ಮರು ಮುಂಜಾನೆ ರಿಂದಕ್ಕ ಗಿಡದಮುಂದೆ ನಿಂತಾಗ ಗಿಡ ಗಹಿಗಹಿಸಿ ನಕ್ಕಿತು.
ಪೂರ್ಣಬೋಧ ಗುರುತೀರ್ಥ ಪಯೋಬ್ಧಿಪಾರಾ….’
ಶ್ರೀ ಗುರುರಾಜರ ಸ್ತೋತ್ರವನ್ನು ಗುಣಿಗುಣಿಸುತ್ತಾ ರಿಂದಕ್ಕ ಒಂದು ಕೈನಲ್ಲಿ ಹೂಬುಟ್ಟಿ, ಮತ್ತೊಂದರಲ್ಲಿ ವಾಕಿಂಗ್ ಸ್ಟಿಕ್ ಹಿಡಿದು ಮುಂಬಾಗಿಲು ತೆಗೆದು ತೋಟದಲ್ಲಿ ಕಾಲಿಟ್ಟಾಗ ಸೂರ್ಯ ಅದೇ ತಾನೆ ಉದಯಿಸುತ್ತಿದ್ದ. ಸ್ತೋತ್ರ ಹೇಳಿಕೊಳ್ಳುತ್ತಲೇ ಪರಿಚಯದವರ್ಯಾರಾದರೂ ರಸ್ತೆಯಲ್ಲಿ ವಾಕಿಂಗಿಗೆ ಹೊರಟಿದ್ದಾರಾ ಎಂದು ಕಣ್ಣು ಹಾಯಿಸಿದರು.
ಹಿಂದೊಂದು ದಿನ ವಾಕಿಂಗ್ಸ್ಟಿಕ್ ಹಿಡಿದಿದ್ದು ಕಂಡು ಗೋದಾವರಿ ಕನಿಕರದಿಂದ ಲೊಚಗುಟ್ಟಿದ್ದಳು.
“ಅಯ್ಯೋ ಪಾಪ, ಈ ವಯಸ್ಸಿಗೇ ನಿಮಗೀಸ್ಥಿತಿ ಬರಬಾರದಿತ್ತು, ಹೇಗೆ ಸೋಲ್ಜರ್ ಥರ ಕೈಬೀಸಿಕೊಂಡು ನೆಟ್ಟಗೆ ನಡೀತಿದ್ರಿ. ಈಗ ಕೋಲೂರಿಕೊಂಡು ನಡ್ಯೋಸ್ಥಿತಿ ಬಂದುಬಿಡ್ತೇ? ಹಾಳು ವಯಸ್ಸು ಅನ್ನೋದು ಯಾರ್ಯಾರನ್ನೋ ಎಲ್ಲೆಲ್ಲೋ ಕೊಂಡುಹೋಗಿಬಿಡುತ್ತೆ” ಎಂದು ಸಂತಾಪದಿಂದ ಹೇಳಿದಾಗ ರಿಂದಕ್ಕನಿಗೆ ಗೋದಾವರಿಯನ್ನು ಕೈಲಿದ್ದ ಕೋಲಿನಿಂದಲೇ ಎರಡು ಬಾರಿಸಿಬಿಡುವಷ್ಟು ಕೋಪ ಬಂದಿತ್ತು. “ನನಗೇನೂ ಆಗಿಲ್ಲಮ್ಮಾ. ಈಗ್ಲೂ ಬೇಕಾದ್ರೆ ಸೋಲ್ಜರ್ ಥರವೇ ನಡೆಯಬಲ್ಲೆ. ಹೂವು ಕೀಳೋವಾಗ ಹೂ ಕೈಗೆ ಎಟುಕದಿದ್ರೆ ಈ ಕೋಲ್ನಿಂದ ಕೊಂಬೆ ಬಗ್ಗಿಸಿ ಕಿತ್ಕೋತೀನಿ” ಎಂದು ಸಾಗಹಾಕಿದ್ದರೂ ಅಂದಿನಿಂದ ಹೊರಬರುವ ಮುನ್ನ ಅತ್ತಿತ್ತ ನೋಡಿ ಪರಿಚಯಸ್ತರು ಯಾರೂ ರಸ್ತೆಯಲ್ಲಿ ಇಲ್ಲವೆಂದು ಖಾತ್ರಿ ಮಾಡಿಕೊಂಡೇ ವಾಕಿಂಗ್ ಸ್ಟಿಕ್ ಭೂಮಿಗೂರಿಕೊಂಡು ಮುಂದುವರಿಯುತ್ತಿದ್ದರು. ದಾಸವಾಳ, ಕನಕಾಂಬರ, ಪಾರಿಜಾತ, ಮಲ್ಲಿಗೆಯ ಜೊತೆ ತುಳಸೀ ದಳಗಳಿಂದ ಬುಟ್ಟಿ ತುಂಬಿತು. ಈಗವರ ಗಮನ ಮನೆ ಹಿಂದಿನ ಬೇಲಿಯ ಬಳಿ ದೊಡ್ಡದಾಗಿ ಬೆಳೆದು ಕಾಯಿಗಳ ಭಾರದಿಂದ ತುಸು ಮುಂದಕ್ಕೆ ಬಾಗಿ ನಳನಳಿಸುತ್ತಿದ್ದ ಪರಂಗೀ ಗಿಡದ ಮೇಲೆ ಬಿತ್ತು.
