ಸಮರಸದಿಂದ ಸಂಸಾರ ಸಾಗಿಸಬೇಕಾದರೆ ನಾವು ಹಾಸ್ಯಪ್ರಜ್ಞೆ ಉಳ್ಳವರಾಗಿರಬೇಕು.
ನಮ್ಮನ್ನೇ ನಾವು ಹಾಸ್ಯ ಮಾಡಿಕೊಳ್ಳುವಷ್ಟು ನಮ್ಮ ಮನಸ್ಸನ್ನು ವಿಶಾಲಗೊಳಿಸಬೇಕು. ಹಾಸ್ಯಪ್ರಜ್ಞೆಯನ್ನು ಜಾಗೃತಗೊಳಿಸಿ ಜೀವನದಲ್ಲಿ ಅಳವಡಿಸಿಕೊಂಡರೆ ಸಂಸಾರ ದುಃಖದ ಸಾಗರವಾಗದೆ ಆನಂದಸಾಗರವಾಗುತ್ತದೆ.
ಸಮರಸದಿಂದ ಸಂಸಾರ ಸಾಗಿಸಬೇಕಾದರೆ ನಾವು ಹಾಸ್ಯಪ್ರಜ್ಞೆ ಉಳ್ಳವರಾಗಿರಬೇಕು. ನಮ್ಮನ್ನೇ ನಾವು ಹಾಸ್ಯ ಮಾಡಿಕೊಳ್ಳುವಷ್ಟು ನಮ್ಮ ಮನಸ್ಸನ್ನು ವಿಶಾಲಗೊಳಿಸಬೇಕು. ಹಾಸ್ಯಪ್ರಜ್ಞೆಯನ್ನು ಜಾಗೃತಗೊಳಿಸಿ ಜೀವನದಲ್ಲಿ ಅಳವಡಿಸಿಕೊಂಡರೆ ಸಂಸಾರ ದುಃಖದ ಸಾಗರವಾಗದೆ ಆನಂದಸಾಗರವಾಗುತ್ತದೆ.
ಸಂಸಾರ ದುಃಖದ ಸಾಗರ. ಸಂಸಾರ ನಮ್ಮನ್ನು ಬಂಧನಕ್ಕೆ ದೂಡುತ್ತದೆ, ಬಾಧೆಗೆ ಒಳಪಡಿಸುತ್ತದೆ ಎಂಬುದಾಗಿ ಬಹುತೇಕ ದಾರ್ಶನಿಕರ ಅಂಬೋಣ. ಆದರೆ ಹಾಸ್ಯಪ್ರಜ್ಞೆ ನಮ್ಮಲ್ಲಿ ಸದಾ ಜಾಗೃತವಾಗಿದ್ದರೆ ದುಃಖದ ಸಾಗರವಾಗಿರುವ ಸಂಸಾರವನ್ನು ಸುಖದ ಸಾಗರವನ್ನಾಗಿ ಪರಿವರ್ತಿಸಬಹುದು. ಜೀವನದಲ್ಲಿ ಹಾಸ್ಯ ಹಾಸುಹೊಕ್ಕಾಗಿದ್ದರೆ ಬದುಕೆಂಬುದು ಬರಡಾಗದೆ ಬಂಗಾರವಾಗುತ್ತದೆ.
ನನಗೆ ದಿನಾ ಬೆಳಗ್ಗೆ ವಾಕಿಂಗ್ ಹೋಗುವ ಅಭ್ಯಾಸ. ಒಂದು ದಿನ ನನ್ನಾಕೆ, “ನಾಳೆ ನಾನೂ ನಿಮ್ಮೊಂದಿಗೆ ವಾಕಿಂಗಿಗೆ ಬರುತ್ತೇನೆ” ಎಂದು ರಾಗ ಎಳೆದಳು. ನಾನು ಹೇಳಿದೆ: “ಬೇಡ ಕಣೆ, ನಾನಾದರೂ ಈ ಸಿಂಟೆಕ್ಸ್ ತರಹ ಇರುವ ನನ್ನ ದೇಹವನ್ನು ಕರಗಿಸಬೇಕೆಂದು ವಾಕಿಂಗಿಗೆ ಹೋಗುತ್ತಿದ್ದೇನೆ. ನೀನು ಈಗಾಗಲೇ ಸಪರ ಇದ್ದಿ. ಇನ್ನು ನನ್ನೊಂದಿಗೆ ವಾಕಿಂಗಿಗೆ ಬಂದರೆ, ಕರಗಿ ಮಾಯವಾಗಿ, ಹಿಂದೆ ಬರುವಾಗ ನಾನೊಬ್ಬನೆ ವಾಪಸ್ಸು ಬರಬೇಕಾಗತ್ತದೇನೋ! ನನಗಿರುವುದು ಒಬ್ಬಳೇ ಹೆಂಡತಿ. ನೀನು ಮಾಯವಾದರೆ ಮನೆಗೆ ಬಂದಾಗ ನನ್ನನ್ನು ಬೈಯ್ಯಲಿಕ್ಕೆ, ಗೋಳಾಡಿಸಲಿಕ್ಕೆ ಯಾರಿದ್ದಾರೆ ಹೇಳು?”
“ಅಲ್ಲಾರಿ, ನಾವಿಬ್ಬರೆ ವಾಕಿಂಗಿಗೆ ಹೋಗದೆ ಎಷ್ಟು ಸಮಯವಾಯಿತು. ಗಂಡನೊಡನೆ ನನಗೂ ವಾಕಿಂಗಿಗೆ ಹೋಗಬೇಕೆಂಬ ಆಸೆ ಇರುವುದಿಲ್ಲವೆ?” ಎಂದಳು. ಸರಿ, ಮರುದಿನ ಬೆಳಗ್ಗೆ ನನ್ನ ಮತ್ತು ಆಕೆಯ ಸವಾರಿ ಹೊರಟಿತು. ದಾರಿಮಧ್ಯದಲ್ಲಿ ನನ್ನ ಆಗಂತುಕರೊಬ್ಬರು ನಿಲ್ಲಿಸಿ ಕೇಳಿದರು, “ಡಾಕ್ಟ್ರೆ, ಈಕೆ ನಿಮ್ಮ ಮಗಳಾ?” “ಅಲ್ಲ, ನನ್ನ ಹೆಂಡತಿ” ಎಂದು ಹೇಳಿ ಅಲ್ಲಿಂದ ಗಾಡಿಬಿಟ್ಟೆ. ನನ್ನಾಕೆಗಂತೂ ಆಕಾಶಕ್ಕೆ ಮೂರೇ ಗೇಣು ಎಂಬಷ್ಟು ಸಂತೋಷವಾಯಿತು. ನಾನು ಹೇಳಿದೆ, “ನಾನು ಇನ್ನಿಲ್ಲದ ಹಾಗೆ ಹೇಳಿದೆ, ಅoಟಿvex-ಅoಟಿಛಿಚಿve ಎಂಬಂತಿರುವ ಈ ಗಂಡ-ಹೆಂಡಿರ ದಿಬ್ಬಣ ಬೇಡ ಎಂದು. ನೀನೆಲ್ಲಿ ಕೇಳ್ತೀ!”
