ನಾವೆಷ್ಟೇ ಬೇಡವೆಂದರೂ ಕ್ರಿಕೆಟ್ ಎಂಬ ೧೧ ಮಂದಿ ಆಡುವ ಆಟ ನಮ್ಮ ದೇಶದ ಅಂತರಾಳವನ್ನು ಆಕ್ರಮಿಸಿದೆ. ಅದನ್ನೀಗ ನಮ್ಮದೇ ಆಟ ಎಂದು ಅನಿವಾರ್ಯವಾಗಿ ಒಪ್ಪಿಕೊಳ್ಳುವ ಸ್ಥಿತಿಗೆ ಬಂದಿzವೆ. ಯೂರೋಪ್ಗೆ ಫುಟ್ಬಾಲ್ ಹೇಗೋ ಹಾಗೆ ಭಾರತಕ್ಕೆ ಕ್ರಿಕೆಟ್ ಎಂಬುದು ನಿಕ್ಕಿಯಾಗಿದೆ. ಕ್ರಿಕೆಟ್ ಇಂಗ್ಲೆಂಡ್ನಲ್ಲಿ ಹುಟ್ಟಿದ್ದರೂ ಅದು ಭಾರತದ ಕ್ರೀಡಾಕ್ಷೇತ್ರದಲ್ಲಿ ದೊಡ್ಡಣ್ಣನಾಗಿ ರಾರಾಜಿಸುತ್ತಿದೆ. ಎಷ್ಟೇ ಅವಸರದ ಕೆಲಸವಿದ್ದರೂ ಕ್ರಿಕೆಟ್ ಪಂದ್ಯದ ವೇಳೆ ಸ್ಕೋರ್ ಎಷ್ಟು ಎಂದು ಕ್ರಿಕೆಟ್ ನಿಂದಕರೂ ಕೇಳಿ ತಿಳಿದುಕೊಳ್ಳುವ ಸ್ಥಿತಿ ಇಂದು ದೇಶದಲ್ಲಿದೆ.
ಕ್ರಿಕೆಟ್ಗೆ ಘನತೆ ತಂದುಕೊಟ್ಟ ೫ ದಿನಗಳ ಟೆಸ್ಟ್ ಆಟ ಬೇಸರವಾಗಿ, ಅನಂತರ ಏಕದಿನ ಕ್ರಿಕೆಟ್ ಎಂಬ ತಲಾ ೫೦ ಓವರ್ಗಳ ಕ್ರಿಕೆಟ್ ಪಂದ್ಯ ಹುಟ್ಟಿಕೊಂಡಿತು. ಅದು ಕೂಡ ಬೇಸರವೆನಿಸಿ ಟ್ವೆಂಟಿ-೨೦ ಎಂಬ ತಲಾ ೨೦ ಓವರ್ಗಳ ಹೊಸ ಕ್ರಿಕೆಟ್ ಅವತಾರ ಜನ್ಮತಾಳಿದ್ದು ಈಗ ಇತಿಹಾಸ. ಚೆಂಡು-ದಾಂಡಿನ ಆಟವನ್ನು ಇನ್ನಷ್ಟು ಆಕರ್ಷಕವಾಗಿಸುವ ಯಾರದೋ ಹಠದ ತೆವಲಿಗೆ ಹುಟ್ಟಿದ ಕೂಸು ಈ ಟಿ-೨೦ ಕ್ರಿಕೆಟ್. ಟಿ-೨೦ ಕ್ರಿಕೆಟ್ ಆರಂಭವಾದ ಮೇಲೆ ಆಟದ ಖದರೇ ಬದಲಾಯಿತು. ಮೊದಲು ಆಸ್ಟ್ರೇಲಿಯಾದವರು ಪ್ರಾಯೋಗಿಕವಾಗಿ ಹೊರತಂದ ಈ ಆಟಕ್ಕೆ ಒಂದು ವಾಣಿಜ್ಯಸ್ವರೂಪ ನೀಡಿ ಸಾವಿರಾರು ಕೋಟಿ ಹಣವನ್ನು ಬಾಚಿ ರಾತ್ರಿ ಬೆಳಗಾಗುವುದರೊಳಗೆ ಕುಬೇರನಾದದ್ದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂಬ ಸಂಸ್ಥೆ. ಇದನ್ನು ಕಟ್ಟಿ ಬೆಳೆಸಿದ ಲಲಿತ್ ಮೋದಿ, ಅನಂತರ ಕಾನೂನು ಉಲ್ಲಂಘನೆ, ಅಕ್ರಮ ಸಂಪತ್ತುಗಳಿಕೆ ಇತ್ಯಾದಿ ಕಾರಣಗಳಿಗಾಗಿ ಐಪಿಎಲ್ ಮುಖ್ಯಸ್ಥನ ಸ್ಥಾನದಿಂದ ಪದಚ್ಯುತಗೊಂಡು ವಿಚಾರಣೆ ಎದುರಿಸಬೇಕಾಗಿ ಬಂದಿದ್ದು ಈಗ ಹಳೆಯ ವಿದ್ಯಮಾನ.
