ನಿಮ್ಮನ್ನು ಹಸ್ತಿನಾವತಿಯ ರಾಜಪ್ರಭುತ್ವಕ್ಕಾಗಲಿ, ಮಂತ್ರಿಗಳಿಗಾಗಲಿ ಅಥವಾ ಪ್ರಧಾನ ರಕ್ಷಣಾಧಿಕಾರಿಗಳಿಗಾಗಲಿ ತಿಳಿಯದಂತೆ ವಾರಣಾವತದಿಂದ ಇಲ್ಲಿಗೆ ಬರುವಂತೆ ಮಾಡಿದ್ದು ಹೇಗೆ?” ನನ್ನನ್ನು ಅವನು ಕೇಳಿದ.
“ಹೇಗೆ?” ನಾನು ಪ್ರಶ್ನಿಸಿದೆ.
“ಅದೇ ರಹಸ್ಯ. ಒಂದು ಓಲೆಯನ್ನು ಬರೆದು ಅದಕ್ಕೊಂದು ಕೃತ್ರಿಮ ಮುದ್ರೆಯನ್ನೊತ್ತಿ ನಿಮ್ಮನ್ನು ಬರುವಂತೆ ಮಾಡಿದ ಹಾಗೆಯೇ ಯುವರಾಜರ ಓಲೆ ಹಾಗೂ ಮುದ್ರೆಗಳನ್ನು ನಾನೂ ಕೃತ್ರಿಮವಾಗಿ ಸೃಷ್ಟಿಸಿದೆ. ನಿಮ್ಮನ್ನು ಸೆರೆಯಿಂದ ಬಿಡಿಸುವ ಸುಲಭದ ದಾರಿ ಅದು”.
“ಓ..ಇಷ್ಟೆಲ್ಲ ನಡೆಯುತ್ತದೆ ಎಂಬ ಕಲ್ಪನೆಯೂ ನನಗಿರಲಿಲ್ಲ. ಈಗೇನೋ ನನ್ನ ಬಿಡುಗಡೆಯಾಗಿದೆ ಸರಿ. ಆದರೆ ಇದು ಇಷ್ಟಕ್ಕೇ ಮುಗಿಯುತ್ತದೆಯೇನು? ಬಿಡಿಸಿದ ನಿನಗೂ, ಬಿಡಿಸಿಕೊಂಡ ನನಗೂ ಆಪತ್ತು ಇದೆಯಲ್ಲ. ಇದರಿಂದ ಪಾರಾಗುವುದು ಸುಲಭವೆ?”
“ಸುಲಭವಲ್ಲ. ಆದರೆ ಈ ರಹಸ್ಯ ತಿಳಿದವರು ಬಾಯಿ ಬಿಡದಂತೆ ಮಾಡಬೇಕು. ಅವರು ನಿಮ್ಮನ್ನು ಅಕ್ರಮವಾಗಿ ಬಂಧಿಸಿದ ಕಾರಾಗಾರ ಸದ್ಯ ಹಳೆಯದಾಗಿ ಬಳಕೆಯಲ್ಲಿಲ್ಲ. ಅಲ್ಲಿದ್ದ ಭಟರನ್ನು ಬಿಟ್ಟು ಅನ್ಯರಿಗೆ ನಿಮ್ಮ ಬಂಧನವಾಗಲಿ, ಬಿಡುಗಡೆಯಾಗಲಿ ತಿಳಿಯದು. ನಾನು ಮತ್ತು ನನ್ನ ಭಟರು ಮುಖ ಮುಚ್ಚಿಕೊಂಡಿದ್ದರಿಂದ ನಾವು ಯಾರು ಎಂಬುದು ಅವರಿಗೆ ಗೊತ್ತಿಲ್ಲ. ಅವರ ಬಾಯಿ ಮುಚ್ಚಿಸಿದರೆ ಇದು ಇಲ್ಲಿಗೇ ಮುಗಿಯುತ್ತದೆ. ಅವರನ್ನು ನಿಯೋಜಿಸಿದವರಿಗೆ ಇದು ರಹಸ್ಯವಾಗಿ ಉಳಿಯುತ್ತದೆ. ಅವರು ಚೇಳು ಕುಟುಕಿಸಿಕೊಂಡ ಕಳ್ಳರಂತೆ ಸುಮ್ಮನಿರಬೇಕಾಗುತ್ತದೆ. ನೀವು ಅರಗಿನಮನೆಯ ರಹಸ್ಯದ ಶೋಧವನ್ನು ಕೈಬಿಡಬೇಕು, ಅಷ್ಟೇ. ಅದರಿಂದ ಅವರಿಗೆ ನಿಮ್ಮ ಮೇಲೆ ಆಕ್ರೋಶ ಉಳಿಯುವುದಿಲ್ಲ” ಅವನೆಂದ.
