ಭಾರತದ ಇತಿಹಾಸದ ಅನುಸ್ಯೂತವಾದ ನಿರಂತರತೆಯ ಶೋಧ ನಡೆಸುತ್ತಿರುವವರಿಗೆ ಭಗವದ್ಗೀತೆ ಅತ್ಯಂತ ಮುಖ್ಯವಾದ ಒಂದು ಸುಳುಹನ್ನು ನೀಡುತ್ತದೆ. ಹತ್ತಾರು ನಿದರ್ಶನಗಳ ನಡುವೆ ಅದು ಏಕಮೇವಾದ್ವಿತೀಯ ಎಂಬುದು ನಿಸ್ಸಂಶಯ. ಅನುಸ್ಯೂತವಾದ ನಿರಂತರತೆ ಎನ್ನುವಾಗ ರಾಜಕೀಯ ಅಥವಾ ಆರ್ಥಿಕ ವ್ಯವಸ್ಥೆಗಳು ನಮ್ಮ ಉದ್ದೇಶಿತ ವಿಷಯವಲ್ಲ; ಸಾಮಾಜಿಕ ಜೀವನಪದ್ಧತಿ ಕೂಡ ಅಲ್ಲ. ಭಾರತದ ಆಧ್ಯಾತ್ಮಿಕ ಮತ್ತು ಸಾಂಸತಿಕ ಜೀವನಪ್ರವಾಹವೇ ಈ ನಿರಂತರತೆಯ ಹಿಂದಿನ ಸತ್ಯವಾಗಿದೆ. ಅನಾದಿಕಾಲದಿಂದ ಇವತ್ತಿನ ತನಕ ಭಾರತ ತಡೆಯಿಲ್ಲದೆ ಯಾವೊಂದು ಪ್ರವಾಹವನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆಯೋ ಇದರಲ್ಲಿ ಬೇರಾವುದೇ ರಾಷ್ಟ್ರ ಯಶಸ್ವಿಯಾಗಿಲ್ಲ.
ಇತಿಹಾಸದಲ್ಲಿ ಸರ್ವಕಾಲಕ್ಕೂ ಒಂದು ಆದರ್ಶ ಮಾದರಿಯಾಗಿ ನೆಲೆನಿಂತಿರುವ ಭಗವದ್ಗೀತೆಯ ಅದ್ವಿತೀಯತೆಗೆ ಇರುವ ಕಾರಣವಾದರೂ ಏನು? ಈ ಗ್ರಂಥ ಮಹಾನ್ ಸಾಮರಸ್ಯಕಾರಕವೇ (Harmoniser) ಸರಿ. ಇತರ ಬಹಳಷ್ಟು ಗ್ರಂಥಗಳು ವಾಸ್ತವದೊಂದಿಗೆ ಮುಖಾಮುಖಿ ಆಗುವಾಗ ಯಾವುದೋ ಒಂದು ದೃಷ್ಟಿಕೋನವನ್ನು ಎಲ್ಲ ಗ್ರಂಥಗಳೂ ಎತ್ತಿಹಿಡಿಯುತ್ತಾ ಇತರ ಹಲವು ದೃಷ್ಟಿಕೋನಗಳನ್ನು ಮೆಟ್ಟಿನಿಲ್ಲಲೆಳಸುತ್ತವೆ. ಆದರೆ ಭಗವದ್ಗೀತೆ ಎಲ್ಲ ದೃಷ್ಟಿಕೋನಗಳನ್ನೂ ಏಕಕಾಲದಲ್ಲಿ ಹಿಡಿದಿಡುತ್ತಾ ಅವುಗಳನ್ನು ಪರಸ್ಪರ ಪೂರಕವಾಗಿ ಬಳಸಿಕೊಳ್ಳುತ್ತದೆ. ಈಗಾಗಲೆ ಇರುವ ಎಲ್ಲ ವ್ಯವಸ್ಥೆಗಳ ನಡುವೆ ಸಾಮರಸ್ಯವನ್ನು ತಂದು ಅವುಗಳನ್ನು ಪುನಶ್ಚೇತನಗೊಳಿಸುವುದಷ್ಟೇ ಅಲ್ಲ; ಮುಂದೆ ಅಸ್ತಿತ್ವಕ್ಕೆ ಬರಬಹುದಾದ ಪ್ರಾಮಾಣಿಕ ಮತ್ತು ವಿಶ್ವಾಸಾರ್ಹವಾದ ವ್ಯವಸ್ಥೆಗಳನ್ನು ಕೂಡ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಗೀತೆಯ ಈ ಅದ್ಭುತವಾದ ಗುಣಾತ್ಮಕ ಅಂಶವನ್ನು ನಟರಾಜ ಗುರುಗಳು ಈ ಕೆಳಗಿನಂತೆ ಚೆನ್ನಾಗಿ ಚಿತ್ರಿಸಿದ್ದಾರೆ:
