ಮರ ಅರಳಿದೆ ಚಿಗುರುಗಳಲ್ಲಿ ಕೆಂಪಾಗಿ
ಇನ್ನಿಲ್ಲವೆನ್ನುವಂತೆ ಕೆಂಪು
ನೆಲದಿಟ್ಟಿಸಿ ನೋಡುತ್ತಿದೆ ಮೇಲೆ
ಬೀಳಲಿಲ್ಲ ಯಾಕೆ ಒಂದು ಹೂವು !
ಗಿಳಿಬಂತು ಆ ಕೆಂಪಿನ ನಡುವಿಗೆ
ಇರಬಹುದು ಹಣ್ಣು ಅನೇಕ
ದಿನವಿಡೀ ತಿಂದರೂ ಮುಗಿಯವು ಅವು
ಎಂದು ಒಳಗೊಳಗೆ ಹಣ್ಣಾಗಿ ಅದು !
ಒಂದೇ ಒಂದು ಹಣ್ಣು ಇರದುದನು ನೋಡಿ
ಕಡಿಯಿತು ಗಿಳಿ ಚಿಗುರುಗಳನ್ನು
ಚಿಗುರುಗಳು ರಕ್ತದ ಹನಿಗಳಂತೆ ಬಿದ್ದು
ನೆಲದಲ್ಲಿ ಹರಿಯಿತು ಕೆಂಪು
ಋತುರಾಜ ನೋಡಿ ಮೈಮುರಿದೆದ್ದ
ಆ ಮರ ಹಸಿರಾಗತೊಡಗಿತು
ಕೊಂಬೆರೆಂಬೆಗಳು ಕಾಣದಂತಾಗಿ
ಇಡೀ ಮರವೇ ಹಣ್ಣಾಯಿತು !
ಈಗ ಬಂದೆರಗುತ್ತವೆ ಗಿಳಿಗಳು ನೂರಾರು
ಕಾಣುವುದಿಲ್ಲ ಅವುಗಳ ಹಸಿರು
ಅಲ್ಲಿ ಇಲ್ಲಿ ಅವುಗಳ ಕೆಂಪು ಚುಂಚು
ಕಾಣುತ್ತದೆ ಮರವೆ ಬಿಟ್ಟ ಹಾಗೆ ಹೊಸ ಚಿಗುರು !