* ಸಂತ ಜ್ಞಾನೇಶ್ವರ ಮಹಾರಾಜರು
ವೃಕ್ಷಗಳಿಗೆ ಫಲಗಳುಂಟಾಗಲು, ಅವುಗಳ ವಯಸ್ಸಿಗಿಂತ ವಸಂತನ ಕೃಪೆಯೇ ಕಾರಣವಾಗಿದೆ. ಅದರಂತೆ ವಯಸ್ಸಿನಿಂದ ವಿರಾಗಿಯು ಚಿಕ್ಕವನಾದಾಗ್ಯೂ ವೈರಾಗ್ಯರೂಪವಾದ ವಸಂತನ ಭರದಿಂದ ಸೋಹಂಭಾವವೆಂಬ ಮಗ್ಗೆಯಿಂದ ತೀರ ಬಾಗಿರುವನು ಎಂದರೆ, ಈತನಲ್ಲಿ ತೀವ್ರ ಬಯಕೆಯಿದೆ. ಆದ್ದರಿಂದ ಫಲಪ್ರಾಪ್ತಿಯಾಗಲು ಈತನಿಗೆ ತಡವಾಗದು. ಈತನು ಪೂರ್ಣ ವಿರಕ್ತನಾಗಿರುವನೆಂದು ಭಗವಂತನು ಮನಗಂಡನು. ದೇವನು “ಈತನು ಮಾಡುವ ಪ್ರತಿಯೊಂದು ಅನುಷ್ಠಾನಕ್ಕೆ ತೀವ್ರವೇ (ಶೀಘ್ರವೇ) ಫಲವು ದೊರಕುವುದು. ಆದ್ದರಿಂದ ಇವನಿಗೆ ಹೇಳಿದ ಅಭ್ಯಾಸವು ವ್ಯರ್ಥವಾಗದು” ಎಂದು ಹೇಳಿದನು. ಅರ್ಜುನನಿಗೆ: “ಅರ್ಜುನ! ಶ್ರೇಷ್ಠ ಮಾರ್ಗವಾದ ರಾಜಯೋಗವನ್ನು ಹೇಳುವೆ ಕೇಳು. ಈ ಪ್ರವೃತ್ತಿಮಾರ್ಗ ರೂಪವಾದ ವೃಕ್ಷದ ಕೆಳಗೆ ನಿವೃತ್ತಿಮಾರ್ಗದಿಂದ ದೊರಕುವ ಅನಂತ ಫಲಗಳು ಇವೆ. ಶ್ರೀ ಶಂಕರನು ಕೂಡ ಇಂದಿಗೂ ಇದೇ ಮಾರ್ಗದ ಮಾರ್ಗಸ್ಥನಾಗಿರುವನು. ಬೇರೆ ಯೋಗಿಗಳಾದರೂ ಮೊದಲು ಹೃದಯಾಕಾಶದೊಳಗಿನ ಅಡ್ಡದಾರಿಯಿಂದ ಹೋಗಹತ್ತಿದರು. ಅನುಭವ ಹೊಂದುತ್ತ ಹೊಂದುತ್ತ ಕೊನೆಗೆ ಈ ರಾಜಮಾರ್ಗವು ಅವರಿಗೆ ದೊರಕಿತು. ಮತ್ತು ಉಳಿದುವೆಲ್ಲ ಅಸಮಗ್ರ ಮಾರ್ಗಗಳೆಂದು ಬಿಟ್ಟುಕೊಟ್ಟು, ಅವರು ಈ ಆತ್ಮಬೋಧೆಯ ಸುಗಮ ಮಾರ್ಗದಲ್ಲಿ ಒಮ್ಮೆಲೆ ಧಾವಿಸತೊಡಗಿದರು. ಹಿಂದಿನ ಮಹರ್ಷಿಗಳೂ ಇದೇ ಮಾರ್ಗದಿಂದ ಬಂದವರು. ಸಾಧಕಾವಸ್ಥೆಯಿಂದ ಸಿದ್ಧಾವಸ್ಥೆಗೆ ಮುಟ್ಟಿದರು ಮತ್ತು ಇದೇ ಮಾರ್ಗದಿಂದ ಆತ್ಮವೇತ್ತರು ಶ್ರೇಷ್ಠಪದವನ್ನು ಮುಟ್ಟಿದರು. ಈ ಮಾರ್ಗದ ಪರಿಚಯವುಂಟಾಗಲು ಮನುಷ್ಯನು ಹಸಿವೆ, ನೀರಡಿಕೆಗಳನ್ನೂ ಮರೆಯುವನು. ಅವನಿಗೆ ಹಗಲು-ರಾತ್ರಿಗಳ ಎಚ್ಚರವೂ ಕೂಡ ಇಲ್ಲದಾಗುವುದು. ಈ ಮಾರ್ಗವನ್ನು ಕ್ರಮಿಸುತ್ತಿರುವಾಗ, ಹೆಜ್ಜೆಯನಿಕ್ಕಿದಲ್ಲಿ ಮೋಕ್ಷಸುಖದ ಖನಿಯೇ ಹತ್ತುವುದು (ಮೂರ್ತಿಮತ್ತಾಗಿ ಮೋಕ್ಷಸುಖವು ದೊರಕುವುದು). ಒಂದು ವೇಳೆ ಈ ಮಾರ್ಗವು ತಪ್ಪಿದರೂ ದಾರಿಗನು ಸ್ವರ್ಗಸುಖಕ್ಕಂತೂ ಒಡೆಯನಾಗುವನು – ಪೂರ್ವದಿಂದ ಹೊರಟು ಪಶ್ಚಿಮಕ್ಕೆ ಮುಟ್ಟಿದಂತೆ. ಪ್ರವೃತ್ತಿಯಲ್ಲಿ ಆರಂಭಿಸಿ, ನಿವೃತ್ತಿಯಲ್ಲಿ ಪರ್ಯವಸಾನವನ್ನುಂಟು ಮಾಡುವಂತಹ ಮಾರ್ಗವಿದು. ಈ ಮಾರ್ಗವನ್ನು ಕ್ರಮಿಸುವುದೆಂದರೆ, ನಿಶ್ಚಲತೆಯನ್ನು ಪಡೆಯುವುದಾಗಿದೆ. ಈ ಮಾರ್ಗದಿಂದ ಹೋಗುವವನು, ಯಾವ ಸ್ಥಾನವನ್ನು ಮುಟ್ಟುವನೋ ಆ ಸ್ಥಾನವೇ ತಾನಾಗಿಬಿಡುವನು ಎಂಬುದನ್ನು ಹೇಳಬೇಕಾಗಿಲ್ಲ. ನೀನು ಸಹಜವಾಗಿಯೇ ಅನುಭವ ಹೊಂದುವಿ.”
[ಜ್ಞಾನೇಶ್ವರೀ ಗೀತೆ, ಅಧ್ಯಾಯ ೬.
ಅನುವಾದ: ಅಣ್ಣಪ್ಪ ಕೃಷ್ಣಾಜಿರಾವ ಕುಲಕರ್ಣಿ]