ನನ್ನ ಮತ್ತು ದಶಾರ್ಣ ಭೂಪತಿಯ ಮಗಳ ವಿವಾಹವೇನೋ ಸಾಂಗವಾಗಿ ನಡೆಯಿತು. ಇಬ್ಬರೂ ಭರತಖಂಡದ ಸುಪ್ರಸಿದ್ಧ ಬಲಾಢ್ಯ ರಾಜರು. ಅವರ ಮಕ್ಕಳ ವಿವಾಹವೆಂದರೆ ಕೇಳಬೇಕೆ? ವೈಭವದ ಉತ್ತುಂಗವೇ ಅದು. ರಾಜಧಾನಿ ಜನಸಮ್ಮರ್ದದಿಂದ ತುಳುಕುತ್ತಿತ್ತು. ಎಲ್ಲೆಡೆಯೂ ಅಲಂಕಾರ, ಸಂಭ್ರಮ, ಸಡಗರ. ಪ್ರತಿಯೊಬ್ಬನೂ ಸಂತೋಷದ ಕಡಲಲ್ಲಿ ತೇಲುತ್ತಿದ್ದ ಹಾಗಿತ್ತು. ಎಲ್ಲರಿಗೂ ಹಿಗ್ಗು. ನಾನು ಮಾತ್ರ ಒಳಗೊಳಗೇ ಕುಗ್ಗಿಹೋಗುತ್ತಿದ್ದೆ. ನನ್ನ ನವವಧು ಪಾಣಿಸ್ಪರ್ಶ ಸಂದರ್ಭದಲ್ಲಿ ಪುಳಕಿತಳಾದುದು ನನ್ನ ಅರಿವಿಗೆ ಬಂದಿತ್ತು. ನನ್ನ ಮೈಯಲ್ಲೂ ನಡುಕವಿತ್ತು. ಅದು ಹೊಸ ಅನುಭವದ ರೋಮಾಂಚನದಿಂದಲ್ಲ; ಮುಂದೇನಾಗುವುದೋ ಎಂಬ ಆತಂಕದಿಂದ. ಅವಳ ಕರಸ್ಪರ್ಶದಿಂದ ರೋಮಾಂಚನವೇನು ನನಗೆ? ಅವಳಂತೆ ನಾನೂ ಹೆಣ್ಣಷ್ಟೆ! ಅಂತೂ ವಧು ಹಾಗೂ ವರ ಇಬ್ಬರೂ ಆತಂಕದಿಂದ ಇದ್ದಂತೆ ಮದುವೆ ನೆರವೇರಿತು.
ನಿಜವಾದ ಪರೀಕ್ಷೆ ನನ್ನ ಪಾಲಿಗೆ ಮುಂದಿತ್ತು. ಒಂದು ಸಣ್ಣ ಭರವಸೆ ಬಿಸಿಲಕೋಲಿನಂತೆ ಅಂತರಂಗದಲ್ಲಿ ಇಣುಕುತ್ತಲೂ ಇತ್ತು. ಅದು ನನ್ನ ತಂದೆ ಆಡಿದ ಮಾತು. ಸಾಮಾನ್ಯವೇನಲ್ಲ ಶಿವನ ಅನುಗ್ರಹ. ಅದರ ಪರಿಣಾಮದಿಂದ ನಾನು ಗಂಡಾಗಿ ಪರಿವರ್ತನೆ ಹೊಂದಿಯೇನು ಅನ್ನುವ ಆಶೆ. ವಿವಾಹವಾದ ಬಳಿಕ ಕೆಲವು ದಿನ ಏನೇನೋ ನೆಪಗಳನ್ನೊಡ್ಡಿ ಮದುಮಗಳಿಂದ ದೂರವೇ ಇದ್ದೆ. ಸ್ನಾನಗೃಹದಲ್ಲಿ ನಿತ್ಯವೂ ನನ್ನ ದೇಹವನ್ನು ಪರೀಕ್ಷಿಸಿಕೊಳ್ಳುತ್ತಿದ್ದೆ. ಎಲ್ಲಾದರೂ ಪುರುಷತ್ವದ ಸೂಚನೆ ಕಾಣಿಸುವುದೇನೋ ಎಂದು. ಇಲ್ಲವೇ ಇಲ್ಲ. ಎಷ್ಟು ದಿನ ಹೀಗೆ?
ನನ್ನ ನೂತನ ವಧುವಾದರೂ ಇಂದೋ ನಾಳೆಯೋ ಅವಳ ಅಂತಃಪುರದ ಪ್ರವೇಶವನ್ನು ನಾನು ಮಾಡುತ್ತೇನೆ ಎಂದು ಕಾದಿದ್ದವಳು ನಿರಾಶೆಗೊಂಡಿರುವುದು ಸ್ಫುಟವಾಗುತ್ತಿತ್ತು. ಹಾಗೆಂದು ನಾನು ಏಕಾಂತದಲ್ಲೇನಾದರೂ ಅವಳಿಗೆ ಸಿಕ್ಕಿದರೆ ನನ್ನ ಗುಟ್ಟು ಬಯಲಾಗುವುದು ಖಚಿತವಿತ್ತು. ಅಥವಾ ಅವಳಿಗೆ ನನ್ನ ವಿಚಿತ್ರ ವರ್ತನೆಯಿಂದ ಸಂಶಯವೂ ಬಂದಿರಬೇಕು. ಕೊನೆಗೆ ಪತ್ನಿಯಾಗಿ ತನ್ನ ಅಧಿಕಾರವನ್ನು ಸ್ಥಾಪಿಸುವ ಮನಸ್ಸು ಮಾಡಿದಳು.