“ಅಲ್ಲಾರಿ, ನಾನು ಇನ್ನೂ ಷೋಡಶಿಯಂತೆ ಅಂದವಾಗಿ ಕಂಡಿರಬೇಕು; ಅದಕ್ಕೆ ಅವರು ಆ ರೀತಿ ಹೇಳಿದ್ದಾರೆ. ಇದರಿಂದ ನಿಮಗ್ಯಾಕ್ರಿ ಸಿಟ್ಟು?” ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಳು. ದಿಬ್ಬಣ ಮುಂದುವರಿಸಿದೆ.
ಸ್ವಲ್ಪ ಹೊತ್ತ್ತಿನಲ್ಲೆ ನನ್ನ ಪರಿಚಿತ ರೋಗಿಯೊಬ್ಬರು ನನ್ನನ್ನು ನಿಲ್ಲಿಸಿ ಮಾತನಾಡಲು ಪ್ರಾರಂಭಿಸಿದರು. ಈತನೆಲ್ಲಿ ನನ್ನಾಕೆಯನ್ನು ನೋಡಿ, ‘ಈಕೆ ನಿಮ್ಮ ಮೊಮ್ಮಗಳಾ’ ಎಂದು ಕೇಳುವನೋ ಎಂಬ ಹೆದರಿಕೆಯಿಂದ “ನೀನು ಮುಂದೆ ಹೋಗುತ್ತಾ ಇರು. ನಾನು ಈಗ ಬಂದೆ” ಎಂದು ನನ್ನಾಕೆಯನ್ನು ಮುಂದೆ ಸಾಗಹಾಕಿದೆ.
ಹಣೆಬರಹ
ಇನ್ನೊಮ್ಮೆ ನನ್ನಾಕೆ “ಭಿಕ್ಷುಕನಿಗೆ ಭಿಕ್ಷೆ ಹಾಕಬೇಕು. ೫೦ ರೂಪಾಯಿ ಕೊಡ್ರಿ ಎಂದು ಕೇಳಿದಳು. “ಏನು? ಭಿಕ್ಷುಕನಿಗೆ ೫೦ ರೂಪಾಯಿ ಭಿಕ್ಷೆನಾ! ಆತ ಏನು, ರಾಜಭಿಕ್ಷುಕನಾ?” ಎಂದೆ. ಆಗ ಆಕೆ “ಪಾಪ ಕುರುಡ ರೀ” ಎಂದಳು.
ನಾನು ಹೇಳಿದೆ, “ನೋಡು, ಆತ ಸುಳ್ಳು ಹೇಳ್ತಾ ಇದ್ದಾನೆ. ಅವನಿಗೆ ಕಣ್ಣು ಸರಿಯಾಗಿ ಕಾಣ್ತಾ ಇದೆ. ಭಿಕ್ಷೆಗಾಗಿ ಕುರುಡುತನದ ನಾಟಕ ಆಡ್ತಿದ್ದಾನೆ.”
“ಅಲ್ಲಾರಿ, `ನೀವು ಮಾಧುರಿ ದೀಕ್ಷಿತಳಿಗಿಂತ, ಪ್ರೀತಿ ಜಿಂಟಾಳಿಗಿಂತ, ಕರೀನಾ ಕಪೂರ್ಗಿಂತ ಸುಂದರವಾಗಿದ್ದೀರಿ’ ಅಂತ ಹೇಳಿದ” ಎಂದು ನನ್ನಾಕೆ ನಾಚಿಕೆಯಿಂದ ರಾಗವೆಳೆದಳು.
“ಹೋ, ಹಾಗೋ ವಿಷಯ. ನಿನ್ನನ್ನು ಸುಂದರಿ ಅಂದರೆ ನಿಜವಾಗಿಯೂ ಆತ ಕುರುಡನೇ ಆಗಿದ್ದಾನೆ; ಆತನಿಗೆ ೫೦ ರೂಪಾಯಿ ಭಿಕ್ಷೆ ಹಾಕು” ಎಂದೆ.
“ನೀವಂತೂ ಒಂದು ದಿನವೂ ನನ್ನನ್ನು ಸುಂದರಿ ಎಂದು ಹೇಳುವುದಿಲ್ಲ. ಬೇರೆಯವರು ನಿಮ್ಮ ಹೆಂಡತಿ ಚಂದ ಇದ್ದಾಳೆ ಅಂದರೆ ನೀವು ಸಹಿಸುವುದಿಲ್ಲ. ಎಲ್ಲಾ ಗಂಡಸರ ಹಣೆಬರಹವೇ ಇಷ್ಟು” ಎಂದಳು.
ಹೆಂಗಸರ ವಿಮರ್ಶೆ ಕೆಲವೊಮ್ಮೆ ಸರಿಯಾಗಿಯೇ ಇರುತ್ತೆ. ಎಲ್ಲ ಗಂಡಂದಿರಿಗೂ ಬೇರೆಯವರ ಹೆಂಡತಿ ಚೆಂದ ಕಾಣುತ್ತಾಳೆ ಎಂಬುದು ವಾಸ್ತವ ಸಂಗತಿ.
