ಶ್ರೀ ಶಂಕರಜಯಂತಿಯ (ಈ ವರ್ಷ ಏಪ್ರಿಲ್ 28) ನಿಮಿತ್ತ ವಿಶೇಷ ಲೇಖನ
ಹಿಂದೂಧರ್ಮದ ಇತಿಹಾಸದಲ್ಲಿ ಶ್ರೀ ಶಂಕರಭಗವತ್ಪಾದರಿಗೆ ಒಂದು ಅತಿಶಯವಾದ ಸ್ಥಾನವು ಪ್ರಾಪ್ತವಾಗಿರುವುದಕ್ಕೆ ಹಲವು ಕಾರಣಗಳು ಇವೆ. ಅವರು ಓರ್ವ ದಾರ್ಶನಿಕರಷ್ಟೆ ಆಗಿದ್ದಿದ್ದಲ್ಲಿ ಈ ಅತಿಶಯತೆ ಏರ್ಪಡುತ್ತಿರಲಿಲ್ಲ. ಅವರ ಕೊಡುಗೆ ಬಹುಮುಖವಾದದ್ದು ಮತ್ತು ಅವರಿಂದೀಚೆಯ ಒಂದೂವರೆ ಸಹಸ್ರಾಬ್ದದ ರಾಷ್ಟ್ರೇತಿಹಾಸಕ್ಕೆ ದೃಢವಾದ ಅಸ್ತಿಭಾರವನ್ನು ನಿರ್ಮಿಸಿದುದಾಗಿದೆ. ಅವರು ದಾರ್ಶನಿಕರಾಗಿದ್ದಂತೆ ಉಚ್ಚಕೋಟಿಯ ಸುಧಾರಕರೂ ಆಗಿದ್ದರು. ಶಾಸ್ತ್ರೀಯ ಕಕ್ಷೆಯಲ್ಲಿನ ಗೊಂದಲಗಳನ್ನು ನಿವಾರಿಸಿದುದರ ಜೊತೆಗೆ ಅವರು ಸಮಾಜಜೀವನದ ವ್ಯವಸ್ಥಿತತೆಗೂ ದಾರಿಮಾಡಿದರು. ಜೀವನದ ಎಲ್ಲ ಆಯಾಮಗಳನ್ನು ಸಂಸ್ಕರಿಸಿ ಉದಾತ್ತೀಕರಿಸಿದವರು ಅವರು. ಲೋಕದಲ್ಲಿ ಧರ್ಮಗ್ಲಾನಿಯುಂಟಾದಾಗ ಧರ್ಮದ ಪುನಃಸ್ಥಾಪನೆಗಾಗಿ ಭಗವದವತಾರವಾಗುತ್ತದೆ – ಎಂಬ ಸ್ಮೃತ್ಯುಕ್ತಿಗೆ ಶ್ರೀ ಶಂಕರರ ಜೀವನವೂ ಸಾಧನೆಯೂ ಉತ್ಕೃಷ್ಟ ನಿದರ್ಶನವಾಗಿದೆ.
