“ಅದು ಈಕ್ವಲ್ ಡಿಸ್ಟ್ರಿಬ್ಯೂಷನ್ ಆಫ್ ವೆಲ್ತ್; ಇದು ಈಕ್ವಲ್ ಡಿಸ್ಟ್ರಿಬ್ಯೂಷನ್ ಆಫ್ ಸ್ಟೆಲ್ತ್. ಕದ್ದ ಮಾಲನ್ನು ಪಕ್ಷಾತೀತವಾಗಿ ಹಂಚಿಕೊಳ್ಳುವುದೇ ರಾಜಕೀಯ. ಇಲ್ಲಿನ ಜನಗಳ ಕ್ವಾಲಿಟಿಯೇ ಸ್ಪೆಷಲ್ಲು” ಎಂದು ಉತ್ತರಿಸಿದ್ದ ಮತ್ತೊಬ್ಬ. ನಿಜವೇ. ಖಡ್ಗಮೃಗದ ಕೊಂಬಿನಷ್ಟು ದಪ್ಪದ ಚರ್ಮ, ಎಂತಹ ಬೈಗುಳವನ್ನೂ ಹಸನ್ಮುಖದಿಂದ ಸ್ವೀಕರಿಸುವ ಸ್ಥೈರ್ಯ, “ನಾಚಿಕೆ ಹೇಸಿಗೆ ಎಲ್ಲ ಊರಿಂದಾಚ್ಗೆ” ಎನ್ನುವ ಭಾವ, ಸಕಲವನ್ನೂ ತಿಂದು ಜೀರ್ಣಿಸಿಕೊಳ್ಳುವ ಶಕ್ತಿ, ಈ ಎಲ್ಲ ಗುಣಗಳು ಇರುವವನು ಮಾತ್ರ ರಾಜಕೀಯದಲ್ಲಿ ಉಳಿದುಕೊಳ್ಳಬಲ್ಲ. ನಿರ್ಭಾವುಕತೆಯೇ ಇಲ್ಲಿನ ಸ್ಥಾಯೀಭಾವ. ಆಹಾ! ಗತಯುಗಗಳಿಗೂ ಇಂದಿನ ದಿನಗಳಿಗೂ ಎನಿತೆನಿತು ಸಾಮ್ಯ! ತಲೆಯಿಲ್ಲದಿದ್ದರೂ ದೇಹದಲ್ಲಿದ್ದ ತೂತಿಗೇ ಸಿಕ್ಕಿದ್ದೆಲ್ಲವನ್ನೂ ತುರುಕಿಕೊಂಡು ಅರಗಿಸಿಕೊಳ್ಳುತ್ತಿದ್ದ ಕಬಂಧನಂತೆಯೇ ತಮ್ಮ ಎರಡೂ ಬಾಹುಗಳನ್ನು ಚಾಚಿ ಸಿಕ್ಕದ್ದನ್ನೆಲ್ಲ ನುಂಗಿ ಅರಗಿಸಿಕೊಳ್ಳುವ ಕಬಂಧಾಸುರರು ಇಲ್ಲುಂಟು.
ಶ್ರೀಸಾಮಾನ್ಯರೊಡನೆ ಚುನಾವಣೆಯ ಬಗ್ಗೆ ಬೇರುಮಟ್ಟದ ಚರ್ಚೆ ನಡೆಸಲೆಂದು ಅದರ ಬಗ್ಗೆ ಮೇರುಮಟ್ಟದ ಅರಿವಿದೆಯೆಂದು ಸ್ವಯಂ ಘೋಷಿಸಿಕೊಂಡಿದ್ದ ಶ್ರೀಯುತ ಪಾಂಡೇಶ್ವರ್ ತ್ರಿಪಾರ್ಟಿಯವರು ತಾವೇ ಏರ್ಪಡಿಸಿದ್ದ ‘ಚಾರ್ಪಾಯೀ ಪೇ ಚರ್ಚಾ’ ಕೂಟವನ್ನುದ್ದೇಶಿಸಿ ಮಾತನಾಡುತ್ತ ಮೊದಲನೆಯ ಪ್ರಶ್ನೆಯನ್ನೆಸೆದಿದ್ದರು. ಅಸಲಿಗೆ ಅವರ ಹೆಸರು ತ್ರಿಪಾಠಿ ಎಂದಿದ್ದರೂ, ತ್ರಿಲೋಕಸುಂದರಿಯರು ಆಗಾಗ್ಗೆ ಬಟ್ಟೆಯನ್ನೂ, ಬಾಯ್ಫ್ರೆಂಡನ್ನೂ ಬದಲಿಸುವಷ್ಟೇ ಶೀಘ್ರವಾಗಿ ತಮ್ಮ ನೀರಿನಷ್ಟೇ ಅಚಲವಾದ ನಿಷ್ಠೆಯನ್ನು ಮೂರು ಪ್ರಮುಖ ಪಕ್ಷಗಳಿಗೆ ಆಗಾಗ್ಗೆ ಬದಲಾಯಿಸುತ್ತಿದ್ದುದರಿಂದ ತ್ರಿಪಾರ್ಟಿ ಎಂದು ಹೆಸರಾದರು.