“ಆರ್ಯಪುತ್ರ, ನೀವೇಕೆ ನನ್ನಿಂದ ದೂರವೇ ಉಳಿದಿದ್ದೀರಿ? ನನ್ನಲ್ಲಿ ತಿರಸ್ಕಾರವೆ? ನಾನು ರೂಪವತಿಯಲ್ಲವೆ? ಮದುವೆಯಾಗಿ ಇಷ್ಟು ದಿನಗಳಾದರೂ ಏಕಾಂತದಲ್ಲಿ ನನ್ನೊಂದಿಗಿರುವ ಬಯಕೆ ನಿಮಗಿಲ್ಲವೆ? ಅಥವಾ ಬೇರೆ ರಾಜಕನ್ಯೆಯಲ್ಲಿ ಅನುರಕ್ತರೆ ನೀವು? ಕೃಪೆಯಿಟ್ಟು ಈ ತಿರಸ್ಕಾರಭಾವದ ಕಾರಣವನ್ನು ತಿಳಿಸಲಾರಿರ?” ಅವಳ ಕೊನೆಯ ವಾಕ್ಯವನ್ನು ಉಚ್ಚರಿಸುವಾಗ ಕಂಠ ಗದ್ಗದಿಸಿತು. ಮೈ ನಡುಗಿತು.
ಅದನ್ನು ಕೇಳುತ್ತಿದ್ದಂತೆ ನನ್ನ ಮೈಯೂ ನಡುಗಿತು. ಮುಂದಿನ ದಿನಗಳ ಭಯಾನಕತೆಯನ್ನು ಸ್ಮರಿಸಿ ನಾನು ಅಂಜಿದೆ. ಇಂದಲ್ಲ ನಾ
ಳೆ ಸತ್ಯ ಹೊರಗೆ ಬರಲೇ ಬೇಕಷ್ಟೆ? ಬರುವುದನ್ನು ಇಂದೇ ಎದುರಿಸುವುದಕ್ಕೆ ಸನ್ನದ್ಧಳಾದೆ. ಅವಳಲ್ಲಿ ಹೀಗೆ ಹೇಳಿದೆ,
“ದೇವಿ, ನೀನು ಮುಗ್ಧಳು. ವಸ್ತುಸ್ಥಿತಿಯನ್ನು ಎದುರಿಸಲು ಮನಸ್ಸನ್ನು ದೃಢವಾಗಿರಿಸಿಕೊ. ನಮ್ಮಿಂದ ಒಂದು ಘೋರವಾದ ತಪ್ಪಾಗಿದೆ. ನಿನ್ನ ತಂದೆಯವರಲ್ಲಿ ನಮ್ಮಪ್ಪ ಸುಳ್ಳು ಹೇಳಿದ್ದರು. ನಾನು ದ್ರುಪದ ಭೂಪತಿಗೆ ಮಗನಲ್ಲ, ಮಗಳು. ನಾನು ಜನ್ಮತಃ ಹೆಣ್ಣು. ಪ್ರಪಂಚಕ್ಕೆ ನಾನು ಗಂಡು ಎಂಬಂತೆ ನನ್ನನ್ನು ಬೆಳೆಸಿದರು ನನ್ನ ತಂದೆ ತಾಯಿ. ಪರಶಿವನ ಅನುಗ್ರಹದಿಂದ ಭವಿತವ್ಯದಲ್ಲಿ ನಾನು ಗಂಡಾಗಲಿದ್ದೇನೆ ಅನ್ನುವುದನ್ನು ಅವರು ಇಂದಿಗೂ ನಂಬಿದ್ದಾರೆ. ನನ್ನ ಅಪರಾಧವನ್ನು ದಯೆಯಿಟ್ಟು ಮನ್ನಿಸು. ದೇವರ ಕೃಪೆಯಲ್ಲಿ ಭರವಸೆಯಿಡೋಣ. ನಾನು ಗಂಡಾಗುವವರೆಗೆ ಕಾಯೋಣ. ಶಿವನ ವಾಕ್ಯ ಸುಳ್ಳಾಗಲಾರದು.”