ಒಬ್ಬ ಕವಿಯ ಶೃಂಗಾರಕಾವ್ಯಕ್ಕೆ ಪ್ರಶಸ್ತಿ ಬಂದದ್ದಕ್ಕೆ ಆತನ ಗೆಳೆಯ ಆತನನ್ನು ಅಭಿನಂದಿಸಿ ಕೇಳಿದ: “ಸಾರ್, ಇಷ್ಟು ರೋಮಾಂಚಕಾರಿ ಶೃಂಗಾರಕಾವ್ಯ ಹೊರಹೊಮ್ಮಲು ಬಹುಶಃ ನಿಮ್ಮ ಹೆಂಡತಿ ಕಾರಣ ಇರಬಹುದಲ್ಲವೇ?”
ಕವಿ ಹೇಳಿದ, “ಖಂಡಿತವಾಗಿ ಹೌದು, ನಿಮ್ಮ ಹೆಂಡತಿಯೇ ನನ್ನ ಕಾವ್ಯಕ್ಕೆ ಸ್ಫೂರ್ತಿ!”
ಬಟ್ಟೆ-ಬರೆ
ಒಮ್ಮೆ ನಾನು ಮನೆಯ ಹೊರಜಗುಲಿಯಲ್ಲಿ ತಲೆಮೇಲೆ ಕೈಯಿಟ್ಟು ಚಿಂತಾಕ್ರಾಂತನಾಗಿ ಕೂತಿದ್ದೆ. ಗೆಳೆಯ ಬಂದು ಕೇಳಿದ, “ಯಾಕಿಷ್ಟು ಗಾಬರಿಯಾಗಿದ್ದಿ?”
“ಏನಿಲ್ಲ, ದೀಪಾವಳಿ ಬಂತು” ಎಂದೆ.
“ಏನಾಯಿತು; ಹಬ್ಬ ಬಂದರೆ ಸಂತೋಷ ತಾನೇ?”
“ಹೌದು, ಹೆಂಡತಿ-ಮಕ್ಕಳಿಗೆ ಬಟ್ಟೆ-ಬರೆ ತೆಗೆದು ಕೊಳ್ಳಬೇಕಲ್ಲವೇ!”
“ಅದು ವರ್ಷಕ್ಕೊಮ್ಮೆ ತಾನೆ?”
“ಅದು ಸರಿ, ಅದರೆ ಬಟ್ಟೆ ಹೆಂಡತಿಗೆ, ಬರೆ ನನಗೆ” ಎಂದಾಗ ಗೆಳೆಯನೂ ಚಿಂತಿತನಾದ.
ಸಾಧಕರು ಧ್ಯಾನದಲ್ಲಿ ಈ ಲೋಕವನ್ನೆ ಮರೆತರೆ, ಸ್ತ್ರೀಯರು ಸೀರೆಯ ಧ್ಯಾನದಲ್ಲಿ ಎಲ್ಲವನ್ನೂ ಮರೆಯುತ್ತಾರೆ. ತಗೊಳ್ಳುವುದು ಒಂದು ಸೀರೆಯಾದರೂ ನೋಡುವುದು ನೂರು ಸೀರೆ. ಒಮ್ಮೆ ಅಂಗಡಿಯಲ್ಲಿ ಎಷ್ಟು ಹೊತ್ತಾದರೂ ಸೀರೆ ಸೆಲೆಕ್ಷನ್ ಮುಗಿಸದ ಹೆಂಡತಿಯ ಮೇಲೆ ರೇಗಿದೆ, “ಇಷ್ಟವಾದ ಯಾವುದಾದರೂ ಸೀರೆ ಪ್ಯಾಕ್ ಮಾಡಿಸು. ಎಷ್ಟು ಹೊತ್ತು ಅಂತ ಕಾಯೋದು?”
“ಹಾಗಾದ್ರೆ ಇಲ್ಲಿರೋ ಸೀರೆಯೆಲ್ಲ ಪ್ಯಾಕ್ ಮಾಡಿಸಲೆ?” ಎಂದಾಗ ನಾನು ಸುಸ್ತಾಗಿ ಅಲ್ಲೆ ಕುಕ್ಕರಿಸಿದೆ. ಹಲವಾರು ಸೀರೆಗಳನ್ನು ಬಿಚ್ಚಿ, ಮುಚ್ಚಿ, ಮುಟ್ಟಿ, ಮೈಮೇಲೆ ಹಾಕಿ ಕೊನೆಗೂ ಒಲ್ಲದ ಮನಸ್ಸಿನಿಂದ ಒಂದು ಸೀರೆ ತಗೊಂಡಳು. ನಾನು ಮನೆಗೆ ಬಂದು ಸುಸ್ತಾಗಿ ಸೋಫಾದಲ್ಲಿ ಕುಕ್ಕರಿಸಿದೆ. ನನ್ನಾಕೆ ಹೊಸ ಸೀರೆ ಉಟ್ಟು ನಿರಿಗೆ ಚಿಮ್ಮಿಸುತ್ತಾ ನನ್ನ ಮುಂದೆ ಬಂದು ನಿಂತು ಮುಗುಳ್ನಕ್ಕಳು.
“ರೀ, ನಿಮ್ಮ ಕಣ್ಣಿಗೆ ಈ ಸೀರೆ ಹೇಗೆ ಕಾಣ್ತಾ ಇದೆ ಈಗ?”
“ನನ್ನ ಒಂದು ತಿಂಗಳ ಆದಾಯದ ಹಾಗೆ” ಎಂದೆ.
