ಧನುರ್ಮಾಸದ ಮತ್ತೊಂದು ಆಕರ್ಷಣೆಯೆಂದರೆ ಎಲೆಗಳ ಮೇಲೆ ಹೂಗಳ ಒಳಗೆ ಕಾಣುತ್ತಿದ್ದ ಅಮೃತದ ಬಿಂದುಗಳು. ಸಂಪಿಗೆ ಮರದ ಕೆಳಗೆ ನಿಂತಾದ ಅಲ್ಲೊಂದು ಇಲ್ಲೊಂದು ಹನಿಗಳು ಕೊರಳಪಟ್ಟಿಯ ಸಂದಿಯಲ್ಲಿ ತೂರಿ ತ್ವಚೆಯನ್ನು ಸ್ಪರ್ಶಿಸಿದಾಗ “ಝಮ್ಮಂದಿ ಸ್ಪರ್ಶಂ; ರೋಮಾಂಚ ಹರ್ಷಂ; ತನು ವೂಗಿಂದಿ ಈ ವೇಲ” ಎಂಬ ಹಾಡು ತ್ವಚೆಯ ಸಕಲ `ಠಿoಡಿe ಅಂದರ್’ಗಳಿಂದಲೂ ಹೊಮ್ಮುತ್ತಿತ್ತು. ಪರ್ಣಪುಷ್ಪಗಳೆಂಬ ಪ್ರಕೃತಿದತ್ತ ಕವಿಗಳಿಗೆ ಸನ್ಮಾನಿಸಲೆಂದೇ ಮೇಘಗಳು ತೊಡಿಸಿದ ಮಣಿಮಾಲೆಗಳಂತೆ ಈ ತಂಬನಿಗಳು (ತಂಪು+ಹನಿ=ತಂಬನಿ; ಹಿಮದೀರ್ಘಸಂಧಿ!) ತೋರುತ್ತವೆ.
ಕಾಲವೆಂಬ ಮಡಿವಂತ ಅಡುಗೂಲಜ್ಜಿಯು ಮೋಡದ ತುಣುಕುಗಳನ್ನು ದ್ರವವಾಗಿಸಿ ಇಡೀ ಮಾರುತವಲಯಕ್ಕೆ ಸಿಂಪಡಿಸುವ ಮೂಲಕ ವಾತಾವರಣವನ್ನೇ ಮಡಿ ಕೇರಿ ಮಾಡಿ, ಮಂಜುಮಂಜಾದ ಮಾರ್ಗದಲ್ಲಿ ನಡುಗುವ ಹೆಜ್ಜೆಗಳನ್ನು ಇಡುತ್ತಾ ಸಾಗುವ ಕಾಲ. ಇದನ್ನು ಸಾಂಕೇತಿಕವಾಗಿ ಪ್ರತಿನಿಧಿಸಲೆಂದೇ ಮಡಿಕೇರಿ ಎಂಬ ಪ್ರಾಂತ್ಯವೂ ಉದ್ಭವಿಸಿತೆಂದು ತರ್ಲೆಸುಬ್ಬನ ಹಳ್ಳಿಯ ಡೊಂಕಣ್ಣ ಟೀಕಾಚಾರ್ಯರು ತಮ್ಮ ಅನೃತಪುರಾಣವೆಂಬ ಗ್ರಂಥದಲ್ಲಿ ದಾಖಲಿಸಿದ್ದಾರೆ. ಮಡಿಕೇರಿಯಲ್ಲಿ “ಕೇಶವಾಯ ಸ್ವಾಹಾ” ಎಂದು ಶುದ್ಧ ವೈದಿಕ ಕರ್ಮಠರು ಬೆಳ್ಳಂಬೆಳಗಿರಲಿ, ಸೂರ್ಯನು ಮಠ ಸೇರುವ ಸಮಯದಲ್ಲಿ (ಮಠಮಠಮಧ್ಯಾಹ್ನ!) ಉಲಿಯುವಾಗಲೂ ಚೈನ್ ಸ್ಮೋಕರಿನೋಪಾದಿಯಲ್ಲಿಯೇ ಹೊಗೆಬಂಡಿಯಂತೆ ಕಾಣುವುದು ಮಡಿಕೇರಿಯ ವೈಶಿಷ್ಟ್ಯಗಳಲ್ಲೊಂದು. ಮಡಿ ಮತ್ತು ಬಾಯಿಯಿಂದ ಹೊಗೆ ಹೊರಡುವುದು ಒಂದಕ್ಕೊಂದು ಪೂರಕವಲ್ಲವೆಂದು ಮಡಿಪುರಾಣವು ಹೇಳಿದರೂ, ಪ್ರಕೃತಿಯು ಕೇಳಬೇಕಲ್ಲ! “ಸೂರ್ಯನು ಧನುರ್ಮಾಸದ ಚಳಿಯನ್ನು ತಡೆಯಲಾಗದೆ ಲೆಟ್ ಮಿ ಹ್ಯಾವ್ ಎ ಸ್ಮೋಕ್ ಎನ್ನುತ್ತ ಹೊರಬಂದು ಮೋಡದ ತುಣುಕುಗಳನ್ನೇ ಸಿಗರೇಟಿನ ರೂಪದಲ್ಲಿ ಸುರುಳಿಸಿಕೊಂಡು ತನ್ನದೇ ಕಿರಣಗಳೆಂಬ ಲೈಟರಿನಿಂದ ಕಿಡಿ ಸೋಕಿಸಿದಾಗ ಹೊರಡುವ ಧೂಮರೂಪಿಯೇ ಮಂಜು” ಎಂದು ಅದಾರೋ ಬರೆದಿರುವನಂತೆ. “ಅಲ್ತು. ಸೂರ್ಯನು ಸೇದಿದ ಸಿಗರೇಟ್ ಆಗಿದ್ದಿದ್ದರೆ ಸಮತಟ್ಟು ಪ್ರದೇಶಗಳಲ್ಲಿಯೂ ಮಂಜಿನ ದಟ್ಟತೆ ಇರಬೇಕಾಗಿತ್ತು. ಇದು ಬಹುತೇಕ ಗಿರಿಪರ್ವತಗಳಲ್ಲೇ ಕಂಡುಬರುವುದರಿಂದ ಗಿರಿಪರ್ವತಗಳು ಚಳಿ ತಡೆಯಲಾರದೆ ಮೋಡಬೀಡಿಯನ್ನು ಸೇದುವುದರಿಂದ ಉದ್ಭವಿಸುವ ಹೊಗೆಯೇ ಮಂಜು, ಹಿಮ, ಇತ್ಯಾದಿಗಳು. ಇದಕ್ಕೆ ಪುರಾವೆ ನಮ್ಮಲ್ಲಿಗಿಂತಲೂ ವಿದೇಶದಲ್ಲಿ ಹೆಚ್ಚು ಕಂಡುಬರುತ್ತದೆ. ಪ್ರಕೃತಿಯು ಸೇದಿದ ಮೋಡಬೀಡಿಯ ಬೂದಿಗೆ ಇಡೀ ರಸ್ತೆರಸ್ತೆಗಳು, ಬಯಲುಬಯಲುಗಳು Ash trayಗಳಾಗಿ ಪರಿಣಮಿಸುತ್ತವೆ. ಹಿಮಾಲಯದಲ್ಲಿ ಕಂಡುಬಂದಂತೆಯೇ ಇಲ್ಲಿಯೂ ಎಲ್ಲೆಲ್ಲಿಯೂ ಮೋಡಬೂದಿಯ ತುಣುಕುಗಳು. ಅದನ್ನು ವಿದೇಶೀಯರು snow fall ಎನ್ನುತ್ತಾರೆ” ಎಂದು ಅದಕ್ಕೊಂದು ಪ್ರತಿನುಡಿಯೂ ಪ್ರಚಲಿತವಿದೆಯಂತೆ.
