ಸದ್ಯ, ಬಂದ್ರಲ್ಲ! ಗೊಂಬೆ ಕೂಡ್ಸಿದ್ದೇ ವೇಸ್ಟಾಯ್ತೇನೋಂತಿದ್ದೆ. ಬನ್ನಿ, ಹೀಗೆ ಬನ್ನಿ…. ಅಂಗಳದಲ್ಲಿ ಹಳ್ಳದಲ್ಲಿ ಇದ್ದೂ ಇಲ್ಲದಹಾಗೆ ಕಾಣ್ತಿರೋದೇನೂಂದ್ರೇ? ಅದು ರಷ್ಯನ್ ರಾಕೆಟ್ಟು; ಚಂದ್ರನ ಮೇಲೆ ಜೋ ಪಡಾ ಥಾ, ಅದೇ ತರಹದ ಪುತಲೀನ ಇಸ್ ರೋ ಮೇ ಇರೋ ಒಬ್ರು ಮಾಡ್ಕೊಟ್ಟಿದ್ದಾರೆ. ವಿಕ್ರಮ್ ಲ್ಯಾಂರ್ರು, ಪ್ರಗ್ಯಾನ್ ರೋರ್ರು ಎಲ್ಲೀಂದ್ರೇನು? ಒಳಗಿವೆ. ನಿದ್ರೆ ಮಾಡ್ತಿವೆ. ಹಬ್ಬ ಕಳೆದ್ಮೇಲೆ ಎಬ್ಬಿಸಕ್ಕಾಗತ್ತಾಂತ ನೋಡ್ಬೇಕು.
ಹೀಗ್ಬನ್ನಿ. ಇಲ್ಲಿ ಮುರಿದ್ಹೋದ ತರಹ ಕಾಣ್ತಿರೋದು ಆಕ್ಚುಯಲಿ ಮುರ್ದಿರೋದಲ್ಲ, ಕಿತ್ತಿರೋದು. ಭಾರತೀಯ ನಾರಿಯ ಭಾರ ಅತೀ ಆದ ಕಾರಣ ತನ್ನ ಸ್ವಸ್ಥಾನದಿಂದ ಸಭಾತ್ಯಾಗ ಮಾಡಿದ ಬಸ್ಸಿನ ಬಾಗಿಲು ಇದು. ‘ಮಹಿಳೆಯರಿಗೆ ಮುಕ್ತ ಅವಕಾಶ’ ಕೊಡ್ಬೇಕೂನ್ನೋ ಸದುದ್ದೇಶದಿಂದ ಸ್ವಪ್ರೇರಣೆಯಿಂದ ಹೊರಬಿದ್ದ ಬಸ್ಸಿನ ಬಾಗಿಲಿನ ತರಹದ್ದೇ ಗೊಂಬೆಯನ್ನ ನಾರಿಶಕ್ತಿ ಅಸೋಸಿಯೇಟ್ಸ್ನವರು ಮಾಡಿಕೊಟ್ಟಿದ್ದಾರೆ.
ಒಳಗ್ಬನ್ನಿ. ಅಲ್ಲಿ ಬಂಡೆಗೆ ಕಣ್ಣು ಮೂಗು ಇಟ್ಟಿರೋ ತರಹದ ಗೊಂಬೆ ಕಾಣ್ತಿದೆಯಲ್ಲ, ಅದೇ ಕೆ.ಪಿ.ಬಂಡೆ ಗೊಂಬೆ. ಆ ಕಡೆ ಹೊಳೆಯೋ ಬುರುಡೆ ಇರೋ ಗೊಂಬೆ ಇದೆಯಲ್ಲ, ಆ ಗೊಂಬೆಗೆ ಇದನ್ನ ನೋಡಿದರೆ ಕೆಲವೊಮ್ಮೆ ಮೇಜರ್ ಇರಿಟೇಷನ್, ಕೆಲವೊಮ್ಮೆ ಮೈನರ್ ಇರಿಟೇಷನ್. ಹುಷ್! ಗಮನವಿಟ್ಟು ಕೇಳಿಸಿಕೊಳ್ಳಿ. ‘ಗಂಡು ಎಂದರೆ ಗಂಡೂ ಬೆಟ್ಟದ ತುಂಡು; ಕನ್ಕಾಪುರದ ಬೆಂಕಿಯ ಚೆಂಡು ಬಹುತ್ ಮೇರಾ ಫಂಡು’ ಅಂತ ಹಾಡ್ತಿರೋದು ಕೇಳಿಸ್ತೇನು? ಈ ಗೊಂಬೆಗೆ ಕೀ ಕೊಟ್ಟರೆ ಸಾಕು, ಇದರ ಎದುರು ಹಲವಾರು ಗೊಂಬೆಗಳು ಸಾಲಾಗಿ ಕಾಣಿಸಿಕೊಳ್ಳತ್ವೆ; ಅವೆಲ್ಲಕ್ಕೂ ಈ ಗೊಂಬೆ ಗಿಫ್ಟ್ ಕೊಡೋ ತರಹ ಮೂಮೆಂಟ್ ಇರತ್ತೆ. ಹೈಕ್ಲಾಸ್ ಗೊಂಬೆ.
