ಹೇಗೆ ಮರೆಯಲಿ ಮಧುರ ನವಮಾಸ
ಗರ್ಭಗುಡಿಯಲಿ ಆ ಬೆಚ್ಚಗಿನ ವಾಸ |
ನನಗೆಲ್ಲಿಹ ಅರಿವು ಆಗ ಹೊರಲೋಕದ ಬಗೆ
ತಿಳಿದಿದ್ದೆ, ಆಕೆ ಬಯಸಿದ್ದು ಜೀವನದಿ ನನ್ನ ಏಳ್ಗೆ ||
ನನಗಾದರೋ ಹೊರ ಲೋಕವೇನೆಂಬ ಹೆದರಿಕೆ
ಆಕೆಗೋ ನನ್ನ ಎತ್ತಿ ಮುದ್ದಾಡುವ ಬಯಕೆ|
ಹೊರಗೆ ಬಂದಾಗ ಇತ್ತು ನನಗೆ ಆತಂಕ
ಅಮ್ಮನಿಗೆ ಇದ್ದುದೊಂದೇ; ನನ್ನ ಮುತ್ತಿಕ್ಕೋ ತವಕ ||
ವರುಷಗಳೇ ಉರುಳಿವೆ, ನಾ ಹೊರಲೋಕಕೆ ಬಂದು
ಸಾಕಾಗಿ ಹೋಗಿದೆ ಸ್ಪರ್ಧಾತ್ಮಕ ಜಗವಿಂದು |
ಸಿಗುತಿದೆ ಈ ದಾರಿಯಲಿ ಸೋಲಿನ ಸುಳಿವು
ಅನುಭವಕೆ ಬರುವುದು ಅನವರತ ತಿರುವು ||
ಬೇಕು-ಬೇಡಗಳನು ನಿರ್ಧರಿಸಲು ನಾನರಿಯೆ
ಬದುಕು ಎಂಬುದೇನು? ಕಷ್ಟಗಳ ಬಲೆಯೇ? |
ಮನವು ಹೇಳೋ ದಾರಿಯು ಈ ಬಗೆ
ಮತ್ತೆ ನಾ ಸೇರಲೇ ಅಮ್ಮಾ; ನಿನ್ನ ಗರ್ಭಗುಡಿಗೆ? ||
-ಸುಲಕ್ಷಣಾ ಕೆ.