“ಏಕೆಂದರೆ ಭಗವದ್ಗೀತೆ ಆರ್ಯರ ಒಂದು ಗ್ರಾಮದ ಸಾಮಾನ್ಯ ಯೋಜನೆಯಲ್ಲಿ ಎಲ್ಲ ಮಾರ್ಗಗಳು ಒಂದು ದೇವಾಲಯದಿಂದ ಹೊರಟು ಅಲ್ಲಿಗೇ ಮರಳುವ ರೀತಿಯ ಭರವಸೆಯನ್ನು ನಮಗೆ ಕೊಡುತ್ತದೆ. ಈ ಸಹನೆಯ ಮನೋಭಾವ ಮತ್ತು ಸಮಾನ ಆದರ್ಶದ ಸಾಧನೆಗಾಗಿ ಎಲ್ಲ ವಿಭಿನ್ನ ನಿಲವುಗಳನ್ನು ಒಂದೆಡೆ ಸೇರಿಸುವಲ್ಲಿನ ಈ ಕಾವ್ಯ
(ಭಗವದ್ಗೀತೆ)ದ ಸಾಮರ್ಥ್ಯ ಅತ್ಯಂತ ಗಮನಾರ್ಹವಾಗಿದೆ; ಅಂತಹ ಒಂದು ಸಂಯೋಜನೆಯ ಬಲದಿಂದಾಗಿ ಭಗವದ್ಗೀತೆ ಮೀಮಾಂಸಕರ ಯಜ್ಞದ ಹಳೆಯ ಜಗತ್ತನ್ನು ಜಗತ್ತಿನ ಸಮಗ್ರ ಇರುವಿಕೆಯೊಂದಿಗೆ ಸಮನ್ವಯಗೊಳಿಸಬಲ್ಲದು, ಸಂನ್ಯಾಸದ ಬಗೆಗೆ ಪ್ರಬಲವಾದ ತುಡಿತವನ್ನು ಹೊಂದಿರುವ ಉಪನಿಷದ್ನಂತರದ ಕಾಲದ ಸಾಂಖ್ಯವಿರಲಿ, ಸ್ವನಿಯಂತ್ರಣದ ನಿಗೂಢ ಶಿಸ್ತನ್ನು ಹೊಂದಿದ್ದು, ಆಸ್ತಿಕ ವಿಶ್ವವ್ಯವಸ್ಥೆ ಮತ್ತು ಬೌದ್ಧಿಕವಾದ ನೈತಿಕತೆಗೆ ಪೂರಕವಾದ ಪತಂಜಲಿಪೂರ್ವ ಯೋಗವಿರಲಿ, ದೇವರ ಬಗೆಗಿನ ತಮ್ಮದಾದ ವಿಶೇಷ ನಿಲವು-ಒಲವುಗಳ ಹಾಗೂ ಪ್ರತ್ಯೇಕವಾದ ಪೂಜಾವಿಧಿ-ವಿಧಾನಗಳನ್ನು ಹೊಂದಿರುವ ಆಯಾ ಕಾಲದ ಭಕ್ತಿಪಂಥಗಳಿರಲಿ – ಎಲ್ಲವನ್ನೂ ಗೀತೆ ಒಳಗೊಳ್ಳಬಲ್ಲದು. ನಿಜವೆಂದರೆ ಸಮಾಜದ ಸ್ಥಾಪಿತ ವ್ಯವಸ್ಥೆಯಲ್ಲಿ ಬಗೆಬಗೆಯ ಹಿತಾಸಕ್ತಿಗಳ ಎಲ್ಲರನ್ನೂ ಈ ಕಾವ್ಯ ಒಂದೆಡೆ ಸೇರಿಸಿ ತಮ್ಮ ವಿಭಿನ್ನ ನಿಲವುಗಳನ್ನು ಮರೆತು ಒಂದು ತತ್ತ್ವಶಾಸ್ತ್ರೀಯ ರಾಜಿಯಲ್ಲಿ ಕೈ ಜೋಡಿಸುವಂತೆ ಮಾಡುತ್ತದೆ. ಭಗವದ್ಗೀತೆಯ ಯಾವುದೇ ವ್ಯಾಖ್ಯಾನ ತಾನು ಈ ಗ್ರಂಥಕ್ಕೆ ಪೂರ್ತಿ ನ್ಯಾಯ ಸಲ್ಲಿಸುವಂತಿಲ್ಲ; ಏಕೆಂದರೆ ಇದರ ಎಲ್ಲ ಅಧ್ಯಾಯಗಳಲ್ಲೂ ಅಂತಹ ತೀವ್ರತೆಯ ತುಡಿತಗಳೂ ಗೌರವಾರ್ಹವಾದ ರಾಜಿಗಳೂ ಇವೆ.”
ಭಗವದ್ಗೀತೆ ನಮ್ಮನ್ನು ಅಂದಿನ ಕುರುಕ್ಷೇತ್ರಯುದ್ಧಕ್ಕೆ ಕರೆದೊಯ್ಯುತ್ತದೆ. ಹಿಂದೂ ಕಾಲಾನುಕ್ರಮಣಿಕೆಯ ಪ್ರಕಾರ ಅದು ೫,೧೦೦ ವರ್ಷಗಳಿಗೂ ಹಿಂದಿನ ಕಥೆ. ಆದರೆ ರಾಷ್ಟ್ರಮಟ್ಟದಲ್ಲಿ ಇದು ಆದಿಶಂಕರಾಚಾರ್ಯರ ಪ್ರಾದುರ್ಭಾವದೊಂದಿಗೆ ಮೊದಲಬಾರಿಗೆ ಗಮನ ಸೆಳೆಯಿತು. ಇವರೇ ಗೀತೆಯ ಮೊದಲ ಭಾಷ್ಯಕಾರರೆಂದು ಪರಿಗಣಿಸಲಾಗಿದೆ. ತಮಗಿಂತ ಹಿಂದಿನ ವ್ಯಾಖ್ಯಾನಕಾರರ ಬಗ್ಗೆ ಶಂಕರರು ಹೇಳುತ್ತಾರೆ; ಆದರೆ ಅವು ಯಾವುದೂ ಸಿಕ್ಕಿಲ್ಲ.
