ಇಂದು ಕಾರಜ್ಜನ ಮುಂದೆ ಹೊಲಿಯಲಿಕ್ಕೆ ನಾಕಾರು ಹೊಸ ಮೆಟ್ಟುಗಳಿಗೆ ಬೇಕಾದ ಸಾಮಗ್ರಿಗಳು ಇದ್ದರೂ, ಒಂದಿಬ್ಬರು ತಮ್ಮ ಕಿತ್ತೋದ ಚಪ್ಪಲಿಗಳನ್ನು ರಿಪೇರಿಗೆಂದು ಅದಾಗಲೆ ತಂದುಬಿಟ್ಟಿದ್ದರೂ ಕಾರಜ್ಜನ ಕೈ ಎಂದಿನಂತೆ ಅಷ್ಟು ವೇಗವಾಗಿ ಓಡುತ್ತಿರಲಿಲ್ಲ. ಅವನ ತಲೆಯಲ್ಲಿ ಆತಂಕದ ಬೇನೆಯೊಂದು ಹೊಕ್ಕಿದ್ದು ತನ್ನ ಜಂಘಾಬಲವನ್ನೆ ನಡುಗಿಸಿಹಾಕಿತ್ತು. ಹೆಬ್ಬಂಡೆಯಂತೆ ಕಾರಜ್ಜ ನಿಶ್ಚಲವಾಗಿ ಕೂತಿದ್ದ.
ಕಾರಜ್ಜ ತನಗೆ ಗೊತ್ತಿದ್ದಂತೆ ತನ್ನ ಅಪ್ಪ ಬಸಜ್ಜನ ಕಾಲದಿಂದಲೂ ಇದೇ ಜಾಗದಲ್ಲಿ ನೆಲೆ ಊರಿದ್ದು, ಬಾಲ್ಯದಿಂದಲೂ ಇದೇ ಕಾಯಕ ಮಾಡಿಕೊಂಡು ಬಂದಿದ್ದ. ಸ್ಕೂಲ್ ಮೆಟ್ಟಿಲು ಹತ್ತದ ಕಾರಜ್ಜ ತನ್ನ ಆಡುವ ವಯಸ್ಸಿನಲ್ಲೇ ಅಪ್ಪನನ್ನು ಹಿಂಬಾಲಿಸಿ ಬಂದು ಇಲ್ಲಿ ಅಪ್ಪನೊಂದಿಗೆ ಕೂತು ಅಪ್ಪ ಅಳತೆಗೆ ತಕ್ಕಂತೆ ಕರೆಬಾನಿಯಲ್ಲಿ ನೆನೆಹಾಕಿದ್ದ ಚರ್ಮವನ್ನು ರೆಮ್ಕೆಯಿಂದ ಆಕಾರಕ್ಕೆ ಕುಯ್ಯುತ್ತಿದ್ದರೆ ಮಗ ‘ಕಾರ’ ಅಪ್ಪನಿಗೆ ಬೇಕಾದ ನೀರು ನಿಡಿ ಬೀಡಿ ಬೆಂಕಿಪಟ್ಣ ತಂದುಕೊಡ್ತಿದ್ದ. ಒಂದಿನ ಬಸಜ್ಜ ತನ್ನ ಕಾಯಕ ಮಾಡುತ್ತಿರುವಾಗಲೇ ಎದೆಬಿಗಿತ ಬಂದು ಕೂತಿದ್ದಲ್ಲೆ ಕುಸಿದು ಜೀವಬಿಟ್ಟ ನಂತರ ಅಷ್ಟೊತ್ತಿಗಾಗಲೆ ಕುಲಕಸುಬನ್ನು ಒಂಚೂರು ಕೈಗತ್ತಿಸ್ಕಂಡಿದ್ದ ‘ಕಾರ’ ಅಪ್ಪನ ಆಸೆಯಂತೆ ಅದನ್ನೆ ಮುಂದುವರಿಸಿದ್ದ.
ಈ ರೀತಿ ಆಲದಮರದಡಿಯ ಕಾರಜ್ಜನ ಕಾಯಕಕ್ಕೆ ತಲೆಮಾರುಗಳಷ್ಟು ಹಿರಿತನವಿದೆ. ಕಾರಜ್ಜನ ಚರ್ಮಕಸುಬಿನ ಪೆಟ್ಟಿಗೆಅಂಗಡಿ ಪಕ್ಕದಲ್ಲೆ ಸುಬ್ಬಣ್ಣನ ‘ಸ್ಟೈಲಿಷ್ ಹೇರ್ ಡ್ರೆಸಸ್’ ಕೂಡ ಈಗ ಇದ್ದು, ಅದರ ಮುಖ ರೋಡಿಗಿಲ್ಲದೆ ಹಿಂದಕ್ಕೆ ತಿರುಗಿಕೊಂಡಿದೆ. ಸುಬ್ಬಣ್ಣನ ಈಗಿನ ಹೇಳಲಿಕ್ಕೆ ಬಾರದ ಆಧುನಿಕ ಹೆಸರಿನ ಕಟಿಂಗ್ ಶಾಪ್ ಕೂಡ ಇಂದು ನೆನ್ನೆಯದಲ್ಲ.. ಸುಬ್ಬಣ್ಣನ ಅಪ್ಪ ‘ಅಪ್ಪಣ್ಣ’ ತನ್ನ ಚೌರದ ಪೆಟ್ಟಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಊರೂರ ಮೇಲೋಗಿ ಚೌರ ಮಾಡಿ ಬರುತ್ತಿದ್ದನಾದರೂ ತನ್ನ ಇಳಿ ವಯಸ್ಸಿನಲ್ಲಿ ಎಲ್ಲಾರ ಒಂದು ಕಡೆ ನೆಲೆಯಾಗೋಣ ಎಂದು ಬಸಜ್ಜನಿದ್ದ ಚಪ್ಪಲಿ ಅಂಗಡಿ ಪಕ್ಕದಲ್ಲಿ ತನ್ನದೂ ಒಂದು ಹಳೆ ಪೆಟ್ಟಿಗೆ ನಿಲ್ಸಿ ಕನ್ನಡಿ ನೇತಾಕಿ ಊರ ಜನರ ಕ್ಷೌರ ಮಾಡುತ್ತಿದ್ದ. ಅಂದ ಹಾಗೆ ಆ ಕಾಲಕ್ಕೆ ನಗರದ ಹೃದಯ ಭಾಗವಾದ ಸರ್ಕಲ್ನಲ್ಲಿದ್ದುದು ಇವೆರೆಡೇ ಪುರಾತನ ಅಂಗಡಿಗಳು. ಇವರ ಅಂಗಡಿ ಮುಂದೆ ಹಾದುಹೋಗಿದ್ದ ರೋಡೆ ಆನಂತರ ಬಿ.ಹೆಚ್. ರೋಡ್ ಆದುದು.
ಬಸಜ್ಜ ಮತ್ತು ಅಪ್ಪಣ್ಣ ಇದೇ ಜಾಗವನ್ನು ತಮ್ಮ ಕಾಯಕದ ಕೇಂದ್ರವಾಗಿಸಿಕೊಳ್ಳಲೂ ಒಂದು ಕಾರಣವಿದೆ. ಈ ವೃತ್ತಿಗಳು ಹೇಳಿ ಕೇಳಿ ನೆರಳನ್ನು ಬಯಸುವ ಮತ್ತು ಅಷ್ಟೆ ಜನಸಂದಣಿ ಬೇಡುವ ವೃತ್ತಿಗಳು. ಸ್ವಂತ ಸೂರು ಹೊಂದಿರದ ಬಸಜ್ಜ ಬೀದಿಯಲ್ಲಿ ಬೆಳಗ್ಗಿಂದ ಸಾಯಂಕಾಲದವರೆಗೆ ಕೂತು ಕಾಯಕ ಮಾಡಬೇಕಿದ್ದುದರಿಂದ ನೆರಳಿರುವ ಜಾಗವೇ ಆಗಬೇಕು. ಹಾಗಾಗಿ ಇವೆರೆಡೂ ಆವಶ್ಯಕತೆಯನ್ನು ಪೂರೈಸಬಹುದಾದ ಏಕೈಕ ಜಾಗ ಊರ ಮಧ್ಯದಲ್ಲಿರುವ ಆಲದಮರದ ತಟ. ಅದರ ಬುಡದಲ್ಲೆ ತನ್ನ ಪೂರ್ವಿಕ ಹರಳಯ್ಯನ ಕ್ಯಾಲೆಂಡರ್ ನೇತಾಕಿಕೊಂಡು ಅದರಡಿಯಲ್ಲಿ ಕಾಯಕ ಮಾಡುತ್ತಿದ್ದ. ಕಾರಜ್ಜ ಇಲ್ಲಿಂದ ಎದ್ದೋದ ನಂತರವೂ ಅಲ್ಲಿ ಕತ್ತರಿಸಿ ಬಿದ್ದಿರುತ್ತಿದ್ದ ಚರ್ಮದ, ಟಯರ್ನ ಸಣ್ಣ ಸಣ್ಣ ಪೀಸುಗಳು, ನೀರು ತುಂಬಿದ್ದ ಕರೆಬಾನಿ, ಮಸೆಯಕಲ್ಲು ಇವೆಲ್ಲವೂ ಇದು ಕಾಯಕದ ಜಾಗ ಎಂದು ಯಾರಿಗಾದರೂ ಗೊತ್ತುಮಾಡಿಸುತ್ತಿತ್ತು.
ಆಗಿನ್ನು ಆಲದಮರ ಇಷ್ಟು ಬೃಹದಾಕಾರವಾಗಿ ಬೆಳೆಯದಿದ್ದರೂ ತನ್ನ ಪಡ್ಡೆ ವಯಸ್ಸಿನಲ್ಲೆ ಅತ್ತಿತ್ತ ತಿರುಗಾಡಿ ಸುಸ್ತಾಗಿ ಬಂದವರಿಗೆ ವಿಶ್ರಾಂತಿಗೆ ನೆರಳನ್ನೂ ಇನ್ನೂ ಮೀರಿ ಮಲಗಲು ಕಾಲ್ಚಾಚಿದವರಿಗೆ ತನ್ನ ಬೇರನ್ನು ತಲೆದಿಂಬಾಗಿಯೂ ಕೊಡುತ್ತಿತ್ತು. ಆಗಿನ ಕಾಲದಲ್ಲಿ ಈ ಮರದ ಮುಂದೆಯೇ ಒಂದು ಮಣ್ಣ ದಾರಿ ಇತ್ತ ಹಿರಿಯೂರು ಕಡೆಗೂ ಅತ್ತ ತಿಪಟೂರು ಕಡೆಗೂ ಹೋಗಿದ್ದರೂ ಈಗಿರುವ ಟಾರ್ ರೋಡ್ ಆಗಿ ದೊಡ್ಡ ದೊಡ್ಡ ವಾಹನಗಳು ಹೈಸ್ಪೀಡ್ನಲ್ಲಿ ಹೋಗುವಂತಾದದ್ದು ತುಂಬ ತಡವಾಗಿಯೇ. ಈ ರೋಡಿನ ಅಕ್ಕಪಕ್ಕದಲ್ಲಿ ಮೊದಲಿಗೆ ಹೂವುಹಣ್ಣಿನ ನರಸಮ್ಮನ, ಬೂತಮ್ಮಜ್ಜಿಯ ಎಲೆ ಅಡಿಕೆಯ, ಶೆಟ್ಟರ ಬಳೆ ಅಂಗಡಿ, ಅಫ್ಜರಣ್ಣನ ಸೈಕಲ್ ಶಾಪು, ರಾಜಣ್ಣನ ಇಸ್ತ್ರಿ ಅಂಗಡಿ, ಕುಮಾರನ ಕೋಳಿ ಅಂಗಡಿ, ಕಬ್ಬಿಣ ಕೆಚ್ಚ ಕುಲಿಮೆ, ಶಂಕರಣ್ಣನ ಮೋಟರ್ ರಿವೈಂಡಿಂಗ್ ಅಂಗಡಿ, ಬಟ್ಟೆ ಹೊಲಿಯುವ ಟೈಲರ್ ಅಂಗಡಿ, ಅಲ್ಲೊಂದ್ ಇಲ್ಲೊಂದ್ ಟೀ ಕಾಫಿ ಇಂಥ ಸಣ್ಣ ಪುಟ್ಟ ಅಂಗಡಿಗಳಿದ್ದವಾದರೂ ಅವುಗಳ ಮಧ್ಯದಲ್ಲೆ ಒಂದೊಂದು ಶೆಟ್ಟರ ದಿನಸಿ ಅಂಗಡಿಗಳೂ ಇದ್ದು ಬಹುತೇಕ ಅವು ಸಹ ಪೆಟ್ಟಿಗೆ ಅಂಗಡಿಗಳಲ್ಲೆ ನಡೆಯುತ್ತಿದ್ದವು.