“ಪೋಲಿಗಳನ್ನೂ, ಪಟಾಲಂಗಳನ್ನೂ ಸೇರಿಸಿಕೊಂಡು ರಂಪ ಎಬ್ಬಿಸೋದೇ ಪೋಲಿಂಗ್ ಅಲ್ವಾ ಸಾರ್?”
ಕಿಟ್ಟಿ ಉಸುರಿದ.
“ಅಲ್ವೋ ಕೋಟ್ಯಂತರ ಜನ ಮತದಾರರು ಸೇರಿ ಹಲವಾರು ವೇಸ್ಟ್ಬಾಡಿಗಳನ್ನು ಮಂತ್ರಿಗಳಾಗಿ ಚುನಾಯಿಸೋ ಪ್ರಕ್ರಿಯೆಯನ್ನೇ ಪೋಲಿಂಗ್ ಅನ್ನೋದು” ತಿಳಿಹೇಳಿದ ಸಹಚಾಪೆಗ ವೆಂಕ.
“ಪೋಲಿಂಗ್ ಅಂದರೆ ನಿಮ್ಮ ಮತವನ್ನ?” ಪಾಂಡೇಶ್ವರನ್ ಆರಂಭಿಸಿದರು.
“ಗೊತ್ತು ಸಾರ್. ಅದೊಂದು ಹರಾಜು. ಹಿಂದಿನ ದಿನ ಯಾರು ಜಾಸ್ತಿ ಹೆಂಡ ಕುಡಿಸ್ತಾರೋ, ಯಾರು ಹೆಚ್ಚು ಹಣ ಕೊಡ್ತಾರೋ ಅವರಿಗೆ ನಮ್ಮ ಓಟನ್ನು ಹಾಕುವಂತಹ ಡೆಮಾಕ್ರಸಿಯ ಹರಾಜನ್ನೇ ಪೋಲಿಂಗ್ ಅನ್ನೋದು” ಉತ್ತರಿಸಿದ ಸೀನು.
“ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿAಗಗಳನ್ನು ಏಕಕಾಲದಲ್ಲಿ ಸೆಳೆಯುವ ಲಿಂಗವೇ ಪೋಲಿಂಗ” ಎಂದರು ಸಂಜಯ ಉಪಾಧ್ಯಾಯರು.
“ಪೋಲ್ ಅಂದರೆ ಏನು ಹೇಳಿಬಿಡಿ” ಪುನರಾರಂಭಿಸಿದರು ಪಾಂಡೇಶ್ವರ್. ಪೋಲ್ ಎಂದರೆ ಎಲೆಕ್ಷನ್, ಚುನಾವಣೆ ಎಂದು ಒಬ್ಬರಾದರೂ ಹೇಳಿಯಾರೆಂದು ನಂಬಿದ್ದರವರು.
“ಪೋಲ್ ಅಂದರೆ ಕಂಬ ಸಾರ್. ಬಾಂಬೇಲಿ ನಡೆಯೋ ಮಟ್ಕಾದ ನಂಬರನ್ನ ಬೆಂಗಳೂರಲ್ಲಿ ಅದರ ಮೇಲೇ ಬರೀತಿದ್ದಿದ್ದು” ಮಟ್ಕಾ ಮಂಜಣ್ಣ ನುಡಿದ.
“ಅದಲ್ವೋ ಮಂಜಣ್ಣ, ಪೋಲ್ ಅಂದ್ರೆ ದುಡ್ಡು, ಸಮಯ ಪೋಲು ಮಾಡೋದು ಕಣೋ. ‘ಹಿವರಿಗೆ ದಿಕ್ಕಾರ’, ‘ಹವರಿಗೆ ಬುರಸ್ಕಾರ’ ಅಂತ ಅವರ್ಲೀ ಬೇಸಿಸ್ಸಲ್ಲಿ ಕೂಗಕ್ಕೇಂತ ಜನರನ್ನ ಕೂಡಿಸಿ ಅವರ ಸಮಯವನ್ನೂ, ನಮ್ಮ ಹಣವನ್ನೂ ಪೋಲು ಮಾಡೋದನ್ನ ಪೋಲ್ ಅಂತಲೋ ಪೋಲಿಂಗ್ ಅಂತಲೋ ಕರೆಯೋದು” ಸತ್ಯಕ್ಕೆ ಹತ್ತಿರವಾದುದನ್ನು ನುಡಿದ ಸತ್ನಾರಾಯ್ಣ.
“ಪೋಲ್ ಬೂತ್ ಅಂದರೆ ಏನು?”