ನನ್ನ ಮಾತುಗಳು ಅವಳಿಗೆ ಅರ್ಥವಾಗುವುದಕ್ಕೆ ಕೊಂಚಕಾಲ ಬೇಕಾಯಿತು. ನಿಧಾನಕ್ಕೆ ನಿಜವನ್ನು ತಿಳಿಯುತ್ತಿದ್ದಂತೆ ಅವಳು ಮೂಕಳಾದಳು. ಇದೇನು ವಿಪರೀತವೆಂದು ಯೋಚಿಸುತ್ತಿದ್ದಳೇನೋ. ನಾನು ಸಂಪನ್ನನ ಎದುರು ನಿಂತ ದರಿದ್ರನಂತೆ ದೀನಳಾಗಿದ್ದೆ. ದಶಾರ್ಣದ ರಾಜಕುಮಾರಿ ಕ್ಷತ್ರಿಯಾಣಿಯಷ್ಟೆ? ದೃಢವಾಗಿಯೇ ಇದ್ದಳು. ಎಷ್ಟೋ ಹೊತ್ತಿನ ಬಳಿಕ ಅವಳು ತಲೆಯೆತ್ತಿದಾಗ ಅವಳ ಕಣ್ಣುಗಳಲ್ಲಿ ನೀರಿರಲಿಲ್ಲ; ಕಾಠಿಣ್ಯವಿತ್ತು. ತನ್ನ ಜೀವನವನ್ನು ಹಾಳುಗೆಡವಿದ ನನ್ನ ಕುರಿತು ಅಸಹ್ಯವಿತ್ತು. ಅಗಲವಾದ ಅವಳ ಕಣ್ಣುಗಳು ನನ್ನನ್ನು ಕ್ರೂರವಾಗಿ ದಿಟ್ಟಿಸಿದವು. ಅವಳು ಆ ಬಳಿಕ ಒಂದು ನುಡಿಯನ್ನೂ ಆಡಲಿಲ್ಲ. ಅಂತಃಪುರದ ಒಳ ಓವರಿಗೆ ಸರಿದು ಕದವನ್ನು ಮುಚ್ವಿದಳು. ಕದವನ್ನಲ್ಲ ನನ್ನ ಭವಿತವ್ಯವನ್ನೇ ಮುಚ್ಚಿದಂತೆ ನನಗೆ ಭಾಸವಾಯಿತು.
ಆ ದಿನ ಕಳೆಯಿತು. ಮರುದಿನ ಪ್ರಾತಃಕಾಲದಲ್ಲೇ ನನ್ನ ನವವಧು ತನ್ನೊಂದಿಗೆ ಬಂದಿದ್ದ ದಾಸದಾಸಿಯರೊಂದಿಗೆ ತವರು ಮನೆ ದಶಾರ್ಣಕ್ಕೆ ಹೊರಟುಹೋದಳು. ಅವಳನ್ನು ತಡೆಯುವ ಯಾವ ಯತ್ನವೂ ಪ್ರಯೋಜನಕ್ಕೆ ಬರಲಿಲ್ಲ. ನನಗೆ ಅವಳನ್ನು ತಡೆಯುವಷ್ಟು ಧೈರ್ಯವೂ ಇರಲಿಲ್ಲ. ಅವಳು ಹೋಗಿಯೇ ಬಿಟ್ಟಳು. ಪಾಂಚಾಲದಲ್ಲಿ ಇದೊಂದು ಸಾಮಾನ್ಯ ಘಟನೆ ಎಂಬಂತೆ ಬಿಂಬಿಸಲಾಯಿತು. ನನ್ನ ಗುಟ್ಟು ಬಹಿರಂಗವಾಗಲಿಲ್ಲ. ಮದುಮಗಳು ತಂದೆ ತಾಯಂದಿರನ್ನು ನೋಡಲು ಹೋಗಿದ್ದಾಳೆ ಎಂದೇ ಪ್ರಜೆಗಳು ಭಾವಿಸಿದರು. ಅಂತೂ ನನ್ನ ವಿಚಿತ್ರ ವಿವಾಹ ಅಂತ್ಯ ಕಂಡಿತು.
ಅಂತ್ಯ ಕಂಡಿತು ಅಂತ ನಾವು ತಿಳಿದೆವು. ಆದರೆ ನಿಜವಾಗಿ ಅದರ ಪರಿಣಾಮಗಳು ಕೆಲವೇ ದಿನಗಳಲ್ಲಿ ಗೋಚರಿಸತೊಡಗಿದವು. ಅವಳು ಹೋಗಿ ತನ್ನ ತಂದೆ ದಶಾರ್ಣ ರಾಜನಲ್ಲಿ ಏನು ಹೇಳಿದಳೋ ತಿಳಿಯದು. ನನ್ನ ದೈಹಿಕ ಸ್ಥಿತಿಯನ್ನಂತೂ ವಿವರಿಸಿರಬೇಕು. ಕೆಲವೇ ದಿನಗಳಲ್ಲಿ ದಶಾರ್ಣದಿಂದ ಒಂದು ತಂಡ ಪಾಂಚಾಲಕ್ಕೆ ಆಗಮಿಸಿತು. ಅದರಲ್ಲಿ ಅಧಿಕಾರಿಗಳು, ವೈದ್ಯರು, ವೇಶ್ಯೆಯರು ಮುಂತಾದವರಿದ್ದರು. ಅವರೊಂದು ಸಂದೇಶವನ್ನೂ ತಂದಿದ್ದರು.