ಇದ್ದ ರೋಡು ಇದ್ದ ಹಾಗೇ ಇರದೆ ವಯಸ್ಸಾದಂತೆ, ಜನ ಬೆಳೆದಂತೆ ಅವು ಸಹ ಎಷ್ಟೋ ಸಲ ಸರ್ಕಾರದ ವತಿಯಿಂದ ಹಿಗ್ಗಬೇಕಾದ ಸಂದರ್ಭ ಬಂದಾಗಲೆಲ್ಲ ಅಲ್ಲಿದ್ದ ಪೆಟ್ಟಿಗೆ ಅಂಗಡಿಗಳೂ ಸಹ ಚೂರು ಚೂರೆ ಹಿಂದಕ್ಕೆ ಜರುಗುತ್ತಿದ್ದವು. ರೋಡು ಎಷ್ಟೇ ಹಿಗ್ಗಿದರೂ ಆಲದಮರ ಇರುವಷ್ಟು ಹಿಂದಕ್ಕೆ ಬರಲಾರದು ಎಂಬ ನಂಬಿಕೆ ಅಲ್ಲಿನ ಬಹುತೇಕ ವ್ಯಾಪಾರಸ್ಥರದ್ದಾಗಿತ್ತು. ಅದೂ ಅಲ್ಲದೆ ಆಲದಮರ ತನ್ನ ಇರುವಿಕೆಯಿಂದಲೇ ಎಡಭಾಗದ ಬಿ.ಹೆಚ್. ರೋಡನ್ನು ಹೊರತುಪಡಿಸಿ ಬಲಭಾಗದಲ್ಲೂ ಸಣ್ಣದೊಂದು ಅಡ್ಡದಾರಿಗೆ ಕಾರಣವಾಗಿತ್ತು. ಆ ದಾರಿಯುದ್ದಕ್ಕು ಪೂರ್ವ ದಿಕ್ಕಿಗೆ ಮಕ ಬರುವಂತೆ ಅಂಗಡಿಗಳು ಆಗಿದ್ದವು.
ಕಾರಜ್ಜ ಮುಂದಕ್ಕೆ ಬಗ್ಗಿ ಕೆಲ್ಸ ಮಾಡಿ ಸಾಕಾದಾಗ ಆ ಆಲದಮರದ ಬೇರಿಗೆ ತನ್ನ ಸೊಂಟ ಕೊಟ್ಟುಕೊಂಡು ಹಿಂದಕ್ಕೆ ವಾಲಿ ಮೈನಿಗರಿಸಿಕೊಂಡು ಮತ್ತೆ ಬಗ್ಗಿ ಕಾಯಕ ಮುಂದುವರಿಸುವನು. ಹೀಗೆ ಇದ್ದಾಗ ಈ ರೋಡಿಗೆ ಮೊದಲೆಂಬಂತೆ ಆ ಕೊನೆಯ ತುದಿಯಲ್ಲೊಂದು ಸಿಮೆಂಟು ಇಟ್ಟಿಗೆ ಕಟ್ಟಡದ ಅಂಗಡಿ ಮಳಿಗೆಯೊಂದು ಇದ್ದಕ್ಕಿದ್ದಂತೆ ನಿರ್ಮಾಣವಾಗತೊಡಗಿತು. ಅದರ ಮಾಲೀಕರು ಈ ಊರಿನವರಲ್ಲದೆ ಉತ್ತರ ದಿಕ್ಕಿನಿಂದ ಬಂದವರಾಗಿದ್ದು ಬೇರೆ ಯಾವುದೋ ಭಾಷೆ ಮಾತಾಡುತ್ತಿದ್ದರು. ಮೂಲೆ ಅಂಗಡಿ ಸೈಕಲ್ ಶಾಪ್ ಸಾಬ್ರು ತಾನು ಪಂಚರ್ ಹಾಕುತ್ತಿದ್ದ ಆ ಜಾಗವನ್ನು ಬಿಟ್ಟುಕೊಟ್ಟು ಕಟ್ಟಡ ನಿರ್ಮಿಸಿಕೊಳ್ಳಲು ಅವಕಾಶ ಮಾಡಿದ್ದನು. ಎಲ್ಲರಿಗೂ ತಿಪಟೂರಿನಂಥ ದೊಡ್ಡೂರಿನಲ್ಲಿ ಇರಬಹುದಾದ ಕಟ್ಟಡದ ಅಂಗಡಿ ನಮ್ಮೂರಲ್ಲೂ ಆಗುತ್ತಿದೆಯಲ್ಲ ಎಂಬ ಹೆಮ್ಮೆ! ನೋಡು ನೋಡುತ್ತಿದ್ದಂತೆಯೇ ಅಲ್ಲೊಂದು ಸುಸಜ್ಜಿತವಾದ ಎರಡು ಬಾಗಿಲಿರುವ ಅಂಗಡಿಯೊಂದು ಓಪನ್ ಆಗಿಯೇ ಬಿಟ್ಟಿತು. ಒಂದು ಆ ಊರಿಗೆ ಮೊದಲೆಂಬಂತೆ ಬಂದ ‘ರಜತ ಕ್ಲಾತ್ ಸೆಂಟರ್’ ಆದರೆ, ಇನ್ನೊಂದು ‘ದೀಪ ಜುವೆಲರಿ’ ಶಾಪ್. ಆ ಎರಡೂ ಶಾಪ್ನ ಓನರ್ ಬೇರೆ ಬೇರೆಯಂತೆ ಕಂಡರೂ ಭಾಷೆ ಬಣ್ಣದಲ್ಲಿ ಒಂದೇ ಆಗಿ ಕಾಣುತ್ತಿದ್ದರು. ಅಲ್ಲಿನ ಹೆಂಗಸರು ಹೊಕ್ಕುಳು ಕಾಣುವಂತೆ ಸೀರೆ ಕಟ್ಟುತ್ತಿದ್ದುದು ಇಲ್ಲಿನ ಸ್ಥಳೀಯರಿಗೆ ವಿಶೇಷವಾಗಿ ಕಾಣುತ್ತಿತ್ತು. ಬೇರೆಡೆಯಿಂದ ಬಂದಿದ್ದ ಅವರು ಈ ಊರಿನ ಶ್ರೀಮಂತರ ಮನೆಯೊಂದನ್ನು ಹೆಚ್ಚಿನ ಬಾಡಿಗೆ ತೆತ್ತು ಹಿಡಿದಿದ್ದರು. ಈ ಊರಿನ ಸುತ್ತಮುತ್ತಲವರು ಮದುವೆ ನಾಮಕರಣಕ್ಕೆ ದೂರದ ದೊಡ್ಡ ಊರುಗಳಿಗೆ ಬಟ್ಟೆ ತೆಗೆಯಲು, ಒಡವೆ ಕೊಳ್ಳಲು ಹೋಗುವುದು ಸಣ್ಣಮಟ್ಟಿಗೆ ತಪ್ಪಿ ಇಲ್ಲೆ ಆಗುವಂತಾಯಿತು. ದೊಡ್ಡ ವಸಿಗೆಯವರು ಮಾತ್ರ ತಿಪಟೂರು ತುಮಕೂರಿಗೇ ಹೋಗಿ ಬರುತ್ತಿದ್ದರು. ಕೆಲವೇ ತಿಂಗಳಲ್ಲಿ ಅಂಗಡಿ ಹಿಂಭಾಗದ್ದೆ ಸೈಟನ್ನು ಖರೀದಿಸಿ ಸುಸಜ್ಜಿತವಾದ ಮಹಡಿ ಮನೆಯೊಂದನ್ನು ಕಟ್ಟಿ ಯಾರೂ ಒಳ ಸುಳಿಯದಂತೆ ಮತ್ತು ಇವರ ಚಟುವಟಿಕೆಗಳು ಹೊರಗಿನವರಿಗೆ ಕಾಣದಂತೆ ಸುತ್ತಲೂ ಗ್ರಿಲ್ ಹಾಕಿಸಿದರು.
ಒಂದೆರಡು ವರ್ಷ ಕಳೆಯುತ್ತಿದ್ದಂತೆಯೇ ನಿಧಾನಕ್ಕೆ ಒಂದೊಂದೆ ಅವರ ಬಂಧು ಬಳಗದ ಕುಟುಂಬಗಳು ಉತ್ತರದಿಂದ ಇತ್ತ ಬರಲಾಗಿ ಎರಡಿದ್ದ ಮಳಿಗೆಗಳು ನಾಲ್ಕಾಗಿ, ಎಂಟಾಗಿ, ಹತ್ತಾಗಲು ಹೆಚ್ಚೇನು ಸಮಯ ಹಿಡಿಯಲಿಲ್ಲ. ಅವು ನಾಕಾರು ಜುವೆಲೆರಿ ಶಾಪುಗಳಾಗಿಯೂ, ಹತ್ತಾರು ಕ್ಲಾತ್ಸೆಂಟರ್ ಆಗಿಯೂ, ಫ್ಯಾನ್ಸಿ ಸ್ಟೋರ್ಗಳಾಗಿಯೂ, ಎಲೆಕ್ಟ್ರಿಕ್ ವಸ್ತುಗಳ ಅಂಗಡಿಯಾಗಿಯೂ ವಿಸ್ತರಿಸಿಕೊಂಡು ಬಿ.ಹೆಚ್. ರಸ್ತೆಯ ಇಕ್ಕೆಲಗಳನ್ನು ಆವರಿಸಿಕೊಂಡವು. ಮೊದಲಿದ್ದ ಕೋಳಿ ಅಂಗಡಿ, ಎಲೆ ಅಡಿಕೆ ಅಂಗಡಿಗಳು ಕಣ್ಣಿಗೆ ಕಾಣದಂತಾದರೆ ಶಂಕರಣ್ಣನ ಮೋಟರ್ ರೀವೈಂಡಿಂಗ್ ಅಂಗಡಿ ಬಾಡಿಗೆ ಕಟ್ಟಲಾಗದೆ ಇತ್ತ ಊರೊಳಗಿನ ವಾಸವಿದ್ದ ಮನೆಗೇ ವಾಪಾಸ್ ಬಂದಿತು. ಶೆಟ್ಟರ ದಿನಸೀ ಅಂಗಡಿಗಳಲ್ಲಿ ಕೆಲವು ಮಾತ್ರ ಆ ಶೇಟುಗಳ ಅಂಗಡಿಗಳ ಸಂದಿಗಳಲ್ಲಿ ಸಣ್ಣಗೆ ಇದ್ದಂತೆಯೂ ಇಲ್ಲದಂತೆಯೂ ಅಡಗಿಕೊಂಡಿದ್ದವಾದರೂ, ಬಹುತೇಕ ಅಂಗಡಿಗಳು ದಾರಿ ಬದಲಾಯಿಸಿ ತಾವಿರುವ ಕಮ್ಮಿ ಜನಸಂದಣಿಯ ಏರಿಯಾಕ್ಕೆ ವಾಪಾಸ್ ಆದವು. ಹೀಗೆ ಕೆಲವೇ ವರ್ಷಗಳಲ್ಲಿ ಆ ಹೋಬಳೀ ಕೇಂದ್ರದ ಚಿತ್ರಣವೇ ಬದಲಾಗಿ ತಾಲ್ಲೂಕು ಕೇಂದ್ರವಾಗುವ ಮಟ್ಟಕ್ಕೆ ಬೆಳೆದು ನಿಂತಿತು. ಅಂತೆಯೇ ಇಲ್ಲಿನ ಹಬ್ಬ ಹರಿದಿನಗಳೂ ಸಹ ತನ್ನ ರೂಪ ಲಾವಣ್ಯ ಬದಲಾಯಿಸಿಕೊಂಡವು.