“ಬೂತಾಕಾರದ ರೌಡಿಗಳು ನುಗ್ಗಿ ತಮಗೆ ಬೇಕಾದವರ ಹೆಸರಿಗೆ ಹೋಲ್ಸೇಲಾಗಿ ಓಟ್ ಮಾಡೋ ಜಾಗವೇ ಪೋಲ್ಬೂತ್” ನುಡಿದ ಮಂಜಣ್ಣ.
“ದೇಶದ ಭವಿಷ್ಯವನ್ನು ನಿರ್ಧರಿಸೋ ಬೂತವೇ ಆ ಬೂತ್” ಎಂದರು ಉಪಾಧ್ಯಾಯರು.
“ಖನ್ನಡದಾಗ ಕೊಶ್ನೆ ಕೇಳ್ರೀ?” ಅಲ್ಲಿಯವರೆಗೆ ನಿದ್ರಾವಸ್ಥೆಯಲ್ಲಿದ್ದ ಉಟ್ಟು ಓರಾಠಗಾರ ತಿಮ್ಮೇಶ ಹಬ್ಬರಿಸಿದ; ಕ್ಷಮಿಸಿ, ಅಬ್ಬರಿಸಿದ.
“ಮತದಾನ ಎಂದರೇನು?” ಕೇಳಿದರು ಪಾಂಡೇಶ್ವರ್.
“ಅವೆಲ್ಲ ಆ ಕಾಲಕ್ಕಿತ್ತು ಸಾರ್. ಜನಗಳು ತಾವಾಗೇ ಬಂದು ತಮಗಿಷ್ಟ ಆದವರಿಗೆ ಓಟ್ ಹಾಕಿ ಬೆರಳಿಗೆ ಚುಕ್ಕಿ ಇಡಿಸ್ಕೊಂಡು ಹೋಗ್ತಿದ್ದದ್ದು ಮತದಾನ. ಈಗೆಲ್ಲ ಮತ ಹರಾಜ್; ಯಾರು ಜಾಸ್ತಿ ಕೊಟ್ಟನೋ ಅವನೇ ಮಹರಾಜ್” ಎಂದ ಸೀನು.
ಆಗಿನ ಅಭ್ಯರ್ಥಿಗಳು ಹಾಗೆಯೇ ಇದ್ದರು. ಸ್ವಾತಂತ್ರ್ಯ ಬಂದ ಹೊಸತು. ರಾಜ್ಯದ ಮಂತ್ರಿಮಂಡಲದಲ್ಲಿ ಸ್ವಾತಂತ್ರö್ಯ ಹೋರಾಟಗಾರರಾದ ಸುಬ್ಬರಾಮಶೆಟ್ಟರೂ ಇರುವುದು ಸೂಕ್ತವೆಂದು ಕಾಂಗ್ರೆಸ್ಸಿಗೆ ತೋಚಿತು. ಪಕ್ಷದ ವರಿಷ್ಠರು ಸುಬ್ಬರಾಮಶೆಟ್ರ ಮನೆಗೆ ಹೋಗಿ ತಮ್ಮ ಇರಾದೆಯನ್ನು ವ್ಯಕ್ತಪಡಿಸಿದರು.
“ನಾನ್ಯಾಕ್ಮಂತ್ರಿ ಆಗ್ಬೇಕು?” ಎಂದರು ಶೆಟ್ಟರು.
“ನೀವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೀರಲ್ಲ?” ಹೇಳಿದನೊಬ್ಬ ಕಾರ್ಯಕರ್ತ.
“ಓಹೋ! ಆಗಿನ ಕೆಲಸಕ್ಕೆ ಇದೊಂದು ಪೇಮೆಂಟೇನು? ನಾನು ಹೋರಾಡಿದ್ದು ನನ್ನ ತಾಯಿಯ ಬಿಡುಗಡೆಗಾಗಿ. ಹಣಕ್ಕಾಗಿಯೋ, ಅಧಿಕಾರಕ್ಕಾಗಿಯೋ ಅಲ್ಲ. ನನಗೆ ಇದರಲ್ಲಿ ಆಸಕ್ತಿ ಇಲ್ಲ.”
ನೆಹರೂವರೆಗೆ ವಿಷಯ ತಲಪಿತು. ಸ್ವತಃ ನೆಹರೂ ಶೆಟ್ಟರನ್ನು ಭೇಟಿಯಾಗಿ ಅದೇ ಇರಾದೆಯನ್ನು ಸೂಚಿಸಿದರು.
“ನೀವು ಹೇಳಿದಮೇಲೆ ಇಲ್ಲವೆನ್ನಲಾರೆ. ಆದರೆ ನನ್ನದೂ ಒಂದು ಷರತ್ತನ್ನು ನೀವು ನಡೆಸಿಕೊಡಿರೆಂದು ಬಿನ್ನಹ.”
“ಏನು?”
“ಒಂದು ವರ್ಷದ ಅವಧಿಗಷ್ಟೇ ನಾನು ಮಂತ್ರಿಯಾಗಿರುತ್ತೇನೆ. ನಂತರ ಬೇಡ.”
