* ಶ್ರೀ ಸದ್ಗುರು ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು
ತಾಯಿಗಾಗಿ ಅಳುತ್ತಿರುವ ಮಗು ತಾಯಿಯನ್ನು ನೋಡುವವರೆಗೆ ಅಳುವುದನ್ನು ನಿಲ್ಲಿಸುವುದಿಲ್ಲ. ಅದರಂತೆ ಸಮಾಧಾನಕ್ಕಾಗಿ, ಆನಂದಕ್ಕಾಗಿ ಧಡಪಡಿಸುವ ನಮ್ಮ ಮನಸ್ಸು ಭಗವತ್ಪ್ರಾಪ್ತಿಯಾದ ಹೊರತು ಶಾಂತವಾಗಲು ಶಕ್ಯವಿಲ್ಲ. ಆದ್ದರಿಂದ ಪ್ರಪಂಚದ ಚಿಂತೆ ಮಾಡದೇ ಭಗವಂತನ ದರ್ಶನವು ಹೇಗಾದೀತು ಎಂಬ ಚಿಂತೆ ಮಾಡಿರಿ. ಭಗವಂತನ ಮೇಲೆ ಸಂಪೂರ್ಣವಾಗಿ ನಿಷ್ಠೆಯನ್ನಿಟ್ಟ ಹೊರತು ನಮ್ಮ ಪ್ರಪಂಚದ ಚಿಂತೆ ದೂರವಾಗುವುದಿಲ್ಲ. ಸಂಪೂರ್ಣ ಜಗತ್ತನ್ನೇ ಸಂರಕ್ಷಿಸುವ ಭಗವಂತನು ನನ್ನನ್ನು ಸಂರಕ್ಷಿಸಲಾರನೆ? ಪ್ರತಿಯೊಂದು ಘಟನೆಯು ಅವನ ಸತ್ತೆಯಿಂದಲೇ ನಡೆಯುತ್ತದೆ ಎಂದು ತಿಳಿಯಬೇಕು. ಅಂದರೆ ಪ್ರಪಂಚವು ಎಂದೂ ಬಾಧಕವಾಗುವುದಿಲ್ಲ. ಭಗವಂತನ ಮೇಲಿನ ನಿಷ್ಠೆಯನ್ನು ಮಾತ್ರ ಕೊನೆಯ ಶ್ವಾಸದವರೆಗೂ ಕಾಯ್ದುಕೊಳ್ಳಬೇಕು.
ಮಹಾಭಾರತದಲ್ಲಿ ಭೀಷ್ಮರು ಪಾಂಡವರನ್ನು ಸಂಹಾರ ಮಾಡುವ ಪ್ರತಿಜ್ಞೆ ಮಾಡಿದ್ದರು. ಅದು ‘ಭೀಷ್ಮಪ್ರತಿಜ್ಞೆ’ಯೇ ಆಗಿತ್ತು. ಅಂದ ಮೇಲೆ ಅದು ಸುಳ್ಳಾಗಲು ಹೇಗೆ ಸಾಧ್ಯ? ಪಾಂಡವರೆಲ್ಲರೂ ಚಿಂತಾಗ್ರಸ್ತರಾದರು. ಆದರೆ ದ್ರೌಪದಿಯ ನಿಷ್ಠೆ ಮಾತ್ರ ವಿಲಕ್ಷಣವಾಗಿತ್ತು. ಅವಳು “ನಾವು ಈ ಮಾತನ್ನು ಶ್ರೀಕೃಷ್ಣನಲ್ಲಿ ಕೇಳೋಣ” ಎಂದಳು. ಹಾಗೂ ಅವಳು ಎಲ್ಲ ವೃತ್ತಾಂತವನ್ನೂ ಶ್ರೀಕೃಷ್ಣನಿಗೆ ತಿಳಿಯಪಡಿಸಿದಳು. ಆಗ ಶ್ರೀಕೃಷ್ಣನು ‘ಭೀಷ್ಮರ ಪ್ರತಿಜ್ಞೆಯು ಸುಳ್ಳಾಗಲು ಹೇಗೆ ಶಕ್ಯ? ಆದರೂ ನಾವು ಪ್ರಯತ್ನ ಮಾಡಿ ನೋಡೋಣ’ ಎಂದನು; ಹಾಗೂ ದ್ರೌಪದಿಗೆ ‘ದ್ರೌಪದಿ, ನೀನು ರಾತ್ರಿಯ ಸಮಯದಲ್ಲಿ ಭೀಷ್ಮಾಚಾರ್ಯರ ಆಶ್ರಮಕ್ಕೆ ಹೋಗು. ಅಲ್ಲಿ ಸಂನ್ಯಾಸಿಗಳಿಗೆ ಹಾಗೂ ಸ್ತ್ರೀಯರಿಗೆ ಯಾವುದೇ ನಿರ್ಬಂಧವಿಲ್ಲ. ನಾನು ನಿನ್ನೊಡನೆ ಆಶ್ರಮದವರೆಗೆ ಬರುತ್ತೇನೆ’ ಅಂದನು. ಅನಂತರ ಶ್ರೀಕೃಷ್ಣನು ದ್ರೌಪದಿಯನ್ನು ಕರೆದುಕೊಂಡು ಭೀಷ್ಮಾಚಾರ್ಯರ ಆಶ್ರಮದವರೆಗೆ ಹೋದನು ಹಾಗೂ ತಾನು ಹೊರಗೇ ನಿಂತು ಅವಳನ್ನು ಒಳಗೆ ಕಳಿಸುತ್ತ, ‘ಈಗ ಭೀಷ್ಮಾಚಾರ್ಯರು ಮಲಗಿರುತ್ತಾರೆ, ನೀನು ನಿನ್ನ ಬಳೆಗಳ ಸಪ್ಪಳ ಮಾಡುತ್ತ ನಮಸ್ಕರಿಸು’ ಎಂದು ಹೇಳಿದನು. ಅದರಂತೆ ದ್ರೌಪದಿಯು ಒಳಗೆ ಹೋಗಿ ತನ್ನ ಬಳೆಗಳ ಸಪ್ಪಳ ಮಾಡುತ್ತ ನಮಸ್ಕರಿಸಿದಳು. ಆಗ ಭೀಷ್ಮಾಚಾರ್ಯರು ‘ಅಖಂಡ ಸೌಭಾಗ್ಯವತೀ ಭವ’ ಎಂದು ಆಶೀರ್ವಾದ ಮಾಡಿದರು. ಆಮೇಲೆ ಅವರು ಕಣ್ಣು ತೆರೆದು ನೋಡಿದರೆ ಎದುರಿಗೆ ದ್ರೌಪದಿ! ಆಗ ಅವರು ‘ದ್ರೌಪದಿ, ಇದು ನಿಶ್ಚಿತವಾಗಿಯೂ ನಿನ್ನ ಬುದ್ಧಿಯ ಕಾರ್ಯವಲ್ಲ. ನಿನ್ನ ಜೊತೆಗೆ ಯಾರು ಬಂದಿರುತ್ತಾರೆ ಹೇಳು’ ಎಂದು ಕೇಳಿದರು. ಅದಕ್ಕೆ ಅವಳು ‘ನನ್ನ ಜೊತೆಗೆ ಒಬ್ಬ ಮನುಷ್ಯನು ಬಂದಿರುತ್ತಾನೆ’ ಎನ್ನಲು ಭೀಷ್ಮಾಚಾರ್ಯರು ಹೊರಗೆ ಬಂದು ನೋಡಿದರು. ಅಲ್ಲಿ ಶ್ರೀಕೃಷ್ಣನೇ ನಿಂತಿರುವುದನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. ಮುಂದೆ ನಡೆದ ಘಟನೆಯು ಸರ್ವವಿದಿತವೇ ಇದೆ. ಆದ್ದರಿಂದಲೇ ಭಗವಂತನ ಮೇಲೆ ಪರಿಪೂರ್ಣವಾದ ನಿಷ್ಠೆಯನ್ನಿಡಬೇಕೆಂದು ನಾನು ನಿಮಗೆ ಹೇಳುತ್ತೇನೆ.
[ಶ್ರೀ ಸದ್ಗುರು ಮಹಾರಾಜರ ಪ್ರವಚನದಿಂದ. ಅನುವಾದ: ಶ್ರೀ ದತ್ತಾತ್ರೇಯ ಅವಧೂತರು. ಸೌಜನ್ಯ: ಚೈತನ್ಯಾಶ್ರಮ, ಹೆಬ್ಬಳ್ಳಿ.]