ಎಂದೂ ಇಲ್ಲದ ವರಮಹಾಲಕ್ಷ್ಮೀ, ದೀಪಾವಳಿಗಳು ತನ್ನ ವಿಜೃಂಭಣೆಯಿಂದ ನಗರವನ್ನು ಆಳತೊಡಗಿದವು. ಒಮ್ಮೆ ದೀಪಾವಳಿಯಲ್ಲಿ ಚೌಧರಿ ಸಿಲ್ಕ್ ಸೆಂಟರ್ನ ಹುಡುಗರು ತಮ್ಮ ಮಹಡಿ ಮೇಲೆ ಉಡಾಯಿಸಿದ ಬಾಣ ಸೀದ ಬಂದು ಈ ಊರ ಕೊನೆ ಬೀದಿಯ ಹಂದಿಜೋಗರ ಸಿದ್ದಣ್ಣನ ಹಂದಿಗಳಿದ್ದ ಗರಿಬಿಟ್ಟಿದ್ದ ಗೂಡಿನ ಮೇಲೆ ನಾಟಲಾಗಿ, ಅದು ಕ್ಷಣ ಮಾತ್ರದಲ್ಲಿ ಉರಿದು ಭಸ್ಮವಾದಾಗ ನ್ಯಾಯ ಬೇಕೆಂದು ಹಂದಿಜೋಗರ ಹುಳಿಯಾರು ರಾಜಪ್ಪನವರ ನೇತೃತ್ವದಲ್ಲಿ ಕಂಕುಳಲ್ಲಿ ಮಗ ಇರಿಕ್ಕೆಂಡು ಏರ್ಪಿನ್ನ ಬಾಚಾಣ್ಗೆ ಮಾರರೆಲ್ಲ ಪೊಲೀಸ್ಟೇಷನ್ನಿಗೆ ಬಂದಾಗ.. ಹಬ್ಬ ಹರಿದಿನಗಳಿಗೆ ಬಟ್ಟೆ ತಗಣಕೆ ಹೆಂಡ್ತಿ ಮಕ್ಳುನ್ನ ಕರ್ಕಂಡೋಗಿ ಚೌಧರಿ ಸಿಲ್ಕ್ ಸೆಂಟರ್ನಲ್ಲಿ ಸಾಲದ ಅಕೌಂಟ್ ಹೊಂದಿದ್ದ ದಫೇದರ್ ರಾಮಪ್ಪ ಒಂದೇ ಮಾತಂದಿದ್ದು ‘ಬೋಳಿ ಮಕ್ಳ, ನೀವು ಎಲ್ಲೆಲ್ಲಿ ಏನೇನ್ ಕಳ್ತನ ಮಾಡಿದಿರ ಅಂತ ಗೊತ್ತು, ನಿಮ್ಮೆಸ್ರಗೆ ಓಟರ್, ಆದರ್ ಕಾರ್ಡ್ ಐತೇನ್ರೊ ಹಂದಿ ಸಾಕಕೆ? ನಾಳೆ ಮುನ್ಸಿಪಾಲ್ಟಿರ್ಗೆ ಹೇಳಿ ನಿಮ್ಮ ಹಂದಿನೆಲ್ಲ ಹಿಡ್ಸಾಕ್ಬಿಡ್ತಿನಿ’. ಈ ಮಾತಿನಿಂದ ಹೆದರಿ ಬೆಪ್ಪಾದ ಅಲೆಮಾರಿಗಳು ರಾಜಣ್ಣ ಎಷ್ಟೇಳಿರು ಕೇಳ್ದಂಗೆ ಬರಬರನೆ ಸಂದಿಗೊಂದಿಲಾಸಿ ಹಾವೋದಂಗೋಗಿ ತಮ್ಮ ಕೇರಿ ಸೇರ್ಕೆಂಡ್ರು. ಹೀಗೆ ಹೊರಗಿನಿಂದ ಬಂದವರ ವ್ಯಾಪಾರದ ನಿಪುಣತೆಯಿಂದ ಈ ಹಿಂದೆ ಇದ್ದ ಸ್ಥಳೀಯ ವ್ಯಾಪಾರಸ್ತರು ನೆಲೆ ನಿಲ್ಲಲಾಗದೆ ಶಸ್ತ್ರಾಸ್ತ ತ್ಯಾಗಮಾಡಿ ಹಿಂತಿರುಗುವುದರ ಜೊತೆಗೆ ಆರ್ಥಿಕವಾಗಷ್ಟೆ ಅಲ್ಲದೆ ಸಾಂಸ್ಕೃತಿಕವಾಗಿಯೂ ತಮ್ಮನ್ನು ತಾವು ಒಪ್ಪಿಸಿಕೊಂಡರು.
ಈ ಉತ್ತರೂರಿನವರ ಮಿತಿಮೀರಿದ ವ್ಯವಹಾರಜ್ಞಾನದಿಂದ ಬೇರೆ ಎಲ್ಲರಿಗೂ ತೊಂದರೆಯಾದರೂ, ಆಲದಮರದ ಬುಡದ ಕಾರಜ್ಜನಿಗೂ, ಕಟಿಂಗ್ ಶಾಪ್ ಸುಬ್ಬಣ್ಣನಿಗೂ ಇದುವರೆಗೂ ಅಂಥ ಸಂಚಕಾರ ಬಂದಿರಲಿಲ್ಲ.
ಯಾಕೆಂದರೆ ಅವರಿದ್ದುದು ಮರದ ಬುಡದಲ್ಲಿ. ಮರ ತುಂಬ ಹಿಂದಿನಿಂದಲೂ ಇದ್ದುದರಿಂದ ಅದರ ಅಕ್ಕಪಕ್ಕದ ಜಾಗವೆಲ್ಲ ಖಾಸಗಿಯವರ ಸ್ವತ್ತಾದರೂ, ಮರವಿದ್ದಷ್ಟಗಲ ಸರ್ಕಾರಿ ಜಾಗವಾಗಿಯೇ ಉಳಿದು ಅದರ ಬಲಪಕ್ಕದಲ್ಲೊಂದು ಮರದ ಇರುವಿಕೆಯಿಂದಲೇ ಸೃಷ್ಟಿಯಾದ ರೋಡು ಸೀದ ಪೊಲೀಸ್ ಸ್ಟೇಷನ್ಗೆ ದಾರಿಯಾಗಿತ್ತು. ಪೊಲೀಸ್ನವರ ಜೀಪೆಂದೆರೆ ಯಾವಾಗಂದರೆ ಆವಾಗ ಯಾವ ಅಡೆತಡೆಯೂ ಇಲ್ಲದೆ ಜೋರಾಗಿ ಹೋಗಬೇಕಲ್ಲವೆ? ಅದಕ್ಕಾಗಿ ಸ್ವಲ್ಪ ವಿಶಾಲವಾಗಿತ್ತು. ಕಾರಜ್ಜ ಮತ್ತು ಸುಬ್ಬಣ್ಣ ತಾವಿರುವ ಜಾಗವನ್ನು ಇತರರಂತೆ ತಮ್ಮ ಕಷ್ಟಕ್ಕೆ ಮಾರಿಕೊಂಡೋಗೋಣವೆಂದರೆ ಈ ಜಾಗ ಹೇಳಿ ಕೇಳಿ ಆಲದಮರದ ಬುಡ. ಸರ್ಕಾರಿ ಜಾಗ. ಬಿಟ್ಟೋದರೆ ತಾವಗೆ ಬಿಟ್ಟೋಗಬೇಕಷ್ಟೆ. ಇದರಿಂದ ನಯಾ ಪೈಸೆಯೂ ಸಿಗುವುದಿಲ್ಲ. ಇವರನ್ನು ಎತ್ತಂಗಡಿ ಮಾಡಿಸಬೇಕೆಂದರೆ ಸೂಕ್ತ ಸಕಾರಣ ಬೇಕು. ಪೆÇಲೀಸ್ ಜೀಪು ಓಡಾಡಲು ತೊಂದರೆಯಾಗುತ್ತದೆ ಎಂದಾದರೆ ಇವರಿಗಿಂತ ಮುಂಚಿತವಾಗಿ ನೂರಾರು ವರ್ಷದಿಂದ ಇರುವ ಮರವನ್ನು ಕಡಿಸಬೇಕು. ಮರ ಕಡಿಸದೆ ಕೇವಲ ಅಂಗಡಿ ಎತ್ತಿಸುವುದೆಂದರೆ ಸಾಬರೇ ಹೋಗದೆ ಗಡ್ಡಕ್ಕೆ ತಲೆಕೆಡಿಸಿಕೊಂಡಂತಾಗುತ್ತದೆ. ಈ ತರ್ಕದಡಿಯಲ್ಲಿ ಕಾರಜ್ಜ ಮತ್ತು ಸುಬ್ಬಣ್ಣ ಇರುವಷ್ಟು ದಿನ ಸೇಫ್ ಆಗಿ ಇದ್ದರು. ಅದೂ ಅಲ್ಲದೆ ಈ ಕಾಲಕ್ಕೆ ತಕ್ಕಂತೆ ತಾವೂ ಒಂಚೂರು ಬಂಡವಾಳ ಹಾಕಿ ಪೆಟ್ಟಿಗೆ ಅಂಗಡಿ ಇದ್ದ ಜಾಗದಲ್ಲಿ ತಗಡಿನ ಗೋಡೆಗಳನ್ನು ನಿಲ್ಲಿಸಿ ಒಂಚೂರು ಲಾಯಕ್ಕಾಗಿ ಕಾಣುವಂತೆ ಮಾಡಿಕೊಂಡು ಸುಬ್ಬಣ್ಣ ‘ಸ್ಟೈಲಿಶ್ ಹೇರ್ ಡ್ರೆಸಸ್’ ಎಂದು ಮರುನಾಮಕರಣ ಮಾಡಿ ಒಳಗೆಲ್ಲ ಹತ್ತಾರು ಬಗೆಯಲ್ಲಿ ಮುಖ ಕಾಣುವಂತೆ ಕನ್ನಡಿ ಜೋಡಿಸಿ, ಕಾಲ್ನೀಡಿಕೊಂಡು ಆರಾಮಾಗಿ ಕೂರಬಹುದಾಗಿದ್ದ ಕುರ್ಚಿಯನ್ನು ಜೋಡಿಸಿದ್ದನು. ಕಾರಜ್ಜನೂ ಅಷ್ಟೆ ತನ್ನ ತಗಡಿನ ಗೋಡೆಗಳಿಗೆ ತಾನೇ ತಯಾರಿಸಿರುವ ನಾಕಾರು ಶೂಗಳನ್ನು, ಹತ್ತಾರು ಮೆಟ್ಟುಗಳನ್ನು ಜೋಡಿಸಿ ‘ಶಿವ ಶರಣ ಹರಳಯ್ಯ ಚರ್ಮಕುಟೀರ’ ಎಂದು ಸ್ಕೂಲಿಗೋಗುವ ತನ್ನ ಮೊಮ್ಮಗನಿಂದಲೇ ಮೇಲೊಂದು ಕೆಳಗೊಂದು ಅಕ್ಷರ ಬರೆಸಿದ್ದ. ಬೆಳಗ್ಗೆಯಿಂದ ಸಂಜೆವರೆಗೆ ಕಾಯಕ ಮಾಡಿದರೆ ರಾತ್ರಿ ಮನೆಗೋಗುವಾಗ ಮಧ್ಯದಲ್ಲಿ ಸಿಗುವ ಧನಲಕ್ಷ್ಮಿ ಬಾರ್ ಕಡೆಗೆ ‘ಓಟಿ’ ಕುಡಿಯಲು ಕಾರಜ್ಜನ ಕಾಲುಗಳು ಸಲೀಸಾಗಿ ಹೋಗುತ್ತಿದ್ದವು. ವ್ಯಾಪಾರ ಸುಮಾರು ಅಂದರೆ ಸ್ವಲ್ಪ ತಡವರಿಸುತ್ತಿದ್ದವು. ಅಂತೂ ಹೋಗುವುದು ಮಾತ್ರ ತಪ್ಪುತ್ತಿರಲಿಲ್ಲ! ಹಾಗೆಂದಮಾತ್ರಕ್ಕೆ ಇದರ ದುಡಿಮೆ ಇಷ್ಟಕ್ಕೆ ಲಾಯಕ್ಕೆಂದು ಹಗುರವಾಗಿ ತಿಳಿಯಬೇಕಿಲ್ಲ. ಈ ಕಾಯಕದಿಂದಲೆ ಇವರ ಮನೆ ಸಂಸಾರ, ನಾಕಕ್ಷರ, ಹೊಟ್ಟೆಪಾಡು ಎಲ್ಲವೂ ಇಷ್ಟು ದೂರ ನಡೆದು ಬಂದದ್ದು.