ನಾನು ಸ್ನಾನ ಮಾಡಿ ಹಿಂದಿನ ದಿನ ಫ್ರಿಜ್ನಲ್ಲಿಟ್ಟಿದ್ದ ಬ್ರೆಡ್ನ್ನು ಬಾಯಲ್ಲಿ ತುರುಕಿಕೊಂಡು ಕ್ಲಿನಿಕ್ಗೆ ಓಡಿದೆ. ಕ್ಲಿನಿಕ್ಗೆ ಬಂದ ತಕ್ಷಣ ಮೊಬೈಲ್ನಲ್ಲಿ ನನ್ನಾಕೆಯ ಅಕ್ಕರೆಯ ಅಲ್ಲ…. ಅಲ್ಲ…. ಅಚ್ಚರಿಯ ಕರೆ ಬಂತು. “ರೀ, ಈ ಸೀರೆ ಸೆಲೆಕ್ಟ್ ಮಾಡುವ ಗಡಿಬಿಡಿಯಲ್ಲಿ ಒಂದು ವಿಷಯ ಹೇಳಲಿಕ್ಕೆ ಮರೆತೇಹೋಯಿತು. ನಿಮ್ಮ ಸ್ನೇಹಿತ ಮದುವೆಯಾಗಲು ಆಯ್ಕೆ ಮಾಡಿರುವ ಹುಡುಗಿ ಸರಿಯಿಲ್ಲ; ನಿಮ್ಮ ಸ್ನೇಹಿತನ ಬದುಕಿನ ಹಿತದೃಷ್ಟಿಯಿಂದ ಈ ಮದುವೆ ನಿಲ್ಲಿಸಿ” ಎಂದಳು. ನಾನಂತೂ ಖಂಡ-ತುಂಡವಾಗಿ ನಿರಾಕರಿಸಿಬಿಟ್ಟೆ – “ನೋ, ನನ್ನ ಆತ್ಮೀಯನಾಗಿ ಆತ ಆವತ್ತು ನನ್ನ ಮದುವೆ ತಡೆದಿದ್ದನೇ?”
“ರೀ, ಇನ್ನೊಂದು ವಿಷಯಾರಿ…. ನಮಗೆ ಮದ್ವೆಮಾಡಿಸಿದ ಪರೋಹಿತರು ಇವತ್ತು ಬೆಳಗ್ಗೆ ಬಸ್ ಅಪಘಾತದಲ್ಲಿ ಸತ್ತುಹೋದರಂತೆ….”
“ಮತ್ತೆ, ಮಾಡಿದ ಪಾಪ ಸುಮ್ನೆ ಬಿಡುತ್ಯೆ?” ಎಂದೆ.
ಊಟಕ್ಕೆಂದು ಮಧ್ಯಾಹ್ನ ಮನೆಗೆ ಬಂದಾಗ ಈಕೆಯ ಅಡುಗೇನೆ ಆಗಿರಲಿಲ್ಲ.
“ನಾನಿವತ್ತು ಹೊಟೇಲ್ಗೆ ಹೋಗಿ ಊಟ ಮಾಡುತ್ತೇನೆ” – ನಾನು ಸಿಟ್ಟಿನಿಂದ ಕಿರುಚಿದೆ.
“ಸ್ವಲ್ಪ ನಿಲ್ಲಿ, ಒಂದು ಹತ್ತು ನಿಮಿಷ…” ಎಂದಳು ನನ್ನಾಕೆ.
“ಹತ್ತು ನಿಮಿಷದಲ್ಲಿ ಅಡುಗೆ ಮಾಡುತ್ತೀಯಾ?!”
“ಇಲ್ಲ, ಇಲ್ಲ. ಹೇಗೂ ಇಂದು ಸೀರೆ ತೆಗೆದುಕೊಂಡಿದ್ದೀವಿ ಅಲ್ವಾ. ಅದನ್ನುಟ್ಟುಕೊಂಡು ನಿಮ್ಮೊಟ್ಟಿಗೆ ನಾನೂ ಬರುತ್ತೇನೆ” ಎಂದಳು.
“ನೀವಂತೂ ನನ್ನನ್ನು ಎಲ್ಲೂ ತಿರುಗಾಡಿಸಲು ಕರಕೊಂಡು ಹೋಗುವುದಿಲ್ಲ. ಕನಿಷ್ಠಪಕ್ಷ ಹೊಟೇಲಿಗಾದರೂ ಕರಕೊಂಡುಹೋಗಿ” ಎಂದಳು.
“ಬೆಳಗ್ಗೆ ಹೊಸ ಸೀರೆ ಯಾರಿಗೆ ತೆಗೆಸಿಕೊಟ್ಟದ್ದು? ಅದನ್ನು ನಾನಾ ಉಡುತ್ತೇನೆ?” ಎಂದು ದಬಾಯಿಸಿದೆ.
“ಅಪರೂಪಕ್ಕೊಮ್ಮೆ ಒಂದು ಸೀರೆ ತೆಗೆಸಿಕೊಟ್ಟರೆ ಅದನ್ನೇ, ದೊಡ್ಡದಾಗಿ ಹೇಳಿಕೊಳ್ಳುತ್ತೀರಿ. ಪಕ್ಕದ ಮನೆಯ
ಮರೆಗುಳಿ ಪೆಫೆಸರ್ ಹೆಂಡತಿಯನ್ನು ನೋಡ್ರಿ. ಆಕೆ ‘ಈ ದಿನ ನಿಮ್ಮ ಹುಟ್ಟಿದಹಬ್ಬ ಎಂದು ಹೇಳಿ ವರ್ಷಕ್ಕೆ ನಾಲ್ಕೈದು ಸಲ ಹೊಸ ಹೊಸಸೀರೆ ತೆಗೆದುಕೊಳ್ಳುತ್ತಾಳೆ. ಪಾಪ, ಆ ಪೆಫೆಸರ್ಗೆ ತನ್ನ ಜನ್ಮದಿನಾಂಕ ಯಾವಾಗ ಅಂತಲೆ ಮರೆತುಹೋಗಿದೆ” ಎಂದಳು.
ಹೊಸ ವರಸೆ
ಕೆಲದಿನಗಳಿಂದ ನನ್ನಾಕೆ ನೆಕ್ಲೇಸಿಗಾಗಿ ನನ್ನನ್ನು ಪೀಡಿಸುತ್ತಾ ಇದ್ದಳು. ಕೊನೆಗೊಂದು ದಿನ ಆಕೆಗೆ ತಾಳ್ಮೆತಪ್ಪಿ ಹೇಳಿದಳು: “ಕಡೆಯದಾಗಿ ಹೇಳಿಬಿಡಿ, ನೀವೇನು ನೆಕ್ಲೆಸ್ ಕೊಡಿಸ್ತೀರೋ, ಇಲ್ಲ ಹೆಂಡತಿಯನ್ನು ಸಾಕಲಾರದವರು ಅಂತ ಒಪ್ಕೋತೀರೋ?”
“ನಾನೂ ನಿರ್ಧಾರ ಮಾಡಿಬಿಟ್ಟಿದ್ದೇನೆ ಕಣೇ….” ಎಂದೆ.
