“ಈಗ ಖಿಲಾವೋ ಫಟಾಫಟ್ ಎಂದಾಗಿದೆ. ಚುನಾವಣೆಯ ಘೋಷಣೆ ಆಗುತ್ತಿದ್ದಂತೆಯೆ ‘ಮತದಾರ್ ಕೋ ಖಿಲಾವೋ’; ಚುನಾವಣೆ ಮುಗಿಯುತ್ತಿದ್ದಂತೆಯೇ “ಕೋಯಲಿಷನ್ ಪಾರ್ಟ್ನರ್ ಕೋ ಖಿಲಾವೋ.’ ಹಗರಣಗಳು ತಲೆಯೆತ್ತುತ್ತಿದ್ದಂತೆಯೆ ‘ಕಾನೂನ್ ಮಾರ್ನೇವಾಲೇ ಕೋ ಖಿಲಾವೋ”. ಎಲ್ಲವೂ ಫಟಾಫಟ್ ಆಗುವ ಚಳವಳಿಗಳೇ.’’
ಹೋಟೋಂಪೆ ಸಚ್ಚಾಯೀ ರೆಹತೀ ಹೈ ಜಹಾ ದಿಲ್ ಮೇ ಸಫಾಯೀ ರೆಹತೀ ಹೈ…’’ ಎಫ್ಎಂ ರೇಡಿಯೋದಿಂದ ಹಾಡು ಪ್ರಸಾರವಾಗುತ್ತಿತ್ತು.
“ಕೊಂಚ ವ್ಯತ್ಯಾಸವಷ್ಟೆ” ಎಂಬ ಮಾತು ಕೇಳಿ, ಧ್ವನಿ ಬಂದತ್ತ ತಿರುಗಿದೆ. ಅದೇ ಬೊಚ್ಚುನಗೆಯ, ಅದೇ ಕನ್ನಡಕದ ಗಾಂಧಿ ನಿಂತಿದ್ದರು.
“ಬಾಪೂಜೀ! ಆಪ್!’’ ಉದ್ಗರಿಸಿದೆ.
“ಆಪ್ ಅನ್ನಬೇಡ. ಅದೊಂದು ಪಕ್ಷದ ಹೆಸರು – ಎಎಪಿ.’’ ತುಂಟನಗೆಯನ್ನು ಕಣ್ಣಲ್ಲಿ ತುಳುಕಿಸಿದರು ಗಾಂಧಿ.
“ಬಾಪೂಜಿ ಎನ್ನಲು ಅಡ್ಡಿಯಿಲ್ಲವಲ್ಲ” ಎಂದೆ.
“ಈ ಪದದ ಮಧ್ಯದ ಅಕ್ಷರವು ಮಾಯವಾಗಿ ಎಲ್ಲೆಲ್ಲೂ ಸಟ್ಟಾ ಬಜಾರ್, ಕ್ರಿಕೆಟ್ ಬೆಟ್ಟಿಂಗ್, ರೇಸ್ ಮೊದಲಾದ ಬಾಜಿಗಳೇ ಹೆಚ್ಚಾಗಿವೆ.’’ ಮೊಗದಲ್ಲಿ ಸಿಹಿನಗೆಯಿದ್ದರೂ ದನಿಯಲ್ಲಿ ಖಾರವಿತ್ತು.
ಮಧ್ಯದ ಅಕ್ಷರವು ಹೊರಬಂದು, ರೀ ಅಕ್ಷರವನ್ನು ಸೇರಿಸಿಕೊಂಡು, ಪೂರೀ ಬಾಜಿ ಆಗಿ, ಎಲ್ಲೆಲ್ಲೂ ಣoಣಚಿಟ beಣಣiಟಿg ನಡೆಯುತ್ತಿದೆ ಎನ್ನಲು ನನಗೆ ಮನಸ್ಸಾಗಲಿಲ್ಲ.
