮ ಕೆಲಸವೇ ನಮ್ಮಿಂದ ಬಹಳಷ್ಟನ್ನು ನಿರೀಕ್ಷಿಸುತ್ತದೆ. ವರ್ಷಗಳಿಗನುಗುಣವಾಗಿ ಸಿಗಬೇಕಾದ ಪ್ರೊಮೋಷನ್ಗೆ ನೂರೆಂಟು ತಾಪತ್ರಯಗಳು. ಇತ್ತಕಡೆ ಹಾರ್ಡ್ವರ್ಕ್ಗಿಂತ ಸ್ಮಾರ್ಟ್ವರ್ಕ್ ಹೆಚ್ಚು ಸೂಕ್ತ ಎಂಬ ನಂಬಿಕೆಯಲ್ಲಿ ನಾಗಾಲೋಟದಲ್ಲಿರುವ ಕಿರಿಯರು. ಅವರೊಂದಿಗೆ ನಮಗೆಂತಹ ಸ್ಪರ್ಧೆ ಎಂದುಕೊಂಡರೆ ನಡೆಯದು. ಹೊರಜಗತ್ತಿನ ಒತ್ತಡದ ರೀತಿಯೇ ಹಾಗಿದೆ. ಓಟ ಸಾಲದು, ಹಾರುವುದೂ ತಿಳಿದಿರಬೇಕು ಎಂಬಂತೆ. ಇವೆಲ್ಲದರ ನಡುವೆ ಕುಟುಂಬದ ಸಂತೋಷವನ್ನೂ ಮರೆಯಲಾಗದಲ್ಲ? ಕೆಲಸದ ಒತ್ತಡವೆಲ್ಲ ಕಳೆದು ನಿವೃತ್ತಿಯ ನಂತರ ಕುಟುಂಬದೊಂದಿಗೆ ನೆಮ್ಮದಿಯಿಂದಿರುತ್ತೇನೆ ಎಂದುಕೊಂಡರೆ ನಮ್ಮೊಂದಿಗೆ ನಗುವುದಕ್ಕೋ ಅಳುವುದಕ್ಕೋ ಅವರಿಗೆ ಸಮಯವಿದ್ದೀತೆ? ಅಥವಾ ಅಂತಹ ಬಾಂಧವ್ಯ ಇದ್ದೀತೆ? ಅಥವಾ ಅದಾವುದೋ ಕಥೆಯ ನಾಯಕನಂತೆ ನಿವೃತ್ತಿಯ ಮರುದಿನವೇ ಸ್ವರ್ಗ ಸೇರಿದರೆ ಬದುಕಿರುವವರಿಗೆ ನರಕವನ್ನೇ ಕಟ್ಟಿಕೊಟ್ಟು ಹೋದಂತಲ್ಲವೇ?
ಎಲ್ಲರ ಬದುಕೂ ಒಂದೇ ತರಹ ಇರುವುದು ಎಂದಲ್ಲ. ಹೊರಬೇಕಾದ ನೊಗದ ಭಾರ ಬೇರೆ ಇರಬಹುದು ಅಷ್ಟೇ. ಅವರವರ ಆಸಕ್ತಿಗೆ ಅನುಗುಣವಾಗಿ, ಅವರವರಿಗೆ ಒದಗಿದ ಅವಕಾಶಗಳಿಗೆ ಅನುಗುಣವಾಗಿ ಬದುಕು ರೂಪಿಸಲ್ಪಡುತ್ತದೆ. ಇನ್ನು ಹಲವರಿಗೆ ಎಳವೆಯಲ್ಲಿಯೇ ದೊಡ್ಡ ಭಾರವನ್ನು ಹೊರುವ ಶಕ್ತಿಯನ್ನು ಭಗವಂತ ಕರುಣಿಸಿರುತ್ತಾನೆ – ‘ಹೇಗೆ ನಿಭಾಯಿಸಿಕೊಂಡಿರಿ ಮಹಾರಾಯರೇ?’ ಎಂದು ಇತರರು ಕೇಳುವಷ್ಟು! ನೋಡಿದರೆ ಸುಖದುಃಖಗಳೆರಡೂ ನಮ್ಮಲ್ಲೇ ಅಡಕವಾಗಿರುವಂತೆ ನಮ್ಮನ್ನು ದೇವರು ರೂಪಿಸಿರುತ್ತಾನೆ. ಯಾವುದಕ್ಕೆ ಹೆಚ್ಚಿನ ಗಮನ ಕೊಡುತ್ತೇವೆಯೋ ಅದು ಸೊಂಪಾಗಿ ಬೆಳೆಯುತ್ತದೆ. ಹೀಗೆ ಯೋಚಿಸಿದರೆ ಬದುಕು ಬಹಳ ಸುಲಭ. ಶ್ರೀಕೃಷ್ಣನಾದರೂ ಸಖ ಅರ್ಜುನನಿಗೆ ಪರೀಕ್ಷೆಗಳಿಲ್ಲದೆ ಭಗವದ್ಗೀತೆಯನ್ನು ಬೋಧಿಸಲಿಲ್ಲವಲ್ಲ?