ಆರ್ಷಧರ್ಮದ ಉಜ್ಜೀವನ
ಶ್ರೀ ಶಂಕರರ ಆವಿರ್ಭಾವಕ್ಕೆ ಹಿಂದಿನ ಹಲವು ನೂರು ವರ್ಷಗಳ ಕಾಲಖಂಡದಲ್ಲಿ ಭಾರತದೇಶದ ಪರಿಸ್ಥಿತಿ ಅಷ್ಟೇನು ಉತ್ಸಾಹದಾಯಕವಾಗಿರಲಿಲ್ಲ. ವೈಚಾರಿಕ ಸ್ತರದಲ್ಲಿ ಶೂನ್ಯವಾದದ, ಭೌತವಾದದ ಮತ್ತು ನಿರೀಶ್ವರವಾದದ ಪ್ರಭಾವ ಮೆರೆದಿದ್ದು ಅದು ಸನಾತನಧರ್ಮಾನುಯಾಯಿಗಳನ್ನು ದುರ್ಬಲಗೊಳಿಸಿತ್ತು. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಆರ್ಷಪರಂಪರೆಯನ್ನು ಪುನಃಪ್ರತಿಷ್ಠಾಪನೆ ಮಾಡಿದವರಲ್ಲಿ ಪ್ರಮುಖರು ಶ್ರೀ ಶಂಕರಭಗವತ್ಪಾದರು. ಅವರ ಬಹುಮುಖ ಸಾಧನೆಯ ಔಜ್ಜ್ವಲ್ಯವು ಆನಂತರದ ಕಾಲದ ಉದ್ಧಾರಕರ ಪಥವನ್ನು ಪ್ರಶಸ್ತಗೊಳಿಸಿತು. ಆ ಅಗಾಧ ಕಾರ್ಯವನ್ನು ಶ್ರೀ ಶಂಕರರು ಮೂವತ್ತೆರಡು ವರ್ಷಗಳಷ್ಟು ಅಲ್ಪಕಾಲಾವಧಿಯಲ್ಲಿ ಮಾಡಿದುದಂತೂ ಅತ್ಯಂತ ವಿಸ್ಮಯಾವಹ.
ಭಾರತೀಯ ನಾಗರಿಕತೆಯನ್ನು ವಿಶ್ವದಲ್ಲಿಯೇ ಅನನ್ಯವಾಗಿಸಿರುವ ಆರ್ಷಧರ್ಮದ ಉಜ್ಜೀವನದಂತಹ ಮಹೋದ್ಯಮವು ಅತ್ಯಂತ ಸಂಕೀರ್ಣಸ್ವರೂಪದ್ದಾಗಿದ್ದಿತು. ಶ್ರೀ ಶಂಕರರದು ಹೀಗೆ ಸರ್ವಂಕಷ ಪ್ರಯಾಸವಾಗಬೇಕಾಯಿತು.
ಶ್ರೀ ಶಂಕರಭಗವತ್ಪಾದರಿಂದ ಪ್ರತಿಪಾದನೆಗೊಂಡ ಶಾಶ್ವತಮೌಲ್ಯಗಳನ್ನು ಕುರಿತು ಚಿಂತಿಸುವಾಗ, ಯಾವ ಆಧಾರತತ್ತ್ವಗಳನ್ನು ಅಂಗೀಕರಿಸಿದಲ್ಲಿ ಅವುಗಳಿಂದ ಎಲ್ಲ ಸಮಾಜಾವಶ್ಯಕ ಸ್ಫುಟೀಕರಣಗಳೂ ನಿಷ್ಪಾದ್ಯವಾಗುತ್ತವೋ ಅವನ್ನು ಗುರುತಿಸಬೇಕಾಗುತ್ತದೆ. ಮೊತ್ತಮೊದಲನೆಯ ಸಾಂದರ್ಭಿಕತೆಯೆಂದರೆ: ಭೌತವಾದ, ನಿರೀಶ್ವರವಾದ ಮೊದಲಾದವು ಪ್ರಚುರಗೊಂಡಿದ್ದುದಕ್ಕೆ ಕಾರಣವಾಗಿದ್ದುದು ಔಪನಿಷದ-ದರ್ಶನದ ಪರಿಜ್ಞಾನವು ಸಮಾಜದಲ್ಲಿ ಕ್ಷೀಣಿಸಿದ್ದುದು. ಈ ಕಾರಣದಿಂದ ಔಷನಿಷದ-ದರ್ಶನವನ್ನು ದೃಢವಾಗಿ ಪ್ರತಿಷ್ಠಾಪಿಸಲೆಳಸಿದವರು ಶ್ರೀ ಶಂಕರರು. ಪ್ರಸ್ಥಾನತ್ರಯಭಾಷ್ಯ ಹಾಗೂ ಸರಳ ಪ್ರಕರಣಗ್ರಂಥಗಳ ಮೂಲಕ ಅವರು ವೇದಾಂತತತ್ತ್ವವನ್ನು ಪ್ರಖರ ತರ್ಕಯುಕ್ತಿಯ, ಶಾಸ್ತ್ರಪರಂಪರೆಯ ಮತ್ತು ವಾಸ್ತವಾನುಭವದ ಆಧಾರದ ಮೇಲೆ ದೃಢಗೊಳಿಸಿದರು. ಹೀಗೆ ನಮ್ಮ ಸಂಸ್ಕøತಿಯ ಅಸ್ತಿಭಾರದ ಸಂರಕ್ಷಣೆ ಅವರಿಂದ ಆಯಿತು.