“ಹಾಡಿನ ಬಗ್ಗೆ ಏನೋ ಹೇಳುತ್ತಿದ್ದಿರಿ” ಮಾತನ್ನು ಹಳಿಗೆಳೆದೆ.
“ಆಗ ಹೋಟೋಂಪೆ ಸಚ್ಚಾಯೀ ರೆಹತೀ ಹೈ. ಈಗ ಫೋಟೋ ಪೇ ಸಚ್ಚಾಯೀ ರೆಹತೀ ಹೈ. ಎಲ್ಲೆಲ್ಲಿ ನೋಡಿದರೂ ಸತ್ಯಮೇವ ಜಯತೇ ಎಂಬ ಫೋಟೋಗಳು!’’
“ತಪ್ಪೇನು ಬಾಪೂಜಿ?’’
“ಉಂಟೇ! ಸತ್ಯ ಈಗ ಜಯಿಸುವುದು ಫೋಟೋದಲ್ಲಷ್ಟೇ. ಕೊರೋನಾ ಸಮಯದಲ್ಲಿ ಅದು ‘ಸತ್ ಯಮ ಏವ ಜಯತೇ’ ಎಂದು ಸಾಬೀತಾಯಿತಲ್ಲ. ಆಗ ಗೆದ್ದದ್ದು ಯಮ ಮತ್ತು ಅವನ ದೊಡ್ಡ ಸಹೋದರರಾದ ಕೆಲವು ಢಾಕೂಟರುಗಳು.’’
“ಢಾಕೂಟರು?’’
“ಮಾನವೀಯತೆಯನ್ನು ಮನೆಯಲ್ಲಿ ಬಿಟ್ಟು ಬಂದು ಪ್ರಾಣವಾಯುವಿನ ಹರಾಜು ವ್ಯಾಪಾರ ನಡೆಸಿದವರು ಡಾಕ್ಟರ್ ರೂಪದಲ್ಲಿದ್ದ ಢಾಕೂಗಳೇ” ಎಂದರು ಗಾಂಧಿ.
“ಕೊರೊನಾ ಕಾಲ ಮುಗಿಯಿತಲ್ಲ; ಈಗ ಸತ್ಯಮೇವ…’’
“ಹ್ಹ! ಈಗ ‘ಸತ್ಯ; ಮೇವ ಜಯಿಸುವ’ ಎನ್ನುವುದೇ ಚಾಲ್ತಿಯಲ್ಲಿರುವುದು. ಯಾರು ಮೇಯುವನೋ ಅವನೇ ಜಯಿಸುವವನು” ಹಳೆಯ ನುಡಿಕಟ್ಟಿಗೆ ಹೊಸ ವ್ಯಾಖ್ಯಾನವಿತ್ತರು ಗಾಂಧಿ.
“ನಿಮ್ಮ ಛಲದಿಂದ ಬ್ರಿಟಿಷರನ್ನು ಹೊರಗಟ್ಟಿದಿರಿ” ಎಂದು ಮಾತಿಗಾರಂಭಿಸಿದೆ.
“ನನಗೆ ಅದು ನನ್ನಿಂದಲೇ ಆದುದೋ ಅಥವಾ ಅವರ ಭಾಷೆಯನ್ನು ನಾವು ಕೊಲೆ ಮಾಡುವ ರೀತಿ ಮತ್ತು ವೇಗವನ್ನು ಸಹಿಸಲಾರದೆ ಅವರೇ ಹೊರಟುಹೋದರೋ ಎಂಬ ಸಂದೇಹವಿದೆ’’ ಕಣ್ಣುಗಳು ಕೀಟಲೆಯ ಭಾವ ಸೂಸಿದವು.
“ನಿಮ್ಮಿಂದಲೇ ಸ್ವಾತಂತ್ರ್ಯ ಬಾಪೂಜಿ. ನೀವು ಆರಂಭಿಸಿದ Civil disobedience movement…’’
“ಈಗಲೂ ಚೆನ್ನಾಗಿ ನಡೆಯುತ್ತಿದೆಯಲ್ಲ!’’ ಗಹಗಹಿಸಿದರು ಗಾಂಧಿ.