“ಪಾಂಚಾಲ ಭೂಪತಿ, ನಿನ್ನ ಮಗ ಶಿಖಂಡಿಗೆ ನನ್ನ ಮಗಳನ್ನು ವಿವಾಹ ಮಾಡಿದ್ದು ಸರಿಯಷ್ಟೆ? ಆದರೆ ಶಿಖಂಡಿ ಪುರುಷತ್ವವುಳ್ಳವನಲ್ಲ ಎಂಬುದನ್ನು ನನ್ನ ಮಗಳು ಹೇಳಿದಳು. ಇದು ನಿಜವಾದರೆ ನಿನ್ನದು ಮಹಾದ್ರೋಹ. ಆದರೆ ಯಥಾರ್ಥವನ್ನು ತಿಳಿಯದೆ ಅವಸರದಿಂದ ನಿರ್ಣಯಿಸುವುದು ಸರಿಯಲ್ಲ. ಅದಕ್ಕಾಗಿ ನಮ್ಮಲ್ಲಿಂದ ಕೆಲವರನ್ನು ಕಳುಹಿಸಿಕೊಟ್ಟಿದ್ದೇನೆ. ಅವರು ನಿನ್ನ ಮಗ ಶಿಖಂಡಿಯನ್ನು ಪರೀಕ್ಷಿಸಿ ಗಂಡೋ ಹೆಣ್ಣೋ ಎಂಬುದನ್ನು ಅರಿತುಕೊಳ್ಳುತ್ತಾರೆ. ಗಂಡು ಹೌದಾದರೆ ನನ್ನ ಮಗಳಿಗೆ ತಿಳಿವಳಿಕೆ ಹೇಳಿ ಕಳುಹಿಸಿಕೊಡುತ್ತೇನೆ. ಇಲ್ಲವಾದರೆ ನಿಮ್ಮನ್ನು ಶಿಕ್ಷಿಸುತ್ತೇನೆ. ನೀನು ಶಿಖಂಡಿಯ ಪರೀಕ್ಷೆಗೆ ಅನುಕೂಲ ಕಲ್ಪಿಸಿಕೊಡಬೇಕು” ಇದು ದಶಾರ್ಣ ರಾಜನ ಸಂದೇಶ. ನನಗೆ ಪರೀಕ್ಷೆಯ ಫಲಿತಾಂಶ ಮೊದಲೇ ತಿಳಿದಿತ್ತು. ಆದರೆ ನನ್ನ ತಂದೆ ಶಿವನ ಮಾತಿನ ಭರವಸೆಯಿಂದ ಪರೀಕ್ಷೆಗೆ ಒಪ್ಪಿದರು.
ಪರೀಕ್ಷೆ ನಡೆಯಿತು. ಪರೀಕ್ಷೆಗೇನಿದೆ? ವೇಶ್ಯೆಯರ ಎದುರು ಬಟ್ಟೆ ಕಳಚುವುದಷ್ಟೇ ನಾನು ಮಾಡಬೇಕಿದ್ದದ್ದು. ಅದೂ ಆಯಿತು. ಮೊದಲ ನೋಟದಲ್ಲೇ ನನ್ನದು ಹೆಣ್ಣು ಮೈ ಎಂಬುದು ಅವರಿಗೆ ತಿಳಿದು ಹೋಯಿತು. ಬಂದವರು ಪರೀಕ್ಷೆ ಮುಗಿಯಿತೆಂದು ಹಿಂದೆ ಹೋದರು. ಬಹುಶಃ ವಿವಾಹ ಮುರಿದುಬೀಳುವಲ್ಲಿಗೆ ಇದು ಮುಗಿಯುವುದೆಂದು ನಾವು ಭಾವಿಸಿದೆವು. ಶಿಕ್ಷಿಸುತ್ತೇನೆ ಎಂದು ಹಿರಣ್ಯವರ್ಮ ಹೇಳಿದ್ದನಾದರೂ ಅದು ಬೆದರಿಕೆ ಮಾತ್ರವೆಂದು ನಮ್ಮ ಗ್ರಹಿಕೆಯಾಗಿತ್ತು. ಆದರೆ ಹಿರಣ್ಯವರ್ಮ ಹಠವಾದಿ. ಈ ಪ್ರಕರಣವನ್ನು ಇಲ್ಲಿಗೆ ಬಿಟ್ಟುಬಿಡುವುದು ಅವನ ಜಾಯಮಾನವಾಗಿರಲಿಲ್ಲ. ಪರೀಕ್ಷೆಗೆ ಬಂದವರು ಹೇಳಿದ ಅಭಿಪ್ರಾಯದಿಂದ ಕ್ರುದ್ಧನಾದ ಹಿರಣ್ಯವರ್ಮ ದೊಡ್ಡ ಸೇನೆಯನ್ನು ಹೊರಡಿಸಿಕೊಂಡು ಬಂದೇಬಿಟ್ಟ. ಸೇನೆ ದಶಾರ್ಣದಿಂದ ಹೊರಟಿದೆ ಎಂಬ ವರ್ತಮಾನ ತಲಪಿದ ಬೆನ್ನಿಗೇ ಸೇನೆಯೂ ಬಂತು. ಪಾಂಚಾಲ ನಗರದ ಹೊರಭಾಗದಲ್ಲಿ ಬೀಡುಬಿಟ್ಟಿತು. ನಮ್ಮನ್ನು ಸದೆಬಡಿಯುವುದು ಅವನ ಉದ್ದೇಶವಾಗಿತ್ತು.