“ಅಂದರೆ ಪಾಂಡವ ರಾಜಕುಮಾರರ ಹತ್ಯೆಯನ್ನು ಮುಚ್ಚಿಹಾಕಬೇಕೇನು, ನಾನು? ನೀನೂ ಇದನ್ನೇ ಹೇಳುವುದೆ? ಹೌದಾದರೆ ನನ್ನನ್ನು ಬಿಡಿಸಿದ್ದರ ಔಚಿತ್ಯವೇನು?” ಕಹಿಯಾಗಿ ಕೇಳಿದೆ. ಈಗ ನನ್ನ ದನಿ ಏರಿತ್ತು. ಅದರಲ್ಲಿ ಅಸಮ್ಮತಿ, ಅಸಮಾಧಾನ ಎರಡೂ ತುಂಬಿದ್ದವು.
ಅವನು ಏನೋ ಹೇಳುವವನಿದ್ದ. ಅಷ್ಟರಲ್ಲಿ ಭಟನೊಬ್ಬ ಮೌನವಾಗಿರುವಂತೆ ಸೂಚಿಸಿ ಮೆಲುದನಿಯಲ್ಲಿ ನುಡಿದ, “ನಾಯಕರೆ, ದೂರದಿಂದ ರಥದ ಸದ್ದು ಕೇಳುತ್ತಿದೆ. ಯಾರೋ ಇತ್ತ ಕಡೆ ಬರುವಂತಿದೆ” – ಎಂದು.
ಈಗ ಖನಕನು ಮೌನವಾಗಿ ಕಿವಿಗೊಟ್ಟ. “ಹೌದು, ರಥ-ಚಕ್ರಗಳ ಸದ್ದು. ಬಹುಶಃ ನಾವು ರಕ್ಷಣಾಧಿಕಾರಿಗಳನ್ನು ಬಿಡಿಸಿದ್ದು ವಂಚನೆಯಿಂದ ಎಂಬುದು ಅವರಿಗೆ ತಿಳಿದುಹೋಗಿದೆ. ಇದೀಗ ನಮ್ಮ ಅಳಿವು ಉಳಿವಿನ ಪ್ರಶ್ನೆ. ನೀನು ಆ ಎತ್ತರದ ಮರವನ್ನೇರಿ ಯಾವ ದಿಕ್ಕಿನಿಂದ ಅವರು ಬರುತ್ತಿದ್ದಾರೆಂದು
ನೋಡು. ನಾವೀಗ ಸಣ್ಣ ಯುದ್ಧಕ್ಕೆ ಸಿದ್ಧರಾಗಬೇಕು” ಎಂದು ಆಜ್ಞಾಪಿಸಿದ. ಬಳಿಕ ನನ್ನನ್ನು ಉದ್ದೇಶಿಸಿ, “ರಕ್ಷಣಾಧಿಕಾರಿಗಳು ಬಾಣ ಪ್ರಯೋಗದಲ್ಲಿ ನಿಷ್ಣಾತರಲ್ಲವೆ?” ಎಂದು ಪ್ರಶ್ನಿಸಿದ.
ನಾನು, ಎಲ್ಲ ಬಗೆಯ ಯುದ್ಧಗಳಲ್ಲೂ ಸಾಕಷ್ಟು ನುರಿತವನೆ. ಅದನ್ನೆಲ್ಲ ಅಭ್ಯಾಸ ಮಾಡಿಯೇ ಈ ಪದವಿಗೆ ಅರ್ಹತೆಯನ್ನು ಸಂಪಾದಿಸಿದವನು. ಅದನ್ನೇ ಅವನಿಗೂ ಹೇಳಿದೆ. ಖನಕನ ಮುಖದಲ್ಲಿ ಸಮಾಧಾನ ಕಾಣಿಸಿತು.
“ರಕ್ಷಣಾಧಿಕಾರಿಗಳು ಮನ್ನಿಸಬೇಕು. ಈಗ ಬರುತ್ತಿರುವವರು ನಿಮ್ಮನ್ನು ಸೆರೆಯಲ್ಲಿಟ್ಟು ಬೆದರಿಸಿದ ದುಷ್ಟರು. ಇವರಲ್ಲಿ ಒಬ್ಬನೂ ಜೀವಸಹಿತ ಉಳಿಯುವ ಹಾಗಿಲ್ಲ. ಒಬ್ಬ ಉಳಿದರೂ ನಮ್ಮ ಪ್ರಾಣಕ್ಕೆ ಅಪಾಯವಿದೆ.
