ಧರೋಜಿ: ಗಮನಿಸಿ; ಇಲ್ಲಿ ಮನುಷ್ಯರಿಗೆ ಪ್ರವೇಶವಿಲ್ಲ..
ಹೀಗೊಂದು ಢಾಳಾದ ಫಲಕ! ಅರೇ, ಇದೇನಿದು? ಓದಬಲ್ಲವರು, ಅರೆಕ್ಷಣ ಅವಾಕ್ಕಾಗುವಂತೆ!
ಸಾಮಾನ್ಯವಾಗಿ ನಿರ್ಬಂಧಿತ ವಲಯ, ನಿಶ್ಶಬ್ದ ವಲಯ, ಸುರಕ್ಷಿತ ವಲಯ, ಸಂರಕ್ಷಿತ ಪ್ರದೇಶ; ಅಪ್ಪಣೆ ಇಲ್ಲದೇ ಒಳಗೆ ಪ್ರವೇಶವಿಲ್ಲ ಇತ್ಯಾದಿ ನೀವು ಓದಿರುತ್ತೀರಿ. ಆದರೆ, ಧರೋಜಿ ಕರಡಿ ಧಾಮದಲ್ಲಿ ಅರಣ್ಯ ಇಲಾಖೆಯ ಮನುಷ್ಯರಿಗೆ ಪ್ರವೇಶವಿಲ್ಲ ಫಲಕ ಅಪರೂಪದ್ದು!
ಈ ಭೂಮಿಯ ಮೇಲೆ ಎಲ್ಲವೂ ಮನುಷ್ಯರಿಗೇ ಮೀಸಲಿದೆ ಎಂದುಕೊಂಡ ಬಹುತೇಕರಿಗೆ ಈ ಫಲಕದ ನಿರ್ದೇಶನ ಅರಗಿಸಿಕೊಳ್ಳುವುದು ಬಲು ಕಷ್ಟ. ಹಾಗಾದರೆ, ಯಾರಿಗೆ ಇಲ್ಲಿ ಪ್ರವೇಶವಿದೆ – ಎಂಬ ಜಿಜ್ಞಾಸೆ.
ಕಲಿತವರು ಆಗಾಗ ಹಾದಿ ತಪ್ಪುತ್ತಿರುತ್ತಾರೆ! ಅದೂ ತುಂಬ ಸಹಜ ಎಂಬಂತೆ!
ಉದ್ದಾಮ ಸಾಹಿತಿಗಳಿಬ್ಬರು ರೈತನೋರ್ವನ ಹೊಲಕ್ಕೆ ಭೇಟಿ ಕೊಟ್ಟು ಹಿಂತಿರುಗುವಾಗ ರೈತ ತನ್ನ ಮಗನನ್ನು ಕರೆದು ಹೇಳಿದ: ಮಗ, ಇವರು ಕಲಿತವರು; ಕಲಿತವರು ಹಾದಿ ತಪ್ಪುತ್ತಾರೆ! ನೀನು ಅವರ ಜೊತೆಗೆ ಹೋಗಿ, ಅವರು ತಲಪಬೇಕಾದಲ್ಲಿಗೆ ಬಿಟ್ಟು ಬಾ!
PDF ಓದಿಗಾಗಿ : https://utthana.in/?p=9232
ಉದಾಹರಣೆಗೆ, ಹುಬ್ಬಳ್ಳಿ-ಅಂಕೋಲಾ ರೈಲುಮಾರ್ಗ ಪಶ್ಚಿಮಘಟ್ಟದ ಅಮೂಲ್ಯ ವನ್ಯಸಂಪತ್ತನ್ನು ವಿಭಾಗಿಸಲಿದೆ. ಕಪ್ಪತಗುಡ್ಡಕ್ಕೆ ಪ್ರತಿ ವರ್ಷ ಬೆಂಕಿ ಹಚ್ಚಿ, ಅಮೂಲ್ಯ ಔಷಧೀಯ ಸಸ್ಯಗಳನ್ನು ಸುಡುವಲ್ಲಿ ಯಾರ ಕೈವಾಡವಿದೆ? ಕಳಸ-ಬಂಡೂರಿ ಮತ್ತು ಮಹದಾಯಿ ನೀರು ಹಂಚಿಕೆ, ಅಘನಾಶಿನಿ ಹರಿವು ಕುಸಿತವಾದರೆ ಅಪರೂಪದ ನೀರುನಾಯಿಗಳು ಇನ್ನಿಲ್ಲವಾಗುವ, ಸಿಂಗಳೀಕ ಕಪಿ ನಶಿಸಿಯೇಬಿಡುವ ಪ್ರಮಾದಕ್ಕೆ ಯಾರು ಹೊಣೆ? ಪಶ್ಚಿಮಘಟ್ಟ ಸೀಳಿಕೊಂಡು, ಧಾರವಾಡದ ಗರಗದಿಂದ ಕುಮಟಾದ ಬಿಣಗಾವರೆಗೆ ೧೮೧ ಕಿ.ಮೀ. ಹೈಟೆನ್ಶನ್ ವಿದ್ಯುತ್ ಪ್ರಸರಣ ಹೊರಜಿ ಎಳೆಯಲಿರುವ, ಗಾಯದ ಮೇಲೆ ಉಪ್ಪು ಸವರುವ ಯೋಜನೆ-ಯೋಚನೆ?!
ಅಕ್ಷರ ಬಲ್ಲವರ ರಾಕ್ಷಸೀ ಪ್ರವೃತ್ತಿಯಷ್ಟೇ
ಹಂಪಿಯ ಬಳಿಯ ಕಮಲಾಪುರದ ಧರೋಜಿ, ಏಷ್ಯಾ ಖಂಡದ ಅತಿ ದೊಡ್ಡ ಕರಡಿ ಧಾಮ. ತಾಯಿ ಕರಡಿ ತನ್ನ ಬೆನ್ನ ಮೇಲೆ ಮೂರು ಮರಿಗಳನ್ನು ಹತ್ತಿಸಿಕೊಂಡು, ಕುತ್ತಿ ಮರಿ ಮಾಡಿ, ಬಂಡೆಗಲ್ಲುಗಳ ಮಧ್ಯೆ ಸಂಚರಿಸುವ ದೃಶ್ಯ.. ತಾಯ ಕಕ್ಕುಲಾತಿ ದರ್ಶಿಸುತ್ತದೆ.
ಕಣ್ಣೆದುರಿಗೆ ಇದ್ದುದನ್ನು ಕಾಣಲೂ ಕಣ್ಣು ಬೇಕು; ಒಳಗಣ್ಣು ತೆರೆದಿರಬೇಕು! ಅದು ಕಾಣ್ಕೆ! ವರಕವಿ ಬೇಂದ್ರೆ ಹೇಳಿದಂತೆ, ಆ ಕಾಣ್ಕೆ ಇದ್ದವರಿಗೆ ಫಲಕದ ಪಾರಮಾರ್ಥಿಕ ಅರ್ಥ ಕಾಣಿಸುತ್ತದೆ. ಇಲ್ಲಿ ಮನುಷ್ಯರಿಗೆ ಪ್ರವೇಶವಿಲ್ಲ!
ಅರ್ಥಾತ್, ಅಲ್ಲಿ ಬೆಳೆಸಲಾದ ಎಲ್ಲ ಹಣ್ಣಿನ ಮರಗಳು, ಜೇನು, ನೀರು, ಕರಡಿಗಳಿಗೆ ಮಾತ್ರ ಮೀಸಲು! ಎಲ್ಲವೂ ಈ ಭೂಮಿಯ ಮೇಲೆ ನಮಗೇ ಮೀಸಲಿದೆ ಎಂಬ ಧಿಮಾಕಿನ ನಡಾವಳಿಗೆ ಇಲ್ಲಿ ವಿವೇಕದ ಭೇಟಿ!