ನನಗೆ ಆಶ್ಚರ್ಯವೆನಿಸಿತು. ನಾವು ಬಲಿಷ್ಠರೆಂದೇ ಪ್ರತೀತಿ. ಅಲ್ಲದೆ ಸ್ವತಃ ತಂದೆಯವರೂ ಪರಾಕ್ರಮಿ. ಪಾಂಚಾಲಭೂಪತಿಯನ್ನು ಕೆಣಕುವ ಅದಟು ಯಾವ ರಾಜನಿಗೂ ಇಲ್ಲವೆಂದೇ ನಾನು ನಂಬಿದವಳು. ಆದರೂ ದಶಾರ್ಣದ ಸೇನೆ ಯಾವ ಆತಂಕವೂ ಇಲ್ಲದೆ ಪಾಂಚಾಲದ ತನಕ ಬಂದುದು ಹೇಗೆ? ಗಡಿಯಲ್ಲಿ ಅವರನ್ನು ತಡೆಯುವ ಯತ್ನವನ್ನು ನಮ್ಮ ಸೈನಿಕರು ಮಾಡಲಿಲ್ಲವೆ? ತಂದೆಯವರಲ್ಲಿ ಇದನ್ನೇ ಕೇಳಿದೆ. ಅವರೆಂದರು,
“ಶಿಖಂಡಿ, ನಾವು ಬಲಾಢ್ಯರು ಎಂಬುದು ದಿಟ. ಆದರೆ ದಶಾರ್ಣದ ಹಿರಣ್ಯವರ್ಮ ಸಾಮಾನ್ಯನಲ್ಲ. ನಾವು ತಡೆದರೂ ನುಗ್ಗುವ ಸಾಮಥ್ರ್ಯವಿದ್ದವನು. ಅವನನ್ನು ಕೆಣಕಿದರೆ ಮತ್ತಷ್ಟು ಕ್ರುದ್ಧನಾಗುತ್ತಾನೆ. ಮೊದಲೇ ನಾವು ಅಪರಾಧಿಗಳಾಗಿದ್ದೇವೆ. ಈಗ ಯುದ್ಧಕ್ಕೆ ಮುಂದಾದರೆ ನಾವು ಇಲ್ಲಿಯವರೆಗೆ ಕಾಪಾಡಿಕೊಂಡು ಬಂದ ಗುಟ್ಟನ್ನು ಅವನು ಬಹಿರಂಗವಾಗಿ ಸಾರುತ್ತಾನೆ. ನಮ್ಮ ದೌರ್ಬಲ್ಯದ ಅರಿವು ನಮಗಿರುವಾಗ ಅವನನ್ನು ಕೆರಳುವಂತೆ ಮಾಡುವುದು ಅಪಾಯಕಾರಿ. ಹಾಗಾಗಿ ಇಲ್ಲಿಯವರೆಗೆ ಅವನ ಸೈನ್ಯ ಬರುವ ಅವಕಾಶವನ್ನು ಕಲ್ಪಿಸಿದೆ. ನಾವು ಮುಖಾಮುಖಿಯಾದಾಗ ನಾನೇ ಅವನಲ್ಲಿ ನಡೆದುದನ್ನು ವಿವರಿಸುತ್ತೇನೆ. ಇಲ್ಲಿಯವರೆಗೆ ಅಭಿಮಾನಧನನಾಗಿ ಬದುಕಿದ ನನಗೆ ಅವನೆದುರು ತಲೆಬಾಗುವುದು ಹೀನಾಯ ನಿಜ. ಆದರೆ ಸುಳ್ಳುಗಾರನಾಗಿ ಯುದ್ಧ ಮಾಡಿ ಗೆಲ್ಲಲಾರೆ. ಕ್ಷಮಿಸು ಎಂಬ ವಿನಂತಿಯನ್ನು ಭೂಪತಿಯ ಮುಂದಿಡುತ್ತೇನೆ. ಉಳಿದುದು ಶಿವ ಸಂಕಲ್ಪ” ಎಂದರವರು.
ನಾನು ಖಿನ್ನಳಾದೆ.
ಈ ಎಲ್ಲ ಬೆಳವಣಿಗೆಗಳಿಗೆ ಕಾರಣ ನಾನು ಅನಿಸತೊಡಗಿತು. ನಾನು ಉದ್ದೇಶಪೂರ್ವಕವಾಗಿ ಏನೂ ಮಾಡದಿದ್ದರೂ ನನ್ನ ಹುಟ್ಟೇ ಒಂದು ಸಮಸ್ಯೆಯಾಗಿ ನನ್ನ ಮಾತಾಪಿತರನ್ನು ಕಾಡಿತು. ಅಲ್ಲಿಂದ ಇಲ್ಲಿಯವರೆಗೆ ಅವರಿಗಾದ ನಿರಾಶೆ, ನಾನು ಗಂಡಾಗದೇ ಇದ್ದುದರಿಂದ ಇದೀಗ ಒದಗಿರುವ ಮಹಾವಿಪತ್ತು ಇವೆಲ್ಲಕ್ಕೂ ಕಾರಣ ನಾನು. ನನ್ನಂಥವಳು ಹುಟ್ಟದೇ ಇರುತ್ತಿದ್ದರೆ ಯಾವ ತೊಡಕೂ ಬಾಧಿಸುತ್ತಿರಲಿಲ್ಲ ಅನಿಸಿತು. ಒಳಗೆ ಹೆಣ್ಣಾಗಿ ಹೊರಗೆ ಗಂಡಿನಂತೆ ಇರುವ ನನ್ನೀ ಬಾಳ್ವೆಗೆ ಧಿಕ್ಕಾರವಿರಲಿ. ಅಯ್ಯೋ… ಯಾರಿಗೂ ಉಪಯೋಗವಿಲ್ಲದ ನಾನು ಜೀವಿಸಿ ಆಗಬೇಕಾದುದೇನು? ಹೀಗೆಲ್ಲ ಯೋಚಿಸುತ್ತಿದ್ದಂತೆ ಕಣ್ಣುಗಳು ತುಂಬಿಕೊಳ್ಳಲಾರಂಭಿಸಿದವು.
