ಕಂಪ್ಯೂಟರ್ಗಳಲ್ಲಿ ಮನುಷ್ಯನು ತನ್ನ ಜ್ಞಾನ, ಶ್ರಮ ಮತ್ತು ಸಮಯ ವ್ಯಯಗಳಿಂದ ಉತ್ಪಾದಿಸುವ ಡಿಜಿಟಲ್ ನಾಣ್ಯವನ್ನು ಕ್ರಿಪ್ಟೋಕರೆನ್ಸಿ ಎಂದು ಸರಳವಾಗಿ ಕರೆಯಬಹುದಾಗಿದೆ. ಕ್ರಿಪ್ಟೋಕರೆನ್ಸಿಯ ಮೌಲ್ಯೀಕರಣ, ವಿನಿಮಯ ಮತ್ತು ಅದರಿಂದ ತೆರಬೇಕಾದ ಸಂಭಾವನೆ ಇತ್ಯಾದಿ ಚಟುವಟಿಕೆಗಳ ಸಂಸ್ಕರಣೆಗೆ ಮೈನಿಂಗ್ (ಗಣಿಗಾರಿಕೆ) ಎಂದು ಹೆಸರಿಸಲಾಗಿದೆ.
ಅಂತರ್ಜಾಲದ ಬೃಹದ್ರೂಪ ಅನಾವರಣಗೊಳ್ಳುತ್ತ, ಅದರ ಉಪಯೋಗದ ಆಯಾಮಗಳೂ ವಿಶ್ವವ್ಯಾಪಿ ವಿಸ್ತಾರಗೊಳ್ಳುತ್ತ, ಅದೀಗ ಕ್ರಿಯಾಶೀಲ ಚಟುವಟಿಕೆಗಳ ಒಂದು ಅಂಗವೆನಿಸಿರುವುದು ವಾಸ್ತವ. ಪ್ರಸ್ತುತ ಸಾಮಾಜಿಕ ಜೀವನದಲ್ಲಿ ಅದು ತನ್ನ ಅವಿನಾಭಾವ ಸಂಬಂಧವನ್ನು ಸ್ಥಾಪಿಸಿರುವುದೂ ಸತ್ಯ. ಇಂಟರ್ನೆಟ್ ತನ್ನ ಜಾಲದಿಂದ ಅಪರಿಮಿತ ವೇಗದಲ್ಲಿ ಎಲ್ಲರನ್ನೂ ಮತ್ತು ಎಲ್ಲವನ್ನೂ ಆವರಿಸಿದೆ. ಜಾಗತಿಕ ಆರ್ಥಿಕರಂಗದಲ್ಲಿ ಅದೀಗ ಪ್ರತಿಷ್ಠಾಪಿಸಲ್ಪಟ್ಟಿದೆ. ಉದ್ಯಮರಂಗ, ಹೂಡಿಕೆ, ಕ್ರೀಡೆ ಮತ್ತು ಮನರಂಜನ ವಿಭಾಗಗಳಲ್ಲೂ ಅದು ತನ್ನ ವಿಶಾಲ ಬಾಹುಗಳನ್ನು ಚಾಚುವುದರ ಜೊತೆಜೊತೆಯಲ್ಲಿ ಹೊಸ ಆವಿಷ್ಕಾರಗಳಿಗೆ ತೆರೆದುಕೊಂಡಿದೆ. ಇಂತಹ ಆರ್ಥಿಕ ವ್ಯವಸ್ಥೆಯ ಸ್ಥಿತ್ಯಂತರಗಳಲ್ಲಿ ಕ್ರಿಪ್ಟೋಕರೆನ್ಸಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ.
ಸರಿಸುಮಾರು ಹದಿಮೂರು ವರ್ಷಗಳ ಇತಿಹಾಸವಿರುವ ಕ್ರಿಪ್ಟೋಕರೆನ್ಸಿ ತನ್ನ ಹೆಸರಿನಂತೆ ನಿಜಕ್ಕೂ ಹಣದ ರೂಪವೆ? ಇದಕ್ಕೆ ಮೌಲ್ಯವಿದೆಯೆ? ಇದರ ಹುಟ್ಟು ಹೇಗೆ? ನಿರ್ವಹಣೆ ಯಾವ ರೀತಿ? ಅಂತರ್ಗತ ನೀತಿಗಳೇನು? ಆಯಾ ದೇಶಗಳ ಹಣದ ರೂಪಗಳಿಗಿರುವ ಮೌಲ್ಯ, ಭದ್ರತೆ ಇದಕ್ಕಿದೆಯೆ? ಸರ್ಕಾರದ ಮತ್ತು ಜನರ ವಿಶ್ವಾಸವನ್ನು ಅದು ಪಡೆದಿದೆಯೆ? ಕೇವಲ ಲಾಭದಾಯಕ ದೃಷ್ಟಿಯಿಂದ ಅದರ ವಿಕಾಸವಾಗುತ್ತಿದೆಯೆ? ಅದರ ನಿಯಂತ್ರಣದ ಬಗೆ ಹೇಗೆ? – ಇವೆಲ್ಲ ಪ್ರಶ್ನೆಗಳು ಸಹಜವಾಗಿ ಹುಟ್ಟಿಕೊಂಡಿವೆ. ಇವುಗಳ ಬಗೆಗೆ ಆರ್ಥಿಕ ತಜ್ಞರ ಅಭಿಮತವೂ ಸಹ ಭಿನ್ನ ಧ್ವನಿಗಳಲ್ಲಿ ಕೇಳಿಸುತ್ತಿವೆ.