ಮಾತೆಂಬುದು ಜ್ಯೋತಿರ್ಲಿಂಗ ಧ್ಯೇಯದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಖ್ಯಾತ ಸಾವಯವ ಕೃಷಿ ತಜ್ಞ ಡಾ. ಡಿ.ಸಿ. ಚೌಟರು ಉದ್ಘಾಟಿಸಿದ, ಚಿನ್ನದ ಬೆಳೆಸು ತೋಟ ಕೂಡ ನಾವು ನೋಡಬೇಕು. ಅಲ್ಲಿ ಬೆಳೆಸಲಾದ ಎಲ್ಲ ಹಣ್ಣು-ಹೂವು, ಕಂದಮೂಲಿಕೆ, ಔಷಧೀಯ ಸಸ್ಯ ವಾಟಿಕೆ, ಕ್ಯಾಂಪಸ್ಸಿನ ಪ್ರಾಣಿ-ಪಕ್ಷಿ ಸಂಕುಲ ಮತ್ತು ದುಂಬಿ-ಕೀಟಗಳ ಪ್ರಪಂಚಕ್ಕೆ ಮೀಸಲಿದೆ! ಈ ಮಾದರಿ ನಮ್ಮ ನಾಡಿನ ಎಲ್ಲ ವಿಶ್ವವಿದ್ಯಾಲಯಗಳ ಆವರಣದಲ್ಲಿಯೂ ಜಾಗ ಪಡೆಯುವಂತಾಗಬೇಕು. ಮನಸ್ಸು ಮಾಡಬೇಕಷ್ಟೆ!
ಕಾರಣ, ರಾಷ್ಟ್ರಕವಿ ಕುವೆಂಪು ಅವರ ಕೃತಿಗಳಲ್ಲಿ ಚಿತ್ರಿತವಾಗಿರುವ ಕೌತುಕಮಯ, ಭವ್ಯ ಮತ್ತು ಭಯಬೀಳಿಸುವ ದಟ್ಟ ಕಾಡು, ನಮ್ಮ ಬಾಲವನದ ಶಿವರಾಮ ಕಾರಂತರ ಕೃತಿಗಳಲ್ಲಿ ನಮ್ಮ ಅರಿವು ವಿಸ್ತರಿಸಿದ್ದ ಕಾನು, ಪ್ರಭಾವಿಸಿದ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕೃತಿಗಳಲ್ಲಿ, ಅದೇ ಅಳಿದುಳಿದ ಕಾನು, ಮನುಷ್ಯಪ್ರಯತ್ನದಿಂದ ಉಳಿಸಬೇಕಾದ ಕಾಡಾಗಿ ಪರಿವರ್ತಿತಗೊಂಡಿದ್ದು ಕಳವಳಕಾರಿ.
ಧರೋಜಿ ಕಲ್ಲು ಗುಡ್ಡಗಳಿಂದ ಆವೃತವಾದ ಹೆಬ್ಬಂಡೆಗಳ ಸುಂದರ ತಾಣ. ಉಷ್ಣವಲಯದ ಒಣ ಎಲೆ ಉದುರುವ ಕಾಡು ಸೇರಿದಂತೆ, ಕುರುಚಲು ಸಸ್ಯಗಳ ನೆಲೆವೀಡು. ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ತುಂಗಭದ್ರಾ ಇಲ್ಲಿ ಮೈದುಂಬಿ, ಥಳಕು-ಬಳುಕಿನಿಂದ ಹರಿದು, ಕಲ್ಲುಗಳನ್ನೇ ಸವೆಸಿ ಸಂಗೀತದ ನಾದ ಹರಿಸಿದೆ. ಕಾಲನ ಗರ್ಭದಲ್ಲಿ ಎಷ್ಟೊಂದು ನೀರು ಈ ಹೆಬ್ಬಂಡೆಗಳ ಬುಡದಲ್ಲಿ ಹರಿದಿದೆಯೋ?
ಧರೋಜಿ ಕರಡಿ ಧಾಮದಲ್ಲಿ ಜಾಂಬುವಂತನಿಗಾಗಿಯೇ ಬೆಳೆಸಲಾದ ಚಿನ್ನದ ಬೆಳೆಸು ತೋಟದಲ್ಲಿ ಬೆಳೆದ ಹಣ್ಣು, ಹೂವು, ಕಾಯಿ, ಜೇನುತುಪ್ಪ, ಹೆಬ್ಬಂಡೆಗಳ ಮಧ್ಯದ ಎಳೆನೀರಷ್ಟು ಸಿಹಿಯಾದ ಮಳೆ ನೀರ ತೊರೆಗಳು, ಅಲ್ಲಲ್ಲಿ ಮರಗಳಿಗೆ ಕಟ್ಟಿದ ಹೆಜ್ಜೇನು ಎಲ್ಲ ಅವಕ್ಕೇ ಮೀಸಲು!
ಕುರುಚಲುಕಾಡಿನ ಹಣ್ಣುಗಳಾದ ಬೋರೆ, ಕವಳೆ, ಉಲುಪಿ, ಕಾರಿಜಾನೆ, ಕಾರೆ ಹಣ್ಣು, ಕಕ್ಕೆ, ನೇರಳೆ, ಪರಗಿ, ಫೈಕಸ್ ಪ್ರಜಾತಿಯ ಕಾಕಿ ಹಣ್ಣು ಋತುಮಾನಕ್ಕೆ ತಕ್ಕಂತೆ ಅಲ್ಲಿ ಲಭ್ಯ. ಹೆಚ್ಚೂಕಡಮೆ ವರ್ಷ ಪೂರ್ತಿ ಕರಡಿಗಳು ಹುತ್ತದ ಇರುವೆ ಹುಡುಕಾಡಿ ಮೆಲ್ಲುತ್ತವೆ!
ಮಳೆಗಾಲದ ಅವಧಿಯಲ್ಲಿ ಗೆದ್ದಲು, ಸೆಗಣಿಹುಳು (ಡಂಗ್ ಬೀಟಲ್), ಗೆಡ್ಡೆ ಮತ್ತು ಗೆಣಸು ಕರಡಿಗಳಿಗೆ ಹಬ್ಬದೂಟದ ಸಮಯ! ಗೆದ್ದಲಿರುವೆ (ವ್ಹೈಟ್ ಆಂಟ್ಸ್) ಹುತ್ತ ಕಾಣಸಿಕ್ಕರಂತೂ ಮುಗಿಯಿತು! ತನ್ನ ಬಲವಾದ ಉದ್ದ ಉಗುರುಗಳಿಂದ ಹುತ್ತದ ಶಿಖರಗಳನ್ನು ಇಬ್ಭಾಗವಾಗಿಸುವುದು. ಮೂಗು ತೂರಿಸಿ, ವ್ಯಾಕ್ಯೂಮ್ ಕ್ಲೀನರ್ನಂತೆ ಜೋರಾಗಿ ಉಸಿರೆಳೆದರಾಯಿತು. ತುಂಗಭದ್ರಾ ಕಾಲುವೆಯಲ್ಲಿ ಅಣೆಕಟ್ಟೆ ನೀರು ಹರಿದು ಬಂದಂತೆ, ಹುತ್ತದ ಒಂದು ಭಾಗದ ಇರುವೆಗಳೆಲ್ಲ ಕರಡಿಯ ಬಾಯೊಳಗೆ!