ಆ ಹೊಳೆಯೋ ಬುರುಡೆಯ ಗೊಂಬೆ ಇದೆಯಲ್ಲ, ಅದು ಹೋದ ವರ್ಷವೂ ಇತ್ತು. ಆಗ ಅದನ್ನು ಒಳ್ಳೆಯ ಜಾಗದಲ್ಲೇ ಇಟ್ಟಿದ್ವಿ. ಆಕ್ಚುಯಲಿ ಅದು ಇಂಡಿಪೆಂಡೆಂಟ್ ಗೊಂಬೆ ಅಲ್ಲ. ಅದರ ಹಿಂದೆ ಒಂದು ಹಲ್ಕಡೀತಿರೋ ಕೋಪದ್ಗೊಂಬೆ ಇದೆಯಲ್ಲ, ಆ ಗೊಂಬೆಯನ್ನು ತೊಗೊಂಡ್ರೆ ಈ ಗೊಂಬೆ ಫ್ರೀ ಅನ್ನೋ ಸ್ಕೀಮಲ್ಲಿ ತೊಗೊಂಡಿದ್ದು. ಅದು ಮುಂದಕ್ಕೆ ತಳ್ಳಿದರೆ ಇದು ಮುಂದಕ್ಕೆ ಹೋಗೋದು, ಮಾತಾಡು ಅಂದ್ರೆ ಮಾತಾಡೋದು. ಇದನ್ನು ಬಸವಳಿದ ಗೊಂಬೆ ಅಂತಾರೆ. ಆ ಸಿಡುಕುಗೊಂಬೆ ಯಾವ್ದೂಂದ್ರೇನು? ಅದು ಶಿಕಾರಿಪುರದಲ್ಲಿ ಬಹಳ ಹಿಂದೆ ತಯಾರಾದದ್ದು. ಶಿಕಾರಿ ಆಡೋ ಜನರು ಹೆಚ್ಚಾದ್ರೂಂತ ಕೋಪ ಅದಕ್ಕೆ. ಒಳ್ಳೆ ಗೊಂಬೇನೇ. ಹಳೇದಾದ್ಮೇಲೆ ಮನುಷ್ಯರಿಗಾದ್ರೇನು, ಗೊಂಬೆಗಾದ್ರೇನು, ಕೋಪ ಹೆಚ್ಚಾಗೋದು ಸಹಜ್ವೇ.
ಏನಂದ್ರಿ? ‘ಗೊಂಬೆ ಕೂಡ್ಸಿದೀನಿ ಅಂದ್ರಿ, ಇಲ್ನೋಡಿದ್ರೆ ಗೊಂಬೆಗಳನ್ನ ನಿಲ್ಸಿದ್ದೀರಲ್ಲ…’ ಅಂದ್ರೇನು? ಗೊಂಬೆಗಳದ್ದೇ ವಿಚಿತ್ರ ಯೋಗ ಸಾರ್. ಮಂತ್ರಿಗಳು ಎಲೆಕ್ಷನ್ ಸಮಯದಲ್ಲಿ ನಿಂತು ಪಟ್ಟಕ್ಕೆ ಬಂದಾಗ ಮಲಗ್ತಾರೆ. ಗೊಂಬೆಗಳು ವರ್ಷದ ಮುನ್ನೂರೈವತ್ತೈದು ದಿನ ಮಲಗಿ ಪಟ್ಟಕ್ಕೆ ಬರೋ ದಿವಸ ನಿಲ್ಲತ್ವೆ. ‘ವರ್ಷವೆಲ್ಲ ಮಲಗಿ ಜಡ್ಡುಗಟ್ಟಿರತ್ತೆ. ನಿಲ್ಲಿಸ್ರಯ್ಯಾ’ ಅಂತ ಈ ‘ದಸ್ ದಿನ್ ಕಾ ಸುಲ್ತಾನ್’ಗಳು