ಮೂಲಭೂತವಾಗಿ ಪರಾಮರ್ಶಿಸತೊಡಗಿದರೆ, ಅದಕ್ಕಿರುವ ನಾಮಾಂಕಿತದಂತೆ ಕಂಡರೆ ಕ್ರಿಪ್ಟೋಕರೆನ್ಸಿ ನಿಜಕ್ಕೂ ಹಣವಲ್ಲ. ಅದು ಸರಕು ಮತ್ತು ಸೇವೆಗಳಿಗಾಗಿ ಆನ್ಲೈನ್ ಮೂಲಕ ಪಾವತಿ ಮಾಡಬಹುದಾದ ಡಿಜಿಟಲ್ ವಿನಿಮಯದ ರೂಪ. ಕ್ರಿಪ್ಟೋಕರೆನ್ಸಿ ರೂಪ ತಳೆದಿರುವುದು ಯಾವುದೇ ನಿರ್ದಿಷ್ಟ ದೇಶ, ಕಂಪೆನಿ ಅಥವಾ ಗುಂಪಿನಿಂದ ಅಲ್ಲ ಎನ್ನುವುದು ಕುತೂಹಲಕರ. ಇದು ಕಂಪ್ಯೂಟರ್ಗಳಲ್ಲಿ ಹರಡಿರುವ ವಿಕೇಂದ್ರೀಕೃತ ತಂತ್ರಜ್ಞಾನದಿಂದ ಎನ್ಕ್ರಿಪ್ಟ್ ಆಗಿ (ಗೌಪ್ಯಲಿಪಿ) ರೂಪಗೊಂಡ ಮತ್ತು ನಿಜವಾದ ಹಣವನ್ನು ವಿನಿಮಯ ಮಾಡಿಕೊಂಡು ಕೊಳ್ಳುವ ಮೌಲ್ಯಯುಕ್ತ ಟೋಕನ್ ಎಂದು ಪರಿಭಾವಿಸಬಹುದು. ಇದರ ಮೌಲ್ಯವನ್ನು ನಿರ್ವಹಿಸುವ ಯಾವುದೇ ಕೇಂದ್ರೀಕೃತ ವ್ಯವಸ್ಥೆ ಇಲ್ಲ. ಆದರೆ ಮೌಲ್ಯ ನಿರ್ಧಾರ ಅಥವಾ ಅಧಿಕಾರವು ಅಂತರ್ಜಾಲದ ಕ್ರಿಪ್ಟೋಕರೆನ್ಸಿಯ ಬಳಕೆದಾರರಲ್ಲಿ ವ್ಯಾಪಕವಾಗಿ ಹರಡಿದೆ/ವಿತರಿಸಲಾಗಿದೆ.
ಕ್ರಿಪ್ಟೋಕರೆನ್ಸಿಗಳು ಬ್ಲಾಕ್ಚೈನ್ ಎಂಬ ತಂತ್ರಜ್ಞಾನವನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತವೆ. ಬ್ಲಾಕ್ಚೈನ್ ಎನ್ನುವುದು ವಿಕೇಂದ್ರೀಕೃತ ತಂತ್ರಜ್ಞಾನವಾಗಿದ್ದು, ವಹಿವಾಟುಗಳನ್ನು ನಿರ್ವಹಿಸುವ ಮತ್ತು ದಾಖಲಿಸುವ ಕ್ರಿಯೆಗಳು ಅನೇಕ ಕಂಪ್ಯೂಟರುಗಳಲ್ಲಿ ಹರಡಿರುತ್ತವೆ. ಈ ತಂತ್ರಜ್ಞಾನದ ವಿಕೇಂದ್ರೀಕರಣವೇ ಕ್ರಿಪ್ಟೋಕರೆನ್ಸಿಯ ಸುರಕ್ಷತೆ ಎನ್ನುವುದು ಕಂಪ್ಯೂಟರ್ ತಜ್ಞರ ಅಭಿಮತವೂ ಆಗಿದೆ. ವಹಿವಾಟುಗಳು ಕ್ರಿಪ್ಟೋಗ್ರಾಫಿಕ್ ವಿನ್ಯಾಸದ ಬ್ಲಾಕ್ಚೈನ್ನಲ್ಲಿ ಪರಿಶೀಲಿಸಲ್ಪಟ್ಟು, ರೆಕಾರ್ಡ್ ರೂಪದಲ್ಲಿ ಬರುತ್ತವೆ. ಕ್ರಿಪ್ಟೋಕರೆನ್ಸಿಗಳು ವಿಕೇಂದ್ರೀಕೃತವಾಗಿರುವುದರಿಂದ, ವಹಿವಾಟುಗಳನ್ನು ನಿಯಂತ್ರಿಸುವ, ನಿಯಮಗಳನ್ನು ಬದಲಾಯಿಸುವ ಅಥವಾ ನೆಟ್ವರ್ಕ್ ಅನ್ನು ಮುಚ್ಚುವ ಯಾವುದೇ ಕೇಂದ್ರೀಯ ಅಧಿಕಾರವಿಲ್ಲ ಎನ್ನುವುದು ಇಲ್ಲಿ ಗಮನಾರ್ಹ.