ಕರಡಿ ಹೀಗೆ ಗೆದ್ದಲುಹುಳು ಹೀರುವಾಗ ಹೊರಡಿಸುವ ಸದ್ದು ೨೦೦ ಗಜ ಆಚೆಯೂ ಕೇಳಿಸುತ್ತದೆ! ಕರಡಿಗಳು ದೀಪದ ಬುಡದಲ್ಲಿ ಹುರಿದು ಬಿದ್ದ ಗೆದ್ದಲು ಇರುವೆಗಳನ್ನು ಸೊರ್ರ..ಗ್ಗ.. ಶಬ್ದದೊಂದಿಗೆ ಹೀರುವ ಸದ್ದು, ಪ್ರಶಾಂತವಾದ ಹಂಪಿ ವಿಶ್ವವಿದ್ಯಾಲಯದ ಆವರಣದಲ್ಲೂ ತುಂಬ ಜೋರಾಗಿ ಕೇಳಿಸುತ್ತದೆ! ಯಾರೋ ದೂರದ ಮನೆಯ ಹಾಲ್ನಲ್ಲಿ ವ್ಯಾಕ್ಯೂಮ್ ಕ್ಲೀನರ್ ಬಳಸಿ ಸೋಫಾ ಸೆಟ್ ಸ್ವಚ್ಛಗೊಳಿಸುತ್ತಿರುವಂತೆ ಭಾಸವಾಗುತ್ತದೆ.
ಕಮಲಾಪುರದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಮಳೆಗಾಲದ ಸಂದರ್ಭದಲ್ಲಿ ಸಂಜೆ ವೇಳೆ ಕರಡಿಗಳು ಕುಟುಂಬಸಮೇತ ಅಲೆದಾಡುವುದು ವಿಶೇಷ. ಕಾರಣ, ಮಾನ್ಸೂನ್ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಗೆದ್ದಲು ಹುಳುಗಳು ರೆಕ್ಕೆ ಹೊಂದಿ, ತಮ್ಮದೇ ಗೂಡು(ಹುತ್ತ) ಕಟ್ಟಿಕೊಳ್ಳಲು ಹಾರಲು ಅಣಿಯಾಗುತ್ತವೆ. ವಿಶ್ವವಿದ್ಯಾಲಯದ ಬೀದಿಗಳ ಅಕ್ಕಪಕ್ಕ ಅಳವಡಿಸಲಾದ ಸೋಡಿಯಂ ವೇಪರ್ ದೀಪಗಳಿಂದ ಆಕರ್ಷಿತವಾಗುತ್ತವೆ. ಆದರೆ ಆ ದೀಪದ ಪ್ರಖರತೆ ಮತ್ತು ತಾಪ ಅವುಗಳಿಗೆ ತಾಗಿ, ರೋಸ್ಟ್ ಆಗಿ ಕಂಬದ ಬುಡಕ್ಕೆ ಬುಟ್ಟಿಗಳಲ್ಲಿ ತುಂಬಿಕೊಳ್ಳಬಹುದಾದಷ್ಟು ರಾಶಿ ಬೀಳುತ್ತವೆ.
ನಮ್ಮ ಯಲ್ಲಾಪುರ, ಹಳಿಯಾಳ ಮತ್ತು ದಾಂಡೇಲಿ ಸುತ್ತಲಿನ ಗ್ರಾಮಗಳ ವನವಾಸಿ ಸಿದ್ದಿ ಬಂಧುಗಳ ಕೆಂಜಿಗ ಚಟ್ನಿ, ಕೆಂಪಿರುವೆಗಳ ಪಲ್ಯದ ರುಚಿ ನೀವು ಅನುಭವಿಸಿದ್ದರೆ, ಖಂಡಿತ ನೆನಪಿಗೆ ಬಂದು, ಬಾಯಲ್ಲಿ ನೀರೂರುವುದು!
ಮೈರ್ಮೆಕೊಫೆಗಿ ಎನ್ನಲಾಗುವ ಕ್ರಿಮಿಕೀಟ ಭಕ್ಷಣೆ ಹವ್ಯಾಸ ಕರಡಿಗಳಲ್ಲಿ ವಿಶೇಷ. ಅವುಗಳ ಹಿಂಬದಿಯ ಎರಡೂ ಕಾಲುಗಳು, ಮುಂದಿನ ಎರಡೂ ಕಾಲುಗಳಿಗಿಂತ ಗಿಡ್ಡವಾಗಿರುವುದು ಈ ಕಾರಣಕ್ಕೆ. ಇರುವೆಗಳ ಹುತ್ತ ಬಗೆಯಲು ಅನುವಾಗುವಂತೆ ಈ ದೈಹಿಕ ಮಾರ್ಪಾಡು! ಹಿಂಬದಿಯ ಎರಡೂ ಕಾಲುಗಳ ಮೇಲೆ ಇಡೀ ದೇಹದ ಭಾರ ಹಾಕಿ, ಮುಂದಿನ ಕಾಲುಗಳಲ್ಲಿರುವ ಮೂರು ಇಂಚಿನ ಬೃಹತ್ ಪಾದ ಮತ್ತು ಚೂಪಾದ ಒಂದೂವರೆ ಇಂಚಿನ ನಖಗಳನ್ನು ಬಳಸಿ, ಇರುವೆಹುತ್ತ ಸೀಳುವುದು ಕರಡಿಗೆ ತುಂಬ ಸುಲಭ.
ಬೀಜಪ್ರಸಾರ
ಮನುಷ್ಯರ ಆವಾಸಸ್ಥಳದ ಹತ್ತಿರವೂ ಕೆಲವೊಮ್ಮೆ ಕರಡಿಗಳು ಈಗೀಗ ಕಾಣಸಿಗುತ್ತವೆ. ಆಗಾಗ ಹೊಲಗಳಿಗೆ ಲಗ್ಗೆ ಹಾಕುತ್ತವೆ. ಕಬ್ಬು, ನೆಲಗಡಲೆ, ಹಬ್ಬುವ ಶೇಂಗಾ, ಸೂರ್ಯಕಾಂತಿ, ಬಾಳೆಹಣ್ಣು, ಗೋವಿನ ಜೋಳ ಮತ್ತು ಡೇಟ್ ಪಾಮ್ ತಿನ್ನುವುದು, ಪುಟ್ಟ ಮಕ್ಕಳು ತೋಟವೊಂದಕ್ಕೆ ನುಗ್ಗಿ, ಕಳ್ಳತನದಿಂದ ಹಣ್ಣು ಎಗರಿಸಿ, ತೋಟಿಗನನ್ನು ಕಂಡ ಕೂಡಲೇ ದಿಕ್ಕಾಪಾಲಾಗಿ ಓಡುವಷ್ಟೇ ಮುಗ್ಧತೆಯಿಂದ! ಆಗಲೇ, ತೋಟಿಗರು, ರೈತರೊಂದಿಗೆ ಕರಡಿಗಳ ಮುಖಾಮುಖಿ. ಮನುಷ್ಯ ಮತ್ತು ವನ್ಯಜೀವಿ ಸಂಘರ್ಷಕ್ಕೆ ಇಂದು ನಾಂದಿ.
ಆದರೆ ಕರಡಿಗಳು, ಬೀಜ ಸಮೇತ ಹಣ್ಣುಗಳನ್ನು ತಿಂದು, ತಮ್ಮ ಹೊಟ್ಟೆಯೊಳಗೆ ಬೀಜಕ್ಕೆ ಆಮ್ಲೀಯ ಸಂಸ್ಕಾರ ನೀಡಿ, ಮಲ ಮಿಶ್ರಣದೊಂದಿಗೆ ಹೊರಗವಚ ರೂಪಿಸಿ, ಅಲ್ಲಲ್ಲಿ ಉಚ್ಛಿಷ್ಠ ವಿಸರ್ಜಿಸಿ, ನೈಸರ್ಗಿಕವಾಗಿಯೇ ಕಾಡು ಸುಪುಷ್ಟವಾಗುವಂತೆ ಬೀಜ ಪ್ರಸಾರ ಮಾಡುತ್ತವೆ. ಒಂದು ಮಳೆ ಬೀಳುತ್ತಲೇ, ಆ ಗೊಬ್ಬರಪೋಷಿತ ಬೀಜದಲ್ಲಿ ಜೀವ ಅಂಕುರಿಸಿ, ಚಿಗುರು ಸ್ಫುರಿಸುತ್ತದೆ! ವರ್ಷವೊಂದಕ್ಕೆ ಹೀಗೆ ಕೋಟ್ಯಂತರ ಬೀಜಗಳು ಕರಡಿಗಳಿಂದ ಪ್ರಸರಣಗೊಂಡು, ನಾವು ಉಳಿಸಿಕೊಳ್ಳಬೇಕಿರುವ ಇಂದಿನ ಕಾಡಿಗೆ ಉಸಿರು ತುಂಬುತ್ತಿವೆ. ಪ್ರಾಣಿಪೋಷಿತ ಬೀಜ ಪ್ರಸಾರ ನಮ್ಮ ಮೂಲಂಗಿ ನೆಟ್ಟು ಬೆಳೆಸಿದಂತಿರುವ ನೆಡುತೋಪುಗಳಿಗಿಂತ ತುಂಬ ಭಿನ್ನ ಮತ್ತು ಪರಿಸರಸ್ನೇಹಿ.