ಒಮ್ಮೆ ರುಚಿ ಕಂಡ ಬೆಕ್ಕು ಮತ್ತೆ ಅದೇ ರುಚಿ ಬೇಡುವುದೆಂದು ನೆಹರೂ ನಂಬಿದ್ದರೋ ಅಥವಾ ಇಷ್ಟಕ್ಕಾದರೂ ಶೆಟ್ಟರು ಸಮ್ಮತಿಸಿದರಲ್ಲ ಎಂದು ತೃಪ್ತರಾದರೋ ಅವರೇ ಬಲ್ಲರು. ಶೆಟ್ಟರ ಪ್ರಮಾಣವಚನ ಸ್ವೀಕಾರದ ಸಮಯ ಒದಗಿತು. ಶೆಟ್ಟರು ಅಂದಿನ ರಾಜ್ಯಪಾಲರತ್ತ ಸಾಗಿ ಒಂದು ವರ್ಷದ ಮುಂದಿನ ದಿನಾಂಕವಿದ್ದ ರಾಜೀನಾಮೆ ಪತ್ರವನ್ನು ಅವರ ಕೈಗಿತ್ತು ಪ್ರಮಾಣವಚನ ಸ್ವೀಕರಿಸಿದರು. ಒಂದು ವರ್ಷದ ನಂತರ ಸೂಚಿತ ದಿನಾಂಕದಂದು ಮಂತ್ರಿಗಿರಿಯಿಂದ ಕೆಳಗಿಳಿದರು.
ಅದು ಅಂದಿನ ಕಾಲ. ಇಂದು?
ಕಾರ್ಪೊರೇಟರ್ ಎಲೆಕ್ಷನ್ನ ನ್ಯಾಯ್ವಾಗೇ ಗೆದ್ದ
ಮೇಯರಾಗೋ ಹೊತ್ಗೇ ಬ್ಯಾಲೆಟ್ ಬಾಕ್ಸ್ ಕದ್ದ
ಕದ್ದ ಗೆದ್ದ ಗೆದ್ದ ಕದ್ದ
ನಾರಿಗೆ ಸೀರೆ ಕೊಟ್ಟ ಗಂಡಿಗೆ ಹೆಂಡ ಕೊಟ್ಟ
ಜಾಣರೊಳ್ ಜಾಣ ಮಂತ್ರಿಯೂ ಬಂದ
ಮೋಸದ ಮೋಡಿ ಹಾಕಿದ
ಮಂತ್ರೀ? ಕುತಂತ್ರೀ?
ಬೀದಿ ಜಗುಲಿಯಲಿ ಬೀಡಿ ಸೇದುತಲಿ ಓಟರ್ ಕೂತಿರಲು ಸುಮ್ಮನೆ
ಹಣವ ತೋರುತಲಿ ಮತವ ಸೆಳೆಯುತಲಿ ಎಲೆಕ್ಷನ್ ಗೆದ್ದುಕೊಂಡನೋ ಮಂತ್ರಿ
ವಿಧಾನಸೌಧ ಸೇರ್ದನೋ?
ನಾರಿಗೆ ಸೀರೆ ಕೊಟ್ಟ?
ಎನ್ನುವುದು ಇಂದಿನ ಸಾಮಾನ್ಯ ಸ್ಥಿತಿ. ಸದರಿ ತ್ರಿಪಾರ್ಟಿಯವರೂ ಅದೇ ಕುಲಕ್ಕೆ ಸೇರಿದವರು.
“ನೀವೇಕೆ ಅಷ್ಟೊಂದು ಬಾರಿ ಪಕ್ಷವನ್ನು ಬದಲಾಯಿಸುತ್ತೀರಿ?” ಕೇಳಿದನೊಬ್ಬ ಬಾತ್ಮೀದಾರ.
“ದೇಶದ ಒಳಿತಿಗಾಗಿ ನಮ್ಮ ಧೋರಣೆಯನ್ನು ಕಾಲಕಾಲಕ್ಕೆ ಬದಲಿಸಬೇಕಾಗುತ್ತದೆ” ಎಂದರು ಪಾಂಡೇಶ್ವರ್. ಆದರೆ ನಿಜ ಕಾರಣವನ್ನು ಅವರ ವಿರೋಧಿ ಕಮ್ ಸಹಪಕ್ಷಿಯಾದ ಕೊಳಕೇಶ ಕಾಳಿಂಗರೇ “ಹಾವುಗಳು ಆಗಾಗ್ಗೆ ಪೊರೆ ಬಿಡುವುದು ಸ್ವಾಭಾವಿಕ. ಪೊರೆದವರನ್ನು ಬಿಡುವುದು ಪಾಂಡೇಶ್ವರನಿಗೆ ಅಷ್ಟೇ ಸಹಜವಾದ ಕ್ರಿಯೆ. ಅಸಲಿಗೆ ಪಾಂಡ್ ಅರ್ಥಾತ್ ಕೆರೆಯ ಹಾವು ಉರುಫ್ ಕೇರೆಹಾವು ಎಂದೇ ಪಾಂಡೇಶ್ವರ್ ನಮ್ಮ ಸರ್ಕಲ್ಲಲ್ಲಿ ಫೇಮಸ್ಸು” ಎಂದು ಬಿರುಪಿಸುಗುಟ್ಟಿದ್ದರು.
“ಕಮ್ಯೂನಿಸಂಗೂ ಇಂದಿನ ಇಂಡಿಯನ್ ಡೆಮಾಕ್ರಸಿಗೂ ಏನು ವ್ಯತ್ಯಾಸ?” ಎಂದು ಅದಾರೋ ಕೇಳಿದ್ದರು.
“ಅದು ಈಕ್ವಲ್ ಡಿಸ್ಟ್ರಿಬ್ಯೂಷನ್ ಆಫ್ ವೆಲ್ತ್; ಇದು ಈಕ್ವಲ್ ಡಿಸ್ಟ್ರಿಬ್ಯೂಷನ್ ಆಫ್ ಸ್ಟೆಲ್ತ್. ಕದ್ದ ಮಾಲನ್ನು ಪಕ್ಷಾತೀತವಾಗಿ ಹಂಚಿಕೊಳ್ಳುವುದೇ ರಾಜಕೀಯ. ಇಲ್ಲಿನ ಜನಗಳ ಕ್ವಾಲಿಟಿಯೇ ಸ್ಪೆಷಲ್ಲು” ಎಂದು ಉತ್ತರಿಸಿದ್ದ ಮತ್ತೊಬ್ಬ.
ನಿಜವೇ. ಖಡ್ಗಮೃಗದ ಕೊಂಬಿನಷ್ಟು ದಪ್ಪದ ಚರ್ಮ, ಎಂತಹ ಬೈಗಳುವನ್ನೂ ಹಸನ್ಮುಖದಿಂದ ಸ್ವೀಕರಿಸುವ ಸ್ಥೈರ್ಯ, “ನಾಚಿಕೆ ಹೇಸಿಗೆ ಎಲ್ಲ ಊರಿಂದಾಚ್ಗೆ” ಎನ್ನುವ ಭಾವ, ಸಕಲವನ್ನೂ ತಿಂದು ಜೀರ್ಣಿಸಿಕೊಳ್ಳುವ ಶಕ್ತಿ, ಈ ಎಲ್ಲ ಗುಣಗಳು ಇರುವವನು ಮಾತ್ರ ರಾಜಕೀಯದಲ್ಲಿ ಉಳಿದುಕೊಳ್ಳಬಲ್ಲ. ನಿರ್ಭಾವುಕತೆಯೇ ಇಲ್ಲಿನ ಸ್ಥಾಯೀಭಾವ.
ಆಹಾ! ಗತಯುಗಗಳಿಗೂ ಇಂದಿನ ದಿನಗಳಿಗೂ ಎನಿತೆನಿತು ಸಾಮ್ಯ! ತಲೆಯಿಲ್ಲದಿದ್ದರೂ ದೇಹದಲ್ಲಿದ್ದ ತೂತಿಗೇ ಸಿಕ್ಕಿದ್ದೆಲ್ಲವನ್ನೂ ತುರುಕಿಕೊಂಡು ಅರಗಿಸಿಕೊಳ್ಳುತ್ತಿದ್ದ ಕಬಂಧನಂತೆಯೇ ತಮ್ಮ ಎರಡೂ ಬಾಹುಗಳನ್ನು ಚಾಚಿ ಸಿಕ್ಕದ್ದನ್ನೆಲ್ಲ ನುಂಗಿ ಅರಗಿಸಿಕೊಳ್ಳುವ ಕಬಂಧಾಸುರರು ಇಲ್ಲುಂಟು.
“ಇದೋ ನಿಮ್ಮಳವಿನಲ್ಲೇ ಸ್ವರ್ಗಸದೃಶವಾದ ಭವಿಷ್ಯ. ಹಿಡಿಯಿರಿ ನನ್ನನ್ನು, ಪಡೆಯಿರಿ ಸಂಪತ್ತನ್ನು” ಎಂದು ಕೈಯಳತೆಗೆ ಸಿಗುವಂತೆಯೇ ಹತ್ತಿರವಾಗಿ, ಸಮೀಪಿಸುತ್ತಿದ್ದಂತೆಯೇ ಮಿಂಚಿ ಮಾಯಾಮೃಗವಾಗುವ ಮಾರೀಚರ ಪಡೆಯೇ ಇಲ್ಲುಂಟು. ಹಾಗೆ ನೋಡಿದರೆ ಅಂದಿನ ಒಬ್ಬೊಬ್ಬ ರಕ್ಕಸನೂ ಒಂದೊಂದು ಪಾತ್ರವಾಗಿ ನಮ್ಮ ಮುಂದೆ ಇಂದಿಗೂ ಇದ್ದಾನೆ.