ಶಂಕರಸ್ಫುಟೀಕೃತ ವೇದಾಂತವು ಬೌದ್ಧಿಕ-ದಾರ್ಶನಿಕ ಕಕ್ಷೆಗಿಂತ ಅತೀತವಾದುದು. ನಿದರ್ಶನಕ್ಕೆ: ಬ್ರಹ್ಮ, ಆತ್ಮ ಮೊದಲಾದ ಶಬ್ದಾಂತರಗಳಿಂದಲೂ ವ್ಯವಹೃತನಾಗುವ ಪರಮಾತ್ಮನು ಒಬ್ಬನೇ ಮತ್ತು ಅಖಂಡವಾದವನು ಎಂದು ಮಂಡಿಸಿದುದರಿಂದ ಮತಭೇದಾಧಾರಿತ ವಿಘಟನಪ್ರವೃತ್ತಿಗಳನ್ನು ನಿವಾರಿಸಿ ಸಾಮರಸ್ಯಕ್ಕೆ ಆಸ್ಪದವನ್ನು ಕಲ್ಪಿಸಿದುದಾಯಿತು.
ಸತ್ಯನಿರ್ಣಯಪ್ರಕ್ರಿಯೆ
ಭಗವಂತನ ಅಸ್ತಿತ್ವವನ್ನು ಸ್ಥಾಪಿಸಬೇಕಾದರೆ ಕೇವಲ ಪ್ರತ್ಯಕ್ಷಜ್ಞಾನವಾಗಲಿ ಪೂರ್ವಿಕರ ಘೋಷಣೆಯಾಗಲಿ ಸಾಕಾಗದು. ಏಕೆಂದರೆ ಪರತತ್ತ್ವವು ಇಂದ್ರಿಯಲೋಕಾತೀತವಾದುದು. ಹಾಗೆಂದು ಯಾರಿಂದಲೋ ಕೇಳಿದುದನ್ನು ವಿಮರ್ಶನೆಯಿಲ್ಲದೆ ಸ್ವೀಕರಿಸುವುದೂ ಸಮಂಜಸವೆನಿಸದು. ಒಂದುಕಡೆ ಭೌತಮಾತ್ರ ಗ್ರಹಿಕೆಯ ಮಿತಿಯನ್ನು ಅರಿತುಕೊಳ್ಳಬೇಕಾಗುತ್ತದೆ. ಇನ್ನೊಂದುಕಡೆ ತರ್ಕಯುಕ್ತಿಯನ್ನು ಆಧರಿಸುವುದರ ಜೊತೆಗೆ ಅದರ ಮಿತಿಯನ್ನೂ ತಿಳಿದುಕೊಳ್ಳಬೇಕಾಗುತ್ತದೆ. ಈ ಎರಡು ಪರಾಮರ್ಶನರೀತಿಗಳ ಜೊತೆಗೆ ಶಿಷ್ಟಜನೋಕ್ತ ತಥ್ಯಗಳನ್ನು ಗೌರವಿಸಿ ಅಂಗೀಕರಿಸುವುದೂ ಸತ್ಯನಿರ್ಣಯಕ್ಕೆ ಅವಶ್ಯವಾಗುತ್ತದೆ. ಈ ಸಂದರ್ಭದಲ್ಲಿ ‘ಶಿಷ್ಟರು’ ಅಥವಾ ‘ಆಪ್ತರು’ ಎಂದರೆ ಕೇವಲ ಶ್ರದ್ಧಾರ್ಹರಾದವರೆಂದು ಅರ್ಥವಲ್ಲ. ಯಾರು ಸತ್ಯವನ್ನು ನೇರವಾಗಿ ಕಂಡುಕೊಂಡಿರುತ್ತಾರೋ, ಆ ಕಾಣ್ಕೆಯನ್ನು ಯಥಾರ್ಥವಾಗಿ ತಿಳಿಸಬಲ್ಲರೋ, ಮತ್ತು ಯಾರು ಸದಾ ಲೋಕಹಿತಚಿಂತನೆಯಲ್ಲಿ ನಿರತರಾಗಿರುತ್ತಾರೋ ಅಂತಹವರು ‘ಆಪ್ತ’ರೆನಿಸುತ್ತಾರೆ. ಅಂತಹವರು ಹೇಳಿದುದು ಪ್ರಮಾಣವೆನಿಸಬಲ್ಲದು. ಮೇಲಣ ಅಷ್ಟೂ ಚಿಂತನಕ್ರಮಗಳನ್ನು ಅನುಸರಿಸಿದವರು ಭಗವತ್ಸಾಕ್ಷಾತ್ಕಾರಕ್ಕೆ ಅರ್ಹರಾಗುತ್ತಾರೆ.