ಎಂದಿನಂತೆ ಅಂದೂ ಪರಂಗಿಗಿಡ ಒಂದು ವಿಧವಾಗಿ ನಗುತ್ತಾ ತನ್ನೊಡನೆ ಸಂವಾದ ನಡೆಸುತ್ತಿದೆ ಎನಿಸಿ ಒಂದು ಕ್ಷಣ ನಿಂತರು. “ಏನು ಹಾಗೆ ನೋಡ್ತಾ ನಿಂತುಬಿಟ್ಟೆ? ಹೇಗಿದ್ದೀನಿ ಅಂತ ನೋಡ್ತೀಯಾ? ನೀನು ನಿನ್ನ ಮಿಕ್ಕ ಗಿಡಗಳಿಗೆ ಮಾಡಿದಂತಹ ಆರೈಕೆ ನನಗೆ ಮಾಡದಿದ್ದರೂ ನಾನು ಆರೋಗ್ಯವಾಗಿಯೇ ಬೆಳೀತಿದ್ದೀನಿ. ಕಸದ ಗಾಡಿಯವನು ದಿನಾ ಬಂದು ಹಸೀ ತ್ಯಾಜ್ಯ ತೊಗೊಂಡು ಹೋಗೋಲ್ಲ; ಡಬ್ಬದಲ್ಲಿ ಹಾಕಿಟ್ರೆ ಕೊಳೆತು ನಾರುತ್ತೆ ಅಂತ ತಾನೇ ನಾನು ಈಗಿರೋ ಜಾಗ್ದಲ್ಲಿ ಗುಂಡಿತೋಡಿ ಕಸಾನ್ನ ಅದ್ರಲ್ಲಿ ಹಾಕೋಕ್ಕೆ ಶುರು ಮಾಡಿದ್ದು? ಕಸದಜೊತೆ ಎಲ್ಲಿಂದಲೋ ಬಂದ ನಾನು ಇಲ್ಲೇ ಜನ್ಮತಾಳಿದೆ. ಮೋಡ ವರ್ಷಧಾರೆ ಸುರಿಸ್ತು. ನನಗೆ ಅಷ್ಟೇ ಸಾಕಾಯ್ತು. ಈಗ ಈ ಮಟ್ಟಕ್ಕೆ ನಿನ್ನೆಲ್ಲಾ ಗಿಡಗಳಿಗಿಂತ ಆರೋಗ್ಯವಾಗಿ ಎತ್ತರಕ್ಕೆ ಬೆಳೆದು ನಿಂತಿದ್ದೀನಿ, ನೋಡು ಬಾ” ಎಂದು ಸವಾಲೆಸೆದಂತಾಯ್ತು.
“ನಿನಗೀ ಪರಂಗೀಗಿಡ ನೋಡಿದ್ರೆ ಏನನ್ಸತ್ತೆ?” ಗಿಡಗಳಿಗೆ ನೀರು ಹಾಯಿಸಲು ಪೈಪ್ ಹಿಡಿದುಬಂದ ವಿಠ್ಠಲಾಚಾರ್ಯರು ಪತ್ನಿಯನ್ನು ಕೇಳಿದರು.
