ಭಾರತವು ಸಾವಿರಾರು ವರ್ಷಗಳ ಕಾಲ ಪರಕೀಯ ಗುಲಾಮಿತನದಲ್ಲಿ ನರಳಿತ್ತು ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಗುಲಾಮಿತನದಿಂದ ಬಿಡುಗಡೆಗಾಗಿ ನಡೆಸಿದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಹೇಳುವಾಗ ಮಾತ್ರ ಸುಮಾರು ೧೫೦ ವರ್ಷಗಳ ಕಥೆಯನ್ನಷ್ಟೇ ಹೇಳುತ್ತಾರೆ. ಹಾಗಾದರೆ ಉಳಿದ ಶತಮಾನ-ಶತಮಾನಗಳ ಕಾಲ ಭಾರತೀಯರು ಪರಕೀಯ ಗುಲಾಮಿತನದಲ್ಲಿ ಸಂತೋಷ ಕಂಡಿದ್ದರೆ? ಗುಲಾಮಿತನವನ್ನು ಸಂಭ್ರಮಿಸಿದ್ದರೆ? ಇಂತಹದ್ದೊಂದು ಅನುಮಾನದ ಪ್ರಶ್ನೆ ಯಾರನ್ನಾದರೂ ಕಾಡಬಹುದು. ಏಕೆಂದರೆ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ನಿರೂಪಿಸಿದ ಯಾವುದೇ ಕೃತಿಗಳನ್ನಾದರೂ ನೀವು ಗಮನಿಸಿದರೂ ನಮ್ಮ ಸ್ವಾತಂತ್ರ್ಯ ಹೋರಾಟ ಆರಂಭವಾಗುವುದೇ ೧೮೫೭ ಅಥವಾ ಅದಕ್ಕಿಂತ ನಾಲ್ಕೈದು ದಶಕಗಳ ಪೂರ್ವದಲ್ಲಿ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ನಮ್ಮ ವಿದ್ಯಾರ್ಥಿಗಳು ಓದುತ್ತಿರುವ ಚರಿತ್ರೆಯ ಪಠ್ಯಪುಸ್ತಕಗಳನ್ನು ಗಮನಿಸಿದರೆ ಅಲ್ಲಿಯೂ ನಮ್ಮ ಸ್ವಾತಂತ್ರ್ಯ ಹೋರಾಟದ ಕಥನ ಆರಂಭವಾಗುವುದೇ ಬ್ರಿಟಿಷರ ವಿರುದ್ಧದ ಹೋರಾಟದಿಂದ.
ಇದರ ಪರಿಣಾಮ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಯಾರೆಂದು ಕೇಳಿದರೆ ಅದು ಆರಂಭವಾಗುವುದು ಮತ್ತು ಮುಕ್ತಾಯವಾಗುವುದು ಹತ್ತೊಂಬತ್ತನೇ ಶತಮಾನದ ಆರಂಭದಿಂದ ೧೯೪೭ರ ನಡುವಿನ ಹೆಸರುಗಳಿಂದಲೇ. ಇದರರ್ಥ ಅವರಾರೂ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ ಎನ್ನುವ ವಾದವಲ್ಲ. ಗಾಂಧಿಯಾದಿಯಾಗಿ ಆ ಕಾಲದಲ್ಲಿ ಸಾವಿರಾರು ಸಂಖ್ಯೆಯ ಹೋರಾಟಗಾರರು ಸ್ವಾತಂತ್ರ್ಯ ಹೋರಾಟದ ರಣಾಂಗಣಕ್ಕೆ ಇಳಿದಿದ್ದರು.
ಅವರಿಗಿಂತಲೂ ಪೂರ್ವದಲ್ಲಿ ಅದೆಷ್ಟೋ ಸಾವಿರ ಜನ ಸ್ವಾತಂತ್ರ್ಯದೇವಿಯ ಬಲಿಪೀಠಕ್ಕೆ ತಮ್ಮ ಕೊರಳು ಕೊಟ್ಟಿದ್ದರು, ರಕ್ತ ಹರಿಸಿದ್ದರು. ಆ ಬಲಿದಾನದಲ್ಲಿ ಗುಲಾಮಿತನವನ್ನು ಕೊನೆಗೊಳಿಸುವ ಕನಸಿತ್ತು. ಕೆಲವೊಮ್ಮೆ ಅವರು ಒಂದಿಡೀ ರಾಜ್ಯವನ್ನು ಉಳಿಸಲು ಹೋರಾಡಿರಬಹುದು, ಮತ್ತೆ ಕೆಲವರು ಯಾವುದೋ ಒಂದು ಪುಟ್ಟ ಪಟ್ಟಣ, ಊರು-ಕೇರಿಯನ್ನು ಉಳಿಸಲೂ ಹೋರಾಡಿರಬಹುದು. ಆದರೆ ಅವರ ಉದ್ದೇಶವಿದ್ದುದು ಯಾವುದೇ ಸ್ವರೂಪದ ಗುಲಾಮಿತನ, ಪರಕೀಯ ದಬ್ಬಾಳಿಕೆಯನ್ನು ಸಹಿಸಲಾಗದು ಎನ್ನುವುದೇ ಆಗಿತ್ತು.
