ಕರ್ನಾಟಕ ವೀರರೇಳಿ | ರಣಭೇರಿ ಕೊಂಬ ಕೇಳಿ |
ಸ್ವಾತಂತ್ರ್ಯ ಮಂತ್ರವನು ಹೇಳಿ | ಪರದಾಸ್ಯ ದೇಹ ಸೀಳಿ ||ಪಲ್ಲವಿ||
ಪರತಂತ್ರ ಕತ್ತಲೆಯು ಹಾರಿ | ಸ್ವಾತಂತ್ರ್ಯ ಸೂರ್ಯ ತೋರಿ ||
ಭಾರತೀಯ ಜೀವ ಕಳೆಯೇರಿ | ಪರವೈರಿಗಾಯ್ತು ಮಹಾಮಾರಿ ||೧||
ಧುರಧೀರ ಬುಕ್ಕ ಮಾಧವರು | ಪುಲಕೇಶಿ ವೀರ ವಿಕ್ರಮರು ||
ಸ್ವಾತಂತ್ರ್ಯ ಮಂತ್ರ ಸಾರಿದರು | ಪರರಾಜರನ್ನು ಮೆಟ್ಟಿದರು||೨||
ಲಾಲಾಜಿ ಲಾಠಿ ಹೊಡೆತದಲ್ಲಿ | ಕಲಿ ಜತಿನದಾಸ ಬಹುಬಳಲಿ ||
ನಿಮಗಾಗಿ ಕೊಟ್ಟಿರಾತ್ಮಬಲಿ | ಕುಳಿತಿಹರು ನಗುತ ಸ್ವರ್ಗದಲಿ ||೩||
ಭಾರತದ ರಕ್ತವನು ಹೀರಿ | ವೀರತೆಯ ಕುಕ್ಕಿ ನೆಲಕೂರಿ |
ಭಾರತೀಯ ಮಾನವನು ಮಾರಿ | ಮಾಡಿದರು ನಾಡ ಸೆರೆ ಸೂರಿ ||೪||
ಸ್ವಾತಂತ್ರ್ಯ ಸ್ವಾಭಿಮಾನ | ಹೊಮ್ಮಿಕ್ಕಿ ಕಾದಿರಣ್ಣ ||
ಧುಮ್ಮಕ್ಕಿರಣದೊಳಿನ್ನಾ | ಹಗೆಯನ್ನು ಮೆಟ್ಟಿರಣ್ಣಾ ||೫||
ಕರ್ನಾಟಕ ವೀರರೇಳಿ | ರಣಭೇರಿ ಕೊಂಬ ಕೇಳಿ |
ಸ್ವಾತಂತ್ರ್ಯ ಮಂತ್ರವನು ಹೇಳಿ | ಪರದಾಸ್ಯ ದೇಹ ಸೀಳಿ ||ಪಲ್ಲವಿ||
–ಜಿ. ರಾಮರಾವ ಹೇಜೀಬ
(‘ಬೆಳಗಾವಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಮರ’ ಸಂಗ್ರಹದಿಂದ)