ಬಾಲ್ಯದಲ್ಲಿ ನನಗೂ, ನನ್ನ ಓರಿಗೆಯವರಿಗೂ ಇದೇ ಒಂದು ಮೋಜು. ಮಾತನಾಡುವ ಮಂದಿಯನ್ನೇ ಗಮನಿಸುತ್ತ “ನೋಡು, ಮೊದಲು ಹೊಗೆ ಬಂತು, ಆಮೇಲೆ ಮಾತು” ಎಂದು ಅಚ್ಚರಿಪಡುವುದು ಒಂದೆಡೆಯಾದರೆ, ‘ಪ್ರೋಕ್ಷಣಪಥ’ ನಿರತರಾದ ಮಡಿವಂತರ ಬಳಿ ಸಾರಿ “ಸಿಗರೇಟ್ ಸೇದ್ತೀರಾ ಶಾಸ್ತ್ರಿಗಳೆ/ಭಟ್ಟರೆ/ಅಯ್ಯಂಗರ್ರೆ? ಬಾಯಿಂದ ಹೊಗೆ ಬರ್ತಾ ಇದೇ…’’ ಎಂದು ಕಿಡಿಮಾತನಾಡಿ, ಅವರಿಗೆ ತಾತ್ಕಾಲಿಕ ಮಂತ್ರಮರೆವು ಬರಿಸಿ, ತತ್ಕಾಲದಲ್ಲಿ ಅನ್ಯ ಸಂಸ್ಕೃತಕ್ಕೆ ಮೊರೆಹೋಗುವ ಸ್ಥಿತಿಯನ್ನು ತಂದು, ತನ್ಮೂಲಕ ಮಜ ತೆಗೆದುಕೊಳ್ಳುವ ಕಿಡಿಗೇಡಿಗಳಾಗಿದ್ದೆವು ನಾವು. ಎಷ್ಟೇ ರೇಗಿಸಿದರೂ ನಮ್ಮ ಬೆನ್ನು ಚುರುಗುಟ್ಟುವುದಿಲ್ಲವೆಂದು ನಮಗೆ ಖಾತ್ರಿಯಿತ್ತು – ಮಡಿಕೈಗೆ ಮೈಲಿಗೆ ಬೆನ್ನು ಅಸ್ಪೃಶ್ಯ! ಆ ಹಿರಿಯರು ನಮ್ಮ ಮನೆಗೆ ವಿಷಯವನ್ನು ಮುಟ್ಟಿಸಿದಾಗ, ಅವರಿಗಿಂತ ಇಮ್ಮಡಿ ಮುಮ್ಮಡಿ ಮಡಿ ಆದ ನಮ್ಮ ಹಿರಿಯರಿಂದ ಅವರಿಗಿಂತ ದುಪ್ಪಟ್ಟು ಮುಪ್ಪಟ್ಟು ಪರ್ಯಾಯ ಸಂಸ್ಕೃತದ ನಿಂದಾಸ್ತುತಿಯನ್ನು ನಾವು ಆನಂದಿಸುತ್ತಿದ್ದುದೂ ಉಂಟು. ಚಳಿಗಾಲದಲ್ಲಿ ಬಿಸಿಮಾತುಗಳೂ ಬೆಚ್ಚನೆಯ ಭಾವ ನೀಡುತ್ತಿದ್ದವೋ ಏನೋ!
ಧನುರ್ಮಾಸದ ಮತ್ತೊಂದು ಆಕರ್ಷಣೆಯೆಂದರೆ ಎಲೆಗಳ ಮೇಲೆ ಹೂಗಳ ಒಳಗೆ ಕಾಣುತ್ತಿದ್ದ ಅಮೃತದ ಬಿಂದುಗಳು. ಸಂಪಿಗೆ ಮರದ ಕೆಳಗೆ ನಿಂತಾದ ಅಲ್ಲೊಂದು ಇಲ್ಲೊಂದು ಹನಿಗಳು ಕೊರಳಪಟ್ಟಿಯ ಸಂದಿಯಲ್ಲಿ ತೂರಿ ತ್ವಚೆಯನ್ನು ಸ್ಪರ್ಶಿಸಿದಾಗ “ಝಮ್ಮಂದಿ ಸ್ಪರ್ಶಂ; ರೋಮಾಂಚ ಹರ್ಷಂ; ತನು ವೂಗಿಂದಿ ಈ ವೇಲ” ಎಂಬ ಹಾಡು ತ್ವಚೆಯ ಸಕಲ ‘ಠಿoಡಿe ಅಂದರ್’ಗಳಿಂದಲೂ ಹೊಮ್ಮುತ್ತಿತ್ತು. ಪರ್ಣಪುಷ್ಪಗಳೆಂಬ ಪ್ರಕೃತಿದತ್ತ ಕವಿಗಳಿಗೆ ಸನ್ಮಾನಿಸಲೆಂದೇ ಮೇಘಗಳು ತೊಡಿಸಿದ ಮಣಿಮಾಲೆಗಳಂತೆ ಈ ತಂಬನಿಗಳು (ತಂಪು+ಹನಿ=ತಂಬನಿ; ಹಿಮದೀರ್ಘಸಂಧಿ!) ತೋರುತ್ತವೆ. ಈ ತಂಬನಿವರ್ಷದ ಮಧ್ಯದಲ್ಲೇ ತೀಕ್ಷ್ಣಗಂಧವಿಮುಖರಿಗೆ ಶಾರೀರಿಕ ನವೆಯನ್ನೂ, ರುಚಿಋಷಿಗಳಿಗೆ ಲಾಲಾಗ್ರಂಥಿಗಳ ನವೆಯನ್ನೂ ಉಂಟುಮಾಡುವ ‘ಫುಲ್ ಟೈಟ್ ಡ್ರಂಕರ್ಡ್’ನ ಮೊಗದಲ್ಲಿ ಎದ್ದುಕಾಣುವಂತಹ ಜಿಡ್ಡನ್ನು ಮೈಮೇಲೆ ಹೊತ್ತು, ನಾಸಿಕಾಗ್ರಗಳು ಪತರುಗುಟ್ಟುವಂತೆ ಮಾಡುವ ಸೊಗಡವರೆಯ ಗಂಧವು ‘ಆ ಕಾಲದ ಕಿನ್ನರಾಪ್ಸರಗಂಧರ್ವಸ್ತ್ರೀಯರು ಬಳಸುತ್ತಿದ್ದ ಅತ್ತರುಪನ್ನೀರುಗಳನ್ನು ಒಗೆಯತ್ತ’ ಎನ್ನುವಂತಿರುತ್ತದೆ. ಆ ಸೊಗಡಿನ ಪ್ರಭಾವದಿಂದ ವಿಕಸಿತನಾಸಾರಂಧ್ರರಾದ ಕೀರ್ತನಕಾರರು
ಈ ಪರಿಯ ಸೊಗಡಾವ ಕಾಯಿಯೊಳು ನಾ ಕಾಣೆ
ಧನುರ್ ಮಾಸದ ಅವರೇಯೊಳಲ್ಲದೆ…
ದೊರೆವ ಸ್ಥಳದಲಿ ನೋಡೆ ಧರಣಿದೇವಿಗೆ ಸ್ಫುರಣ
ಸಿರಿಯತನದಲಿ ನೋಡೆ ಸಿರಿ ಕಾಳಿದು
ಹಿತಕವರೆಯಲಿ ನೋಡೆ ರಸರಸೋದ್ಭವವಯ್ಯ
ಚಪ್ಪರಿಸದಿಹ ನರನೆ ಕಡುಪಾಪಿಯೋ ||
ಗಗನದಲಿ ಸಂಚರಿಪ ಕುಳಿರುಬಿಂದುವೆ ತುರಗ
ಸೊಗಡೀವ ಹೊಲಗದ್ದೆ ಪರ್ಯಂತ ಶಯನ
ಸೊಗವು ತೊವ್ವೆಗೆ ಕೂಟಿಗೆ ಸೇರೆ ರುಚಿರಾಜ
ಮಿಗಿಲಾದ ಕಾಳುಗಳಿಗೀ ಭಾಗ್ಯವುಂಟೇ ||
ಎಂದು ಹಾಡುತ್ತಿದ್ದರೆಂಬುದು ನಿಃಸಂಶಯ. ಆಗೆಲ್ಲ ಕುಕರಿ ಬುಕ್ಗಳು ಇರಲಿಲ್ಲವಾದ್ದರಿಂದ ಈ ಅವರೆಕೀರ್ತನೆಯು ಎಲ್ಲೂ ದಾಖಲಾಗಿಲ್ಲವಷ್ಟೆ.