ಆಕೆ ಖುಷಿಯಿಂದ “ಏನು ನೆಕ್ಲೆಸ್ ಕೊಡಿಸುವುದಕ್ಕಾ?” ಕೇಳಿದಳು.
“ಅಲ್ಲ, ನಾನು ಅಯೋಗ್ಯ ಅಂತ ಒಪ್ಪಿಕೊಳ್ಳುವುದಕ್ಕೆ” ಎಂದೆ.
ನನ್ನ ಈ ಸಮಸ್ಯೆಯನ್ನು ಗೆಳೆಯನ ಹತ್ತಿರ ತೋಡಿಕೊಂಡೆ. ಯಾಕೆಂದರೆ ಆತನ ಹೆಂಡತಿ ಕೂಡ ಆತನನ್ನು ಯಾವಾಗಲೂ `ಒಡವೆ ಮಾಡ್ಸಿ, ಒಡವೆ ಮಾಡ್ಸಿ ಅಂತ ಪೀಡಿಸ್ತಾ ಇದ್ದಳು. ಇತ್ತೀಚೆಗೆ ಆ ಕಾಟದ ಬಗ್ಗೆ ಗೆಳೆಯ ಹೇಳ್ತಾನೆ ಇರಲಿಲ್ಲ. ನಾನು ಆತನನ್ನು ಈ ಬಗ್ಗೆ ಕೇಳಿದೆ.
“ಇನ್ನೊಂದು ಹುಡುಗಿಯನ್ನು ಮದುವೆ ಆಗ್ತೀನಿ; ಅವಳು ತರುವ ಒಡವೆಗಳನ್ನ ನಿನಗೆ ಕೊಡ್ತೀನಿ ಅಂತ ಹೇಳ್ದೆ ನೋಡು. ಈಗ ಒಡವೆಗಳ ಸುದ್ದಿಯೇ ಇಲ್ಲ ಎಂಬ ಮಾರ್ಗೋಪಾಯ ತಿಳಿಸಿದ ಗೆಳೆಯ.
ಸಾಮಾನ್ಯವಾಗಿ ಹೆಂಗಸರು ಗಂಡಸರಿಗಿಂತ ಜಾಸ್ತಿ ಮಾತನಾಡುತ್ತಾರೆ ಎಂಬ ಪ್ರತೀತಿ ಇದೆ. ಮೊಬೈಲ್ ಕಂಪೆನಿಗಳು ಬದುಕುತ್ತಾ ಇರುವುದೇ ಈ ಹೆಂಗಸರಿಂದ.
ಒಂದು ದಿನ ಕ್ಲಿನಿಕ್ನಿಂದ ಮನೆಗೆ ಮರಳಿದಾಗ ನನ್ನಾಕೆ ಎಂದಿನಂತೆ ಪ್ರವಚನ ಪ್ರಾರಂಭಿಸಿದಳು: “ನಾನು ಹೇಳಿದ್ಹಂಗೆ ಅಂಗಡಿಗೆ ಹೋಗಿ ಸಾಮಾನು ತಂದ್ರಾ? ಸ್ಟುಡಿಯೋಗೆ ಹೋಗಿ ಪ್ರಿಂಟ್ಗೆ ಕೊಟ್ಟಿದ್ದ ಫೋಟೋಗಳನ್ನು ತಂದ್ರಾ? ನೀವೆಲ್ಲಿ ತರ್ತೀರಿ. ನಿಮಗೆ ನೆನಪಿದ್ದರೆ ತಾನೆ. ನಾನು ಹೇಳಿದ ಮಾತು ನೀವು ಕೇಳಿಸಿಕೊಂಡ್ರಲ್ವೇ….! ಓಹೋ ತಂದೇ ಬಿಟ್ಟಿದ್ದೀರಿ; ಸದ್ಯ ದೇವರ ದಯ! ಒಂದೊಂದು ಸಲ ಚಮತ್ಕಾರಗಳು ನಡೆದುಬಿಡುತ್ತವೆ. ಕೊಡಿ ಇಲ್ಲಿ, ನಾನು ನೋಡ್ಬೇಕು.
“ಈ ಫೋಟೋ ನೋಡಿ, ಅಯ್ಯೋರಾಮ! ಎಷ್ಟು ಅಸಹ್ಯವಾಗಿದೆ…. ಇದು ನೋಡಿ, ಇದು ಅದಕ್ಕಿಂತಲೂ ಕೆಟ್ಟದ್ದಾಗಿದೆ. ಇಗೋ, ಇದನ್ನು ನೋಡೋಕೆ ಎರಡು ಕಣ್ಣೂ ಸಾಲದು. ಅಯ್ಯೋ ದೇವರೇ, ಇಷ್ಟು ಕೆಟ್ಟದಾಗಿರುವ ಫೋಟೋಗಳನ್ನು ನನ್ನ ಜನ್ಮದಲ್ಲೆ ನಾನು ನೋಡಿಲ್ಲ….
“ನಿಮಗೆ ಯಾವ ಕೆಲಸವನ್ನೂ ಸಹ ನೆಟ್ಟಗೆ ಮಾಡೋದಕ್ಕೆ ಆಗೋದಿಲ್ವಲ್ರಿ! ಫೋಟೋ ತೆಗೆಯೋದಂತೂ ಪರಮಾತ್ಮನಿಗೇ ಪ್ರೀತಿ….
“ನೋಡಿ, ನಂದು ಇಷ್ಟೊಂದು ಫೋಟೋಗಳು ತೆಗೆದಿದ್ದೀರ; ಪ್ರತಿಯೊಂದರಲ್ಲೂ ನನ್ನ ಬಾಯಿ ತೆರೆದೇ ಇದೆ!”