ಈಚಲುಮರ ಮತ್ತು ತೆಂಗಿನಮರಕ್ಕೆ ರೈತರು ಗಡಿಗೆಗಳನ್ನು ಕಟ್ಟಿ ನೀರಾ ಇಳಿಸಲು ವ್ಯವಸ್ಥೆ ಮಾಡಿದ್ದರೆ, ಸುಳಿವು ಅರಿತ ಕರಡಿಗಳು, ವಾಸನೆ ಹಿಡಿದು, ರಾತ್ರೋರಾತ್ರಿ ಮರವೇರಿ ಗಡಿಗೆಗಳಿಗೆ ತೊಟ್ಟಿಕ್ಕಿ ಸಂಗ್ರಹವಾದ ನೀರಾ ಸೇವಿಸಿ ಸಂಪ್ರೀತಗೊಂಡ ಉದಾಹರಣೆಗಳೂ ಸಾಕಷ್ಟು! ಕ್ವಚಿತ್ತಾಗಿ ಅವುಗಳಿಗೆ ಇಲ್ಲಿ ಜೇನುತುಪ್ಪ ಸಿಗುತ್ತದೆ.
ಕರಡಿ ತುಂಬ ಕುತೂಹಲಕಾರಿ ಆದರೆ ಭಯಂಕರ ಪ್ರಾಣಿ ಎಂದೇ ಜನಜನಿತ. ಕಾರಣ, ಕರಡಿಗಳ ದೃಷ್ಟಿ ಮಂದ. ಹೀಗಾಗಿ, ಯಾವತ್ತೂ ತಲೆ ಕೆಳಗಾಗಿಸಿಕೊಂಡು ಆಹಾರ ಹೆಕ್ಕುವಲ್ಲೇ ತುಂಬ ಏಕಾಗ್ರತೆಯಿಂದ ಅವು ವ್ಯಸ್ತವಾಗಿರುತ್ತವೆ. ಮನುಷ್ಯರ ಇರುವಿಕೆಯನ್ನು ಗ್ರಹಿಸಲು ಅವುಗಳಿಗೆ ತುಸು ಸಮಯ ಹಿಡಿಯುತ್ತದೆ. ಆಗ, ಮನುಷ್ಯರ ದಿಢೀರ್ ಪ್ರತ್ಯಕ್ಷವಾಗುವಿಕೆ, ಅವುಗಳಿಗೆ ಪ್ರಾಣಭಯ ಉಂಟುಮಾಡುತ್ತದೆ. ಆತ್ಮರಕ್ಷಣೆಗೋಸ್ಕರ ಏಕಾಏಕಿ ಮನುಷ್ಯರ ಮೇಲೆ ಮಾರಣಾಂತಿಕವಾಗಿ ಅವು ಆಕ್ರಮಣ ಮಾಡುತ್ತವೆ. ಗಂಭೀರವಾಗಿ ಗಾಯಗೊಳಿಸುತ್ತವೆ.
ಸಂತಾನಾಭಿವೃದ್ಧಿ
ಕರಡಿಗಳ ಸಂತಾನಾಭಿವೃದ್ಧಿಯ ಕಾಲ ಮೇ ತಿಂಗಳಿಂದ ಜುಲೈ ಮಧ್ಯೆ. ಈ ಸಂದರ್ಭದಲ್ಲಿ ಗಂಡು ಕರಡಿಗಳು ತುಂಬ ಆಕ್ರಮಣಕಾರಿ ಪ್ರವೃತ್ತಿ ಪ್ರದರ್ಶಿಸುತ್ತವೆ. ಬಲಿಷ್ಠ ಗಂಡುಕರಡಿಗೆ ಮಾತ್ರ ಭೀಕರ ಹೋರಾಟಗಳ ಬಳಿಕ ಸಂತಾನಾಭಿವೃದ್ಧಿ ಹಕ್ಕು ದೊರಕುತ್ತದೆ. ಈ ಕಾಳಗ ಹೆಚ್ಚೂ-ಕಡಮೆ ಒಂದು ವಾರದವರೆಗೆ ನಡೆಯಬಹುದು. ಆಗ ಹೆಣ್ಣನ್ನು ಬೆನ್ನಟ್ಟಿಕೊಂಡು ಗಂಡು ಕರಡಿ ತನ್ನ ಆವಾಸ ಮತ್ತು ವ್ಯಾಪ್ತಿಪ್ರದೇಶ ದಾಟಿ, ಜನನಿಬಿಡ ಸ್ಥಳಗಳಿಗೂ ಬರುವ ಸಾಧ್ಯತೆ ಇದೆ. ಮನುಷ್ಯರು ಇಲ್ಲಿ ದಾಳಿಗೊಳಗಾಗುವ ಸಾಧ್ಯತೆ ಅಧಿಕ.
ನವೆಂಬರ್ನಿಂದ ಜನವರಿವರೆಗೆ ತಾಯಿಕರಡಿ ಎರಡು ಮರಿಗಳಿಗೆ ಜನ್ಮ ನೀಡುತ್ತದೆ. ಧರೋಜಿಯ ಕಲ್ಲಿನ ಗುಡ್ಡಗಳಲ್ಲಿ ನೈಸರ್ಗಿಕವಾಗಿಯೇ ನಿರ್ಮಾಣಗೊಂಡ ಕಬ್ಬಿಂಗ್ ಡೆನ್ ಎನ್ನಲಾಗುವ ಗುಹೆಗಳಲ್ಲಿ ಮರಿಗಳ ಜನ್ಮ, ಪಾಲನೆ ಮತ್ತು ಪೋಷಣೆ ನಡೆಯುತ್ತದೆ. ತಾಯಿಕರಡಿ ಮಾತ್ರ ಮರಿಗಳ ಪೋಷಕತ್ವದ ಜವಾಬ್ದಾರಿ ನಿರ್ವಹಿಸುತ್ತದೆ. ತಂದೆಯ ಪಾತ್ರ ಇಲ್ಲಿ ಇನಿತೂ ಇಲ್ಲ; ಕೇವಲ ಗರ್ಭದಾನ ಮಾತ್ರ!
ಹೀಗಾಗಿ ಹೆಣ್ಣುಕರಡಿ, ೨-೩ ವರ್ಷಗಳಿಗೊಮ್ಮೆ ಮಾತ್ರ ತಾಯ್ತನ ಅನುಭವಿಸಲು ಸನ್ನದ್ಧವಾಗುತ್ತದೆ. ಗಂಡುಮರಿಗಳು ತಮ್ಮ ೨ ವರ್ಷಗಳ ಪ್ರಾಯದಲ್ಲಿ ತಾಯಿಯಿಂದ ಬೇರ್ಪಡುತ್ತವೆ. ಹೆಣ್ಣುಮರಿಗಳು ಎರಡೂವರೆ ವರ್ಷಗಳ ತನಕ, ಕೆಲವೊಮ್ಮೆ ಮೂರು ವರ್ಷಗಳವರೆಗೂ ತಾಯಿಯೊಂದಿಗೆ ಕರುಳಬಂಧವನ್ನು ಬೆಸೆದುಕೊಂಡಿರುತ್ತವೆ. ತಾಯಿಕರಡಿ, ಮರಿಗಳು ನಾಲ್ಕು ತಿಂಗಳು ತುಂಬುವವರೆಗೆ ತನ್ನ ಬೆನ್ನ ಮೇಲೆ ಕುತ್ತಿ ಮರಿ ಮಾಡಿಕೊಂಡು, ಉದರಭರಣಕ್ಕಾಗಿ ಅಡ್ಡಾಡುತ್ತದೆ.
