ವಿಮಾನಯಾನವೇ ಹಲವು ವೈಶಿಷ್ಟ್ಯಗಳ ಸಂಗಮ. ಇಂದಿಗೂ ಹಿಂದಿನ ಕಾಲದ ಆಚಾರವನ್ನು ಉಳಿಸಿಕೊಳ್ಳಲು ಹೆಜ್ಜೆಹೆಜ್ಜೆಗೂ ಹೆಣಗುವವನಿಗಂತೂ ಅಪಶಕುನಗಳ ಸರಮಾಲೆಯೇ ಎದುರಾಗುತ್ತದೆ. ಕುಂಕುಮಕ್ಕೆ ಎಂದೋ ಡೈವೋರ್ಸ್ ಕೊಟ್ಟ ಹಣೆಯುಳ್ಳ ರಿಸೆಪ್ಶನಿಷ್ಟಳು ‘ಎಲ್ಲಿಗೆ ಹೋಗುತ್ತಿದ್ದೀರಿ?’ ಎಂದು ಕೇಳುವುದರ ಮೂಲಕವೇ ಪ್ರಯಾಣದ ಆರಂಭ. ಫ್ಲೈಟ್ ಟೇಕಾಫ್ ಆಗುವುದಕ್ಕೆ ಮುನ್ನ ರಿಸೆಪ್ಶನಿಷ್ಟಳ ಹಣೆಯ ನಕಲಿನವಳೊಬ್ಬಳು ‘ನೀವು ಹೋಗುತ್ತಿರುವಾಗ ವಿಮಾನವು ಬೀಳುವಂತಾದರೆ ಪ್ಯಾರಾಚೂಟ್ ಬಳಸಿ’ ಎನ್ನುತ್ತಾಳೆ. ಪ್ಯಾರಾಚೂಟ್ ಎಂದರೆ ಹೇರಾಯಿಲ್ ಅಲ್ಲವೆ? ವಿಮಾನದಿಂದ ಬೀಳುವಾಗ ಪ್ರಾಣ ಉಳಿಸಿಕೊಳ್ಳುವುದು ಮುಖ್ಯವೋ, ಬಿದ್ದಾಗಲೂ ಚೆನ್ನಾಗಿ ಕಾಣಿಸಬೇಕೆಂದು ಎಣ್ಣೆ ಹಚ್ಚಿಕೊಂಡು ತಲೆ ಬಾಚಿಕೊಳ್ಳುವುದು ಮುಖ್ಯವೋ ಎಂಬ ಪ್ರಶ್ನೆ ಅವನಲ್ಲಿ ಎದ್ದೀತು.
ಅತ್ತಲಿಂದ ಅವನು ನೋಡುತ್ತಿದ್ದ.
ಇತ್ತಲಿಂದ ನಾನು ಡಿಟೊ.
ಹಾಲಿವುಡ್ಡಿನಲ್ಲಿ ಎರಡು ತರಹದ ನಟರಿದ್ದಾರೆಂದು ವಿಂಗಡಿಸಲಾಗಿದೆ. ಒಂದು ಭಾವನೆಗಳ ಕ್ಯಾನ್ವಾಸನ್ನೇ ತಮ್ಮ ಮುಖವಾಗಿ ಹೊಂದಬಲ್ಲ ಹಾಲಿವುಡ್ ನಟರು; ಎರಡನೆಯದು ಹಾಲಿ ವುಡನ್ ನಟರು. ಮರಗಳ ಮೇಲಾದರೂ ತೊಗಟೆಯ ಮೇಲಿನ ಗೀರುಗಳಿಂದ ಭಾವನೆಗಳ ಬಿಂಬಿಸುವಿಕೆ ಸಾಧ್ಯವಾದೀತು. ಆದರೆ ಈ ವುಡನ್ ನಟರ ಮುಖದ ಅಕ್ಕನ ಗಂಡ (ಮುಖಭಾವ) ಮರಕ್ಕಿಂತ ಮರಗಟ್ಟಿದ ಪ್ರಕಾರಕ್ಕೆ ಸೇರಿದ್ದು.
ಅತ್ತಲಿದ್ದವನ ಮುಖ ಎರಡನೆಯ ಪ್ರಕಾರಕ್ಕೆ ಸೇರಿದುದಾಗಿತ್ತು.