ಹೀಗೇ ಹೇಗೊ ಬದುಕಿನ ಬಂಡಿ ಸಾಗುತ್ತಿದ್ದಾಗ..
ಒಂದು ಮಧ್ಯಾಹ್ನ ಅರಳೀಮರದ ಎದುರಿಗೆ ಆಕಡೆದಿಕ್ಕಿಗಿದ್ದ ‘ಉಮಾಪತಿ ಪ್ರಾವಿಷನ್ ಸ್ಟೋರ್’ಗೆ ಗುರುಲಿಂಗೈನೋರು ಬಂದಿದ್ರು. ಐನಾರ್ರಿಗು ಪ್ರಾವಿಷನ್ ಸ್ಟೋರ್ನ ಮಾಲಿಕ ಉಮಾಪತಿಗು ಹಿಂದಿನಿಂದಲೂ ಬಿಡಿಸಲಾರದ ನಂಟು. ಕಳೆದ ಐದಾರು ವರ್ಷಗಳ ಹಿಂದೆ ನಡೆದ ಅಂಗಡಿ ಓಪನ್ಗೂ ಇವರೇ ಬಂದಿದ್ದರು. ಅಂದು ಮೈಗೆಲ್ಲ ವಿಭೂತಿ ಬಳ್ಕಂಡು ಅಂಗಡಿಯೊಳಗೆ ಕೂತು ‘ವ್ಯಾಪಾರ ಕೈಗೆ ಹತ್ಲಿ, ಮಕ್ಕಳು ಮರಿಗೆ ಆಯುರ್ ಆರೋಗ್ಯ ಹೆಚ್ಲಿ, ಅಷ್ಟೈಶ್ವರ್ಯ ಪ್ರಾಪ್ತಿ ರಸ್ತು’ ಎಂದೆಲ್ಲ ಮಂತ್ರ ಹೇಳಿ ದಕ್ಷಿಣೆ ಪಡೆದೋಗಿದ್ದ ಸೆಣಕಲು ಐನಾರ್ರು, ಇಂದು ಉಮಾಪತಿ ಕುರಿತು ಲೋಕರೂಢಿ ‘ಹೆಂಗೆ ನಡೀತಿದೆ ವ್ಯಾಪಾರ, ಈಗ ಪರ್ವಾಗಿಲ್ವ?’ ಎಂದು ಕೇಳಿದರು. ಆದರೆ ಉಮಾಪತಿಯಿಂದ ಬಂದ ‘ಅಯ್ಯೋ ಯಾಕೋ ಇತ್ತೀಚೆಗೆ ವ್ಯಾಪಾರ್ವೆ ಆಗ್ತಿಲ್ಲ ಐನಾರ್ರೆ. ಸುಮ್ನೆ ಬೆಳಗ್ಗೆಯಿಂದ ಬಂದು ಸಾಯಂಕಾಲತ್ತಕ ಬಾಗ್ಲು ತಕ್ಕಂಡು ಕೂತ್ರುವೆ ಐನೂರಾಗದು ಬಂಗುಕ್ಕೆ ಬಂದೈತೆ. ತಿಂಗಳ ಬಾಡಿಗೆ ಕಟ್ಟಕೆ ಆಕ್ತಿಲ್ಲ’ ಎಂದು ನಿಟ್ಟುಸಿರು ಬಿಟ್ಟ. ಈ ಮಾತಿನಿಂದ ಐನೋರ್ರ ಮುಖ ಪೆಚ್ಚೆನಿಸಿದಂತಾಗಿ ‘ಅಯ್ಯೊ ಶಿವನೆ ಅದ್ಯಾಕಿಂಗಾಯ್ತು’ ಎಂದು ಆಕಡೆ ಈಕಡೆ ಕಣ್ಣಾಡಿಸುವಾಗ ಉಮಾಪತಿಯೇ ಮುಂದುವರಿದು ‘ಆ ಮನಿಯಾಳ ಶೆಟ್ಟಿ ಅದ್ಯಾವಾಗ ಅಂಗ್ಡಿ ತೆಗುದ್ನೊ, ಅದೇನ ಕಂಡ್ರ ಇಲ್ಲಿಗೆ ಬತ್ತಿದ್ದ ನನ್ನ ವಿಶ್ವಾಸ್ದಾರ್ರು ಯಾವ್ದೋ ಮಾಯ್ದಲ್ಲೋಗಿ ಅವ್ನ ಅಂಗಡಿತಕ ನಿಂತಿರ್ತರೆ’ ಎಂದ. ‘ಹೋ ಇದ ವಿಷ್ಯ’ ಎಂದ ಐನಾರ್ರು ‘ಅದು ಒಂದು, ಇನ್ನೊಂದು ಅಂಗಡಿ ಮುಂದೆನೆ ಇಕ್ಕೆಂಡಿದಿಯಲ್ಲಪ್ಪ – ಚೌರನ, ವ್ಯಾಪಾರ ಆಗು ಅಂದ್ರೆ ಇನ್ನೆಲ್ಲಿ ಆಗುತ್ತೆ. ದುಡ್ಡು ನಿಲ್ಲು ಅಂದ್ರೆ ಎಲ್ಲೆದು ನಿಲ್ಲುತ್ತೆ?’ ಸೀರಿಯಸ್ಸಾಗಿ ಅಂದ್ರು. ಉಮಾಪತಿ ತಿಳಿಯದೆ ಐನಾರ್ರು ಮುಖವನ್ನೆ ಇನ್ನೊಮ್ಮೆ ನೋಡಲಾಗಿ.. ಐನಾರ್ರು ‘ಅದ್ಯಾವ್ದದು ಆಲದಮರದಡಿ ಚೌರದ ಅಂಗಡಿ, ನಿನ್ನಂಗಡಿ ಎದುರಿಗೇ ಐತಲ್ಲ?’ ಕೇಳಿದರು. ‘ಹೇ ಅವ್ನು ಸುಬ್ಬ, ಅವ್ರಪ್ಪನ ಕಾಲ್ದಿಂದಲೂ ಇಲ್ಲೆ ಅವ್ನೆ’ ಅಂದ. ‘ಅದ್ಕೆ ಮತ್ತೆ ಕೈ ನಿಲ್ತಿಲ್ಲ, ಅವ್ನು ಇಲ್ಲೆ ಇದ್ರೆ ಇನ್ನು ಚೌರ ಆಗಿಹೋಗ್ತೀಯ ನೋಡು’ ಖಡಕ್ಕಾಗಿ ಅಂದರು ಐನಾರ್ರು. ದಿಗಿಲುಗೊಂಡ ಉಮಾಪತಿ ‘ಇದೇನ್ ಬುದ್ದಿ ಹಿಂಗೇಳ್ತಿರ, ಅವ್ನು ನಮ್ಮಂಗೆ ಅಂಗ್ಡಿ ಇಕ್ಕೆಂಡವ್ನಪ್ಪ, ಹೋಗು ಅನ್ನಕಾಗುತ್ತ?’ ಕೇಳಿದ. ‘ಅವ್ನು ಹೋಗ್ದಿದ್ರೆ ಏನಂತೆ ನೀನೆ ಹೋಗ್ತಿಯ ತಗ’ ಐನಾರ್ರು ಮುಖ ಗಡಿಸು ಮಾಡಿಕೊಂಡು ಅಂದರು. ಐನಾರ್ರ ಈ ನಿಷ್ಠೂರತೆಯಿಂದ ಭಯಭೀತಗೊಂಡ ಉಮಾಪತಿ ಮಾತಿಲ್ಲದೆ ಬೆಪ್ಪಾಗಿ ಕುಳಿತಿರಲು.. ಐನಾರ್ರೆ ಒಂದಿಷ್ಟು ಶೂನ್ಯದಲ್ಲಿ ಚಿಂತಿಸಿ ಉಮಾಪತಿಯ ಮುಖದಲ್ಲುಂಟಾಗಿದ್ದ ದುಗುಡವನ್ನು ಶಮನಗೊಳಿಸುವೋಪಾದಿಯಲ್ಲಿ ‘ನೋಡು ಉಮಾಪತಿ, ಆ ಚೌರದವ್ನ ಅಂಗಡಿ ನಿನ್ನ ಅಂಗಡಿ ಎದುರಿಗೇ ಐತೆ. ಅದೂ ಅಲ್ದೆ ಅದರ ಬಾಗ್ಲು ಪೂರ್ವಕ್ಕೆ ಇರೋದ್ರಿಂದ ಸೂರ್ಯ ಅಲ್ಲಿ ಹುಟ್ಟುತಾ ಅವ್ನೆ, ನಿಂತಕ ಮುಳುಗ್ತಾ ಅವ್ನೆ, ಅವ್ನಿಗೆ ಅಂಗಡಿ ಕಾಲಿ ಮಾಡ್ಕೆಂಡು ಹೋಗು ಅನ್ನಕಾಗ್ಲಿಲ್ಲ ಅಂದ್ರೆ ಒಂದ್ ಕೆಲ್ಸ ಮಾಡು, ಅವ್ನ ಅಂಗಡಿ ಮುಕನ ಆಕಡೆ ಮಕ್ಕೆ ತಿರುಗ್ಸಕೇಳು, ಎದ್ದು ಬಿದ್ರು ಅದರ ಮಕ ನೋಡ್ತಿದ್ರೆ ಹೇಳ್ಗೆ ಆಗುತ್ತೇನಯ್ಯ?’ ಎಂದು ಒಂದಿಷ್ಟು ಸಮಾಧಾನವಾಗಿ ಅರ್ಥೈಸಿದರು. ಈ ಮಾತಿಂದ ಸ್ವಲ್ಪ ಉಸಿರುಯ್ಕಂಡ ಉಮಾಪತಿ ಮನದಲ್ಲೆ ಏನೋ ಲೆಕ್ಕ ಹಾಕಿಕೊಂಡವನಂತೆ ‘ಆಯ್ತು ಐನಾರ್ರೆ ಏನೊ ಮಾಡ್ತಿನೋಗಿ’ ಎಂದು ಅವರು ಕೇಳಿದ ಸಾಮಾನುಗಳನ್ನು ಚೀಲಕ್ಕೆ ತುಂಬಿ ಆಟೋ ಕರೆದು ಇಕ್ಕಿ ಕಳಿಸಿದ.