ಇಂಡಿಯನ್ ಸ್ಲಾತ್ ಬೇಯರ್ಗಿರುವ ಆತಂಕ
ಇಡೀ ದೇಶದಲ್ಲಿ ಕರಡಿಗಳಿಗಿರುವ ಬಹುದೊಡ್ಡ ಆತಂಕ ಎಂದರೆ, ಹತ್ತುಹಲವು ರೀತಿಯಲ್ಲಿ ಅವುಗಳ ದೇಹದ ಅಂಗಾಂಗ ಬಳಕೆಗಿರುವ ನಾಡಿನ ಬೇಡಿಕೆ. ಹೀಗಾಗಿ, ಕಾಡಿನಲ್ಲಿ ಅವು ಬದುಕುಳಿಯುವ ಸಾಧ್ಯತೆ ಕ್ಷೀಣಿಸುತ್ತಲೇ ಸಾಗಿದೆ.
ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಘ – ಐ.ಯು.ಸಿ.ಎನ್. (ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕಾನ್ಸರ್ವೇಶನ್ ಆಫ್ ನೇಚರ್) ೧೯೯೬ರಲ್ಲೇ ಕರಡಿಗಳನ್ನು ವಲ್ನರೇಬಲ್, ಅತ್ಯಂತ ದುರ್ಬಲ ಸಂರಕ್ಷಣಾ ಸ್ಥಾನಮಾನ ಹೊಂದಿದ್ದಾಗಿ ಗುರುತಿಸಿ ವರದಿ ಮಾಡಿತ್ತು.
ಕನ್ವೆನ್ಶನ್ ಆನ್ ದಿ ಇಂಟರ್ನ್ಯಾಶನಲ್ ಟ್ರೇಡ್ ಆಫ್ ಎಂಡೇಂಜರ್ಡ್ ಸ್ಪಿಷೀಸ್ – ಸೈಟ್ಸ್ ಸಂಸ್ಥೆ ಈಗಾಗಲೇ, ಕರಡಿಗಳ ಮಾರಾಟ ಮತ್ತು ಅವುಗಳ ದೇಹಭಾಗದ ರಫ್ತನ್ನು ಸಹ ಸಂಪೂರ್ಣ ನಿಷೇಧಿಸಿದೆ. ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ -೧೯೭೨ರ ಪರಿಚ್ಛೇದ -೧ (ಶೆಡ್ಯೂಲ್-೧)ರಲ್ಲಿ ಕರಡಿಗಳನ್ನು ಸೇರ್ಪಡೆ ಮಾಡಲಾಗಿದೆ. ಕಾರಣ, ಕರಡಿಗಳ ಸಂಖ್ಯೆ ದಿನದಿಂದ ದಿನಕ್ಕೆ ವಿಲುಪ್ತಿಯ ಅಂಚನ್ನು ತಲಪುತ್ತಿದೆ.
ಆದರೆ, ಪ್ರಾಮಾಣಿಕವಾದ ಮನುಷ್ಯಪ್ರಯತ್ನದಿಂದ ಅವುಗಳ ಬದುಕಿಗೊಂದು ಆಶಾದಾಯಕ ಸಹಜೀವನದ ನೆಲೆ ದೊರಕಿಸಬಹುದು. ಮಾನವ-ವನ್ಯಜೀವಿ
ಸಂಘರ್ಷವನ್ನು, ಮಾನವ-ವನ್ಯಜೀವಿ ಸಹಜೀವನವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈ ಪ್ರಯತ್ನ ತುಂಬ ಮಹತ್ತ್ವದ್ದು. ಕರಡಿಗಳ ಆವಾಸಸ್ಥಾನಗಳ ಅತಿಕ್ರಮಣ, ಕುರುಚಲುಕಾಡುಗಳನ್ನು ಇನ್ನಿಲ್ಲದಂತೆ ಮನುಷ್ಯಕೇಂದ್ರಿತ ಚಟುವಟಿಕೆಗಳಿಗೆ ತಾಣವಾಗಿಸಿರುವುದು ಅವುಗಳ ಬದುಕಿಗೆ ಸಂಚಕಾರ ತಂದೊಡ್ಡಿದೆ. ಸದ್ಯ ಇಡೀ ದೇಶದಲ್ಲಿ ಅವುಗಳ ಬದುಕಿಗೆ ತುಂಬ ಸುದೃಢ ಕಾನನವನ್ನು ನಾವು ಉಳಿಸಿದ್ದು, ಕೇವಲ ಶೇ.೧೦ರಷ್ಟು!
ಅಳಿವಿನತ್ತ
೨೦೦೬ರಲ್ಲಿ ಕೆ. ಯೋಗಾನಂದ ಹಾಗೂ ಇತರರು ಇಡೀ ದೇಶಾದ್ಯಂತ ಕೈಗೊಂಡ ಕರಡಿ ಸಮೀಕ್ಷೆ ಪ್ರಕಾರ, ಅಂದು ಕೇವಲ ೯ ಸಾವಿರದಿಂದ ೧೩ ಸಾವಿರದ ವರೆಗೆ ಮಾತ್ರ ಬದುಕುಳಿದಿದ್ದವು ಒಟ್ಟು ಕರಡಿಗಳು! ಇಂದೂ ಕೂಡ ಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲ.
ನಮ್ಮ ದೇಶದಲ್ಲಿ ಕರಡಿಗಳ ಸ್ಥಿತಿಗತಿ ಇಷ್ಟು ಅವನತಿಯತ್ತ ಸಾಗಲು ಕಾರಣ, ಅವುಗಳೆಲ್ಲ ಬಹುತೇಕ ಲೋಲ್ಯಾಂಡ್ ಏರಿಯಾ ಇನ್ಹ್ಯಾಬಿಟೇಷನ್ ಕೃಷಿಭೂಮಿ, ಹೊಂದಿಕೊಂಡಂತೆ ಗ್ರಾಮಗಳು, ಜನವಸತಿ, ಅಭಿವೃದ್ಧಿಯ ಭಾಗವಾಗಿ ಕಾಡು ಸೀಳಿರುವ ಹೆದ್ದಾರಿ, ಸಿಮೆಂಟ್ ರಸ್ತೆಗಳು. ಹಗಲೂರಾತ್ರಿ ಭರಾಟೆಯ ವಾಹನಗಳ ಓಡಾಟ. ಒಟ್ಟಾರೆ, ಜನ ಬಳಕೆಗೆ ಮೀಸಲು ಎಂಬಂತಿರುವ ಕಾಡಿನ ಟ್ರಾನ್ಸಿಷನ್ ಝೋನ್, ಬಫರ್ ಝೋನ್ ಮತ್ತು ಕೋರ್ ಝೋನ್ ಅತಿಕ್ರಮಣ!
