ಛತ್ರಿ ಅಥವಾ ಕೊಡೆ ಎಂಬ ಅರ್ಥವನ್ನು ಅನ್ವಯಿಸಿದಾಗಲೇ “ಜೊತೆಯಾಗಿ ಎಂದೂ ನಾನಿಲ್ಲವೇನು?’’ ಎಂಬ ಪ್ರಶ್ನಾರ್ಥಕ ವಾಕ್ಯವು ಧ್ವನಿಪೂರ್ಣವಾಗುವುದು. ಪ್ರಪಂಚದಲ್ಲಿ ಅತಿ ಹೆಚ್ಚು ಹಸ್ತಾಂತರವಾಗುವ ವಸ್ತುಗಳ ಪೈಕಿ ಅಗ್ರ ಪಂಕ್ತಿಯಲ್ಲಿರುವುವು ಪೆನ್ ಮತ್ತು ಕೊಡೆ. “ನೆನ್ನೆ ಅದು ಯಾರದೋ ಆಗಿತ್ತು; ಇಂದು ಅದು ನಿನ್ನದಾಗಿದೆ; ನಾಳೆ ಅದು ಇನ್ನಾರದೋ ಆಗಿರುತ್ತದೆ. ಅದು ಯಾವುದು?’’ ಎಂದರೆ ಇವೆರಡರಲ್ಲಿ ಯಾವುದನ್ನು ಬರೆದರೂ ಸರಿಯುತ್ತರವೆಂದು ಮಾರ್ಕ್ಸ್ ನೀಡಬೇಕಾಗುತ್ತದೆ. “ಜೊತೆಯಾಗಿ ಎಂದೂ ನಾನಿಲ್ಲವೇನು?’’ ಎಂದು ಕೇಳುವುದರಲ್ಲಿ “ನಾನು ಎಂದಿನಂತೆಯೇ ಇದ್ದೇನೆ. ನೀನು ನನ್ನನ್ನು ಇನ್ನೊಬ್ಬರಿಗೆ ವರ್ಗಾಯಿಸಿದೆಯೇನು? ಇನ್ನೊಂದು ಛತ್ರಿಗಾಗಿ ಈ ಛತ್ರಿಯನ್ನು ಬದಿಗಿಟ್ಟೆಯೇನು?’’ ಎಂಬ ಸಂದೇಹ ಮನದಲ್ಲಿ ಮೂಡಿರುವುದು ವ್ಯಕ್ತವಾಗುತ್ತದೆ.
ಬಿಸಿಲಾದರೇನು ಮಳೆಯಾದರೇನು
ಜೊತೆಯಾಗಿ ಎಂದೂ ನಾನಿಲ್ಲವೇನು…
ನಾನು ಕೇಳಿರುವ ಹಾಡುಗಳಲ್ಲೇ ಅತಿ ಹೆಚ್ಚು ಪ್ರಶ್ನೆಗಳನ್ನು ಹೊಂದಿರುವ ಹಾಡಿದು. “ಊಂ ಕ್ಯಾ ಹುವಾ; ಕೈಸೆ ಹುವಾ; ಕಬ್ ಹುವಾ; ಕ್ಯೋ ಹುವಾ…’’ ಎಂಬ ಕಿಶೋರ್ಕುಮಾರನ ಹಾಡು ಪಲ್ಲವಿಯಲ್ಲಷ್ಟೇ ಪ್ರಶ್ನೆಗಳನ್ನು ಇಟ್ಟುಕೊಂಡಿದ್ದರೆ ಇದು ಮೈಯೆಲ್ಲ್ಲ ಪ್ರಶ್ನೆಗಳಿರುವ ಹಾಡು.