“ನಿನಗೆ ನೀನೇ ಗೆಳೆಯ ಮತ್ತು ನಿನಗೆ ನೀನೇ ಶತ್ರು. ನಮ್ಮ ಮನಸ್ಸಲ್ಲದೆ ನಮಗೆ ಬೇರೆ ಯಾರೂ ಶತ್ರುಗಳಿಲ್ಲ, ತಾನಲ್ಲದೆ ಬೇರೆ ಮಿತ್ರನೂ ಇಲ್ಲ; ಇದೇ ಅಂತಿಮ ಮತ್ತು ಬಹುದೊಡ್ಡ ಪಾಠ.” – ಭಗವದ್ಗೀತೆ
ಬಿಕ್ಕಟ್ಟು ನಿರ್ವಹಣೆಗೆ ಪಠ್ಯ
ಆದರೆ ಶಂಕರಾಚಾರ್ಯರ ಕಾಲದ ಬಳಿಕ ಲೆಕ್ಕಕ್ಕೆ ಸಿಗದಷ್ಟು ಜನ ಗೀತೆಗೆ ವ್ಯಾಖ್ಯಾನ ಬರೆದಿದ್ದಾರೆ; ಅವರಲ್ಲಿ ಶಾಸ್ತ್ರೀಯ ಕ್ರಮದಲ್ಲಿ ವ್ಯಾಖ್ಯಾನ ಮಾಡಿದವರಿದ್ದಾರೆ; ಹೊಸತನ್ನು ಹುಡುಕಿದ ವಿದ್ವಾಂಸರು ಕೂಡ ಇದ್ದಾರೆ. ನಿಜವೆಂದರೆ, ಯಾವುದೇ ಆಚಾರ್ಯರಿರಲಿ, ವ್ಯವಸ್ಥೆಯ ನಿರ್ಮಾಪಕರಿರಲಿ ಅಥವಾ ಸಾಮಾಜಿಕ ಚಳವಳಿಗಾಗಿ ಜನತೆಯ ಪ್ರಜ್ಞೆಗೆ ಚಾಲನೆ-ಪ್ರೇರಣೆ ನೀಡಲು ಬಯಸಿದವರಿರಲಿ ಎಲ್ಲರಿಗೂ ಅದನ್ನು ಭಗವದ್ಗೀತೆಯ ನುಡಿಗಟ್ಟಿನ ಮೂಲಕ ಹೇಳುವುದು ಅನಿವಾರ್ಯವಾಯಿತು. ಆದಿಶಂಕರರ ಬಳಿಕ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಷ್ಟೇ ಅಲ್ಲ, ಸಾಮಾಜಿಕ ಹಾಗೂ ರಾಜಕೀಯ ವ್ಯವಹಾರಗಳಲ್ಲಿ ಕೂಡ ಗೀತೆಯ ಸೂತ್ರವೇ ಅಂತಿಮವೂ ಅನುಲ್ಲಂಘನೀಯವೂ ಆಯಿತು.
ಭಾರತೀಯ ಇತಿಹಾಸದಲ್ಲಿ ಭಗವದ್ಗೀತೆ ಬಿಕ್ಕಟ್ಟು ನಿರ್ವಹಣೆಯ ಪಠ್ಯವಾಯಿತು. ಅದನ್ನು ಹಾಗೆ ಕರೆದರೆ ಅದರ ಘನತೆಯನ್ನು ಕಡಮೆ ಮಾಡಿದಂತಾಗುತ್ತದೆ ಎಂಬುದು ನಿಜ. ಅದರ ಮಹತ್ತ್ವ ಇನ್ನೆಷ್ಟೋ ಮಿಗಿಲಾದದ್ದು. ಬದುಕಿನ ಸಮಗ್ರ ತತ್ತ್ವಶಾಸ್ತ್ರಕ್ಕೆ ಅದು ಪಠ್ಯವಾಗಿದೆ, ಬದುಕಿನ ಎಲ್ಲ ರಂಗಗಳಲ್ಲಿ ಜನರಿಂದ ಏಳಬಹುದಾದ ಎಲ್ಲ ಪ್ರಶ್ನೆಗಳಿಗೆ ಅದು ಉತ್ತರಿಸಬಲ್ಲದು. ಎಲ್ಲ ಸಂಘರ್ಷಗಳನ್ನು ಅದು ಬಗೆಹರಿಸುತ್ತದೆ. ಇತಿಹಾಸದ ಎಲ್ಲ ಕರಾಳಯುಗಗಳಲ್ಲಿ ಅದು ದಾರಿದೀಪವಾಗಿ ರಕ್ಷಿಸಬಲ್ಲದು. ಇಷ್ಟು ಸಾಲದೆಂಬಂತೆ, ವೈಯಕ್ತಿಕ ಮತ್ತು ರಾಷ್ಟ್ರೀಯ ಎರಡೂ ಸ್ತರಗಳಲ್ಲಿ ಇದು ಬಿಕ್ಕಟ್ಟು ನಿರ್ವಹಣೆಗೆ ಅತಿಶ್ರೇಷ್ಠ ಗ್ರಂಥವಾಗಿದೆ. ಇದರಲ್ಲಿ ಆಶ್ಚರ್ಯವೇನೂ ಇಲ್ಲ, ಏಕೆಂದರೆ ಅಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿಯೆ ಅದು ಉದ್ಭವಿಸಿತು; ಮತ್ತು ಜಡವಾಗಿಸುವ ಹತಾಶೆಯಲ್ಲಿದ್ದ ಅರ್ಜುನನನ್ನು ಯಶಸ್ವಿಯಾಗಿ ಮೇಲಕ್ಕೆತ್ತಿ ಕಾರ್ಯೋನ್ಮುಖಗೊಳಿಸಿತು.
ಗೀತೆ ಅರ್ಜುನನಿಗೆ ಏನನ್ನು ಮಾಡಿತೋ ಅದು ಆರಂಭ ಮಾತ್ರ. ಭಾರತದ ಇತಿಹಾಸದಲ್ಲಿ ಹಲವು ಬಾರಿ ಅಂತಹ ಸನ್ನಿವೇಶ ಮರುಕಳಿಸಿದೆ.