“ಈಗಲೆ?’’
“ಹೂಂ. ‘ಪ್ರವೇಶವಿಲ್ಲ’ ಎಂದು ಫಲಕವಿರುವ ಜಾಗದಲ್ಲೆಲ್ಲ ಪ್ರವೇಶಿಸುತ್ತಾರೆ; ‘ಇಲ್ಲಿ ಉಗುಳಬೇಡಿ’ ಎಂಬ ಬೋರ್ಡಿನಲ್ಲಿ ಏನು ಬರೆದಿದೆ ಎಂದು ತಿಳಿಯದ ರೀತಿಯಲ್ಲಿ ಅದರ ಮೇಲೆ ಉಗಿಯುತ್ತಾರೆ. ಕೆಂಪು ಸಿಗ್ನಲ್ ಇರುವುದೇ ಜಂಪ್ ಮಾಡಲು ಎಂಬ ಧೋರಣೆ ತೋರುತ್ತಾರೆ. “ಮರ ಉಳಿಸಿ” ಎಂಬ ಫಲಕಗಳನ್ನು ಮರಗಳನ್ನು ಕತ್ತರಿಸಿಯೇ ತಯಾರಿಸುತ್ತಾರೆ. ನಾಗರಿಕರ ಅವಿಧೇಯತೆ ಚಳವಳಿಯು ಸಾಂಗವಾಗಿ ನೆರವೇರಿದೆ.’’
“ನಿಮ್ಮ ಖೇಡಾ ಸತ್ಯಾಗ್ರಹವಂತೂ…’’ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಘಟ್ಟಗಳಲ್ಲೊಂದನ್ನು ಉಲ್ಲೇಖಿಸಿದೆ.
“ಅದೂ ಕೊಂಚ ವ್ಯತ್ಯಾಸವಾಗಿ ಇಂದಿಗೂ ಇದೆ!’’ ನಗೆಲೇಪಿತ ಧ್ವನಿ ಹೊರಬಿತ್ತು.
“ಏನು ವ್ಯತ್ಯಾಸ?’’
“ಕೇಡಿ ಸತ್ಯಾಗ್ರಹ! ಸಚಿವರ, ರಾಜಕಾರಣಿಗಳ, ನಾಯಕರ ವೇಷ ತೊಟ್ಟ ಕೇಡಿಗಳು ‘ನಡೆಯಲಿ ನ್ಯಾಯಾಲಯದ ವಿಚಾರಣೆ’ ಎಂದಕೂಡಲೆ ಮಾರಾಟಕ್ಕಿರುವ ನ್ಯಾಯಹೀನ ಹಣಹಸಿವಿನ ಗುಂಪನ್ನು ಕೊಂಡು ಅವರಿಂದ ಸತ್ಯಾಗ್ರಹವನ್ನು ಮಾಡಿಸುತ್ತಾರೆ. ಇದೇ ಕೇಡಿ ಸತ್ಯಾಗ್ರಹ.’’
“ನಿಮ್ಮ ಖಿಲಾಫತ್ ಚಳವಳಿ…’’ ನನ್ನ ಯತ್ನವನ್ನು ಮುಂದುವರಿಸಿದೆ.
“ಈಗ ಅದು ಖಿಲಾವೋ ಫಟಾಫಟ್ ಎಂದಾಗಿದೆ. ಚುನಾವಣೆಯ ಘೋಷಣೆ ಆಗುತ್ತಿದ್ದಂತೆಯೆ ‘ಮತದಾರ್ ಕೋ ಖಿಲಾವೋ’; ಚುನಾವಣೆ ಮುಗಿಯುತ್ತಿದ್ದಂತೆಯೇ “ಕೋಯಲಿಷನ್ ಪಾರ್ಟ್ನರ್ ಕೋ ಖಿಲಾವೋ.’ ಹಗರಣಗಳು ತಲೆಯೆತ್ತುತ್ತಿದ್ದಂತೆಯೆ ‘ಕಾನೂನ್ ಮಾರ್ನೇವಾಲೇ ಕೋ ಖಿಲಾವೋ’. ಎಲ್ಲವೂ ಫಟಾಫಟ್ ಆಗುವ ಚಳವಳಿಗಳೇ.’’