ಪ್ರಶ್ನೆಗಳೇ ಹಾಡುಗಳ ಆರಂಭವಾಗಿರುವುದು ಹೊಸತೇನಲ್ಲ. ಕಟೀ ಪತಂಗ್ ಚಿತ್ರದಲ್ಲಿ “ಬಾಗೋಂಮೇ ಬಹಾರ್ ಹೈ?’’ ಎಂದು ಇವನು ಕೇಳುವುದು, ಅವಳು “ಹೈ” ಎನ್ನುವುದು ಆರಂಭವಾಗಿ ಅವನು ಕೇಳಿದ್ದಕ್ಕೆಲ್ಲ ಇವಳು “ಹೈ” ಎನ್ನುವ ಚಟಕ್ಕೆ ಬಿದ್ದಮೇಲೆ “ತುಮ್ಕೊ ಮುಝಸೆ ಪ್ಯಾರ್ ಹೈ?’’ ಎಂದಾಗಲೂ “ಹೈ” ಎಂದು, ನಂತರ “ನಾ ನಾ ನಾ” ಎನ್ನುತ್ತಾಳೆ. ರಾಜಕುಮಾರರ ಚಿತ್ರದ ಒಂದು ದೃಶ್ಯದಲ್ಲಿಯೂ ಕೈಯಲ್ಲಿ ಸೌಟು ಹಿಡಿದ ಪಾತ್ರಧಾರಿಯು “ಭೀಮಸೇನ ನಳಮಹರಾಜರು ಗಂಡಸರಲ್ಲವೆ? ನನ್ನ ಹಾಗೆ ಮೀಸೆ ಹೊತ್ತ ಮಹನೀಯರಲ್ಲವೆ?’’ ಎನ್ನುವ ಸನ್ನಿವೇಶವಿದೆ. ಭೀಮ-ನಳರು ಗಂಡಸರೆಂದು ಅರಿತಿದ್ದೇವಾದ್ದರಿಂದ ಮೊದಲ ಪ್ರಶ್ನೆಗೆ ಉತ್ತರ ಸುಲಭ. “ನನ್ನ ಹಾಗೆ ಮೀಸೆ ಹೊತ್ತ…’’ ಎಂಬ ಭಾಗ ಮತ್ತು ಅವರಿಬ್ಬರೂ ಪಾಕಪ್ರವೀಣರು ಎಂಬ ವಿಷಯಗಳೇ ಚರ್ಚೆಗೆ ಆಸ್ಪದವಾದವು.
ಮಹಾಭಾರತದ ವನಪರ್ವದಲ್ಲಿ ಹಿಡಿಂಬನು ಮೂಗರಳಿಸಿ ನರಮಾಂಸದ ವಾಸನೆ ಹಿಡಿದು ಹಿಡಿಂಬೆಯನ್ನು
ಸಾಯಲವದಿರ ಬಡಿದು ತಾ ತಮ
ಗಾಯವಿದು ಕೃತಪುಣ್ಯಫಲವೆನೆ
ಮಾಯಗಾತಿಯಾದ ಹಿಡಿಂಬೆಯು ‘ಹಸಾದ’ವೆನುತ ಪಾಂಡವರ ವಾಸನೆಯನ್ನು ಅನುಸರಿಸಿ ಮೂಗು ಒಯ್ದತ್ತ ಹೋದಾಗ
ಅಂದು ಕಂಡಳು ದೂರದಲಿ ಹರಿ
ನಂದನನ ಸುಳಿದಲೆಯ ಕೆಮ್ಮೀಸೆಗಳ…
ಎಂದು ಕುಮಾರವ್ಯಾಸನು ಬರೆದಿರುವುದರಿಂದ ಭೀಮನಿಗೆ ಮೀಸೆ ಇದ್ದಿತು ಎಂಬುದು ಖಚಿತವಾಯಿತು. ಆದರೆ ಅದು ಕೆಮ್ಮೀಸೆ. ವರನಟನಿಗೆ ಆ ಚಿತ್ರದ ಪಾತ್ರದಲ್ಲಿ ಇದ್ದುದು ಕೆಮ್ಮೀಸೆಯೋ, ಕರಿಮೀಸೆಯೋ? ಕೆಂಪು ಮೀಸೆಯಾಗಿದ್ದರೆ “ನನ್ನ ಹಾಗೆ ಮೀಸೆ ಹೊತ್ತ” ಎನ್ನುವುದು ಸರಿಯಾಗುತ್ತದೆ. ಕಪ್ಪು