ತಂದೆಯವರು ಇದನ್ನು ಗಮನಿಸಿದರು. “ಮಗಳೆ, ನೀನು ಈ ಕುರಿತು ದುಃಖಿಸಬಾರದು. ನಿನ್ನನ್ನು ಮಗಳೆಂದು ಬೆಳೆಸುತ್ತಿದ್ದರೆ ಸಂಕಷ್ಟಗಳು ಒದಗುತ್ತಿರಲಿಲ್ಲ. ನಿಜವಾಗಿ ನಾನೂ ನಿನ್ನ ತಾಯಿ ಕೌಸವಿಯೂ ಅಪರಾಧಿಗಳು. ದೇವ ಕೊಟ್ಟ ಭರವಸೆ ಸುಳ್ಳಾಗುವುದಿಲ್ಲವೆಂಬ ವಿಶ್ವಾಸದಿಂದ ನಿನ್ನನ್ನು ಗಂಡಿನಂತೆ ಬೆಳೆಸಿದೆವು. ಆದರೆ ಅದು ಈಡೇರದೇ ಹೋಯಿತು. ಇದರಲ್ಲಿ ನಿನ್ನ ಅಪರಾಧವೇನು? ಬಂದ ಆಪತ್ತನ್ನು ಒಟ್ಟಾಗಿ ಎದುರಿಸೋಣ. ಚಿಂತಿಸಬೇಡ” ಸಾಂತ್ವನದ ದನಿಯಲ್ಲಿ ಅವರೆಂದರು.
ಅವರು ಹಾಗೆಂದರು ನಿಜ. ಆದರಿಂದು ಬಂದಿರುವ ಆಪತ್ತು ಸಣ್ಣದೇನಲ್ಲ. ಹಿರಣ್ಯವರ್ಮ ದೊಡ್ಡ ಸೈನ್ಯವನ್ನು ತಂದಿದ್ದಾನೆ. ಅವನ ಆಪ್ತರಾದ ಇನ್ನು ಕೆಲವು ರಾಜರೂ ಕೈಜೋಡಿಸಿರಬಹುದು. ಪಾಂಚಾಲವನ್ನು ಮಣಿಸಿದ ಬಳಿಕ ಒಂದಿಷ್ಟು ಭೂಪ್ರದೇಶವನ್ನು ಹಂಚಿಕೊಡುತ್ತೇನೆ ಎಂಬ ಆಶ್ವಾಸನೆಯನ್ನು ಅವರಿಗೆ ಕೊಟ್ಟಿರಬಹುದು. ಆ ತುಣುಕುಗಳಿಗಾಗಿ ಹಂಬಲಿಸಿ ಬಂದವರಿರಬಹುದು. ಏನಿದ್ದರೂ ನಮ್ಮ ನಾಡು ಅಪಾಯದಲ್ಲಿದೆ. ನನ್ನ ವಿಷಯಕವಾಗಿ ತಪ್ಪು ಯಾರದೇ ಇದ್ದರೂ ‘ಶಿಖಂಡಿಯ ಕಾರಣದಿಂದ ಪಾಂಚಾಲದ ವಿನಾಶವಾಯಿತು’ ಎಂಬ ಮಾತು ಉಳಿಯುವುದು ಖಚಿತ. ಅಯ್ಯೋ ಹುಟ್ಟಿದ ಮಣ್ಣು ನೆತ್ತರಿನಲ್ಲಿ ಮೀಯುವುದನ್ನು ನೋಡಬೇಕೆ? ಅದಕ್ಕೆ ಕಾರಣಳಾಗಿ ಬದುಕಿರಬೇಕೆ? ಬೇಡವೆಂದಿತು ನನ್ನ ಮನಸ್ಸು. ಇಲ್ಲ ಇನ್ನು ಇಲ್ಲಿರಬಾರದು ಎಲ್ಲೋ ದೂರ ಹೋಗಬೇಕು. ಯಾರ ಕಣ್ಣಿಗೂ ಬೀಳಬಾರದು. ಒಂದು ವೇಳೆ ಯುದ್ಧದಲ್ಲಿ ದಶಾರ್ಣನ ಕೈ ಮೇಲಾದರೆ ಇನ್ನೆಂತಹ ಮಾನಚ್ಯುತಿಯ ಸನ್ನಿವೇಶ ಒದಗುವುದೋ. ಅದರ ಬದಲು ನಾನೇ ಇಲ್ಲವಾದರೆ? ನಾನು ಇಲ್ಲವೆಂದಾದರೆ ಅಪರಾಧಕ್ಕೆ ಬಲವಾದ ಆಧಾರವೇ ತಪ್ಪಿದಂತಾಗುತ್ತದೆ. ಯುದ್ಧ ತಪ್ಪಲೂ ಬಹುದು.