ಇಂತಹ ಸತ್ಯಾನ್ವೇಷಣೆಯು ವಸ್ತುತಂತ್ರಾವಲಂಬಿಯಾದುದರಿಂದ ಯಥಾರ್ಥ ದರ್ಶನಕ್ಕೆ ದಾರಿ ಮಾಡುತ್ತದೆ. ಇದು ಶ್ರೀ ಶಂಕರರು ಅನುಸರಿಸಿದ ಮಾರ್ಗ. ಈ ಮಾರ್ಗದಲ್ಲಿ ಸಂಕುಚಿತತೆಗಳಿಗೂ ವಿಕ್ಷೇಪಗಳಿಗೂ ಆಸ್ಪದ ಇರದು. ಇದು ಎಲ್ಲ ಹಿನ್ನೆಲೆಗಳ ಸಾಧಕರನ್ನೂ ಒಮ್ಮುಖಗೊಳಿಸಬಲ್ಲದು. ವಿವಾದಗಳ ಪರಿಧಿಯನ್ನು ಮೀರಿದ ನೆಲೆಯು ಏರ್ಪಡುವುದರಿಂದ ಉದಾತ್ತವೂ ಸಾಮರಸ್ಯಪೂರ್ಣವೂ ಆದ ಸನ್ನಿವೇಶ ಉಂಟಾಗುತ್ತದೆ. ಇದು ಕೇವಲ ಕುತೂಹಲದ ಮತ್ತು ಸಂಶಯಗಳ ಜಗತ್ತಿನಿಂದ ನಿಶ್ಚಯದೆಡೆಗಿನ ಮತ್ತು ಆನಂದದೆಡೆಗಿನ ಪಯಣ. ಮನೋಬೌದ್ಧಿಕ ಕ್ಲೇಶಗಳಿಗೆ ಅಂತಿಮ ಪರಿಹಾರವು ಅನುಭವದ ಒರೆಗಲ್ಲಿನ ಮೇಲೆ ಮತ್ತು ತತ್ತ್ವಸಾಕ್ಷಾತ್ಕರಣದಲ್ಲಿ.
ಮೌಲ್ಯಗಳ ದೃಢೀಕರಣ
ಹೀಗೆ ಪಾರಮಾರ್ಥಿಕ, ಸಾಮಾಜಿಕ – ಎರಡೂ ಆಯಾಮಗಳಲ್ಲಿ ಶ್ರೀ ಶಂಕರಭಗವತ್ಪಾದರಿಂದ ಮೌಲ್ಯಸಂಸ್ಥಾಪನೆಯಾಯಿತು.