ಆದಿಶಂಕರರು ಭಗವದ್ಗೀತೆಯ ವ್ಯಾಖ್ಯಾನಕ್ಕೆ ಹೊರಟಿದ್ದೇಕೆ? ನಟರಾಜಗುರು ಅದನ್ನು ಹೀಗೆ ವಿಶ್ಲೇಷಿಸುತ್ತಾರೆ:
“ಗೀತೆಯ ಬಗೆಗಿನ ಶಂಕರರ ಅದ್ವೈತ ಪರಿಕಲ್ಪನೆ, ರಾಮಾನುಜರ ವಿಶಿಷ್ಟಾದ್ವೈತ ಪರಿಕಲ್ಪನೆ ಮತ್ತು ಮಧ್ವಾಚಾರ್ಯರ ದ್ವೈತ ಪರಿಕಲ್ಪನೆಗಳಲ್ಲದೆ ನಿಂಬಾರ್ಕರ ದ್ವೈತಾದ್ವೈತ ಪರಿಕಲ್ಪನೆ ಸೇರಿ ಸಾಕಷ್ಟು ಕಾಲ ವಿವಿಧ ಮತೀಯ ಅನುಸರಣೆಗಳ ಬೆಂಬಲಿಗರಿಗೆ ಬೇಕಾದ ಆಧ್ಯಾತ್ಮಿಕ ಪೋಷಣೆಯನ್ನು ನೀಡಿದವು. ಇದು ನಮ್ಮ ಸಾಮಾಜಿಕ ಸಾಂಸತಿಕ ವ್ಯವಸ್ಥೆಗೊಂದು ರೂಪವನ್ನು ನೀಡಿರಬೇಕು ಮತ್ತು ದೇಶಾದ್ಯಂತ ಜನತೆಯ ರಾಜಕೀಯ ಹಾಗೂ ಆರ್ಥಿಕ ಭದ್ರತೆಗೆ ಕೂಡ ತನ್ನ ಕೊಡುಗೆಯನ್ನು ನೀಡಿರಬೇಕು. ಇಸ್ಲಾಮೀ ಗುಂಪುಗಳು ಮುಂದೆ ಹೊರಗಿನಿಂದ ನಡೆಸಿದ ಭೀಕರ ದಾಳಿಯನ್ನು ಎದುರಿಸಲು ಬೇಕಾದ ಗಟ್ಟಿ ತಳಪಾಯವನ್ನು ಕೂಡ ಒದಗಿಸಿರಬೇಕು. ಈ ಶಕ್ತಿಶಾಲಿಯಾದ ಸಾಂಸ್ಕೃತಿಕ, ಆಧ್ಯಾತ್ಮಿಕ ಬಂಧ ಅಲ್ಲವಾಗಿದ್ದರೆ ಇಸ್ಲಾಮಿನ ದಾಳಿಗೆ ಗುರಿಯಾದ ಬೇರೆ ದೇಶಗಳ ಗತಿಯೇ ಭಾರತಕ್ಕೂ ಆಗುತ್ತಿತ್ತು; ಇಸ್ಲಾಮ್ ಇಲ್ಲಿ ಸರ್ವವ್ಯಾಪಿ ಆಗುತ್ತಿತ್ತು.”
ಶ್ರೀ ರಾಮಾನುಜರ ವ್ಯಾಖ್ಯಾನ ಬಂದು ಶತಮಾನದೊಳಗೆ ಸಂತ ಜ್ಞಾನೇಶ್ವರರಿಂದ ಭಗವದ್ಗೀತೆಯ ಬಗ್ಗೆ ಅತ್ಯಂತ ಆಕರ್ಷಕ ಮತ್ತು ಸೃಷ್ಟಿಶೀಲವಾದ ಗ್ರಂಥ ಬಂತು. ಜ್ಞಾನೇಶ್ವರರು ಈಗಿನ ಭಾರತದ ಪಶ್ಚಿಮಭಾಗದ ಮಹಾರಾಷ್ಟ್ರದಿಂದ ಬಂದವರು.
ಸಂತ ಜ್ಞಾನೇಶ್ವರ
ಜ್ಞಾನೇಶ್ವರರ ಕುರಿತು ಹೀಗೆ ಹೇಳಲಾಗುತ್ತದೆ: “ಜನತೆಗೆ ಅವರ ದೈನಂದಿನ ಜೀವನದ ನಡುವೆ ಅನುಕೂಲವಾಗುವ ರೀತಿಯಲ್ಲಿ ಭಗವದ್ಗೀತೆಯ ಸಂದೇಶವನ್ನು ತಂದ ಜ್ಞಾನೇಶ್ವರರು ಭಗವದ್ಧರ್ಮವನ್ನು ಗಟ್ಟಿಗೊಳಿಸಿದರು. ನಿವೃತ್ತಿ, ಅಂದರೆ ತನ್ನ ಸಾಮಾಜಿಕ ಕರ್ತವ್ಯಗಳು ಮತ್ತು ಮತೀಯ ವಿಧಿಗಳನ್ನು ತ್ಯಜಿಸಿ ಯಾರಿಗೂ ಮೋಕ್ಷವನ್ನು ಗಳಿಸಲು ಸಾಧ್ಯವಿಲ್ಲ; ಬದಲಾಗಿ ಪ್ರವೃತ್ತಿ, ಅಂದರೆ ಸಾಮಾಜಿಕ ಮತ್ತು ಮತೀಯ ಕರ್ತವ್ಯಗಳನ್ನು ನಿರ್ವಹಿಸುತ್ತಾ ಅವುಗಳ ಫಲಾಪೇಕ್ಷೆಯನ್ನು ತ್ಯಜಿಸುವುದರಿಂದ ಮೋಕ್ಷವನ್ನು ಗಳಿಸಬಹುದು ಎನ್ನುವುದು ಭಗವದ್ಧರ್ಮದ ಮೂಲಭೂತ ಅಂಶವಾಗಿದೆ.”
ಒಟ್ಟಿನಲ್ಲಿ ಸಂತ ಜ್ಞಾನೇಶ್ವರರು ಮಹಾರಾಷ್ಟ್ರದಲ್ಲಿ ಗೀತೆಯ ಮೂಲಕ ಸರ್ವತೋಮುಖವಾದ ಒಂದು ಸಾಂಸ್ಕೃತಿಕ ಪುನರುಜ್ಜೀವನವನ್ನು ತಂದರು. ಅದರಿಂದ ಹಲವಾರು ಆಧ್ಯಾತ್ಮಿಕ ನೇತಾರರು ಹುಟ್ಟಿಕೊಂಡರು; ಪ್ರಬಲವಾದ ಚಳವಳಿಗಳು ಉದ್ಭವಿಸಿದವು. ಅಂತಿಮವಾಗಿ ಅದು `ಹಿಂದವೀ ಸ್ವರಾಜ್-ಸ್ಥಾಪನೆಗೆ ಅನುಕೂಲವಾದ ವಾತಾವರಣವನ್ನು ನಿರ್ಮಿಸಿತು; ಶಿವಾಜಿಯೇ ಹಿಂದವೀ ಸ್ವರಾಜ್ನ ರೂವಾರಿ. ಮುಸ್ಲಿಂ ಸಾಮ್ರಾಜ್ಯಶಾಹಿಯ ಕರಾಳದಿನಗಳಲ್ಲಿ ಹಿಂದೂ ಧರ್ಮವನ್ನು ಉಳಿಸಿದುದಕ್ಕಾಗಿ ಇಡೀ ದೇಶ ಈ ವೇದಾಂತಿ-ಯೋಧನಿಗೆ ಕೃತಜ್ಞವಾಗಿದೆ.