ಅನೈತಿಕ ಮತ್ತು ಕಾನೂನುಬಾಹಿರವಾಗಿ ಗಣಿಗಾರಿಕೆ, ಕಲ್ಲುಕ್ವಾರಿ ವ್ಯವಹಾರ, ನಿರಂತರವಾಗಿ ಗಿಡ-ಮರಗಳ ಹನನ ಅವುಗಳ ಆವಾಸಸ್ಥಾನಗಳನ್ನು ಶಿಥಿಲಗೊಳಿಸಿ, ಒಂದೊಮ್ಮೆ ಇದ್ದ ಹುಲುಸಾದ ಕಾಡನ್ನು ಇಂದು ಹೆಚ್ಚೂಕಡಮೆ ಬೆತ್ತಲುಗೊಳಿಸಿದೆ. ಕರಡಿಗಳ ಕಳ್ಳಬೇಟೆ, ಮರಿಗಳ ಕಾನೂನು ಬಾಹಿರ ಸಾಗಣೆ, ಕಾಳಸಂತೆಯಲ್ಲಿ ಅವುಗಳ ದೇಹದ ಭಾಗಗಳ ಅವ್ಯಾಹತ ಮಾರಾಟ, ಕರಡಿಗಳ ಬದುಕಿಗೆ ಇನ್ನಿಲ್ಲದ ಸಂಕಷ್ಟವನ್ನೊಡ್ಡಿದೆ.
ಹುಲಿ, ಚಿರತೆ, ಪಟ್ಟೆ ಕತ್ತೆ ಕಿರುಬ, ಕಾಡುಹಂದಿ, ನೆಲ ಕೌಜುಗ, ಪೇಂಟೆಡ್ ಫ್ರ್ಯಾಂಕೋಲಿನ್ ಮತ್ತು ಏಷ್ಯಾದ ಕಾಡು ನಾಯಿ ಧೋಲ್ಗಳು ಕರಡಿಗಳ ಆವಾಸಸ್ಥಾನದ ನೈಸರ್ಗಿಕ ಆಹಾರ ಸರಪಳಿಯ ಕೊಂಡಿಗಳು. ಮನುಷ್ಯನ ಜ್ಞಾನ ಕ್ಷಿತಿಜದ ವಿಸ್ತಾರಕ್ಕೆ ನಿಲುಕದಷ್ಟು ಸೂಕ್ಷ್ಮವಾಗಿ ಬೆಸೆದುಕೊಂಡಿರುವ ಕೊಂಡಿಗಳು. ಈಗ ಇನ್ನಿಲ್ಲದಂತೆ ಶಿಥಿಲ. ಕರಡಿಗೇ ಒಂದು ಕಾರಿಡಾರ್ ಬೇಕಿದೆ.
ಇನ್ನೆಲ್ಲಿ ದೊರವಾಯನ ಹಕ್ಕಿ!
ಹಾವೇರಿ ಜಿಲ್ಲೆ, ರಾಣೇಬೆನ್ನೂರಿನ ಕೃಷ್ಣಮೃಗಗಳ ಅಭಯಾರಣ್ಯದಲ್ಲಿ ಇಷ್ಟು ವರ್ಷ ಸ್ವತಂತ್ರವಾಗಿ ಬದುಕಿದ್ದ ದೊರವಾಯನ ಹಕ್ಕಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಈಗ ನಮ್ಮ ರಾಜ್ಯದಲ್ಲಿ ವಿಲುಪ್ತಿಯ ಹಂತಕ್ಕೆ ಹೋಗಲು ಕಾರಣ, ಕೃಷ್ಣಮೃಗಗಳು ರೈತರ ಹೊಲಗಳಿಗೆ ನುಗ್ಗದಿರಲಿ ಎಂದು ಹುಲ್ಲು ತಳಿಗಳ ಸಂಶೋಧನಾ ಕೇಂದ್ರದ ಸಹಕಾರದಲ್ಲಿ ಬೆಳೆಸಿದ ನಾಲ್ಕಾರು ನಮೂನೆಯ ಅತೀ ಎತ್ತರದ ಹುಲ್ಲುಗಾವಲು! ತನ್ನ ಕಣ್ಣೆತ್ತರಕ್ಕಿಂತ ಉದ್ದ ಬೆಳೆದ ಹುಲ್ಲುಗಾವಲು ಬಿಟ್ಟು, ಎತ್ತರದ ಪ್ರದೇಶಕ್ಕೆ ವಲಸೆ ಹೋಗಿ, ಆ ಹಕ್ಕಿ ಜೀವ ತೆರುವಂತಾದದ್ದು ವಿಪರ್ಯಾಸ.
ಇಂತಹ ಆಹಾರ-ವಿಹಾರದ ಬೇಲಿಗಳು ಮನುಷ್ಯರಿಗೆ ಸರಿ ಹೊರತು, ಪ್ರಾಣಿ-ಪಕ್ಷಿಗಳಿಗಲ್ಲ ಎಂಬುದನ್ನು ಹಲವಾರು ಬಾರಿ ಅವು ಸಾಬೀತುಪಡಿಸಿವೆ. ನಮ್ಮ ಜ್ಞಾನಕ್ಷಿತಿಜದ ವಿಸ್ತಾರಕ್ಕೆ ನಿಲುಕದ, ಜೀವವೈವಿಧ್ಯಜಗತ್ತಿನ ಕೊಂಡಿಗಳನ್ನು ತಿರುಪಿನಂತೆ ಹೀಗೆ ಬಿಚ್ಚುತ್ತ ಹೊರಟಿರುವ ನಮಗೆ, ಈ ಕ್ಲಿಷ್ಟ ವಿಷಯಗಳ ಕುರಿತು ಬಹುಶಿಸ್ತೀಯ ಮಲ್ಟಿ ಡಿಸಿಪ್ಲಿನರಿ ಮತ್ತು ಅಂತರ್ಶಿಸ್ತೀಯ ಇಂಟರ್ ಡಿಸಿಪ್ಲಿನರಿ ಅಧ್ಯಯನದ ಆವಶ್ಯಕತೆ ಇನ್ನೂ ಮನಗಾಣಲಾಗದೇ ಹೋಗಿದೆ. ಧರೋಜಿ ಸುತ್ತಮುತ್ತಲೂ ದೊರವಾಯನ ಹಕ್ಕಿ ಸಾಕಷ್ಟು ಸಂಖ್ಯೆಯಲ್ಲಿದ್ದವು. ಈಗ ರಾಜಸ್ಥಾನದ ಮರುಭೂಮಿಯಲ್ಲಿ ಮಾತ್ರ ಕೇವಲ ಬೆರಳೆಣಿಕೆಯಷ್ಟು ಉಳಿದಿವೆ. ವಿಲುಪ್ತಿಯ ಅಂಚು ತಲಪಿವೆ.
ಜೀವವೈವಿಧ್ಯ ಮತ್ತು ಜೀವಸಂಕುಲ ಸಂಕಷ್ಟದಲ್ಲಿರುವ ಈ ಕಾಲಘಟ್ಟದಲ್ಲಿ ಕರಡಿ ಪ್ರಜಾತಿಗೆ ಧರೋಜಿ ಕರಡಿ ಧಾಮ ಭವಿಷ್ಯದ ಆಶಾಕಿರಣ. ಬಹುಶಃ ಕೊನೆಯ ಸಾಧ್ಯತೆಯೂ. ಈ ಅಭಯಾರಣ್ಯವನ್ನು ಜಾಂಬುವಂತನಿಗಾಗಿ ನಂದನವನ ಆಗಿಸಬೇಕಿದೆ. ಹಾಗಂತ, ಅದನ್ನೊಂದೇ ವಿಶೇಷವಾಗಿ ಇನ್ ಐಸೋಲೇಷನ್ ಇಲ್ಲಿ ಬದುಕಿಸಿಕೊಳ್ಳುವುದು ಅಸಾಧ್ಯ. ಅದು ಬದುಕುಳಿಯಬೇಕಾದರೆ ನೈಸರ್ಗಿಕ ಸಮತೋಲನ ಮತ್ತು ಪಾರಿಸರಿಕ ವ್ಯವಸ್ಥೆಯ ಕೊಂಡಿಗಳು ಸುದೃಢವಾಗಬೇಕು.