ಕಂಪ್ಯೂಟರ್ಗಳಲ್ಲಿ ಮನುಷ್ಯನು ತನ್ನ ಜ್ಞಾನ, ಶ್ರಮ ಮತ್ತು ಸಮಯ ವ್ಯಯಗಳಿಂದ ಉತ್ಪಾದಿಸುವ ಡಿಜಿಟಲ್ ನಾಣ್ಯವನ್ನು ಕ್ರಿಪ್ಟೋಕರೆನ್ಸಿ ಎಂದು ಸರಳವಾಗಿ ಕರೆಯಬಹುದಾಗಿದೆ. ಕ್ರಿಪ್ಟೋಕರೆನ್ಸಿಯ ಮೌಲ್ಯೀಕರಣ, ವಿನಿಮಯ ಮತ್ತು ಅದರಿಂದ ತೆರಬೇಕಾದ ಸಂಭಾವನೆ ಇತ್ಯಾದಿ ಚಟುವಟಿಕೆಗಳ ಸಂಸ್ಕರಣೆಗೆ ಮೈನಿಂಗ್ (ಗಣಿಗಾರಿಕೆ) ಎಂದು ಹೆಸರಿಸಲಾಗಿದೆ.
ವ್ಯವಹಾರದಲ್ಲಿ ಕ್ರಿಪ್ಟೋಕರೆನ್ಸಿಯನ್ನು ಬಳಸುವ ಪ್ರಕ್ರಿಯೆಯು ಸಂಕೀರ್ಣವೂ, ಜಟಿಲತೆಯಿಂದ ಕೂಡಿರುವುದೂ ಆಗಿದೆ. ವಹಿವಾಟು ನಡೆಸುತ್ತಿರುವ ಇಬ್ಬರ ನಡುವೆ ಯಾವುದೇ ಮೂರನೇ ವ್ಯಕ್ತಿ ಭಾಗಿಯಾಗುವ ಅವಕಾಶ ಇಲ್ಲಿರುವುದಿಲ್ಲ. ಒಮ್ಮೆ ವಹಿವಾಟಿನ ಪ್ರಕ್ರಿಯೆ ಪ್ರಾರಂಭವಾದ ನಂತರ, ವ್ಯವಹಾರವನ್ನು ಮೌಲ್ಯೀಕರಿಸಿ ಅದನ್ನು ಸಾರ್ವಜನಿಕ ಲೆಡ್ಜರ್ನಲ್ಲಿ ಇರಿಸಲಾಗುತ್ತದೆ. ಸಾರ್ವಜನಿಕ ಲೆಡ್ಜರ್ಗಳು ಅಂದರೆ, ಎಲ್ಲ ದೃಢೀಕೃತ ವಹಿವಾಟುಗಳ ಲೆಕ್ಕಗಳನ್ನು ಇರಿಸಲಾಗಿರುವ ಶೇಖರಣಾ ಬ್ಯಾಂಕ್ನಂತೆ ಎಂದು ಪರಿಗಣಿಸಬಹುದು. ಇಲ್ಲಿ ವ್ಯಕ್ತಿಗಳ ಗುರುತನ್ನು ಗೌಪ್ಯವಾಗಿಡಲಾಗುತ್ತದೆ, ಹಾಗೆಯೇ ಕೀ ಮತ್ತು ಪಾಸ್ವರ್ಡ್ಗಳಿಂದ ಅವರು ತಮ್ಮ ಖಾತೆಯನ್ನು ನಿರ್ವಹಿಸಬೇಕಾಗುತ್ತದೆ.
