ಕರ್ಮಣಾ ಜಾಯತೇ ಸರ್ವಂ ಕರ್ಮೈವ ಗತಿಸಾಧನಂ |
ತಸ್ಮಾತ್ ಸರ್ವಪ್ರಯತ್ನೇನ ಸಾಧು ಕರ್ಮ ಸಮಾಚರೇತ್ ||
– ವಿಷ್ಣುಪುರಾಣ
“ಜಗತ್ತಿನಲ್ಲಿ ಎಲ್ಲವೂ ಆಗುವುದು ಕರ್ಮಾಚರಣೆಯ ಮೂಲಕವೇ. ಉನ್ನತಿಗೋ ಅಧೋಗತಿಗೋ ಎಲ್ಲಕ್ಕೂ ಕಾರಣವಾಗುವುದು ಕರ್ಮಾಚರಣೆಯೇ. ಆದುದರಿಂದ ಇಷ್ಟಾನಿಷ್ಟಗಳಿಗೆ ಬಲಿಬೀಳದೆ ಆಲಸ್ಯ-ಅಲಕ್ಷ್ಯಗಳಿಗೆಡೆಗೊಡದೆ ವಿವೇಚನಪೂರ್ವಕವಾಗಿ ಲಬ್ಧ ಕರ್ಮಗಳನ್ನು ಪಾಲುಮಾರದೆ ನಡೆಸಬೇಕು.”
ನಮ್ಮ ಇಡೀ ಜೀವನವಷ್ಟೂ ಕರ್ಮಾವಲಂಬಿಯಾದದ್ದು. ಇದರಿಂದ ಯಾರಿಗೂ ವಿನಾಯತಿ ಇಲ್ಲವೆಂಬುದು ಪ್ರಕೃತಿನಿಯಮ. ಆದರೆ ನಮ್ಮ ಪಾಲಿಗೆ ಬಂದ ಕೆಲಸವನ್ನು ಮನಃಪೂರ್ವಕವಾಗಿಯೂ ಉತ್ಸಾಹಪೂರ್ಣವಾಗಿಯೂ ಮಾಡುವುದರಿಂದ ಧನ್ಯತಾಭಾವವೂ ಪ್ರಸನ್ನತೆಯೂ ಉಂಟಾಗುತ್ತವೆ. ಒದಗಿದ ಕರ್ತವ್ಯದ ವಿಷಯದಲ್ಲಿ ಹಲವೊಮ್ಮೆ ಅರುಚಿಕರವೆಂದೋ ಸ್ವಪ್ರತಿಷ್ಠೆ-ಅಹಮಿಕೆಯಿಂದಲೋ ಅನುತ್ಸಾಹ ತಳೆಯುವುದಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದೆಂಬ ಧ್ವನಿಯೂ ಮೇಲಣ ಸೂಕ್ತಿಯಲ್ಲಿ ಅಡಗಿದೆ.
ರಿಜರ್ವ್ ಬ್ಯಾಂಕಿನ ಗವರ್ನರ್ ಆಗಿಯೂ ಕೇಂದ್ರದಲ್ಲಿ ಅರ್ಥಖಾತೆಯ ಸಚಿವರಾಗಿಯೂ ಒಳ್ಳೆಯ ಸಂಸ್ಕೃತ ವಿದ್ವಾಂಸರಾಗಿಯೂ ಕೀರ್ತಿವಂತರಾಗಿದ್ದ ಸಿ.ಡಿ. ದೇಶಮುಖ್ ತಮ್ಮ ಅನುಭವವನ್ನು ಆಗಾಗ ಹೇಳುತ್ತಿದ್ದರು. ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೇಲೆ ಕೆಲಸಕ್ಕೆ ಸೇರುವುದಕ್ಕೆ ಮೊದಲು ಸ್ವಲ್ಪ ಸೇವಾಜೀವನದ ಅನುಭವ ಪಡೆಯ ಬಯಸಿ ಸಾಬರಮತಿ ಆಶ್ರಮಕ್ಕೆ ಹೋದರು. ಆಶ್ರಮಕ್ಕೆ ಬಂದವರು ಯಾವುದಾದರೂ ಕಾಯಕ ಮಾಡಬೇಕೆಂಬುದು ಅಲ್ಲಿಯ ನಿಯಮವಾಗಿತ್ತು. ಅದರಂತೆ ದೇಶಮುಖ್‌ರಿಗೆ ವ್ಯವಸ್ಥಾಪಕರು ಸ್ನಾನಗೃಹ ಸ್ವಚ್ಛತೆಯ ಕೆಲಸವನ್ನು ವಹಿಸಿದರು. ತನ್ನಂತಹ ಉನ್ನತ ಶಿಕ್ಷಿತನು ಬಚ್ಚಲು ತೊಳೆಯುವ ಕೆಲಸ ಮಾಡುವುದೆ – ಎನಿಸಿ ಗಾಂಧಿಯವರಲ್ಲಿಗೇ ಹೋಗಿ ದೂರಿದರು, ದೇಶಮುಖ್. ಗಾಂಧಿ ಹೇಳಿದರು: “ನಮ್ಮ ದೃಷ್ಟಿಯಲ್ಲಿ ಕೆಲಸದಲ್ಲಿ ಮೇಲುಕೀಳೆಂಬ ಭೇದಗಳಿಲ್ಲ. ನೀವು ಸಣ್ಣದೆಂದುಕೊಂಡಿರುವ ಕೆಲಸವನ್ನು ಸಮರ್ಪಕವಾಗಿ ಮಾಡಿದರೆ ಮುಂದೆ ದೊಡ್ಡ ಕೆಲಸಗಳನ್ನು ಚೆನ್ನಾಗಿ ಮಾಡಲು ಸಮರ್ಥರಾಗಬಹುದು. ನಿಮಗೆ ಸಂಕೋಚವೆನಿಸಿದರೆ ನಿಮ್ಮೊಡನೆ ಬಚ್ಚಲು ತೊಳೆಯಲು ನಾನೂ ಬರುತ್ತೇನೆ.” ಹೀಗೆ ತಮಗೆ ಶ್ರಮಪ್ರತಿಷ್ಠೆಯ ಬೋಧೆ ದೊರೆತು ಸಂಸ್ಕಾರಪ್ರದವಾಯಿತು – ಎನ್ನುತ್ತಿದ್ದರು ದೇಶಮುಖ್.