ಬದುಕಿನ ಅರ್ಥ
ಬದುಕಿನಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುತ್ತ್ತ, ನಮ್ಮ ಹೆಜ್ಜೆಗಳು ಭಾರವಾಗದಂತೆ ನೋಡಿಕೊಳ್ಳುತ್ತ, ಇತರರ ಸಂತಸವನ್ನು ಕಂಡು ಕರುಬುವ ಬದಲು ಸಂತೋಷಪಡುತ್ತಾ ಮುಂದುವರಿದೆವಾದರೆ ಬದುಕಿನ ಅರ್ಥ ನಮಗೆ ಗೋಚರಿಸಿದಂತೆಯೇ ಸರಿ. ನೋಯುವುದಕ್ಕೆ, ನೋಯಿಸುವುದಕ್ಕೆ ನಮ್ಮೆದುರು, ಸುತ್ತಮುತ್ತ ಏನೇನೋ ನಡೆಯುತ್ತಿರುತ್ತವೆ. ಕಷ್ಟಗಳು ಬಂದಾಗ ಮನಸ್ಸು ಕುಗ್ಗುವಾಗೆಲ್ಲ ಒಂದು ಅಪಘಾತದಲ್ಲಿ ತನ್ನ ಅತ್ತೆಮಾವ, ಗಂಡ, ಇಬ್ಬರು ಮಕ್ಕಳನ್ನು ಕಳೆದುಕೊಂಡು ತಾನು ಮಾತ್ರ ಬದುಕುಳಿದ ಹೆಣ್ಣುಮಗಳೋರ್ವಳು ನೆನಪಾಗುತ್ತಾಳೆ. ತನ್ನ ಬದುಕಿಗೆ ತಾನೇ ಒಂದು ದಾರಿ ಕಂಡುಕೊಂಡು ಧೃತಿಗೆಡದೆ ಬದುಕಿದ ಅವಳೆÉದುರು ನಮಗಿರುವ ಸವಾಲುಗಳು ಏನೇನೂ ಅಲ್ಲ.
ನಲುವತ್ತರ ಬದುಕಿಗೆ ಆದರ್ಶ ನಾವು ಕಟ್ಟಿಸಿದ ಮನೆಯೋ, ನಮ್ಮ ಸಂಬಳವೋ, ಹುದ್ದೆಯೋ ಆಗಲೇಬೇಕೆಂದೇನೂ ಇಲ್ಲ. ಮಿದುಳಿನ ಆದೇಶ ಪಾಲಿಸಬಲ್ಲ ಅಂಗಾಂಗಗಳು, ಆರೋಗ್ಯವಂತ ಹೃದಯ, ಒಳ್ಳೆಯದನ್ನು ಕಾಣುವ, ಗೌರವಿಸುವ ಮನಸ್ಸು, ಅರ್ಥ ಮಾಡಿಕೊಳ್ಳಬಲ್ಲ ಮತ್ತು ಅರ್ಥವಾಗಬಲ್ಲ ಮನೆಮಂದಿಯಿದ್ದರೂ ಮುಂದಿನ ದಾರಿ ಸರಾಗವೇ. ಸ್ವರಸ್ಥಾನಗಳನ್ನು ಹಿಡಿದ ಬಳಿಕ ಕೀರ್ತನೆ ಹಾಡುವುದು ಕಷ್ಟವೇನಲ್ಲ!