ನಮ್ಮ ಅಧ್ಯಯನಕಾರರು, ಸಂಶೋಧಕರು ಸ್ವಾತಂತ್ರ್ಯ ಹೋರಾಟದ ಈ ದೀರ್ಘ ಪರಂಪರೆಯನ್ನು ಅರಿಯುವಲ್ಲಿ ವಿಫಲರಾದರು. ಬಹುಶಃ ಈ ಹೋರಾಟದ ಉದ್ದೇಶ ಮತ್ತು ಪರಂಪರೆಯನ್ನು ನಾವು ಅರಿತಿದ್ದಿದ್ದರೆ ದೇಶ ವಿಭಜನೆಯಂಥ ದುರಂತವನ್ನೂ ತಪ್ಪಿಸಬಹುದಿತ್ತೋ ಏನೋ? ಏಕೆಂದರೆ ಮೊಘಲ್ ಮಾನಸಿಕತೆಯ ಮೊಳಕೆಯೇ ಬೆಳೆದು ಪಾಕಿಸ್ತಾನವಾಗಿತ್ತು. ನಮ್ಮ ಹೋರಾಟ ಮೊಘಲ್ ಮಾನಸಿಕತೆಯ ನಿರ್ಮೂಲನಕ್ಕಾಗಿಯೂ ಎಂದು ಅರಿತುಕೊಂಡಿದ್ದಿದ್ದರೆ ಪ್ರತ್ಯೇಕ ಪಾಕಿಸ್ತಾನ ರಚನೆಯಾಗುವ ಪ್ರಕ್ರಿಯೆಯನ್ನು ಚಿಗುರಿನಲ್ಲೇ ಚಿವುಟಿಹಾಕಬಹುದಿತ್ತು. ಬ್ರಿಟಿಷರನ್ನಷ್ಟೇ ವಿದೇಶೀಯರು ಎಂದು ಬಿಂಬಿಸುತ್ತಾ, ಈ ದೇಶದ ಲಕ್ಷಾಂತರ ವೀರರನ್ನು ಬಲಿತೆಗೆದುಕೊಂಡ ಮೊಘಲ್ ಮಾನಸಿಕತೆಯ ಜತೆಗೆ ಹೊಂದಾಣಿಕೆ ಮಾಡಿಕೊಂಡೆವು. ಪರಿಣಾಮವಾಗಿ ದೇಶವಿಭಜನೆಯೊಂದಿಗೆ ಸಮಸ್ಯೆ ಬಗೆಹರಿಯಲಿಲ್ಲ. ಬ್ರಿಟಿಷರನ್ನು ಹೊರಗೆ ಕಳುಹಿಸಿದಂತೆ ಮೊಘಲರನ್ನು ದೇಶದಿಂದ ಹೊರಗಟ್ಟಿದ್ದೇವೆಯೆ? ಇಲ್ಲ. ಪರಿಣಾಮವಾಗಿಯೇ ಮತ್ತೆ ಬೇರೆ ಬೇರೆ ರೂಪದಲ್ಲಿ ಮರಿ-ಪಾಕಿಸ್ತಾನದ ಬೇಡಿಕೆಗಳು ಚಿಗುರುತ್ತಲೇ ಇದೆ. ಅಂತಹ ಬೇರು ಆಳಕ್ಕೆ ಇಳಿದಿದೆ. ಸ್ವಾತಂತ್ರ್ಯದ ೭೫ನೇ ವರ್ಷದ ಸಂಭ್ರಮವನ್ನು ಆಚರಿಸಲು ಸಿದ್ಧಗೊಳ್ಳುತ್ತಿರುವ ಭಾರತ ತನ್ನ ನಾಡಿನ ಸ್ವಾತಂತ್ರ್ಯ ಹೋರಾಟದ ಸಮಗ್ರ ಪರಂಪರೆಯನ್ನು ಅರಿತುಕೊಳ್ಳಲೇ ಬೇಕು. ಆಗ ಮಾತ್ರ ನಾವು ಯಾವ ಯಾವ ಮಾರ್ಗವನ್ನು ಕ್ರಮಿಸಿ ಬಂದಿದ್ದೇವೆ ಮತ್ತು ನಾವು ಸಂಪಾದಿಸಿದ ಸ್ವಾತಂತ್ರ್ಯದ ಬೆಲೆ ಏನು ಎನ್ನುವುದು ಗೊತ್ತಾದೀತು.