ಉಪ್ಪಿನ್ಕಾಯಿ ನೆಕ್ಕೋಕೆ ಪಾಕೆಟ್ ಎಂಡ ಕುಡಿಯೋಕೆ
ತುಂಡು ಮಾಂಸ ಸಾಕು ನನ್ನ ಹಸಿವು ತಣಿಯೋಕೆ
ಅಂಗೈಯಗಲ ಬಟ್ಟೆ ಸಾಕು ಮಾನ ಮುಚ್ಚೋಕೆ ||
ಕಾಡ್ನಾಗಷ್ಟು ಗಂಧ ತಿಂದ್ರೆ ನನ್ಗಂಟೇನೋಯ್ತು
ಊರ್ನಾಗಷ್ಟು ಎಕ್ರೆ ಪಾರ್ಕು ತಿಂದ್ರೇ ಏನಾಯ್ತು
ಕಾಸು ಆಕಿದ್ಮ್ಯಾಗೆ ಲಾಭ ಬ್ಯಾಡಂದ್ರೆಂಗೆ
ವಸೂಲಿಗಂತ ಕುಂತ್ಕಂಡವ್ರೆ ತಪ್ಪದ್ರಾಗಿಲ್ಲ ||
ಅರಿಯೋ ನದಿ ಒಂದೇ ಕಡೆ ನಿಲ್ಲೋಕಾಗಲ್ಲ
ಪಕ್ಸ್ ಒಂದ್ರಲ್ಲೆ ರಾಜಕಾರ್ಣಿ ಬಾಳೋಕಾಗಲ್ಲ
ರೆಸಾರ್ಟು ಸೇರಿದಾಗ್ಲೇ ರೇಟು ಎಚ್ಚೋದಲ್ವಾ
ಜೋಕರ್ ಕಾರ್ಡಂಗ್ ಇದ್ರೇನೇ ಇಲ್ಲ್ ಷೋ
ನಡ್ಯೋದಲ್ವಾ||
ಎಂದು ಹಾಡುವ ಜನರು ಇರುವವರೆಗೆ ಇಂತಹ ಪುಢಾರಿಗಳು ಇದ್ದೇ ಇರುತ್ತಾರೆ. ಮೊನ್ನೆ ಇಂತಹ ಒಬ್ಬ ರಾಜಕಾರಣಿಯನ್ನು ಸಂದರ್ಶಿಸುವ ಸುಯೋಗ(?) ಒದಗಿತು.
“ನೀವು ಜನರ ನಿಧಿಯನ್ನು ಕೊಳ್ಳೆ ಹೊಡೆಯುವುದೇಕೆ?” ಥಟ್ಟನೆ ವಿವಾದಾಸ್ಪದ ಪ್ರಶ್ನೆಯನ್ನೆಸೆದೆ.
“ನಾವು ಜನ ಪ್ರತಿನಿಧಿಗಳು. ಜನರ ಪ್ರತಿ ನಿಧಿಯೂ ನಮ್ಮದೇ” ಎಂದರವರು.
“ನಿಮ್ಮ ಧ್ಯೇಯವೇನು?”
“ಕಲ್ಲಾದರೆ ನಾನು ಗಣಿರಾಜರ ಮನೆಯಲಿ ಇರುವೆ
ಮಣ್ಣಾದರೆ ನಾನು ಭೂಗಳ್ಳರ ಜೊತೆಯಲಿ ಮೆರೆವೆ
ಮರವಾದರೆ ನಾನು ಕಾಡಿನ ಸಚಿವರ ಮನೆಗೆ
ನೀರಾದರೆ ನಾನು ಪರನಾಡಿನ ದಿಕ್ಕಿಗೆ ಹರಿವೆ
ಎನ್ನುತ್ತ ತರುಜಲನಿಧಿನಿಕ್ಷೇಪಗಳು ತಾವಾಗಿಯೇ ನಮ್ಮತ್ತ ಸರಿದು ಬರುತ್ತವೆ. ಹಾಗೆ ನಮ್ಮತ್ತ ಬಂದವನ್ನು ನಮ್ಮ ತಿಜೋರಿಗಳಲ್ಲಿ ರಕ್ಷಿಸುವುದೇ ನಮ್ಮ ಧ್ಯೇಯ.”
“ನಿಮ್ಮಲ್ಲೊಬ್ಬರು ಕುರಿಗೆಂದು ಇರಿಸಿದ್ದ ಮೇವನ್ನು ತಿಂದರಂತೆ?”
“ಕುರಿಯನ್ನೇ ತಿನ್ನುವಾಗ ಅದರ ಮೇವನ್ನು ತಿನ್ನುವುದು ತಪ್ಪೇನು? ನಿಮ್ಮ ಬೆಂಗಳೂರಿಗರು ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಸಮ್ಮತಿಯನ್ನೂ ಇತ್ತಿದ್ದಾರೆ.”
“ಅದಾವ ರೀತಿ?”
