ಭಾರತ ಸ್ವಾಯತ್ತ ಸಾರ್ವಭೌಮ ರಾಷ್ಟçವಾಗಿ ೭೪ ವರ್ಷಗಳನ್ನು ದಾಟಿ ೭೫ನೇ ವರ್ಷದಲ್ಲಿ ಹೆಜ್ಜೆಯಿರಿಸುತ್ತಿರುವುದು ಒಂದು ಸಂಭ್ರಮಾರ್ಹ ಸಂದರ್ಭವೆಂಬುದು ನಿರ್ವಿವಾದ. ಸ್ವಾತಂತ್ರ್ಯಪ್ರಾಪ್ತಿಯೊಡಗೂಡಿ ಉಂಟಾಗಿದ್ದ ವಿಷಾದಕರ ಅಸ್ತವ್ಯಸ್ತತೆಗಳ ಹಿನ್ನೆಲೆಯಲ್ಲಿ ಭಾರತ ಸ್ವತಂತ್ರ ಗಣರಾಜ್ಯವಾಗಿ ಬಹುಕಾಲ ಉಳಿಯಲಾರದು ಎಂಬ ಜಾಡಿನ ಅಭಿಪ್ರಾಯ ಅಂತರರಾಷ್ಟ್ರೀಯ ಚಿಂತಕವಲಯಗಳಲ್ಲಿ ಹರಿದಾಡಿದ್ದುದುಂಟು. ಆದರೆ ಅಂತಹ ನಿರುತ್ಸಾಹಕರ ಅನಿಸಿಕೆಗಳನ್ನೆಲ್ಲ ಹಿಂದಿಕ್ಕಿದುದಷ್ಟೇ ಅಲ್ಲದೆ ಕಳೆದ ಆರು ದಶಕಗಳಲ್ಲಿ ಭಾರತ ಪ್ರಬಲ ಜಾಗತಿಕ ಶಕ್ತಿಯಾಗಿ ಬೆಳೆದಿದೆ. ಒಂದು ದೇಶದ ಇತಿಹಾಸದಲ್ಲಿ ಎಪ್ಪತ್ತು ವರ್ಷಗಳನ್ನು ತುಂಬಾ ಅತಿಶಯದ ಅವಧಿ ಎನ್ನುವಂತಿಲ್ಲ. ಆದರೆ ಆಂತರಿಕ, ಬಾಹ್ಯ ಎರಡೂ ಕಕ್ಷೆಗಳಲ್ಲಿ ನವಸ್ವತಂತ್ರ ಭಾರತ ಎದುರಿಸಬೇಕಾಗಿ ಬಂದ ಸವಾಲುಗಳನ್ನೂ ಅವನ್ನೆದುರಿಸುವಲ್ಲಿ ತೋರಿದ ದಿಟ್ಟತನವನ್ನೂ ನೆನೆಯುವಾಗ ರೋವಾಂಚವಾಗದಿರದು, ಅಸ್ಖಲಿತ ಸ್ವಾಭಿಮಾನವೂ ಆತ್ಮವಿಶ್ವಾಸವೂ ಎದ್ದುತೋರದಿರದು. ಕಳೆದೊಂದು ದಶಕದ ಭಾರತದ ಸರ್ವಾಂಗೀಣ ಉಚ್ಛ್ರಾಯವಂತೂ ಇಡೀ ಜಗತ್ತಿನ ಗಮನ ಸೆಳೆದಿದೆ. ಸಾಧಿಸಿರುವುದು ಕಡಮೆಯಲ್ಲ; ಸಾಧಿಸಬೇಕಾದ್ದೂ ಬಹಳವಿದೆ. ಆದರೆ ಈಚಿನ ಪರ್ವದಲ್ಲಿ ಕಂಡಿರುವ ಉನ್ಮುಖತೆಯನ್ನೂ ಚೇತರಿಕೆಯನ್ನೂ ಗಮನಿಸಿದಲ್ಲಿ ಭಾರತ ಈಗ ತುಂಬುತಾರುಣ್ಯದ ಹಂತದಲ್ಲಿದೆ ಎಂಬುದು ಅಸಂದಿಗ್ಧವಾಗಿದೆ. ಈ ಭೂಮಿಕೆಯಲ್ಲಿ ಸ್ವಾತಂತ್ರ್ಯ ಸಾಧನೆಯ ಆಚೀಚಿನ ಹಾಗೂ ವರ್ತಮಾನಕಾಲದ ಪ್ರಮುಖ ಪದಚಿಹ್ನೆಗಳನ್ನು ಗುರುತಿಸುವ ವಿನಮ್ರ ಪ್ರಯತ್ನ ಈ ವಿಶೇಷ ಸಂಚಿಕೆಯದು.
– ಸಂಪಾದಕ