ಇಷ್ಟು ದಿನ ಹೌದಾಗಿದ್ದು, ಇಂದು ಅಲ್ಲವಾಗಿದೆ
ಇಲ್ಲವೆನ್ನುವುದು ಎದ್ದು ಕಾಣುತ್ತಿತ್ತು.
ಯಾವುದೊ ಭಯ, ಚಿಂತೆಗಳ ಸುಳಿ
ಇಲ್ಲದ್ದು ಇದೆಯೆಂಬ ಭಾವನೆಗಳ ಬಿರುಗಾಳಿ.
ಎಲ್ಲಾ ಬರೆ ಭ್ರಮೆ
ನೀನೆಣಿಸಿದಂತೆ ಏನು ಇಲ್ಲ
ಹಿರಿಯರ ವಚನ ಸುಳ್ಳಲ್ಲ.
ಈ ತನು ರೋಗ ನಿರೋಗಗಳ ಸಮ್ಮಿಲನ
ಬದುಕು ನೆರಳು ಬೆಳಕಿನ ಸಂಕಲನ.
ಬೆಳ್ಳನೆ ಬೆಳಕನ್ನು ಬಿಡಿ ಬಿಡಿಸಿ ನೋಡಿದರೆ
ಏನೇನು ಕಾಣುತ್ತಾ ಹೋಗಿ
ಕೊನೆಗೆ ಕರ್ರನೆ ಬಣ್ಣ ರಾಚುವುದು
ಕರಿಯದನ್ನು ತಡಕಾಡಿ ಸಾಗಿದರೆ
ಬೆಳಕು ಮೂಡಿ ದಾರಿ ಸುಗಮವಾಗುವುದು.
ಬೆಳ್ಳಗಿದ್ದವರು ಕರಿಯಾಗಿ ಕಂಡರು
ಕರಿಯಾಗಿ ಕಂಡವರು ಬೆಳ್ಳಗಾದರು
ಕಾಲಚಕ್ರದಲ್ಲಿ ಎಲ್ಲಾ ಅಯೋಮಯ,
ನಿಜವಾದ ಸುಳ್ಳು ಈ ಬಾಳು.
-ಲಕ್ಷ್ಮೀದೇವಿ ಪತ್ತಾರ, ಗಂಗಾವತಿ