ತರಕಾರಿಗಳ ಪೈಕಿ ಹಲವು ಕಾಯಿಪಲ್ಲೆಗಳು ನಮ್ಮ ಜೀವನದ ಗತಿಯಲ್ಲಿ ಅತ್ಯವಶ್ಯ. ಇಂತಹ ದವಸಧಾನ್ಯಗಳ ಬಗ್ಗೆಯೇ ರಚಿತವಾದ ಸಂಧಿಕವನವೊಂದು ಇಂತಿದೆ:
ಸಾಗರತೀರದಿ ಕಾಲವ ಸವೆಸಲು ಕಡಲೇಕಾರ್ಯಬೇಕು
ಸಾಗುವ ಹಾದಿಗೆ ಪಕ್ವತೆ ತುಂಬಲು ಗಡ್ಡೆ ಕೋಸ್ಬೇಕು
ಸಾಗಿರಲಂತರದೊಳೇರುಪೇರ್ಗಳು ಬಾಳೇ ಕಾಯ್ಬೇಕು
ಸಾಗಿರೆ ಮಂಜಿನ ತೆರೆಯಲಿ ಜೀವನ ಅವರೇಕಾಯ್ಬೇಕು ||
ದೃಗ್ಗೋಚರವಾದ ಅರ್ಥವಲ್ಲದೆ ‘ಕಡಲೇಕಾಯ್ಬೇಕು’ ಎಂದರೆ ‘ಬೆಸ್ತರು, ದೋಣಿ ನಡೆಸುವವರು ಮೊದಲಾದವರನ್ನು ಕಡಲೇ ಕಾಪಾಡಬೇಕು; ‘ಗಡ್ಡೆ ಕೋಸ್ಬೇಕು’ ಎನ್ನುವಾಗ ಪೂರಿ/ಚಪಾತಿ ಸಾಗು ಮಾಡುವ ಗಡ್ಡೆಕೋಡು ಅವಶ್ಯ; ‘ಅಂತರದೊಳೇರುಪೇರ್ಗಳು’ ಎಂದರೆ ದಂಗೆ, ಮೋರ್ಚಾ ಮೊದಲಾದವನ್ನು ಹತ್ತಿಕ್ಕಲು ಬಾಳು ಅರ್ಥಾತ್ ಕತ್ತಿ (ಆಯುಧ) ಬೇಕು; ಮಂಜಿನ ತೆರೆಯೆಂದರೆ ಅಸ್ಪಷ್ಟ ಬದುಕಿನಲ್ಲಿ ಅವರೇ (ದೇವನೇ) ಕಾಯ್ಬೇಕು ಎಂದೂ, ಡಿಸೆಂಬರ್ ಜನವರಿಯ ಮಂಜಿನ ದಿನಗಳಲ್ಲಿ ರುಚಿಕರ ಅವರೇಕಾಯಿ ತಿನ್ನುವುದೂ ಜೀವನದ ಒಂದು ಅಂಗವೆಂದೂ ಅರ್ಥೈಸಿಕೊಳ್ಳುವುದೇ ಈ ಕವನದ ದ್ವಯೋದ್ದೇಶ.