ಮೀಸೆಯಾದರೆ “ನನ್ನ ಹಾಗೆ…’’ ಅನ್ವಯವಾಗದು. ಇಲ್ಲಿ ಇನ್ನೊಂದು ಸೂಕ್ಷö್ಮವಿದೆ. ದ್ರೌಪದಿಗೆ ಅಕ್ಷಯಪಾತ್ರೆಯು ಅಂದಿನ ಸ್ವಿಗ್ಗಿಯ ರೂಪದಲ್ಲಿ ದೊರೆತ ದಿನದಿಂದ ಬರಿದೇ “ಆರ್ಡರ್” ಮಾಡುವುದು, ಸಪ್ಲೈ ಆದುದನ್ನು ಬಡಿಸುವುದು ಅಷ್ಟೇ ಆಗಿತ್ತು. ಪಾಂಡವರ ವನವಾಸದ ಮನೆಯು ತತ್ಕಾರಣ ಕಿಚನ್ಲೆಸ್ ಹೌಸ್ ಆಗಿತ್ತೆನಿಸುತ್ತದೆ. ಈ ಆಧಾರದ ಮೇರೆಗೆ ಭೀಮಸೇನನು ಭೀಮಸೇನನೇ ಆಗಿದ್ದಾಗ ಅಡುಗೆ ಮಾಡಿಲ್ಲ. ಅವನು ವಲಲನಾದಾಗಲೇ ಅಡುಗೆ ಮಾಡಿದ್ದು. ಹೀಗಾಗಿ ವಲಲನಿಗೆ ಅಡುಗೆಯು “ಒಕೇಷನಲ್ ಟ್ರೈನಿಂಗ್” ಮೂಲಕ ಬಂದುದೋ, ಹಿಂದೆಂದೋ ಕುಂತಿಯ ಮಾರ್ಗದರ್ಶನದಲ್ಲಿ ಕಲಿತುದೋ ಎಂಬ ಅಂಶವು ಅಸ್ಪಷ್ಟವಾಗಿದೆ.
ಪುರುಷನಿಗೆ ಮೀಸೆ ಟ್ರೇಡ್ಮಾರ್ಕ್ ಇದ್ದಂತೆ. ಭೀಮನು ವಲಲನಾದಾಗಲೂ ಕೆಮ್ಮೀಸೆಯನ್ನೇ ಹೊಂದಿದ್ದರೆ ಆ ಕೆಂಪು ಮೀಸೆಯೇ ಅವನ ಇರುವನ್ನು ದುರ್ಯೋಧನಾದಿಗಳಿಗೆ ಸೂಚಿಸಿಬಿಡುತ್ತಿತ್ತಾದ್ದರಿಂದ ಅವನು ವಲಲನಾದಾಗಲೂ ಕೆಮ್ಮೀಸೆ ಇದ್ದಿತೆ? ಇದ್ದರೂ ಅದಕ್ಕೆ ಒಲೆಯ ಮಸಿಯನ್ನು ಬಳಿದುಕೊಂಡು ಕರಿಮೀಸೆ ಮಾಡಿಕೊಳ್ಳುವ ಮೂಲಕ ಕೆಮ್ಮೀಸೆಯನ್ನು ಅಜ್ಞಾತವಾಗಿಸಿದನೆ? ಹಾಗೊಮ್ಮೆ ಅಜ್ಞಾತವಾಗಿಸಿದ್ದರೆ ಒಲೆಯುರಿಯ ಶಾಖದ ಪರಿಣಾಮವಾಗಿ ಬೆವರು ಸುರಿದು ಮೀಸೆಯ ಬಣ್ಣ ಬಯಲಾಗುತ್ತಿರಲಿಲ್ಲವೆ? ಅಥವಾ ಮಹಾನ್ ಶೌರ್ಯಗಳಿಗೆ ಬೆವರದ ಅವನು ಜುಜುಬಿ ಒಲೆಶಾಖಕ್ಕೆ ಬೆವರದೆ ಇದ್ದನೆ? ವಲಲನು ಮೀಸೆಗೆ ಬಣ್ಣ ಬಳಿದುಕೊಳ್ಳುತ್ತಿದ್ದುದೇ ನಿಶ್ಚಿತವಾದಲ್ಲಿ ಮೀಸೆಗೆ ಬಣ್ಣ ಬಳಿದುಕೊಂಡ ಅಡುಗೆಯವರಷ್ಟೇ ಭೀಮಸೇನ ಉರುಫ್ ವಲಲನಿಗೆ ತಮ್ಮನ್ನು ಹೋಲಿಸಿಕೊಳ್ಳಬಹುದಲ್ಲವೆ?