ಆತನು ತನ್ನ ಮುಖವನ್ನು ನನ್ನ ಪಾಸ್ಪೋರ್ಟಿನತ್ತ ತಿರುಗಿಸಿದ. ಜಾನ್ ಡಾಲ್ಟನನೋ, ಲೂಯಿ ಪಾಶ್ಚರನೋ ಸೂಕ್ಷ್ಮದರ್ಶಕದಿಂದ ಕ್ರಿಮಿಗಳತ್ತ ಅಂದು ಬೀರಿರಬಹುದಾದ ದೃಷ್ಟಿಗೂ ಇವನ ದೃಷ್ಟಿಗೂ ಏನೇನೂ ವ್ಯತ್ಯಾಸವಿರಲಿಲ್ಲವೆನಿಸಿತು. ಪಾಸ್ಪೋರ್ಟಿನ ಪುಟಗಳ ವಿನ್ಯಾಸ, ಅವುಗಳ ಮೇಲೆ ಕುಳಿತಿರಬಹುದಾದ ಧೂಳು, ಧೂಳಿನಲ್ಲಿರಬಹುದಾದ ಕೋವಿಡ್ ಕಣಗಳು, ಎಲ್ಲವನ್ನೂ ತನ್ನ ನಗ್ನನೇತ್ರದಿಂದಲೇ ನೋಡುತ್ತಿರುವನೋ ಎನಿಸುವಂತಹ ಗಂಭೀರ ದೃಷ್ಟಿಯು ನೋಡುಗರ ಎದೆಯಲ್ಲಿ ರಿಕ್ಟರ್ ಮಾಪನದ ೪.೫ರಷ್ಟಾದರೂ ಕಂಪನಗಳನ್ನೆಬ್ಬಿಸುವುದು ನಿಶ್ಚಿತವಾಗಿತ್ತು.
ಪಾಸ್ಪೋರ್ಟಿನಿಂದ ದೃಷ್ಟಿ ಕೀಳದೆಯೇ ಆ ಗಂಭೀರ ದೃಷ್ಟಿಗೆ ಹೊಂದುವಂತಹ ಧ್ವನಿಯಲ್ಲಿ ಆತ ಏನನ್ನೋ ನುಡಿದ. ಅವನ ಎಡಗಡೆಯಿಂದ ಅಷ್ಟೇ ಗಂಭೀರದ ಧ್ವನಿಯೊಂದು ಹೊರಟಿತು. ಅತ್ತ ತಿರುಗಿದರೆ ಇವನದೇ ಜೆರಾಕ್ಸ್ ಕಾಪಿಯಂತಹವನೊಬ್ಬ ಕುಳಿತಿದ್ದ. ಇಬ್ಬರೂ ಅರಾಬಿಕ್ಕಲ್ಲೋ, ಪಾರ್ಸಿಯಲ್ಲೋ ಮೆಷಿನ್ ಗನ್ನಿನಿಂದ ಹೊರಟ ಗುಂಡಿನೋಪಾದಿಯಲ್ಲಿ ಮಾತುಗಳ ಸರಪಟಾಕಿಯನ್ನು ಸಿಡಿಸಿದರು.
“ಏನೋ ಎಡವಟ್ಟಾಗಿದೆ. ಆ ಶೆಟ್ಟರ ಅಂಗಡಿಯ ಚಾಕೊಲೇಟು ಗುಂಡಗೆ ಕಪ್ಪಗೆ ಬಾಂಬಿನ ಆಕಾರದಲ್ಲಿದೆ, ಬೇಡಾಂತ ಬಡ್ಕೊಂಡೆ. ನೀವು ‘ತಿನ್ನಕ್ಕೂ ಅದು ಬಾಂಬೇ ಕಣೇ. ಸಖತ್ತಾಗಿರತ್ತೆ. ಖಾರ-ಹುಳಿ-ಸ್ವೀಟ್ ಮಿಕ್ಸ್ ಆಗಿದೆ’ ಅಂತ ನನ್ಮಾತಿಗೆ ಎಂದಿನ ಹಾಗೆಯೆ ಬೆಲೆ ಕೊಡದೆ ತೊಗೊಂಡ್ಬಂದ್ರಿ. ಈಗೇನು ಫೈನೋ, ಗಡೀಪಾರೋ, ಜೈಲೋ ಗ್ಯಾರಂಟಿ ಅನ್ಸತ್ತೆ” ಸಹಧರ್ಮಿಣಿ ಮಿನಿಕದನಕ್ಕೆ ಅಣಿಯಾದಳು.