ಇವೆಲ್ಲವೂ ಧನುರ್ಮಾಸದಲ್ಲಿ ಬಾಲಸೂರ್ಯಸ್ನೇಹ ಬಯಸುವ ಸೂರ್ಯವಂಶಜರಿಗಾಯಿತು. ಅಸಲಿಗೆ ಈ ಸೂರ್ಯವಂಶದಲ್ಲೇ ಮೂರು ವಿಂಗಡಣೆಗಳಿವೆ – ಬಾಲಸೂರ್ಯವಂಶಜರು, ಕಿಟಕಿ ಸೂರ್ಯವಂಶಜರು ಮತ್ತು ಬೆಳಕಿಂಡಿ ಸೂರ್ಯವಂಶಜರು. ನಿಶೆಯ ತೆರೆಯನ್ನು ಪಕ್ಕಕ್ಕೆ ಸರಿಸಿ ಅರುಣನ ಮೊದಲ ಕಿರಣಗಳನ್ನು ಮುಂದಿಟ್ಟುಕೊಂಡು ಸವಾರಿ ಹೊರಟ ಸೂರ್ಯನಿಗೆ ಗುಡ್ ಮಾರ್ನಿಂಗ್ ಹೇಳಲು ಎದ್ದಿರುವವರು ಬಾಲಸೂರ್ಯವಂಶಜರು. ಸೂರ್ಯನೇರಿ ಭೂಮಿಗೆ ಸುಮಾರು ಮೂವತ್ತು ಡಿಗ್ರಿಗಳಿಂದ ನಲವತ್ತೈದು ಡಿಗ್ರಿಗಳಷ್ಟು ಕೋನವನ್ನು ಏರ್ಪಡಿಸಿಕೊಂಡು ತನ್ನ ಪ್ರಖರ ಕಿರಣಗಳಿಂದ ಹೊದ್ದ ಕಂಬಳಿಯ ಶೀತವನ್ನು ಹೋಗಲಾಡಿಸಿ ರಗ್ಗಿಗೆ warm greetings ಅರ್ಪಿಸಿದಾಗ ‘ಸೆಕೆ ಸೆಕೆ ತಾಳೆನು ಈ ಸೆಕೆಯ’ ಎಂದು ಗೊಣಗುತ್ತಲೇ ಆಕಳಿಸುತ್ತ ಎದ್ದುಕುಳಿತುಕೊಳ್ಳುವವರು ಕಿಟಕಿ ಸೂರ್ಯವಂಶಜರು. ಇವರ ಪರಿಚಯ ಬಳ್ಳಾರಿ ಬೀಚಿಯವರಿಗೂ ಇತ್ತು. ಕಿಟಕಿಗಳ ಸರಳುಗಳ ಮಧ್ಯದಿಂದ ಕೈಹಾಕಿ ಅಮೂಲ್ಯವಾದ ವಸ್ತುಗಳನ್ನು ಕದಿಯುವ ಕಳ್ಳನಂತೆ ತನ್ನ ಕಿರಣಗಳನ್ನು ಚಾಚಿ ಅತ್ಯಮೂಲ್ಯ ನಿದ್ರೆಯನ್ನು ಹಾಳುಮಾಡುವ ಕಳ್ಳ ಸೂರ್ಯನಿಗೆ ಮುಖ ತೋರುವುದಿಲ್ಲವೆಂದು ಶಪಥಗೈದು ತತ್ಕಾರಣ ಕಿಟಕಿಗಳಿಗೆ ಪರದೆಗಳೆಂಬ ಗುರಾಣಿಗಳನ್ನು ತೊಡಿಸಿ ಅಮ್ಮನ ಗರ್ಭದಲ್ಲಿರುವ ಪರಿಯಲ್ಲಿ ಮುದುಡಿಕೊಂಡು ಮಲಗಿ ಬೆಳಕಿಂಡಿಯಿಂದ (ಅಂದಿನ ಹೆಂಚಿನ ಮನೆಗಳಲ್ಲಿ ಬೆಳಕು ಬರಲೆಂದು ಬಳಸುತ್ತಿದ್ದ ಗಾಜು ಹುದುಗಿಸಿದ ಹೆಂಚು, ಈಗಿನ skylight) ಮಲಗುಕೋನಕ್ಕೆ ಲಂಬರೇಖೆಯಲ್ಲಿ ಬೆಳಕು ಬಿದ್ದಾಗ ಏಳುವವರು ಬೆಳಕಿಂಡಿ ಸೂರ್ಯವಂಶಜರು. ಈ ದಿನಗಳಲ್ಲಿ ಬಹುತೇಕ ಮನೆಗಳಲ್ಲಿ ಸ್ಕೈಲೈಟ್ ಇರುವುದಿಲ್ಲವಾದ್ದರಿಂದ ಇವರ sound sleep ಕೊನೆಗೊಳ್ಳಲು ಸೌಂಡನ್ನೇ ಬಳಸುವುದು ಅನಿವಾರ್ಯ.
