ಬಾನೊಳು ತಿಂಗಳು ಮೊಳಗುತಿರೆ
ಮೀನುಗಳಿಣುಕುತ ತೊಳಗುತಿರೆ
ಶಾಂತಿಯ ಸೊಗದಲಿ ತುಂಬೆ ತಿರೆ
ಬಾಳಿದು ಹುಸಿಯೆಂದೆಂಬುವರೆ?
ಕುವೆಂಪು ವಿರಚಿತ ‘ಹುಣ್ಣಿಮೆ’ ಕವನದ ಚರಣವಿದು. ‘ಕುಕವಿಗಳ ಆಗಸದಿ/ ಕವಿದಮಾವಾಸ್ಯೆಯನು/ಹುಣ್ಣಿಮೆಯನಾಗಿಸಿದ/ ರಸಋಷಿಯೆ ಪುಟ್ಟಪ್ಪ’. ಕುವೆಂಪು ಈ ನಾಲ್ಕು ಸಾಲುಗಳಲ್ಲಿ ನಾಲ್ಕು ಬೆಳಕುಗಳನ್ನು ಸೂಚಿಸಿದ್ದಾರೆ. ಬಾನಿಗೆ ಚಂದಿರ, ತಾರೆಯರು ತುಂಬಿರುವ ದಿನವೇ ದೀಪಾವಳಿ. ಜಲಾಶಯಕ್ಕೆ ನೀರಿನಿಂದ ಇನಿತೇ ಚಿಮ್ಮಿ ಪುಳಕ್ಕನೆ ನೀರಿಗೆ ಮರಳುವ ಮೀನುಗಳ ಇಣುಕುಮಿಣುಕಿನ ಸಾಲೇ ದೀಪಾವಳಿ. ಬುವಿಗೆ ಯುದ್ಧಬಾಂಬುಗಳ ನಂತರದ ಶಾಂತಿಮತಾಪಿನ ಸಾಲೇ ದೀಪಾವಳಿ. ಬಾಳೆಂಬುದು ಅವಕಾಶಗಳೆಂಬ ದೀಪಗಳ ಆವಳಿಗಳನ್ನೀಯುವ ಮಿಶ್ರವರ್ಣದ ದೀಪಾವಳಿ. ಒಂದೊಂದು ದೀಪಾವಳಿಯದು ಒಂದೊಂದು ವೈಶಿಷ್ಟ್ಯ. ಜಗವು ಆಚರಿಸುವ ದೀಪಾವಳಿಗೆ ಪ್ರಮುಖವಾದ ಹಣತೆಯಂತೂ ವಿಶಿಷ್ಟ ಅರ್ಥಗಳಿರುವ earthen delight. ಜ್ಞಾನಿಗಳು ಹಣತೆಯನ್ನು
ಮೃತ್ತಿಕೆಯೆ ಮೈಯಾಗಿ
ಹೊತ್ತು ದ್ರವತೈಲವನು
ಸುತ್ತುವರಿದಿರೆ ಮರುತ
ಹೊತ್ತು ಹೊತ್ತಿದ ಬತ್ತಿ
ಕತ್ತೆತ್ತೆ ಆಗಸಕೆ ಪಂಚ
ಭೂತದ ಚಿಹ್ನೆ ಪಣತೆಯಲ್ತೆ
ಎಂದು ಬಣ್ಣಿಸುತ್ತಾರೆ. ಅಂಗೈಯಗಲದ ಹಣತೆಯ ದೀಪಕ್ಕೂ, ಆಧುನಿಕ ಸಂಸ್ಥೆಗಳಿಗೂ ಹೋಲಿಕೆಯುಂಟು. ಹಣತೆಯಲ್ಲಿ ಎಣ್ಣೆ ಹಾಕಿ ಬತ್ತಿ ಇಟ್ಟು ದೀಪ ಹಚ್ಚುತ್ತಾರೆ, ಸಂಸ್ಥೆಗಳಲ್ಲಿ ಎಣ್ಣೆ ಏರಿಸಿಕೊಂಡು, ಬತ್ತಿಯಿಟ್ಟು, ಕಿಡಿ ಹಚ್ಚುವವರಿರುತ್ತಾರೆ. ಹಾಗೆಂದು ಇದೇನೂ ಹೊಸತಲ್ಲ. ಕುರುಕುಲದ ಹಣತೆಗೆ ದ್ವೇಷದೆಣ್ಣೆಯ ಸುರಿದು ಕೈತವದ ಬತ್ತಿಯಿಟ್ಟು ಕಿಡಿಯಿಟ್ಟ ಕಿಡಿಗೇಡಿ ಶಕುನಿಯೇ ಮೊಟ್ಟಮೊದಲ ನರಪ್ರಣತಿ!
ಪ್ರಪಂಚದ ಮೊಟ್ಟಮೊದಲ ದೀಪಾವಳಿಯು ತ್ರಿವಿಕ್ರಮನ ಫಸ್ಟ್ ಹ್ಯಾಪಿ ಬರ್ತ್ ಡೇ ದಿನದಂದು ಆರಂಭವಾಯಿತು ಎನಿಸುತ್ತದೆ. ಬಲಿಯ ಮನೆಗೆ ಪ್ರವೇಶ ಮಾಡಿದವನು ವಾಮನ. ಅವನ ಡೇಟ್ ಆಫ್ ಬರ್ತ್ ಗೊತ್ತಿಲ್ಲ. ಆದರೆ ಬಲಿಯು “ಗಿಫ್ಟ್ ರಿಕ್ವೆಸ್ಟ್ ಪೆಟಿಷನ್ ಅಕ್ಸೆಪ್ಟೆಡ್” ಎಂದು ಡಿಕ್ಲೇರ್ ಮಾಡಿದಾಗಲೇ ತ್ರಿವಿಕ್ರಮ ಹುಟ್ಟಿದ್ದು. “ನೀನು ಅಧೋಲೋಕದಲ್ಲಿದ್ದರೂ ವರ್ಷಕ್ಕೊಮ್ಮೆ ಭೂಮಿಯಲ್ಲಿ ಅಡ್ಡಾಡು” ಎಂದು ಪರ್ಮಿಟ್ಟಿಸಿದ ದಿನದಿಂದ ಒಂದು ವರ್ಷಕ್ಕೆ ಮೊದಲ ಬಲಿಪಾಡ್ಯಮಿ. ತತ್ಕಾರಣ ಅದೇ ಮೊದಲ ದೀಪಾವಳಿ. ನನಗಂತೂ ಇದರಿಂದ ಇನಿತೂ ತೃಪ್ತಿಯಿಲ್ಲ. ಇದಕ್ಕೂ ಮೊದಲೇ ದೇವತೆಗಳು ನಿಶ್ಚಯಿಸಿಕೊಂಡು ಪಟಾಕಿ ಹಬ್ಬ ಮಾಡಿದ್ದಿದ್ದರೆ ಎಷ್ಟು ಸೊಗಸಾಗಿರುತ್ತಿತ್ತು. ಉದಾಹರಣೆಗೆ ಸಮುದ್ರಮಥನದ ಸಮಯದಲ್ಲಿ ಕಾರ್ಕೋಟಕವನ್ನು ಶಿವನು ಕುಡಿದಾಗ ಪ್ರಪಂಚವನ್ನು ಉಳಿಸಿದ ಖುಷಿಗೆ ಒಂದಷ್ಟು ಢಂಢಂ ಪಟಾಕಿ; ಅಮೃತವು ಉದ್ಭವಿಸಿದಾಗ ಮತ್ತೊಂದಷ್ಟು ಢಂಢಂ; ಅಮೃತವನ್ನು ರಕ್ಕಸನೊಬ್ಬನು ಕುಡಿದುಬಿಟ್ಟಾಗ ಅಸುರರ ಕಡೆಯಿಂದ ಒಂದಷ್ಟು ಢಂಢಂ; “ಓಹ್! ಅಸುರ ಅಮರನಾಗಿಬಿಡುತ್ತಾನಲ್ಲ!’’ ಎನ್ನುತ್ತಾ ತಲೆ ಕತ್ತರಿಸಿ ಒಂದು ಅಸುರನನ್ನು ರಾಹು ಕೇತುಗಳೆಂಬ ಒನ್ ಬೈ ಟೂ ಗ್ರಹಗಳನ್ನಾಗಿಸಿದಾಗ ಸುರರಿಂದ ಒಂದಷ್ಟು ಫ್ಲವರ್ ಪಾಟ್, ರಾಕೆಟ್ಟುಗಳು; ಲಕ್ಷ್ಮಿಯು ಸಮುದ್ರದಿಂದ ‘ಗೆಜ್ಜೆಕಾಲ್ಗಳ ದನಿಯ ತೋರುತ ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ’ ಬಂದಾಗ ಹೆಜ್ಜೆಗೊಂದು ಸರಪಟಾಕಿಯ ಸ್ವಾಗತ; ಕಾಮಧೇನು ಬಂದಾಗ ಅದು ಬೆದರದಂತೆ ದೂರದಿಂದಲೇ ಸುರುಸುರುಬತ್ತಿ, ಮತಾಪುಗಳ ಸ್ವಾಗತ. ವಾಹ್! ಸಮುದ್ರಮಥನ ಎಷ್ಟು ಕರ‍್ಫುಲ್ ಆಗಿರಬಹುದಿತ್ತು!