ಹೀಗೆ ಚಿಂತಿಸುತ್ತ ನಾನು ಅರಮನೆಯನ್ನು ಬಿಟ್ಟು ದೂರವಾಗಿ ಯಾರ ಗಮನಕ್ಕೂ ಬಾರದಂತೆ ಅರಣ್ಯವನ್ನು ಸೇರಿಕೊಳ್ಳುವ ಯೋಚನೆ ಮಾಡಿದೆ. ಒಂದೋ ತಪಸ್ಸು, ಇಲ್ಲವೇ ದೇಹತ್ಯಾಗ ಎಂಬ ನಿರ್ಧಾರವನ್ನು ಮಾಡಿಕೊಂಡಿದ್ದೆ. ನಾನು ಹೆಣ್ಣಾಗಿ ಹುಟ್ಟಿದರೂ ಮುಂದೆ ಗಂಡಾಗುತ್ತೇನೆ ಎಂಬ ಮಾತು ನೀಡಿದ ಪರಶಿವನನ್ನು ತಪಸ್ಸಿನಿಂದ ಮೆಚ್ಚಿಸಿ ‘ಇಂತಹ ಸಂಕಟದಲ್ಲೂ ನಿಜವಾಗದ ನಿನ್ನ ಮಾತಿಗೆ ಮೌಲ್ಯವೇನು?’ ಎಂಬ ಪ್ರಶ್ನೆಯನ್ನು ಮುಂದಿಡಬೇಕು. ಅಥವಾ ಅದು ಅಸಾಧ್ಯವಾದರೆ ಇಷ್ಟೆಲ್ಲ ವಿಪರೀತಗಳಿಗೆ ಕಾರಣವಾದ ನನ್ನ ಈ ಶರೀರವನ್ನು ಕಾಡಿನ ನಿರ್ಜನ ಪ್ರದೇಶದಲ್ಲಿ ಬೆಂಕಿಗೋ ನೀರಿಗೋ ಆಹುತಿಯಾಗಿಸಬೇಕು. ನನ್ನನ್ನು ನಿರಂತರವಾಗಿ ಕಾಡುವ ಸಂದಿಗ್ಧಗಳಿಗೆ ಶಾಶ್ವತವಾದ ಪರಿಹಾರವಾದರೂ ದೊರೆಯಲಿ. ಸಾಕು… ಆ ಕಡೆ ಹೆಣ್ಣೂ ಆಗದೆ, ಈ ಕಡೆ ಗಂಡೂ ಆಗದೆ ಒಟ್ಟಿನಲ್ಲಿ ನಾನು ಯಾರು ಎಂಬುದನ್ನು ಉತ್ತರಿಸಲಾರದೆ ನರಳುವುದಕ್ಕಿಂತ ಸಾವೇ ಉತ್ತಮ. ಅರಮನೆಯಲ್ಲಿ ಇದ್ದಷ್ಟು ಕಾಲ ಬಿಡುಗಡೆಯಿಲ್ಲ. ಯಾವ ಕ್ಷಣ ಏನಾಗುವುದೋ ಎಂಬ ಆತಂಕ. ನನ್ನ ಕಾರಣದಿಂದ ನಾನು ಹುಟ್ಟಿದ ನಾಡಿಗೆ ಯುದ್ಧದಂತಹ ವಿಪತ್ತು ಒದಗಿದೆ. ಈ ಯೋಚನೆಯಂತೂ ನನ್ನಲ್ಲಿ ಅಪರಾಧೀ ಭಾವ ಹುಟ್ಟಿಸುತ್ತಿತ್ತು. ನಿಜ. ನಡೆದುದರಲ್ಲಿ ನನ್ನ ಅಪರಾಧವಿಲ್ಲ. ನಾನು ಹೀಗೆ ಹುಟ್ಟಬೇಕೆಂದು ಬಯಸಿ ಹುಟ್ಟಿದವಳಲ್ಲ. ಹೆಣ್ಣಾದ ನನ್ನನ್ನು ಗಂಡಾಗಿ ಬೆಳೆಯಿಸಹೊರಟ ನನ್ನ ತಂದೆ ತಾಯಿಯ ವಿವೇಕಶೂನ್ಯತೆ ನನ್ನ ಈ ಹೀನಾಯ ಸ್ಥಿತಿಗೆ ಕಾರಣ. ಹಾಗೆಂದು ಹೆತ್ತವರನ್ನು ಜರಿಯಲೆ? ಅವರು ಮಗಳಿಗೆ ಕೆಡುಕಾಗಲಿ ಎಂಬ ಭಾವನೆಯಿಂದ ಮಾಡಿದ್ದಲ್ಲ. ಅವರಿಗೆ ಪರಶಿವನ ವಾಕ್ಯದ ಮೇಲೆ ಅಪರಿಮಿತ ವಿಶ್ವಾಸ. ಆಗಲಿ ಶಿವನಿಗಾದರೂ ನನ್ನ ಕುರಿತು ಕರುಣೆಯಿಲ್ಲದೆ ಹೋಯಿತಲ್ಲ! ನನ್ನ ತಂದೆಗೆ ಗಂಡು ಮಕ್ಕಳ ಭಾಗ್ಯವಿಲ್ಲ ಎಂದಷ್ಟೇ ಹೇಳಿ ಅಂತರ್ಧಾನನಾಗಬಹುದಿತ್ತು. ಜೀವ ಪ್ರಪಂಚದಲ್ಲಿ ಅಸಹಜವಾದ ಹೆಣ್ಣು ಗಂಡಾಗುವುದು ಇತ್ಯಾದಿ ಗೊಂದಲಗಳನ್ನು ಹುಟ್ಟುಹಾಕಿ ನನ್ನನ್ನು ಅದರ ನಡುವೆ ಇಟ್ಟುಬಿಟ್ಟನಲ್ಲ! ಭಗವಂತಾ…ನನಗೆ ಗಂಡಾಗಬೇಕು ಎಂಬ ಹಂಬಲವಿಲ್ಲ. ಹೆಣ್ಣಾಗಿರುವುದರಲ್ಲಿ ಬೇಸರವೂ ಇಲ್ಲ. ಬಂದ ವಿಪತ್ತೊಂದು ತೊಲಗಿದರೆ ಸಾಕು.