ಸ್ವಾತಂತ್ರ್ಯ ಹೋರಾಟದ ಸಮಗ್ರ ಚಿತ್ರಣ ನಮ್ಮ ಕಣ್ಮುಂದೆ ಬರಬೇಕಾದರೆ ನಮ್ಮ ಮೇಲೆ ನಡೆದ ಆಕ್ರಮಣಗಳ ಪರಂಪರೆಯನ್ನೂ ನೆನಪಿಸಿಕೊಳ್ಳಬೇಕು. ಗ್ರೀಕರು, ಕುಶಾನರು, ಹೂಣರು, ಅರಬ್ಬರು, ಮೊಘಲರು, ಪೋರ್ಚುಗೀಸರು, ಡಚ್ಚರು, ಫ್ರೆಂಚರು, ಆಂಗ್ಲರು… ಹೀಗೆ ಪರಕೀಯ ಆಕ್ರಮಣಕಾರರು ತಂಡೋಪತಂಡವಾಗಿ ಒಬ್ಬರ ನಂತರ ಒಬ್ಬರಾಗಿ, ಕೆಲವೊಮ್ಮೆ ಒಬ್ಬರ ಜೊತೆಗೆ ಇನ್ನೊಬ್ಬರು, ಮತ್ತೆ ಕೆಲವೊಮ್ಮೆ ಪರಸ್ಪರ ಸ್ಪರ್ಧೆಯೊಂದಿಗೆ ಭಾರತದ ಮೇಲೆ ದಂಡೆತ್ತಿ ಬಂದಿದ್ದಾರೆ. ಇವರೆಲ್ಲರ ವಿರುದ್ಧವೂ ಮಾತೃಭೂಮಿಯ ರಕ್ಷಣೆಯನ್ನು ಮಾಡುವ ಹೊಣೆಗಾರಿಕೆಯಿಂದ ರಾಜರುಗಳು, ವೀರರು, ಸಾಮಾನ್ಯ ನಾಗರಿಕರು ಕೂಡ ಹೋರಾಡಿದ್ದಾರೆ. ಇಂತಹ ಆಕ್ರಮಣಗಳ ವಿರುದ್ಧ ನಡೆದ ಎಲ್ಲ ಹೋರಾಟಗಳೂ ಸ್ವರಾಜ್ಯದ ಹೋರಾಟಗಳೇ. ಅಂತಹ ಒಬ್ಬೊಬ್ಬ ಹೋರಾಟಗಾರರೂ ಸ್ವಾತಂತ್ರ್ಯದ ಸೇನಾನಿಗಳೇ. ಪರಕೀಯ ಆಳ್ವಿಕೆಯನ್ನು ಎಂದಿಗೂ ಒಪ್ಪದೆ ಅದರ ವಿರುದ್ಧ ನಿರಂತರ ಸೆಣಸಿದ್ದಾರೆ. ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ತಮ್ಮ ಬಂಧುಗಳನ್ನು ಕಳೆದುಕೊಂಡಿದ್ದಾರೆ. ಒತ್ತೆಯಾಳುಗಳಾಗಿ ಉಳಿದ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಮಾನಕ್ಕಾಗಿ ಜೀವಂತವಾಗಿ ಅಗ್ನಿಪ್ರವೇಶ ಮಾಡಿದ್ದಾರೆ.
ನಮ್ಮ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಕುಬ್ಜಗೊಳ್ಳುವುದಕ್ಕೆ ಮುಖ್ಯ ಕಾರಣ ಎಂದರೆ ಭಾರತೀಯರಲ್ಲಿ ಮೂಡಿದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ಬ್ರಿಟಿಷರ ಕೊಡುಗೆ ಎಂದು ಭಾವಿಸಿದ್ದು. ನಮ್ಮ ಬಹುತೇಕ ಚರಿತ್ರಕಾರರು ಇದನ್ನೇ ಮತ್ತೆ ಮತ್ತೆ ನಿರೂಪಿಸಿದ್ದಾರೆ. ಹೀಗಾಗಿ ನಮ್ಮ ಸ್ವಾತಂತ್ರ್ಯಹೋರಾಟದ ಚರಿತ್ರೆಯ ಮೊದಲ ಅಧ್ಯಾಯ ಆರಂಭಗೊಳ್ಳುವುದೇ ರಾಷ್ಟ್ರೀಯತೆಯ ಉಗಮ ಎಂಬಲ್ಲಿದ. ನಂತರದ ಅಧ್ಯಾಯ ರಾಷ್ಟ್ರೀಯ ಕಾಂಗ್ರೆಸ್ನ ಸ್ಥಾಪನೆ, ಮೂರನೇ ಅಧ್ಯಾಯ ಭಾರತದ ಸ್ವಾತಂತ್ರ್ಯ ಹೋರಾಟ ಎಂಬಂತಾಗಿದೆ. ವಾಸ್ತವದಲ್ಲಿ ನಮ್ಮ ರಾಷ್ಟ್ರೀಯತೆಯ ಪ್ರಜ್ಞೆ ವಿದೇಶೀಯರ ಕೊಡುಗೆ ಅಲ್ಲ. ತಾಯ್ನೆಲ ಎನ್ನುವ ಭಾವನೆಗೆ ಭಾರತದಲ್ಲಿ ಸಾವಿರಾರು ವರ್ಷಗಳ ಪರಂಪರೆ ಇದೆ. ಅದನ್ನು ಉಳಿಸಿಕೊಳ್ಳುವುದು ತನ್ನ ಕರ್ತವ್ಯ ಎಂಬ ಪ್ರಜ್ಞೆಯೂ ಅದರದೇ ಮುಂದುವರಿದ ಭಾಗವಾಗಿತ್ತು. ಹೀಗಾಗಿ ೧೮ನೇ ಶತಮಾನದ ಕೊನೆಯಲ್ಲಿಯೋ, ೧೯ನೇ ಶತಮಾನದ ಆರಂಭದಲ್ಲೋ ರಾಷ್ಟ್ರೀಯತೆಯ ಉಗಮ ಆಯಿತು ಎನ್ನುವುದೇ ಮೊದಲ ಸುಳ್ಳು ನಿರೂಪಣೆ.