ಹೆಚ್ಚುತ್ತಿರುವ ಹೂಡಿಕೆದಾರರು
ಕ್ರಿಪ್ಟೋಕರೆನ್ಸಿಗಳ ಮೇಲಿನ ಭಾರತೀಯ ರಿಜರ್ವ್ ಬ್ಯಾಂಕ್ನ ನಿಷೇಧವನ್ನು ಸುಪ್ರೀಂಕೋರ್ಟ್ ತೆರವು ಮಾಡಿದ ನಂತರ, ಮಾರ್ಚ್ ೨೦೨೦ರಿಂದೀಚೆಗೆ ಭಾರತದಲ್ಲಿ ಕ್ರಿಪ್ಟೋ ಜನಪ್ರಿಯತೆಯು ಮತ್ತಷ್ಟು ಹೆಚ್ಚಾಯಿತು. ಕೆಲವು ಸಂಶೋಧನ ಸಂಸ್ಥೆಗಳ ಅಧ್ಯಯನಗಳ ಪ್ರಕಾರ ಭಾರತದಲ್ಲಿ ಹತ್ತು ಕೋಟಿಗೂ ಅಧಿಕ ಕ್ರಿಪ್ಟೋಕರೆನ್ಸಿಯನ್ನು ಹೊಂದಿರುವ ವ್ಯಕ್ತಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಹೆಚ್ಚಿನವರು ೨೦೨೧ನೇ ವರ್ಷದಲ್ಲಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯನ್ನು ಪ್ರವೇಶಿಸಿದ್ದಾರೆ. ಅನಂತರದ ಸ್ಥಾನದಲ್ಲಿ ಅಮೆರಿಕ ೨.೭೪ ಕೋಟಿ ಮತ್ತು ರಷ್ಯಾ ೧.೭೪ ಕೋಟಿ ಮಂದಿಯನ್ನು ಹೊಂದಿದೆ.
ಸದ್ಯಃಸ್ಥಿತಿಯಲ್ಲಿ ಕ್ರಿಪ್ಟೋಕರೆನ್ಸಿಯ ಅಪಾಯಗಳು
ಕ್ರಿಪ್ಟೋಕರೆನ್ಸಿಗಳು ಡಿಜಿಟಲ್ ಆಗಿರುವುದರಿಂದ ಎಲೆಕ್ಟ್ರಾನಿಕ್ ರೂಪದಲ್ಲಿವೆ. ಹೀಗಾಗಿ ಹ್ಯಾಕಿಂಗ್, ಪಾಸ್ವರ್ಡ್ ಕಳೆಯುವಿಕೆ ಇತ್ಯಾದಿಗಳಿಂದ ಉಂಟಾಗುವ ನಷ್ಟ ಮತ್ತು ಅಪಾಯಗಳಿಗೆ ಅದು ಗುರಿಯಾಗಬಹುದಾಗಿವೆ.
ಪಾವತಿಗಳ ನಿಯಂತ್ರಣ ಮತ್ತು ಉಂಟಾಗಬಹುದಾದ ಕುಂದುಕೊರತೆಗಳ ಪರಿಹಾರಕ್ಕಾಗಿ ಯಾವುದೇ ಅಧಿಕೃತ ಕೇಂದ್ರೀಯ ಏಜೆನ್ಸಿ ಇಲ್ಲದಿರುವುದು ಒಂದು ನ್ಯೂನತೆ.
ಕ್ರಿಪ್ಟೋಕರೆನ್ಸಿಗಳಿಗೆ ಆಸ್ತಿಯ ಯಾವುದೇ ಆಧಾರವಿಲ್ಲ ಮತ್ತು ಮೌಲ್ಯನಿರ್ಧರಣೆ ಕೇವಲ ಊಹೆಯಿಂದ ನಡೆಯುತ್ತಿದೆ.
ಕ್ರಿಪ್ಟೋ ವಿನಿಮಯ ಕೇಂದ್ರಗಳು ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಗೊಂಡಿರುವುದರಿಂದ ಕಾನೂನಿನ ನ್ಯಾಯವ್ಯಾಪ್ತಿಯನ್ನು ಜಾರಿಗೊಳಿಸುವುದು ಬಹಳ ಕ್ಲಿಷ್ಟಕರ.
ಇದರ ವ್ಯಾಪಾರವು ಅನಾಮಧೇಯವಿರುವುದರಿಂದ ಬಳಕೆದಾರರನ್ನು ಅಕ್ರಮ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೂ ಸುಲಭದಲ್ಲಿ ಸೆಳೆಯಬಹುದು.
ಇದರ ವ್ಯವಹಾರವು ಮನಿ-ಲಾಂಡರಿಂಗ್ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಇಂಬು ಕೊಡಬಹುದಾಗಿದೆ.