ನಾನು ಮತ್ತೆ ಆ ಗಂಭೀರದ್ವಯರತ್ತ ದೃಷ್ಟಿ ಹರಿಸಿದೆ. ಗಡ್ಡದ ಕೂದಲು ಒಂದಿನಿತೂ ಕೊಂಕದೆ, ಹಾಕಿಕೊಂಡ ಉಡುಪಿನ ಒಂದು ಮಡತೆಯೂ ಹಾಳಾಗದಂತೆ, ಪ್ರತಿ ದಿನ ಯೋಗ ಮಾಡುವವರೂ ನಾಚುವಂತಹ ಲಂಬಕಷೇರುಕಾಸನದಲ್ಲಿ ಕುಳಿತ ಅವರಿಬ್ಬರ ಮುಂದಿನ ನಡೆಯ ಮೇಲೆ ನಮ್ಮ ವಿದೇಶಪ್ರಯಾಣದ ಹಣೆಬರಹ ನಿಶ್ಚಯವಾಗಬೇಕಾಗಿತ್ತು.
ಗಂಭೀರದ್ವಯರು ಮತ್ತಷ್ಟು ಮಾತನಾಡಿದರು. ನಂತರ ಇಬ್ಬರೂ ಮೌನವಹಿಸಿ ಕಟಕಟೆಯಲ್ಲಿ ನಿಂತ ಕೊಲೆಗಾರನನ್ನು ನ್ಯಾಯಾಧೀಶರು ನೋಡುವಷ್ಟೇ ಕರುಣೆ ತುಂಬಿದ ದೃಷ್ಟಿಯಿಂದ ನನ್ನತ್ತ ನೋಡಿದರು. ರಿಕ್ಟರ್ ಮಾಪನ ೬ಕ್ಕೆ ಏರಿತು.
ಮುಂದಿನ ಎರಡೇ ಸೆಕೆಂಡುಗಳಲ್ಲಿ ನನ್ನ ಮತ್ತು ಮಡದಿಯ ಪಾಸ್ಪೋರ್ಟುಗಳ ಮೇಲೆ ಮುದ್ರೆಗಳು ಬಿದ್ದವು. ಎರಡೂ ಪಾಸ್ಪೋರ್ಟುಗಳನ್ನು ಸಾಕುನಾಯಿಯು ಕಾರ್ಪೊರೇಷನ್ ಕುಪ್ಪೆಯಿಂದ ಆಯ್ದು ತಂದ ವಸ್ತುವೊಂದನ್ನು ಪುರಾತನ ಕಾಲದ ಮಡಿಹೆಂಗಸೊಬ್ಬಳು ತಿರಸ್ಕಾರದಿಂದ ಎಸೆಯುವಷ್ಟೇ ಲಾಪರವಾಹಿಯಿಂದ ನನ್ನತ್ತ ಆ ಗಂಭೀರಿಯು ಎಸೆದನು. ನಾವಿಬ್ಬರೂ ಅದನ್ನೇ ಮಹಾಪ್ರಸಾದವೆಂದು ಸ್ವೀಕರಿಸಿ ಮಸ್ಕತ್ತಿನೊಳಗೆ ಕಾಲಿರಿಸಲು ಸಂತೋಷದಿಂದ ಮುನ್ನಡೆದೆವು. ಶೆಟ್ಟರ ಚಾಕೊಲೇಟ್ ಮಸ್ಕತ್ತಿನಲ್ಲಿ ಪ್ರವೇಶ ಪಡೆದದ್ದು ಹೀಗೆ.