ಸಲಹೆ
ಒಂದು ದಿನ ಗೃಹಿಣಿಯೊಬ್ಬಳು ತನ್ನ ಗಂಡನನ್ನು ನನ್ನ ಕ್ಲಿನಿಕ್ಗೆ ಕರೆದುಕೊಂಡು ಬಂದು, “ಇವರು ರಾತ್ರಿಯೆಲ್ಲಾ ಕನಸಿನಲ್ಲಿ ಮಾತನಾಡುತ್ತಾ ಇರುತ್ತಾರೆ ಡಾಕ್ಟರೇ, ಇದು ವಾಸಿಯಾಗಲು ಏನಾದರೂ ಔಷಧಿ ಕೊಡಿ” ಎಂದು ತನ್ನ ಸಮಸ್ಯೆಯನ್ನು ತೋಡಿಕೊಂಡಳು. ನಾನು ಆಕೆಯ ಗಂಡನನ್ನು ಕೂಲಂಕಷವಾಗಿ ಪರೀಕ್ಷೆ ಮಾಡಿ ಆಕೆಗೆ ಹೇಳಿದೆ: “ಅವರಿಗೆ ನೀವು ಮನೆಯಲ್ಲಿ ಹಗಲುಹೊತ್ತಿನಲ್ಲಿ ಮಾತನಾಡಲು ಅವಕಾಶ ಕೊಟ್ಟರೆ, ಅವರು ರಾತ್ರಿ ಕನಸಿನಲ್ಲಿ ಮಾತನಾಡುವುದನ್ನು ನಿಲ್ಲಿಸುತ್ತಾರೆ.”
ಒಬ್ಬಾತ ವಿವಾಹವಿಚ್ಛೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ. ವಿಚ್ಛೇದನಕ್ಕೆ ಕಾರಣವೇನೆಂದು ನ್ಯಾಯಾಧೀಶರು ಕೇಳಿದರು. ಆತ ಹೇಳಿದ, “ನನ್ನ ಹೆಂಡತಿ ಮೂರು ತಿಂಗಳಿಂದ ನನ್ನೊಂದಿಗೆ ಒಂದೇ ಒಂದು ಮಾತನ್ನೂ ಆಡಿಲ್ಲ.”
“ನೀನು ಮತ್ತೊಮ್ಮೆ ಆಲೋಚಿಸುವುದು ಒಳ್ಳೆಯದು; ಅಂತಹ ಹೆಂಡತಿ ಅದೃಷ್ಟವಂತರಿಗೆ ಮಾತ್ರ ದೊರೆಯುತ್ತಾಳೆ” ಎಂದರು ನ್ಯಾಯಾಧೀಶರು.
ನಾನು ಮದುವೆ ಆಗುವ ಮುಂಚೆ ದಿನನಿತ್ಯವೂ ರೋಗಿಗಳ ಸಮಸ್ಯೆಗಳನ್ನು ಕೇಳಿ, ಕೇಳಿ ರಾತ್ರಿಯಾದಾಗ ತಲೆ ಚಿಟ್ಟುಹಿಡಿಯುತ್ತಿತ್ತು. ಒಂದು ದಿನ ನನ್ನ ಒಂಟಿಜೀವನದ ಬಗ್ಗೆ ಜುಗುಪ್ಸೆ ಬಂತು. ನನ್ನ ಹಿರಿಯ ಗೃಹಸ್ಥ ವೈದ್ಯರಲ್ಲಿ ನಾನು ನನ್ನ ಸಮಸ್ಯೆಯನ್ನು ಹೇಳಿದೆ.
ಹಿರಿಯ ವೈದ್ಯರು, “ಅಲ್ಲಯ್ಯಾ, ನೀನಿನ್ನೂ ಬ್ರಹ್ಮಚಾರಿ; ಕಷ್ಟಗಳು ನಿನಗೆಲ್ಲಿಂದ ಬಂದಾವು?” ಎಂದರು.
“ಆದರೆ ಕೆಲವರು ಹೇಳುತ್ತಾರೆ, ಬ್ರಹ್ಮಚಾರಿಗಳಿಗಿಂತ ವಿವಾಹಿತರ ಹೆಚ್ಚು ಕಾಲ ಬದುಕುತ್ತಾರಂತೆ, ಹೌದೆ?” ಅವರನ್ನು ಕೇಳಿದೆ.
“ಹಾಗೇನಿಲ್ಲ, ಮದುವೆಯಾದ ಮೇಲೆ ಒಂದೊಂದು ದಿನ ಕಳೆಯುವುದು ಕಷ್ಟ ಆಗಿ ಅದು ತಿಂಗಳಿನಂತೆ ಕಾಣುತ್ತದೆ. ಆದ್ದರಿಂದ ನಾವು ಸ್ವಲ್ಪ ಕಾಲ ಬದುಕಿದರೂ ಹೆಚ್ಚು ಕಾಲ ಬದುಕಿದಂತೆ ಅನಿಸುತ್ತದೆ.”
“ಹಾಗಾದರೆ ಸುಖ ಎಂದರೇನು?”
ಅವರು ಹೇಳಿದರು: “ನನಗಂತೂ ಗೊತ್ತಿಲ್ಲ. ಏಕೆಂದರೆ ನನಗೆ ಬಾಲ್ಯದಲ್ಲೇ ಮದುವೆಯಾಗಿದೆ.”
ಸಾಮಾನ್ಯವಾಗಿ ಗಂಡು ಹೆಣ್ಣನ್ನು ನೋಡುವುದಕ್ಕೆ ಹೋದಾಗ ಶರ್ಟಿನ ಗುಂಡಿಯನ್ನು ತಿರುಚುತ್ತಾನೆ. ಆತ ಗುಂಡಿಗೆ ಬಿದ್ದ ಎಂಬುದು ಅದರರ್ಥ. ಆಗ ಹೆಣ್ಣು ಕೂಡಲೇ ತಲೆಬಾಗಿ ಕಾಲ ಉಂಗುಷ್ಠದಿಂದ ನೆಲವನ್ನು ಕೆರೆದು ಗುಂಡಿಯನ್ನು ಇನ್ನೂ ಆಳವಾಗಿ ತೋಡುತ್ತಾಳೆ. ಆದ್ದರಿಂದಲೇ ಗಂಡಸರು ಗುಂಡಿಗಳಲ್ಲಿ ಹೆಚ್ಚು ಬೀಳುವುದು. ಅದಕ್ಕೇ ಇರಬೇಕು ಕಾರ್ಪೊರೇಷನ್ನವರುತೋಡುವ ಗುಂಡಿಗೆ ‘ಮ್ಯಾನ್ಹೋಲ್ ಎಂಬುದಾಗಿ ಹೆಸರಿಟ್ಟಿರುವುದು.