ಹೀಗೆಲ್ಲ ಯೋಚಿಸುತ್ತ ಗದ್ದಲವಿಲ್ಲದ ಶಾಂತ ರಾತ್ರಿಗಾಗಿ ಕಾದೆ. ಕೊನೆಗೂ ಆವರಿಸಿದ ಕತ್ತಲಲ್ಲಿ ಕಾವಲುಗಾರರ ಕಣ್ಣು ತಪ್ಪಿಸಿ ಅರಮನೆಯಿಂದ ಹೊರಬಿದ್ದು ನಗರದ ಹಿಂಭಾಗದ ಹಾದಿಯನ್ನು ಹಿಡಿದು ದಟ್ಟವಾದ ಅರಣ್ಯವನ್ನು ಸೇರಿಕೊಂಡೆ.
ಒಬ್ಬಳೇ ಏಕಾಕಿನಿಯಾಗಿ ಹೀಗೆ ಸಂಚರಿಸುವಾಗ ನನಗೆ ಯಾವ ಭಯವೂ ಆಗಲಿಲ್ಲ. ಶತ್ರುಗಳೊಂದಿಗೆ ಶಸ್ತ್ರವಿದ್ದು ಅಥವಾ ಇಲ್ಲದೆಯೂ ಹೋರಾಡಲು ನಾನು ಸಮರ್ಥಳಿದ್ದೆ. ಈಗಲೂ ಸಶಸ್ತ್ರಳಾಗಿಯೇ ಬಂದಿದ್ದೆ. ಗಂಡು ಉಡುಗೆಯಲ್ಲಿ ಇದ್ದು ಅಭ್ಯಾಸವಾಗಿತ್ತಲ್ಲ, ಹಾಗೆಯೇ ಹೊರಟಿದ್ದೆ. ನಡೆದಾಡುವುದಕ್ಕೆ ಅದೇ ಆನುಕೂಲವಾಗಿತ್ತು. ಒಮ್ಮೆ ಗಂಡಿನ ಹಾಗಿದ್ದು ಅಭ್ಯಾಸವಾದರೆ ಮತ್ತೆ ಹೆಣ್ಣೇ ಆದರೂ ಹೆಣ್ಣಿನಂತಿರುವುದು ಕಠಿಣ. ಅಲ್ಲದೆ ಕಾಡಿನ ಏಕಾಂತದಲ್ಲಿ ಸಾವಿನ ನಿರೀಕ್ಷೆಯಲ್ಲಿರುವ ನನಗೆ ಯಾವ ಉಡುಗೆಯಾದರೇನು? ಉಡುಗೆಯಿದ್ದರೇನು, ಇಲ್ಲದಿದ್ದರೇನು?
ಕಪ್ಪುಗಟ್ಟಿದ ಕಾಡಿನಲ್ಲಿ ಮನಸೋ ಇಚ್ಛೆ ತಿರುಗಾಡುತ್ತಿದ್ದೆ. ಸಾವಿನ ದಾರಿ ಹುಡುಕುತ್ತಿದ್ದೆ ಎಂದರೂ ಸರಿ. ಶಿವಾಜ್ಞೆಯಂತೆ ಸಾಯುವ ಮುನ್ನ ಗಂಡಾಗಬೇಕು ತಾನೆ? ಅದರ ಪರೀಕ್ಷೆಯೂ ಆಗಿಬಿಡಲಿ ಅನ್ನುತ್ತಿತ್ತು ಅಂತರಂಗ. ಆಳವಾದ ಕಮರಿಗೆ ಧುಮುಕಲೆ ಅಥವಾ ನದಿಯ ಪ್ರವಾಹಕ್ಕೆ ಬೀಳಲೆ? ಹಾವಿನ ಹುತ್ತದೊಳಕ್ಕೆ ಕೈಯಿಕ್ಕಲೆ? ಬಂಡೆಗಲ್ಲಿಗೆ ತಲೆಯನ್ನು ಅಪ್ಪಳಿಸಲೆ? ಏನನ್ನೂ ನಿರ್ಣಯಿಸುವುದಕ್ಕಾಗದೆ ಪ್ರೇತದಂತೆ ಅಲೆಯುತ್ತ ಪ್ರಪಾತವೊಂದರ ಸನಿಹಕ್ಕೆ ಬಂದೆ. ಪ್ರಪಾತವನ್ನು ಕಂಡಾಗ ಆಳವಾದ ಕಲ್ಲುಬಂಡೆಗಳಿಂದ ತುಂಬಿದ ಕೊಳ್ಳಕ್ಕೆ ಜಿಗಿಯೋಣ ಎಂಬ ನಿರ್ಣಯಕ್ಕೆ ಬಂದೆ. ಇನ್ನೇನು ಹೆಜ್ಜೆ ಮುಂದಿಡಬೇಕು ಎನ್ನುವಷ್ಟರಲ್ಲಿ ಆತ ಕಾಣಿಸಿಕೊಂಡ.(ಸಶೇಷ)