“ಬೆಣ್ಣೆ, ತುಪ್ಪ, ಹಾಲು, ಮೊಸರು, ಹಣ್ಣು, ತರಕಾರಿ ತಿನ್ನಿಸಿ ಮನೆ ತುಂಬಾ ಡೆಟ್ಟಾಲು, ಫಿನಾಯಿಲು ಬಳಸಿ ಜಾಗ್ರತೆಯಿಂದ ಮುಚ್ಚಟೆಯಿಂದ ಬೆಳೆಸಿದ ಮಕ್ಕಳು ನರಪೇತಲರಾಗಿ ಅನಾರೋಗ್ಯದಿಂದ ನರಳುತ್ತಾ ನಾಜೋಕಾಗಿ ಬೆಳೆದ್ರೆ, ಏನೇನೂ ಆರೈಕೆ ಇಲ್ದೆ ಸಿಕ್ಕಿದ್ದು ತಿಂದುಕೊಂಡು ಎಲ್ಲೋ ಮಲಗಿ ಎಲ್ಲೋ ಏಳುವ ಮಕ್ಕಳು ಗಟ್ಟಿಮುಟ್ಟಾಗೇ ಬೆಳೀತವೆ ಅನ್ಸತ್ತೆ. ನಂದಿರ್ಲಿ, ನಿಮಗೇನನ್ನಿಸುತ್ತೆ?”
“ಪರಂಗೀ ಗಿಡದಲ್ಲಿ ಕುಂಬಳಕಾಯಿ ಬಿಟ್ಟಿದೆಯೇನೋ ಅನ್ನೋ ಭ್ರಮೆ ಮೂಡುತ್ತೆ. ಇದರ ಗಾತ್ರ ನೋಡು. ಕಿತ್ತು ಯಾವ್ದಾದ್ರೂ ಕೃಷಿ ಸ್ಪರ್ಧೆಗೆ ಕಳಿಸಿದ್ದಿದ್ರೆ ಪ್ರಶಸ್ತಿ ಸಿಕ್ಕಿರೋದು. ನಾವಿಬ್ರೂ ಈ ಭಾರೀ ಹಣ್ಣನ್ನು ಕೈಲಿ ಹಿಡಿದು ಕ್ಯಾಮರಾ ಮುಂದೆ ಹಲ್ಕಿರೀತಾ ನಿಂತುಕೋಬಹುದಿತ್ತು.”
“ಸದ್ಯಃ ಸುಮ್ನಿರಿ. ನಿಮ್ಮ ಕಣ್ಣೇ ಬಿದ್ದೀತು. ಸ್ಪರ್ಧೇನೂ ಬೇಡ ಫೋಟೋನೂ ಬೇಡ. ಯಾರದೋ ಕೆಟ್ಟ ಕಣ್ಣು ಬೀಳೋದೂ ಬೇಡ” ಎನ್ನುತ್ತಾ ಮೆಚ್ಚುಗೆಯಿಂದ ಕುಂಬಳಕಾಯಿಯಂತೆ ಬೆಳೆದಿದ್ದ ಪರಂಗೀ ಕಾಯಿಯನ್ನು ನವಿರಾಗಿ ತಡವಿದರು. “ಆಗ್ಲೇ ಹಳದಿಗೆ ತಿರಗ್ತಾ ಇದೆ. ಕೀಳಲೇ?”
“ಬೇಡ ಮಾರಾಯ್ತಿ. ಗಿಡದಲ್ಲೇ ಹಣ್ಣಾದಷ್ಟೂ ರುಚಿ ಜಾಸ್ತಿ. ಇನ್ನೊಂದು ವಾರ ಬಿಟ್ಟು ಕೀಳೋಣ” ಎಂದು ಮುಂದೆ ಹೋದರು.”
* * *
ನಾಲ್ಕು ದಿನಗಳ ಬಳಿಕ ರಿಂದಕ್ಕ ಎಂದಿನಂತೆ ಹೂವು ಕಿತ್ತು ಪರಂಗಿ ಗಿಡದ ಮುಂದೆ ಬಂದು ನಿಂತಾಗ ಗಿಡವೇಕೋ ಮೌನವಾಗಿದೆ ಎನಿಸಿತು. ಕುಂಬಳಕಾಯಿಯಂತಹ ಪರಂಗೀಕಾಯಿ ಇದ್ದ ಜಾಗ ಬಿಕೋ ಎನ್ನುತ್ತಿತ್ತು!