ಮದುವೆಯಾದ ಸ್ವಲ್ಪ ದಿನದಲ್ಲೇ ಗಂಡನ ಒಂದು ಕಾಲು ಮುರಿಯಿತು. ಆತ ಆಸ್ಪತ್ರೆಗೆ ಸೇರಿದ. ಈತನ ಪಕ್ಕದಲ್ಲೇ ಇನ್ನೊಬ್ಬ ಗೃಹಸ್ಥ ಮಲಗಿದ್ದ. ಆತನ ಎರಡೂ ಕಾಲು ಮುರಿದಿದ್ದವು. ಆತ ತುಂಬಾ ಹೊತ್ತು ಗೃಹಸ್ಥನ ಮುರಿದ ಎರಡೂ ಕಾಲುಗಳನ್ನು ನೋಡಿ, ಕೊನೆಗೂ ಧೈರ್ಯ ಮಾಡಿ ಕೇಳಿದ, “ನಿಮಗೆ ಇಬ್ಬರು ಹೆಂಡತಿಯರಾ ಸಾರ್?”
ಮುಯ್ಯಿಗೆ ಮುಯ್ಯಿ
ಸದಾ ಜಗಳ ಮಾಡುವ ಗಂಡ-ಹೆಂಡತಿಯರಿಗೆ ಒಂದು ಕಿವಿಮಾತಿದೆ. ನೀವು ಎಷ್ಟು ಬೇಕಾದರೂ ಜಗಳ ಮಾಡಿ, ನಂತರ ಸಿಟ್ಟಿನಲ್ಲಿ ಊಟ-ತಿಂಡಿಯನ್ನಾದರೂ ಬಿಡಿ. ಆದರೆ ಯಾವುದೇ ಕಾರಣಕ್ಕೂ ಪರಸ್ಪರ ಮಾತನಾಡುವುದನ್ನು ಬಿಡಬೇಡಿ.
ಒಮ್ಮೆ ಗಂಡ-ಹೆಂಡತಿಗೆ ಯಾವುದೋ ವಿಷಯದಲ್ಲಿ ಜಗಳವಾಯಿತು. ಇಬ್ಬರೂ ಮಾತು ನಿಲ್ಲಿಸಿದರು. ಪರಸ್ಪರ ಮಾತುಕತೆಯಿಲ್ಲದೆ ಹಲವು ದಿನಗಳ ತನಕ ಮೌನವಾಗಿ ಊಟ-ತಿಂಡಿ ಸಾಗುತ್ತಿತ್ತು. ಒಂದು ದಿನ ಗಂಡನಿಗೆ ಬೆಳಗ್ಗೆ ಬೇಗ ಎದ್ದು ಬಸ್ನಲ್ಲಿ ಪರವೂರಿಗೆ ಹೋಗಬೇಕಾಗಿತ್ತು. ಆತ ಸ್ವಭಾವದಲ್ಲಿ ಕುಂಭಕರ್ಣನಾದ್ದರಿಂದ ಬೆಳಗ್ಗೆ ಹೆಂಡತಿಯೇ ಎಬ್ಬಿಸಬೇಕು. ಈ ವಿಷಯವನ್ನು ಬಾಯಿಬಿಟ್ಟು ತಿಳಿಸೋಣ ಅಂದರೆ ಸ್ವಾಭಿಮಾನ ಅಡ್ಡಬಂತು. ‘ನನಗೆ ಪರವೂರಿಗೆ ಬೇಗ ಹೋಗಬೇಕಾದುದರಿಂದ ನನ್ನನ್ನು ನಾಳೆ ಬೆಳಗ್ಗೆ ೪ ಗಂಟೆಗೆ ಎಬ್ಬಿಸು’ ಎಂಬುದಾಗಿ ಚೀಟಿಯೊಂದರಲ್ಲಿ ಬರೆದು ಆಕೆ ಮಲಗುವ ತಲೆದಿಂಬಿನ ಹತ್ತಿರ ಇಟ್ಟ. ಆಕೆ ಅದನ್ನು ನೋಡಿ ಮಲಗಿದಳು. ಆದರೆ ಬೆಳಗ್ಗೆ ಎದ್ದು ನೋಡುತ್ತಾನೆ, ೮ ಗಂಟೆ ಆಗಿದೆ. ಈತನಿಗೆ ಸಿಟ್ಟು ನೆತ್ತಿಗೇರಿತು. ಹೆಂಡತಿಯನ್ನು ಬೈಯಬೇಕು ಎನ್ನುವಾಗ ಅವನ ತಲೆದಿಂಬಿನ ಹತ್ತಿರ ಒಂದು ಚೀಟಿ ಇತ್ತು – ‘೪ ಗಂಟೆ ಆಯಿತು. ಎದ್ದೇಳಿ’ ಎಂದು ಬರೆದಿತ್ತು ಅದರಲ್ಲಿ.
ಗಂಡ-ಹೆಂಡತಿಯರಲ್ಲಿ ಜಗಳ ಆಗುತ್ತದೆ ಎಂದು ಸ್ತ್ರೀಯರು ಮದುವೆ ಆಗದೆ ಇರಬಾರದು. ಯಾಕೆಂದರೆ ಪ್ರತಿಯೊಬ್ಬಳಿಗೂ ಒಬ್ಬ ಗಂಡ ಇರಲೇಬೇಕು; ಎಲ್ಲದಕ್ಕೂ ಇತರರನ್ನೂ ಸರಕಾರವನ್ನೂ ದೂಷಿಸಲು ಆಗುವುದಿಲ್ಲವಲ್ಲ.
ಒಮ್ಮೆ ನ್ಯಾಯಾಲಯದಲ್ಲಿ ತಪ ಮಾಡಿದ್ದಕ್ಕಾಗಿ ಕುಡುಕನೊಬ್ಬನನ್ನು ಕರಕೊಂಡು ಕಟಕಟೆಯಲ್ಲಿ ನಿಲ್ಲಿಸಿದರು.
“ಕುಡಿತ ಕುಡಿತ ಕುಡಿತ! ನಿನ್ನ ಇಂದಿನ ಪರಿಸ್ಥಿತಿಗೆ ಕೇವಲ ನಿನ್ನ ಕುಡಿತ ಕಾರಣ” – ಹೇಳಿದ ನ್ಯಾಯಾಧೀಶ.
“ಇದನ್ನು ಸ್ವಲ್ಪ ನನ್ನ ಹೆಂಡತಿಯ ಹತ್ತಿರ ಹೇಳಿ ಸ್ವಾಮಿ, ಆಕೆ ಎಲ್ಲದಕ್ಕೂ ನಾನೇ ಕಾರಣ ಎಂದು ಹೇಳುತ್ತಿರುತ್ತಾಳೆ….”
ಗಂಡಸರನ್ನು ಆಧ್ಯಾತ್ಮಿಕತೆಯತ್ತ ಕರಕೊಂಡು ಹೋಗುವುದೇ ಹೆಂಡತಿಯರು. ಅದಕ್ಕೋಸ್ಕರವೇ ಅವರನ್ನು ‘ಧರ್ಮಪತ್ನಿ’ ಎನ್ನುವುದು. ‘ಧರ್ಮಪತಿ’ ಎಂಬ ಶಬ್ದಪ್ರಯೋಗ ಎಲ್ಲೂ ಇಲ್ಲ. ನನ್ನನ್ನು ಧಾರ್ಮಿಕನನ್ನಾಗಿ ಮಾಡಿದ್ದು ನನ್ನ ಧರ್ಮಪತ್ನಿಯೇ. ನಾನು ಮದುವೆಯಾಗುವ ಮೊದಲು ಪಾಪ-ಪಣ್ಯ, ಸ್ವರ್ಗ-ನರಕ ಯಾವುದನ್ನೂ ನಂಬುತ್ತಿರಲಿಲ್ಲ. ಆದರೆ ಮದುವೆ ಮಾಡಿಕೊಂಡ ನಂತರವೇ ನಾನು ನರಕ ಎಂಬುದಿದೆ ಎಂಬುದನ್ನು ನಂಬಲು ಆರಂಭಿಸಿದ್ದು.
ಒಂದು ಸಲ ನನ್ನಾಕೆ ಕೇಳಿದಳು, “ರೀ, ಸ್ವರ್ಗದಲ್ಲಿ ಗಂಡ-ಹೆಂಡತಿಯರು ಒಟ್ಟಿಗೆ ವಾಸಿಸುವ ಹಾಗೆ ಇಲ್ವಂತೆ.”
“ಅದಕ್ಕೋಸ್ಕರವೇ ಅದನ್ನು ಸ್ವರ್ಗ ಎನ್ನುವುದು” ಎಂದೆ.
ನಾನು ಸ್ವಲ್ಪಮಟ್ಟಿಗೆ ಬರಹಗಾರನಾಗಿ ಬೆಳೆಯಲು ನನ್ನ ಧರ್ಮಪತ್ನಿಯೇ ಕಾರಣ ಎಂದರೆ ಅತಿಶಯೋಕ್ತಿಯಾಗಲಾರದು.
ಮದುವೆಯಾದ ಸ್ವಲ್ಪ ಸಮಯದಲ್ಲೆ ನಮ್ಮ ಪಕ್ಕದೂರಿನಲ್ಲಿ ಒಂದು ಸಣ್ಣ ಕಥಾಸ್ಪರ್ಧೆ ನಡೆಯಿತು. ಎಂದೂ ಕಥೆ ಬರೆಯದ ನಾನು ಆ ಸ್ಪರ್ಧೆಯಲ್ಲಿ ಭಾಗವಹಿಸಲು ಹೋದೆ. ಊರಿನವರೆಲ್ಲರೂ ತಮಾಷೆ ಮಾಡಿದರು. ‘ನಿನಗೆ ಬರವಣಿಗೆಯ ಅಭ್ಯಾಸ ಇಲ್ಲ. ಆ ಸ್ಪರ್ಧೆಗೆ ಪ್ರಸಿದ್ಧ ಸಾಹಿತಿಗಳೆಲ್ಲ ಬರುತ್ತಾರೆ. ಆದ್ದರಿಂದ ನೀನೇನು ಕಥೆ ಬರೆಯುತ್ತೀ’ ಎಂದು. ಎಲ್ಲರೂ ನನ್ನನ್ನು ಜರೆದರು. ಆದರೂ ನಾನು ಸ್ಪರ್ಧೆಯಲ್ಲಿ ಭಾಗವಹಿಸಿ ಕಥೆ ಬರೆದೆ.
ಆಶ್ಚರ್ಯವೆಂದರೆ ನನಗೇ ಪ್ರಥಮಸ್ಥಾನ ಬಂತು. ಎಲ್ಲರಿಗೂ ಆಶ್ಚರ್ಯ. ನನ್ನ ಕಥೆಯ ಬಗ್ಗೆ ಎಲ್ಲರೂ ಕೇಳಿದರು. ನಾನು ಹೇಳಿದೆ – “ಸಣ್ಣಕತೆಯಾದ್ದರಿಂದ ನಾನು ಎರಡೇ ವಾಕ್ಯ ಬರೆದೆ; ಅದೇನೆಂದರೆ – ನನಗೆ ಮದುವೆ ಆಯಿತು, ಅಲ್ಲಿಗೆ ನನ್ನ ಕತೆ ಮುಗಿಯಿತು ಎಂಬುದಾಗಿ.”
‘ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ’ ಎಂಬುದು ಕವಿವಾಣಿ. ಸಮರಸದಿಂದ ಸಂಸಾರ ಸಾಗಿಸಬೇಕಾದರೆ ನಾವು ಹಾಸ್ಯಪ್ರಜ್ಞೆ ಉಳ್ಳವರಾಗಿರಬೇಕು. ನಮ್ಮನ್ನೇ ನಾವು ಹಾಸ್ಯ ಮಾಡಿಕೊಳ್ಳುವಷ್ಟು ನಮ್ಮ ಮನಸ್ಸನ್ನು ವಿಶಾಲಗೊಳಿಸಬೇಕು. ಹಾಸ್ಯಪ್ರಜ್ಞೆಯನ್ನು ಜಾಗೃತಗೊಳಿಸಿ ಜೀವನದಲ್ಲಿ ಅಳವಡಿಸಿಕೊಂಡರೆ ಸಂಸಾರ ದುಃಖದ ಸಾಗರವಾಗದೆ ಆನಂದಸಾಗರವಾಗುತ್ತದೆ.?