ಬಂಡವಾಳ ಹೂಡಿಕೆ ವ್ಯವಹಾರಗಳು ಹಿಂಬಾಗಿಲ ಮೂಲಕ ನಡೆಯುವ ಸಾಧ್ಯತೆಗಳು ಹೆಚ್ಚಾಗುವ ಸಾಧ್ಯತೆಗಳಿವೆ.
ಸರ್ಕಾರಗಳು ಇದರ ಅಸ್ತಿತ್ವವನ್ನು ಊರ್ಜಿತಗೊಳಿಸಿದರೆ ಭಾರೀ ಊಹಾಪೋಹ/ಜೂಜುಗಳಿಗೆ ದಾರಿ ಮಾಡಿಕೊಟ್ಟಂತಾಗಿ ಆರ್ಥಿಕ ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು.
ಬ್ಲಾಕ್ಚೈನ್ ತೀವ್ರ ಪ್ರಮಾಣದ ಕಂಪ್ಯೂಟರ್ ಶಕ್ತಿ ಮತ್ತು ವಿದ್ಯುತ್ತನ್ನು ಕಬಳಿಸುತ್ತಿದೆ. ಇದರಿಂದ ಚೀನಾ ಮತ್ತಿತರ ದೇಶಗಳು ವಿದ್ಯುಚ್ಛಕ್ತಿಯ ಕೊರತೆಯನ್ನು ಎದುರಿಸುತ್ತಿವೆ. ಈ ಕಾರಣದಿಂದಾಗಿ ಇತ್ತೀಚೆಗೆ ಚೀನಾ ತನ್ನ ದೇಶದಲ್ಲಿ ನಡೆಯುತ್ತಿದ್ದ ರಹಸ್ಯ ಗಣಿಗಾರಿಕೆಯ ಅನೇಕ ಸ್ಥಳಗಳಿಗೆ ದಾಳಿ ಇಟ್ಟು ಅಂತಹ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ಇದರ ಪರಿಣಾಮದಿಂದ ಅನೇಕ ಕ್ರಿಪ್ಟೋಕರೆನ್ಸಿಗಳು ಕುಸಿತ ಕಂಡವು.
ಭಾರತದ ನಿಲವು
ಭಾರತೀಯ ರಿಜರ್ವ್ ಬ್ಯಾಂಕ್ ಕ್ರಿಪ್ಟೋಕರೆನ್ಸಿಗಳು ದೇಶದ ಆರ್ಥಿಕ ಸ್ಥಿರತೆ ಹಾಗೂ ಬಂಡವಾಳ ನಿಯಂತ್ರಣಗಳಿಗೆ ಅಪಾಯವನ್ನುಂಟುಮಾಡುತ್ತವೆ ಎಂದು ಅಭಿಪ್ರಾಯಪಟ್ಟಿದೆ. ಕ್ರಿಪ್ಟೋಕರೆನ್ಸಿಯಲ್ಲಿ ವ್ಯವಹರಿಸುವ ಯಾವುದೇ ಘಟಕವನ್ನು ಮಾನ್ಯ ಮಾಡಬಾರದೆಂದು ಆರ್ಬಿಐ ಕೆಲವು ವರ್ಷಗಳ ಹಿಂದೆ ದೇಶದ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ (ಎನ್ಬಿಎಫ್ಐ) ಮಾರ್ಗಸೂಚಿಗಳನ್ನು ನೀಡಿದ್ದರೂ ಅದನ್ನು ಸಂಪೂರ್ಣ ನಿಷೇಧಿಸಿಲ್ಲ.
ಕ್ರಿಪ್ಟೋಕರೆನ್ಸಿಗಳನ್ನು ಕಾನೂನು ಚೌಕಟ್ಟಿನೊಳಗೆ ತರುವ ಕುರಿತು ಭಾರತ ಸರ್ಕಾರವು ವ್ಯಾಪಕ ಸಮಾಲೋಚನೆಗಳನ್ನು ನಡೆಸಿದೆ. ಕ್ರಿಪ್ಟೋಗೆ ಕರೆನ್ಸಿಯಾಗಿ ಅನುಮತಿಕೊಡುವ ಸಾಧ್ಯತೆಯಿಲ್ಲ. ಅಂತೆಯೇ ಅದನ್ನು ಸಂಪೂರ್ಣ ನಿಷೇಧಿಸುವ ಸಾಧ್ಯತೆಯೂ ಕಂಡುಬರುತ್ತಿಲ್ಲ. ಅವುಗಳನ್ನು ಸ್ವತ್ತುಗಳ ರೂಪದಲ್ಲಿ ಇರಿಸಿಕೊಳ್ಳಲು ಕಟ್ಟುನಿಟ್ಟಾದ ನಿಯಂತ್ರಣವನ್ನು ಜಾರಿಗೆ ತರುವ ಚಿಂತನೆಯೂ ಇದೆ ಎಂದು ಹೇಳಲಾಗುತ್ತಿದೆ.