ಮಸ್ಕತ್, ಬಹರೈನ್ ಮುಂತಾದ ದೇಶಗಳಿಗೆ ಹೋಗಿ ಬಂದವರಿಗೆ ಇಂತಹ ಅನುಭವಗಳು ಆಗಿರುವುದು ನಿಶ್ಚಿತ. ಕಲ್ಲಿನ ಮುಖದ ಕಸ್ಟಮ್ಸ್ ಅಧಿಕಾರಿಗಳೊಡನೆ “ಮಾತನಾಡುವಾಗ ನಿಗಾ ಇರಲಿ. ಕೇಳಿದಷ್ಟಕ್ಕೇ ಉತ್ತರಿಸು” ಎಂದು ಟ್ರಾವಲ್ ಏಜೆಂಟನು ಸಾರಿ ಸಾರಿ ಹೇಳಿದ್ದರೂ ಕೆಲವೊಮ್ಮೆ ಎಡವಟ್ಟುಗಳು ಆಗಿಯೇಬಿಡುತ್ತವೆ.
‘ವೈ ಆರ್ ಯೂ ಟ್ರಾವಲಿಂಗ್ ಟು ಬಹ್ರೈನ್?’ ಎಂದ ಸುಂಕಾಧಿಕಾರಿ.
‘ಟು ಸೀ ಮೈ ನೀಸ್’ ಎಂದ ಸೀನು. ‘ಮೈ ರಿಲೇಟಿವ್ ಅನ್ನಿ’ ಎಂದು ಏಜೆಂಟ್ ಹೇಳಿದ್ದು ಸ್ಮರಣೆಯಿಂದ ಹಾರಿತ್ತು.
‘ನೀಸ್?’ ಸುಂಕಾಧಿಕಾರಿಯ ಹುಬ್ಬು ಏರುತ್ತಿರುವ ವಿಮಾನವನ್ನು ಹೋಲಿತು.
ಗೊಂದಲಕ್ಕೆ ಬಿದ್ದ ಸೀನು ತನ್ನ ಮಂಡಿಗಳತ್ತ ಬೆರಳು ತೋರಿಸಿದ.
‘ಓಹ್! ನೀಸ್. ವೇರ್ ಈಸ್ ದ ಮೆಡಿಕಲ್ ರಿಪೋರ್ಟ್?’ ಎಂದನವ.
ಸೀನು ತನ್ನಲ್ಲಿದ್ದ ಎಲ್ಲವನ್ನೂ ಕೌಂಟರಿನ ಮುಂದೆ ಸುರಿದ. ಗಡ್ಡದ ಕೂದಲು ಕೊಂಕಲಿಲ್ಲ. ಮೊಲದ ಮೇಲಿನ ಸಿಂಹದ ದೃಷ್ಟಿಯಲ್ಲಿ ಕಾರುಣ್ಯವಿರಲಿಲ್ಲ.
ಸೀನು ದಿಕ್ಕು ತೋಚದೆ ನಿಂತ. ವಿಷಯ ಮೇಲಧಿಕಾರಿಯ ಗಮನಕ್ಕೆ ಹೋಯಿತು. ‘ವಾಟ್ ಈಸ್ ರಾಂಗ್ ವಿತ್ ಯುವರ್ ನೀಸ್?’ ಎಂದ ಮೇಲಧಿಕಾರಿ.
‘ನೋ ರಾಂಗ್.’
‘ದೆನ್ ಗೋ ಬ್ಯಾಕ್’ ಎನ್ನುತ್ತಾ ವೀಸಾ, ಪಾಸ್ಪೋರ್ಟುಗಳನ್ನು ಸೀನುವಿನತ್ತ ಎಸೆದನವ.
ಸೀನಿಂಗಿಗೆ ಸೀನು ಏನೋ ಎಡವಟ್ಟು ಮಾಡಿಕೊಂಡಿರುವುದು ತಿಳಿಯಿತು. ತನ್ನ ಬ್ಯಾಗಿನಿಂದ ಸೀನುವಿನ ಅಣ್ಣನ ಮಗಳು ರಮ್ಯಳ ಮೆಡಿಕಲ್ ರಿಪೋರ್ಟನ್ನು ಹೊರತೆಗೆದು ‘ಹಿಸ್ ನೀಸ್ ಆರ್ ಪ್ರೆಗ್ನೆಂಟ್’ ಎಂದಳು. ರಮ್ಯ ವಯಸ್ಕಳಾದ್ದರಿಂದ ಈಸ್ ಬದಲು ಆರ್ ಬಳಸಬೇಕೆಂಬುದು ಸೀನಿಂಗಿಯ ಅನಿಸಿಕೆಯಾಗಿತ್ತು.