ಮಾನವನ ದೇಹವಿದು ಪಂಚಭೂತದ ಷಂಡ
ತಾನೆ ಜಗದುದ್ಧರಕ ಎಂಬುದೀ ಪಿಂಡ
ತನ್ನಲಿಹ ದ್ರವದಾತ್ಮ ಸಾಗೆ ಬರಿ ಕರಿ ಹತ್ತಿ
ಮಾನುಷನುಮಂತೆಯೆ ಮುಗಿಯಲುಸುರಿನ ಬತ್ತಿ {ಷಂಡ: ಗುಂಪು}
ಎಂದು ಹಣತೆಗೆ ಮನುಜನನ್ನು ಹೋಲಿಸುವವರುಂಟು. ಅದೆಲ್ಲವೂ ಅಧ್ಯಾತ್ಮಕ್ಕೆ ಸರಿ. ಲೌಕಿಕಕ್ಕೆ?
ಶೃಂಗಾರವಲ್ಲರಿಯೆ ಲತೆಯೊಡನೆ ಬಳುಕಿ ನೀಂ
ನೃತ್ಯಲಾಸ್ಯದಿನಾರನೊಲಿಸುತಿರುವೆ?
ಮಾಧುರ್ಯಮಂಜೂಷೆ ಮಧುರತರಮೌನದಿಂ-
ದಾರ ಚರಿತೆಗಳ ಶುಕಿಗುಸಿರುತಿರುವೆ?
ಮುಗ್ಧಮೋಹನವದನೆ ಮುಕುದರದೊಳ್ ನೋಡಿ ನೀ-
ನಾರ ನೆನೆದಿಂತು ನಸುನಗುತಲಿರುವೆ?
ಎನ್ನುತ್ತಾ ಡಿವಿಜಿಯವರು ‘ಬೇಲೂರು ಶಿಲಾಬಾಲಿಕೆಯರು’ ಪದ್ಯದಲ್ಲಿ ಹೆಣ್ಣನ್ನು ವರ್ಣಿಸಿದ್ದಾರೆ. ಶಿಲಾಬಾಲೆಯರ ಕಾಲಕ್ಕೂ, ಡಿವಿಜಿಯ ಕಾಲಕ್ಕೂ ಹೊಂದುವ ಪದ್ಯವು ಇಂದಿಗೂ ಪ್ರಸ್ತುತವೇ ಎಂದನೊಬ್ಬ ಆಧುನಿಕ ಕವಿ. ‘ಶೃಂಗಾರವಲ್ಲರಿಯೆ’ ಎನ್ನುವುದು ಈಗ ‘ಶೃಂಗಾರವಲ್ಲ; ಅದನ್ನು ನೀನರಿಯೆ’ (ಆದ್ದರಿಂದಲೇ ಬ್ಯೂಟಿ ಪಾರ್ಲರೊಡತಿಯ ಕೈಗೊಂಬೆಯಾಗುವೆ) ಎಂಬ ಅರ್ಥವನ್ನು ಕೊಡುತ್ತದೆ ಎಂದು ಕುಕವಿಯು ‘ನಾರನೊಲಿಸುತಲಿರುವೆ’ ಎನ್ನುವುದರ ‘ಸ್ಕ್ರಾಲ್ ಕನ್ನಡ’ದ ರೂಪವು ‘ನಾರನ್ನು ಹೊಲಿಸುತಲಿರುವೆ’ ಎಂದೂ, ‘ನಾರ ನೆನೆದಿಂತು ನಸುನಗುತಲಿರುವೆ’ ಎಂದರೆ ನಾರಿನಂತಹದ್ದನ್ನು ತೊಡುವ ಕ್ಷಣಗಳನ್ನು ಕಲ್ಪನೆ ಮಾಡಿಕೊಳ್ಳುತ್ತಾ ನಸುನಗುತ್ತಿರುವಳು’ ಎಂದೂ ಅರ್ಥೈಸುತ್ತಾ ‘ನಾರೆಂದರೆ ಜೂಲುಜೂಲಾದ ಟೋರ್ನ್ ಜೀನ್ಸ್; ನಾರೆಲ್ಲವೂ ಡ್ರೆöÊ ಆದ್ದರಿಂದಲೂ, ಓಲ್ಡ್ ಆದ್ದರಿಂದಲೂ ಒರಿಜಿನಲ್ ಕಲರ್ ಈಸ್ ಫೇಡೆಡ್ಡೂ’ ಎಂದೂ ಅರ್ಥೈಸಿದ್ದಾನೆ. ಅಷ್ಟೇ ಅಲ್ಲದೆ ಇಂತಹ ಜೂಲುಜೂಲಾದ ಬಟ್ಟೆಯಲ್ಲಿ ಹೀರೋಯಿನ್ನನ್ನು ತುರುಕಿ ನೆನೆಸುವ ಚಾಳಿಯಿರುವ ಸಿನೆಮಾ ನಿರ್ದೇಶಕರನ್ನೂ, ಉದಾಹರಣೆಗೆ ರಾಜ್‌ಕಪೂರನನ್ನೂ, ‘ನಾರ ನೆನೆದಿಂತು ನಸುನಗುತಲಿರುವೆ’ ಪದಪುಂಜವು ಸೂಚಿಸುವುದಂತೆ! ಡಿವಿಜಿಯವರು ಇವನು ಉದಯಿಸುವುದಕ್ಕೆ ಮುಂಚೆ ಅಸ್ತಮಾನವಾಗಿ ಬದುಕಿಕೊಂಡರು!
ಪುರಾಣಗಳು ನಮಗೆ ವಿವಿಧ ರೀತಿಯ ದೀಪಾವಳಿಗಳನ್ನು ಸಾಂಕೇತಿಕವಾಗಿ ಸೂಚಿಸಿವೆ. ಮೋಹಿನಿ-ಭಸ್ಮಾಸುರನ ಕಥೆಯನ್ನೇ ಅವಲೋಕಿಸೋಣ. ಅಸುರನ ತಲೆಯ ಮೇಲೆ ಕೈಯಿಡಲೇಬೇಕೆಂದು ತೀರ್ಮಾನಿಸಿದ ಮೋಹಿನಿಯನ್ನು ಈಗಿನ ಪಟಾಕಿಗಳ ಹೆಸರನ್ನು ಬಳಸಿ ವರ್ಣಿಸಿದರೆ
ಸುರುಸುರುಬತ್ತಿಯ ಹೊಳೆಕಂಗಳೊಳು
ಸರಸರ ಸರಿಯುವ ಭೂಚಕ್ರದೊಲು
ಹೊರಳಿಸಿ ರ‍್ರನೆ ನಗೆಹೂಕುಂಡವ
ಕೆರಳಿಸಿ ರಕ್ಕಸ ಮನದೊಳು ಕಿಡಿಯ
ಸುರೆಯು ನಲಿದಿಹಳು ನೋಡಿದಿರಾ |
ಮುಗಿಯದ ಯೌವನ ತೈಲವು ಉಂಟು
ಮುಗಿಸುವ ಬತ್ತಿಯು ಮನದೊಳಗುಂಟು
ಮುಗಿತಾಯದ ಕಿಡಿ ಸರಸರನೇರಿರೆ
ಮುಗಿದಿರೆ ರಕ್ಕಸಪ್ರಣತಿಯ ಆಯುಷ
ಸುರೆಯು ನಲಿದಿಹಳು ನೋಡಿದಿರಾ |
ಎಂಬ ಕವನವು ಮೂಡಬಹುದಿತ್ತೇನೋ! ಇಲ್ಲಿ ಸುರೆ ಎಂದರೆ ಸುರಳೂ ಹೌದು, ರಕ್ಕಸನಿಗೆ ನಶೆಯೇರಿಸುವ ಸುರೆಯಂತಹವಳೆಂದೂ ಹೌದು. ವರಕವಿಗಳನ್ನು ವಿನಂತಿಸಿಕೊಂಡಿದ್ದರೆ ಇದರ ಅಪ್ಪನಂತಹ ಕವನವು ಹೊಮ್ಮುತ್ತಿತ್ತೆಂಬುದು ನಿಃಸಂಶಯ.
ಮೋಹಿನಿಯನ್ನೇನೋ ಹೀಗೆ ವರ್ಣಿಸಬಹುದು. ಆದರೆ ಭಸ್ಮಾಸುರನನ್ನು?
ಬ್ಯೂಟಿಯ ಡ್ಯಾನ್ಸಿಗೆ ತಿರುಗಿರೆ ಹೆಡ್ಡು
ಕ್ಯೂಟಿಯ ಟಾಕನೆ ಕೇಳುತ ದಡ್ಡು
ಹಾಟಿಯು ಸ್ಪರ್ಶಿಸೆ ತನ್ನಯ ಹೆಡ್ಡು
ಮುಟ್ಟುತ ತಾನೂ ತನ್ನಯ ಹೆಡ್ಡು
ರಕ್ಕಸ burnಇಸಿ ಡ್ರಾಪ್ಡ್ ಡೆಡ್ಡು
ಎಂದು ಆಧುನಿಕ ಕಂಗ್ಲೀಷನು ವರ್ಣಿಸಿಯಾನು. ಮೋಹಿನಿಯಲ್ಲಿ ವಿಷ್ಣುಚಕ್ರ, ಭೂಚಕ್ರಗಳ ಚಂಚಲಹೊನಲು, ಕಂಗಳಲ್ಲಿ ಕಿಡಿಗಳೂ, ಭಸ್ಮಾಸುರನು ಚಿಟಚಿಟನೆ ಉರಿದುಬಿದ್ದು ಬ್ರಹ್ರರಂಧ್ರವು ಢಮ್ಮೆಂದಾಗ ಢಂ ಪಟಾಕಿಗಳ ಸದ್ದೂ ಮೂಡಿದ್ದರಿಂದ ಮೋಹಿನಿ-ಭಸ್ಮಾಸುರ ಪ್ರಸಂಗವು ಪರ್ಫೆಕ್ಟ್ ದೀಪಾವಳಿಯೆಂದು ಪರಿಗಣಿಸಲು ಅರ್ಹವಾಗಿದೆ.
ದೀಪಾವಳಿಯೆಂದರೆ ಸದ್ದುಬೆಳಕಿನ ಹಬ್ಬ. ಇದಕ್ಕೆ ಮತ್ತೊಂದು ಉದಾಹರಣೆಯಾಗಿ ರನ್ನನ ಗದಾಯುದ್ಧವವು ಒದಗಿಬರುತ್ತದೆ. ಬೆಳಗಿನ ಢಂ ಪಟಾಕಿಗಳ ಸದ್ದನ್ನು
ಧಪ್ಪರಿ ಧಟ್ಟುಂ ಪೊಟ್ಟೆನೆ
ಧೊಪ್ಪಧೊಗಪ್ಪೆನೆ ದಿಧಿಲ್ ಬುಧಿಲ್ ಎನೆ ಮೆಯ್ಗಳ್
ಸೊಪ್ಪುಸೊವಡಪ್ಪಿನಂ ಸೂಳ್
ತಪ್ಪದೆ ಕಡುಕೆಯ್ದು ಪೊಯ್ದರ್ ಓರ್ವನೋರ್ವರ್
ಎಂದು ಭೀಮದುರ್ಯೋಧನರು ಗದೆಗಳಿಂದ ಹುಟ್ಟಿಸಿದ ಸದ್ದಿಗೆ ಈ ರೀತಿ ಹೋಲಿಸಬಹುದು:
ಢಮ್ಮುಢಢಮ್ಮನೆ ಸುಟ್ಟೊಡೆ
ದಪ್ಪದಧೂಮವೆ ಮುಗಿಲ್ ಮಿಗಿಲ್ ಎನೆ ಮೆಯ್ಗಳ್
ಪುಪ್ಪಸವುಬ್ಬಸ ಸೂಸಲ್
ತಪ್ಪದೆ ಕೆಡುಗೆಯ್ದುಬಿಟ್ಟರ್ ಪ್ರಕೃತಿಯನೆಲ್ಲರ್