ಕೇವಲ ಬ್ರಿಟಿಷರ ವಿರುದ್ಧ ನಡೆದ ಹೋರಾಟಗಳನ್ನು ಮಾತ್ರ ಸ್ವಾತಂತ್ರ್ಯ ಹೋರಾಟವೆನ್ನುವುದಾದರೆ ನಾವು ಬಾಬರ್, ಘಜ್ನಿ ಮಹಮ್ಮದ್, ಔರಂಗಜೇಬ್, ಅಕ್ಬರ್ ಮೊದಲಾರ ವಿದೇಶೀ ಆಕ್ರಮಣಕಾರರ ವಿರುದ್ಧ ಮಾಡಿದ ಹೋರಾಟಗಳನ್ನು ಏನೆನ್ನುವುದು? ಶಿವಾಜಿ, ಮಹಾರಾಣಾ ಪ್ರತಾಪ್, ಪೃಥ್ವಿರಾಜ್ ಚೌಹಾಣ್, ರಾಣಿ ದುರ್ಗಾವತಿ, ರಾಣಿ ಪದ್ಮಾವತಿ ಮೊದಲಾದವರು ನಡೆಸಿದ ಹೋರಾಟಗಳೇನು? ಲಕ್ಷಾಂತರ ಸಂಖ್ಯೆಯ ರಜಪೂತ, ಸಿಖ್, ಮರಾಠಾ ಯುವಕರು ಮತಾಂಧರ ಕತ್ತಿಗೆ ಎದೆಗೊಟ್ಟು ಹೋರಾಡಿ ಬಲಿಯಾದುದು, ಅದೇ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಾರಿಯರು ಬೆಂಕಿಯನ್ನು ಪ್ರವೇಶಿಸಿ ತಮ್ಮನ್ನು ತಾವು ಆಹುತಿ ಮಾಡಿಕೊಂಡಿದ್ದು ಸ್ವಾತಂತ್ರ್ಯ ಹೋರಾಟವಲ್ಲದೆ ಇನ್ನೇನು? ಅವರಾರೂ ತಮ್ಮ ಸ್ವಂತ ಸುಖ, ಅರಮನೆಯ ವೈಭವಕ್ಕಾಗಿ ಹೋರಾಡಿದ್ದಲ್ಲ, ನಾಡಿನ ಗೌರವ, ತಮ್ಮವರ ಮಾನ ಕಾಪಾಡುವುದಕ್ಕಾಗಿಯೇ ನಡೆಸಿದ ಹೋರಾಟವದು, ಬಲಿದಾನವದು.
ಅಕ್ಬರ, ಔರಂಗಜೇಬರನ್ನು ಒಳ್ಳೆಯವರು ಎನ್ನುವುದಕ್ಕೂ ಬ್ರಿಟಿಷರನ್ನು ಒಳ್ಳೆಯವರು ಎನ್ನುವುದಕ್ಕೂ ತಾತ್ತ್ವಿಕವಾಗಿ ಏನೂ ವ್ಯತ್ಯಾಸವಿಲ್ಲ. ಬ್ರಿಟಿಷರ ವಿರುದ್ಧವಿದ್ದ ಭಾರತ ಅಕ್ಬರನ, ಹುಮಾಯೂನನ ಪರವಾಗಿರಲು ಹೇಗೆ ಸಾಧ್ಯ? ಮೊಘಲರ ಕಾಲದಲ್ಲಿ ಭಾರತೀಯರು ಜಿಝಿಯಾ ಎನ್ನುವ ಅವಮಾನದ ತಲೆಗಂದಾಯವನ್ನು ಧಿಕ್ಕರಿಸಿದ್ದು ಮತ್ತು ಬ್ರಿಟಿಷರ ಕಾಲದಲ್ಲಿ ಉಪ್ಪಿನ ಮೇಲಿನ ತೆರಿಗೆಯನ್ನು ನಿರಾಕರಿಸಿದ್ದು ಸಮಾನ ಆಶಯದ್ದೇ ಆಗಿದೆ. ಹೀಗಿರುವುದರಿಂದ ಸ್ವಾತಂತ್ರ್ಯ ಹೋರಾಟ ಎಂದರೆ ಅದು ವಿಸ್ತೃತವಾದ ಒಂದು ಹೋರಾಟ. ಹಾಗಾಗಿ ಭಾರತದ ಸ್ವಾತಂತ್ರ್ಯ ಹೋರಾಟ ೧೮೫೭-೧೯೪೭ರ ನಡುವೆ ನಡೆದ ಹೋರಾಟದ ಕಥೆಯಷ್ಟೇ ಅಲ್ಲ. ವಿದೇಶೀ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಎಂದೂ ತಲೆಬಾಗದ ಕ್ಷಾತ್ರಪರಂಪರೆಯೊಂದು ಈ ನೆಲದಲ್ಲಿ ಜೀವಂತವಾಗಿತ್ತು. ತಮ್ಮ ತಾಯ್ನೆಲದ ಮುಕ್ತಿಗಾಗಿ ನಿರಂತರ ಹೋರಾಟ ನಡೆಸಿಕೊಂಡು ಬರಲಾಗಿತ್ತು. ಶಿವಾಜಿ, ರಾಣಾಪ್ರತಾಪ್ ಮೊದಲಾದವರ ಶೌರ್ಯ, ಅಪ್ರತಿಮ ದೇಶಭಕ್ತಿ ಹತ್ತೊಂಬತ್ತನೇ ಶತಮಾನದ ಸಾವಿರಾರು ಸ್ವಾತಂತ್ರö್ಯ ಯೋಧರಿಗೆ ಸ್ಫೂರ್ತಿಯಾಗಿತ್ತು. ಅವರಿಂದಲೇ ಸಾವಿರಾರು ಜನ ಪ್ರೇರಣೆ ಪಡೆದು ರಣರಂಗಕ್ಕೆ ದುಮ್ಮಿಕ್ಕಿದ್ದರು. ಅವರ ಹೋರಾಟ ಸಾಮ್ರಾಜ್ಯಶಾಹಿಗಳ ವಿರುದ್ಧದ ಹೋರಾಟವಾಗಿತ್ತು, ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವಾಗಿತ್ತು, ದೇಶಭಕ್ತಿಯ ಪ್ರಕಟೀಕರಣದ ಹೋರಾಟವಾಗಿತ್ತು, ಸ್ವಗೌರವಕ್ಕಾಗಿ ನಡೆಸಿದ ಹೋರಾಟವಾಗಿತ್ತು. ಇಂತಹ ಹೋರಾಟವನ್ನು ಸ್ವಾತಂತ್ರ್ಯ ಸಂಗ್ರಾಮದ ಕಥನದ ಭಾಗವಾಗಿ ನಾವು ನೋಡದೆಹೋದರೆ ಅದು ಅಂತಹ ಶ್ರೇಷ್ಠ ವೀರರಿಗೆ ನಾವು ಮಾಡುವ ಅವಮಾನವೇ ಸರಿ.
ಮೊತ್ತಮೊದಲ ವಿದೇಶಿಗನೊಬ್ಬ ಈ ದೇಶದ ಯಾವುದೋ ಮೂಲೆಯಿಂದ ಆಕ್ರಮಣಕಾರನಾಗಿ ಒಳಗೆ ಕಾಲಿಟ್ಟಾಗ ಆತನ ವಿರುದ್ಧ ಅಲ್ಲಿಯ ಜನರು ತಿರುಗಿಬಿದ್ದು ಹೋರಾಡಿದ ದಿನವೇ ಈ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಆರಂಭವಾಗಿತ್ತು. ಏಕೆಂದರೆ ಪಾರತಂತ್ರ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇರುವ ನೆಲದಲ್ಲಿ ಸ್ವಾತಂತ್ರ್ಯದ ಹಂಬಲ, ಹೋರಾಟಕ್ಕೂ ಅಷ್ಟೇ ಇತಿಹಾಸವಿದೆ ಎನ್ನುವುದನ್ನು ಮರೆಯಲಾಗದು. ಈ ಹೋರಾಟಗಳನ್ನು ಆಕ್ರಮಣಕಾರರು ಹತ್ತಿಕ್ಕಿರಬಹುದು, ಹೋರಾಟಕ್ಕೆ ಹಿನ್ನಡೆಯಾಗಿರಬಹುದು, ಕೆಲವೊಮ್ಮೆ ಸೋತು ಹೋಗಿಯೂ ಇರಬಹುದು. ಆದರೆ ಹೋರಾಟ ನಿಂತಿರಲಿಲ್ಲ. ೧೮೫೭ರ ಹೋರಾಟ ಅಂತಹ ಹೋರಾಟಗಳಲ್ಲಿ ಕಂಡ ಒಂದು ಉತ್ತುಂಗ ಸ್ವರೂಪದ ಹೋರಾಟ; ೧೯೪೭ರಲ್ಲಿ ಅಂತಿಮ ಬಿಡುಗಡೆ. ಈ ನಡುವೆ ಸಣ್ಣಪುಟ್ಟ ಅಲೆಗಳು ಭೋರ್ಗರೆದು ಅಬ್ಬರಿಸಿವೆ. ವಿದೇಶೀ ಆಕ್ರಮಣಕಾರರ ನಿದ್ದೆಗೆಡಿಸಿವೆ, ನೆಮ್ಮದಿಗೆ ಭಂಗ ತಂದಿವೆ. ನಮ್ಮ ಸ್ವಾತಂತ್ರ ಹೋರಾಟವೆಂದರೆ ಅದು ಕೇವಲ ಒಂದು ಬಂಡಾಯವಲ್ಲ. ಹೋರಾಟಗಾರರು ಕೇವಲ ತಾತ್ಕಾಲಿಕ ಆವೇಶದ ಬಂಡುಕೋರರಲ್ಲ.
