ಜೀವತಂತಿ ಕಡಿದುಹೋಗುವ ಮುನ್ನ
ಮೋಹಜಾಲಗಳನ್ನೆಲ್ಲ ಒಮ್ಮೆ ಕಳಚಿಟ್ಟು
ನಾನು ನಾನಾಗಿ ಬದುಕಬೇಕಿದೆ ಒಮ್ಮೆ
ಬರುವುದೆ ಆ ಒಂದು ದಿನ?
ಕಣ್ಣ ಜ್ಯೋತಿ ಆರಿಹೋಗುವ ಮುನ್ನ
ನನ್ನ ನಾನೇ ಮರೆತು ಹೋಗುವ ಮುನ್ನ
ನಾನು ನಾನಾಗಿ ಬೆಳಗಬೇಕಿದೆ ಒಮ್ಮೆ
ದೊರೆವುದೆ ಆ ಒಂದು ದಿನ?
ಮಗಳು, ಮಡದಿ, ಮಾತೆ ಎಂಬ ಹೆಮ್ಮೆ ಇದೆ ನನಗೆ
ಆದರೂ ಆ ಬಿರುದುಗಳ ಕಳಚಿಟ್ಟು
ನಾನು ನಾನಾಗಿ ಬಾಳಬೇಕೆಂಬ ಆಸೆ
ಒದಗಿಬರುವುದೇ ಆ ಒಂದು ಸುದಿನ!
ಶ್ರಮರಹಿತಳಾಗಿ , ತ್ಯಾಗರಹಿತಳಾಗಿ
ಯಮನಪಾಶ ಬೀಳುವ ಮುನ್ನ, ನನ್ನಾತ್ಮಸಾಕ್ಷಿಯಂತೆ
ನಾನು ನಾನಾಗಿ ಒಂದೇ ಒಂದು ದಿನ
ನಾ ಬಯಸಿದಂತೆ ಬದುಕಬೇಕಿದೆ ನನಗೆ
ಬರುವುದೇ ಆ ದಿನ?
ಬಾಳನಾಟಕಕೆ ಪರದೆ ಬೀಳುವ ಮುನ್ನ
ಎಲ್ಲ ಪಾತ್ರಗಳ ಮುಖವಾಡ ಕಳಚಿ
ನಾನು ನಾನಾಗಿ ನನ್ನನ್ನೇ ಮರೆಯುವಂತೆ
ನಿರ್ವಹಿಸಬೇಕಿದೆ ನನ್ನಿಚ್ಛೆಯ ಪಾತ್ರ
ದೊರಕುವುದೇ ಆ ಒಂದು ಅವಕಾಶ?
-ಸವಿತಾ ಮಾಧವ ಶಾಸ್ತ್ರಿಗುಂಡ್ಮಿ