ಮಧುಸೂದನ ಸರಸ್ವತಿ
ಮುಂದೆ ಮಧುಸೂದನ ಸರಸ್ವತಿ ಅವರು ೧೬ನೇ ಶತಮಾನದಲ್ಲಿ ತಮ್ಮ ವ್ಯಾಖ್ಯಾನ `ಗೂಢಾರ್ಥ ದೀಪಿಕಾ’ವನ್ನು ಬರೆದರು. ಇವತ್ತಿನ ಉತ್ತರಪ್ರದೇಶದ ಕನೌಜ್ನಲ್ಲಿ ಜನಿಸಿ, ಬಂಗಾಳದಲ್ಲಿ ಬೆಳೆದ ಅವರು ತಮ್ಮ ವ್ಯಾಖ್ಯಾನವನ್ನು ಬರೆದದ್ದು ವಾರಾಣಸಿಯಲ್ಲಿ. ಅವರು ಬರೆದ ಕಾಲ ಮತ್ತು ಉದ್ದೇಶಗಳು ಸ್ಮರಣಾರ್ಹವೆನಿಸಿವೆ. ಸಮಾಜದಿಂದ ಬಂದ ಕಳವಳಪೂರಿತ ಕರೆಗೆ ಓಗೊಟ್ಟು ಅವರದನ್ನು ಬರೆದಿದ್ದು, ಆ ಹಿನ್ನೆಲೆಯಲ್ಲಿ ಅದನ್ನು ಅರ್ಥೈಸಿಕೊಳ್ಳಬೇಕಾಗಿದೆ.
ಗೀತೆ ಅರ್ಜುನನಿಗೆ ಏನನ್ನು ಮಾಡಿತೋ ಅದು ಆರಂಭ ಮಾತ್ರ. ಭಾರತದ ಇತಿಹಾಸದಲ್ಲಿ ಹಲವು ಬಾರಿ ಅಂತಹ ಸನ್ನಿವೇಶ ಮರುಕಳಿಸಿದೆ. –ಭಗವದ್ಗೀತೆ
ಸ್ವಾಮಿ ವಿವೇಕಾನಂದ
ಭಾರತೀಯ ಪುನರುತ್ಥಾನದ ದೀಪವಾಹಕರೂ ನಮ್ಮ ಸ್ವಾತಂತ್ರ್ಯಹೋರಾಟದ ಸ್ಫೂರ್ತಿಬಿಂದುವೂ ಆದ ಸ್ವಾಮಿ ವಿವೇಕಾನಂದರು ನಮ್ಮ ಇತಿಹಾಸದ ತಿರುವಿನ ಹೊತ್ತಿಗೆ ಕಾಣಿಸಿಕೊಂಡರು. ಅವರು ಭಗವದ್ಗೀತೆಗೆ ವ್ಯಾಖ್ಯಾನ ಬರೆಯಲಿಲ್ಲ. ಅವರಿಗೆ ಬರೆಯುವುದಕ್ಕೆ ಸಮಯವಿರಲಿಲ್ಲ; ಬರೆಯುವ ಉದ್ದೇಶ ಕೂಡ ಇರಲಿಲ್ಲವೇನೋ. ಜನಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸುವುದು ಮತ್ತು ವಿದೇಶೀ ಸಾಮ್ರಾಜ್ಯಶಾಹಿಯನ್ನು ಕಿತ್ತೊಗೆಯುವಲ್ಲಿ ಭಗವದ್ಗೀತೆಗಿದ್ದ ಮಹತ್ತ್ವ ಅವರಿಗೆ ತಿಳಿದಿತ್ತು. ತನ್ನ ದೇಶಬಾಂಧವರು ತೀವ್ರವಾದ ಅಸಹಾಯಕತೆಯ ಭಾವನೆಯಿಂದ ಬಳಲುತ್ತಿದ್ದಾರೆನ್ನುವುದು ಸ್ವಾಮಿಜೀಯವರಿಗೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದಲೇ ಅವರು ಆತ್ಮವಿಶ್ವಾಸ ಮತ್ತು ಹೊಣೆಗಾರಿಕೆಯ ಮನೋಭಾವನೆಗಳಿಗೆ ಒತ್ತುನೀಡಿದರು. ಇದಕ್ಕಾಗಿ ಅವರು ಬಹಳಷ್ಟು ಆಧರಿಸಿದ್ದು ಭಗವದ್ಗೀತೆಯನ್ನು. ಅದರಿಂದ ಅವರು ಧಾರಾಳವಾಗಿ ಉದ್ಧರಿಸುತ್ತಿದ್ದರು. “ಮನುಷ್ಯ ತಾನು ಅಸಹಾಯನೆಂದು ಭಾವಿಸುವುದು ಅಗಾಧವಾದ ತಪ್ಪೇ ಸರಿ. ಯಾರ ಸಹಾಯವನ್ನೂ ನೆಚ್ಚಿಕೊಳ್ಳುವುದು ಬೇಡ. ನಮಗೆ ನಮ್ಮ ಸಹಾಯವೇ ಸಾಕು. ನಮಗೆ ನಾವು ಸಹಾಯ ಮಾಡಲಾರೆವಾದರೆ ಯಾರೂ ನಮಗೆ ಸಹಾಯ ಮಾಡಲಾರರು” – ಇದು ಅವರ ಮಾತು.
ಗೀತೆ ಹೀಗೆ ಹೇಳುತ್ತದೆ: “ನಿನಗೆ ನೀನೇ ಗೆಳೆಯ ಮತ್ತು ನಿನಗೆ ನೀನೇ ಶತ್ರು. ನಮ್ಮ ಮನಸ್ಸಲ್ಲದೆ ನಮಗೆ ಬೇರೆ ಯಾರೂ ಶತ್ರುಗಳಿಲ್ಲ, ತಾನಲ್ಲದೆ ಬೇರೆ ಮಿತ್ರನೂ ಇಲ್ಲ; ಇದೇ ಅಂತಿಮ ಮತ್ತು ಬಹುದೊಡ್ಡ ಪಾಠ.”