ನವೆಂಬರ್ ೩೦, ೨೦೨೧ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಯಲ್ಲಿ ಕ್ರಿಪ್ಟೋಕರೆನ್ಸಿಯ ಹೊಸ ಮಸೂದೆಯ ಕರಡನ್ನು ಅನುಮೋದನೆಗಾಗಿ ಕೇಂದ್ರ ಸಚಿವ ಸಂಪುಟದ ಮುಂದೆ ಸದ್ಯದಲ್ಲೇ ಮಂಡಿಸಲಾಗುವ ಬಗ್ಗೆ ತಿಳಿಸಿದ್ದರು. ‘ಕ್ರಿಪ್ಟೋಕರೆನ್ಸಿಯ ಅಪಾಯ ಮತ್ತು ಅದು ತಪ್ಪಾದ ಕೈಗಳಿಗೆ ಹೋಗುವುದರ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಹೊಸ ಮಸೂದೆಯಲ್ಲಿ ಕ್ರಿಪ್ಟೋಕರೆನ್ಸಿಯ ಎಲ್ಲ್ಲ ಆಯಾಮಗಳ ಪರಾಮರ್ಶೆ ಮತ್ತು ಆರ್ಬಿಐ, ಸೆಬಿ ಮತ್ತು ಸರ್ಕಾರದ ಹೇಳಿಕೆಗಳನ್ನು ಉಲ್ಲೇಖಿಸಿ, ಹೂಡಿಕೆದಾರರು ಜಾಗರೂಕರಾಗಿರಬೇಕಾದ ಅಗತ್ಯವಿದೆ’ ಎಂದು ಅವರು ಒತ್ತಿ ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿಯೂ ಈ ವಿಷಯದ ಬಗೆಗೆ ನವೆಂಬರ್ ೨೦೨೧ರಲ್ಲಿ ಒಂದು ಸಭೆ ನಡೆಸಲಾಗಿತ್ತು. ಪ್ರಧಾನಿಯವರು ತಂತ್ರಜ್ಞಾನವು ಜಾಗತಿಕ ಸ್ಪರ್ಧೆಯ ಪ್ರಮುಖ ಸಾಧನವಾಗಿರುವುದರತ್ತ ಗಮನ ಸೆಳೆಯುತ್ತ, ಪ್ರಜಾಪ್ರಭುತ್ವದ ದೊಡ್ಡ ಶಕ್ತಿಯಾದ ಮುಕ್ತತೆಯನ್ನು ದುರುಪಯೋಗಪಡಿಸಿಕೊಳ್ಳಲು ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುವು ಮಾಡಿಕೊಡಬಾರದು ಎಂದರು. ಡಿಜಿಟಲ್ ಯುಗವು ನಮ್ಮ ಸುತ್ತಲಿನ ಎಲ್ಲವನ್ನೂ ಬದಲಾಯಿಸುತ್ತಿದ್ದು ದೇಶದ ಸಾರ್ವಭೌಮತ್ವ, ಆಡಳಿತ, ನೈತಿಕತೆ, ಕಾನೂನು, ಹಕ್ಕುಗಳು ಮತ್ತು ಭದ್ರತೆಯ ಮೇಲೆ ಹೊಸ ಪ್ರಶ್ನೆಗಳನ್ನು ಎತ್ತುತ್ತಿದ್ದು ಈ ವಿಷಯದಲ್ಲಿ ಎಚ್ಚರಿಕೆಯ ನಡೆಗಳ ಅಗತ್ಯವಿದೆ ಎಂದು ತಿಳಿಸಿದರು.
ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಬಳಕೆಗೆ ಯಾವುದೇ ನಿಯಮಗಳಿಲ್ಲ. ಆದರೆ ಕ್ರಿಪ್ಟೋಕರೆನ್ಸಿಯನ್ನು ಕೊಳ್ಳುವ ಮತ್ತು ನಿರ್ವಹಿಸುವ ಆಧಾರದ ಮೇಲೆ, ದೀರ್ಘಾವಧಿ ಅಥವಾ ಅಲ್ಪಾವಧಿಯ ಹೂಡಿಕೆ ಲಾಭ/ಆದಾಯದ ಮೇಲೆ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ.