ನಳನ ವಿಷಯಕ್ಕೆ ಬರೋಣ. “ಪಾಕದರ್ಪಣಮ್” ಎಂಬ ಪುಸ್ತಕವನ್ನೇ ಬರೆದಿರುವುದರಿಂದ ಅವನು ಅಡುಗೆ ತಿಳಿದಿದ್ದನೆನ್ನುವುದು ನಿರ್ವಿವಾದ. ಆದರೆ “ಜ್ವಾಲೆಯಿಲ್ಲದೆಯೇ ಅಡುಗೆ ಮಾಡುತ್ತಿದ್ದ” ಎಂಬ ಹೆಗ್ಗಳಿಕೆ ಅವನಿಗೆ ಇರುವುದರಿಂದ ಪ್ರಪಂಚದ ಮೊಟ್ಟಮೊದಲ ಸಲಾಡ್, ಐಸ್ಕ್ರೀಮ್, ಕೋಸಂಬರಿ, ತಂಬುಳಿ ಮೊದಲಾದ ಹಸಿ ಅಡುಗೆಗಳನ್ನು ಮಾಡುವುದಕ್ಕಷ್ಟೇ ಅವನ ಪ್ರಾವೀಣ್ಯ ಸೀಮಿತವಾಗಿತ್ತು ಎನಿಸುತ್ತದೆ. ಹೀಗಾಗಿ ಬಿಸಿಯಡುಗೆ ಮಾಡುವವರನ್ನು ನಳನಿಗೆ ಹೋಲಿಸುವುದು ಸರಿಯಾಗದೆನಿಸುತ್ತದೆ.
ನಳನ ಮೀಸೆಪುರಾಣವನ್ನಷ್ಟು ನೋಡೋಣ. ನಳ-ದಮಯಂತಿಯರು ಕಾಡಿನಲ್ಲಿ ಓಡಾಡುವಾಗ ನಳನಿಗೆ ಮೀಸೆ ಇದ್ದಿತೆಂದು ಚಿತ್ರಗಳು ಸೂಚಿಸುತ್ತವೆ. ಆದರೆ ಅವನು ದಮಯಂತಿಯ ಅರ್ಧ ಸೀರೆಯನ್ನು ಧರಿಸಿ ಹೋದಾಗಲೂ ಮೀಸೆ ಇದ್ದಿತೆ? ಸೀರೆಗೆ ಮೀಸೆ ಮ್ಯಾಚ್ ಆಗುವುದಿಲ್ಲವೆಂದು ಅವನಿಗೆ ಅನ್ನಿಸಲಿಲ್ಲವೆ? ಅಥವಾ ಅಂದು ಸೀರೆಯುಡುವವರು ಮೀಸೆ ಬಿಡುವುದು ಫ್ಯಾಶನ್ ಆಗಿತ್ತೆ? ಹಾಗಿದ್ದರೆ ದಮಯಂತಿಯೂ ಫ್ಯಾಷನೆಬಲ್ ಎನ್ನಿಸಿಕೊಳ್ಳಲು ಮೀಸೆ ಬಿಡಬೇಕಾಗಿತ್ತೆ? ಅಂದು ಸುಂದರಕಾಯರಿಗೆ ಮೀಸೆ ಸೌಂದರ್ಯದ, ಶೌರ್ಯದ ಪ್ರತೀಕವಾಗಿತ್ತು. ಹೀಗಿರುವಾಗ ಕುರೂಪಿ ಬಾಹುಕನಾಗಿ ಬದಲಾದಾಗಲೂ ನಳನಿಗೆ ಮೀಸೆ ಇದ್ದಿತೆ? ಬಾಹುಕನಾಗುವ ಮೊದಲು ನಳನು ಅಡುಗೆ ಮಾಡಿದ್ದರೆ “ನನ್ನ ಹಾಗೆ ಮೀಸೆ ಹೊತ್ತ…’’ ಸಾಲು ಅನ್ವಯವಾಗುತ್ತದೆ. ಬಾಹುಕನಾದ ನಂತರವೇ ಅಡುಗೆಗೆ ಇಳಿದಿದ್ದು, ನಂತರ ನಳನಾಗಿ ಮರುಬದಲಾದ ನಂತರ ಪಾಕಪುಸ್ತಕ ಬರೆದವನಾಗಿದ್ದರೆ ಹಾಡಿನ ಸಾಲನ್ನು “ಭೀಮಸೇನ ನಳಮಹರಾಜರು…’’ ಬದಲಿಗೆ “ವಲಲ-ಬಾಹುಕರು…’’ ಎಂದು ಬದಲಾಯಿಸಬೇಕಾದೀತು.