ಗೋಗರ್ಯೋದನ್ನು ಕೇಳಕ್ಕಾಗ್ದೇ ನಿಲ್ಲಿಸ್ತೀವಿ. ಕೊಂಚ ಎಡಕ್ಬನ್ನಿ… ಇಲ್ಲಿರೋದು ಅಬ್ಕಾರಿ ಗೊಂಬೆ ಅಂತ. ‘ಸರ್ಕಾರ ಫುಲ್ಲು ಟೈಟು; ತಿಜೋರಿ ಖಾಲಿ ಆಯ್ತು. ಸಂಬ್ಳಕ್ಕು ಕತ್ರಿ ಬಿತ್ತು; ಎಂಡಕ್ಕೆ ಲೈಸೆನ್ಸ್ ಬಂತು’ ಅಂತ ‘ವಿವಾಹ ಭೋಜನಂಬು’ ಧಾಟಿಯಲ್ಲಿ ಹಾಡ್ತಿದೆ ಇದು. ‘ಪ್ರತಿ ಪಂಚಾಯತಿಯಲ್ಲೂ ಒಂದೊಂದು ಮದ್ಯದ ಅಂಗಡಿ ಇರ್ಬೇಕು’ ಅಂತ ಆಗಾಗ ಘೋಷಣೆ ಕೂಗಿ ತೆಪ್ಪಗೆ ಕೂತ್ಬಿಡೋ ಈ ಗೊಂಬೆ ಮೂಡ್ ಬಂದಾಗ ‘ಮಧುರ ಮದಿರೆ ನೀ ಗೌರ್ಮೆಂಟ ತ್ರಾಣ; ತೃಷೆಯ ತಣಿಸುವ ಕಸಪಾನ’ ಅಂತಾನೋ, ‘ಸೌ ಬಾರ್ ಜನಮ್ ಲೇಂಗೇ; ಓ ಪೀನೇವಾಲೇ ಫಿರ್ ಭೀ ಹಮ್ ಕೋ ಹೀ ಚುನಾಯೇಂಗೇ’ ಅಂತಾನೋ ಹಾಡತ್ತೆ. ‘ಪಂಚಾಯ್ತೀಂದ್ಮೇಲೆ ಗೋಳು, ಪಂಚಾಯ್ತಿಕೆ ಇರ್ಬೇಕು. ಅದಕ್ಕೋಸ್ಕರಾನೇ ಹೆಂಡದಂಗ್ಡಿ ಇರ್ಬೇಕು’ ಅನ್ನೋದೇ ಇದರ ಫೇವರಿಟ್ ಘೋಷಣೆಯಂತೆ.
ಮುಂದ್ಬನ್ನಿ. ಅಲ್ಲಿ ಪಟ್ಟದ ಗೊಂಬೆಯಿಂದ ಎರಡು ಸಾಲು ಕೆಳಗೆ ಪಂಚೆ ಉಟ್ಕೊಂಡು ಹೂಬ್ಲಾಟ್ ವಾಚ್ ಕಟ್ಕೊಂಡು ಗಾಗಲ್ಸ್ ಹಾಕ್ಕೊಂಡಿರೋದು ಬಿಟ್ಟಿದೇವ ಗೊಂಬೆ ಅಂತ. ಅದರ ಸುತ್ತಲೂ ಜ್ಯೋತಿಷಿಗಳ ಬೋರ್ಡಿನಲ್ಲಿರೋ ತರಹ ಕೈಯನ್ನು ತೋರಿಸ್ಕೊಂಡು
‘ಬಿಟ್ಟಿದೇವನೆ ಪಕ್ಷಪಾಲನೆ ತೇ ನಮೋಸ್ತು ನಮೋಸ್ತು ತೇ;
ಫಂಡು ಹೊಂದಿಸಿ ಮೈಂಡು ಓಡಿಸಿ ಕಾಯಿ ಎಮ್ಮ
ನಮೋಸ್ತು ತೇ.