ಐನಾರ್ರು ಬಂದೋದಾಗಿನಿಂದ ಕಳವಳಗೊಂಡ ಉಮಾಪತಿಗೆ ಇತ್ತಿತ್ಲಾಗೆ ಅವರು ಹೇಳಿ ಹೋದ ವಿಚಾರದಿಂದಾಗಿ ರಾತ್ರಿಹೊತ್ತು ಎಷ್ಟೊತ್ತಾದರೂ ನಿದ್ರೆ ಬರದೆ ಒದ್ದಾಡತೊಡಗಿದ. ತನ್ನ ಅಂಗಡಿ ಮುಂದಿದ್ದ ಕಟಿಂಗ್ ಶಾಪು, ಅದರ ಮಾಲೀಕ ಸುಬ್ಬಣ್ಣ ನಾನಾ ಅವತಾರದಲ್ಲಿ ಕನಸಿನಲ್ಲೂ ಬಂದು ಎದುರಿಗೆ ನಿಂತು ಕಾಡತೊಡಗಿದರು. ತಾನಿರುವ ಅಪಾಯದ ಪರಿಸ್ಥಿತಿಯಿಂದಾಗಿ ಅಂಗಡಿ ಮೇಲೆಯೇ ಬೇಸರ ಬಂದು ಇತ್ತೀಚೆಗೆ ಅದರ ಬಾಗಿಲು ತೆಗೆಯುವುದನ್ನೇ ಕಡಮೆ ಮಾಡಿದ. ಕೊನೆಗೊಂದು ದಿನ ಸಾಕಷ್ಟು ಯೋಚಿಸಿ ತನಗೆ ಮೊದಲು ಹೊಳೆದಿದ್ದ ಐಡಿಯಾದಂತೆ ತನ್ನ ಅಂಗಡಿ ಪಕ್ಕದಲ್ಲಿದ್ದ ಸಿಮೆಂಟ್ ಅಂಗಡಿಯವನನ್ನು ಸಂಪರ್ಕಿಸಿ ಅವನ ಅಂಗಡಿಯ ವ್ಯಾಪಾರದ ಬಗ್ಗೆ ಕೇಳಿದಾಗ ಆತನೂ ‘ಡಲ್ಲು’ ಎನ್ನಲಾಗಿ ಅದಕ್ಕೆ
ಕಾರಣವನ್ನು ಐನಾರ್ರು ಕೊಟ್ಟೋದದ್ದನ್ನೆ ಅವನಿಗೂ ಹೇಳಿದಾಗ ಸಿಮೆಂಟಿನವನೂ ಹಣೆಯಲ್ಲಿ ಗಂಟಿಕ್ಕಿಕೊಂಡು ‘ಹೌದೌದು’ ಎಂದ. ಹೀಗೆ ಅಕ್ಕಪಕ್ಕದ ನಾಲ್ಕೈದು ಅಂಗಡಿಯವರ ಅಭಿಪ್ರಾಯವೂ ಐನಾರ್ರು ಬರೆದೋದ ಷರಾದಿಂದಾಗಿ ಒಂದೇ ಆಗುವಂತಾಗಿ ಅವರೆಲ್ಲರೂ ಸಂಘಟಿತವಾಗಿ ಚರ್ಚಿಸಲು ಅನುವು ಮಾಡಿಕೊಟ್ಟಿತು.
ಈ ಮಧ್ಯೆ ಸ್ಟೇಷನ್ನಿನಲ್ಲಿದ್ದ ಒಬ್ಬ ಪೀಸಿ ದಿನಾಲೂ ಬಂದು ಇವರ ಅಂಗಡಿಗಳ ಬೆಂಚ್ಕಲ್ಲಿನ ಮೇಲೆ ಕೂತು ಕಟಿಂಗ್ ಶಾಪಿನ ಕಡೆಯೇ ನೋಡುತ್ತ ಅವರು ತರಿಸಿಕೊಟ್ಟ ಕಾಫೀ ಹೀರುತ್ತಿದ್ದ. ಇದಾವುದನ್ನೂ ಅರಿಯದ ಸುಬ್ಬ ಒಂದು ದಿನ ಬ್ಲೇಡ್ ಕೊಳ್ಳಲು ಎಂದಿನಂತೆ ಉಮಾಪತಿ ಪ್ರಾವಿಷನ್ ಸ್ಟೋರಿಗೆ ಬಂದ. ಸುಬ್ಬನನ್ನು ಕಂಡು ಉರುಉರಗೊಂಡ ಉಮಾಪತಿ ‘ಬ್ಲೇಡ್ ಕೊಡಲ್ಲ ಹೋಗು’ ಎಂದು ಕಡಕ್ಕಾಗಿ ಹೇಳಿ ಕಳುಹಿಸಿದ. ಇದ್ಯಾಕೀಗಾಯಿತೆಂದು ಅರ್ಥೈಸಿಕೊಳ್ಳಲು ಸೋತ ಸುಬ್ಬ ಆ ದಿನ ಬೇರೆ ದೂರದಲ್ಲೆಲ್ಲೋ ಹೋಗಿ ಬ್ಲೇಡ್ ಕೊಂಡು ತಂದನಾದರೂ, ಕ್ರಮೇಣ ಎದುರುಗಿರುವ ದೊಡ್ಡ ಅಂಗಡಿಯವರ ಸಿಟ್ಟಿನ ಕಾರಣಗಳು ಅದ್ಹೇಗೊ ತಾನಾಗೆ ಬಂದು ಸುಬ್ಬನ ಕಿವಿ ತಲಪಿ ಬೇಗನೆ ಮೆದುಳು ಹೊಕ್ಕಿತು. ಆತನಿಗೆ ವಿಷಯ ತಿಳಿದ ಕೆಲವೇ ದಿನದಲ್ಲಿ ಅದೇ ಅಲ್ಲೋಗಿ ಕೂತು ಇತ್ತ ದಿಟ್ಟಿಸುತ್ತಿದ್ದ ಪೀಸಿ ಒಂದು ದಿನ ಮಧ್ಯಾಹ್ನ ಕಟಿಂಗ್ ಶಾಪ್ಗೆ ಬಂದು ತುಂಬ ಹೊತ್ತು ಇದ್ದು ಹೋದ. ಆ ದಿನ ಸುಬ್ಬನ ಸಂಕಟ ನರಳಾಟ ಹೇಳತೀರದು. ಅದಾದ ಕೆಲವೇ ದಿನಕ್ಕೆ ಸುಬ್ಬ ಕಾರಜ್ಜನ ಸಹಾಯದಿಂದ ಪೂರ್ವಕ್ಕಿದ್ದ ತನ್ನ ಅಂಗಡಿಯ ಮುಖವನ್ನು ಪಶ್ಚಿಮಕ್ಕೆ ಬರುವಂತೆ ತಿರುಗಿಸಿಕೊಳ್ಳಬೇಕಾಯಿತು. ಈಗ ರೋಡಿಗೆ ಸುಬ್ಬನ ಕಟಿಂಗ್ ಶಾಪ್ ಮುಖ ಕಾಣದಾಗಿ ಹೊಸಬರಿಗೆ ಇಲ್ಲೊಂದು ಕಟಿಂಗ್ ಶಾಪ್ ಇದೆ ಎಂಬುದೇ ತಿಳಿಯದಂತಾಯಿತು. ಗೊತ್ತಿದ್ದ ಹಳೆ ಗಿರಾಕಿಗಳು ಮಾತ್ರ ಬಳಸಿಕೊಂಡಾದರೂ ಬಂದು ಕಟಿಂಗ್ ಶಾಪ್ ತಲಪುತ್ತಿದ್ದರು.
ಕಾರಜ್ಜನ ಚರ್ಮ ಕುಟೀರ ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿತ್ತಾದರೂ ಕಟಿಂಗ್ ಶಾಪ್ ಮುಖ ಹಿಂದಕ್ಕೆ ತಿರುಗಿದ್ದರಿಂದ ಇಲ್ಲೊಂದು ಸಂದಿ ಏರ್ಪಟ್ಟು ದಾರಿಹೋಕರು ಜಲಬಾಧೆ ತೀರಿಸಿಕೊಳ್ಳಲು ಕಾರಜ್ಜ ಕೂತಿರುವ ಜಾಗವನ್ನು ಬಳಸಿಕೊಂಡು ಹೋಗಿ ಸುಬ್ಬಣ್ಣನ ಪೆಟ್ಟಿಗೆಗೆ ಉಯ್ಯುತ್ತಿದ್ದರು. ಇದರಿಂದ ಆ ಏರಿಯಾವೆಲ್ಲ ಒಂಥರ ಗೊಚ್ಚ ಗೊಚ್ಚ ವಾಸನೆ ಹೊಡೆಯತೊಡಗಿತು.
ಇಷ್ಟಾದರೂ ಕಾರಜ್ಜನ ಚಪ್ಪಲಿ ಅಂಗಡಿ ಧ್ಯಾನಸ್ಥವಾಗಿ ಅಲ್ಲೆ ಇತ್ತು. ಸುಬ್ಬಣ್ಣನ ಕಟಿಂಗ್ ಶಾಪ್ ಅತ್ತ ತಿರುಗಿಕೊಂಡ ಕೇವಲ ಒಂದೇ ವರ್ಷದ ಅಂತರದಲ್ಲಿ ಕಾರಜ್ಜನ ಪೆಟ್ಟಿಗೆಗೆ ಹೊಂದಿಕೊಂಡಂತೆಯೇ ಇದ್ದ ‘ಗಂಗಾ ಟೆಕ್ಸ್ಟೈಲ್’ನವರ ವಕ್ರದೃಷ್ಟಿ ಇತ್ತಲೂ ಬಿತ್ತು. ಆ ದೃಷ್ಟಿಯೂ ಏಕಾಏಕಿ ಬಿದ್ದದ್ದಲ್ಲ. ತುಂಬ ದಿನಗಳು ಒಳೊಳಗೆ ಕುದಿಸಿಕೊಂಡು ಕೊಟ್ಟ ಕಾವಿಗೆ ಇಟ್ಟ ಸುಮುಹೂರ್ತವಾಗಿತ್ತು. ಹೌದು ಅವರ ದೊಡ್ಡಕಟ್ಟಡದ ಪಕ್ಕದಲ್ಲಿ ಈ ಪೆಟ್ಟಿಗೆಯ ಚಪ್ಪಲಿ ಅಂಗಡಿ ಇರುವುದು ಅವರ ಅಂದಕ್ಕೆ ಮುಕ್ಕು ಎನ್ನುವುದು ಒಂದಾದರೆ, ಗಂಗಾ ಟೆಕ್ಸ್ಟೈಲ್ ಬಿ.ಹೆಚ್. ರೋಡ್ನಲ್ಲೆ ಇತ್ತಾದರೂ ಅದರ ಮುಖ ಉತ್ತರಕ್ಕಿತ್ತು. ಪೂರ್ವಕ್ಕೂ ಒಂದು ಬಾಗಿಲು ತೆಕ್ಕೊಂಡು ಎರಡು ಕಡೆಯಿಂದಲೂ ಜನ ಆಕರ್ಷಿಸಬಹುದಾಗಿದ್ದ ಇವರ ಉದ್ದೇಶಕ್ಕೆ ಕಾರಜ್ಜನ ಚಪ್ಪಲಿ ಅಂಗಡಿ ತೊಡಕುಂಟುಮಾಡಿತ್ತು. ಆದ್ದರಿಂದ
ಏನಾದರೂ ಮಾಡಿ ಈ ಕಾರಜ್ಜನ್ನ ಇಲ್ಲಿಂದ ಎತ್ತುಸ್ಬೇಕು ಎಂಬುದು ಅವರ ಮಹದಾಸೆ ಆಗಿತ್ತಾದರೂ, ‘ಯೋ ಎತ್ಕಂಡೋಗಯ್ಯ ನಿನ್ನ ಹಳೆ ಪೆಟ್ಗೆಯ’ ಎಂದು ಸಲೀಸಾಗಿ ಇತರರಿಗೆ ಹೇಳಿದಂತೆ ಕಾರಜ್ಜನಿಗೆ ಹೇಳುವುದು ಸುಲಭದ ಮಾತಾಗಿರಲಿಲ್ಲ.
ಏಕೆಂದರೆ.. ಕಾರಜ್ಜನ ಚಪ್ಪಲಿ ಅಂಗಡಿ ಮುಂದೆ ಮಧ್ಯಾನ್ದೊತ್ತು ಈ ಡಿ.ಎಸ್.ಎಸ್.ನವರು ಬಂದು ಕೂತ್ಕಣಕೆ ಪಾಟಾಗಿದ್ರು. ಯಾವಾಗ್ಲು ಗಲಾಟೆ ಗದ್ದಲ ಅಂತಿರ್ತಿದ್ದ ಇವರು ಪೊಲೀಸ್ ಸ್ಟೇಷನ್ನು, ತಾಲೋಕ್ ಆಫೀಸ್ ಅಂತ ಟೌನಿಗೆ ಬಂದವ್ರು ಅಲ್ಲೆಲ್ಲು ಕೂಕಣಕೆ ಜಾಗ ಇಲ್ದಮೇಲೆ ‘ನಮ್ಮಂಗಡಿ’ ಅಂತ ಬಂದು ಕಾರಜ್ಜನ ಅಂಗಡಿತ ಕೂಕಂಡು ಆ ದಿನದ ಆಗುಹೋಗುಗಳನ್ನ ಮಾತಾಡರು. ಅದ್ರಲ್ಲಿ ಕೆಲವ್ರು ಕೂತಿದ್ದ ತಪ್ಪಿಗೊ ಏನೊ ಕಾರಜ್ಜಂತ ಮೆಟ್ಟೊಲಿಸ್ಕಂಡು ಹಾಕ್ಯಂಡಿದ್ರು. ಅವರು ಬಂದು ಇಲ್ಲಿ ಹಲ್ಟೆ ಹೊಡೆಯದ್ರ ಪರಿಣಾಮವಾಗಿ ಕಾರಜ್ಜನುವೆ ಒಂಚೂರು ಇಂಟ್ಲಿಜೆಂಟ್ ಆಗಿ ಹರಳಯ್ಯನ ಫೋಟೊ ಮಾತ್ರ ಇಟ್ಟುಕೊಂಡಿದ್ದ ಜಾಗದಲ್ಲಿ ಅಂಬೇಡ್ಕರ್ದು ಒಂದು ನಿಂತಿರ ನೀಲಿಕೋಟಿನ ಕ್ಯಾಲೆಂಡರ್ ನೇತಾಕಿಕೊಂಡು ಡಿ.ಎಸ್.ಎಸ್.ನವರೆ ನಂಗು ಒಂದು ಬಲ ಅನ್ನಂಗೆ ಇದ್ದ.
ಇದರ ಜೊತೆಗೆ ಇತ್ತೀಚೆಗೆ ನಗರದಲ್ಲಿ ‘ಪರಿಸರ ಪ್ರೇಮಿ’ ಹುಡುಗರ ಗುಂಪೊಂದು ಕ್ರಿಯಾಶೀಲವಾಗಿತ್ತು. ಅಂತರ್ಜಲ ಹೆಚ್ಚಿಸುವ ಜಲ ಮರುಪೂರಣ, ಬೆಟ್ಟಕ್ಕೆ ಬೆಂಕಿ ಇಕ್ಕುವುದನ್ನು ತಡೆಯುವುದು, ಅಲ್ಲಲ್ಲೆ ಖಾಲಿ ಜಾಗದಲ್ಲಿ ಸಸಿ ನೆಡುವುದು, ಸೀಡ್ ಬಾಲ್ ಎಂದೆಲ್ಲ ತಲೆಕೆಡಿಸಿಕೊಂಡು ಊರು ಕಾಡು ಅಲೆಯುವ ಈ ಹುಡುಗರು ಆಲದಮರದ ಮೇಲಿನ ಪ್ರೀತಿಗೊ ಅಥವ ಕಾರಜ್ಜನ ಮೆಟ್ಟು ಹೊಲೆಯುವ ಮಾಂತ್ರಿಕತೆಗೋ ಮರುಳಾಗಿ ತಮ್ಮ ಬಿಡುವಿನ ವೇಳೆಯಲ್ಲೆಲ್ಲ ಬಂದು ಕಾರಜ್ಜನ ಅಂಗಡಿ ಮುಂದೆ ಕೂತು ಕಾಲ ಕಳೆಯುತ್ತಿದ್ದರು. ಆಗೆಲ್ಲ ತನ್ನ ಮೊಮ್ಮಕ್ಕಳ ವಯಸ್ಸಿನ ಹುಡುಗರೊಂದಿಗೆ ಕಾರಜ್ಜ ತನಗೆ ಜೀವನ ಕೊಟ್ಟಿರುವ ಮರದ ಬಗ್ಗೆ ಮತ್ತು ಅದಕ್ಕೆ ಮುಂಬರಬಹುದಾದ ವಿಪತ್ತಿನ ಬಗ್ಗೆ ಹೇಳಿಕೊಳ್ಳುತ್ತಿದ್ದ. ಆ ಹುಡುಗರು ‘ಅಜ್ಜೊ, ಈ ಊರಲ್ಲಿ ಅದ್ಯಾವನು ಈ ಮರ ಕಡಿಯಕೆ ಬತ್ತನೊ ನಾವು ನೋಡ್ತಿವಿ ಕಣಜ್ಜ’ ಎಂದು ಹುರಿದುಂಬಿಸುತ್ತಿದ್ದುದು ಕಾರಜ್ಜನಿಗೆ ತಮಾಷೆಯಂತೆ ಕಂಡರೂ, ಒಳಗಡೆ ಧೈರ್ಯದ ಸಣ್ಣ ಮೊಳಕೆಯೊಡೆಯುತ್ತಿದ್ದುದು ಸುಳ್ಳಲ್ಲ.
ವಾರಕ್ಕೆ ಹದಿನೈದಕ್ಕೆ ಬೀದಿಲಿ ಸ್ಟ್ರೈಕ್ ಮಾಡ್ಕೆಂಡು ಹೋಗ ಜನ ದಿನ ಬಂದು ಕಾರಜ್ಜನ ಅಂಗಡಿಮುಂದೆ ಕೂತ್ಕತಿದ್ದುದನ್ನು ಗಮನಿಸಿದ್ದ ಗಂಗಾ ಟೆಕ್ಸ್ಟೈಲ್ಸ್ನ ಓನರ್ ಚೌಧರಿ ಕಾರಜ್ಜನನ್ನು ಎತ್ತಂಗಡಿ ಮಾಡ್ಸದು ಅಷ್ಟು ಸುಲಭವಲ್ಲ ಎಂದು ಭಾವಿಸಿದ್ದ. ಇದಕ್ಕೆ ಮತ್ತೊಂದು ಕಾರಣವಾಗಿ.. ಇಲ್ಲಿಯ ಒಬ್ಬ ಡಿ.ಎಸ್.ಎಸ್. ಲೀಡ್ರು ಸಂಬಂಧ ಚನಾಗಿದ್ದಾಗ ಗೌರಿ ಹಬ್ಬದ ಬಾಗಣಕ್ಕೆ ಅಂತ ಒಂದು ಸೀರೆ ತಗಂಡೋಗಿದ್ದ. ಅತ್ತ ಹದಿನೈದು ದಿನ ಬಿಟ್ಕಂಡು ಸೀರೆ ಬಣ್ಣ ಬಿಟ್ಕಂಡೈತೆ ದುಡ್ಡು ವಾಪಾಸ್ ಕೊಡು ಎಂದು ಬೇಡಿಕೆ ಇಟ್ಟಿದ್ದ. ‘ಹರೆ ಇದು ಹುಟ್ಟಿರ ಸೀರೆ, ದುಡ್ಡು ವಾಪಾಸ್ ಕೊಡಕೆ ಬರಲ್ಲ’ ಎಂದಾಗ ಇದೇ ಲೀಡರ್ರು ‘ನಿನ್ಮೇಲೆ ಕೇಸ್ ಹಾಕ್ಸಿ, ಜೈಲಿಗೆ ಕಳುಸ್ತಿನಿ’ ಎಂದು ಅವಾಜ್ ಬಿಟ್ಟು ಸೀರೆನು ಇಲ್ಲ ದುಡ್ಡು ಇಲ್ಲ ಅನ್ನಂಗೆ ಮಾಡಿದ್ದ. ಅದ ಕಂಡು ಬಟ್ಟೆ ಅಂಗಡಿ ಓನರ್ ಇವರ ಸಹವಾಸಕ್ಕೆ ಹೋಗದಿರಲು ತೀರ್ಮಾನಿಸಿದ್ದ.
ಇದಾಗಿ ಕೆಲ ವರ್ಷಗಳೇ ಕಳೆದೋದ ನಂತರ..
ಅಂದರೆ ಇಂದು. ಅದಾಗತಾನೆ ಕಾರಜ್ಜ ಅಂಗಡಿ ಬಾಗಿಲು ತೆಗೆದು ನೆನ್ನೆಯ ಕಸಕಡ್ಡಿ ಗುಡಿಸಿ ತಾನು ಪೂಜುತ್ತಿದ್ದ ಹರಳಯ್ಯನ ಫೋಟೋಕ್ಕು ಮರದ ಬೇರಿಗೂ ಊದ್ಗಡ್ಡಿ ಬೆಳಗಿ ಬೇರನ್ನು ಮೂರು ಬಾರಿ ಮುಟ್ಟಿ ಮುಟ್ಟಿ ಹಣೆಗೊತ್ತಿಕೊಂಡು ಅದರ ಪಕ್ಕದಲ್ಲೆ ಕಡ್ಡಿ ಸಿಗಿಸಿ ಇನ್ನೇನು ಕಾಯಕಕ್ಕೆ ಅಣಿಯಾಗಬೇಕೆನ್ನುವಷ್ಟರಲ್ಲಿ, ಈ ಊರಿನ ಕೌನ್ಸಿಲರ್ ಪಂಪುಮೋಟ್ರು ಸಂತೋಷಯ್ಯನ ದನಿ ಕೇಳಿಸಿತು. ಆತನ ಜೊತೆಗೆ ಬಂದಿದ್ದ ಪೌರಕಾರ್ಮಿಕರು ಎಂದಿನಂತೆ ತಾವು ಹಿಡಿಯುತ್ತಿದ್ದ ಗುದ್ಲಿ ಮಂಕ್ರಿ ಜಾಗದಲ್ಲಿ ಗರಗಸ, ಕೊಡ್ಲಿ ಹಿಡಿದು ಬಂದಿದ್ದರು. ಇವರ ಜೊತೆ ಇನ್ನುಳಿದ ಫಾರೆಸ್ಟು, ಪಿ.ಡಬ್ಲ್ಯೂ.ಡಿ.ಯೂ ಬಂದಿತ್ತು. ಪಂಪುಮೋಟ್ರು ಸಂತೋಷಯ್ಯ ತನ್ನ ಎಂದಿನ ಶೈಲಿಯಲ್ಲಿ ‘ಮೊದ್ಲು ಕೊಂಬೆನೆಲ್ಲ ಸವರ್ಕಳಿ, ಆಮೇಲೆ ಬುಡ ಕುಯ್ಯಿವಿರಂತೆ’ ಎಂದು ಮೇಲು ಕೆಳಗು ಕೈಯಾಡಿಸುತ್ತ ತೋರಿಸುತ್ತಿದ್ದುದನ್ನು ನೋಡಿ ಕಾರಜ್ಜನ ಜಂಘಾಬಲವೇ ಉಡುಗಿಹೋದಂತಾಯಿತು.