೨೦೦೮ರಲ್ಲಿ ಐಪಿಎಲ್ ಆರಂಭವಾದಾಗ ಅದರ ಬಗ್ಗೆ ಎಲ್ಲರಿಗೂ ಒಂದಿಷ್ಟು ಗೌರವ ಭಾವನೆಯಿತ್ತು. ಕ್ರಿಕೆಟ್ಗೆ ಹೊಸ ಸ್ವರೂಪ ನೀಡಿ ಕೆಲವೇ ಗಂಟೆಗಳಲ್ಲಿ ಅಭಿಮಾನಿಗಳಿಗೆ ಕ್ರಿಕೆಟ್ ರಸದೌತಣ ಉಣಬಡಿಸುವ ಹೆಗ್ಗಳಿಕೆಗೆ ಅದನ್ನು ಕೊಂಡಾಡಲಾಗಿತ್ತು. ಖ್ಯಾತನಾಮರಲ್ಲದೆ ಅನೇಕ ಉದಯೋನ್ಮುಖ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿದೆ ಎಂಬುದೂ ಐಪಿಎಲ್ ಬಗೆಗಿನ ಗೌರವಕ್ಕೆ ಇನ್ನೊಂದು ಕಾರಣ. ಐಪಿಎಲ್ ಟೂರ್ನಿಯಿಂದಾಗಿ ಸಾಕಷ್ಟು ಯುವ ಪ್ರತಿಭೆಗಳು ಬೆಳಕಿಗೆ ಬಂದಿದ್ದು ನಿಜ. ಬರೇ ಟೆಸ್ಟ್, ಏಕದಿನ ಪಂದ್ಯಗಳಿರುತ್ತಿದ್ದರೆ ಈ ಹೊಸ ಪ್ರತಿಭೆಗಳಿಗೆ ಅವಕಾಶ ಲಭ್ಯವಾಗುತ್ತಿರಲಿಲ್ಲ ಅಥವಾ ಲಭ್ಯವಾಗುವುದಕ್ಕೆ ದೀರ್ಘಕಾಲದವರೆಗೆ ಕಾಯಬೇಕಾಗಿತ್ತು. ಆ ವೇಳೆಗೆ ವಯಸ್ಸು ಮೀರಿ ನೇಪಥ್ಯಕ್ಕೆ ಆಟಗಾರರು ಸರಿದಿರುತ್ತಿದ್ದರು.
ಅನಾಗರಿಕ ಕೊಡುಗೆ
ಐಪಿಎಲ್ ಬಗ್ಗೆ ಇವೆಲ್ಲ ಧನಾತ್ಮಕ ಅಂಶಗಳಾಗಿರಬಹುದಾದರೂ ಅದು ಸೃಷ್ಟಿಸಿದ ಅನಾಹುತ, ಅಪಸವ್ಯಗಳಿಗೇನೂ ಕೊರತೆಯಿಲ್ಲ. ಪ್ರತಿಯೊಂದು ತಂಡಕ್ಕೆ ಫ್ರಾಂಚೈಸಿಗಳಿಂದ ಕ್ರಿಕೆಟ್ ಆಟಗಾರರ ಹರಾಜು ಐಪಿಎಲ್ನ ಕೆಟ್ಟ ಕೊಡುಗೆ. ಆಟಗಾರರೂ ಮನುಷ್ಯರೇ. ಅವರನ್ನು ಹರಾಜು ಮಾಡುವುದೇ ನಾಗರಿಕ ಸಮಾಜಕ್ಕೆ ಅಗೌರವ ಸೂಚಿಸುವ ಕ್ರಮ. ಐಪಿಎಲ್ ಮಾತ್ರ ಮತ್ತೆ ಮತ್ತೆ ಕ್ರಿಕೆಟಿಗರನ್ನು ಹರಾಜು ಮಾಡುತ್ತಲೇ ಇದೆ.