ಇನ್ನೊಂದು ಮುಖ್ಯ ಸಂಗತಿ ಎಂದರೆ ಆಧುನಿಕ ಚರಿತ್ರಕಾರರು ನಮ್ಮ ಸ್ವಾತಂತ್ರ್ಯ ಚಳವಳಿಯನ್ನು ವಿದೇಶದ ಪ್ರೇರಣೆಯಿಂದ ಹುಟ್ಟಿದುದೆಂದು ಭಾವಿಸಿದ್ದು. ೧೯ನೇ ಶತಮಾನದ ಹೋರಾಟದ ಸಂದರ್ಭದಲ್ಲಿ ಅನೇಕ ವಿದೇಶೀ ಸೈದ್ಧಾಂತಿಕ ಪ್ರಭಾವಗಳು ಆಗಿರಬಹುದಾದರೂ ಇಡೀ ಸ್ವಾತಂತ್ರ್ಯ ಹೋರಾಟವೇ ವಿದೇಶೀ ಪ್ರಭಾವದಿಂದ ಹುಟ್ಟಿಕೊಂಡಿದ್ದಲ್ಲ. ಅಮೆರಿಕಾದ ಕ್ರಾಂತಿ, ಫ್ರೆಂಚ್ ಕ್ರಾಂತಿ, ಇಟಲಿ ಕ್ರಾಂತಿಗಳಿಂದ ಭಾರತದ ಸ್ವಾತಂತ್ರ್ಯ ಚಳವಳಿ ಪ್ರೇರಣೆ ಪಡೆದು ಹುಟ್ಟಿದ್ದಲ್ಲ. ಪರಕೀಯ ದಬ್ಬಾಳಿಕೆ, ಶೋಷಣೆಯ ವಿರುದ್ಧ ಎದ್ದ ದನಿಯೇ ಸ್ವರಾಜ್ಯದ ದನಿ, ಸ್ವಾತಂತ್ರ್ಯದ ದನಿ.
ಅಲೆಗ್ಸಾಂಡರ್ ವಿರುದ್ಧ ಹೋರಾಡಿದ ಪುರೂರವನಿಂದ ಹಿಡಿದು, ಬ್ರಿಟಿಷ್ ವಿರುದ್ಧ ಹೋರಾಡಿದ ಸ್ವಾತಂತ್ರ್ಯವೀರ ಸಾವರ್ಕರ್ ವರೆಗೆ ಪ್ರತಿಯೊಬ್ಬರ ಹೋರಾಟದ ಗುರಿಯೂ ತಮ್ಮ ವರ್ತಮಾನದಲ್ಲಿ ಇರುವ ಪರಕೀಯರ ರಾಜ್ಯಭಾರ, ಆಳ್ವಿಕೆಯನ್ನು ಹಿಮ್ಮೆಟ್ಟಿಸುವುದೇ ಆಗಿತ್ತು. ಇದನ್ನೇ ಅವರು ಆದ್ಯತೆಯನ್ನಾಗಿ ಮಾಡಿಕೊಂಡಿದ್ದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ಅಲ್ಲಲ್ಲಿ ಬಿಡಿಬಿಡಿಯಾಗಿ ಪರಕೀಯ ಆಕ್ರಮಣಕಾರರ ವಿರುದ್ಧ ನಡೆದ ಹೋರಾಟಗಳ ಮಹತ್ತ್ವ ಗೌಣವಾಗುವುದಿಲ್ಲ. ಬಹುಶಃ ಇಂತಹ ಹೋರಾಟಗಳು ನಡೆಯದಿದ್ದಿದ್ದರೆ ಇಡೀ ದೇಶಕ್ಕೆ ದೇಶವೇ ಕೆಲವೇ ದಿನಗಳಲ್ಲಿ ವಿದೇಶೀಯರ ಕೈವಶವಾಗಬಹುದಿತ್ತು. ನೂರಾರು ವರ್ಷಗಳ ಕಾಲ ಈ ಹೋರಾಟವನ್ನು ಜೀವಂತವಾಗಿ ಇರಿಸಿದ್ದು ನಮ್ಮ ಹಿರಿಯರ ಸ್ವರಾಜ್ಯದ ಕನಸೇ ಆಗಿತ್ತು. ಹಾಗಾದರೆ ಈ ಎಲ್ಲ ಹೋರಾಟಗಳು ರಾಷ್ಟ್ರೀಯ ಹೋರಾಟಗಳೇ? – ಎಂದು ಕೆಲವರು