
ವಿಮಾನಯಾನವೇ ಹಲವು ವೈಶಿಷ್ಟ್ಯಗಳ ಸಂಗಮ. ಇಂದಿಗೂ ಹಿಂದಿನ ಕಾಲದ ಆಚಾರವನ್ನು ಉಳಿಸಿಕೊಳ್ಳಲು ಹೆಜ್ಜೆಹೆಜ್ಜೆಗೂ ಹೆಣಗುವವನಿಗಂತೂ ಅಪಶಕುನಗಳ ಸರಮಾಲೆಯೇ ಎದುರಾಗುತ್ತದೆ. ಕುಂಕುಮಕ್ಕೆ ಎಂದೋ ಡೈವೋರ್ಸ್ ಕೊಟ್ಟ ಹಣೆಯುಳ್ಳ ರಿಸೆಪ್ಶನಿಷ್ಟಳು ‘ಎಲ್ಲಿಗೆ ಹೋಗುತ್ತಿದ್ದೀರಿ?’ ಎಂದು ಕೇಳುವುದರ ಮೂಲಕವೇ ಪ್ರಯಾಣದ ಆರಂಭ. ಫ್ಲೈಟ್ ಟೇಕಾಫ್ ಆಗುವುದಕ್ಕೆ ಮುನ್ನ ರಿಸೆಪ್ಶನಿಷ್ಟಳ ಹಣೆಯ ನಕಲಿನವಳೊಬ್ಬಳು ‘ನೀವು ಹೋಗುತ್ತಿರುವಾಗ ವಿಮಾನವು ಬೀಳುವಂತಾದರೆ ಪ್ಯಾರಾಚೂಟ್ ಬಳಸಿ’ ಎನ್ನುತ್ತಾಳೆ. ಪ್ಯಾರಾಚೂಟ್ ಎಂದರೆ ಹೇರಾಯಿಲ್ ಅಲ್ಲವೆ? ವಿಮಾನದಿಂದ ಬೀಳುವಾಗ ಪ್ರಾಣ ಉಳಿಸಿಕೊಳ್ಳುವುದು ಮುಖ್ಯವೋ, ಬಿದ್ದಾಗಲೂ ಚೆನ್ನಾಗಿ ಕಾಣಿಸಬೇಕೆಂದು ಎಣ್ಣೆ ಹಚ್ಚಿಕೊಂಡು […]