ಇದರಲ್ಲಿಯೇ ಚರ್ಚೆಗೆ ಮತ್ತೊಂದು ಆಸ್ಪದವಿದೆ. “ನನ್ನ ಹಾಗೆ ಮೀಸೆ ಹೊತ್ತ” ಎಂದರೆ ಯಾವ ರೀತಿಯದು? ಮೀಸೆಯಲ್ಲಿ ಪೊರಕೆ ಮೀಸೆ, ಗೀರುಮೀಸೆ, ಕುಚ್ಚುಮೊಟ್ಟೆ ಮೀಸೆ, ಜಿರಳೆಮೀಸೆ, ಹಿಟ್ಲರ್ಮೀಸೆ, ಗಿರಿಜಾಮೀಸೆ ಮೊದಲಾದ ವಿಧಗಳಿವೆ. ಭೀಮ-ನಳ ಉರುಫ್ ವಲಲ-ಬಾಹುಕರಿಬ್ಬರೂ ಒಂದೇ ವಿಧದ ಮೀಸೆ ಬಿಟ್ಟಿದ್ದರೆ “ನನ್ನ ಹಾಗೆ ಮೀಸೆ ಹೊತ್ತ” ಎಂಬ ಸಾಲು ಸರಿಯಾಗುತ್ತದೆ. ಭೀಮನು ಗಿರಿಜಾಮೀಸೆಯನ್ನೂ, ನಳನು ಜಿರಳೆಮೀಸೆಯನ್ನೂ ಬಿಟ್ಟಿದ್ದರೆ ಹಾಡಿದ ಪಾತ್ರಧಾರಿಯ ಮೀಸೆಗೆ ಅವರಿಬ್ಬರಲ್ಲಿ ಯಾರ ಮೀಸೆಯು ಹೋಲಿಕೆಯಾಗುವುದೋ ಅಷ್ಟಕ್ಕೇ ಹಾಡು ಸೀಮಿತವಾಗಿ ಇಬ್ಬರಲ್ಲೊಬ್ಬರ ಹೆಸರನ್ನಷ್ಟೇ ಹಾಡಿನಲ್ಲಿ ಬಳಸುವುದು ಸೂಕ್ತವಾಗುತ್ತದೆ.