ಮೇಲಧಿಕಾರಿಗೂ ಸೀನಿಂಗಿಯಷ್ಟೇ ಸಿಂಗ್ಯುಲರ್, ಪ್ಲೂರಲ್ಗಳ ಗೊಂದಲವಿದ್ದುದರಿಂದ ಎರಡು ಮೈನಸ್ಸುಗಳು ಸೇರಿ ಒಂದು ಪ್ಲಸ್ ಆಗಿ ದಂಪತಿಗಳಿಗೆ ಬನ್ ಪ್ರವಾಸಯೋಗ ದೊರಕಿತು.
ಅದೊಂದು ಕಾಲವಿತ್ತು. ಆಗ ದೇಶವೊಂದಕ್ಕೆ ಹಿಂದೂ ದೇವತೆಗಳ ವಿಗ್ರಹಗಳನ್ನು ಕೊಂಡೊಯ್ಯುವುದು ನಿಷಿದ್ಧವಾಗಿತ್ತು. ನನ್ನ ಬಂಧು ಮಧ್ವೇಶನೋ ರಾಘವೇಂದ್ರಸ್ವಾಮಿಗಳ ಅಪ್ಪಟ ಭಕ್ತ. ‘ವಿದೇಶದಲ್ಲಿ ನೆಲೆಸಲು ಹೋಗುತ್ತಿದ್ದೇನೆ. ಪೂಜೆಯಿಲ್ಲದೆ ದಿನಗಳೆಯಲು ಸಾಧ್ಯವಿಲ್ಲ. ದೇವರ ವಿಗ್ರಹವಿಲ್ಲದಿದ್ದರೆ ಬೇಡ, ಫೋಟೋವನ್ನಾದರೂ ಒಯ್ಯುತ್ತೇನೆ’ ಎಂದು ತೀರ್ಮಾನಿಸಿ ಒಂದು ಸಿಕ್ಸ್ ಬೈ ಫೋರ್ ಫೋಟೋವನ್ನು ತನ್ನ ಲಗೇಜಿನಲ್ಲಿ ಏರಿಸಿಯೇಬಿಟ್ಟ.
ಕಸ್ಟಮ್ಸ್ ಅಧಿಕಾರಿಗಳು ಹಿಡಿದರು. ‘ವಾಟ್ ಈಸ್ ದಿಸ್?’ ಎಂದರು.
‘ದಟ್ ಈಸ್ ರಾಘವೇಂದ್ರಸ್ವಾಮಿ’ ಎಂದ.
‘ಹೂ ಈಸ್ ಇಟ್?’
ಆ ಕ್ಷಣದಲ್ಲಿ ಮಧ್ವೇಶನ ಮನದಲ್ಲಿ ಎರಡು ಬಿಂಬಗಳು ಮೂಡಿದವು; ‘ಸುಳ್ಳಾಡಿ ನಿನ್ನ ಪರಂಪರೆಗೆ ಕಳಂಕ ತರುವೆಯಾ?’ ಎಂದು ಹರಿಶ್ಚಂದ್ರನ ನೆರಳು ಕೊಶ್ಚೆನ್ ಮಾರ್ಕಿನಂತೆ ನಿಂತಿತು. ‘ನ ಬ್ರೂಯಾತ್ ಸತ್ಯಮಪ್ರಿಯಮ್’ ಎಂದು ಅವನ ಸುಭಾಷಿತದ ಗುರುಗಳ ನೆರಳು ನುಡಿಯಿತು. ಗುರುಗಳ ನೆರಳು, ಹರಿಶ್ಚಂದ್ರನ ನೆರಳು ಎರಡೂ ವಿವೇಚನೆಯ ತಕ್ಕಡಿಯ ಎರಡು ತಟ್ಟೆಗಳನ್ನು ಏರಿ ಕುಳಿತವು.