ಮೇಲೆ ಹೇಳಿದಂತೆ ಶ್ರೀ ಶಂಕರರು ಶ್ರೇಷ್ಠ ದಾರ್ಶನಿಕರಾಗಿದ್ದಂತೆ ಅನನ್ಯ ಸುಧಾರಕರೂ ಆಗಿದ್ದರು. ಸಾಮಾಜಿಕ-ಧಾರ್ಮಿಕ ರೂಢಿರಿವಾಜುಗಳನ್ನು ಔಷನಿಷದ-ದರ್ಶನಕ್ಕೆ ಅನುಸ್ಯೂತವಾಗುವಂತೆ ಸಂಸ್ಕರಿಸಬೇಕಾಗಿದ್ದ ಮುಖ್ಯಕಾರ್ಯಕ್ಕೆ ಶ್ರೀ ಶಂಕರರು ಗಮನವಿತ್ತರು. ಹಿಂದೊಮ್ಮೆ ಪ್ರಚುರಿತವಾಗಿದ್ದು ಕೆಲಕಾಲದಿಂದ ದುರ್ಬಲಗೊಂಡಿದ್ದ ಶೈವ, ಶಾಕ್ತ, ಗಾಣಾಪತ್ಯ, ವೈಷ್ಣವ, ಸೌರ, ಕೌಮಾರ – ಈ ಆರು ದೇವತಾರೂಪಗಳ ಶ್ರದ್ಧಾಪೂರ್ವಕ ಉಪಾಸನೆಯನ್ನು ಶ್ರೀ ಶಂಕರರು ಪುನರುಜ್ಜೀವಿಸಿದರು. ಇದರಿಂದಾಗಿ ನಾಡಿನ ಸಮಾಜವು ಹೆಚ್ಚು ಧರ್ಮಾಭಿಮುಖವಾಗುವಂತಾಯಿತು.
ಇದು ಕಾಲದ ಕರೆಯೂ ಆಗಿದ್ದಿತು. ಏಕೆಂದರೆ ಅವೈದಿಕ ಮತಗಳ ಪ್ರಾಚುರ್ಯವು ಹಿಂದೂಧರ್ಮದ ಉಳಿವಿಗೆ ಪಂಥಾಹ್ವಾನವಾಗಿದ್ದಿತು. ಇನ್ನೊಂದುಕಡೆ ಕರ್ಮಮೀಮಾಂಸಕ ಪ್ರಸ್ಥಾನಕ್ಕೂ ಜ್ಞಾನಮಾರ್ಗಕ್ಕೂ ನಡುವೆ ಉಂಟಾಗಿದ್ದ ಕಂದರವನ್ನು ನಿವಾರಿಸಬೇಕಾಗಿತ್ತು. ಈ ಭಿನ್ನ ಧಾರೆಗಳನ್ನು ಸಮನ್ವಿತಗೊಳಿಸುವುದು ಸುಲಭವಾಗಿರಲಿಲ್ಲ. ಶ್ರೀ ಶಂಕರರಲ್ಲಿ ಅಸಾಮಾನ್ಯ ಮೇಧೆಯೂ ಪ್ರತಿಭೆಯೂ ಶಾಸ್ತ್ರಾಧಿಕಾರವೂ ತರ್ಕಕೌಶಲವೂ ಲೋಕಹಿತೇಚ್ಛೆಯೂ ಸಮ್ಮಿಳಿತವಾಗಿದ್ದುದರಿಂದ ಭಿನ್ನಧಾರೆಗಳ ನಡುವೆ ಸಮನ್ವಯವನ್ನು ತರುವ ಮತ್ತು ಎಲ್ಲ ಪಂಥಗಳ ದೇವತೋಪಾಸನಪದ್ಧತಿಯನ್ನು ಸೂತ್ರಬದ್ಧಗೊಳಿಸುವ ಕಾರ್ಯವು ಅವರಿಂದ ಸಾಧಿತವಾಯಿತು.