“ಅವೆಲ್ಲ ಒತ್ತಟ್ಟಿಗಿರಲಿ. ೧೯೨೦ರ ಅಸಹಕಾರ ಚಳವಳಿಯಂತೂ…’’ ಎಂದೆ.
“೨೦೨೪ರಲ್ಲಿಯೂ ಮುಂದುವರಿದಿದೆ.’’ ನನ್ನ ಮಾತನ್ನು ಮುಂದುವರಿಸಿದರು ಗಾಂಧಿ, “ವಿಧಾನಸೌಧ ಮತ್ತು ಪಾರ್ಲಿಮೆಂಟಿನ ಸೆಷನ್ಗಳನ್ನು ನೋಡಿರುವೆಯೇನು? ಎಲ್ಲಿ ಭಾಷಣಕಾರನೊಬ್ಬನೇ ಮಾತನಾಡಿದುದನ್ನು ಮಿಕ್ಕವರೆಲ್ಲರೂ ಕೇಳಿಸಿಕೊಳ್ಳುವರೋ, ಅದನ್ನು ಸಭೆ ಎಂದು ಕರೆಯುತ್ತಾರೆ. ಎಲ್ಲಿ ಎಲ್ಲರೂ ಮಾತನಾಡಿ, ಯಾರೂ ಕೇಳಿಸಿಕೊಳ್ಳದೆ, ಸ್ಪೀಕರ್ಗೆ ಮಾತನಾಡುವ ಅವಕಾಶವೇ ಇರುವುದಿಲ್ಲವೋ, ಅದನ್ನು ವಿಧಾನಸೌಧ ಅಥವಾ ಪಾರ್ಲಿಮೆಂಟ್ ಎಂದು ಕರೆಯುತ್ತಾರೆ. ಸದನದಲ್ಲಿ ಅಸಹಕಾರ; ಮಂಡಿಸಿದ ಮಸೂದೆಗಳಿಗೆಲ್ಲ ಚರ್ಚೆ ಮಾಡದೆಯೆ ಅಸಹಕಾರ; ಪಕ್ಷಗಳ ಒಳಗೊಳಗೇ ಅಸಹಕಾರ; ಪತಿಸತಿಯರ ನಡುವೆ ಅಸಹಕಾರ… ಈ ಚಳವಳಿಯು ಅಂದಿಗಿಂತ ಇಂದಿಗೇ ಬಹಳ ಜೋರಾಗಿದೆ.’’
“ದೇಶವು ಅಂದಿಗಿಂತ ಇಂದು ವೈಜ್ಞಾನಿಕವಾಗಿ ಮುಂದುವರಿದಿದೆಯಲ್ಲ ಬಾಪೂ” ಎಂದೆ.
“ವಿಜ್ಞಾನದೊಡನೆ ಅಜ್ಞಾನವೂ ಹೆಚ್ಚಿನ ವೇಗದಲ್ಲಿ ಮುಂದುವರಿದಿದೆಯಲ್ಲ. ಚಂದ್ರಯಾನ ೨ರ ರಾಕೆಟ್ಟಿನ ಮುಂಭಾಗದಲ್ಲಿ ಏನು ಚಲಿಸುತ್ತಿತ್ತೆಂದು ನೋಡಿದೆಯೇನು?’’
ಖಂಡಿತ ನೋಡಿರಲಿಲ್ಲ.