‘ಅಶ್ವತ್ಥಾಮೋ ಹತಃ ಕುಂಜರಃ’ ಎಂದು ಶ್ರೀಕೃಷ್ಣನ ಸಮ್ಮುಖದಲ್ಲೇ ಧರ್ಮಯುದ್ಧದ ಅಂಗವಾಗಿ ಡೈಲಾಗ್ ಹೊರಟಿದ್ದು ನೆನಪಾಗಿ ಗುರುಗಳ ವಾಕ್ಕಿನತ್ತ ತಕ್ಕಡಿ ವಾಲಿತು. ಹರಿಶ್ಚಂದ್ರ ಸುಡುಗಾಡು ಸೇರಿದ.
‘ಹೀ ಈಸ್ ಮೈ ಗ್ರ್ಯಾಂಡ್ಫಾದರ್’ ಎಂದ ಮಧ್ವೇಶ.
ಕಸ್ಟಮ್ಸಿನವ ಫೋಟೋವನ್ನು ಹತ್ತಿರದಿಂದ ನೋಡಿ, ‘ವಾಟ್ ಈಸ್ ಇಟ್ ಆನ್ ಹಿಸ್ ಫೋರ್ಹೆಡ್?’ ಎಂದು ನಾಮದತ್ತ ಬೆರಳು ಮಾಡಿದ.
‘ಫ್ಯಾಮಿಲಿ ಸಿಂಬಲ್’ ಎನ್ನುತ್ತಾ ತನ್ನ ಹಣೆಯ ಮೇಲಿನ ಗಂಧ-ನಾಮಗಳತ್ತ ಅವನ ಗಮನ ಸೆಳೆದ ಮಧ್ವೇಶ.
ರಾಘವೇಂದ್ರಸ್ವಾಮಿಗಳ ಫೋಟೋ ಮಧ್ವೇಶನ ಚಾಲಾಕಿತನದಿಂದ ಆ ದೇಶದಲ್ಲಿಯೂ ಪೂಜಾಗೃಹದಲ್ಲಿ ಪ್ರಮುಖ ಸ್ಥಾನ ಪಡೆಯಲು ಸಾಧ್ಯವಾಯಿತು.
ಅಸಲಿಗೆ ವಿಮಾನಯಾನವೇ ಹಲವು ವೈಶಿಷ್ಟ್ಯಗಳ ಸಂಗಮ. ಇಂದಿಗೂ ಹಿಂದಿನ ಕಾಲದ ಆಚಾರವನ್ನು ಉಳಿಸಿಕೊಳ್ಳಲು ಹೆಜ್ಜೆಹೆಜ್ಜೆಗೂ ಹೆಣಗುವವನಿಗಂತೂ ಅಪಶಕುನಗಳ ಸರಮಾಲೆಯೇ ಎದುರಾಗುತ್ತದೆ. ಕುಂಕುಮಕ್ಕೆ ಎಂದೋ ಡೈವೋರ್ಸ್ ಕೊಟ್ಟ ಹಣೆಯುಳ್ಳ ರಿಸೆಪ್ಶನಿಷ್ಟಳು ‘ಎಲ್ಲಿಗೆ ಹೋಗುತ್ತಿದ್ದೀರಿ?’ ಎಂದು ಕೇಳುವುದರ ಮೂಲಕವೇ ಪ್ರಯಾಣದ ಆರಂಭ. ಫ್ಲೈಟ್ ಟೇಕಾಫ್ ಆಗುವುದಕ್ಕೆ ಮುನ್ನ ರಿಸೆಪ್ಶನಿಷ್ಟಳ ಹಣೆಯ ನಕಲಿನವಳೊಬ್ಬಳು ‘ನೀವು ಹೋಗುತ್ತಿರುವಾಗ ವಿಮಾನವು ಬೀಳುವಂತಾದರೆ ಪ್ಯಾರಾಚೂಟ್ ಬಳಸಿ’ ಎನ್ನುತ್ತಾಳೆ. ಪ್ಯಾರಾಚೂಟ್ ಎಂದರೆ ಹೇರಾಯಿಲ್ ಅಲ್ಲವೆ? ವಿಮಾನದಿಂದ ಬೀಳುವಾಗ ಪ್ರಾಣ ಉಳಿಸಿಕೊಳ್ಳುವುದು ಮುಖ್ಯವೋ, ಬಿದ್ದಾಗಲೂ ಚೆನ್ನಾಗಿ ಕಾಣಿಸಬೇಕೆಂದು ಎಣ್ಣೆ ಹಚ್ಚಿಕೊಂಡು ತಲೆ ಬಾಚಿಕೊಳ್ಳುವುದು ಮುಖ್ಯವೋ ಎಂಬ ಪ್ರಶ್ನೆ ಅವನಲ್ಲಿ ಎದ್ದೀತು.