ಅರ್ಥಾತ್, ಕಾಡು ಹಣ್ಣಿನ ಗಿಡಗಳಿಂದ ಹಿಡಿದು, ವರ್ಷದ ಹನ್ನೆರಡೂ ತಿಂಗಳು ಹಣ್ಣು ನೀಡುವ ಅತ್ತಿ, ಆಲ, ಬಸರಿ, ಗೋಣೆ ಅಂತಹ ಮರಗಳು ಒಂದೆಡೆ; ಇನ್ನೊಂದೆಡೆ ಇರುವೆ ಭಕ್ಷಕ ಪ್ಯಾಂಗೋಲಿನ್ನಿಂದ ಹಿಡಿದು ಗೆದ್ದಲು ಇರುವೆಗಳ ತನಕ ಇಲ್ಲಿ ಪಲ್ಲವಿಸಬೇಕಿದೆ. ಪಕ್ಷಿಗಳು, ಹಾವು, ಹಲ್ಲಿ, ಸರೀಸೃಪಗಳು, ನಕ್ಷತ್ರ ಆಮೆ ಹೀಗೆ, ಇವೆಲ್ಲವೂ ಸಹಜೀವನ ನಡೆಸುವಂತಾದರೆ ಮಾತ್ರ ಭರತಖಂಡೇ.. ಜಂಬೂದ್ವೀಪೇ.. ಎಂದು ಮಂತ್ರ ಪಠಿಸಬಹುದು..
ನೋಡಿ ಸ್ವಾಮಿ
ಅರಣ್ಯ ಇಲಾಖೆಯಲ್ಲಿ ಕೆಳ ಹಂತದ ರಕ್ಷಣಾ ಸಿಬ್ಬಂದಿಯ ಶೇ. ೬೦ ಹುದ್ದೆಗಳು ಸದ್ಯ ಖಾಲಿ ಇವೆ. ಕೂಡಲೇ ಆ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಬೇಕು. ಅತ್ಯುತ್ತಮ ಗುಣಮಟ್ಟದ ವೈಜ್ಞಾನಿಕ ಸಲಕರಣೆಗಳನ್ನು ಒದಗಿಸಲು ಸರ್ಕಾರ ಇಚ್ಛಾಶಕ್ತಿ ತೋರಿಸಬೇಕು. ದಳಗಳ ಕಾರ್ಯದಕ್ಷತೆ ಹೆಚ್ಚಿಸಲು ಗಸ್ತು ವಾಹನಗಳ ಫ್ರಿಕ್ವೆನ್ಸಿ ಹೆಚ್ಚಬೇಕು. ಉತ್ತಮ ಸಾಮರ್ಥ್ಯದ ವಾಯರ್ಲೆಸ್ ವ್ಯವಸ್ಥೆಯಿಂದ ಸಕಾಲಿಕವಾಗಿ ಮಾಹಿತಿ ರವಾನಿಸಲು ಸಿಬ್ಬಂದಿಗೆ ಸಾಧ್ಯ. ಮೇಲಾಗಿ, ಸದ್ಯ ಅವರಿಗೆ ನೀಡಲಾಗುತ್ತಿರುವ ಸಂಬಳ ತುಂಬ ಕಡಮೆ. ಕಾಡಿನಲ್ಲಿ ವಾಸಿಸಲು ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನಾದರೂ ಒದಗಿಸಬೇಕು. ಟೆಕ್ ಕಣ್ಣು ಕಾಡಿಗೆ ಸರ್ಪಗಾವಲಾಗಬೇಕು.
ಧರೋಜಿ ಕರಡಿ ಧಾಮದ ಒಟ್ಟು ವಿಸ್ತೀರ್ಣ ೮೨೭೨.೮ ಹೆಕ್ಟೇರ್.
ಅರಣ್ಯ ಪ್ರಕಾರ – ದಕ್ಷಿಣ ಉಷ್ಣವಲಯದ ಮುಳ್ಳುಕಂಟಿ
ಹಾಗೂ ಕುರುಚಲು ಪೊದೆಗಳನ್ನು ಹೊಂದಿದ ಕಾಡು.
ಕಮಲಾಪುರ ಅರಣ್ಯ ಬ್ಲಾಕ್ ವಲಯ – ಜೀವವೈವಿಧ್ಯ ರಕ್ಷಣಾ ವಲಯ
ಧರೋಜಿ ಅರಣ್ಯ ಬ್ಲಾಕ್ ವಲಯ – ಆವಾಸಸ್ಥಾನ ಅಭಿವೃದ್ಧಿ ವಲಯ
ಬುಕ್ಕಸಾಗರ ಅರಣ್ಯ ಬ್ಲಾಕ್ ವಲಯ – ಪ್ರವಾಸಿ ತಾಣ ವಲಯ
ಹನುಮನ ಪಾದಸ್ಪರ್ಶದಿಂದ ಪುನೀತವಾದ ಸ್ಥಳ
ಧರೋಜಿ ಕಾನನವು ಐತಿಹಾಸಿಕ, ಪ್ರಾಗ್ಐತಿಹಾಸಿಕ, ಉತ್ಖನನಶಾಸ್ತ್ರದ ಅಧ್ಯಯನಗಳಿಗೆ ಮಹತ್ತ್ವದ ಜಾಗ; ಧಾರ್ಮಿಕ ಮತ್ತು ಪೌರಾಣಿಕತೆ ಹಿನ್ನೆಲೆ ಹೊಂದಿದ ಪವಿತ್ರ ಯಾತ್ರಾಸ್ಥಳ. ವಾಲ್ಮೀಕಿ ರಾಮಾಯಣದಲ್ಲಿ ಪೌರಾಣಿಕ ಉಲ್ಲೇಖವಿರುವ ಕಿಷ್ಕಿಂಧೆ. ವಾನರ ರಾಜರಾದ ವಾಲಿ ಮತ್ತು ಸುಗ್ರೀವರು ಆಳಿದ ನಾಡು. ಜಾಂಬುವಂತನ ಬೀಡು. ರಾವಣನ ವಿರುದ್ಧದ ಹೋರಾಟದಲ್ಲಿ ಶ್ರೀರಾಮನ ಸೇನಾಪತಿಯಾಗಿದ್ದ ಕರಡಿಗಳ ರಾಜ ಜಾಂಬುವಂತನುದಿಸಿದ, ಹನುಮನ ಪಾದಸ್ಪರ್ಶದಿಂದ ಪುನೀತವಾದ ಸ್ಥಳ. ಶಾತವಾಹನರು, ಕದಂಬರು, ಬದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಗಂಗರು, ಕಲ್ಯಾಣದ ಚಾಲುಕ್ಯರು, ಕಲಚೂರಿಯರು, ಸೇವುಣರು ಮತ್ತು ಹೊಯ್ಸಳರು ಆಳಿದ ನಾಡು. ಈ ಪ್ರದೇಶ ವಿಜಯನಗರದ ಅರಸರ ಕಾಲಕ್ಕೆ ತುಂಬ ಉಚ್ಛ್ರಾಯಸ್ಥಿತಿಗೆ ತಲಪಿತ್ತು. ಅತ್ಯಂತ ಶ್ರೀಮಂತ ಹಿಂದು ರಾಜರ ಆಳ್ವಿಕೆ ಕಂಡ ಪ್ರದೇಶ.