“ನಮ್ಮ ಮೌಢ್ಯದ ಪಥ! ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಮೂರು ರಸ್ತೆಗಳು ಕೂಡುವ ಸ್ಥಳದಲ್ಲಿ ಮನೆ ಕಟ್ಟಿ ನೆಮ್ಮದಿಯಿಂದ ಇರುತ್ತಿದ್ದರು. ಈಗ ‘ಅದಿ ಕುತ್ತು. ಕಟ್ಟಿತೆ ಇಂಟಿ ಯಜಮಾನುಡು ಚಚ್ಚಿಪೋತಾಡು’ ಎಂದು ಯಾರೋ ತೆಲುಗರು ಹೇಳಿದರು, ಇವರು ಕೇಳಿದರು. ವಾಸ್ತುವಿಗೆ ಸಂಬಂಧಿಸಿದಂತೆಯೇ
ಮೂಡಲ ತುದಿಯ ಉತ್ತರದಂಚನು
ಬೆಳೆಸಯ್ಯಾ ಅಂದ… ಮುಂದಕೆ… ಬೆಳೆಸಯ್ಯಾ ಅಂದ
ವಸ್ತುವ ಮರೆತು ವಾಸ್ತುವ ಹಿಡಿದು
ಮನೆಕಟ್ಟಿ ನಿಂತ… ಮೂಢನು…ಮನೆ ಕಟ್ಟಿ ನಿಂತ.
ಜನಗಳ ಮೇಲೆ ಶಾಸ್ತçದ ಒಳಗೆ ಅನೃತದಾ ಬಿಂದು
ಹೊಮ್ಮಿತು ಅನೃತದಾ ಬಿಂದು…
ಜಾರಿಸುತಿಹರೋ ಏಮಾರಿಸುವರು ವಾಸ್ತುವಾ ತಂದು
ಪೂರಾ ವಾಸ್ತವ ಮರೆತು…
ಎಂದು ಅದಾರೋ ಬರೆದಿದ್ದಾರೆ. ಕಾಗಕ್ಕ ಗೂಬಕ್ಕನ ಕಥೆಗಳೆಲ್ಲವನ್ನೂ ನಂಬುವ ಜನ ಅಂದಿಗಿಂತ ಇಂದು ಹೆಚ್ಚು.’’ ಗಾಂಧಿಯ ನುಡಿಗಳ ಘಾಟಿನ ಮುಂದೆ ಬ್ಯಾಡಗಿಯ ಘಾಟು ಸೌಮ್ಯವೆನಿಸಿತ್ತು.
“ವಾಸ್ತು ಸುಳ್ಳು ಎನ್ನುವಿರೆ ಬಾಪೂ?’’
“ಜಗದಲ್ಲಿ ಇದಮಿತ್ಥಂ ಎಂಬುದಿಲ್ಲ. ಒಂದು ಕಡೆ ಸತ್ಯವೆನಿಸುವುದು ಇನ್ನೊಂದೆಡೆ ಸುಳ್ಳಾಗಬಹುದು. “ವೀರಪ್ಪನ್ ಕೊಲೆಗಾರ” ಎಂಬುದು ಜಗತ್ಸತ್ಯ. “ಅವರು ಒಳ್ಳೆಯವರು” ಎನ್ನುವುದು ಅವನಿಂದ ಹಣ ಪಡೆದು ರಕ್ಷಣೆ ನೀಡಿದವರು ಭ್ರಮಿಸಿದ ಸತ್ಯ. ಹಿಟ್ಲರ್ ಸಹ ಇವಾ ಬ್ರೌನಗಳಿಗೆ ನಲ್ಲನಂತೆ ಕಂಡ” ಎಂದರು ಗಾಂಧಿ.
“ನಿಮ್ಮ ಕಾಲಾನಂತರದ ವಿಷಯಗಳ ಬಗ್ಗೆಯೂ ಇಷ್ಟು ಖಚಿತವಾಗಿ ಹೇಗೆ ನುಡಿಯಬಲ್ಲಿರಿ?’’ ಮನದಾಳದಲ್ಲಿದ್ದ ಪ್ರಶ್ನೆಯನ್ನು ಮುಂದಿರಿಸಿದೆ.