ಇತ್ತೀಚೆಗೆ ಹಣಕಾಸು ಕುರಿತ ಸಂಸದೀಯ ಸ್ಥಾಯೀ ಸಮಿತಿಯು ಉದ್ಯಮದ ಮಧ್ಯಸ್ಥಗಾರರೊಂದಿಗೆ ಕ್ರಿಪ್ಟೋಕರೆನ್ಸಿಗಳ ಕುರಿತು ತನ್ನ ಮೊದಲ ಸಭೆಯನ್ನು ನಡೆಸಿತು. ಕ್ರಿಪ್ಟೋಕರೆನ್ಸಿಗಳ ಬಳಕೆಯನ್ನು ದೇಶದಲ್ಲಿ ನಿಷೇಧಿಸಬಾರದು ಎಂದು ಸಮಿತಿಯೂ ಉದ್ಯಮ ಸಂಘಗಳೂ ಮತ್ತು ಕ್ರಿಪ್ಟೋ ಹಣಕಾಸು ತಜ್ಞರೂ ಅಭಿಪ್ರಾಯಪಟ್ಟರು. ಅದನ್ನು ನಿಯಂತ್ರಿಸುವ ಬಗೆಗೆ ಅವರೆಲ್ಲರೂ ಸಮ್ಮತಿ ಸೂಚಿಸಿದ್ದಾರೆ. ಭಾರತೀಯ ರಿಜರ್ವ್ ಬ್ಯಾಂಕಿನ ಗವರ್ನರ್ ಶಕ್ತಿಕಾಂತ ದಾಸ್ ಅವರು ಕ್ರಿಪ್ಟೋಕರೆನ್ಸಿಗಳು ಕೇಂದ್ರೀಯ ಬ್ಯಾಂಕುಗಳಿಂದ ಅನಿಯಂತ್ರಿತವಾಗಿರುವುದರಿಂದ ಹಣಕಾಸು ವ್ಯವಸ್ಥೆಗೆ ಅವು ಸವಾಲು ಹಾಕಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತಾವಿತ ಕಾನೂನಿನಲ್ಲಿ ಇರಬಹುದಾದ
ಸಂಭಾವ್ಯ ನಿಯಮಾವಳಿಗಳು
ಪ್ರಸ್ತಾವಿತ ಕಾನೂನು ‘ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್’ (ಎಫ್ಎಟಿಎಫ್) ಮಾರ್ಗದರ್ಶನದಡಿಯಲ್ಲಿ ಜಾರಿಯಾಗಬಹುದು. ಕಾನೂನನ್ನು ಉಲ್ಲಂಘಿಸುವವರನ್ನು ವಾರಂಟ್ ಇಲ್ಲದೆ ಬಂಧಿಸಲು ಮತ್ತು ಜಾಮೀನು ಇಲ್ಲದೆ ಬಂಧನದಲ್ಲಿರಿಸಲು ಮತ್ತು ಭಾರಿ ದಂಡವನ್ನು ಪಾವತಿಸಲು ಹೊಣೆಗಾರರನ್ನಾಗಿ ಮಾಡುವ ಚಿಂತನೆಯಲ್ಲಿದೆ ಎಂದು ಹೇಳಲಾಗುತ್ತಿದೆ. ವ್ಯಕ್ತಿ ಅಥವಾ ಸಂಸ್ಥೆ ‘ಮೈನಿಂಗ್’ ಚಟುವಟಿಕೆ ಮಾಡುವುದನ್ನಾಗಲಿ ಅಥವಾ ಅದರ ಖರೀದಿ, ಉತ್ಪಾದನೆ, ಮಾರಾಟ, ವ್ಯವಹಾರ, ವರ್ಗಾವಣೆ, ಬಳಕೆ ಇತ್ಯಾದಿಗಳನ್ನಾಗಲಿ ನಿಷೇಧಿಸುವ ಸಾಧ್ಯತೆಗಳೂ ಇಲ್ಲದಿಲ್ಲ.
ಕ್ರಿಪ್ಟೋಕರೆನ್ಸಿ ಮತ್ತು ರೆಗ್ಯುಲೇಶನ್ ಆಫ್ ಅಫಿಶಿಯಲ್ ಡಿಜಿಟಲ್ ಕರೆನ್ಸಿ ಬಿಲ್ ಅನ್ನು ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಿದ್ಧತೆಯನ್ನು ಮಾಡಿಕೊಂಡಿದ್ದರೂ, ಹೆಚ್ಚಿನ ಸಮಾಲೋಚನೆಗಾಗಿ ಹಾಗೂ ಮತ್ತಷ್ಟು ಸ್ಪಷ್ಟೀಕರಣಕ್ಕಾಗಿ ನಿರ್ಧಾರ ಮಾಡಿದ ಕಾರಣ ಮಂಡನೆಯನ್ನು ಮುಂದೂಡಿದೆ.