ವಿಶ್ವ ಪಾರಂಪರಿಕ ತಾಣ
ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ನಿರೂಪಿತವಾದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ, ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಲ್ಪಟ್ಟ ಪ್ರದೇಶ. ೨೦೦ ವರ್ಷಗಳ ದೇದೀಪ್ಯಮಾನ ವಿಜಯನಗರ ಆಳರಸರ ವೈಭವದ ಆಳ್ವಿಕೆಯ ಕುರುಹಾಗಿ ನಿಂತ ಸ್ಥಳ. ಶಿಲಾಯುಗದ ಮೆಗಾಲಿಥಿಕ್ ಪೀರಿಯಡ್ ಅಂದಾಜು ಸುಮಾರು ೨೦,೦೦೦ ದಿಂದ ೫೦,೦೦೦ ವರ್ಷಗಳ ಹಿಂದೆ ನಿರ್ಮಿತವಾದ ಕಲ್ಲಿನ ಹೆಬ್ಬಂಡೆಗಳು ಗವಿ, ಆವಾಸಸ್ಥಾನ, ಆದಿಮಾನವನ ಚಿತ್ರಕಲೆಗಳ ಪ್ರದರ್ಶಿನಿಗೆ ಸಾಕ್ಷಿಯಾಗಿ ನಿಂತಿವೆ.
ಹೀಗೆ ಬನ್ನಿ
ವಿಜಯನಗರ ಜಿಲ್ಲೆಯ ಹೊಸಪೇಟೆ ರೈಲು ನಿಲ್ದಾಣ ಅಥವಾ ಬಸ್ ನಿಲ್ದಾಣ ನೀವು ತಲಪಬೇಕು. ಅಲ್ಲಿಂದ ಕಮಲಾಪುರ ೧೦ ಕಿ.ಮೀ. ಅಲ್ಲಿಂದ ಧರೋಜಿ ೧೫ ಕಿ.ಮೀ. ಕಮಲಾಪುರ ಮೇಲಿಂದ, ಹಂಪಿ ಕನ್ನಡ ವಿವಿ ನೋಡಿಕೊಂಡು ಪಿ.ಕೆ. ಹಳ್ಳಿ ಮೇಲಿಂದ ಧರೋಜಿ ಅಂದಾಜು ೨೨ ಕಿ.ಮೀ. ಹಾಗೂ ಹಂಪಿ ೧೫ ಕಿ.ಮೀ. ಹೊಸಪೇಟೆಯಲ್ಲಿ ವಾಸ್ತವ್ಯ ಹೂಡುವುದು ಅನುಕೂಲ.
ಧಾರವಾಡ ಅಥವಾ ಬೆಂಗಳೂರಿನಿಂದ ಒಂದು ರಾತ್ರಿ (೮ ತಾಸು) ಪ್ರಯಾಣ. ಧರೋಜಿ ಕರಡಿ ಅಭಯಾರಣ್ಯದ ಪ್ರವೇಶ ದ್ವಾರದಿಂದ ವೀಕ್ಷಣಾ ಗೋಪುರದ ವರೆಗೆ ೪ ಕಿ.ಮೀ. ಅಂತರವಿದೆ. ಹೀಗಾಗಿ ವಾಹನ ಬೇಕು. ವಾಹನಕ್ಕೂ ಪ್ರತ್ಯೇಕ ಶುಲ್ಕವಿದೆ. ದ್ವಿಚಕ್ರ ವಾಹನಕ್ಕೆ ಉಚಿತ ಪ್ರವೇಶವಿದೆ. ಒಬ್ಬರಿಗೆ ತಲಾ ೨೫ ರೂಪಾಯಿ ಪ್ರವೇಶ ಶುಲ್ಕ ನಿಗದಿಯಾಗಿದೆ. ಕ್ಯಾಮೆರಾ ಬಳಸಿ ಛಾಯಾಗ್ರಹಣ ಮಾಡಲು ವಿಶೇಷ ಪರವಾನಿಗೆ ಹಾಗೂ ನಿಗದಿತ ಶುಲ್ಕ ಪಾವತಿಸಬೇಕು. ಕುಡಿಯಲು ನೀರು, ಛತ್ರಿ, ಶೂ ಮತ್ತು ಹಸಿವೆಯಾದರೆ ತುಸು ತಿನ್ನಲು ವ್ಯವಸ್ಥೆ ಮಾಡಿಕೊಂಡು ಹೋಗುವುದು ಉತ್ತಮ.
ಹಂಪಿಯ ಸುತ್ತಮುತ್ತ ಕಲಂದರ್ಗಳಿಗೆ ಪುನರ್ವಸತಿ
ಹೆಚ್ಚೂಕಡಮೆ ೧೯೯೦ರ ದಶಕದ ವರೆಗೂ ಕರಡಿ ಕುಣಿಸುವ ಕಲಂದರ್ಗಳನ್ನು ನಮ್ಮೂರಲ್ಲಿ ನಾವು ನೋಡಿದ್ದಿದೆ. ಮೊಘಲ್ ಆಳರಸರ ಕಾಲದಲ್ಲಿ ಅರೆ ಅಲೆಮಾರಿ ಜನಾಂಗವಾಗಿ ಗುರುತಿಸಲ್ಪಟ್ಟ ಈ ಸಮುದಾಯದ ಜನರು, ಪುಟ್ಟ ಕರಡಿ ಮರಿಗಳನ್ನು ಪಳಗಿಸಿ, ಕುಣಿಸಿ, ತಮ್ಮ ಉದರಂಭರಣ ಮಾಡಿಕೊಳ್ಳುತ್ತ ಬಂದವರು. ೩೦೦ ರಿಂದ ೪೦೦ ವರ್ಷಗಳ ಲಿಖಿತ ಇತಿಹಾಸ ಈ ಸಮುದಾಯಕ್ಕಿದೆ. ಕುರಿ ಮತ್ತು ಆಡು ಸಾಕಣೆಯ ಕುಲಕಸುಬಿನೊಂದಿಗೆ, ನಿತ್ಯ ೨೫-೩೦ ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಕ್ರಮಿಸುತ್ತ, ಅವುಗಳನ್ನು ಮೇಯಿಸುತ್ತ, ಊರ ಹೊರಗೆ ಸಮತಟ್ಟಾದ ನೆಲ ಕಂಡಲ್ಲಿ ರಾತ್ರಿ ಠಿಕಾಣಿ ಹೂಡುತ್ತ ಹೋಗುವವರು. ಬಳಿಕ ಆಯಾ ಊರುಗಳಿಗೆ ಹೋಗಿ, ಕಲಂದರ್ಗಳು ಕರಡಿಗಳನ್ನು ಕುಣಿಸಿ ಹಣ ಸಂಪಾದಿಸುತ್ತಿದ್ದರು. ಮಂಗಗಳನ್ನೂ ಸಾಕಿದ್ದಿದೆ. ಹುಂಜದ ಅಂಕ ಏರ್ಪಡಿಸಿ, ಬಾಜಿಕಟ್ಟುವ ಆಟ, ಪಾರಿವಾಳಗಳನ್ನು ಸಾಕಿ ಅತ್ಯಂತ ಎತ್ತರಕ್ಕೆ ಹಾರಿಸುವ, ಗಾಳಿಯಲ್ಲೇ ಪಟ್ಟು ಪ್ರದರ್ಶಿಸಿ, ಜನರಿಂದ ಅಷ್ಟೋ ಇಷ್ಟೋ ಹಣ ಪಡೆದು ಪ್ರದರ್ಶನ ನೀಡುತ್ತ ಬದುಕು ದೂಡಿದ್ದಾರೆ. ಪುನಗು ಬೆಕ್ಕು, ಪ್ಯಾಂಗೋಲಿನ್, ಗೂಬೆ, ಫ್ರ್ಯಾಂಕೋಲಿನ್, ಬುರ್ಲಿಗಳನ್ನು ಬಂಧಿಸಿ, ಪಂಜರದೊಳಿಟ್ಟು ಪ್ರದರ್ಶಿಸಿದ್ದಿದೆ. ಹೊಸಪೇಟೆಯಿಂದ ೨೦ ಕಿಲೋಮೀಟರ್ ದೂರದಲ್ಲಿರುವ ಹಂಪಿಯ ಸುತ್ತಮುತ್ತ ಕಲಂದರ್ಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ.