ಆ ಮುಖಾ ಈ ಮುಖಾ
ಯಾವ ಗಂಡೊ ಯಾವ ಹೆಣ್ಣೊ
ಪ್ರೀತಿಯೆಂಬ ಚುಂಬಕಾ
ಕೂಡಿಸಿತ್ತು ಆಡಿಸಿತ್ತು
ಕೂಡಲದೊಲು ನೋಟವಾ
ಮೂರು ದಿನದ ಆಟವಾ|
ಎಂದರು ಬೇಂದ್ರೆ. ಫೆಬ್ರುವರಿ ಹದಿನಾಲ್ಕರ ‘ಪುರೋಹಿತನ ಹೆಸರಲ್ಲಿ ಪ್ರೇಮದೋಕುಳಿಯಾಟ’ ಆಡುವ ಈ ದಿನಗಳಿಗೆ ಇದಕ್ಕಿಂತ ಉತ್ತಮ ಸಾಲುಗಳು ದೊರಕವು.
ಹತ್ತ ಕಡಕು ಮಾತು ಖಡಕು
ನೋಟವಂತು ಹತ್ತು ಕಡೆಕು
ಹಲಕೆಲವೊ ಹುಟ್ಟು ಕುಡುಕು
ಚಿಮ್ಮುತಿಹುದೊ ಲವ್ವು ಇವಕು
ಎನ್ನುವುದೇ ಇಂದಿನ ಪ್ರೇಮದ ಸಿಲಬಸ್ ಆಗಿರುವಾಗ ‘ಆ ಮುಖಾ ಈ ಮುಖಾ’ಗಳ ಪೈಕಿ ಯಾವುದು ಗಂಡು, ಯಾವುದು ಹೆಣ್ಣು ಎಂದು ಅರಿಯುವುದು ಬಲು ಕಷ್ಟ. ಇಂದಿನ ಸಾವಿರಾರು ಜೋಡಿಗಳದು ನಿಜಕ್ಕೂ ಮೂರು ದಿನದ ಆಟವೇ. Living together ಎಂದು ಆರಂಭವಾಗುವ ಸಂಬಂಧವು some ಬಂಧವೋ, sum ಬಂಧವೋ ಅಥವಾ ಇಬ್ಬರಲ್ಲೊಬ್ಬರು sim ಬದಲಿಸುವವರೆಗೆ ಇರುವ sim ಬಂಧ ಉರುಫ್ slim ಬಂಧವೋ ಎಂಬ ಪರಿಸ್ಥಿತಿಯಲ್ಲಿ together ಎನ್ನುವುದು to get her ಎಂಬುದನ್ನು ಸೂಚಿಸುವುದೋ, to gather (ಸಿಕ್ಕಷ್ಟು, ಸಿಕ್ಕಿದ್ದು) ಎಂಬುದನ್ನು ಸೂಚಿಸುವುದೋ ಆ ಜೋಡಿಗೆ ಮಾತ್ರ ತಿಳಿದಿರುವ ಸತ್ಯ. ಒಟ್ಟಿಗಿರುವ ದಿನಗಳಲ್ಲಂತೂ
ನಿನ್ನ ಕಣ್ಣೀರ್ಮುತ್ತು
ನನ್ನ ಕೊರಳಿನ ಸುತ್ತು
ಆಭರಣವೆಂದು ಮೆರೆದಾಡುತಿರುವೆ
ಸ್ವರ್ಗ ನರಕಕ್ಕೆ ಕರೆದಲ್ಲಿ ಬರುವೆ | – (ಬೇಂದ್ರೆ)
ಎಂಬ ಗೋಲ್ಡನ್ ಪ್ರಾಮಿಸ್. ದಿನ ಕಳೆದಂತೆ ಹೊಸತು ಹಳತಾದಂತೆ, ಮೆರುಗು ಹಗುರಾದಂತೆ,
ನಗುವಿರಲಿ ಅಳುತಿರಲಿ
ಎರಡನ್ನು ನಂಬೆ
ನಗೆ ನಂಜು ಅಳು ಮಂಜು
ಇದ್ದೀತು ಎಂಬೆ |- (ಬೇಂದ್ರೆ)
ಎನ್ನುತ್ತಾ ವಿವಿಧ ದಿಕ್ಕಿಗೆ ಹಾರುವ ವಿಹಗಗಳಾಗುವುದು ಇಂದಿನ ಒಂದು ಟ್ರೆಂಡ್.
ಕೆಲವು ಜೋಡಿಗಳಂತೂ ಕಣ್ಗೆ ಹಬ್ಬ. ಮೇಕಪ್ ಮಾಡಿಕೊಂಡ ಮನ್ಮಥನೊಡನೆ ಫ್ರೆಷ್ ಫ್ರಂ ದ ಪಾರ್ಲರ್ ರತಿಯು ಸುಳಿದಾಡುತ್ತಿದ್ದರೆ
ತಾಳ್ಯಾಕ ತಂತ್ಯಾಕ
ರಾಗದ ಚಿಂತ್ಯಾಕ
ಹೆಚ್ಯಾಕ ಗೆಜ್ಯಾಕ ಕುಣಿಯೋಣು ಬಾರಾ | – (ಬೇಂದ್ರೆ)
ಎಂದು ನೋಡುಗರಿಗೇ ಅನಿಸುತ್ತದೆ. ಇಂತಹ ಅಂದದ ಜೋಡಿಯು ಅಂದಣವೇರುವುದೆಂದೇ ನಾನು ನಂಬಿದ್ದೆ. ಆದರೆ ಅದೇಕೋ ಪರಸ್ಪರ ಹೊಂದಲಿಲ್ಲ. ಏನಾಯಿತೆಂದು ಕೇಳಿದರೆ,
ರಂಗು ಇಹುದು; ರೂಪವಿಹುದು
ಗಂಧ ಒಳ್ಳಿತಿಲ್ಲವು;
ನಯವು, ನುಣುಪು, ಇದ್ದು ಏನು?
ವ್ಯರ್ಥವಾಯಿತೆಲ್ಲವು! – (ಬೇಂದ್ರೆ)
ಎಂಬ ಅರ್ಥ ಬರುವ ರೀತಿಯಲ್ಲಿ ಉತ್ತರವು ದೊರಕಿತು. ಇಂತಹದ್ದೇ ಪ್ರಸಂಗವೊಂದನ್ನು ಹಿಂದೊಮ್ಮೆ ಓದಿದ್ದ ನೆನಪು. ತಿಲೋತ್ತಮೆಯನ್ನು ನೀವಾಳಿಸಿ ಎಸೆಯುವಂತಹವಳನ್ನು ವರಿಸಿದ್ದವನೊಬ್ಬ ಡೈವರಿಸಿದ್ದ. ‘ಚೆನ್ನಿದ್ದಳು; ಸುಸಂಸ್ಕೃತೆಯು; ಕುಲೀನಳು; ಏಕೆ ತೊರೆದೆಯಯ್ಯ?’ ಎಂದೊಡನೆ ತಾನು ತೊಟ್ಟಿದ್ದ ಷೂವಿನೆಡೆ ಬೊಟ್ಟು ಮಾಡುತ್ತಾ,
“ಚೆನ್ನಿಹುದೊ? ಸು-ಬ್ರ್ಯಾಂಡೊ? ರೂಪು ನುಣ್ಪುಗಳಿಹವೊ?’ ಎಂದನವ.
ಅಹುದಹುದೆಂದರು ಕಂಡವರು.
“ಆದರೆ ಇದೆಲ್ಲಿ ಕಚ್ಚುತ್ತದೆ ಎಂದು ನನಗೆ ಮಾತ್ರ ಗೊತ್ತು” ಎಂದನವ. ಈ ಕುರಿತಂತೇ ಬೇಂದ್ರೆ
ಮಾಟವಿಲ್ಲದ ಆಟ, ಏನಾಟ? ಎಳೆದಾಟ!
ಮಾಯಾ ಸಂಸಾರಕ್ಕೆ ಮಾಯಬೇಕು | – (ಬೇಂದ್ರೆ)
ಎಂದಿದ್ದಾರೆ. ನಿಜವಲ್ಲವೆ? ತಾಳಿ ಕೊಳ್ಳುವುದು ಮುಖ್ಯವಲ್ಲ, ತಾಳಿಕೊಳ್ಳುವುದು ಮುಖ್ಯ.
ಪ್ರೀತಿಯ ವಿಷಯವೇ ವಿಚಿತ್ರ. ಮನ್ಮಥನೊಡನೆ ‘ಮಿಸ್ಟರ್ ಯೂನಿವರ್ಸ್’ ಸ್ಪರ್ಧೆಗೆ ಇಳಿಯುವ ಮಟ್ಟದ ರೂಪವನ್ನು ಹೊಂದಿದ್ದ ನಳಮಹಾರಾಜನು ಸರ್ಪವೊಂದು ಕಚ್ಚಿದ ಕೂಡಲೆ
ಅಡ್ಡಮೋರೆಯ ಗಂಟುಮೂಗಿನ
ಜಡ್ಡುದೇಹದ ಗುಜ್ಜುಗೊರಲಿನ
ದೊಡ್ಡ ಕೈಕಾಲುಗಳ ಉದುರಿದ ರೋಮ ಮೀಸೆಗಳ |
ದೊಡ್ಡ ಹೊಟ್ಟೆಯ ಗೂನು ಬೆನ್ನಿನ
ಗಿಡ್ಡ ರೂಪಿನ ಹರಕು ಗಡ್ಡದ
ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ ||
ಇಂದಿನ ಹುಡುಗರೂ, ಹುಡುಗಿಯರೂ ಮತ್ತಷ್ಟು ಚೆನ್ನಾಗಿ ಕಾಣಬೇಕೆಂದು ಬಯಸಿ, ಹಾದಿಹೋಮಿಯೋವೈದ್ಯರಿಂದ ಹಾದಿತಪ್ಪಿದ ರೂಪಿಗಳಾಗುವುದನ್ನು ಕಂಡಾಗ ಆ ಸರ್ಪವೇ ಇಂದು ಫುಟ್ಪಾತಲ್ಲಿ ಟೆಂಟ್ ಹಾಕಿ ಕೂಡುವ ನ-ಕಲಿ (ಕಲಿಕೆಯಿಲ್ಲದ) ವೈದ್ಯ ಇರಬಹುದೇ ಎಂಬ ಸಂದೇಹ ಮೂಡುತ್ತದೆ. ಇಂತಿಪ್ಪ ಹುಡುಗರ ಹಿಂದೆ ರಂಭೆ, ಊರ್ವಶಿ, ಮೇನಕೆಯರನ್ನು ಮಿಕ್ಸಿಗೆ ಹಾಕಿ ರುಬ್ಬಿ, ಮೌಲ್ಡಿನಲ್ಲಿ ಎರಕ ಹೊಯ್ದು ಮಾಡಿದಂತಹ ಹುಡುಗಿಯು ಒಪ್ಪಿ ಅಪ್ಪುವುದು love is blind ಅಷ್ಟೇ ಅಲ್ಲ, lovers too are blind ಎನ್ನುವುದನ್ನು ರುಜುವಾತುಗೊಳಿಸುತ್ತದೆ.
ಅಂದು ನಳ ರೂಪದಿಂದ ಕೆಟ್ಟರೂ ಗುಣದಿಂದ ಕೆಟ್ಟಿರಲಿಲ್ಲ. ಇಂದಿನ ಬೆಂಗಳೂರಿನ ಎಂ.ಜಿ.ರೋಡ್ ಆಸುಪಾಸಿನ ಹರಕುಪ್ಯಾಂಟಿನ, ಇಲಿ ಕಚ್ಚಿದ ಗಡ್ಡದ, ಕೊಚ್ಚಿದೆಳನೀರುಬುರುಡೆಯ ತಲೆಯ ಹುಡುಗನೋ
ಎಲೆಯಡಿಕೆ ಬೀಡಿ ಸಿನೆಮಾದಿ ಚಟಗಳ ದಾಸ
ಹುಲು ಹರಟೆ ಹೊಡೆವ ಗೆಳೆಯರ ನಿತ್ಯ ಸಹವಾಸ
ಮಲಿನತನು ಹೊದೆದ ಮಲಿನಾಂಬರಗಳ ವೇಷ
ಮಲಿನ ಭಾಷಾ ವಿಶೇಷ
ಅಲೆನಗೆಯ ಶಿಲೆಬೆಲೆಯ ಬಿರುನಗೆಯ ಬಿರಿಬಾಯ
ಕಲಿಕಾಮಕರ್ಮವಿಶೇಷ | – (ಬಿ.ಎಚ್.ಶ್ರೀಧರ)
ಮುಟ್ಟಿದರೆ ಕೈತೊಳೆದುಕೊಳ್ಳಬೇಕಾದ ಇಂತಹ ಹುಡುಗನಿಗೆ ಕೈತೊಳೆದು ಮುಟ್ಟಬೇಕಾದ ರೂಪಸಿಯು ದೊರೆಯುವುದು ಜಗದ ಅತಿ ದೊಡ್ಡ ಅನ್ಯಾಯವಲ್ಲವೆ!
ಪ್ರೀತಿಯೇ ಹಾಗೆ. ಅದಕ್ಕೆ ಗ್ಲ್ಯಾಮರ್ ಇರುವುದೇ ವಿನಾ ಗ್ಲ್ಯಾಮರ್ ಇಲ್ಲ. ಮಾತುಗಳ ಪರ್ವತವನೇರಿ, ಮೌನದ ಗುಹೆಯೊಳಗೆ ಹೊಕ್ಕಾಗ ಪ್ರೀತಿ ಪಿಸುಗುಡುವುದಂತೆ. ಅಂತಹ ವಾಚಾಳಿ ರತ್ನನೇ
ಮೂಗ ಆದಂಗ್ ಆಗ್ತೀನ್ ನಾನು ನನ್ಪುಟ್ ನಂಜಿ ನಕ್ರೆ
ಆಡ್ಬೇಕಂದ್ರೆ ಮಾತೇ ಸಿಕ್ದು ಉಕ್ಬರ್ತಿದ್ರೆ ಅಕ್ರೆ !
ಎನ್ನುತ್ತಾನೆ. ಆದರೆ ಪ್ರೀತಿಗೆ ಗ್ಲ್ಯಾಮರ್ ಇಲ್ಲ ಎನ್ನುವುದನ್ನು ‘ಚೆಲುವೆಯೆ ನಿನ್ನ ನೋಡಲು; ಮಾತುಗಳು ಬರದವನು; ಬರೆಯುತ ಹೊಸ ಕವಿತೆಯ; ಹಾಡುವ ನೋಡಿ ಅಂದವನು’ ಎಂಬ ಚಿತ್ರಗೀತೆಯು ‘ಸಾಮಾನ್ಯ ಹೃದಯವು ಕವಿಹೃದಯವಾದಾಗ ಮಾತು ಕವಿತೆಯಾಗುತ್ತದೆ’ ಎನ್ನುವುದನ್ನು ಸೂಚಿಸುತ್ತದೆ. ಪ್ರೇಮಿ ಮೌನವಾದಾಗಲೂ ಹೃದಯ ಹಾಡುತ್ತದೆ. ಇದನ್ನು ರತ್ನನೂ
ಲಕ್ಕಂತ್ ಮುತ್ತ್ನಂಗ್ ಆತ್ಕೊಂತೈತೆ ನನ್ಪುಟ್ ನಂಜಿ ನಕ್ರೆ
ಝುಮ್ಮಂತ್ ಇಗ್ತ ಪದ್ವಾಡ್ತೀನಿ ಆ ಮತ್ತ್ ನನ್ಗಾಗ್ ಮಿಕ್ರೆ |
ಎನ್ನುತ್ತಾನೆ. ‘ಮೇರೇ ಮನ್ ಕೀ ಗಂಗಾ; ತೇರೇ ಮನ್ ಕೀ ಜಮುನಾ ಕಾ’ ಸಂಗಮವಾದಾಗ
ಆಡೋಕ್ ಅಳ್ತೆ ಗಿಳ್ತೆ ಇಲ್ಲ ನನ್ಪುಟ್ ನಂಜಿ ನಕ್ರೆ
ಮಾನ ಗ್ನಾನ ಎಲ್ಲಾನೂನೆ ತಿನ್ನೋದೊಂದೇ – ಠೋಕ್ರೆ!
ಪೆಟ್ಟು ತಿಂದರೂ, ತನ್ನ ಪೆಟ್ ಲವ್ ಅನ್ನು ಬಿಡದೆ ‘ತೇರೇ ಮೇರೇ ಬೀಚ್ ಮೆ ಕೈಸಾ ಹೈ ಎ ಬಂಧನ್’ ಎನ್ನುವುದನ್ನು ಕಂಡರೆ
ಠೋಕರ್ ಖಾಕರ್ ಭೀ ಚೋಕ್ರಾ ಚೋಕ್ರೀ ಸೇ ಜುಡ್ನೇ ಕೀ
ಚಾಹತ್ |
ಯಹೀ ಹೈ ಪ್ಯಾರ್ ಮೊಹಬ್ಬತ್ ಕೀ ಹಿಮ್ಮತ್ ಔರ್ ತಾಕತ್ ||
ಎನಿಸುವುದು ಸಹಜವೇ. ಈವಳು ಅದÀಮನಿಗೆ ಸೇಬನ್ನು ತಿನ್ನಲು ಕೊಟ್ಟಾಗಿನಿಂದಲೂ ‘You are the apple of my eye’ ಎಂಬ ಪ್ರೇಮಾಲಾಪ ಶುರುವಾಯಿತೆಂದು ‘ಹಿಸ್ಸ್ ವಿಟ್ನೆಸ್ ದ ಸ್ನೇಕ್’ ಅದೇ ಸೇಬಿನ ಮರದ ತೊಗಟೆಯ ಮೇಲೆ ಕೆತ್ತಿದೆಯಂತೆ. ಅಂದೆಲ್ಲ ಪ್ರೀತಿ ಹುಟ್ಟುವುದು ಎಂದಿತ್ತು. ಈಗ ಪ್ರೀತಿ ಒಂದು ವಸ್ತು ಎನ್ನುವುದಕ್ಕೆ ರವಿಚಂದ್ರನ್ ಚಿತ್ರದ ‘ಪ್ರೀತಿ ಮಾಡಬಾರದು…’ ಎಂಬ ಹಾಡೇ ಸಾಕ್ಷಿ.
ಪ್ರೀತಿಯದೇ ಒಂದು ಜಗತ್ತಿದೆ, ಅದನ್ನು ಪ್ರೇಮಲೋಕ ಎಂದು ಕರೆಯುತ್ತಾರೆ ಎಂದು ರವಿಚಂದ್ರನ್ ತೋರಿಸಿಕೊಟ್ಟಿದ್ದಾರೆ. ಲೋಕಕ್ಕೊಂದು ಪಾಸ್ಪೋರ್ಟ್ ಬೇಕಲ್ಲವೆ, ಅದೇ ಕೆಂಪು ಗುಲಾಬಿ. ಅಂದಿನ ಲಜ್ಜಾನ್ವಿತ ಕೆಂಗಲ್ಲದ ರಮಣಿಯರ ಮೊಗವೇ ಗುಲಾಬಿಯಂತೆ ಇರುತ್ತಿದ್ದು, ಅದರಲ್ಲಿಯೂ ನಾಚಿ ಕೆಂಪೇರಿದ ಗಲ್ಲಗಳು ಮತ್ತಷ್ಟು ರಂಗೇರಿ ಕಂಗೊಳಿಸುತ್ತಿದ್ದು ‘RoseK Rose ಓತ್ಪತ್ತಿಃ ಶ್ರೂಯತೇ ನತು ದೃಶ್ಯತೇ | ಬಾಲೇ ತವ ಮುಖಾಂಬೋಜೇ ಕಥಂ Rose ದ್ವಯಂ’ ಎಂದು ಕಾಳಿದಾಸನ ಪದ್ಯದ ಮತ್ತೊಂದು ಅವತರಣಿಕೆಗೆ ನಾಂದಿಯಾಗುತ್ತಿದ್ದವು. ಈಗ ‘ನಾಚಿಕೆ ಹೇಸಿಗೆ ಎಲ್ಲ ಊರಿಂದಾಚೆಗೆ’ ಎನ್ನುವ ಕಾಲವಾದ್ದರಿಂದ ಲಜ್ಜೆ ತಗ್ಗಿ ಕೆಂಪು ಪುಡಿಗೆ ಬೇಡಿಕೆ ಹೆಚ್ಚಿ ‘ಚೂರ್ಣೇ ವರ್ಣೋತ್ಪತ್ತಿಃ’ ಎಂಬ ಹಂತವನ್ನು ತಲಪಿದ್ದೇವೆ.
ಕೆಂಗುಲಾಬಿಗೆ ಕೆಂಬಣ್ಣ ಬಂದುದರ ಬಗ್ಗೆಯೂ ಎರಡು ಕಥೆಗಳಿವೆ. ಎರಡೂ ಕಥೆಗಳ ಪ್ರಕಾರ ಮೊದಲಿಗೆ ಪ್ರಪಂಚದಲ್ಲಿ ಇದ್ದುದು ಬಿಳಿ ಗುಲಾಬಿ ಮಾತ್ರ. ರೋಮನ್ ಪುರಾಣದ ಪ್ರಕಾರ ಅಫ್ರೊಡೈಟಳು ಅಡೋನಿಸನು ಅಪಾಯದಲ್ಲಿದ್ದಾನೆಂಬ ಸುದ್ದಿಯನ್ನು ಕೇಳಿ ಧಾವಿಸುವಾಗ ಗುಲಾಬಿಯ ಗಿಡದ ಮುಳ್ಳುಗಳು ಅವಳ ಕಾಲನ್ನು ತರಚಿದ್ದರಿಂದ ಹೊಮ್ಮಿದ ರಕ್ತದಿಂದ ಬಿಳಿಗುಲಾಬಿಗಳು ಕೆಂಪಾದವು. ಆದರೆ ದಳಕ್ಕೆ ಮೆತ್ತಿದ್ದು ತಲೆತಲಾಂತರಕ್ಕೂ ಮೆತ್ತಿಕೊಳ್ಳುವುದು ಸಾಧ್ಯವೆ? ಶ್ರೀರಾಮನು ಅಳಿಲಿನ ಬೆನ್ನಿನ ಮೇಲೆ ಮೂರು ಗೆರೆಗಳನ್ನು ಎಳೆದ ನಂತರ ಇಂದಿನ ಅಳಿಲಿಗೂ ಅದೇ in-born tattoo ಇರುವುದರಿಂದ ಪುರಾಣರೀತ್ಯಾ ಬಾಹ್ಯದಲ್ಲಿರುವುದು ಜೀನ್ಸ್, ಕ್ರೋಮೋಸೋಮುಗಳಿಗೆ ಇಳಿಯುತ್ತದೆಂದು ಒಪ್ಪಿ ಗುಲಾಬಿಯ ಕಥೆಯನ್ನೂ ನಂಬಬಹುದು.
ಇನ್ನೊಂದು ಕಥೆಯ ಪ್ರಕಾರ ದೇಶವೊಂದರ ತೋಟದಲ್ಲಿ ಬಿಳಿಗುಲಾಬಿಗಳು ತಾವೇ ಸುಂದರಿಯರೆಂದು ಮೆರೆಯುತ್ತಿದ್ದವು. ‘ನಮ್ಮ ಶ್ವೇತತ್ವಕ್ಕದಾರು ಸಮ!’ ಎಂದು ಬೀಗುತ್ತಿದ್ದವು. ಒಂದು ದಿನ ಆ ನಾಡಿನ ರಾಜಕುಮಾರಿ ಅಲ್ಲಿಗೆ ಬಂದಳು. ಅವಳ ತ್ವಚೆಯ ಶ್ವೇತತ್ವವನ್ನು ಕಂಡ ಗುಲಾಬಿಗಳು ‘ಇದು ಬರಿದೇ ಬಿಳಿಯಲ್ಲ ಕಾಣೋ; ಇದು ಸೌಂದರ್ಯದ ಔನ್ನತ್ಯ’ ಎನ್ನುತ್ತಾ ತಮ್ಮ ಅಂದಿನವರೆಗಿನ ಗರ್ವಕ್ಕೆ ನಾಚಿ ಕೆಂಪಾದವು. ಆ ಲಜ್ಜಾನ್ವಿತ ಶೋಣಿತವೇ ಇಂದಿಗೂ ರೋಸ್ಗಳ ಜೀನ್ಸ್ನಲ್ಲಿ ಹಾದುಬಂದಿವೆ.
ವ್ಯಾಲೆಂಟೈನೆಂಬ ‘ಫಸ್ಟ್ ರಿಜಿಸ್ಟ್ರಾರ್ ಆಫ್ ಸೀಕ್ರೆಟ್ ಮ್ಯಾರೇಜಸ್’ ಬಿರುದಾಂಕಿತನ ಹೆಸರಿನಲ್ಲಿ ನಡೆಯುವ ಪ್ರೇಮಸಂತೆಯಲ್ಲಿ ನಡೆಯುವುದೆನ್ನಲಾದ ಡೈಲಾಗ್ ಈ ರೀತಿಯಿದೆ:
“ಐ ಲವ್ ಯೂ.’’
“ಐ ಲವ್ ಯೂ ಟೂ.’’
“ದೆನ್, ವೆನ್ ಶಲ್ ವಿ ಮ್ಯಾರಿ?’’
“ಡು ನಾಟ್ ಚೇಂಜ್ ದ ಸಬ್ಜೆಕ್ಟ್. ಬರೀ ಲವ್ ಬಗ್ಗೆ ಮಾತ್ರ ಮಾತನಾಡೋಣ!”
ಲೋಕೋ ಭಿನ್ನ ರುಚಿಃ. ಲವ್ ಎನ್ನುವ ಪದವು ಟೆನಿಸ್ನ ಸ್ಕೋರಿನಂತೆ ಸೊನ್ನೆಯಾಗದೆ ‘ನೀ ಎನ್ನ ಸೊನ್ನೆಯೋ ನಾನೂ ಅದು ತಾ ಸೊನ್ನೆ’ ಎನ್ನುವ ಮಟ್ಟಕ್ಕೇರಿ ಸ್ಥಾಯಿಯಾದರೆ ಹೆವನ್ನಿನಲ್ಲಿರುವ ವ್ಯಾಲೆಂಟೈನ್ ಡಿವೈನಾಗಿ ಸ್ಮೈಲಿಸಿಯಾನು.