‘ನೆಲದಲ್ಲಿ ಬಿದ್ದರೆ ಪ್ಯಾರಾಚೂಟ್’ ಎಂದು ನುಡಿಯುವ ಅಪಶಕುನಿ ಅಲ್ಲಿಗೇ ನಿಲ್ಲಿಸದೆ ‘ನೀರಿನಲ್ಲಿ ಬಿದ್ದರೆ ನಿಮ್ಮ ಆಸನದ ಕೆಳಗಿರುವ ಲೈಫ್ ಜಾಕೆಟ್ಟನ್ನು ಬಳಸಿ’ ಎನ್ನುತ್ತಾಳೆ. ‘ಸಧ್ಯ! ಬಿಕಿನಿ ತೊಟ್ಟು ಮೈಗೆಲ್ಲ ಸನ್ ಟ್ಯಾನ್ ಆಯಿಲ್ ಹಚ್ಚಿಕೊಂಡು ಕುಳಿತುಕೊಳ್ಳಿ ಎನ್ನಲಿಲ್ಲವಲ್ಲ’ ಎಂದು ಅವನಂತಹ, ಆದರೆ ಅವನಿಗಿಂತ ಕೊಂಚ ಮುಂದುವರಿದವನ ಮನದಲ್ಲಿ ಆಲೋಚನೆಗಳು ಮೂಡಿಯಾವು. ಸ್ಕೂಟರಲ್ಲೋ, ಕಾರಿನಲ್ಲೋ ಹೋಗುವಾಗ ‘ಆಕ್ಸಿಡೆಂಟ್ ಆದರೆ…’ ಎಂದು ಯಾರಾದರೂ ನುಡಿದರೆ ಅವರ ಮೇಲೆ ಹನ್ನೊಂದು ಅಕ್ಷೋಹಿಣಿಗಳನ್ನು ಸಿದ್ಧಪಡಿಸಿಕೊಳ್ಳಲು ತಯಾರಾಗುವ ನಾವು ಎಗ್ಗಾಮಗ್ಗಾ ಹಣ ತೆತ್ತು, ಮಂಡಿಯನ್ನು ಮುಂದಿನ ಸೀಟಿಗೆ ತರಚುವಷ್ಟರ ಮಟ್ಟಿಗೆ ಆನಿಸಿಕೊಂಡು, ನಮ್ಮ ಕೊನೆಯ ಕ್ಷಣಗಳ ಬಗ್ಗೆ ಹೇಳುವುದನ್ನು ಸ್ಥಿತಪ್ರಜ್ಞರಂತೆ ಕೇಳಿಸಿಕೊಳ್ಳುವುದು ವಿಮಾನಯಾನದಲ್ಲಲ್ಲದೆ ಮತ್ತೆಲ್ಲಿಯೂ ಕಾಣಬರದು.