ಅಲ್ಲಿಂದ ಹಾಲಿನ್ನೂ ತೊಟ್ಟಿಕ್ಕುತ್ತಿದ್ದುದು ಕಂಡು ಅದು ಕಣ್ಣೀರು ಸುರಿಸುತ್ತಿದೆಯೇನೋ ಎಂಬ ಭಾವನೆ ಬಂತು. ಈಗ್ಲೇ ಕೀಳ್ಬೇಡ. ಗಿಡದಲ್ಲೇ ಹಣ್ಣಾಗ್ಲಿ ಎಂದಿದ್ದ ಗಂಡ ತಾನೇ ಕಿತ್ತಿದ್ದಾರೆ. ಅದೇನು ಅತುರವೋ ಈ ಮನುಷ್ಯನಿಗೆ ಎಂದುಕೊಳ್ಳುತ್ತಿದ್ದಾಗಲೇ ಮನೆಯೊಳಗಿಂದ ದೂರವಾಣಿ ಕರೆಕೇಳಿ ವಿಷಯವನ್ನಲ್ಲೇ ಮರೆತು ಒಳಕ್ಕೆ ಧಾವಿಸಿದರು. ಅದು ಮತ್ತೆ ನೆನಪಿಗೆ ಬಂದಿದ್ದು ಸಂಜೆ ಇಬ್ಬರೂ ಚಹಾ ಸೇವಿಸುತ್ತಿದ್ದಾಗಲೇ.
“ನನ್ನನ್ನು ಕೀಳ್ಬೇಡ ಅಂದ್ಬಿಟ್ಟು ನೀವೇ ಕಿತ್ತಿದ್ದೀರ! ಹೋಗ್ಲಿ ಆ ಕಾಯನ್ನು ಅದೆಲ್ಲಿ ಬಚ್ಚಿಟ್ಟಿದ್ದೀರಾ?”
“ನನ್ಕೇಳಿದ್ರೆ ನಾನೇನು ಹೇಳಲಿ? ಕಿತ್ತೋವ್ಳು ನೀನು. ನೀನು ಹೇಳ್ಬೇಕು.”
“ನಾನೆಲ್ಲಿ ಕಿತ್ತೆ? ನನ್ಮೇಲೆ ಸುಮ್ಸುಮ್ನೆ ಗೂಬೆಕೂರಿಸಬೇಡಿ.”
“ನಾನು ಕಿತ್ತಿಲ್ಲಾ. ನೀನೂ ಕಿತ್ತಿಲ್ಲ. ಅಂದ್ರೆ ಕಿತ್ತಿರುವವರು ಯಾರು?”
ಇಬ್ಬರೂ ತಲೆಯಮೇಲೆ ಕೈಹೊತ್ತು ಚಿಂತಿಸಿಯೇ ಚಿಂತಿಸಿದರು. ಮುಂಜಾನೆ ನೋಡಿದಾಗ ಹಾಲಿನ್ನೂ ತೊಟ್ಟಿಕ್ಕುತ್ತಿತ್ತು. ಅಂದರೆ ಕಾಯಿಕಿತ್ತು ಕೆಲವೇ ನಿಮಿಷಗಳಾಗಿದ್ದಿರಬೇಕು. ಆ ವೇಳೆಗೆ ಪೇಪರ್ ಹಾಗೂ ಹಾಲಿನ ಹುಡುಗರ್ಯಾರೂ ಬಂದಿರಲಿಲ್ಲ. ಗಿಡ ಮನೆಯ ಹಿಂಭಾಗದಲ್ಲಿದ್ದದ್ದರಿಂದ ಅದರ ಇರುವಿಕೆಯೇ ಮುಂದೆ ಓಡಾಡುವವರ್ಯಾರಿಗೂ ತಿಳಿದಿರಲು ಅಸಾಧ್ಯ. ಮನೆಯ ಹಿಂಬದಿಗಿದ್ದುದು ಬೋರಣ್ಣನ ಮನೆ ಮಾತ್ರ. ಅಲ್ಲಿಂದ ಕೈನೀಡಿದರೂ ಕಾಯಿ ಕೈಗೆಟಕುವಂತಿತ್ತು. ಹಾಗಾದರೆ ಇದು ಬೋರಣ್ಣನ ಕೆಲಸವೇ? ರಿಂದಕ್ಕ ಗಂಡನನ್ನು ತರಾಟೆಗೆ ತೆಗೆದುಕೊಂಡರು. “ಎಲ್ಲಾ ಆದದ್ದು ನಿಮ್ಮಿಂದ. ಆವತ್ತೇ ಕೀಳೋಣ ಅಂದೆ. ಅತ್ಯಾಸೆ ಪಟ್ಕೊಂಡು ಇನ್ನೂ ಹಣ್ಣಾಗ್ಲಿ ಅಂತಂದ್ರಿ. ಈಗೇನಾಯ್ತು ನೋಡಿ. ಆ ಬೋರಣ್ಣ ಹೊಡ್ಕೊಂಡು ಹೋದ.” ರಿಂದಕ್ಕನ ಗಂಟಲೇರಿತ್ತು.