ಬಾಲ್ಯದಲ್ಲಿ ಮೊಮ್ಮಕ್ಕಳ honorary holiday resort ಎಂದೇ ಪರಿಗಣಿಸಬಹುದಾಗಿದ್ದ ನನ್ನ ಅಜ್ಜಿಯ ಮನೆಯಲ್ಲಿ ಬೆಳಕಿಂಡಿ ಇದ್ದಿತು. ಮಲಗುಕೋನಕ್ಕೆ ಲಂಬರೇಖೆಯಲ್ಲಿ ಬೆಳಕು ಬಿದ್ದಾಗ ಏಳುವುದು ನನ್ನ ಅಂದಿನ, ಅಲ್ಲಿನ ಪದ್ಧತಿಯಾಗಿತ್ತು. “ಬೆಳಗಿನ ಕಾಫಿಯನ್ನು ಮಧ್ಯಾಹ್ನ ಕುಡಿಯುತ್ತಿದ್ದಿರೇನು?’’ ಎಂದು ಕೇಳಿದಿರೆ? ಹಾಗೇನಿಲ್ಲ. ಅಜ್ಜಿಯು ಕಾಫಿಯ ಲೋಟವನ್ನು ಮಾವಂದಿರ ಕೈಯಲ್ಲಿ ಕಳುಹಿಸಿದರೆ ರಗ್ಗುದಿಗ್ಬಂಧನದಿಂದ ಹೊರಬರದೆಯೇ, ಕೇವಲ ಕೈಯನ್ನು ಮಾತ್ರ ಹೊರಚಾಚಿ ಮುಖದಿಂದ ತುಟಿಯಷ್ಟೇ ಭಾಗಕ್ಕೆ ಹೊದಿಕೆಯನ್ನು ಸರಿಸಿ, ಕಾಫಿಯ ಬಿಂದುಬಿಂದುವನ್ನೂ ಸೊರಗುಡುತ್ತಾ ಆಸ್ವಾದಿಸಿ, ಕಾಫಿಯ ಹಬೆಯು ಕಣ್ಣಿಗೆ ತಾಗದಂತೆ ಎಚ್ಚರ ವಹಿಸಿ (ಕಿರಣಗಳ ಶಾಖಕ್ಕೆ ಮೊಗ್ಗು ಅರಳುವಂತೆ ಹಬೆಯ ಶಾಖಕ್ಕೆ ಕಣ್ಣು ಅರಳಿಬಿಡಬಾರದಲ್ಲ!), ಕಾಫಿಯ ಲೋಟವನ್ನು ಪಕ್ಕಕ್ಕಿರಿಸಿ ಆ ಪಕ್ಕಕ್ಕೆ ಹೊರಳಿದರೆ ಬೆಳಕಿಂಡಿಯ ಲಂಬರೇಖೆಗೆ ಹೊರಳುತ್ತಿದ್ದುದೇ ಮಟಮಟ ಮಧ್ಯಾಹ್ನದ ಸಮಯಕ್ಕೆ. ಅನೇಕರಿಗೆ ಕಾಫಿಯು ವೇಕಪ್ ಡ್ರಿಂಕ್ ಆಗಿದ್ದೀತು. ನನಗೆ ಅದು ಕೇವಲ ಇಂರ್ವೆಲ್ಲು. ಮನೆಯ ಫ್ರಿಡ್ಜುಗಳ ಡೀಪ್ ಫ್ರೀಜಲ್ಲಿ ಇಟ್ಟಿರುವ ವಸ್ತುಗಳಿಗೆ ಅನುಭವವಾಗುವ ಶೀತಲತೆಯ ಪರಾಕಾಷ್ಠೆಯನ್ನು ಹೋಲುವ ಧನುರ್ಮಾಸದ ಕೊರೆಚಳಿಯಲ್ಲಿ ಕೊರೆಯೂ ಇರದಂತೆ ಹೊದ್ದು ಮಲಗುವ ಮಜವನ್ನು
‘ವೆಚ್ಚಕ್ಕೆ ಹೊನ್ನಿರಲ್…’ ಮೊದಲಾದ ಸಾಲಿಗೆ ಸೇರಿಸಿ ‘ರಗ್ಗಾಚ್ಛಾದಿತ ನಿದ್ರೆಯ ಮಜವಿರಲ್ ಸ್ವರ್ಗಕ್ಕೆ ಕಿಚ್ಚು ಹಂಚೆಂದ’ ಎಂದು ಸರ್ವಜ್ಞನು ಸೇರಿಸುವಷ್ಟರಲ್ಲಿ ಪವಡಿಸಿಬಿಟ್ಟಿದ್ದನೋ ಏನೋ.