ಕೇಳಬಹುದು. ಹೌದು, ಅವೆಲ್ಲವೂ ರಾಷ್ಟ್ರೀಯ ಹೋರಾಟಗಳೇ. ನೆಲದ ಜತೆಗಿನ ಮಾತೃತ್ವದ ಭಾವನೆಯಿಂದ, ಸಂಸ್ಕೃತಿಯ ಜತೆಗಿನ ಸಂಬಂಧದಿಂದ ಈ ಭಾವನೆಗೆ ಧಕ್ಕೆಯಾದಾಗ ಹೋರಾಟಗಳು ಹುಟ್ಟಿಕೊಂಡಿವೆ. ಅಂತಹ ಹೋರಾಟಗಳನ್ನು ವೈಯಕ್ತಿಕ ಹೋರಾಟಗಳೆಂದೋ, ತಮ್ಮತಮ್ಮ ಸಂಸ್ಥಾನಗಳನ್ನು ಉಳಿಸಿಕೊಳ್ಳಲು ಮಾಡಿದ ಹೋರಾಟಗಳೆಂದೋ ಹೇಳಿ ಆ ಹೋರಾಟಗಳ ಮಹತ್ತ್ವವನ್ನು ಕುಗ್ಗಿಸಲಾಗದು. ತಮ್ಮ ಸಂಸ್ಥಾನಗಳನ್ನು, ತಮ್ಮ ಹಳ್ಳಿಗಳನ್ನು ಉಳಿಸಿಕೊಳ್ಳಲು ನಡೆಸಿದ ಹೋರಾಟವೂ ಸ್ವರಾಜ್ಯದ ಅಭಿಮಾನವೇ ಅಲ್ಲವೆ? ಅದನ್ನು ಕಳೆದುಕೊಂಡಲ್ಲಿ ರಾಷ್ಟ್ರ ಉಳಿಯುವುದಾದರೂ ಹೇಗೆ?
ಬ್ರಿಟಿಷರು ಬರುವುದಕ್ಕೂ ಪೂರ್ವದಲ್ಲಿ ಈ ನೆಲದಲ್ಲಿ ನಡೆದ ಹೋರಾಟಗಳನ್ನು ಸ್ವಾತಂತ್ರ್ಯ ಹೋರಾಟವೆಂದು ಏಕೆ ಇನ್ನೂ ಪರಿಗಣಿಸಿಲ್ಲ? ಒಂದು ವೇಳೆ ಬ್ರಿಟಿಷರು ಬಾರದಿದ್ದಿದ್ದರೆ, ನಾವು ನಡೆಸಿದ ಹೋರಾಟಗಳು ಸ್ವಾತಂತ್ರ್ಯ ಹೋರಾಟ ಎಂದಾಗುತ್ತಿರಲಿಲ್ಲವೆ? ಒಂದು ವೇಳೆ ಬ್ರಿಟಿಷರಲ್ಲದೆ ಇದ್ದಿದ್ದರೆ ನಮ್ಮ ಹೋರಾಟ ಪರಕೀಯ ನಿಜಾಮರು, ಮೊಘಲರುಗಳ ವಿರುದ್ಧವೇ ಆಗಿರುತ್ತಿತ್ತಲ್ಲವೆ? ನಿಜಾಮನಿಂದ ಹೈದರಾಬಾದನ್ನು ಬಿಡಿಸಿಕೊಳ್ಳಲು, ಪೋರ್ಚುಗೀಸರಿಂದ ಗೋವಾವನ್ನು ಮುಕ್ತಗೊಳಿಸಲು ನಡೆಸಿದ ಹೋರಾಟವೂ ಇದೇ ಸ್ವಾತಂತ್ರ್ಯ ಹೋರಾಟದ ಭಾಗವೇ ಆಗಿದೆ. ಸಾಮಾನ್ಯ ರಾಜ್ಯವೊಂದರ ರಾಣಿ ಉಳ್ಳಾಲದ ಅಬ್ಬಕ್ಕ ಕೈಯಲ್ಲಿ ಕತ್ತಿ ಹಿಡಿಯದಿದ್ದಿದ್ದರೆ ಅಂದು ಪೋರ್ಚುಗೀಸರು ಇನ್ನೆಷ್ಟು ಭೂಭಾಗವನ್ನು ಆಕ್ರಮಿಸಿರುತ್ತಿದ್ದರು! ಶಿವಾಜಿ ಹಿಂದವೀ ಸಾಮ್ರಾಜ್ಯದ ಪತಾಕೆಯನ್ನು ಏರಿಸಲು ಮೊಘಲರ ವಿರುದ್ಧ ಹೋರಾಡದಿದ್ದಿದ್ದರೆ ಮೊಘಲರ ಆಳ್ವಿಕೆಯ ಭಾರ ಇನ್ನಷ್ಟು