“ನನ್ನನ್ನು ಎಲ್ಲೆಲ್ಲೂ ನಿಲ್ಲಿಸಿದ್ದೀರಲ್ಲ.’’
ನಿಜ. ಗಾಂಧಿಯವರ ಪ್ರತಿಮೆಗಳನ್ನು ಎಲ್ಲೆಲ್ಲೂ ನಿಲ್ಲಿಸಿದ್ದಾರೆ. ಏಕೆಂದರೆ ಅವರ ಆದರ್ಶಗಳನ್ನೂ ಎಲ್ಲೆಡೆಯೂ ನಿಲ್ಲಿಸಿದ್ದಾರೆ. ಇದನ್ನೇ ಬಾಪೂಜಿಗೆ ಹೇಳಿದೆ.
“ಆದರೂ ಇಂದಿನ ಯುವಪೀಳಿಗೆಯಲ್ಲಿ ನನ್ನಂತೆಯೇ ಕಡಮೆ ವಸ್ತ್ರ ಧರಿಸಿ ದೇಶಕ್ಕಾಗಿ ಉಳಿತಾಯ ಮಾಡುವ ದೊಡ್ಡ ಗುಣವಿದೆ. There is a method in their madness also. ಪ್ರಯಾಣಕ್ಕೆ ಸಂಬಂಧಿತವಾದ travel light ಎನ್ನುವುದನ್ನು ನಿಜಜೀವನಕ್ಕೂ ಅಳವಡಿಸಿಕೊಂಡು ‘ಜೀನ್ಸ್ ಭಾರ. ಅದನ್ನು ತೊಟ್ಟರೂ ಭಾರವಾಗಬಾರದು ಎನ್ನಬೇಕಾದರೆ ಒಂದಿಷ್ಟು ಸವೆಸಿ, ಒಂದಿಷ್ಟು ಹರಿಯಬೇಕು ಎಂದು ಕಂಡುಕೊಂಡು ಜಿಚಿಜeಜ ಚಿಟಿಜ ಣoಡಿಟಿ ರಿeಚಿಟಿs ಕಂಡುಕೊಂಡಿದ್ದಾರೆ.’’
ವಿಷಯ ಎತ್ತಲೋ ಸಾಗುತ್ತಿದೆಯೆನ್ನಿಸಿ “ಬಾಪೂಜಿ, ನಿಮ್ಮ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡುತ್ತಿದ್ದೆವು. ನೀವು ಸೈಮನ್ ಕಮಿಷನ್ ಬಗ್ಗೆ ‘ಸೈಮನ್ ಚಲೇಜಾವ್’ ಎಂದು ಕರೆ ನೀಡಿದ್ದು…’’
“ಅರ್ಧ ಕೆಲಸವಾಯಿತು. ಅಷ್ಟೇ ಸರಿಯೆನ್ನಿಸಿತು” ಎಂದು ಮತ್ತೆ ಗಹಗಹಿಸಿದರೆ ಗಾಂಧಿ.
“ಎಂದರೆ?’’
“ಸೈಮನ್ ಕಮಿಷನ್ ಬಾಬ್ತಿನಲ್ಲಿ ಸೈಮನ್ ಹೋದ. ಕಮಿಷನ್ ಉಳಿಯಿತು. ಅಂದು ಹತ್ತೋ ಹನ್ನೆರಡೋ ಪರ್ಸೆಂಟ್ ಇದ್ದದ್ದು ಈಗ ನಲವತ್ತಕ್ಕೆ ಫಿಕ್ಸ್ ಆಗಿದೆಯಂತಲ್ಲ! ಅದನ್ನು ಫ್ರೀಡಂ ಆಫ್ ಕರಪ್ಷನ್ ಎನ್ನಬಹುದೇನೋ!’’ ಎಂದರು ಗಾಂಧಿ.
“ದಂಡಿ ಮಾರ್ಚ್?’’