ಈ ಪಂಪುಮೋಟ್ರು ಸಂತೋಷಯ್ಯ ಗೆದ್ದು ಕೌನ್ಸಿಲರ್ ಆಗಿದ್ದು ಕೂಡ ಇದೇ ಉತ್ತರ ದಿಕ್ಕಿನವರು ಹೆಚ್ಚಿಗೆ ಇರೊ ವಾರ್ಡಿನಿಂದಲೇ. ತಾನು ಕೌನ್ಸಿಲರ್ ಆಗದ್ಕು ಮುಂಚೆ ಸಂತೋಷಯ್ಯ ರಾತ್ರಿನೊತ್ತು ಹೋಗಿ ಕೊಳವೆಬಾವಿಗಳಲ್ಲಿ ಪಂಪು ಮೋಟ್ರು ಎತ್ತಿ ಕದ್ದು ಆಫ್ ಚಾರ್ಜಿಗೆ ಮಾರನಂತೆ. ಒಂದ್ಸಲ ರೆಡ್ಹ್ಯಾಂಡಗೆ ಸಿಗಾಕ್ಯಂಡು ಸ್ಟೇಷನ್ಗೆ ಹೋದ್ಮೇಲೆ ಪೊಲೀಸ್ನರ ಒಡ್ತ ತಾಳಲಾರ್ದೆ ಮಾಡಿರವು ಮಾಡ್ದೆ ಇರವು ಎಲ್ಲ ಕಳ್ತನನು ನಾನೆ ಮಾಡಿದೆ ಅಂತ ಒಪ್ಕೆಂಡು ಅವ್ರಪ್ಪನ ಕೈಲಿ ದಂಡ ಕಟ್ಟಿಸಿಕೊಟ್ನಂತೆ! ಆವತ್ತಿಂದ ಸಂತೋಷನ ಹೆಸರಿನ ಮುಂದೆ ‘ಪಂಪುಮೋಟ್ರು’ ಸೇರ್ಕೆಂಡು ಮುಂಚೂಣಿಗೆ ಬಂದಿದ್ದ. ಆನಂತರ ಅವ್ನು ಗೆದ್ದು ಕೌನ್ಸಿಲರ್ ಆದದ್ದು ಬೇರೆ ಕಥೆ. ತಾನು ಕೌನ್ಸಿಲರ್ ಆದ ನಂತರ ಮುನ್ಸಿಪಾಲ್ಟಿಗೆ ಬೇಕಾದ ಬಲ್ಬು ಓಡ್ರು, ಟ್ಯೂಬ್ಲೈಟ್ ಸೆಟ್ಗಳು, ಬಾಣ್ಲಿ ಬಕೆಟ್ಟು, ನೀರಿನ ಡ್ರಮ್ಗಳು, ಬ್ಲೀಚಿಂಗ್ ಪೌಡರ್ ಇವೆಲ್ಲವನ್ನೂ ಮೂರಕ್ಕೆ ಆರ್ರಂಗೆ ಬಿಲ್ ಹಾಕಿಸ್ಕೆಂಡು ಉತ್ತರದವರ ಅಂಗಡಿಗಳಲ್ಲೆ ಕೊಂಡ್ಕತಿದ್ದ. ಬೇರೆ ಯಾವ ಬೀದಿಲಿ ಸಮಸ್ಯೆ ಬಗೆಹರಿದೆ ಇದ್ರು ಪರ್ವಾಗಿಲ್ಲ ಇವರಿರೊ ಏರಿಯಾಕ್ಕೆ ನೀರು ನಿಡಿ ಸರಬರಾಜಿಗೆ ತೊಂದ್ರೆ ಆಗದ ಹಾಗೆ ನೋಡ್ಕಂತಿದ್ದ. ಅಷ್ಟೇ ಯಾಕೆ ಮೊನ್ನೆ ನರೇನ್ ಎಲೆಕ್ಟ್ರಿಕ್ನವರ ಮನೆ ಟಾಯ್ಲೆಟ್ ಪಿಟ್ ತುಂಬೈತೆ ಅಂದಾಗ ತಾನೆ ಮುಂದೆ ನಿಂತ್ಕಂಡು ನಿಷೇಧವಿದ್ದರೂ ಕೇರ್ ಮಾಡದೆ ಕೆಳಗಳ ಹಟ್ಟಿಯ ಪೌರಕಾರ್ಮಿಕ ರಾಮಯ್ಯಂಗೆ ಹೊಟ್ಟೆ ತುಂಬ ಎಣ್ಣೆ ಕುಡ್ಸಿ ಗುಂಡಿಗೆ ಇಳಿಸಿ ಎತ್ತುಯ್ಸಿ ಕ್ಲೀನ್ ಮಾಡಿಸಿಕೊಟ್ಟಿದ್ದ.
ಇಂಥ ಸ್ವಾಮಿನಿಷ್ಠೆ ಹೊಂದಿರುವ ಪಂಪುಮೋಟ್ರು ಸಂತೋಷಯ್ಯನ ಸಹಕಾರ ತಗಂಡು ಸರ್ಕಲ್ನಲ್ಲಿರ ಆಲದಮರ ಕಡಿಸಾಕಿರೆ ಅದರ ಬುಡದಲ್ಲಿರೊ ಕಾರಜ್ಜ ಮತ್ತು ಸುಬ್ಬಣ್ಣನ ಅಂಗಡಿ ಎತ್ತಂಗ್ಡಿ ಮಾಡ್ಸಕೆ ಅನುಕೂಲ ಆಗುತ್ತೆ ಅಂತ ಮಾಸ್ಟರ್ ಪ್ಲಾನ್ ಹಾಕಿದ್ದ ಗಂಗಾ ಟೆಕ್ಸ್ಟೈಲ್ನವರು ಒಮ್ಮೆ ಇದರ ಬಗ್ಗೆ ಪಂಪುಮೋಟ್ರು ಜೊತೆ ಡಿಸ್ಕಸ್ ಮಾಡಲಾಗಿ ಆತ ‘ಅದೇನ್ ಮಾಡಿಕೊಡನ ತಗಳಿ ಶೇಟ್ಜಿ’ ಎಂದು ‘ನೀವು ಎದುರು ಬದುರುಗಿರೊ ನಾಕೈದು ಅಂಗಡಿಯವರು ಈ ಮರದಿಂದ ನಮಿಗೆ ತೊಂದರೆ ಆಕ್ತಾ ಐತೆ, ಕಡಿಸಿಕೊಡಿ ಅಂತ ಸೈನ್ ಹಾಕಿ ಒಂದು ಅರ್ಜಿ ಕೊಡಿ ಮುಂದಿನದು ನಾನು ನೋಡ್ಕತಿನಿ’ ಎಂದು ತಾನೆ ಒಂದು ಐಡಿಯಾ ಕೊಟ್ಟಿದ್ದ. ಅದರಂತೆ ನೆನ್ನೆ ಮೊನ್ನೆಯಿಂದಲೂ ಈ ಉತ್ತರದ ಕಡೆ ಅಂಗಡಿ ಓನರ್ಗಳು ಕೈಯಲ್ಲಿ ಯಾವ್ದೊ ಪತ್ರ ಹಿಡ್ಕೊಂಡು ಆ ಅಂಗಡಿ ಈ ಅಂಗಡಿತಕೆ ಸೈನ್ ಹಾಕಿಸ್ಕಂಡು ತಿರ್ಗಾಡ್ತಿರದು ಗಮನಕ್ಕೆ ಬಂದು ಕಾರಜ್ಜನ ಎದೆಯಲ್ಲಿ ಆತಂಕದ ಹುಂಜ ಕೊರಗುಡತೊಡಗಿತ್ತು.
ಮರ ಕಡಿಸ್ಕೊಡಿ ಎಂದು ಉತ್ತರದವರು ಅರ್ಜಿ ಬರೀತಿರೋದು ಇದೇ ಮೊದಲೇನಾಗಿರಲಿಲ್ಲ. ಒಮ್ಮೆ ಆಲದಮರದ ಒಂದು ಕೊಂಬೆ ಒಣಗಿರದ ಕಂಡು, ಒಂದು ಮಳೆಗಾಲದ ದಿನದಲ್ಲಿ ಗಾಳಿಮಳೆಗೆ ಮರ ರೋಡಿಗೇನಾರ ಬಿದ್ರೆ ಅಪಾರ ಸಾವು ನೋವು ಉಂಟಾಗುತ್ತೆ, ಆದ್ರಿಂದ ಮರ ಕಡಿಸ್ಕೊಡಿ ಎಂದು ಪಿ.ಡಬ್ಲ್ಯೂ.ಡಿ.ಗೆ ಅರ್ಜಿ ಬರೆದಿದ್ದರು. ಅವರು ಬಂದು ಪರಿಶೀಲಿಸಿ ನೋಡಲಾಗಿ ‘ಇಡೀ ಮರ ಕಡಿಯುವಂಥಾದ್ದೇನು ಆಗಿಲ್ಲ, ಅದು ಅಲ್ದೆ ಮರಕ್ಕೆ ಇನ್ನ ವಯಸ್ಸಾಗಿಲ್ಲ’ ಎಂದು ಒಣಗೋಗಿರ ಕೊಂಬೆನ ಎಳೆಸಿ ಹಾಕ್ಸಿದ್ರು. ಮತ್ತೊಮ್ಮೆ ಕೆ.ಇ.ಬಿ.ಯವರಿಗೆ ‘ನಮ್ಮ ಅಂಗಡಿಗಳ ಮುಂದೋಗಿರ ಮೈನ್ ವಯರ್ ಒಳಗೆ ಮರದ ಎಲೆ ಕೊಂಬೆಗಳು ಎಣೆದುಕೊಂಡಿದ್ದು ಇದರಿಂದ ನಮ್ಮ ಅಂಗಡಿ ಗೋಡೆಗಳಿಗೆಲ್ಲ ಕರೆಂಟ್ ಪಾಸಾಗುತ್ತಿದೆ ಮತ್ತು ನಮ್ಮ ಎಲೆಕ್ಟ್ರಾನಿಕ್ ವಸ್ತುಗಳೆಲ್ಲ ಶಾರ್ಟ್ ಸರ್ಕ್ಯೂಟ್ನಲ್ಲಿ ಸುಟ್ಟು ಹೋಗಿ ಅಪಾರ ನಷ್ಟವಾಗಿರುವುದರಿಂದ ಈ ಕೂಡಲೆ ಮರ ಕಡಿಸಿಹಾಕೋದ್ರ ಜೊತೆಗೆ ನಷ್ಟ ಪರಿಹಾರ ತುಂಬಿಕೊಡಿ ಎಂದು ಬರೆದಿದ್ದರು. ಲಗುಬಗೆಯಲ್ಲಿ ಬಂದ ಬೆಸ್ಕಾಂ ನೌಕರರು ಮರದ ಅಡಿ ನಿಂತು ಕತ್ತೆತ್ತಿ ನೋಡಿದರೆ ಕೊಂಬೆಯೊಂದರ ಸಣ್ಣ ರೆಂಬೆಯೊಂದು ತನ್ನ ಎಲೆಗಳ ಸಮೇತವಾಗಿ ವಯರ್ನ ಒಳಗೆ ನುಸಿಳಿದ್ದು ಬಿಟ್ಟರೆ ಹೆಚ್ಚೇನು ಅನಾಹುತಕಾರಿ ಸನ್ನಿವೇಶ ಇರಲಿಲ್ಲ. ಇದ್ದದ್ದು ಇದ್ದ ಹಾಗೆ ತನ್ನ ಮೇಲಧಿಕಾರಿಗಳಿಗೆ ದೂರವಾಣಿ ಮೂಲಕ ನೌಕರರು ತಿಳಿಸಿದಾಗ ಆಕಡೆಯಿಂದ ಅಧಿಕಾರಿ ‘ಅದೊಂದು ಕೊಂಬೆ ಕಟ್ ಮಾಡಿ ವಯರ್ ಫ್ರೀ ಮಾಡಿ ಬನ್ನಿ’ ಎಂದು ಆದೇಶಿಸಿದರು. ಮುಖ ಸಣ್ಣದು ಮಾಡಿಕೊಂಡ ಉತ್ತರದ ವ್ಯಾಪಾರಿಗಳು ಮರಕಡಿಸುವ ತಮ್ಮ ಆಸೆ ಈಡೇರದಿದ್ದುದನ್ನು ಕಂಡು ವ್ಯಾಪಾರ ನಿಮಿತ್ತವಾಗಿ ಅಂಗಡಿ ಒಳಹೋಗಿ ಸೇರಿಕೊಂಡಿದ್ದರು.
ಮರ ಕಡಿಸುವ ತಮ್ಮ ಪ್ರಯತ್ನದ ಸತತ ಸೋಲುಗಳ ನಂತರ ಇದರಿಂದ ಅಷ್ಟೇನು ಹೆಚ್ಚಿನ ಲಾಭವಾಗದ ಇತರ ಅಂಗಡಿಯವರು ನಿಧಾನಕ್ಕೆ ‘ಆದ್ರೆ ಆಗ್ಲಿ ಹೋದ್ರೆ ಹೋಗ್ಲಿ’ ಎಂದು ತಾವಾಯಿತು ತಮ್ಮ ಪಾಡಾಯಿತು ಎಂಬಂತಾದರು. ಆದರೆ ಇದರ ಲಾಭದ ಹೆಚ್ಚಿನ ಪಾಲುದಾರನಾಗಬಯಸಿದ್ದ ಗಂಗಾ ಟೆಕ್ಸ್ಟೈಲ್ಸ್ನ ಓನರ್ ಚೌಧರಿ ಮಾತ್ರ ತನ್ನ ಏಕಾಂಗಿ ಪ್ರಯತ್ನವನ್ನು ನಿಲ್ಲಿಸಿರಲಿಲ್ಲ. ಅದರ ಪರಿಣಾಮವಾಗಿಯೇ ಈ ಬಾರಿ ಪಂಪುಮೋಟ್ರು ಸಂತೋಷಯ್ಯನನ್ನು ಮೊದಲೇ ಬುಕ್ಮಾಡಿಕೊಂಡು ಆತನ ಸಲಹೆಯಂತೆಯೇ ಸಹಿ ಹಾಕಿಸಿದ್ದ ಅರ್ಜಿಯನ್ನು ಫಾರೆಸ್ಟ್ ಆಫೀಸ್ ಮತ್ತು ಮುನ್ಸಿಪಾಲ್ಟಿ ಎರಡಕ್ಕೂ ಕೊಟ್ಟು ಈ ಕೆಲಸ ಈ ಸರ್ತಿ ಆಗಲೇಬೇಕು ಎಂದು ದುಂಬಾಲು ಬಿದ್ದಿದ್ದ. ಇದು ಅಷ್ಟು ಸುಲಭಕ್ಕೆ ನನ್ನಿಂದ ಮಾತ್ರವೇ ಆಗುವ ಕೆಲಸವಲ್ಲ ಎಂಬುದನ್ನು ಮನಗಂಡಿದ್ದ ಪಂಪುಮೋಟ್ರು, ಈಗಿನ ಹಾಲಿ ಎಮ್.ಎಲ್.ಎ.ಗೆ ಫೋನ್ ಮಾಡಿದ.