ನೇಮಿಸೆಮ್ಮನು ಮಂತ್ರಿಪಟ್ಟಕೆ ತೇ ನಮೋಸು ನಮೋಸ್ತು ತೇ;
ಐದು ವರ್ಷವು ಬೀಳದಂತೆಯೆ ನಡೆಸು ಪಕ್ಷ ನಮೋಸ್ತು ತೇ’
ಅಂತ ಕುಣೀತಿರೋವು ಕರಪುತ್ಥಳಿಗಳು. ಬಹಳ ಪರ್ಫುಲ್ ಡಾಲ್ ಇದು. ಇದನ್ನ ನಿಲ್ಲಕ್ಬಿಡದೆ ಕಾಲೆಳೆಯಕ್ಕೇಂತ ಯತ್ನಿಸಿದ ಗೊಂಬೆಗಳೇ ನೆಲ ಕಚ್ಚಿದ್ರೂ ಇದ್ಮಾತ್ರಾ ಅಲ್ಲಾಡ್ದೇ ನಿಂತಿದೆ. ಕರಪುತ್ಥಳಿಗಳ ಕೋರಸ್ ಮುಗಿದ್ಕೂಡ್ಲೇ,
‘ಹೋಟೋಂಪೇ ಗ್ಯಾರಂಟೀ ರೆಹತೀ ಹೈ;
ಜಹಾ ಪಾರ್ಟಿ ಲಡ್ಕಡಾ ರೆಹತೀ ಹೈ
ಹಮ್ ಉಸ್ ವೇಶ್ ಪೆಹನಾತೇ ಹೈ;
ಜಿಸ್ಸೆ ಲೋಗ್ ತೋ ಫಿದಾ ಹೋತೇ ಹೈ’
ಅಂತ ಮೊದಲು ಹಿಂದೀಲಿ ಶುರು ಮಾಡ್ಕೊಂಡು…. ಹೈಕಮಾಂಡ್ ಗೊಂಬೆಗೆ ಅರ್ಥವಾಗ್ಲೀಂತ ಸ್ವಾಮೀ… ಆಮೇಲೆ ಕನ್ನಡದಲ್ಲಿ
‘ಎಂದೆಂದೂ ಗ್ಯಾರಂಟಿ ಮರೆತು ನಾನಿರಲಾರೆ ಇನ್ನೆಂದೂ
ಗ್ಯಾರೆಂಟಿಯಗಲಿ ಓಟ್ ಕೇಳಲಾರೆ.
ಒನ್ ಗ್ಯಾರಂಟಿ ತಪ್ಪಿದರೂ ನಾನುಳಿಯಲಾರೆ;
ನೀನುಳಿಸಲಾರೆ.
ಸಾವಿರ ಕೊಡುವೆನು ಮನೆಗೆ ಬೇಡುವುದೊಂದೇ
ನಿಮ್ಮಯ ಮತವನು ನಮಗೆ ಹಾಕಿರಿ ಎಂದೆ
ನಾ ಮತ್ತೆ ಗೆದ್ದರೆ ಫ್ರೀ ಹೆಚ್ಚು ನೀಡುವೆ; ಬಿಟ್ಟಿಯ
ರಾಶಿಯಲ್ಲೆ ನಿನ್ನ ಹೂಳುವೆ ತಣಿಸುವೆ ಮಣಿಸುವೆ’
ಅಂತ ಹಾಡತ್ತೆ. ಬಂಡೆಗೆ ತಲೆ ಚಚ್ಚಕೊಳಕ್ಕೂ ಹಿಂದ್ಮುಂದ್ನೋಡ್ದೆ ಕಣಕ್ಕಿಳಿಯಕ್ಕೆ ಸಿದ್ಧ ಆಗಿರೋ ಈ ಗೊಂಬೆ ಈ ಕಾಲಕ್ಕೆ ಸಖತ್ ಪಾಪ್ಯುರ್ರು.
ಹೈಕಮಾಂಡ್ ಡಾಲ್ ಯಾವ್ದೂಂದ್ರೇ? ಅದಕ್ಕಿಂತ ಮೇಲಿನ ಸಾಲಲ್ಲಿದೆ ನೋಡಿ… ಅದೇ ಸ್ವಾಮಿ… ಮಗೂನ ತೊಡೆ ಮೇಲ್ಕೂರಿಸ್ಕೊಂಡು ‘ಪಪ್ಪೂ ಬನ್ ಗಯಾ ಜಂಟಲ್ಮನ್’ ಅಂತ ಕ್ರೂನ್ ಮಾಡ್ತಿದೆಯಲ್ಲ, ಅದೇ ಹೈಕಮಾಂಡ್ ಗೊಂಬೆ. ಒಂದಿಪ್ಪತ್ವರ್ಷದ್ಹಿಂದೆ ಅದೇ ಅಮ್ಮ ಗೊಂಬೆ ಪಕ್ಕದಲ್ಲಿ ಇನ್ನೊಂದು ಗಡ್ಡದ್ಗೊಂಬೇನ ಕೂಡಿಸ್ಕೊಂಡು ‘ಬಾ ಬೇಗ ಮನಮೋಹನ; ಪಕ್ಷದ ಕೈಹಿಡಿದು ಮುಗ್ಧತೆ ನಗೆ ಬೀರಿ ಆಳಲು ಕೂರೋ ಟೈಮಾಯಿತು’ ಅಂತ ಹಾಡ್ತಿತ್ತು. ಡಾಲ್ ಮ್ಯಾನುಫ್ಯಾಕ್ಚರ್ ಮಾಡೋವುರ ಈಗ ಮೌಲ್ಡ್ ಬದಲಿಸಿರೋದ್ರಿಂದ ಈ ‘ಪಪ್ಪುಮಮ್ಮಿ ಕೀ ಕಹಾನಿ’ ಅನ್ನೋ ಡಾಲ್ ನಮ್ಮ ಮುಂದಿದೆ.