ನಳ-ಭೀಮ-ವರನಟರನ್ನು ಅಡುಗೆಮನೆಯಲ್ಲೇ ಬಿಟ್ಟು ಬಿಸಿಲಾದರೇನು ಮಳೆಯಾದರೇನು ಹಾಡಿಗೆ ಮರಳೋಣ… ಇರಿ ಇರಿ… ಮರಳೋಣ ಎಂದಿದ್ದು ಸೂರ್ಯನ ಶಾಖದಿಂದ ಉಷ್ಣತೆಯು ಹೆಚ್ಚಾಗಿ ಕೊತಕೊತನೆ ಕುದಿಯುವ ಮರಳುವಿಕೆ ಎಂಬ ಅರ್ಥದಲ್ಲಲ್ಲ; ಹಿಂತಿರುಗೋಣ ಎಂಬ ಅರ್ಥದಲ್ಲಿ. ಬಿಸಿಲು, ಮಳೆ ಎರಡೂ ಸಂದರ್ಭಗಳಲ್ಲಿ ವ್ಯಕ್ತಿಯ ಜೊತೆ ಇರುವ ಏಕೈಕ ವಸ್ತುವೆಂದರೆ ಛತ್ರಿ. ಇಂತಿರುವಾಗ ಎರಡೂ ಸಂದರ್ಭದಲ್ಲಿ “ಜೊತೆಯಾಗಿ ಎಂದೂ ನಾನಿಲ್ಲವೇನು?’’ ಎಂದು ಕೇಳುವುದು ಅವನ ಛತ್ರಿ ಬುದ್ಧಿಯನ್ನು ತೋರಿಸುವುದೇನು? “ಛತ್ರಿಬುದ್ಧಿ” ಎನ್ನುವುದಕ್ಕೆ ಪ್ರಚಲಿತವಲ್ಲದ ಮತ್ತೊಂದು ಅರ್ಥವು ಇಲ್ಲಿ ಅನ್ವಯವಾಗುತ್ತದೆ? ಆವಶ್ಯಕತೆಯಿಲ್ಲದಾಗ ಯಾರ ಗಮನವನ್ನೂ ಸೆಳೆಯದೆ ಮೂಲೆಯಲ್ಲಿ ಕುಳಿತಿದ್ದು, ವ್ಯಕ್ತಿಗೆ ಆವಶ್ಯಕತೆ ಮೂಡಿದಾಗ ಅಗಲವಾಗಿ ಹರಡಿಕೊಂಡು ತಲೆಕಾಯ್ದು, ನಂತರ “ಕರ್ಮಣ್ಯೇವಾಧಿಕಾರಸ್ತೇ”ಯ ಪ್ರತೀಕವಾಗಿ ಮೂಲೆ ಸೇರುವ ವ್ಯಕ್ತಿಯ ಬುದ್ಧಿಯೇ ಅಸಲೀ ಛತ್ರಿಬುದ್ಧಿ. ತಲೆಕಾಯುವ ಛತ್ರಿ ಕಾಯವನ್ನೂ, ಕಾಲನ್ನೂ ಕಾಯುವುದೂ ಉಂಟು. ಬಾಗಿದ ದೇಹಕ್ಕೆ ಊರುಗೋಲಾಗಿ, ಬೊಗಳುವ ನಾಯಿಯನ್ನು ಅಟ್ಟುವ ಅಸ್ತçವಾಗಿ ಉಪಯುಕ್ತವಾಗುವುದನ್ನೂ ಛತ್ರಿಬುದ್ಧಿಯೆಂದೇ ಕರೆಯಬಹುದು.
ಕೊಡೆಯ ಚಂಚಲತೆಯನ್ನು ಓಹೆನ್ರಿಯ ಕಥೆಯೊಂದರಲ್ಲಿ ಸೊಗಸಾಗಿ ನಿರೂಪಿಸಲಾಗಿದೆ. ಹೇಗಾದರೂ ಪೊಲೀಸರ ಕೈಗೆ ಸಿಕ್ಕಿ, ಕಠಿಣವಾದ ಚಳಿಗಾಲವನ್ನು ಜೈಲಿನಲ್ಲಿ ಕಳೆಯುವ ಉದ್ದೇಶ ಹೊತ್ತ ನಿರ್ಗತಿಕನೊಬ್ಬನು ಮಾಲ್ನೊಳಕ್ಕೆ ಪ್ರವೇಶಿಸುತ್ತಿದ್ದ ವೃದ್ಧನೊಬ್ಬನು ಬಾಗಿಲ ಬಳಿಯಲ್ಲಿರಿಸಿದ ಕೊಡೆಯನ್ನು ಥಟ್ಟನೆ ಕೈಗೆತ್ತಿಕೊಂಡು “ನಿನ್ನ ಕೊಡೆಯನ್ನು ಕದಿಯುತ್ತಿದ್ದೇನೆ. ಪೊಲೀಸರಿಗೆ ಫೋನ್ ಮಾಡು” ಎನ್ನುತ್ತಾನೆ. ವೃದ್ಧನು ಕೊಂಚ ಆಲೋಚಿಸಿ, “ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿಯನ್ನು ತೆಗೆದುಕೊಳ್ಳುವುದು ಬೇಡ. ಕದ್ದವನಾದ ನೀನೇ ಅದನ್ನು ಹಿಂತಿರುಗಿಸಿಬಿಡು” ಎನ್ನುತ್ತಾನೆ. “ಕೊಡುವುದಿಲ್ಲ. ಕರೆ ಪೊಲೀಸರನ್ನು” ಎಂದು ನಿರ್ಗತಿಕನು ದುಂಬಾಲು ಬಿದ್ದಾಗ “ಹೋಗಲಿ ಬಿಡು. ಕೊಡೆಯನ್ನು ನೀನೇ ಇಟ್ಟುಕೊ. ಹೇಗೂ ಅದು ನನ್ನದಲ್ಲ. ಇಂದು ಬೆಳಗ್ಗೆ ಇನ್ನೊಂದು ಮಾಲ್ನಿಂದ ನಾನು ಎಗರಿಸಿ ತಂದದ್ದು” ಎನ್ನುತ್ತಾನೆ.