ಅಸಮಾನ ಸಂಘಟಕ ಶ್ರೀ ಶಂಕರ
ಈ ಪ್ರಕ್ರಿಯೆಯನ್ನೇ ಪ್ರಕಾರಾಂತರದಲ್ಲಿ ನಿರೂಪಿಸಬೇಕಾದರೆ:
ಶ್ರೀ ಶಂಕರರು ಪ್ರವರ್ತಿಸಿದ ಸಾಧನೆಗಳಲ್ಲಿ ಪ್ರಮುಖವಾದದ್ದು ಹಿಂದೂಧರ್ಮದ ದೃಢೀಕರಣಕ್ಕೆ ಅವಶ್ಯವಿದ್ದ ಹಂದರದ ನಿರ್ಮಿತಿ. ಮೊದಲನೆಯದಾಗಿ ಬೌದ್ಧಿಕ ಸ್ತರದಲ್ಲಿ ವೇದಾಂತದರ್ಶನದ ತಳಹದಿಯನ್ನು ಪ್ರಖರವೂ ಪ್ರಸನ್ನ ಗಂಭೀರವೂ ಆದ ಭಾಷ್ಯರಚನೆಯ ಮೂಲಕ ಆಚಾರ್ಯರು ಪ್ರತಿಷ್ಠಿತಗೊಳಿಸಿದರು. ಎರಡನೆಯದಾಗಿ ವಿವಿಧ ಉಪಾಸನಾಧಾರೆಗಳ ನಡುವೆ ಸಮನ್ವಯವು ಆವಶ್ಯಕ ಮತ್ತು ಸಾಧ್ಯ ಎಂಬುದನ್ನು ಪ್ರಕಟೀಕರಿಸಿದರು. ಮೂರನೆಯದಾಗಿ ಎಲ್ಲರಿಗೂ ಅಂಗೀಕಾರ್ಯವಾದ ಪೂಜಾಪದ್ಧತಿಯನ್ನು ವಿನ್ಯಾಸಗೊಳಿಸಿದರು. ನಾಲ್ಕನೆಯದಾಗಿ ನಾಲ್ಕು ವೇದಗಳನ್ನು ಪ್ರತಿನಿಧಿಸುವಂತೆ ದೇಶದ ನಾಲ್ಕು ದಿಕ್ಕಿನ ಕ್ಷೇತ್ರಗಳಲ್ಲಿ ನಾಲ್ಕು ಆಮ್ನಾಯಪೀಠಗಳನ್ನೂ ಬೇರೆಡೆಗಳಲ್ಲಿಯೂ ಅನೇಕ ಮಠಗಳನ್ನೂ ಸ್ಥಾಪಿಸಿದರು. ಈ ವಿವಿಧಮುಖ ಪ್ರಯಾಸಗಳು ಶ್ರೀ ಶಂಕರರು ಅಭೂತಪೂರ್ವ ದಾರ್ಶನಿಕರಾಗಿದ್ದುದಲ್ಲದೆ ಅಸಮಾನ ಸಮಾಜಸಂಘಟಕರೂ ಆಗಿದ್ದರೆಂಬುದನ್ನು ಎತ್ತಿತೋರಿಸುತ್ತದೆ.
ರೂಢಿಗತವೆಂಬ ಕಾರಣದಿಂದ ನಿರಾಧಾರವಾದ ಆಚರಣೆಗಳು ಆದರಕ್ಕೆ ಅರ್ಹಗಳಲ್ಲ ಎಂಬ ಶ್ರೀ ಶಂಕರರ ನಿಲವು ಅವರು ಕುಷ್ಠರೋಗಿಗೆ ಬ್ರಹ್ಮಜ್ಞಾನ ಬೋಧಿಸಿದುದು ಮೊದಲಾದ ನಿಜಜೀವನ ಪ್ರಸಂಗಗಳಲ್ಲಿ ಪ್ರಕಾಶಗೊಂಡಿದೆ.
ಶ್ರೀ ಶಂಕರರಿಂದಾದ ಮೌಲ್ಯಪ್ರತಿಷ್ಠಾಪನ ಕಾರ್ಯದಿಂದಾಗಿಯೇ ಭಾರತದ ಸಂಸ್ಕøತಿಯ ಇತಿಹಾಸದಲ್ಲಿ ಶಂಕರೋತ್ತರಕಾಲಕ್ಕೆ ವೇದಾಂತಯುಗವೆಂಬ ಹೆಸರು ವಾಡಿಕೆಯಾಗಿರುವುದು. ಶಾಂಕರವೇದಾಂತವೇ ಭಾರತದ ಶ್ರೇಷ್ಠ ಹಾಗೂ ಪ್ರಾತಿನಿಧಿಕ ತತ್ತ್ವಜ್ಞಾನವಾಗಿದೆ – ಎಂದೂ ಪ್ರಾಜ್ಞ ಪರಾಮರ್ಶಕರನೇಕರ ಅಭಿಪ್ರಾಯವಾಗಿದೆ.