ಅಲ್ಲಿ… ಮೇಲ್ಗಡೆ… ಪಟ್ಟದ ಗೊಂಬೆ ತರಹ ಕೂತಿದೆಯಲ್ಲ, ಅದರದಂತೂ ವಿಶೇಷವೋ ವಿಶೇಷ. ಮೊದಲ್ಮೊದಲು ಅದನ್ನ ‘ಟೀ ಕಟಪುತಲೀ’ ಅಂತ ಕರೀತಿದ್ರು. ಬರ್ತಾ ಬರ್ತಾ ಮೌಲ್ಡ್ ಬದಲಾಗಿ ಹೈಫ್ಲೈಯಿಂಗ್ ಡಾಲ್ ಅನ್ನಿಸ್ಕೊಳ್ತು. ಸ್ವಲ್ಪ ಈ ಪಕ್ಕಕ್ಕೆ ಕಣ್ಣುಹಾಯಿಸಿ… ಇಲ್ಲಿರೋ ಚಿಳ್ಳೆಪಳ್ಳೆ ಡಾಲ್ಗಳೆಲ್ಲ ಬಿಸಿನೆಸ್ಮನ್ ಡಾಲ್ಗಳು ಅಂತ. ಹೈಫ್ಲೈಯಿಂಗ್ ಡಾಲ್ ಇದ್ದಕ್ಕಿದ್ದಂತೆ ಎದ್ದುನಿಂತು, ದನಿಯೇರಿಸಿ, ‘ಮಿತ್ರೋ…’ ಅಂದ್ರೆ ಸಾಕು, ಈ ಎಲ್ಲ ಡಾಲ್ಗಳೂ ಡೆಂಗ್ಯೂ ಜ್ವರ ಬಂದವನು ಕರೆಂಟ್ ವೈರ್ ಮುಟ್ಟಿದರೆ ಹೇಗೆ ನಡುಗ್ತಾನೋ ಹಾಗೆ ನಡುಗತ್ವೆ. ಈ ಗೊಂಬೆಗಂತೂ ಫಾರಿನ್ನಲ್ಲೆಲ್ಲ ಸಖತ್ ಡಿಮ್ಯಾಂಡು, ಸಖತ್ ಫೇಮು. ಯಾಕೋ ಕರ್ನಾಟಕದಲ್ಲೇ ಅಷ್ಟೊಂದು ಪಾಪ್ಯುಲರ್ ಆಗಲಿಲ್ಲ. ನವರಾತ್ರಿಯ ಪ್ರತಿ ದಿವಸವೂ ಅವತ್ತವತ್ತಿಗೆ ತಕ್ಕಂತೆ ವೇಷ ಧರಿಸಿ ಮೆರೀತಾ ಸಂಪ್ರದಾಯದ ಕನ್ನಡಿ ಆಗೋದ್ರಲ್ಲಿ ಈ ಡಾಲ್ದು ಎತ್ತಿದ ಕೈ, ಎತ್ತಿದ ಕಂಠ.
ಅಲ್ಲೇ… ಅದರ ಪಕ್ಕದಲ್ಲೇ… ಮಾತು ಕಡಮೆ, ಯೋಚನೆ ಜಾಸ್ತಿ ಮಾಡ್ತಿರೋದೇ ಲಿಮಿಟ್ಲೆಸ್ ಡಾಲ್ ಅಂತ. ಹೈಫ್ಲೈಯಿಂಗ್ ಡಾಲ್ ‘ಮಿತ್ರೋ…’ ಅಂತ ಕೂಗ್ಬೇಕಾದ್ರೆ ಅದಕ್ಕೆ ಪವರ್ ತುಂಬ್ಕೊಡೋದೇ ಈ ಡಾಲ್. ಅದರ ಪಕ್ಕದಲ್ಲೊಂದು ಹೆಣ್ಣುಗೊಂಬೆ ಇದೆಯಲ್ಲ, ಅದು ಸಿಟ್ ಆರಾಮ್ ಡಾಲ್ ಅಂತ. ಹೋದ ಸಲ ಈ ಗೊಂಬೆ ಮಿಲ್ಟಿç ಯೂನಿಫಾರ್ಮ್ ಹಾಕ್ಕೊಂಡ್ಬಂದಿತ್ತು. ಈಗ ಬೇರೆ ವೇಷದಲ್ಲಿ ಬಂದಿದೆ. ಮಾಮೂಲಿ ಹೆಣ್ಣಿನ ಗೊಂಬೆಗೂ ಇದಕ್ಕೂ ವ್ಯತ್ಯಾಸವೇನಪ್ಪಾಂದ್ರೆ, ಆ ಗೊಂಬೆಗಳು ಸೂಟ್ಕೇಸಲ್ಲಿ ಸೀರೇನ ಇಟ್ಕೊಂಡ್ಬರತ್ವೆ; ಈ ಗೊಂಬೆ ಸೂಟ್ಕೇಸನ್ನೇ ಸೀರೇಲಿ ಸುತ್ಕೊಂಡ್ಬರತ್ತೆ.