“ಶ್ಶು…. ಗಟ್ಟಿಯಾಗಿ ಮಾತನಾಡ್ಬೇಡ. ಬೋರಣ್ಣ ಕೇಳಿಸ್ಕೊಂಡಾನು. ಅಂಥಾ ದೊಡ್ಡಮನುಷ್ಯ. ಅರಮನೆಯಂತಹ ಬಂಗ್ಲೆ. ಅವಂಗೇನು ಕಡಮೆಯಾಗಿದೆ ನಮ್ಮನೆ ಕಾಯಿ ಕೀಳೋಕ್ಕೆ? ಲಕ್ಷ್ಮಿ ಕಾಲು ಮುರ್ಕೊಂಡು ಪರ್ಮನೆಂಟ್ ಆಗಿ ಅವನ ಮನೇಲಿ ಬಿದ್ದಿದ್ದಾಳೆ. ಬೇಕಾದ್ರೆ ಅಂಗ್ಡಿಯಿಂದ ಇಂತಹ ನೂರು ಕಾಯಿ ಕೊಂಡ್ಕೊಳ್ಳೋ ಯೋಗ್ಯತೆ ಆವನಿಗಿದೆ. ನೀನು ಸುಮ್ಸುಮ್ನೆ ಅವನಮೇಲೆ ಸಂದೇಹ ಪಡ್ಬೇಡ.”
ಗಂಡ ಅಷ್ಟೆಲ್ಲಾ ಹೇಳಿದ್ದರೂ ರಿಂದಕ್ಕನಿಗೆ ಏನೋ ತೀರದ ಅನುಮಾನ. ಅಂದು ಸಂಜೆ ಬೋರಣ್ಣನನ್ನು ಕಂಡಾಗ ತಲೆಯಲ್ಲಿ ಕೊರೆಯಿತ್ತಿದ್ದುದನ್ನು ಪ್ರಸ್ತಾಪಿಸಿದರು.
“ನೋಡಿ ಬೋರಣ್ಣೋರೆ. ನಾವು ಚೆನ್ನಾಗಿ ಹಣ್ಣಾಗ್ಲಿ ಅಂತ ಬಿಟ್ಟಿದ್ದ ಪರಂಗೀ ಹಣ್ಣನ್ನು ಯಾರೋ ಪುಣ್ಯಾತ್ಮ ನಿನ್ನೆ ಎಗರಿಸಿಬಿಟ್ಟಿದ್ದಾನೆ.
“ಏನ್ರಮ್ಮ ನೀವು? ಅವನ್ನ ಪುಣ್ಯಾತ್ಮ ಅಂತೀರಲ್ಲ. ಕಳ್ಳ ಸೂ…. ಅಂತನ್ನಿ. ಅದೇನು ಕಳ್ಳತನ ಮಾಡೋಷ್ಟು ದೊಡ್ಡ ವಸ್ತುವೇ? ದುಡ್ಡು ಬಿಸಾಕಿದ್ರೆ ಅಂಗ್ಡೀಲಿ ಸಿಗೋದು. ಶುದ್ಧ ಕೀಳುಜನ. ಈಗ ಜನಕ್ಕೆ ಕಾನೂನಿನ ಭಯ ಇಲ್ಲ, ಧರ್ಮ-ಕರ್ಮದಲ್ಲಿ ಶ್ರದ್ಧೇನೂ ಇಲ್ಲ. ಅದಕ್ಕೇ ಕಾಲ ಹೀಗಾಗಿರೋದು” ಎಂದು ಕೈಯ್ಯಾಡಿಸುತ್ತಾ ಹೋಗಿಬಿಟ್ಟರು.