ಆಟಗಾರರನ್ನು ಗುಲಾಮರಂತೆ ಖರೀದಿಸುವ ಐಪಿಎಲ್ ಫ್ರಾಂಚೈಸಿಗಳು ಅವರನ್ನು ನಡೆಸಿಕೊಳ್ಳುವ ರೀತಿಯೂ ಅಷ್ಟೇ ಕೆಟ್ಟದಾಗಿರುತ್ತದೆ. ತಮ್ಮನ್ನು ಖರೀದಿಸಿದ ತಂಡಗಳ ಮಾಲೀಕರ ಅಣತಿಯಂತೆ ಕ್ರಿಕೆಟಿಗರು ಸೂತ್ರದ ಗೊಂಬೆಗಳಾಗಬೇಕು. ಮಾಲೀಕರು ಬಯಸುವ ತಡರಾತ್ರಿ ಪಾರ್ಟಿಗಳಲ್ಲಿ ಪಾಲ್ಗೊಳ್ಳಬೇಕು. ಜಾಹೀರಾತು ಕಂಪನಿಗಳಿಗೆ ರೂಪದರ್ಶಿಗಳಾಗಬೇಕು. ಬಟ್ಟೆ ಪೂರ್ತಿ ಬಿಚ್ಚಿ ಮೈಮೇಲೆ ಬಟ್ಟೆ ಧರಿಸಿದವರಂತೆ ಕಾಣುವ ಬಣ್ಣ ಬಳಿದುಕೊಂಡು ಕ್ಯಾಮರಾಗೆ ಪೋಸ್ ನೀಡಬೇಕು. ಮದ್ಯ, ಸಿಗರೇಟ್ಗಳ ಜಾಹೀರಾತಲ್ಲೂ ಮಿಂಚಬೇಕು. ಕಾಂಡೋಮ್ ಜಾಹೀರಾತಿಗೂ ಮುಂದೆ ಇಂತಹ ಕ್ರಿಕೆಟಿಗರನ್ನೇ ಬಳಸಿದರೆ ಆಶ್ಚರ್ಯವಿಲ್ಲ! ಅನುಭವದ ಖ್ಯಾತಿ, ಜನಪ್ರಿಯತೆ ಇದ್ದರೂ ಆಟಗಾರರು ಹರಾಜಾಗದೆ, ಯಾವ ತಂಡಕ್ಕೂ ಬೇಡದ `ಹಾಸ್ಯುಂಡು ಬೀಸಿ ಒಗೆದ ಬಾಳೆ ಎಲೆ’ಗಳಾಗುವ ಪರಿಸ್ಥಿತಿ ಇದೆಯಲ್ಲ, ಅದಕ್ಕಿಂತ ಹೀನ ಅವಮಾನ ಇನ್ನೊಂದು ಬೇಕೆ?