ಇಲ್ಲಿ… ಕೆಳಗಿನಿಂದ ಎರಡನೆಯ ಸಾಲಿನಲ್ಲಿರೋ ಗೊಂಬೆಗಳು ಅಪ್ಪ-ಮಗ ಗೊಂಬೆ. ‘ನಿನ್ನಂಥ ಅಪ್ಪ ಇಲ್ಲ; ನಿನ್ನಂಥ ಮಗನೂ ಇಲ್ಲ’ ಅಂತ ಕೀ ಕೊಟ್ಟತಕ್ಷಣ ಹಾಡುವ ಈ ಗೊಂಬೆಗಳದೂ ಒಂದು ವಿಶೇಷ ಇದೆ. ಇವುಗಳನ್ನು ಪಟ್ಟದ ಗೊಂಬೆ ಮಾಡಕ್ಹೋದ್ರೆ ತಾವಾಗಿ ಕೂತ್ಕೊಳೋದೇ ಇಲ್ಲ. ಜೊತೆಗೆ ಸಿಡುಕ್ಗೊಂಬೇನೋ, ಅಮ್ಮಗೊಂಬೇನೋ ಕೂತ್ಕೊಂಡ್ರೆ ಮಾತ್ರ ನಗ್ನಗ್ತಾ ಕೂತಿರತ್ವೆ. ಅಪ್ಪಗೊಂಬೆ ಮಿಕ್ಕ ದಿನಗಳಲ್ಲಿ ನಿಲ್ಲಕ್ಕೆ ಆಗ್ದಿದ್ರೂ, ಎಲೆಕ್ಷನ್ ಅಂದ ತಕ್ಷಣ ಛಕ್ಕಂತ ನಿಲ್ಲೋ ತಾಕತ್ತನ್ನ ಹೇಗೆ ಪಡೆಯತ್ತೇನ್ನೋದೇ ಚಿದಂಬರ ರಹಸ್ಯ.
ಪಕ್ಕದ್ರೂಮಿಗ್ಹೋಗೋಣ ಬನ್ನಿ. ಹೀಗೆ… ಈ ಕಡೆ… ಆ ಮೂಲೇಲಿರೋದು ‘ನಿರೂಪಕಿ ಗೊಂಬೆ’ ಅಂತ. ‘ಜನುಮ ಜನುಮದ ಅನುಬಂಧ’ ಅಂತ ನೀವ್ಹೇಳಿ, ‘ರಿಪೀಟ್’ ಅಂದ್ರೆ ಸಾಕು, ‘ಚನುಮ ಚನುಮತ ಹನುಮಂತ’ ಅಂತ್ಹೇಳೋ ವಿಶಿಷ್ಟ ಗೊಂಬೆ ಇದು. ಧನಕ್ಕೆ ದನ, ಬಂಧಕ್ಕೆ ಬಂದ, ಖರಕ್ಕೆ ಕರ ಅನ್ನೋ ಈ ಗೊಂಬೆಯನ್ನು ಕೆಲವರು ಪ್ರೀತಿಯಿಂದ ‘ಅಲ್ಪಪ್ರಾಣೇಶ್ವರಿ’ ಅಂತ ಕರೀತಾರೆ. ಅದರ ಪಕ್ಕದಲ್ಲೇ ಇರೋದು ‘ಬ್ರೇ ಕಿಂಗ್ ಡಾಲ್’ ಅಂತ. ಕೊಂಚ ಕಿವಿ ಹಿಂಡಿದರೆ ಸಾಕು, ನಾಲ್ಕು ಕತ್ತೆಗಳ ಸೌಂಡಿಗೆ ಮಧ್ಯರಾತ್ರಿಯ ನಾಯಿಗಳ ಹಿಂಡಿನ ಸದ್ದನ್ನು ಸೇರಿಸಿದಷ್ಟು ಸದ್ದು ಹೊರಡಿಸತ್ತೆ. ಬ್ರೇ ಅಂದರೆ ಕತ್ತೆಯ ಕೂಗಲ್ವಾ, ಆ ಬೇಸಿಸ್ ಮೇಲೆಯೇ ಇದನ್ನ ಕಿಂಗ್ ಆಫ್ ಬ್ರೇಯಿಂಗ್ ಅಥವಾ ಬ್ರೇಕಿಂಗ್ ಅಂತ ಕರೆದಿರೋದಂತೆ.