“ಮೇಯುವವರ ಹೆಸರಿನಲ್ಲೇ ಒಂದು ಭವನವನ್ನು ನಿರ್ಮಿಸಿದ್ದಾರೆ – ಮೇಯೋ ಹಾಲ್!”
“ಆದರೂ? ಮೇಯುವುದೆಂದರೆ?” ತಡವರಿಸಿದೆ.
“ನಮ್ಮ ರಾಜಕೀಯ ವೃತ್ತಿಯ ಆರಂಭದ ಹಂತದಲ್ಲಿಯೇ ಮೇಯರ್ ಪಟ್ಟವಿದೆ. ಹೀ ಹೂ ಮೇಯ್ಸ್ ಈಸ್ ಎ ಮೇಯರ್ – ಯಾರು ಮೇಯುವನೋ ಅವನೇ ಮೇಯರ್ ಎಂಬ ವ್ಯಾಖ್ಯಾನವಿದೆಯಂತೆ. ಅಲ್ಲದೆ ಮತ್ತೊಂದು ವ್ಯಾಖ್ಯಾನವೂ ಇದೆ.”
“ಏನದು?”
“May err ಎನ್ನುವುದು. ಯಾರಿಗೆ ತಪ್ಪು ಮಾಡಲು ಪರವಾನಗಿ ಇರುವುದೋ ಅವನೇ ಮೇಯರ್. ಮೇಯರ್ಗಿರಿಯಿಂದ ಮೇಲೇರುತ್ತಿದ್ದಂತೆ ಸಣ್ಣ ಮಟ್ಟದ ಕೋಲಾಹಲವನ್ನು ಉಂಟು ಮಾಡಲು ಪರ್ಮಿಷನ್ ಇರುವವನೇ ಮಂತ್ರಿ.”
“ಅದು ಹೇಗೆ?”
“Mini stir ಗಳನ್ನು ಮಾಡುವವನೇ ಮಿನಿಸ್ಟರ್!”
“ಸಾಮಾನ್ಯವಾಗಿ ಮಂತ್ರಿಗಳು ಬಹಳ ಹಗರಣಗಳಲ್ಲಿ ಸಿಲುಕುವರಲ್ಲ, ಅದಕ್ಕೆ ಕಾರಣವೇನು?”
“ಆ ಪದವೇ ಕಾರಣ.”
“ಹಗರಣ ಎಂಬ ಪದವೆ? ಹೇಗೆ?”
“ಹಗರಣದಿ ಹಣವಿದು, ಗಣವಿಹುದು, ರಣವಿಹುದು, ಹರಣವಿಹುದು. ಇಷ್ಟೆಲ್ಲ ಇರುವುದರಿಂದಲೇ ಹಗರಣವಿಹುದು ಅಂತ ಒಬ್ಬ ಪೊಲಿಟಿಕಲ್ ಕ್ರಿಟಿಕ್ಕೇ ಬರೆದಿದ್ದಾನೆ.”
“ನಮ್ಮದು ಪ್ರಜಾಪ್ರಭುತ್ವ. ಆದರೆ ಮಂತ್ರಿಯ ಮಗನೇ ಮುಂದಿನ ಮುಖಂಡ ಆಗುತ್ತಿರುವುದು ಎಲ್ಲೆಡೆಯೂ ಕಂಡುಬರುತ್ತಿದೆ. ಇದಕ್ಕೆ ಕಾರಣವೇನು?”
“ಸಮಾಜದ ಒಳಿತಿಗಾಗಿಯೇ. ಇನ್ನೇನೂ ಗೊತ್ತಿಲ್ಲದ ಫಟಿಂಗರು ಊರಲ್ಲೆಲ್ಲ ದಾಂಧಲೆ ಎಬ್ಬಿಸುವ ಬದಲು ಮಂತ್ರಿಯಾಗಿಬಿಟ್ಟರೆ ತಾವಾಯಿತು, ತಮ್ಮ ತಿನ್ನಾಟವಾಯಿತು ಅಂತ ಸುಮ್ಮನಿರ್ತಾರೆ. ಕೆಟ್ಟ, ಕ್ರೂರ ರೌಡಿಯೊಬ್ಬನಿಂದ ಸಮಾಜವನ್ನು ರಕ್ಷಿಸುವ ಸಲುವಾಗಿ ನನ್ನ ಮಗನನ್ನು ರಾಜಕೀಯಕ್ಕೆ ಸೇರಿಸಿದೆ.”
“ಎಲ್ಲ ಮಂತ್ರಿಗಳ ಮಕ್ಕಳು ಫಟಿಂಗರೇನು?”
“ಅಲ್ಲ. ದಡ್ಡರು, ಮೂರ್ಖರು, ಜೋಕರ್ಗಳೂ ಇರುತ್ತಾರೆ. ಅಪರೂಪಕ್ಕೆ ಕೆಲವರು ವೈದ್ಯರು, ಇಂಜಿನಿಯರ್ಗಳು ಆದವರೂ ಇದ್ದಾರೆ. ಆದರೆ ಅವರು ನಿಯಮಕ್ಕೆ ಅಪವಾದ ಅಷ್ಟೆ.”