ಸ್ವಾಮಿ ವಿವೇಕಾನಂದರು ಒಂದೆಡೆ ಹೀಗೆ ಹೇಳಿದ್ದಾರೆ: “ಗೀತೆಯ ಆರಂಭದಲ್ಲೇ ಈ ಮಹತ್ತ್ವದ ಶ್ಲೋಕ ಬರುತ್ತದೆ: ‘ಎದ್ದೇಳು, ಓ ದೊರೆಯೆ, ಈ ಕ್ಷುದ್ರವಾದ ಹೃದಯದೌರ್ಬಲ್ಯವನ್ನು, ಶಕ್ತಿಹೀನತೆಯನ್ನು ತೊರೆದುಬಿಡು. ಎದ್ದೇಳು, ಯುದ್ಧಮಾಡು. ಒಂದು ಹೆಜ್ಜೆಯೂ ಹಿಂದಿಡಬೇಡ; ಏನೇ ಬಂದರೂ ಹೊರಡು.’ ಗ್ರಹನಕ್ಷತ್ರಗಳು ಅಳಿದುಹೋಗಲಿ. ಇಡೀ ಜಗತ್ತೇ ಬೇಕಾದರೂ ನಮ್ಮ ವಿರುದ್ಧ ನಿಲ್ಲಲಿ. ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ. ಇದಕ್ಕೆ ನಿಮ್ಮ ಪ್ರಾಣವನ್ನೇ ಅರ್ಪಿಸಬೇಕಾದರೂ ಅಂಜದಿರಿ….”
ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ತಲೆದೋರಿದ ಜನತೆಯ ತೀವ್ರವಾದ ದ್ವೇಷವನ್ನು ಮೃದುಗೊಳಿಸುವ `ಸುರಕ್ಷತಾ ಕವಾಟ'(Safety valve)ವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜನಿಸಿತ್ತಾದರೂ ಕ್ರಮೇಣ ಅದು ಗಟ್ಟಿಯಾಗುತ್ತಾ ದೇಶದ ಜನತೆಯ ತೀವ್ರ ಆಕಾಂಕ್ಷೆಯಾದ `ಪೂರ್ಣ ಸ್ವಾತಂತ್ರ್ಯ'(ಪೂರ್ಣ ಸ್ವರಾಜ್)ದ ಮಾತನ್ನು ಆಡಲಾರಂಭಿಸಿತು. ಈ ಕ್ರಾಂತಿಕಾರಿ ಬದಲಾವಣೆಗೆ ಕಾರಣ ಸ್ವಾಮಿ ವಿವೇಕಾನಂದ ಮತ್ತು ಭಗವದ್ಗೀತೆಯಿಂದ ಪ್ರಭಾವಿತರಾದ ನಾಯಕರೆಂದರೆ ತಪ್ಪಲ್ಲ. ಬಾಲ ಗಂಗಾಧರ ತಿಲಕ್, ಮಹಾಯೋಗಿ ಶ್ರೀ ಅರವಿಂದರು ಈ ವರ್ಗಕ್ಕೆ ಸೇರುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಜನಸಮುದಾಯವನ್ನು ಕ್ರಿಯಾಶೀಲಗೊಳಿಸುವ ಉದ್ದೇಶದಿಂದ ಅವರೆಲ್ಲರೂ ಭಗವದ್ಗೀತೆಗೆ ತಮ್ಮ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಗೀತೆಯ ಬೋಧನೆಯ ವಿಷಯದಲ್ಲಿ ಅವರೆಲ್ಲ ಸ್ವತಂತ್ರವಾದ ಅಭಿಪ್ರಾಯಗಳನ್ನು ಹೊಂದಿದ್ದಿರಬಹುದು. ಆದರೆ ಸ್ವಾತಂತ್ರ್ಯ ಹೋರಾಟವನ್ನು ಬಲಪಡಿಸಲು ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕಪಿಮುಷ್ಟಿಯಿಂದ ಭಾರತವನ್ನು ವಿಮೋಚನೆಗೊಳಿಸುವಲ್ಲಿ ಗೀತೆಯ ಮಹತ್ತ್ವವೇನು ಎಂಬುದು ಎಲ್ಲರಿಗೂ ದೃಢವಾಗಿ ತಿಳಿದಿತ್ತು.
ಪರಮಧ್ಯೇಯ
ಇತರ ದೇಶಗಳಲ್ಲಿ ಸ್ವಾತಂತ್ರ್ಯ ಹೋರಾಟವೆಂದರೆ ಅಧಿಕಾರಕ್ಕಾಗಿ ಹಂಬಲಿಸುವ ರಾಜಕೀಯ ನಾಯಕರು ರಾಜಕೀಯ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟವಾಗಿತ್ತು. ಆದರೆ ಭಾರತದಲ್ಲಿ ಅದು ಅಷ್ಟೇ ಆಗಿರಲಿಲ್ಲ; ಇಲ್ಲಿ ಅದು ಇನ್ನಷ್ಟು ಆಳವೂ ಅಗಲವೂ ಆಗಿತ್ತು. ನಮ್ಮ ಪ್ರಮುಖ ನಾಯಕರಲ್ಲಿ ಬಹಳಷ್ಟು ಜನ ವೈಭವೋಪೇತ ಸಾಂಸ್ಕೃತಿಕದರ್ಶನ ಉಳ್ಳವರಾಗಿದ್ದರು. ಅವರಿಗೆ ಭಾರತದ ಸ್ವಾತಂತ್ರ್ಯವೆಂದರೆ ದೇಶದ ವಿಮೋಚನೆಯಷ್ಟೇ ಆಗಿರಲಿಲ್ಲ; ತನಗೆ ಮಾತ್ರವಲ್ಲ ಇಡೀ ಜಗತ್ತಿಗೆ ಅಧ್ಯಾತ್ಮವನ್ನು ತಲಪಿಸುವುದೇ ಈ ದೇಶದ ಪರಮಧ್ಯೇಯ ಎಂಬುದನ್ನವರು ತಿಳಿದಿದ್ದರು. ನಾವು ಈಗಾಗಲೇ ನೋಡಿರುವಂತೆ ಅವರಲ್ಲಿ ಬಹುತೇಕ ಎಲ್ಲರೂ ತಮ್ಮ ಸ್ಫೂರ್ತಿಯನ್ನು ಭಗವದ್ಗೀತೆಯಿಂದ ಪಡೆದವರು. ನಮ್ಮ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳು ಕೂಡ ನೇಣುಗಂಬಕ್ಕೆ ಏರುವುದನ್ನು ಸಂತೋಷದ ವಿಷಯವೆಂದು ತಿಳಿದಿರುವುದರ ಜತೆಗೇ ನೇಣುಗಂಬವನ್ನು ಏರಲು ಹೋಗುವಾಗ ಭಗವದ್ಗೀತೆಯ ಒಂದು ಪ್ರತಿಯನ್ನು ತಮ್ಮೊಂದಿಗೆ ಒಯ್ಯಲು ಮರೆಯುತ್ತಿರಲಿಲ್ಲ. ನೇತಾಜಿ ಸುಭಾಷ್ಚಂದ್ರಬೋಸರು ತಮ್ಮ ಜೀವನದುದ್ದಕ್ಕೂ ನಿರಂತರ ಮಾರ್ಗದರ್ಶಿ ಎಂಬಂತೆ ಭಗವದ್ಗೀತೆಯ ಪುಸ್ತಕವನ್ನು ತಮ್ಮ ಬಳಿ ಇರಿಸಿಕೊಳ್ಳುತ್ತಿದ್ದರು. ಈ ರೀತಿಯಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟವು ಜಗತ್ತಿನಲ್ಲಿ ವಸಾಹತುಶಾಹಿಯ ಅಳಿವಿನ ಆರಂಭ ಎನ್ನುವಂತೆ ಜಾಗತಿಕ ಇತಿಹಾಸದ ತಿರುವಿನ ಬಿಂದುವಾಯಿತು.