ಶಾಂಕರವೇದಾಂತದ ಪ್ರಜ್ವಲತೆ
ಶಾಂಕರವೇದಾಂತದಿಂದ ಉಪಲಬ್ಧವಾದ ಎರಡು ಪ್ರಮುಖ ಮೌಲ್ಯಗಳೆಂದರೆ: (1) ಭಗವಂತನ ಸರ್ವಾವಾಸ್ಯತ್ವದ ಕಾರಣದಿಂದಾಗಿ ಸರ್ವಸಮಾನತೆ; (2) ಜ್ಞಾನಪಾರಮ್ಯದ ಕಾರಣದಿಂದ ನಿರ್ಭೀತಿ. ಅದ್ವೈತವೇದಾಂತ ಮಾತ್ರ ದೇಶದ ಅಭ್ಯುದಯನೀತಿಗೆ ಎಂದರೆ ವಿಕಸನಪ್ರಕ್ರಿಯೆಗೆ ದೃಢವಾದ ತಳಹದಿಯನ್ನು ಒದಗಿಸಬಲ್ಲದು ಎಂದು ಜವಾಹರಲಾಲ್ ನೆಹರು ಅವರೂ ಒಮ್ಮೆ ಹೇಳಿದುದುಂಟು.
ಈ ತಥ್ಯದ ವ್ಯಾಪಕತೆಯನ್ನು ಊಹಿಸುವುದು ಕಷ್ಟವಲ್ಲ. ಅಧ್ಯಾತ್ಮ ಸಾಧನಸಂಪತ್ತುಗಳೆಂದು ಶ್ರೀ ಶಂಕರರು ಸೂತ್ರೀಕರಿಸಿದ ಶಮದಮಾದಿಗಳು ವ್ಯಾವಹಾರಿಕ ಜೀವನದ ದಕ್ಷತೆಗೂ ಪ್ರಯೋಜನಕರಗಳೇ ಆಗಿವೆ.
ಪರೋಪಕಾರ, ನಿಃಸ್ವಾರ್ಥ ಮೊದಲಾದ ಉದಾತ್ತ ಪ್ರವೃತ್ತಿಗಳಿಗೆ ನೆಲೆಯನ್ನು ಒದಗಿಸುವುದು ಸಮಾನತೆಯ ಅಧಿಷ್ಠಾನವಾದುದರಿಂದ ಉಪನಿಷದ್ಬೋಧಿತ ಆತ್ಮದ ಸರ್ವವ್ಯಾಪಕತೆಯೇ ಅತ್ಯಂತ ಮೌಲಿಕ ತತ್ತ್ವ- ಎಂದು ಹಲವರ ವಿಶ್ಲೇಷಣೆಯಿದೆ. ಭಾರತೀಯ ಸಂಸ್ಕೃತಿಗೂ ಶಾಸ್ತ್ರಪರಂಪರೆಗೂ ಶ್ರೀ ಶಂಕರರ ಬಹುಮುಖವೂ ಅಸಾಮಾನ್ಯವೂ ಆದ ಕೊಡುಗೆಯನ್ನು ಕುರಿತು ಯೋಚಿಸುವಾಗ “ಶ್ರೀ ಶಂಕರರಲ್ಲಿ ಬಾಹ್ಯ ಸಮರ್ಥನೆಯ ಆವಶ್ಯಕತೆಯೇ ಇಲ್ಲದ ಸ್ವಸಮರ್ಥಕ ಸಮಗ್ರತೆಯೂ ಮತ್ತು ಒಂದು ಕಲಾಕೃತಿಯೆಂದು ಭಾವಿಸಬಹುದಾದ ಸೌಂದರ್ಯಗುಣವೂ ಇವೆ” – ಎಂಬ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಉದ್ಗಾರವು ಯಥಾರ್ಥವೆನಿಸದಿರದು.