“ಈಗ ಅಂತಹ ಮಾರ್ಚ್ಗಳು ದಂಡಿಯಾಗಿವೆ. “ನಮ್ಮವನು ಕೊಂದರೂ ತಪ್ಪಿಲ್ಲ. ಬಿಟ್ಟುಬಿಡಿ’’ ಎಂದೊಂದು ಗುಂಪು, “ನಮ್ಮವನು ಅಂತಃಪುರ ಕಟ್ಟಿಕೊಂಡರೆ ನಿಮಗೇನು?’’ ಎಂದೊಂದು ಗುಂಪು, “ಕಲ್ಲು ಕರಗಿಸುವ ಸಮಯವಿದು; ಬಂಡೆಗಳನ್ನು ಉರುಳಲು ಬಿಡಿ” ಎಂದೊಂದು ಗುಂಪು… ಗುಂಪುಗಳು ಹಲವಾರು, ಮಾರ್ಚ್ಗಳು ನೂರಾರು” ಎಂದರು ಗಾಂಧಿ.
“ಆದರೂ… ಉಪ್ಪಿನ ಸತ್ಯಾಗ್ರಹ…’’ ಮೂಗೆಳೆದೆ.
“ಇಂದಿಗೆ ಪ್ರಸ್ತುತವಾದುದು ಮುಪ್ಪಿನ ಸತ್ಯಾಗ್ರಹ. “ವೃದ್ಧಾಶ್ರಮಕ್ಕೆ ತಳ್ಳಬೇಡಿ” ಎಂದು ಉಪವಾಸ, ಹರತಾಳಗಳನ್ನು ಮಾಡುವ ಮಂದಿಗೇನೂ ಕೊರತೆಯಿಲ್ಲವಲ್ಲ!’’
“ಎಲ್ಲಕ್ಕೂ ಏನೋ ಹೇಳುತ್ತೀರಿ ಬಾಪೂ! ಕ್ವಿಟ್ ಇಂಡಿಯಾ ಚಳವಳಿಯಂತೂ…’’
“ಇಂದಿಗೂ ನಡೆದಿದೆ. ದೇಶದ ಬುದ್ಧಿವಂತರೆಲ್ಲ ತಮ್ಮ ಜೀವನೋಪಾಯಕ್ಕಾಗಿ ಯಾರ ಪ್ರೇರಣೆಯೂ ಇಲ್ಲದೆಯೆ ದೇಶ ಬಿಟ್ಟು ತೊಲಗುತ್ತಿದ್ದಾರೆ!’’
ಏಕೋ ನಾನೆಂದುಕೊಂಡ ರೀತಿಯಲ್ಲಿ ಸಂಭಾಷಣೆ ಸಾಗುತ್ತಿಲ್ಲವೆನಿಸಿತು.
“ದೇಶದ ಜನತೆಗೆ ನಿಮ್ಮ ಸಂದೇಶವೇನು ಬಾಪೂ?’’ ಎಂದೆ.
“ಗರೀಬೀ ಹಟಾವೋ ಎಂಬ ಚಳವಳಿಯೊಂದಿತ್ತು. ಅದೇ ರೀತಿಯಲ್ಲಿ ಗಾಂಧಿಜೀ ಹಟಾವೋ ಎಂದು ಆರಂಭಿಸಿದರೆ ನನ್ನ ಉದ್ದೇಶಗಳು ಹೋದ ದಾರಿಗೇ ನಾನು ಹೊರಟುಬಿಡುತ್ತೇನೆ. ಅದಕ್ಕೊಂದು ಅವಕಾಶ ಮಾಡಿಕೊಡುವೆಯಾ?’’ ಅಂಜಲೀಬದ್ಧರಾಗಿ ನಿಂತರು ಬಾಪೂಜಿ.
ಅವರ ಅಸೆ ಸದ್ಯದಲ್ಲೇ ನೆರವೇರುವುದೆಂದು ಹೇಳಿಬಿಡಲೆ?