ಸ್ವಾತಂತ್ರ್ಯೋತ್ತರ ಭಾರತವು ತಿಲಕ್, ಗಾಂಧಿ, ಶ್ರೀ ಅರವಿಂದರು ಮುಂತಾದವರ ಪರಂಪರೆಯನ್ನು ಮುಂದುವರಿಸಬಹುದು, ಭಾರತದ ಪುನರ್ನಿರ್ಮಾಣಕ್ಕಾಗಿ ಗೀತೆಯ ಸಂದೇಶವನ್ನು ಎತ್ತಿಹಿಡಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ತಾರ್ಕಿಕವಾಗಿ ಅಂತಹ ನಿರೀಕ್ಷೆ ಸಹಜವೇ ಆಗಿತ್ತು. ಆದರೆ ಅದು ನಡೆಯಲಿಲ್ಲ. ಸ್ವಾತಂತ್ರ್ಯೋತ್ತರ ಭಾರತದ ನಾಯಕರು ಭಗವದ್ಗೀತೆ ಒಂದು ಮತೀಯ ಗ್ರಂಥ ಎನ್ನುವ ಭ್ರಮೆಗೆ ಸಿಲುಕಿದರು. ದೇಶದ ಜಾತ್ಯತೀತತೆಯ ಪರಿಕಲ್ಪನೆಗೂ ಇದಕ್ಕೂ ಹೊಂದಾಣಿಕೆಯಾಗುವುದಿಲ್ಲ ಎಂಬ ನಿಲವನ್ನು ತಳೆದರು. ಇಂತಹ ಹುಸಿ ಜಾತ್ಯತೀತತೆಯನ್ನು ಅವರು ದೇಶದ ಮೇಲೆ ಹೇರಿದರು. ತಮ್ಮದೇ ಜನರ ಒಂದು ವರ್ಗವನ್ನು ಖುಷಿಪಡಿಸುವುದು ಅವರ ಒಂದು ಉದ್ದೇಶವಾದರೆ ಹೊರಜಗತ್ತಿಗೆ ಭಾರತ ಆಧುನಿಕ ರಾಷ್ಟ್ರವಾಗಿ ಪರಿವರ್ತಿತವಾಗಿದೆ ಎಂದು ತೋರಿಸುವುದು ಇನ್ನೊಂದು ಉದ್ದೇಶ ಆಗಿರುವಂತಿದೆ. ಪರಿಣಾಮವಾಗಿ ಎಲ್ಲ ಸಾರ್ವಜನಿಕ ರಂಗಗಳಲ್ಲಿ ಭಗವದ್ಗೀತೆಗೆ ನಿಷೇಧ ಹೇರಿದಂತಹ ವಾತಾವರಣ ನಿರ್ಮಾಣವಾಯಿತು. ಅದು ಆಶ್ರಮ ಮತ್ತು ಮಠಗಳಿಗೆ ಸೀಮಿತವಾಗಿ ಉಳಿದು ಜಗತ್ತಿನ ಬಗ್ಗೆ ವೈರಾಗ್ಯವನ್ನು ತಳೆದಿರುವ ಸ್ವಾಮಿಗಳು ಮತ್ತು ಸಂನ್ಯಾಸಿಗಳ ಪ್ರವಚನದ ವಸ್ತುವಾಯಿತು. ಗಾಂಧಿ, ತಿಲಕ್ ಮತ್ತಿತರರು ಗೀತೆಗೆ ಸಾರ್ವಜನಿಕ ಜೀವನದಲ್ಲಿ ಎಂತಹ ಸ್ಥಾನವನ್ನು ನೀಡಿದ್ದರೋ ಅದಕ್ಕೆ ಇದು ಪೂರ್ತಿ ವಿರುದ್ಧವಾಗಿದೆ. ನಿಜವಾಗಿಯೂ ಬೇಸರದ ಸಂಗತಿಯೆಂದರೆ ಸಾರ್ವಜನಿಕ ಜೀವನದಿಂದ ಭಗವದ್ಗೀತೆಯನ್ನು ದೂರ ದೂರ ಇಟ್ಟಂತೆಯೇ ಆ ಗ್ರಂಥ ಒತ್ತುನೀಡಿದ ವೈರಾಗ್ಯ, ನಿಸ್ಸ್ವಾರ್ಥತೆ, ತ್ಯಾಗದಂತಹ ಮೌಲ್ಯಗಳು ಸಮಾಜದಲ್ಲಿ ಕುಸಿಯುತ್ತಾ ಬಂದಿವೆ. ಇವತ್ತು ನಾವು ಕಾಣುತ್ತಿರುವ ಚಾರಿತ್ರ್ಯದ ಬಿಕ್ಕಟ್ಟು ಮತ್ತು ಸಾರ್ವಜನಿಕ ಜೀವನದಲ್ಲಿನ ನೈತಿಕ ಅಪಮೌಲ್ಯಗಳಿಗೆ ಒಂದು ಪ್ರಧಾನ ಕಾರಣ ಭಗವದ್ಗೀತೆಯ ಬಗೆಗೆ ತೋರಿಸಲಾದ ಅಲಕ್ಷ್ಯ ಎನ್ನಬಹುದು.