“ನೀವು ರಾಜಕಾರಣಿಗಳು ಒಂದು ಹೇಳಿಕೆಯನ್ನು ನೀಡಿ, ನಂತರ ಆ ಹೇಳಿಕೆಯನ್ನು ನೀಡಲೇ ಇಲ್ಲವೆಂದು ದಬಾಯಿಸುವಿರಲ್ಲ, ಅದು ಸರಿಯೆ?”
“ನಮ್ಮ ಮಾತುಗಳನ್ನು ಸರಿಯಾಗಿ ಗಮನಿಸಿ.”
ಅವರ ಆದೇಶದಂತೆಯೇ ಹಲವಾರು ಕನ್ನಡನಾಡಿನ ಮಂತ್ರಿಗಳು ಮೊದಲು ಹೇಳಿದುದನ್ನು, ಆಮೇಲೆ ಅಲ್ಲಗಳೆದುದನ್ನು ವೀಕ್ಷಿಸಿ, ಆ ಕ್ಲಿಪಿಂಗ್ಗಳನ್ನು ಅವರ ಮುಂದೆ ಹಿಡಿದೆ.
“ನಾನು ಆ ಥರ ಏಳಲೇ ಇಲ್ಲ ಅಂದಿದ್ದೀವೇ ಹೊರತು ಹೇಳಲೇ ಇಲ್ಲ ಅಂದಿಲ್ಲ” ರಂಗೋಲೆಯ ಕೆಳಗೆ ತೂರಿಕೊಂಡರು ಮಂತ್ರಿಗಳು.
“ನಾನು ರಾಜಕಾರಣಿಗಳನ್ನು ಬಹಳ ಮೆಚ್ತೀನಿ. ದಿನವೆಲ್ಲ ಅಲೆದು, ಆರೇಳು ಪಾರ್ಟಿಗಳಲ್ಲಿ ಭಾಗವಹಿಸಿ, ಮಧ್ಯರಾತ್ರಿಯ ಮದ್ಯರಾತ್ರಿಯಲ್ಲಿಯೂ ತಿಂದು ಕುಡಿದು ಸಹ ಅವರ ಆರೋಗ್ಯ ಹಾಳಾಗಲ್ವಲ್ಲಾ, ಅಂತಹ ಹೊಟ್ಟೆ ನನಗೆ ನಿಮಗೆ ಇದೆಯೇನ್ರೀ?” ಎಂದಿದ್ದರು ಖ್ಯಾತ ಕಾರ್ಟೂನಿಸ್ಟ್ ಆರ್.ಕೆ. ಲಕ್ಷ÷್ಮಣ್.
ಸ್ಟಾಕ್ಹೋಮ್ ಎಂಬ ಸ್ಥಳದಲ್ಲಿ ಅಪಹರಣಕಾರರು ಒತ್ತೆಯಾಳುಗಳನ್ನಿರಿಸಿಕೊಂಡು ತಮ್ಮ ಬೇಡಿಕೆಗಳನ್ನು ಮುಂದಿರಿಸತೊಡಗಿದರು. ಅಪಹರಣಕಾರರ ಪೈಕಿ ಒಬ್ಬನ ಠೀವಿ, ಗತ್ತು, ಗೈರತ್ತುಗಳಿಂದ ಪ್ರಭಾವಿತಳಾದ ಒತ್ತೆಯಾಳೊಬ್ಬಳು ಅವನನ್ನೇ ಪ್ರೀತಿಸತೊಡಗಿದಳು. ವೈರಿಯನ್ನೇ ಪ್ರೀತಿಸುವ ಈ ರೀತಿಯನ್ನು ಸ್ಟಾಕ್ಹೋಮ್ ಸಿಂಡ್ರೋಮ್ ಎನ್ನುತ್ತಾರೆ.
ಏಪ್ರಿಲ್ ಕಳೆದು ಮೇ ಬರುತ್ತಿದ್ದಂತೆಯೆ ಸುರಾಸುರರ ವೇಷದಲ್ಲಿ ಮಂತ್ರಿಗಳ ಪಡೆ ಮುನ್ನುಗ್ಗುತ್ತದೆ. ಕಿಂದರಿಜೋಗಿಯ ಹಿಂದೆ ನಡೆದ ಮಕ್ಕಳಂತೆ ನಾವೂ ಅವರನ್ನು ಅನುಸರಿಸುತ್ತೇವೆ, ಅನುಭವಿಸುತ್ತೇವೆ.
ಗತ್ಯಂತರವಿಲ್ಲ. ಬನ್ನಿ, ನಾವೂ ಸ್ಟಾಕ್ಹೋಮ್ ಸಿಂಡ್ರೋಮಿಗೆ ಜೈ ಎನ್ನೋಣ.