ಕೆಲವು ವಿಮಾನಯಾನಗಳಲ್ಲಿ ದೊರಕುವ ತಿಂಡಿಗಳಂತೂ ಸರೇಸರೆ. ‘ನೈನಂ ಛಿಂದಂತಿ ಶಸ್ತ್ರಾಣಿ; ನೈನಂ ದಹತಿ ಪಾವಕಃ’ ಮಾದರಿಯ ಬ್ರೆಡ್ಡನ್ನು ಇಲ್ಲಿ ಮಾತ್ರ ಕಾಣಲು ಸಾಧ್ಯ. ‘ಸ್ಯಾಂಡ್ವಿಚ್’ ಎಂದು ಕರೆಸಿಕೊಳ್ಳುವ ತಿಂಡಿಯಂತೂ ‘ಥಿಯರಿ ಆಫ್ ಎಲಾಸ್ಟಿಸಿಟಿ’ಗೆ ಅತ್ಯುತ್ತಮ ಉದಾಹರಣೆ. ‘ನೆನ್ನೆ ನೆನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ’ ಎಂಬ ಕುವೆಂಪುವಿನ ಪದ್ಯಕ್ಕೂ, ಇವರ ನಡೆಗೂ ತತ್ಸಾತ್ ಸಂಬಂಧವಿರುವುದಿಲ್ಲ. ಇವರ ಆಹಾರಗಳು ಪರಂಪರೆಯ ಪ್ರತೀಕವಿದ್ದಂತೆ – ನೆನ್ನೆಯದು ಇಂದಿಗೂ, ಇಂದಿನದು ನಾಳೆಗೂ ಪ್ರಸ್ತುತ! ಹಾರಿ ಹೋಗುವವರು ಮಾಂಸಾಹಾರಿ ಆದರೆ ಆಹಾರಕ್ಲಿಷ್ಟತೆಗಳು, ಖಿನ್ನತೆಗಳು ಕಡಿಮೆ. ಸಸ್ಯಾಹಾರಿಯಾದರೆ ಮಾಂಸಾಹಾರದ ವಾಸನೆಗೆ ಮೂಗು ಕ್ಯಾರೆಟ್ಟಿನಂತೆ ಕೆಂಪಗಾಗಿ, ಕಣ್ಣಗೊಂಬೆಗಳು ಮೂಲಂಗಿಯಂತೆ ಬೆಳ್ಳಗಾಗಿ, ಹೊಟ್ಟೆಗೆ ಏನೂ ದೊರಕದೆ ಗ್ಯಾಸಿನಿಂದ ಕುಂಬಳದಂತಾಗಿ ವ್ಯಕ್ತಿಯೇ ಮೊಬೈಲ್ ವೆಜಿಟೆಬಲ್ ಅಂಗಡಿಯಂತೆ ಕಂಡರೆ ಅಚ್ಚರಿಯಿಲ್ಲ.
ವಿಮಾನಯಾನ ಮೊದಲಗಿಂತ ಬಹಳವೇ ಸುಧಾರಿಸಿದೆ. ಈಗ ಮೊದಲೇ ಆರ್ಡರ್ ಮಾಡಿದರೆ ವೀಗನ್ ಆಹಾರವೂ ದೊರಕುತ್ತದೆಂಬ ಮಾತಿದೆ. ಏನೇ ಆದರೂ ಎರಡು-ಮೂರು ಗಂಟೆಗಳ ವಿಮಾನಯಾನ ಚೆನ್ನ. ‘ಅಮೆರಿಕಕ್ಕೆ ಹೊರಟರೆ ಅದಾವುದೋ ಜಾತಿಯವರ ಶವದಂತೆ ಕುಳಿತೇ ಇರಬೇಕು. ಶವದ ಮಂಡಿ ನೋಯದು; ಸೊಂಟ ಕಳಕ್ಕೆನ್ನದು. ಸತ್ತವನೇ ಬದುಕಿದವನಿಗಿಂತ ಮೇಲು ‘ಫ್ಲೈಟಜ್ಞ’ ಎನ್ನುವ ಮಂದಿಯೂ ಇದ್ದಾರೆ.
ಇಷ್ಟೆಲ್ಲ ಕಷ್ಟಗಳಿದ್ದರೂ, ನಾರದನು ತಂಬೂರಿ ಹಿಡಿದು ಇನ್ನೇನು ಇಳಿದು ಬರುವನು ಎಂಬ ಭ್ರಮೆ ಮೂಡಿಸುವ ಮೋಡಗಳ ಮಧ್ಯೆ ಐಸ್ಕ್ರೀಮಿನಲ್ಲಿ ತೂರಿ ಸಾಗುವ ಸ್ಪೂನಿನಂತೆ ಸಾಗುವ ವಿಮಾನದಲ್ಲಿ ಕಣ್ಣಿಗೆ ತಂಪಾಗುವ ಲಲನೆಯರ ಹಿತಮಿತ ಉಪಚಾರದ ಉಯ್ಯಾಲೆಯಲ್ಲಿ ಆಗಾಗ್ಗೆ ಪಯಣಿಸುವ ಯೋಗವನ್ನು ಮಮ ಲಲಾಟೇ ಮುಹುರ್ಮುಹುಃ ಲಿಖಾ ಲಿಖಾ ಲಿಖಾ!