ಛತ್ರಿ ಅಥವಾ ಕೊಡೆ ಎಂಬ ಅರ್ಥವನ್ನು ಅನ್ವಯಿಸಿದಾಗಲೇ “ಜೊತೆಯಾಗಿ ಎಂದೂ ನಾನಿಲ್ಲವೇನು?’’ ಎಂಬ ಪ್ರಶ್ನಾರ್ಥಕ ವಾಕ್ಯವು ಧ್ವನಿಪೂರ್ಣವಾಗುವುದು. ಪ್ರಪಂಚದಲ್ಲಿ ಅತಿ ಹೆಚ್ಚು ಹಸ್ತಾಂತರವಾಗುವ ವಸ್ತುಗಳ ಪೈಕಿ ಅಗ್ರಪಂಕ್ತಿಯಲ್ಲಿರುವುದು ಪೆನ್ ಮತ್ತು ಕೊಡೆ. “ನಿನ್ನೆ ಅದು ಯಾರದೋ ಆಗಿತ್ತು; ಇಂದು ಅದು ನಿನ್ನದಾಗಿದೆ; ನಾಳೆ ಅದು ಇನ್ನಾರದೋ ಆಗಿರುತ್ತದೆ. ಅದು ಯಾವುದು?’’ ಎಂದರೆ ಇವೆರಡರಲ್ಲಿ ಯಾವುದನ್ನು ಬರೆದರೂ ಸರಿಯುತ್ತರವೆಂದು ಮಾರ್ಕ್ಸ್ ನೀಡಬೇಕಾಗುತ್ತದೆ. “ಜೊತೆಯಾಗಿ ಎಂದೂ ನಾನಿಲ್ಲವೇನು?’’ ಎಂದು ಕೇಳುವುದರಲ್ಲಿ “ನಾನು ಎಂದಿನಂತೆಯೇ ಇದ್ದೇನೆ. ನೀನು ನನ್ನನ್ನು ಇನ್ನೊಬ್ಬರಿಗೆ ವರ್ಗಾಯಿಸಿದೆಯೇನು? ಇನ್ನೊಂದು ಛತ್ರಿಗಾಗಿ ಈ ಛತ್ರಿಯನ್ನು ಬದಿಗಿಟ್ಟೆಯೇನು?’’ ಎಂಬ ಸಂದೇಹ ಮನದಲ್ಲಿ ಮೂಡಿರುವುದು ವ್ಯಕ್ತವಾಗುತ್ತದೆ.
ಮೊದಲಿನ ಸಾಲಿಗೆ ಮತ್ತೆ ಬರೋಣ. “ಬಿಸಿಲಾದರೇನು?’’ ಎಂಬ ಪ್ರಶ್ನೆಗೆ ಈ ಉರಿಗಾಲದಲ್ಲಿ ನೂರಾರು ಉತ್ತರಗಳು ದೊರೆಯುತ್ತವೆ.