ನೀವು ಹಸ್ತಿನಾವತಿಗೆ ಬಂದಲ್ಲಿಂದ ಈವರೆಗೆ ನಡೆದುದು ಮುಚ್ಚಿಹೋಗಬೇಕು. ಅದಕ್ಕಾಗಿ ಇವರನ್ನು ಮುಗಿಸುವುದು ಅನಿವಾರ್ಯ. ದಯವಿಟ್ಟು ನಿಮ್ಮ ಉಷ್ಣೀಷವನ್ನು ಮುಖಕ್ಕೆ ಸುತ್ತಿಕೊಳ್ಳಿ. ವಸ್ತçಗಳು ಮುಚ್ಚುವಂತೆ ಉತ್ತರೀಯವನ್ನು ಮೈಮೇಲೆ ಹೊದೆದುಕೊಳ್ಳಿ. ಯಾರೂ ಗುರುತಿಸಬಾರದು” ಎಂದ. ನಾನು ಅವನೆಂದಂತೆ ಮಾಡಿದೆ.
ಇಷ್ಟಾಗುವಾಗ ಮರವೇರಿದ ಭಟ ಕೆಳಗಿಳಿದು ಬಂದ.
“ನಾಯಕರೆ, ಆ ಮಾರ್ಗದಲ್ಲಿ ಮೂರು ನಾಲ್ಕು ರಥಗಳು ಈ ಕಡೆಗೆ ಬರುತ್ತಿವೆ. ಶಸ್ತçಸಜ್ಜಿತ ಯೋಧರು ಅದರಲ್ಲಿದ್ದಂತೆ ತೋರುತ್ತದೆ. ಹದಿನೈದರಿಂದ ಇಪ್ಪತ್ತು ಮಂದಿ ಇದ್ದಾರು” ಎಂದ. “ಬಹುಶಃ ಅವರಿಗೆ ನಾವು ಬಂದ ದಿಕ್ಕಿನ ಸುಳಿವು ಹತ್ತಿರಬೇಕು. ನಾವು ಅಡವಿಯ ದಾರಿಯಲ್ಲಿ ಬಂದೆವು ಅವರು ಸುತ್ತುಬಳಸಿದರೂ ಸುಗಮವಾದ ಮಾರ್ಗವನ್ನು ಆರಿಸಿಕೊಂಡರು. ನನ್ನ ನಿರೀಕ್ಷೆಗಿಂತ ಬೇಗನೇ ಬಂದರು. ಇರಲಿ.ರಕ್ಷಣಾಧಿಕಾರಿಗಳೇ, ಈಗೇನು ಮಾಡೋಣ ಎನ್ನುತ್ತೀರಿ? ಅವರ ಪಂಗಡದ ಈ ಯೋಧರಲ್ಲಿ ಯಾರೊಬ್ಬ ಬದುಕುಳಿದರೂ ಅದು ಆಪತ್ತು. ಅವರನ್ನೆಲ್ಲ ಹಿಂದಿರುಗದಂತೆ ಮುಗಿಸಬೇಕು. ನನಗೆ ಇಂತಹ ಯುದ್ದಗಳ ಅನುಭವವಿಲ್ಲ. ಒಟ್ಟು ಮೇಲೆ ಬಿದ್ದು ಹೊಡೆಯುವುದಷ್ಟನ್ನೇ ನಾನು ಮಾಡಬಲ್ಲೆ. ನೀವು ಯುದ್ಧತಂತ್ರ ಬಲ್ಲವರು. ನೀವೇ ಒಂದು ದಾರಿ ಹೇಳಿ” ಎಂದ ಅವನು.