ರಿಂದಕ್ಕನಿಗೆ ತಾನವನ ಮೇಲೆ ಸಂದೇಹಪಟ್ಟದ್ದೇ ಅಪರಾಧವೇನೋ ಎಂದು ಆತ್ಮಸಾಕ್ಷಿ ಕಾಡಿತು.
* * *
ಫ್ಯಾನ್ ರಿಪೇರಿಮಾಡಲು ಹತ್ತು ಗಂಟೆಗೆ ಬರುವುದಾಗಿ ಹೇಳಿದ್ದ ಮಂಜುನಾಥ ಹನ್ನೆರಡಕ್ಕೆ ಬಂದು ಬಾಗಿಲು ತಟ್ಟಿದ್ದ. ಕಣ್ಣೆದುರಿನಲ್ಲಿ ಬೆಳೆದ ಹುಡುಗ. ಅವನಿಗೆ ಈ ಅಂಕಲ್-ಆಂಟಿಯ ಬಳಿ ಸಲುಗೆ ಜಾಸ್ತಿ. ಈ ಸಲುಗೆಯನ್ನು ಬಳಸಿಕೊಂಡು ವಿಠ್ಠಲಾಚಾರ್ಯರು ದಬಾಯಿಸಿದರು. “ಏನೋ ಮಂಜು. ಹೊತ್ತು ಗೊತ್ತು ಏನೂ ಇಲ್ವಾ? ಗಂಟೆ ಎಷ್ಟಾಯ್ತು?”
“ಸಾರಿ ಅಂಕಲ್, ಹತ್ತಕ್ಕೇ ಬಂದೆ. ನನ್ನ ಗ್ರಹಚಾರ. ಬೋರಣ್ಣನ ಕಣ್ಣಿಗೆ ಬಿದ್ದೆ. ಮನುಷ್ಯ ಜಿಗಣೆ ಜಾತಿಯವ್ನು. ಒಮ್ಮೆ ಹಿಡಿದ್ರೆ ಬಿಡೋಲ್ಲ. ಬಾತ್ರೂಮಿನ ಗೀಸರ್ ಕೆಟ್ಟಿದೆ. ಸರಿಮಾಡು ಅಂತ ಹಿಡ್ಕೊಂಡುಬಿಟ್ಟ.”
“ಒಳ್ಳೇದಾಯ್ತು ಪಾಪ. ರಿಪೇರಿ ಮಾಡ್ದೆ ತಾನೇ?”
“ಏನು ಒಳ್ಳೇದು ಆಂಟಿ? ಮನುಷ್ಯ ಕಾಸು ಬಿಚ್ಚೊಲ್ಲ. ಏನಾರಾ ನೆವ ಹೇಳ್ತಾನೆ. ಇವತ್ತೂ ಅದೇ ಕಥೆಯಾಯ್ತು. ನಾನೂ ನಿಮ್ಮಪ್ನೂ ಬಾಲ್ಯ ಸ್ನೇಹಿತ್ರು. ಕೂಲಿ ಕೊಟ್ರೆ ಸ್ನೇಹಕ್ಕೆ ಅಪಚಾರ ಮಾಡ್ದಹಂಗೆ. ಬಂದಿದ್ದೀ. ಈ ಹಣ್ಣು ತಿಂದು ಹೋಗು ಅಂತ ಬಲವಂತ್ವಾಗಿ ತಟ್ಟೆತುಂಬ ಹಣ್ಣಿನ ಹೋಳು ಹಾಕಿಕೊಟ್ರು….”