ಸದ್ದು ಮತ್ತು ಮಾಧುರ್ಯದ ನಡುವಿನ ಅಂತರವು ಡೆಸಿಬಲ್ ಲೆಕ್ಕದಿಂದ ತೀರ್ಮಾನವಾಗುವುದಲ್ಲ, ಅಭಿರುಚಿಯ ಆಧಾರದ ಮೇಲೆ ತೀರ್ಮಾನವಾಗುವುದೆಂಬ ವಾದವಿದೆ. ನಮ್ಮ ಮಗುವು ಅತ್ತಾಗ ಅದು ‘ಕಿಟ್ಟನುಲಿಸುವ ಕೊಳಲ ನಾದ’; ಪಕ್ಕದ ಮನೆಯ ಮಗು ಅತ್ತರೆ ‘ಚಿಟ್ಟೆಂಬ ಚೀತ್ಕರವು ರಕ್ಕಸಾಕ್ರಂದ’. ನಾವೇ ಭಾಗವಹಿಸುವ ಗಾನಸಭೆಯಲ್ಲಿ ಗಿಟಾರ್ ಕಿಟಾರ್ ಎಂದರೂ, ಮೃದಂಗವು ದಂಗಾಗಿಸುವಂತೆ ಘಟ್ಟಿಸಿದರೂ, ತಮಟೆಗಳಿಂದ ಕಿವಿತಮಟೆಯು ಗದಗುಟ್ಟಿದರೂ ನಮ್ಮ ಅಭಿಪ್ರಾಯದಲ್ಲಿ ಮಾಧುರ್ಯವದೆ! ನಾವಿಲ್ಲದ ಸಭೆಯಾದರೆ ಗದ್ದಲ, ಗಲಾಟೆ, ಕರ್ಣಕಠೋರ, ಮಾಧುರ್ಯವಧೆ! ನಾವು ಹೊತ್ತಿಸಿದ ಪಟಾಕಿಗಳೆಲ್ಲವೂ ಢಂ ಎಂದರೆ ನಮಗಿಂತ ಸಂತೋಷಿಸುವವರಿಲ್ಲ ನಿಜ. ಎದುರುಮನೆಯವನ ಒಂದಿಷ್ಟು ಪಟಾಕಿಗಳು ಠುಸ್ ಎಂದರೆ ನಮ್ಮ ಪಟಾಕಿಗಳ ಢಂಗಿಂತ ಹೆಚ್ಚು ಸಂತೋಷ! ನಾವು ಹಚ್ಚಿದ ಹೊಸ ಬಗೆಯ ಪಟಾಕಿಯೊಂದು ಚಿಮ್ಮಿ ಗಗನ ತಲುಪಿ ಐವತ್ತೋ, ನೂರೋ ಬಾಗಿ ಢಂಢಮಿಸಿಬಿಟ್ಟರೆ ದ್ರೌಪದಿಯ ಸ್ವಯಂವರದಲ್ಲಿ ಕುಳಿತಿದ್ದ ವರಸಂಕುಲವು
ಮಡಿಸಿದೆಲೆ ಬೆರಳೊಳಗೆ ಬಾಯೊಳ
ಗಡಿಸಿದೆಲೆ ಬಾಯೊಳಗೆ ಸಚಿವರ
ನುಡಿಯ ಕೇಳರು ಸುಳಿಯ ಕಾಣರು ಲೋಚನಾಗ್ರದಲಿ
ಎಂಬ ಸ್ಥಿತಿಯನ್ನು ತಲುಪಿದ್ದ ರೀತಿಯಲ್ಲಿಯೇ ಉಡೀಸ್ ಆದ ಡಿಚಿತಿ-ಕೆಟ್ಟಿನ ಸೌಂದರ್ಯೋಪಾಸನೆಯಲ್ಲಿ ತೊಡಗಿಬಿಡುತ್ತಾರೆ. ಡಿಟೋ ಗಗನಢಂಢಮಿಯನ್ನು ಅನ್ಯರು ಹಚ್ಚಿದರೆ “ಟೋಟಲ್ ವೇಸ್ಟ್ ಆಫ್ ಮನಿ! ಅವನೊಬ್ಬ ಪಲ್ಯೂಶನಿ!’ ಎಂಬ ಟೀಕೆ.