ಕ್ರೂರವಾಗಿ ನಮ್ಮನ್ನು ಬಾಧಿಸುತ್ತಿತ್ತು. ಚಿತ್ತೋಡ, ಮೇವಾಡದ ರಾಜಕುಮಾರರು ಮರಳಿ ರಾಜ್ಯವನ್ನು ಪಡೆಯುವವರೆಗೆ ಕಾಡಿನ ಬರಿದಾದ ಕಲ್ಲು ಮಣ್ಣಿನ ಮೇಲೆ ಮಲಗುವ ಸಂಕಲ್ಪವನ್ನು, ಬೆಳ್ಳಿಯ ತಟ್ಟೆಯ ಭೋಜನವನ್ನು ತ್ಯಜಿಸಿ ತಮ್ಮ ಸಾಮ್ರಾಜ್ಯವನ್ನು ಮರಳಿ ಪಡೆಯುವ ಹೋರಾಟ ನಡೆಸಿರದಿದ್ದರೆ ಭಾರತದ ಸಾಂಸ್ಕೃತಿಕ ಹಾಗೂ ಭೌತಿಕ ನಾಶಕ್ಕೆ ಬಾಗಿಲು ತೆರೆದಿಟ್ಟಂತಾಗುತ್ತಿತ್ತು. ಹೀಗಿರುವಾಗ ಏಕೆ ನಾವು ನಮ್ಮ ಸ್ವಾತಂತ್ರ್ಯ ಹೋರಾಟದ ಕುರಿತಾಗಿ ನಡೆಸುವ ಚರ್ಚೆಗಳಲ್ಲಿ ಈ ಭಾಗದ ಹೋರಾಟಗಳು ಸೇರಿಕೊಳ್ಳುತ್ತಿಲ್ಲ? ನಿಜವೆಂದರೆ ನಮ್ಮ ಸ್ವಾತಂತ್ರ್ಯ ಹೋರಾಟದ ಚರಿತ್ರೆಯ ಆಳ-ಅಗಲ, ವಿಸ್ತಾರಗಳು ನಾವಂದುಕೊಂಡಿರುವುದಕ್ಕಿಂತ ತುಂಬಾ ವಿಶಾಲವಾದುದು. ನಿಜಾರ್ಥದಲ್ಲಿ ನಮ್ಮ ಜನರಿಗೆ ಬ್ರಿಟಿಷರೇ ಆಗಲಿ, ಮೊಘಲರೇ ಆಗಲಿ, ಪರಕೀಯರು ಪರಕೀಯರೇ ಆಗಿದ್ದರು. ಅವರ ನಡುವೆ ಯಾವ ವ್ಯತ್ಯಾಸಗಳೂ ಇಲ್ಲ. ಹೀಗಾಗಿ ನಮ್ಮ ಸ್ವಾತಂತ್ರ್ಯ ಹೋರಾಟವನ್ನು ರಾಷ್ಟ್ರೀಯ ಕಾಂಗ್ರೆಸ್ನ ಸ್ಥಾಪನೆಯೊಂದಿಗೆ, ಗಾಂಧಿಯವರ ಹೋರಾಟದ ಆರಂಭದೊಂದಿಗೆ, ಮಂದಗಾಮಿ-ತೀವ್ರಗಾಮಿಗಳಿಂದಲೇ ಆರಂಭವಾಯಿತೆಂದು ಇಡೀ ಹೋರಾಟವನ್ನು ಪ್ರತ್ಯೇಕಿಸಲಾಗದು. ಈ ಕಾರಣದಿಂದಲಾದರೂ ನಾವು ನಮ್ಮ ಚರಿತ್ರೆಯ ಮರುನಿರೂಪಣೆಯನ್ನು ಮಾಡಬೇಕಾಗಿದೆ. ಇಲ್ಲವಾದರೆ ನಾಡಿಗಾಗಿ ಬಲಿದಾನ ಮಾಡಿದ ಲಕ್ಷಾಂತರ ಜನ ಹುತಾತ್ಮರ ಬೆಲೆಯನ್ನು ನಮ್ಮ ಮುಂದಿನ ಜನಾಂಗ ತಿಳಿಯುವುದಾದರೂ ಹೇಗೆ? ಈ ಕಾರಣದಿಂದ ನಮ್ಮ ಸಾತಂತ್ರ್ಯ ಚಳವಳಿಯ ದೀರ್ಘಕಾಲದ ಹೋರಾಟದ ಕಥನ ನಮ್ಮ ಶಾಲಾ ಕಾಲೇಜುಗಳ ಪಠ್ಯದ ಭಾಗವಾಗಬೇಕು. ನಮ್ಮ ಅಭಿಮಾನದ ಭಾಗವಾಗಬೇಕು.