ರಿಂದಕ್ಕನಿಗೆ ಯಾವುದೋ ಜಾಡು ಸಿಕ್ಕಂತಾಯ್ತು. “ಯಾವ ಹಣ್ಣು ಕೊಟ್ರು? ಮಾವು? ಹಲಸು? ಕಲ್ಲಂಗಡಿ?”
“ಅವ್ಯಾವೂ ಅಲ್ಲ ಆಂಟಿ. ಪರಂಗೀ ಹಣ್ಣು ಕೊಟ್ರು. ಮನುಷ್ಯ ಜಿಪುಣಚಕ್ರವರ್ತಿ. ಎಂಜಲು ಕೈನಲ್ಲಿ ಕಾಗೆ ಓಡಿಸುವವನಲ್ಲ. ಅಂಥವನು ಕೊಟ್ಟ ಹಣ್ಣು ಎಂಥ ರುಚಿ ಇತ್ತು ಅಂತೀರಿ! ಸಿಹಿ ಎಷ್ಟಿತ್ತು ಅಂದ್ರೆ ಅದರಲ್ಲೇ ಸಕ್ಕರೆ ತಯಾರಿಸಬಹುದಾದಷ್ಟು ಸಿಹಿ….”
“ಪರಂಗೀ ಹಣ್ಣಾ!” ದಂಪತಿಗಳಿಬ್ಬರೂ ರಿಹರ್ಸಲ್ ಮಾಡಿಕೊಂಡಿದ್ದವರಂತೆ ಒಕ್ಕೊರಳಿನಿಂದ ಕೇಳಿದರು.
“ಹೌದು. ಪರಂಗೀ ಹಣ್ಣೇ. ಎಷ್ಟು ಧಾರಾಳತನ ತೋರ್ಸಿದ್ರು ಅಂತಂದ್ರೆ ಆ ಹಣ್ಣು ಎಲ್ಲೋ ಕಳ್ಳಮಾಲೇ ಇರ್ಬೇಕು ಅಂತ ನಂಗೆ ಅನುಮಾನ” ಎಂದು ನಗುತ್ತಾ ತನ್ನ ಕೆಲಸದತ್ತ ಗಮನ ಹರಿಸಿದ.
* * *
ಮರು ಮುಂಜಾನೆ ರಿಂದಕ್ಕ ಗಿಡದಮುಂದೆ ನಿಂತಾಗ ಗಿಡ ಗಹಿಗಹಿಸಿ ನಕ್ಕಿತು. “ಏ ಯಾತಕ್ಕೆ ನನ್ನ ಕಂಡು ನಗ್ತೀ? ನಾನೀಗ ನಿಂಗೆ ತುಂಬಾ ಸಸಾರ ಆದೆ ಅಲ್ವಾ?” ರಿಂದಕ್ಕ ರೇಗಿದರು.
“ಕಾಯಿ ಹೋಯ್ತೂಂತ ನನ್ಮೇಲೇಕೆ ರೇಗ್ತೀ? ನನ್ನ ನೀನೇನು ಪಾಲಿಸಿದ್ಯಾ ಅಥ್ವಾ ಪೋಷಿಸಿದ್ಯಾ? ಇಷ್ಟಕ್ಕೂ ನಿನಗೆ ಅದರಮೇಲೆ ಏನು ಹಕ್ಕಿತ್ತು? ನಿನಗೆ ಹಕ್ಕಿದೆ ಅಂತ ವಾದಿಸೋದಾದ್ರೆ ಅದೇ ಹಕ್ಕು ಬೋರಣ್ಣಂಗೂ ಇರ್ಬೇಕಲ್ವಾ? ಬೋರಣ್ಣ ಒಬ್ನೇ ಅಲ್ಲ. ನೀವು ಮನುಷ್ಯರೆಲ್ರೂ ಕಳ್ರೇ. ನಾನು ತಯಾರುಮಾಡೋ ಆಹಾರವೆಲ್ಲಾ ತಿಂದು ತೇಗ್ತೀರ. ನೀವೆಲ್ರೂ ಕಳ್ರು…. ಕಳ್ರು….” ಗಿಡ ಮೌನ ತಳೆಯಿತು.
ಅಂದೇ ಕೊನೆ. ಮತ್ತೆ ಗಿಡ ರಿಂದಕ್ಕನೊಡನೆ ಸಂವಾದ ನಡೆಸಿಲ್ಲ.?