ಇಲ್ಲಿ, ಈ ಕಡೆ… ಕರ್ಚೀಫ್ ಒದ್ದೆ ಮಾಡೋದು, ಹಿಂಡೋದು, ಮತ್ತೆ ಒದ್ದೆ ಮಾಡೋದು ಮಾಡ್ತಿರೋ ಡಾಲ್ ಇದೆಯಲ್ಲ, ಇದೇ ಸೀರಿಯಲ್ ಸ್ಕಿçಪ್ಟ್ ರೈಟರ್ ಡಾಲ್ ಅಂತ. ಒಳಗೊಂದು ಚಿಪ್ ಇಟ್ಟಿದ್ದಾರೆ; ಸ್ವಿಚ್ ಆನ್ ಮಾಡಿದ ತಕ್ಷಣ ಕೇಳೋವ್ರ ಕಣ್ಣಿಂದ ಗೋಳಿನ ನದೀನೇ ಹರಿಯೋ ತರಹದ ಕಥೆಗಳನ್ನು ಹೇಳತ್ತೆ. ಇದೂ ಈಗ ಬಹಳ ಡಿಮ್ಯಾಂಡಲ್ಲಿರೋ ಡಾಲು.
ಕೆಳಗಿನಿಂದ ಮೂರನೆಯ ಸಾಲಿನಲ್ಲಿರೋದು ತಮಿಳ್ನಾಡಿನಿಂದ ತಂದಿರೋ ಡಾಲ್. ಮೊದಲು ಠಣಾಠಣ; ಠಣಾಠಣ ಅಂತ ಸದ್ದು ಹೊರಡಿಸ್ತಿತ್ತು. ಈಗ ಸನಾತನ, ಸನಾತನ ಅಂತ ಸದ್ದು ಮಾಡ್ತಿದೆ. ಆಗಲೂ ಅದರ ಮಾತಿಗೆ ಅರ್ಥ ಇರಲಿಲ್ಲ; ಈಗಲೂ ಅದರ ಮಾತಿಗೆ ಅರ್ಥ ಇಲ್ಲ. ಇದನ್ನು ಮ್ಯಾನುಫ್ಯಾಕ್ಚರ್ ಮಾಡಿದವರೇ ಇದನ್ನ ಪೊಲಿಟಿಕಲ್ ಎಂಟರ್ಟೈನ್ಮೆAಟ್ ಡಾಲ್ ಅಂತ ಕ್ಲಾಸಿಫೈ ಮಾಡಿದಾರೆ.
ಬನ್ನಿ ಕಡೇ ರೂಮಿಗೆ ಹೋಗೋಣ. ಇಲ್ಲಿ ನೋಡಿ… ಇಲ್ಲಿರೋದೆಲ್ಲ ಸ್ವಾಮೀಜಿ ಡಾಲ್ಗಳು. ಏನಂದ್ರಿ? ಪೂಜೆ, ತಪಸ್ಸು, ಪ್ರವಚನದ ಭಂಗಿ ಯಾವುದರಲ್ಲೂ ಇಲ್ಲ ಅಂದ್ರೇನು? ನಿಜ ಸ್ವಾಮಿ. ಇವು ಮಾಡ್ರನ್ ವ್ಯಾಲ್ಯೂಸ್ ಇರೋ ಸ್ವಾಮಿಗಳ ಡಾಲ್ಗಳು. ಅದೋ ಮೊದಲನೆಯದು ‘ಪೊಲಿಟಿಕ್ಸ್ ಜಿಂದಾಬಾದ್’ ಅಂತಿದೆ. ಎರಡನೆಯದು ‘ಮೀಸಲಾತಿ ಮೀಸಲಾತಿ ಮೀಸಲಾತಿ ಬೇಡಿರಿ; ಜಾತಿಬದ್ಧರಾಗಿ ನಿಜಾನಂದವನ್ನು ಹೊಂದಿರಿ’ ಅಂತಿದೆ. ಮೂರನೆಯದು ‘ಗ್ರಾಂಟು ಫಂಡಿನ ರೂಪದಿ ಬಾರೆ; ಡೊನೇಷನ್ನಿನ ರೀತಿಯು ಸೇರೆ. ಬೆದರುತ ಕೋಟಿ ಕೋಟಿಯ ಕೊಡುವ ಬುದ್ದುಶಿಷ್ಯರ ಪಡೆಯನು ನೀಡೇ…’ ಅಂತ ಪ್ರಾರ್ಥನೆ ಮಾಡ್ತಾಯಿರುವ ‘ಆಶ್ರಮವಾಸಿ ಮಂತ್ರಿ ಕಾಲು ಕಟ್ಟು’ ಅನ್ನೋ ಧೋರಣೆಯ ಗೊಂಬೆ. ನಾಲ್ಕನೆಯದು ‘ನಾಶ… ಮೂರ್ನೇ ತಿಂಗಳು ರಾಜ್ಯ ನಾಶ; ಆರ್ನೇ ತಿಂಗಳು ದೇಶ ನಾಶ; ಒಂಬತ್ನೇ ತಿಂಗಳು ಪ್ರಪಂಚ ನಾಶ’ ಅಂತ ಹೇಳ್ತಾಯಿರತ್ತೆ. ನಾಲ್ಕನೆಯದಕ್ಕೆ ಕೆಲವರು ಅಪಶಕುನ ಹುಳುಕುಸ್ವಾಮಿ ಅಂತ ಕರೀತಾರೆ.