ನಾನು ಒಮ್ಮೆ ಅವರ ಗುಂಪನ್ನು ದೃಷ್ಟಿಸಿದೆ. “ನಿಮ್ಮಲ್ಲಿ ನೂರುಹೆಜ್ಜೆ ದೂರದ ಗುರಿಗೆ ನಾಟುವಂತೆ ಹೊಡೆಯಬಲ್ಲ ಬಿಲ್ಲುಗಾರರು ಇದ್ದಾರೆಯೆ?” ಎಂದೆ. ಒಬ್ಬ ತತ್ಕ್ಷಣ ಮುಂದೆ ಬಂದ. ಇನ್ನೊಬ್ಬ ಅನುಮಾನಿಸುತ್ತ ಹೆಜ್ಜೆ ಮುಂದಿಟ್ಟ. “ಸರಿ ನಮ್ಮ ರಥದಿಂದ ಮೂರು ಬಿಲ್ಲುಗಳು ಹಾಗೂ ಸಾಕಷ್ಟು ಸಂಖ್ಯೆಯ ಬಾಣಗಳನ್ನು ಹಿಡಿದುಕೊಂಡು ನನ್ನನ್ನು ಹಿಂಬಾಲಿಸಿ. ಖನಕ, ನೀವು ನಾಲ್ವರು ಆದಷ್ಟು ಮಾರ್ಗದ ಸಮೀಪ ಮರೆಯಲ್ಲಿ ಕುಳಿತಿರಿ. ಭಲ್ಲೆಗಳು, ಖಡ್ಗಗಳು ಇರಲಿ. ಒಂದು ವೇಳೆ ರಥದಲ್ಲಿರುವ ಯೋಧರು ಈ ಮಾರ್ಗದಲ್ಲಿ ತಪ್ಪಿಸಿಕೊಂಡು ಹೋಗುವ ಯತ್ನವನ್ನೇನಾದರೂ ಮಾಡಿದರೆ ಭಲ್ಲೆಗಳನ್ನು ಎಸೆದು ಬೀಳಿಸಿ”- ಹೀಗೆಂದು
ಆದೇಶಿಸಿ, ಮುಖ್ಯಮಾರ್ಗದ ಪಕ್ಕದಲ್ಲಿ ದಟ್ಟವಾಗಿ ಬೆಳೆದ ಪೊದರುಗಳ ಮರೆಯಲ್ಲಿ ಸದ್ದುಮಾಡದೆ ರಥಗಳತ್ತ ಸಾಗಿದೆ. ಇಬ್ಬರು ಬಿಲ್ಲುಗಾರರು ನನ್ನನ್ನು ಹಿಂಬಾಲಿಸಿ ಬಂದರು. ರಥಗಳು ಬರುವ ದಾರಿಯಲ್ಲಿ ಸಣ್ಣ ತಿರುವೊಂದು ಇತ್ತು. ಅಲ್ಲಿನ ಬಂಡೆಯೊಂದರ ಮರೆಯಲ್ಲಿ ಅವಿತು ಕುಳಿತು ರಥದಲ್ಲಿದ್ದವರನ್ನು ಸುಲಭವಾಗಿ ಹೊಡೆಯಬಹುದೆಂದು ಯೋಚಿಸಿದೆ.
ನನಗೆ ಅಚ್ಚರಿಯಾಗುವಂತೆ ರಥಗಳು ಅನತಿ ದೂರದಲ್ಲಿ ನಿಧಾನಗೊಂಡು ನಿಂತವು. ನಮ್ಮನ್ನು ಗಮನಿಸಿರುವ ಸಾಧ್ಯತೆ ಇರಲಿಲ್ಲ. ಮತ್ತೇನು ಕಾರಣ? ನಾನವರನ್ನು ಹೊಡೆಯಲು ಉದ್ದೇಶಿಸಿದ ತಿರುವಿಗಿಂತ ಕೊಂಚ ಹಿಂದೆ ರಥಗಳ ದಾರಿಯ ಎಡಪಾರ್ಶ್ವ ಕೊಂಚ ತೆರಪಾಗಿತ್ತು. ಬಹುಶಃ ದೂರದಲ್ಲಿ ಭಲ್ಲೆ ಹಿಡಿದ ಖನಕ ಮತ್ತು ಅವನ ಮೂವರು ಅನುಚರರು ಇವರ ಕಣ್ಣಿಗೆ ಗೋಚರಿಸಿರಬೇಕು ಎಂದು ಊಹಿಸಿದೆ. ಮುಂದುವರಿಯಬೇಕೋ ಬೇಡವೋ ಎಂಬ ಸಂಶಯದಿಂದ ಅಲ್ಲಿ ನಿಂತಿರಬೇಕು. ನನಗೆ ಇದು ಅನುಕೂಲವೇ ಆಯಿತು. ನಾವಿದ್ದ ಸ್ಥಳದಿಂದ ಮತ್ತೂ ಮುಂದೆ ಸಾಗಿ ಅನಿರೀಕ್ಷಿತ ದಾಳಿ ಮಾಡುವ ನಿರ್ಧಾರಕ್ಕೆ ಬಂದೆ. ಚಲಿಸುತ್ತಿರುವ ರಥಗಳಿಗಿಂತ ನಿಂತಿರುವ ಜನರನ್ನು ಘಾತಿಸುವುದು ಸುಲಭ.
ನನ್ನ ಹಿಂದೆಯೇ ಇದ್ದ ಬಿಲ್ಲುಗಾರರಿಗೆ ಸಂಜ್ಞೆ ಮಾಡಿ ಮುಂದುವರಿದೆ. ಹಾಗೆಯೇ ಪೊದರುಗಳಲ್ಲಿ ನುಸುಳುತ್ತ ಮಾರ್ಗಮಧ್ಯದಲ್ಲಿ ನಿಂತಿದ್ದ ರಥಗಳನ್ನ ದಾಟಿ ಮುಂದೆ ಹೋದೆವು. ನೂರುಗಜ ಮುಂದೆ ಹೋದಾಗ ಚಲನೆ ನಿಲ್ಲಿಸಿ ಕಿವಿಗೊಟ್ಟೆ. ಸದ್ದಿಲ್ಲ. ಪೊದರುಗಳ ನಡುವಿನಿಂದ ಇಣುಕಿದರೆ ಒಂದಿಬ್ಬರು ಕೆಳಗಿಳಿದು ನಾವು ರಥ ನಿಲ್ಲಿಸಿದ ಸ್ಥಳವನ್ನೇ ಗಮನಿಸುತ್ತಿದ್ದರು. ನಾವೀಗ ಬಾಣಗಳಿಂದ ಆಕ್ರಮಣ ಮಾಡಿದರೆ ಅವರು ಹಿಂದೆ ಹೋಗುವಂತಿರಲಿಲ್ಲ. ಮುಂದೆ ಹೊದರೆ ಖನಕನ ಖಡ್ಗ, ಭಲ್ಲೆಗಳಿಗೆ ಬಲಿಯಾಗುತ್ತಾರೆ. ಸಾಲಾಗಿ ಅವರ ಮೂರು ರಥಗಳಿದ್ದವು. ಹನ್ನೆರಡು ಯೋಧರೆಂದು ಲೆಕ್ಕ ಹಾಕಿದೆ. ನನ್ನ ಸಹಚರರ ಸನಿಹ ತೆರಳಿ ಪಿಸುದನಿಯಲ್ಲಿ ಹೇಳಿದೆ, “ಮೊದಲು ರಥದ ಕೀಲುಗಳಿಗೆ ಹೊಡೆದು ಚಲಿಸದಂತೆ ಮಾಡಬೇಕು. ಮರವನ್ನು ಭೇದಿಸುವ ಹರಿತವಾದ ಬಾಣಗಳನ್ನು ಪ್ರಯೋಗಿಸಿ ಕೀಲುಗಳನ್ನು ಮುರಿದು ಹಾಕಿ. ಅಷ್ಟರಲ್ಲಿ ನಾನು ಆದಷ್ಟು ಸಮೀಪ ತೆರಳಿ ದಿಣ್ಣೆಯ ಮೇಲಿಂದ ಸಿಕ್ಕಿದಷ್ಟು ಯೋಧರನ್ನು ಬೀಳಿಸುತ್ತೇನೆ. ನೀವು ರಥಗಳು ಚಲಿಸದಂತೆ ಮಾಡಿದ ಮೇಲೆ ಸರದಿಯಿಂದ ಯೋಧರನ್ನು ಗುರುತಿಸಿ ಹೊಡೆಯಿರಿ. ನಿಮ್ಮ ಲಕ್ಷ್ಯ ಎದುರಿಗಿರುವ ರಥ. ಅವರಿಗೆ ಏನಾಯ್ತು ಎಂಬ ಅರಿವು ಹುಟ್ಟುವ ಮೊದಲೇ ಕೆಲಸ ಮುಗಿಯಬೇಕು. ನಾನು ದಿಣ್ಣೆ ತಲಪುವವರೆಗೆ ಕಾದಿರಿ” – ಎಂದು ಸೂಚಿಸಿ ಸರಿದೆ.
ನಾನು ದಿಣ್ಣೆಯನ್ನು ಏರಿದೊಡನೆ ಅವರು ಬಾಣಗಳನ್ನು ಹೊಡೆದು ರಥದ ಕೀಲುಗಳನ್ನು ಹಾಗೂ ಮೂಕಿಗಳನ್ನು ಮುರಿದರು. ನಾನು ಕೊಂಚ ಎತ್ತರದ ಜಾಗದಲ್ಲಿದ್ದುದರಿಂದ ಕೆಳಗಿಳಿದು ನಿಂತಿದ್ದ ಮೂವರನ್ನು ಮೂರು ಬಾಣಗಳಿಂದ ಮಲಗಿಸಿದೆ. ಅವರು ದಿಗ್ಭ್ರಮೆಯಿಂದ ಹೊರಬರುವ ಮೊದಲೇ ರಥಗಳು ಮುರಿದಿದ್ದವು. ಆರು ಮಂದಿ ಯೋಧರು ನಮ್ಮ ಬಾಣಗಳಿಗೆ ಬಲಿಯಾಗಿದ್ದರು. ಒಬ್ಬ ಗಾಯಗೊಂಡು ಏಳಲಾರದ ಸ್ಥಿತಿಯಲ್ಲಿದ್ದ. ನಾಲ್ಕು ಮಂದಿ ಬಾಣಗಳು ಬಂದ ದಿಕ್ಕನ್ನು ಗುರುತಿಸಿ ರಥದಿಂದ ನೆಗೆದು ಖನಕ ಮತ್ತು ಭಟರಿದ್ದ ದಿಕ್ಕಿಗೆ ಧಾವಿಸಿದರು. ನಾವು ಪೊದರುಗಳ ಮರೆಯಿಂದ ಹೊರಬಂದು ಮಾರ್ಗದಲ್ಲಿ ಅವರ ಬೆನ್ನು ಹಿಡಿದೆವು. ಅವರು ಓಡುತ್ತಾ ಖನಕ ಭಲ್ಲೆಗಳಿಗೆ ಬಲಿಯಾಗಬೇಕಿತ್ತು. ಆದರೆ ಏನೂ ಆಗಲಿಲ್ಲ.
ಅವರು ಮಾರ್ಗದಲ್ಲಿ ಓಡುತ್ತಲೇ ಇದ್ದರು. ಹಾಗೇ ಬಿಡುವ ಹಾಗಿರಲಿಲ್ಲವಷ್ಟೆ? ತಡಮಾಡದೆ ಅವರ ಬೆನ್ನುಹತ್ತಿ ಹೋಗುವ ಉಪಾಯ ಯಾವುದು? ಮುರಿದ ರಥಗಳಿಗೆ ಕಟ್ಟಿದ್ದ ಕುದುರೆಗಳು ಕಾಣಿಸಿದವು. ಅವುಗಳನ್ನು ಬಿಚ್ಚಿಕೊಂಡು ನಾಗಾಲೋಟದಲ್ಲಿ ಧಾವಿಸಿ ಹೋದೆವು.
ಕುದುರೆಯ ಮೇಲೆ ಕುಳಿತು ಗುರಿ ಸಾಧಿಸಿ ಬಾಣ ಪ್ರಯೋಗಿಸುವುದು ಸುಲಭವಲ್ಲ. ಅಂತೂ ಆವರನ್ನು ಘಾತಿಸಿ ಬೀಳಿಸುವ ಹೊತ್ತಿಗೆ ನಮ್ಮ ಬತ್ತಳಿಕೆಗಳು ಬರಿದಾಗಿದ್ದವು. ಅಲ್ಲಿಂದ ಹಿಂದಿರುಗಿ ಖನಕನಿದ್ದಲ್ಲಿಗೆ ಬಂದರೆ ಅವನಾಗಲಿ, ಜತೆಗಿದ್ದವರಾಗಲಿ ಕಾಣಿಸಲಿಲ್ಲ. ಎಲ್ಲಿ ಹೋದರು ಎಂದು ಹುಡುಕಾಡುತ್ತಿದ್ದಂತೆ ದೂರದ ಮರದ ಕೆಳಗೆ ಕೆಲವರು ಕಾಣಿಸಿದರು. ಖನಕನನ್ನೂ ಜತೆಗಿದ್ದ ಭಟರನ್ನೂ ಬಂಧಿಸಿದ್ದರು. ಏಳೆಂಟು ಮಂದಿ ಶಸ್ತ್ರಧಾರಿಗಳು ಅವರನ್ನು ಬಳಸಿದ್ದರು. ಬಹುಶಃ ಇವರು ನಾವು ಬಂದ ದಾರಿಯಲ್ಲಿ ರಥಚಕ್ರದ ಗುರುತನ್ನಾಧರಿಸಿ ಹಿಂಬಾಲಿಸಿರಬೇಕು. ಈಗೇನು ಮಾಡಲಿ ಎಂದು ಒಂದು ಕ್ಷಣ ಯೋಚಿಸಿದೆ. ಖನಕನನ್ನು ಬಿಡಿಸುವುದು ಮಾತ್ರವಲ್ಲ, ಬಂದ ಯೋಧರನ್ನು ಸಂಹರಿಸಬೇಕಿದೆ. ನಾವಿರುವುದು ಮೂವರು. ಅಲ್ಲದೆ ನಮ್ಮವರು ಬಂಧನದಲ್ಲಿದ್ದಾರೆ. ಹಗ್ಗದಿಂದ ಕಟ್ಟಿರಲಿಲ್ಲವಾದರೂ ಅವರ ಬೆನ್ನಿಗೆ ಖಡ್ಗದ ಮೊನೆಯನ್ನು ಒತ್ತಿ ನಮ್ಮ ರಥಕ್ಕೇರಿಸುವ ಸನ್ನಾಹದಲ್ಲಿದ್ದಾರೆ.
ಒಂದೆಡೆಯಿಂದ ರಥಯೋಧರು, ಇನ್ನೊಂದೆಡೆಯಿಂದ ಈ ಕುದುರೆಯನ್ನೇರಿದ ಭಟರು – ಒಟ್ಟಾಗಿ ನಮ್ಮನ್ನು ಅಡ್ಡವಿಸುವುದಕ್ಕೆ ಬಂದಿರಬೇಕು. ನಾವು ರಥದಲ್ಲಿದ್ದವರನ್ನು ಕೆಡವಿಹಾಕುವುದಕ್ಕೆ ಆ ಕಡೆ ಸಾಗಿದಾಗ ಇಲ್ಲಿ ಅವರು ಮುತ್ತಿಕೊಳ್ಳಬಹುದು ಎಂದು ಅರ್ಥ ಮಾಡಿಕೊಂಡೆ. ದೂರದಿಂದ ಘಾತಿಸುವುದಕ್ಕೆ ನಮ್ಮಲ್ಲಿ ಬಾಣಗಳು ಮುಗಿದಿದ್ದವು. ಒರೆಯಲ್ಲಿದ್ದ ಖಡ್ಗಗಳಿಂದ ನಾವು ಮೂವರೇ ಕಾರ್ಯ ಸಾಧಿಸಬೇಕಾಗಿತ್ತು. ನನ್ನ ಜತೆಯಲ್ಲಿದ್ದವರ ಮುಖ ನೋಡಿದೆ. ಅವರು ಅದಕ್ಕೆ ಸನ್ನದ್ಧರೇ ಆಗಿದ್ದರು. ಮೂವರೂ ದೂರಸರಿದು ಏಕಕಾಲಕ್ಕೆ ಮೂರು ದಿಕ್ಕುಗಳಿಂದ ಅನಿರೀಕ್ಷಿತ ಆಕ್ರಮಣ ಎಸಗೋಣವೆಂದು ಸೂಚಿಸಿದೆ.
ಕಾಡಿನ ಮರಗಳ ಸಂದಿಯಲ್ಲಿ ಮರೆಯಾಗಿ ಅವರಿದ್ದ ಸ್ಥಳವನ್ನು ಸೇರಿಕೊಂಡು ಗಮನಿಸಿದೆ. ಖನಕ ಮತ್ತು ಸಹಚರರನ್ನು ವಶಕ್ಕೆ ಪಡೆದು ನಿರಾಳವಾಗಿದ್ದರು. ಕೆಲವರು ಮಾತ್ರ ಆಯುಧ ಹಿಡಿದಿದ್ದರು. ಕೆಲವರ ಕತ್ತಿಗಳು ಒರೆ ಸೇರಿದ್ದವು. ಪೂರ್ವನಿರ್ಣಯದಂತೆ ಗಟ್ಟಿಯಾಗಿ ಜಯಘೋಷ ಮಾಡುತ್ತ ಖಡ್ಗ ಹಿರಿದು ಅವರತ್ತ ನುಗ್ಗಿದೆ. ಅದನ್ನೇ ಸೂಚನೆಯಾಗಿ ತಿಳಿದ ಅನುಚರರೂ ಮುನ್ನುಗ್ಗಿದರು. ಬಂದವರಿಗೆ ಇದು ಅನಿರೀಕ್ಷಿತವಾಗಿತ್ತು. ಆದರೂ ಪ್ರತಿರೋಧ ತೋರಿದರು. ಖಡ್ಗಗಳ ಝಣತ್ಕಾರ ನಿಲ್ಲುವಷ್ಟರಲ್ಲಿ ಸಾಯುಧರಾಗಿದ್ದ ಮೂವರು ನನ್ನ ಕತ್ತಿಗೆ ಬಲಿಯಾಗಿದ್ದರು. ಇಬ್ಬರನ್ನು ನನ್ನ ಜತೆಗಿದ್ದ ಭಟರು ಕೆಡಹಿದ್ದರು. ಖನಕ ಅಷ್ಟರಲ್ಲಿ ಪರಿಸ್ಥಿತಿಯನ್ನು ಗ್ರಹಿಸಿ ಮಿಂಚಿನ ವೇಗದಲ್ಲಿ ಇನ್ನೊಬ್ಬ ಭಟನ ಒರೆಯ ಕತ್ತಿಯನ್ನು ಸೆಳೆದು ವಿಜೃಂಭಿಸಿದ. ಕಣ್ಣೆವೆಯಿಕ್ಕುವುದರಲ್ಲಿ ಯುದ್ಧ ಮುಗಿದುಹೋಗಿತ್ತು.