ಉರಿಮೊಗ ಗಗನದೊಳೇರಿದೊಡಂ ಮರುತಂ
ನಿಚ್ಚಲಂ ಶಾಖವೇರಿ ಮೈ |
ಯುರಿ ಬಿರುಸಾದೊಡಂ ಬಿರಿದ ಅಂಗಗಳಿಂ
ಒಸರ್ದೊಡೆ ಶೋಣಿತಂ |
ಗಾರು ಜಲಮೂಲಂ ತಾಂಡವಮಾಡೆ ಡಾಮರಂ
ಏನೆಂಬೆ ನಾ |
ನಾರೆಷ್ಟೇ ಪೇಳ್ದೊಡಂ ಕೊಠಡಿಯೊಳ್ ಇರಿಸುವೆಂ
ಏಸಿಯಂ ಕೂಲರಂ |
ಎಂದು ಕೂಲರನ್ನೂ, ಏಸಿಯನ್ನೂ ಹಾಕಿಸಲು ಮುಂಬರುವ ಜನರೂ, ಅವರನ್ನು ಸೆಳೆಯುವ ಜಾಹೀರಾತಿಗರೂ “ಬಿಸಿಲಾದರೇನು” ಎನ್ನುವ ಪ್ರಶ್ನೆಗೆ “ಬಿಸಿಲಾದರೇನೇ” ಎಂದೇ ಉತ್ತರ ನೀಡುವರು.
ಈ ವರ್ಷದ ಬಿಸಿಲಂತೂ ಸೂರ್ಯನೇ ಬೆವರುವಂತಿತ್ತು. ಸೂರ್ಯನು ಬೆವರಿದರೆ ಬಿಸಿಮಳೆ ಸುರಿಯಬಹುದು ಎಂಬ ನನ್ನ ಆಲೋಚನೆಯನ್ನು “ಸೂರ್ಯಾತ್ ಸಂಜಾಯತೇ ಸ್ವೇದಂ; ಸೂರ್ಯಾತ್ ಚ ಪರಿಶೇಷಃ” ಎನ್ನುತ್ತ ತುಂಡರಿಸಿದ ಸೀನು. ಸ್ವಶಾಖದಿಂದ ಬೆವೆತ ಸೂರ್ಯನ ಬೆವರು ಹೊರಹೊಮ್ಮುತ್ತಿದ್ದಂತೆಯೇ ಸೂರ್ಯಕಿರಣಗಳ ಶಾಖಕ್ಕೆ ಸಿಲುಕಿ ಆವಿಯಾಗುವುದಂತೆ! ಇಂತಿಪ್ಪ ಪರಿಸ್ಥಿತಿಯೊಳ್ ಭಾರತಜನನಿಯ ತನುಜಾತರೆಲ್ಲ ‘ಜಲ್ ಬಿನ್ ಮಚಲಿ; ನೃತ್ಯ್ ಬಿನ್ ಬಿಜಲಿ’ ಗಳಂತೆ ಆದುದು ಅಚ್ಚರಿಯೇನಲ್ಲ.
“ಮಳೆಯಾದರೇನು” ಎಂಬ ಪ್ರಶ್ನೆಗೆ ಉತ್ತರಿಸಲು ಎಲ್ನೀನೋ, ಲಾ ನೀನಾ ಮೊದಲಾದ ವಾತಾವರಣ ಸ್ಥಿತಿಗಳೂ, ವಿವಿಧ ಸುಂಟರಗಾಳಿಗಳೂ, ಬಿರುಗಾಳಿಗಳೂ, ಸುನಾಮಿಗಳೂ ಇವೆ. ಪ್ರಶ್ನೆಗಳನ್ನೊಳಗೊಂಡ ಒಂದೊಂದು ಹಾಡಿನ ಒಂದೊಂದು ಪಲ್ಲವಿಯೂ, ಒಂದೊಂದು ಚರಣವೂ ಇಂತಹ ನೂರಾರು ಆಲೋಚನೆಗಳಿಗೆ ಎಡೆ ಮಾಡಿಕೊಡಬಲ್ಲದು. ಇಷ್ಟೆಲ್ಲ ಗೋಜಲುಗಳಲ್ಲಿ ಸಿಲುಕಿದಾಗ ನಮಗೆ ಹೊಳೆಯುವ ಹಾಡಿನ ಸಾಲು ಸಹ ಹೇಳಿಕೆಯ ರೂಪದಲ್ಲಿರುವ ಪ್ರಶ್ನೆಯೇ:
ಹಮ್ ನಾ ಜಾನೇ ಕಿಸ್ ಜಹಾ ಮೆ ಖೋ ಗಯೇ!