ಓ! ನೀನಾ, ಬಾ ಮಹಾರಾಯಾ ಒಳಗೆ!
ಈ ಊರಿಗೆ ನೀನು ಬಂದು ಬಹಳ ದಿನಗಳಾದವಂತೆ.
ಈಗೇಕೆ ನನ್ನ ನೆನಪಾಯಿತು?
ಊರಿನ ಮನೆಗಳ ಗೇಟುಗಳೆಲ್ಲ ತಾಳಿಬಿಗಿಸಿಕೊಂಡು ನಿಂತಿವೆಯೆ!
ಮನೆಗಳ ಕಾಲಿಂಗ್ ಬೆಲ್ಗಳು ಮೌನ ಪರದೆಯ ಒಳಗೆ ಜಾರಿವೆಯೆ!
ಯಾಕೆ ಹೊಸಲಲ್ಲಿ ನಿಂತೆ? ಏನು ಅನುಮಾನ ನಿನಗೆ?
ನಾನು ನಿನ್ನನ್ನು ಮಾಧ್ಯಮದ ಬೊಂಬಾಯಿಗೆ ಸಿಗಿಸುವೆನೆಂಬ ಭಯವೇ!
ಅಥವಾ ಪೊಲೀಸರ ಕೈಗೆ ಕೊಡುವೆನೆಂಬ ಅಪನಂಬಿಕೆಯೆ!
ನೋಡು, ನಿನ್ನ ಬಗ್ಗೆ ನನಗೆ ಎಲ್ಲವೂ ಗೊತ್ತಾಗಿದೆ.
ನೀನು ಈ ಭೂಮಿಯಲ್ಲಿ ಅವತರಿಸಿದ ಮೇಲೆ
ಎಲ್ಲವೂ ಅಯೋಮಯ!
ಹಸಿದ ಒಲೆಯಲ್ಲಿ ಹತ್ತದ ಬೆಂಕಿ ಹೃದಯದಲ್ಲಿ ಪ್ರಕ್ಷುಬ್ಧ!
ಬದುಕಿನ ಭಾವ ಸಂಬಂಧಗಳ ತರಂಗಗಳು ಸ್ತಬ್ಧ!
ನಡೆಯುತ್ತಿದ್ದ ಹಾದಿಯಲ್ಲಿ ತಟ್ಟನೆ ಕ್ಷೀಣಿಸಿದ ಬೆಳಕು!
ಉಸಿರು ಬದುಕುಗಳ ನಡುವೆ ಅಘೋಷಿತ ಹೋರಾಟ!
ಉತ್ತರ ಕಾಣದ ಬೆಳಗು-ಬೈಗುಗಳ ನಡುವೆ ಜೀವದ ಪರದಾಟ!
ಒಟ್ಟಾರೆ ಸೂಕ್ಷ್ಮಾಮತಿಸೂಕ್ಷ್ಮ ಅಣುವಾದ ನೀನು
ನಮ್ಮ ಬದುಕಿಗಂಟಿದ ವೈರಿಯಾದೆ.
ಹೀಗಿದ್ದರೂ ನಿನ್ನ ಮೇಲೆ ನನಗೇನೂ ವೈರತ್ವವಿಲ್ಲ!
ನಾನು ಈ ಜಗದ ಜೀವಚಕ್ರಕ್ಕೆ ಸಿಕ್ಕ ಅಣು!
ನೀನೂ ಸಹ ಜಗದ ಆವರಣದಲ್ಲಿ ಜೀವಕ್ಕಾಗಿ ಪರದಾಡುವ
ಸೂಕ್ಷ್ಮಾಮತಿಸೂಕ್ಷ್ಮ ಅಣು.
ನಾನು ಅಣುವಾದರೆ, ನೀನು ವೈರಾಣು.
ಏಕೆ ನನ್ನ ಮುಖವನ್ನೇ ನೋಡುತ್ತಿದ್ದೀಯಾ?
ನಾನು ಮುಖಗವಚ ತೊಟ್ಟಿಲ್ಲವೆಂಬುದು ನಿನ್ನ ತಕರಾರೆ!
ಆಯಿತು ಇಕೊ ತೊಟ್ಟೆ,
ಬಾ ಕುಳಿತುಕೊ ಈ ಖುರ್ಚಿಯಲ್ಲಿ,
ಸಾಮಾಜಿಕ ಅಂತರವ ಕಾಯ್ವ ನೆವದಿ
ನಾನು ಕುಳಿತು ಕೊಳ್ಳುವೆ ಆ ಖುರ್ಚಿಯಲ್ಲಿ.
ಮೇಲಿಂದ ಮೇಲೆ ಸೆನಿಟೈಸರ್ನ್ನು
ಕೈಯ ಮೇಲೆ ಶ್ರದ್ಧೆಯ ತೀರ್ಥದಂತೆ ಸುರಿದುಕೊಳ್ಳುವೆ.
ಆದರೆ ಇವೆಲ್ಲ ನಿನ್ನ ಕುರಿತು ನನ್ನೊಳಗಾವರಿಸಿರುವ
ಭಯವೆಂದು ಮಾತ್ರ ನೀನು ಭಾವಿಸದಿರು!
ಭೂಮಿಯಲ್ಲಿ ನೀನು ಪ್ರತ್ಯಕ್ಷವಾದ ಮೇಲೆ
ನನ್ನ ಮನೆಯ ಕುಕ್ಕರಿನ ವೀಸಲ್ ನನ್ನ ಕಿವಿಗೆ ಸ್ಪಷ್ಟವಾಗಿ ಕೇಳಿಸುತ್ತದೆ.
ಮನೆಯ ಗೋಡೆಗಳ ಉದ್ದ-ಅಗಲಗಳ ಮಿತಿಯೊಳಗೆ
ಬದುಕಿನ ಕಂಬಳಿಯನ್ನು ಹಾಸುವ ಕಸಬು ನನಗೆ ದಕ್ಕುತ್ತಿದೆ.
ಭಾವ ಸಾಗರದಲ್ಲಿ ಮಿಡಿವ ಸಂಸಾರದ ತಂತಿಗಳು
ಅಲ್ಲಲ್ಲಿ ಹುಟ್ಟಿಸುವ ಅಪಸ್ವರಗಳಿಗೆ ಮನಸ್ಸು ಕುಸಿಯದೆ ಗಟ್ಟಿಯಾಗುತ್ತಿದೆ.
ಕನ್ನಡಕದ ಗ್ಲಾಸುಗಳ ರಂಗು-ರಂಗಿನ ಬಣ್ಣಗಳು ಕರಗಿ
ಲೋಕವು ಕಪ್ಪು-ಬಿಳುಪಿನ ಪರದೆಯ ಮೇಲೆ ಮೂಡಿ ಕಣ್ಣೆದುರು ನಿಂತಿದೆ.
ಈಗ ನನಗೆ ಅರ್ಥವಾಗುತ್ತಿದೆ:
ನನ್ನ ಹೋರಾಟವಿರುವುದು ನಿನ್ನ ವಿರುದ್ಧವಲ್ಲ!
ನಿನ್ನೊಡನಿದ್ದೂ ನಿನ್ನಂತಾಗದೆ
ನನ್ನನು ನಾನು ಹುಡುಕುವ ಆ ಮಹಾಸಂಗ್ರಾಮಕ್ಕೆ
ನಾನಿಂದು ಅಣಿಯಾಗಿ ನಿಂತಿದ್ದೇನೆ.
ಈಗೋ, ಸ್ವೀಕರಿಸು,
ನನ್ನ ಈ ರಣವೀಳ್ಯವನ್ನು!