ಆಂಗ್ಲಕವಿಯೊಬ್ಬನು ಚೆಲುವೆಯೊಬ್ಬಳನ್ನು ವರ್ಣಿಸುತ್ತಾ ‘ತಾರೆಗಳು ಕಂಗಳಲಿ, ಚೈತ್ರವೇ ನಡಿಗೆಯಲಿ’ (Stars in her eyes and spring in her steps) ಎಂದಿದ್ದಾನೆ. ನನಗಂತೂ ಇದು ದೀಪಾವಳಿಯ ರಾತ್ರಿ ರಾಕೆಟ್ ಬಿಡುವವರನ್ನೇ ವರ್ಣಿಸಿದಂತಿದೆ. ಬಿಟ್ಟ ರಾಕೆಟ್ ಮೇಲೇರಿ ಅಗ್ನಿಪುಷ್ಪವೃಷ್ಟಿಗರೆದರೆ ರಾಕೆಟ್ ಬಿಟ್ಟವನ ಕಣ್ಣಲ್ಲಿ ನಕ್ಷತ್ರಗಳು; ರಾಕೆಟ್ ಮೇಲೇರುವ ಬದಲು ಆಟೋರಿಕ್ಷಾ ಡ್ರೈವರನೂ ಬೆಚ್ಚಿಬೀಳುವಂತಹ ಪಥದಲ್ಲಿ ಚಲಿಸಿದರೆ ಅವನು ‘ಸ್ಪ್ರಿಂಗ್ ಇನ್ ಹಿಸ್ ಸ್ಟೆಪ್ಸ್’ ಹೊಂದಿರದಿದ್ದರೆ ಅನಾಹುತಕ್ಕೆ ಆಹ್ವಾನವಿತ್ತಂತೆ. ಆ ಕಾರಣದಿಂದಲೇ ರಾಕೆಟ್ ಬಿಡುವವನು
ಮೇಲೆ ಹೋಗೆಲೈ ರಾಕೆಟ್ಟೆ
ಕೆಳಗೆ ಸಂಚರಿಸೆ ನಾ ಕೆಟ್ಟೆ
ಎಂದು ಪ್ರಾರ್ಥಿಸುತ್ತಲೇ ಕಿಡಿಯಿರಿಸುವುದಂತೆ. ಹೋದ ವರ್ಷ ನಾನು ಕಿಡಿಯಿಟ್ಟ ಎರಡು ಬಾಂಬ್ ರಾಕೆಟ್ಟುಗಳ ಪಥವನ್ನು ಬ್ರಹ್ಮನೂ ನಿರ್ಧರಿಸಿರಲು ಸಾಧ್ಯವಾಗಿರಲಾರದು. ಮೊದಲ ರಾಕೆಟ್ ಬಾಟಲಿನಲ್ಲೇ ಸಾಕಷ್ಟು ‘ಬಾಲಕಿಡಿ’ಯನ್ನುದುರಿಸಿ, ಉದುರಿದ ಬತ್ತಿಯ ಪರಿಣಾಮವಾಗಿ ಇಂದಿನವರು ಮೋಟರ್ ಬೈಕ್ ಓಡಿಸುತ್ತಾ ಮೊಬೈಲ್‌ನಲ್ಲಿ ಮಾತನಾಡುವಾಗಿನ ತಲೆಯ ಕೋನಕ್ಕೆ ತಿರುಗಿ, ಎದುರುಮನೆಯ ಬಾಯಿಬಾಯಿಯ (ಆಕೆಯ ಹೆಸರು ಅದೆಂತದೋ ಬಾಯಿ. ಅವಳದು ಬ್ರಹ್ಮಾಂಡ ಬಾಯಾದ್ದರಿಂದ ನಮ್ಮೆಲ್ಲರಿಗಾಕೆ ಬಾಯಿಬಾಯಿ) ಕೊಠಡಿಯ ಕಿಟಕಿಯೊಂದರ ಒಳಹೊಕ್ಕು ಅಡುಗೆಮನೆಯ ಕಿಟಕಿಯ ಬಳಿ ಮಿಕ್ಕೆಲ್ಲ ಕಿಡಿಯನ್ನುದುರಿಸಿ ಮೂಲೆಯಲ್ಲಿರಿಸಿದ್ದ ಅರೆ ಡಜನ್ ಪಿಂಗಾಣಿ ಲೋಟಗಳ ಬಳಿ ಢಂ ಎಂದಿತು. ಪಿಂಗಾಣಿಯ ಠಳ್ ಠಳ್ ಸದ್ದಿನ ಮೊಳಗು ಮುಗಿಯುವ ಮುನ್ನವೇ ನಗಾರಿ ನೌಬತ್ತುಗಳು ಮೊಳಗಿದವು; ದಿಢೀರ್ ಕುರುಕ್ಷೇತ್ರವು ಸಜ್ಜಾಯಿತು. ನಾನು ‘ಅರ್ಜುನ ವಿಷಾದಯೋಗ’ದ ಶ್ಲೋಕಕ್ಕಿಳಿದೆ. ಬಾಯಿಬಾಯಿ ದ್ರೌಪದಿಯಂತೆ ಬಿರಿಗೂದಲಾದಳು. ಮಡದಿಯು ಮೊನ್ನೆಯಷ್ಟೇ ಫ್ಲಿಪ್ ಕಾರ್ಟ್ ಸೇಲ್‌ನಲ್ಲಿ ತರಿಸಿದ್ದ ಡಜನ್ ಪಿಂಗಾಣಿ ಬಟ್ಟಲುಗಳನ್ನು ಬಾಯಿಬಾಯಿಯ ಕಿಚನ್‌ಗೆ ಫ್ಲಿಪ್ ಮಾಡುವುದರ ಮೂಲಕ ಸಂಧಾನ ನಡೆಸಿದಳು.