ಐಪಿಎಲ್ ೭ನೇ ಆವೃತ್ತಿಯಲ್ಲಿ ಹರಾಜಾಗಿರುವ, ಆಗದಿರುವ ಆಟಗಾರರನ್ನೇ ನೀವೊಮ್ಮೆ ಗಮನಿಸಿ. ಈ ಬಾರಿಯ ವಿಶ್ವಕಪ್ಗೆ ಆಯ್ಕೆಯಾಗದ ಯುವರಾಜ್ ಸಿಂಗ್ ಡೆಲ್ಲಿ ಡೇರ್ಡೆವಿಲ್ಸ್ ತಂಡಕ್ಕೆ ೧೬ ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ! ಇಷ್ಟೊಂದು ದೊಡ್ಡ ಮೊತ್ತಕ್ಕೆ ಇದುವರೆಗೆ ಯಾವ ಆಟಗಾರನೂ ಹರಾಜಾಗಿರಲಿಲ್ಲ. ವಿಶ್ವಕಪ್ಗೆ ಆಯ್ಕೆಯಾಗದ ದಿನೇಶ್ ಕಾರ್ತಿಕ್ ಕೂಡ ೧೦.೫೦ ಕೋಟಿಗೆ ಆರ್ಸಿಬಿ ತಂಡಕ್ಕೆ ಹರಾಜಾಗಿದ್ದಾರೆ. ಈಗ ನಡೆದಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಮೋಘವಾಗಿ ಆಡುತ್ತಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ, ಮಹೇಲ ಜಯವರ್ಧನೆ, ಲಹಿರು ತಿರಿಮನೆ, ವೆಸ್ಟ್ ಇಂಡೀಸ್ನ ದಿನೇಶ್ ರಾಮದಿನ್ ಮೊದಲಾದವರು ಈ ಬಾರಿಯ ಐಪಿಎಲ್ಗೆ ಹರಾಜಾಗಲೇ ಇಲ್ಲ! ಹಾಗಿದ್ದರೆ ಐಪಿಎಲ್ ಹರಾಜಿನ ಮಾನದಂಡವಾದರೂ ಏನು ಎಂಬುದು ಯಕ್ಷಪ್ರಶ್ನೆ.
ಸುಪ್ರೀಂ ಚಾಟಿ
ತಾನು ಏನು ಮಾಡಿದರೂ ಕೇಳುವವರಿಲ್ಲ. ಒಂದಿಷ್ಟು ಕಾಸು ಮುಖದ ಮೇಲೆ ಬಿಸಾಕಿದರೆ ಎಂಥವರ ಬಾಯನ್ನೂ ಬಂದ್ ಮಾಡಬಹುದೆಂದು ಐಪಿಎಲ್ ಹಾಗೂ ಬಿಸಿಸಿಐ ದೊರೆಗಳು ಭಾವಿಸಿದ್ದರು. ಆದರೆ ಸಂಸದೀಯ ಹಣಕಾಸು ಸ್ಥಾಯೀ ಸಮಿತಿ ಹಾಗೂ ಸುಪ್ರೀಂ ಕೋರ್ಟ್ ಐಪಿಎಲ್ ದೊರೆಗಳನ್ನು ತರಾಟೆಗೆ ತೆಗೆದುಕೊಂಡಿದೆ. ಬಿಸಿಸಿಐ ಒಂದು ದೇಶವಲ್ಲ. ಅದು ಭಾರತದಲ್ಲಿರುವ ಒಂದು ಕ್ರೀಡಾ ಸಂಸ್ಥೆ, ಅಷ್ಟೆ. ಈ ನೆಲದ ಕಾನೂನುಗಳನ್ನು ಅದು ಪಾಲಿಸಲೇಬೇಕು ಎಂದು ಸುಪ್ರೀಂಕೋರ್ಟ್ ಚಾಟಿ ಏಟು ನೀಡಿದೆ. ಬಿಸಿಸಿಐ ಮುಖ್ಯಸ್ಥ ಎನ್. ಶ್ರೀನಿವಾಸನ್, ಐಪಿಎಲ್ ಮುಖ್ಯಸ್ಥ ಚಿರಾಯು ಅಮೀನ್ ಮೊದಲಾದವರು ಕೂಲಂಕಷ ವಿಚಾರಣೆಗೆ ಒಳಪಟ್ಟಿದ್ದಾರೆ. ಐಪಿಎಲ್ ಪಂದ್ಯಾವಳಿಯಲ್ಲಿ ಚಿಯರ್ ಗರ್ಲ್ಸ್ಗಳಿಗೆ ಏನು ಕೆಲಸ? ಅಲ್ಲಿ ಅವರ ಪಾತ್ರವೇನು ಎಂದು ಕೋರ್ಟ್ ಕೇಳಿದ್ದಕ್ಕೆ ಬಿಸಿಸಿಐ ಅಧಿಕಾರಿಗಳು ಸಮಂಜಸ ಉತ್ತರ ನೀಡಲು ತಡಬಡಾಯಿಸಿದ್ದಾರೆ. ಆಟಗಾರರು ಬೌಂಡರಿ, ಸಿಕ್ಸರ್ ಬಾರಿಸಿದಾಗ ಮೈದಾನದ ಮೂಲೆಯ ಎತ್ತರದ ವೇದಿಕೆಯಲ್ಲಿ ಟೂ ಪೀಸ್ ತುಂಡುಡುಗೆಯಲ್ಲಿ ಅಂಗಾಂಗಗಳನ್ನು ಬಳುಕಿಸುತ್ತಾ ಕುಣಿಯುವ ಚಿಯರ್ ಗರ್ಲ್ಸ್ ಕ್ರಿಕೆಟ್ ಆಟದ ಅಭಿವೃದ್ಧಿಗೆ ಹೇಗೆ ಪೂರಕವಾಗುತ್ತಾರೆ? ಕ್ರೀಡೆಯನ್ನು ಆಸ್ವಾದಿಸುವವರ ಮೇಲೆ ಅಗ್ಗದ ಅಶ್ಲೀಲತೆಯ ವಾಸನೆಯನ್ನು ಹೀರುವ ಹುನ್ನಾರವೆ? ಕ್ರಿಕೆಟ್ ಬರೀ ಕ್ರೀಡೆಯಾಗಿದ್ದರೆ ಆ ಹೆಸರಿನಲ್ಲಿ ಹಣದ ಹೊಳೆ ಹರಿಸುವ ಅಗತ್ಯವೇನು? ಐಪಿಎಲ್ ಹಂಗಾಮ ಹೆಸರಿನಲ್ಲಿ ನಡೆಯುತ್ತಿರುವ ಅಧ್ವಾನಗಳನ್ನು ಕಣ್ಣಾರೆ ಕಂಡ ಬಹುತೇಕ ಕ್ರಿಕೆಟ್ ಪ್ರೇಮಿಗಳ ಮನದೊಳಗೆ ಮೂಡುವ ಈ ಪ್ರಶ್ನೆಗಳಿಗೆ ಉತ್ತರಿಸುವವರಾರು?
ಕ್ರಿಕೆಟ್ ಆಟಕ್ಕೆ ಲೀಗ್ ಅವತಾರ ಪ್ರಾಪ್ತವಾಗಿದ್ದು ಯೂರೋಪ್ನಿಂದ. ಫುಟ್ಬಾಲ್ ಲೀಗ್ನ ಜೆರಾಕ್ಸ್ ಪ್ರತಿ ಇದು. ಐಪಿಎಲ್ ಹುಟ್ಟಿದ ಬಳಿಕ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್, ಇಂಡಿಯನ್ ಸೂಪರ್ ಲೀಗ್ (ಫುಟ್ಬಾಲ್), ಕಬಡ್ಡಿ ಲೀಗ್ ಇತ್ಯಾದಿ ಆರಂಭಗೊಂಡಿವೆ. ಆದರೆ ಐಪಿಎಲ್ಗಿರುವಷ್ಟು ಮನ್ನಣೆ ಇವುಗಳಿಗೆ ದೊರಕಿಲ್ಲ. ಐಪಿಎಲ್ ಇಂಗ್ಲೆಂಡ್ನ ಇಂಗ್ಲಿಷ್ ಪ್ರೀಮಿಯರ್ ಲೀಗ್, ಅಮೆರಿಕದ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಲೀಗ್ ಹಾಗೂ ಸ್ಪೇನ್ನ ಲಾ ಲಿಗಾದಷ್ಟೆ ಮಹತ್ತ್ವ, ಜನಪ್ರಿಯತೆ ಪಡೆದಿದೆ.