ನಮ್ಮಲ್ಲಿ ಇಬ್ಬರಿಗೆ ಗಾಯವಾಗಿ ನೆತ್ತರು ಸೋರುತ್ತಿತ್ತು. ಅವರ ಕಡೆಯವರೆಲ್ಲ ಹತರಾಗಿ ಬಿದ್ದಿದ್ದರು.
ಈಗ ಖನಕ ನಿರಾಳನಾದ. “ರಕ್ಷಣಾಧಿಕಾರಿಗಳೆ, ಈಗ ನೀವು ಮುಕ್ತರು. ಹಸ್ತಿನಾವತಿಗೆ ಬಂದುದಾಗಲಿ, ಈ ಎಲ್ಲ ಘಟನೆಗಳಾಗಲಿ ಸಿಂಹಾಸನದ ಗಮನಕ್ಕೆ ಎಂದಿಗೂ ಬರುವುದಿಲ್ಲ. ಇವರನ್ನು ನಿಯೋಜಿಸಿದವರಿಗೂ ರಹಸ್ಯ ತಿಳಿಯುವುದಿಲ್ಲ. ಯಾರು ಈ ಕಪಟವ್ಯೂಹದಲ್ಲಿ ಭಾಗಿಗಳಾಗಿದ್ದರೋ ಅವರೆಲ್ಲ ಹತರಾಗಿದ್ದಾರೆ. ನೀವು ನಮ್ಮ ಜತೆ ರಾಜಧಾನಿಗೆ ಬನ್ನಿ. ನಿಮ್ಮ ಸಾರಥಿ ಕಾಯುತ್ತಿರಬಹುದು” ಎಂದ.
“ನಿನ್ನ ಸಹಾಯಕ್ಕೆ ಕೃತಜ್ಞತೆಗಳು ಖನಕ. ವಿದುರ ಮಹಾಶಯರಿಗೂ ನನ್ನ ಪ್ರಣಾಮಗಳು” ಎಂದೆ.
“ಅದೇನೂ ದೊಡ್ಡದಲ್ಲ. ಈ ಆಳ್ವಿಕೆಯಲ್ಲಿ ಇಂತಹುದು ಇನ್ನೆಷ್ಟು ನಡೆಯಲಿದೆಯೋ ತಿಳಿಯದು. ಒಂದು ಮಾತು, ನಿಮ್ಮ ಶೋಧ ಕಾರ್ಯವನ್ನು ಮಾತ್ರ ಮುಂದುವರಿಸಕೂಡದು ಎಂದು ಮಹಾಮಂತ್ರಿ ವಿದುರರ ಆದೇಶವಿದೆ” ಅವನ ಮಾತಿಗೆ ನಾನು ಖತಿಗೊಂಡೆ.
ಅದನ್ನು ಗಮನಿಸಿ ಅವನೆಂದ, “ಈ ರಹಸ್ಯ ನಿಮ್ಮಲ್ಲೇ ಇರಲಿ. ನಾನು ತೋಡಿದ ಸುರಂಗದ ಮೂಲಕ ಪಾಂಡವರು ಪಾರಾಗಿ ಹೋಗಿದ್ದಾರೆ. ಅದನ್ನು ಮುಚ್ಚಿದವರೂ ಅವರೇ. ಅರಗಿನಮನೆಗೆ ಕಿಚ್ಚುಹಚ್ಚಿದವರೂ ಪಾಂಡುಪುತ್ರರೇ. ಅವರು ಬದುಕಿದ್ದಾರೆ. ಬಲಿಷ್ಠರ ಸಹಾಯ ದೊರೆತೊಡನೆ ಪ್ರಕಟವಾಗುತ್ತಾರೆ. ಇಷ್ಟನ್ನು ನಿಮ್ಮಲ್ಲಿ ಹೇಳುವಂತೆ ನನಗೆ ಆದೇಶವಿದೆ. ಇದನ್ನು ನೀವು ಎಲ್ಲಿಯೂ ಬಹಿರಂಗಗೊಳಿಸಕೂಡದAತೆ. ನಿಮ್ಮ ಕಾರ್ಯಶ್ರದ್ಧೆಗೆ ಮಹಾಮಂತ್ರಿಗಳ ಶ್ಲಾಘನೆಯಿದೆ. ನಾವೆಲ್ಲ ಅಧರ್ಮದ ಆಳ್ವಿಕೆ ಅಳಿದು ಧರ್ಮೋತ್ಥಾನದ ಶುಭಗಳಿಗೆಯನ್ನು ನಿರೀಕ್ಷಿಸೋಣ” ಎಂದನವ.
ನನ್ನಲ್ಲಿ ಮಾತುಗಳಿರಲಿಲ್ಲ.
* * *
(ಸಶೇಷ)