ಎರಡನೆಯ ರಾಕೆಟ್ಟು ನಭೋಮಂಡಲವನ್ನು ತಲುಪಿತು. ಆದರೆ ರಿಟರ್ನ್ ಜರ್ನಿಯನ್ನು ಆರಂಭಿಸಿದ ರಾಕೆಟ್ಟವಶಿಷ್ಟವು ಹಬ್ಬಕ್ಕೆಂದು ಟೆರೇಸಿನಲ್ಲಿ ಸೇರಿ ಊಟಕ್ಕಿಳಿದಿದ್ದವರ ಪಾಯಸದ ಪಾತ್ರೆಯನ್ನೇ ತನ್ನ ಡೆಸ್ಟಿನೇಷನ್ ಆಗಿಸಿಕೊಂಡಿತು. ಕಂಠಮಾತ್ರೇಣ ಬಾಯಿಬಾಯಿಯ ಹತ್ತಿರದ ಬಂಧುಗಳಂತಿದ್ದ ಆ ತಂಡದ ಹಿಡಿಶಾಪಕ್ಕೆ ನಮ್ಮಲ್ಲಿ ಪ್ರತ್ಯಸ್ತ್ರವಿರಲಿಲ್ಲ. ಅದೇ ಸಮಯಕ್ಕೆ ಹರಕ್‌ಚಂದ್ ಮುನ್ನಾಬಾಯಿಯ ಅಂಗಡಿಯ ಮುಂದೆ ಸರಪಟಾಕಿಯ ಢಮಢಮ ಶುರುವಾಗಿ ಸುಮಾರು ಇಪ್ಪತ್ತು ನಿಮಿಷ ಕಳೆದುದರಿಂದ ಪಾಯಸವಂಚಿತರ ಪಾಯ್ಸನಸ್ ಬೈಗುಳಗಳ ತೀವ್ರತೆ ತಗ್ಗಿ, ಹರಕ್‌ಚಂದ್‌ನ ತಮ್ಮ ಮುರುಕ್‌ಮಲ್ ಹೊತ್ತಿಸಿದ ಸರಪಟಾಕಿ ಖತಂ ಆಗುವಷ್ಟರಲ್ಲಿ ಖೀರ್ ಕಥಾ ಕಥಂ ಆಗಿತ್ತು.
ಎಲ್ಲ ದೀಪಾವಳಿಗಳಿಗಿಂತ ಸೊಗಸಾದ ದೀಪಾವಳಿಯೆಂದರೆ ಪಡ್ಡೆ ದೀಪಾವಳಿ. ಕಾಲೇಜಿನ ಚೆಲುವೆ ಅತ್ತಣಿಂದ ನಡೆಯುತ್ತಾ ಪಡ್ಡೆಹುಡುಗರ ಬಳಿ ಸಾರುತ್ತಿದ್ದರೆ ಅವರ ಹೃದಯಗಳು ಶಕ್ತ್ಯಾನುಸಾರವಾಗಿ ಕುದುರೆ ಪಟಾಕಿ, ಆನೆಪಟಾಕಿ, ರ‍್ಗನ್‌ಗಳಂತೆ ಹೊಡೆದುಕೊಳ್ಳುತ್ತವೆ. ಅವಳು ನಗುತ್ತಾ ಕಟಾಕ್ಷವನ್ನು ಬೀರಿದರೆ ಸರಪಟಾಕಿಯ ಡಮಡಮ; ಅವಳು ‘ಹಲೋ’ ಎಂದರೆ ಮನದ ಕಲ್ಪನೆಯು ರಾಕೆಟ್ಟಿಗಿಂತ ಮೇಲೆ; ‘ಹೋಗೋಲೋ’ ಎಂದರೆ ಮಳೆಯಲ್ಲಿ ನೆನೆದ ಠುಸ್ ಪಟಾಕಿಯ ಸ್ಥಿತಿ.
ಬದುಕೊಂದು ದೀವಳಿಗೆ; ಸುವಾಕ್ಯವೇ ಮದ್ದು; ಸನ್ನಡತೆಯೇ ಮದ್ದಿನ ಸುತ್ತಲಿನ ಕವಚ; ಹಬ್ಬಗಳೇ ಕಿಡಿಗಳು; ಜೀವನೋತ್ಸಾಹವೇ ಬತ್ತಿ. ನಮ್ಮಲ್ಲಿ ನಿಮ್ಮಲ್ಲಿ ಎಂದೆಂದೂ ಬತ್ತದಿರಲಿ ಆ ಬತ್ತಿ.