ಇಬ್ಬನಿ, ಅವರೆಕಾಯಿ, ನಿದ್ರೆಗಳದೇ ಒಂದು ತೂಕವಾದರೆ ನಮ್ಮ ಮನೆಯ ಬಳಿಯ ರಾಮದೇವರ ಗುಡಿಯಲ್ಲಿ ಬೆಳಗ್ಗೆ ಆರಕ್ಕೆ ಸರಿಯಾಗಿ ಕೊಡುತ್ತಿದ್ದ ಪ್ರಸಾದರೂಪಿ ಪೊಂಗಲ್ನದೇ ಒಂದು ತೂಕ. ದೇವಸ್ಥಾನದ ಅರ್ಚಕರ ಘೃತಪೂರಿತ ಶರೀರದ ‘ಮಿರಮಿರತೆ’ಯನ್ನು ಹೋಲುವ ತಾಮ್ರದ ತಪ್ಪಲೆಯಲ್ಲಿ ನಿಸರ್ಗವು ತುಂಬಿರುವ ಹಿಮಪರದೆಯನ್ನೂ ಮೀರಿ ಹೊರಡುವ ಬಿಸಿಪೊಂಗಲಿನ ಘಮಭರಿತ ಆವಿಯನ್ನು ಲಾಲಾರಸಭರಿತ ವದನನಾಗಿ ಲಾಲಚ್ಭರೀ ಕಂಗಳಿಂದ ಈಕ್ಷಿಸುತ್ತ
ಘಮಘಮ ಘಮಿಸುವ ಘೃತಶಯ್ಯೆಯಲಿ
ರಸಭರ ಬೆಲ್ಲದ ಸಾಂಗತ್ಯದಲಿ
ಸಣ್ಣಕ್ಕಿಯು ಬೆಂದಿರೆ ಸರಿ ಹದದಲಿ
ಕಾದಿಹ ಜನರೆಲೆ ಸೇರುವ ತವಕದಿ
ಪ್ರಸಾದ ಸಿದ್ಧವಿದೆ ನೋಡಿದಿರಾ |
ಎಂದು ಮನದಲ್ಲೇ ತವಕಿಸುವ ಪ್ರಸಾದಮೋಹಿಗಳ ಸಾಲಿನ ಮುಂಚೂಣಿಯಲ್ಲಿರಲು ಸಿಹಿನಿದ್ರೆಯೆಂಬ ಅಮೂಲ್ಯರತ್ನವನ್ನೂ ತ್ಯಾಗ ಮಾಡುತ್ತಿದ್ದೆ. ಐದೂಮುಕ್ಕಾಲಿಗೆ ಎದ್ದು, ಕಾಗೆಸ್ನಾನ ಮಾಡಿ, ಎರಡೇ ಬೀದಿಗಳಷ್ಟು ಹಿಂದೆ ಇದ್ದ ದೇಗುಲದ ಗೇಟನ್ನು ತೆಗೆಯುವುದಕ್ಕೆ ಮುಂಚೆಯಾ ಪರ್ಣಹಸ್ತನಾಗಿ ನಿಂತಿರುತ್ತಿದ್ದ ನಾನು ಪ್ರಸಾದವನ್ನು ತಿಂದ ನಂತರವೇ ಮುಂದಿನ ಪ್ರಮುಖ ಕಾರ್ಯವನ್ನು ಮಾಡುತ್ತಿದ್ದುದು – ಮತ್ತೆರಡು ಗಂಟೆಗಳ ಸವಿನಿದ್ರೆ! ಧನುರ್ಮಾಸದ ಸಿಗ್ನೇಚರ್ ಟ್ಯೂನ್ ಆದ ಸಂಕ್ರಾಂತಿಯದಂತೂ ಒಂದು ದೊಡ್ಡ ಸಂಭ್ರಮದ ಅಧ್ಯಾಯವೇ. ಎಳ್ಳಿನ ಬಗ್ಗೆ ಬರೆಯಲು ಈಗ ಸಮಯವಿಲ್ಲ. ಇಪ್ಪಡು ಸದ್ಯಾನಿಕಿ ಎಳ್ಳೊಸ್ತಾನು.