`ಕುರುಡು ಕಾಂಚಾಣ’ ಲೀಲೆ
ಲೀಗ್ ಪಂದ್ಯಾವಳಿಯಿಂದ ಪ್ರಯೋಜನಗಳು ಸಾಕಷ್ಟಿವೆ. ಕ್ರೀಡೆಗೆ ಉತ್ತೇಜನ, ಹೊಸಬರಿಗೆ ಅವಕಾಶ, ಆಟಗಾರರ ಆರ್ಥಿಕ ಸ್ಥಿತಿ ಸುಧಾರಣೆ ಇತ್ಯಾದಿ ಪ್ರಯೋಜನಗಳನ್ನು ಮರೆಯುವಂತಿಲ್ಲ. ಆದರೆ ಈಗೇನಾಗಿದೆ ಎಂದರೆ ಆಟಗಾರರ ಶ್ರಮದಿಂದ ಕೆಲವೇ ಕೆಲವು ಮಂದಿ ದೊಡ್ಡ ವ್ಯಾಪಾರೀಕುಳಗಳು ಮಾತ್ರ ಭಾರೀ ಹಣ ಸಂಪಾದಿಸುವಂತಾಗಿದೆ. ಲೀಗ್ ಒಂದು ವ್ಯಾಪಾರವಾಗಿ ಮಾರ್ಪಟ್ಟು, ಅದರಲ್ಲಿ ಸಿರಿವಂತರು ಮಾತ್ರ ಹಣ ಹೂಡಿಕೆ ಮಾಡುವಂತಾಗಿದೆ. ಕಪ್ಪುಹಣದ ಹೊಳೆಯೇ ಅಲ್ಲಿ ಹರಿದಿದೆ. ಜೊತೆಗೆ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಮುಂತಾದ ಅಪಸವ್ಯಗಳು ತಲೆಹಾಕಿ ಐಪಿಎಲ್ ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿದೆ. ಐಪಿಎಲ್ನ ಈ ಅವಾಂತರ ಉಳಿದ ಕ್ರೀಡಾ ಲೀಗ್ಗಳಿಗೂ ಹರಡಬಹುದೆಂಬ ಭೀತಿಯೂ ಆವರಿಸಿದೆ. ಏಕೆಂದರೆ ಐಪಿಎಲ್ನಲ್ಲಿ ವ್ಯಾಪಾರಿಗಳು, ರಾಜಕಾರಣಿಗಳು ಹಾಗೂ ಬಾಲಿವುಡ್ ತಾರೆಗಳು ಹಣ ಹೂಡಿದಂತೆ ಇತರ ಕ್ರೀಡಾ ಲೀಗ್ಗಳಲ್ಲೂ ಅವರೇ ಹಣ ಹೂಡತೊಡಗಿದ್ದಾರೆ. ತಮಾಷೆಗಾಗಿ ಅಥವಾ ಕ್ರೀಡೆಯ ಅಭಿವೃದ್ಧಿಗಾಗಿ ಇವರೆಲ್ಲ ಭಾರೀ ಪ್ರಮಾಣದಲ್ಲಿ ಖಂಡಿತ ಹಣ ಹೂಡಿಕೆ ಮಾಡುತ್ತಿಲ್ಲ. ಅವರಿಗೆ ಬೇಕಾಗಿರುವುದು ತಮ್ಮ ಹೂಡಿಕೆಗೆ ದುಪ್ಪಟ್ಟು ಗಳಿಕೆ, ಅಷ್ಟೆ.
ಲೀಗ್ಗಳ ಈ ಅವಾಂತರ ತಪ್ಪಿಸಬೇಕಾದರೆ ಮೊದಲು ಅಲ್ಲೊಂದು ಪಾರದರ್ಶಕ ವ್ಯವಸ್ಥೆ ನಿರ್ಮಾಣವಾಗಬೇಕು. ಕ್ರೀಡಾ ಮೌಲ್ಯಗಳನ್ನು ಉಳಿಸುವ ಕಟ್ಟುನಿಟ್ಟಾದ ಕಾನೂನುಗಳ ಪಾಲನೆಯಾಗಬೇಕು. ಹೀಗಾಗಬೇಕಾದರೆ ಆಟಗಾರರು ಹಾಗೂ ಲೀಗ್ಗಳ ಆಡಳಿತಾಧಿಕಾರಿಗಳು ಕ್ರೀಡೆಯ ಮೌಲ್ಯ ಹೆಚ್ಚಿಸುವ ಪಣತೊಡಬೇಕು. ಇದು ಸಾಧ್ಯವೆ??