ಸ್ವಾಮಿ ಚಿನ್ಮಯಾನಂದ
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕ್ರಿಯಾಶೀಲರಾದ ಸಂತ ಸ್ವಾಮಿ ಚಿನ್ಮಯಾನಂದರು ಗೀತಾ ಸಂದೇಶದ ಪ್ರಚಾರಪರಂಪರೆಯನ್ನು ದೇಶದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಮುಂದುವರಿಸಿದರು. ಭಗವದ್ಗೀತೆ ಮತ್ತದರ ಸಂದೇಶವನ್ನು ಜಗತ್ತಿನಾದ್ಯಂತ ಹಬ್ಬಿಸುವ ಆಂದೋಲನವನ್ನು ತಮ್ಮ ಪರಮಧ್ಯೇಯವಾಗಿ ಅವರು ಸ್ವೀಕರಿಸಿದರು. ಅದಕ್ಕಾಗಿ ನೂರಾರು ‘ಗೀತಾ ಜ್ಞಾನಯಜ್ಞ’ಗಳನ್ನು ಕೈಗೊಂಡರು. ಗೀತೆಯನ್ನು ಕುರಿತು ಅದೆಷ್ಟೋ ಗ್ರಂಥಗಳನ್ನು ಬರೆದರು. ಎಲ್ಲ ನಿರ್ಣಾಯಕ ಹಂತಗಳ ನಾಯಕರು ಮತ್ತು ನೀತಿನಿರೂಪಕರನ್ನು ಕೊಡುವ ಸಮಾಜದ ಇಂಗ್ಲಿಷ್ ಶಿಕ್ಷಣ ಹೊಂದಿದ ವರ್ಗವನ್ನು ಅವರು ತಮ್ಮ ಗುರಿಯಾಗಿ ಇರಿಸಿಕೊಂಡರು. ಸ್ವಾಮಿಜೀ ಅವರ ಪರಂಪರೆಯನ್ನು ಅವರ ಉತ್ತರಾಧಿಕಾರಿಗಳು ಅದೇ ಉತ್ಸಾಹದೊಂದಿಗೆ ಸತ್ತ್ವಯುತವಾಗಿ ಮುಂದುವರಿಸುತ್ತಿದ್ದಾರೆ.
ಗೀತೆಯ ವೇದಾಂತವನ್ನು ಅಳವಡಿಸಿಕೊಂಡು ಸಂಘಟಿತ ರಚನಾತ್ಮಕ ಚಟುವಟಿಕೆಗಳನ್ನು ನಡೆಸುವ ಮೂಲಕ ಪಾಂಡುರಂಗಶಾಸ್ತ್ರಿ ಆಠವಳೆಯವರ ‘ಸ್ವಾಧ್ಯಾಯ’ದಂತಹ ಸಾಮೂಹಿಕ ಚಳವಳಿಗಳು ಮಹಾರಾಷ್ಟ್ರ ಮತ್ತು ನೆರೆಕರೆಯ ಪ್ರದೇಶದಲ್ಲಿ ಜನರಿಗೆ, ವಿಶೇಷವಾಗಿ ಅವಕಾಶವಂಚಿತರಿಗೆ ಶ್ಲಾಘನೀಯ ಸೇವೆ ಸಲ್ಲಿಸುತ್ತಿವೆ. ಈ ಕೆಲಸಗಳು ಗೀತೆಯ ಪ್ರಾತ್ಯಕ್ಷಿಕೆಯಂತಿವೆ.
ಭಗವದ್ಗೀತೆಯ ಎಲ್ಲ ಪ್ರಮುಖ ವ್ಯಾಖ್ಯಾನಕಾರರು ಮಹಾನ್ಯುಗ ನಿರ್ಮಾತೃಗಳು ಕೂಡ ಹೌದು. ಜನಸಮುದಾಯದ ಮೇಲೆ ಗೀತೆ ಯಾವ ಬಗೆಯ ಪ್ರಭಾವವನ್ನು ಬೀರಬಲ್ಲದು, ಅದನ್ನು ಬಳಸಿಕೊಳ್ಳುವ ಮೂಲಕ ಅವರಿಂದ ಅದು ಸಾಧ್ಯವಾಯಿತು. ಕಾಲ ಸರಿದು ಹೊಸ ಸನ್ನಿವೇಶಗಳು ರೂಪುಗೊಂಡಾಗ ಗೀತೆಗೆ ಹೊಸ ವ್ಯಾಖ್ಯಾನ ಅಗತ್ಯವೆನಿಸುತ್ತದೆ. ಎಲ್ಲ ಮಹಾನ್ ವ್ಯಾಖ್ಯಾನಕಾರರು ಕಾಲಕಾಲಕ್ಕೆ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಪಠ್ಯಕ್ಕೆ ಯಾವುದೇ ಹಿಂಸೆಯನ್ನುಂಟುಮಾಡದೆ ಗೀತೆಗೆ ಅತ್ಯಂತ ಹೊಸತಾದ ವ್ಯಾಖ್ಯಾನವನ್ನು ಮಾಡಬಹುದು; ಅದರಿಂದ ಮೂಲಭೂತ ತತ್ತ್ವಗಳಿಗೆ ಯಾವ ತೊಂದರೆಯೂ ಆಗುವುದಿಲ್ಲ. ಅಂತಹ ಸ್ಥಿತಿಸ್ಥಾಪಕಗುಣ ಅದಕ್ಕಿದೆ; ಇದೇ ಭಗವದ್ಗೀತೆಯ ಅಸದೃಶವಾದ ಪಾರಮ್ಯವಾಗಿದೆ.?
(ಅನುವಾದ: ಎಚ್. ಮಂಜುನಾಥ ಭಟ್)