ಸತತ ದರ್ಪ ದೌರ್ಜನ್ಯಕ್ಕೆ ಹೆಸರುವಾಸಿಯಾಗಿದ್ದ ಹಾಲಿ.. ಒಮ್ಮೊಮ್ಮೆ ಪ್ರಗತಿಪರ ಚಿಂತಕನಂತೆ, ಇನ್ನೊಮ್ಮೆ ಸಾಹಿತಿ ಚಿಂತಕರ ಒಡನಾಡಿಯಂತೆ, ಮಗದೊಮ್ಮೆ ಪರಿಸರವಾದಿಯಂತೆ ಕಂಡು ಹೊರಗಿನವರಿಂದ ಸದಾ ಹೊಗಳಿಕೆಗೆ ಪಾತ್ರನಾಗುತ್ತಿದ್ದ. ಇಂತಿಪ್ಪ ನಾಡಿನ ಶ್ರೇಷ್ಠ ರಾಜಕಾರಣಿ ಅಂದು ಬೆಳಬೆಳಗ್ಗೆ ಕಿವಿಗೆ ಕಡ್ಡಿ ಚುಚ್ಚಿಕೊಂಡು ಕೂತಿರುವಾಗ ಪಂಪುಮೋಟ್ರುದು ಫೋನ್ ಬಂತು. ಆಕಡೆಯಿಂದ ಅವಸರವಸರವಾಗಿ ಮಾತಾಡುತ್ತಿದ್ದ ಪಂಪುಮೋಟ್ರು ಎಲ್ಲವನ್ನೂ ವಿವರಿಸಿದ ನಂತರ ‘ಅಣ್ಣ ಅವ್ರು ತುಂಬ ನಮಿಗೆ ಬೇಕಾದವರು, ಅವರ ಅಷ್ಟೂ ಓಟುಗಳು ಒಂದೂ ಮಿಸ್ ಆಗ್ದೆ ನಮ್ಗೆ ಹಿಂದಿನಿಂದಲೂ ಬೀಳ್ತಾ ಅವೆ. ಈ ಕೆಲ್ಸ ಆಗ್ಲೇ ಬೇಕು’ ಎಂದು ಫೋನ್ ಮಡಗಿದ.
ಸತತ ಮೂರು ಅವಧಿಯಿಂದಲೂ ಸೋತು ಸುಣ್ಣವಾಗಿದ್ದ ಹಾಲಿ, ತನ್ನ ಕಡೆ ಆಟಕ್ಕಾಗಿ ಸರ್ವಸ್ವವನ್ನೂ ಕಳೆದುಕೊಂಡು ಚುನಾವಣೆಗೆ ನಿಂತಿದ್ದ. ಆ ಟೈಮ್ನಲ್ಲಿ ಹ್ಯಾಟ್ರಿಕ್ ವಿಜಯದ ಎಮ್.ಎಲ್.ಎ. ಜೊತೆ ಗುರುತಿಸಿಕೊಂಡಿದ್ದ ಪಂಪುಮೋಟ್ರು ಎಲ್ಲಿಂದಲೊ ಏನೋ ಸುಲಾಕು ಸಿಕ್ಕವನಂತೆ ನೆಗೆದು ಬಂದು ಈ ತಕ್ಕಡಿ ಏರಿದ್ದ. ಅದೃಷ್ಟವೆಂಬಂತೆ ಈ ಬಾರಿ ಸತತ ಸೋಲಿನಿಂದ ಕಂಗೆಟ್ಟಿದ್ದ ಮಾಜಿ, ಕೂದಲೆಳೆಯಲ್ಲಿ ಮತ್ತೆ ಹಾಲಿಯಾದ. ಇಂಥ ಸಂಕಷ್ಟದ ಸಂದರ್ಭದಲ್ಲಿ ಕೈಹಿಡಿದು ತನಗೊಂದು ರಾಜಕೀಯ ಪುನರ್ಜನ್ಮ ಕೊಟ್ಟಿದ್ದ ಯಾರೊಬ್ಬರನ್ನು ಉಪೇಕ್ಷಿಸಲು ಹಾಲಿಗೆ ಧೈರ್ಯ ಬರುತ್ತಿರಲಿಲ್ಲ. ಚುನಾವಣೆಯಲ್ಲಿ ತಾನು ಖರ್ಚುಮಾಡಿದ ಹಣವನ್ನು, ಆ ಕೂದಲೆಳೆಯ ಗೆಲವನ್ನು ನೆನಪಿಸಿಕೊಂಡಾಗಲೆಲ್ಲ ಬೆವೆತು ಬೆಚ್ಚಿಬೀಳುತ್ತಿದ್ದ ಹಾಲಿ ತಕ್ಷಣ ಫೋನ್ ಮಾಡಿ ಅದಾವುದೇ ಅಧಿಕಾರಿಯಿರಲಿ ಗಡಗಡ ನಡುಗುವಂತೆ ಮಾಡುತ್ತಿದ್ದ.
ಅಂತೆಯೇ ಇಂದು ಹಾಲಿಯವರ ಆವಾಜಿನ ಮೇರೆಗೆ ಫಾರೆಸ್ಟು, ಪಿ.ಡಬ್ಲ್ಯೂ.ಡಿ., ಕೆ.ಇ.ಬಿ. ಎಲ್ಲವೂ ಒಟ್ಟಾಗಿ ಬೆಳ್ಳಂಬೆಳಗ್ಗೆ ಕಾರಜ್ಜನಿದ್ದ ಆಲದಮರದ ಬಳಿಗೆ ಪಂಪುಮೋಟ್ರು ಸಂತೋಷಯ್ಯನ ಸಾರಥ್ಯದಲ್ಲಿ ಹಗ್ಗ, ಗರಗಸ, ಕೊಡಲಿ ಮುಂತಾದ ಮರಕಡಿಯುವ ಸಲಕರಣೆಗಳೊಂದಿಗೆ ಬಂದು ನಿಂತಿದ್ದವು. ಈ ದಿಢೀರ್ ಆಘಾತದಿಂದ ಕಾರಜ್ಜ ದಿಕ್ಕು ತೋಚದಾದ.
ಪರಿಸರ ಎಂದು ಓಡಾಡುತ್ತಿದ್ದ ಹುಡುಗರ ಗುಂಪು ಈ ಕಾರ್ಯಕ್ಕೀಗ ಕೈಹಾಕಿರುವುದು ಪರಿಸರಪ್ರೇಮಿ ಇಮೇಜಿನ ತಮ್ಮದೇ ಜಾತಿಯ ಎಮ್.ಎಲ್.ಎ. ಎಂಬುದನ್ನು ತಿಳಿದು ಕಾರಜ್ಜನ ನೆರವಿಗೆ ಬರುವುದಿಲ್ಲ ಎಂಬ ವರ್ತಮಾನವನ್ನು ಮರದ ಮೇಲಿನ ಗೂಡುಗಳಲ್ಲಿದ್ದ ಹಕ್ಕಿ ಪಕ್ಷಿಗಳು ಕೂಗಿ ಹೇಳುತ್ತಿದ್ದವು. ತನ್ನದೇ ಜಾತಿಯ ದಲಿತ ಸಂಘದವರೂ ಈಗ ಪರಸ್ಪರ ಕಚ್ಚಾಡಿಕೊಂಡಿರುವುದರಿಂದ ಪ್ರತ್ಯೇಕ ಗುಂಪುಗಳಲ್ಲಿ ಇಲ್ಲವೆ ಬಿಡಿಬಿಡಿಯಾಗಿ ಬಂದು ಅಂಗಡಿಮುಂದೆ ಕೂರುತ್ತಿದ್ದು ಅವರೂ ನೆರವಿಗೆ ಬರಲಾರರೆಂಬ ಸತ್ಯವನ್ನು ಪೊಟರೆಗಳಲ್ಲಿದ್ದ ಗೂಬೆ ಗೀಜಗಗಳು ನುಡಿಯುತ್ತಿದ್ದವು. ಭೂತ ಭವಿಷ್ಯವನ್ನೆಲ್ಲ ನೆನೆದು ಕಂಗಾಲಾದ ಕಾರಜ್ಜ ತನಗೆ ಅನ್ನದ ಮಾರ್ಗ ನೀಡಿ ಬದುಕಿಗೊಂದು ದಾರಿ ತೋರಿದ್ದ ಆಲದಮರವನ್ನು ನೆನೆದು ತನ್ನ ಅಂಗಡಿ ಒಳಗೆ ಹಾದುಹೋಗಿದ್ದ ಅದರ ಬೇರನ್ನು ಸವರುತ್ತ ಕರುಳ ಸಂಕಟ ಅನುಭವಿಸುತ್ತ ಕೂತೇಬಿಟ್ಟ.
ಹೊರಗಡೆ ಜೋರಾಗಿ ಗಲಾಟೆ ನಡೆಯುತ್ತಿದ್ದರೂ ಅಂಗಡಿಯಿಂದ ಆಚೆಗೆ ಬರದೆ ಜಗಮಂಡನಂತೆ ಕೂತಿದ್ದ ಕಾರಜ್ಜನನ್ನು ಹೊರಗೆಳೆಯುವಂತೆ ಬಂದಿದ್ದ ಅಧಿಕಾರಿಗಳು ಅನತೀ ದೂರದಲ್ಲಿ ಕುಕ್ಕುರುಗಾಲಲ್ಲಿ ಕೂತು ಬೀಡಿ ಎಳೆಯುತ್ತಿದ್ದ ಸಮವಸ್ತ್ರದಾರಿ ಪೌರಕಾರ್ಮಿಕರಿಗೆ ಆದೇಶಿಸಿದರು. ಅದರಂತೆ ತಮ್ಮ ಹಟ್ಟಿಯ ಹಿರೀಕ ಕಾರಜ್ಜನನ್ನು ಅವನ ಸಾಮಾನುಗಳ ಸಮೇತವಾಗಿ ದರದರನೆ ಎಳೆದು ತಂದು ಆಚೆಗೆ ಬಿಟ್ಟರು. ಆಚೆಗೆ ಬಂದ ಕ್ಷಣ ಹೊತ್ತಿನಲ್ಲೆ ಕಾರಜ್ಜನಿಗೆ ನೆರಳಾಗಿದ್ದ, ಜೀವವಾಗಿದ್ದ, ಬದುಕಾಗಿದ್ದ ಸಂಗಾತಿ ಆಲದಮರ ಗಡ್ರುಕ್ ಎಂಬ ದೊಡ್ಡ ಶಬ್ದದೊಂದಿಗೆ ನೆಲಕ್ಕುರುಳಿತು. ಅದರಲ್ಲೆ ಮನೆಮಾಡಿಕೊಂಡಿದ್ದ ಹಕ್ಕಿ ಪಕ್ಷಿಗಳು ಚೀರಾಡುತ್ತ ಕೂಗಾಡುತ್ತ ರೆಕ್ಕೆಬಡಿಯುತ್ತ ಗಗನಕ್ಕೆ ಹಾರಿದವು.