
ನನ್ನ ಮತ್ತು ದಶಾರ್ಣ ಭೂಪತಿಯ ಮಗಳ ವಿವಾಹವೇನೋ ಸಾಂಗವಾಗಿ ನಡೆಯಿತು. ಇಬ್ಬರೂ ಭರತಖಂಡದ ಸುಪ್ರಸಿದ್ಧ ಬಲಾಢ್ಯ ರಾಜರು. ಅವರ ಮಕ್ಕಳ ವಿವಾಹವೆಂದರೆ ಕೇಳಬೇಕೆ? ವೈಭವದ ಉತ್ತುಂಗವೇ ಅದು. ರಾಜಧಾನಿ ಜನಸಮ್ಮರ್ದದಿಂದ ತುಳುಕುತ್ತಿತ್ತು. ಎಲ್ಲೆಡೆಯೂ ಅಲಂಕಾರ, ಸಂಭ್ರಮ, ಸಡಗರ. ಪ್ರತಿಯೊಬ್ಬನೂ ಸಂತೋಷದ ಕಡಲಲ್ಲಿ ತೇಲುತ್ತಿದ್ದ ಹಾಗಿತ್ತು. ಎಲ್ಲರಿಗೂ ಹಿಗ್ಗು. ನಾನು ಮಾತ್ರ ಒಳಗೊಳಗೇ ಕುಗ್ಗಿಹೋಗುತ್ತಿದ್ದೆ. ನನ್ನ ನವವಧು ಪಾಣಿಸ್ಪರ್ಶ ಸಂದರ್ಭದಲ್ಲಿ ಪುಳಕಿತಳಾದುದು ನನ್ನ ಅರಿವಿಗೆ ಬಂದಿತ್ತು. ನನ್ನ ಮೈಯಲ್ಲೂ ನಡುಕವಿತ್ತು. ಅದು ಹೊಸ ಅನುಭವದ ರೋಮಾಂಚನದಿಂದಲ್ಲ; ಮುಂದೇನಾಗುವುದೋ ಎಂಬ […]