ಇಲ್ಲಿ ಕಾಣ್ತಿರೋದು ಊಬರ್ ಗೊಂಬೆ. ಅದರ ಮೇಲಿರೋ ನಂರ್ಗೆ ಡಯಲ್ ಮಾಡಿದರೆ ‘ಯುವರ್ ರೈಡ್ ಈಸ್ ತ್ರೀ ಮಿನಿಟ್ಸ್ ಎವೇ’ ಅಂತ ಅರ್ಧ ಘಂಟೆ ಸ್ಟೇಟ್ಮೆಂಟ್ ತೋರಿಸಿ, ನೀವು ಕಾಯಕ್ಕಾಗದೆ ಕ್ಯಾನ್ಸಲ್ ಮಾಡಿದ ತಕ್ಷಣ ನಿಮ್ಮ ಅಕೌಂಟಿಂದ ಹಣ ಮೈನಸ್ ಮಾಡಿಸೋ ತಾಕತ್ತಿರೋ ಗೊಂಬೆ ಇದು. ಆ ತುದೀಲಿರೋದು ಸೈಬರ್ ಗೊಂಬೆ. ‘ನಿಮ್ಮ ಓಟಿಪಿ ಕೊಡಿ; ನಿಮ್ಮ ಅಕೌಂಟ್ ನಂಬರ್ ಕೊಡಿ’ ಅಂತ ಕೇಳ್ತಾನೇ ಇರತ್ತೆ. ಅಯ್ಯೋ ಪಾಪ ಅಂತ ಅದರಲ್ಲಿ ನಿಮ್ಮ ನಂಬರನ್ನ ಫೀಡ್ ಮಾಡಿದರೆ ಮುಫತ್ತಾಗಿ ನಿಮ್ಮ ಹಣೆಗೆ ಮೂರು ನಾಮವನ್ನು ಹಾಕತ್ತೆ.
ಇದೇನ್ಹೊರಟೇಬಿಟ್ರೇ? ಒಳಗೆ ಇನ್ನೂ ಕಾಮೆಡಿಷೋ ಗೊಂಬೆ, ಪಾಟ್ಹೋಲ್ ಗೊಂಬೆ, ಗೌರ್ಮೆಂಟ್ ಗೊಂಬೆ ಮುಂತಾದವು ಇವೆ. ‘ಅವೆಲ್ಲ ಎಲ್ಲ ಕಡೆಯೂ ಇವೆ’ ಅಂದ್ರೇ? ಹೋಗಲಿ, ಚರ್ಪು? ಕೊಬ್ಬರಿ ಮಿಠಾಯಿ… ಕೊಡಲೇ? ಓಹ್! ಕೊಲೆಸ್ಟ್ರಾಲೇನು? ಸ್ಸೋ ಸ್ಸಾರಿ. ನೆಕ್ಸ್ಟ್ ಟೈಮ್ ನೀವು ಬರುವ ಹೊತ್ತಿಗೆ ಫ್ಯಾಟ್-ಫ್ರೀ ಸ್ವೀಟ್ ತರ್ಸಿರ್ತೀನಿ.
ಹೋಗ್ಬರ್ತೀರಾ? ಥ್ಯಾಂಕ್ ಯೂ ಫಾರ್ ದ ವಿಸಿಟ್… ವಿಷ್ ಯೂ ಎ ಹ್ಯಾಪಿ ದಸರಾ.