ಕ್ರಿಪ್ಟೋ ಉದ್ಯಮವು ಧನಾತ್ಮಕವೆನಿಸಿದಲ್ಲಿ ಅದು ಕೆಲವು ನಿರ್ಬಂಧಗಳೊಂದಿಗೆ ಕ್ರಿಪ್ಟೋದಲ್ಲಿ ಹೂಡಿಕೆ ಮತ್ತು ವ್ಯಾಪಾರಕ್ಕೆ ಅನುಮತಿ ಸಿಗಬಹುದು. ಕ್ರಿಪ್ಟೋವನ್ನು ಕರೆನ್ಸಿಯಾಗಿ ಬಳಸುವುದು ಜಟಿಲಸಂಗತಿಯಾಗಿರುವುದರಿಂದ ಅದನ್ನು ಸ್ವತ್ತು ಎಂದು ಪರಿಗಣಿಸಬಹುದಾದ ಸಾಧ್ಯತೆಗಳಿವೆ.
ಸಂಪೂರ್ಣ ಸ್ಪಷ್ಟತೆಗಾಗಿ, ಕ್ರಿಪ್ಟೋಕರೆನ್ಸಿ ಬಿಲ್ ಸಂಸತ್ತಿನಲ್ಲಿ ಊರ್ಜಿತಗೊಳ್ಳುವವರೆಗೆ ಕಾಯಬೇಕಾಗಿದೆ.
ಆರ್ಥಿಕ ತಜ್ಞರ/ಹೂಡಿಕೆದಾರರ ಅಭಿಮತಗಳು
ಭಾರತೀಯ ರಿಜರ್ವ್ ಬ್ಯಾಂಕಿನ ಮಾಜಿ ಗವರ್ನರ್ ಡಿ. ಸುಬ್ಬರಾವ್ ಅವರು ಕ್ರಿಪ್ಟೋಕರೆನ್ಸಿಗಳನ್ನು ಕಾನೂನುಬದ್ಧಗೊಳಿಸುವ ಬಗೆಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ದೇಶದ ಹಣ ಪೂರೈಕೆ ಮತ್ತು ಹಣದುಬ್ಬರ ನಿರ್ವಹಣೆಯ ಮೇಲಿರುವ ಬ್ಯಾಂಕ್ ನಿಯಂತ್ರಣವನ್ನು ಕ್ರಿಪ್ಟೋಕರೆನ್ಸಿ ದುರ್ಬಲಗೊಳಿಸಬಹುದು ಮತ್ತು ಅದು ಆರ್ಥಿಕ ನೀತಿಗೆ ಅಡ್ಡಿಯಾಗುವ ಸಾಧ್ಯತೆಗಳಿವೆ. ಭಾರತವು ರಾಷ್ಟ್ರೀಯ ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಬಿಡುಗಡೆಯನ್ನು ಪರಿಶೀಲಿಸುತ್ತಿದ್ದರೂ, ಸುಧಾರಿತ ಮಾಹಿತಿ ಮತ್ತು ಸಂರಕ್ಷಣಾ ಕಾನೂನುಗಳ ಕೊರತೆಯಿಂದಾಗಿ ಕ್ರಿಪ್ಟೋಕರೆನ್ಸಿಗಳ ಕಾನೂನುಬದ್ಧತೆಯು ಬ್ಯಾಂಕುಗಳ ಸಾಲ ನೀಡುವ ಚಟುವಟಿಕೆಗೆ ಅಡ್ಡಿಯಾಗಬಹುದಾದ ಸಂಭವವನ್ನು ಅವರು ಪ್ರಸ್ತಾವಿಸಿದ್ದಾರೆ.
ಬಿಟ್ಕಾಯಿನ್ಗೆ “ಆಂತರಿಕ ಮೌಲ್ಯ” ಇಲ್ಲ ಎಂದು ಅನೇಕ ವಿಶ್ಲೇಷಕರು ಹೇಳಿದ್ದಾರೆ. ಅದೊಂದು ಪಾಂಜೀ (ಮೋಸದ ಹೂಡಿಕೆ ಕಾರ್ಯಾಚರಣೆ) ಯೋಜನೆ ಎನ್ನುವ ಅಭಿಮತವೂ ಚಾಲ್ತಿಯಲ್ಲಿದೆ.
ಬರ್ಕ್ಲಿ ವಿಶ್ವವಿದ್ಯಾಲಯದ ಇಂಟರ್ನ್ಯಾಷನಲ್ ಕಂಪ್ಯೂಟರ್ ಸೈನ್ಸ್ ಇನ್ಸ್ಟಿಟ್ಯೂಟ್ನ ಸಂಶೋಧಕ ನಿಕೋಲಸ್ ಅವರು, ಕ್ರಿಪ್ಟೋಕರೆನ್ಸಿ ವಿನಿಮಯವು ನಿಯಮಿತ ಸ್ಟಾಕ್ ಎಕ್ಸ್ಚೇಂಜ್ಗಳ ರೀತಿಯದಲ್ಲ ಮತ್ತು ಅವುಗಳು ಅನಿಯಂತ್ರಿತ ಘಟಕಗಳು, ಹಾಗಾಗಿ ಕ್ರಿಪ್ಟೋಕರೆನ್ಸಿ ಸ್ಥಿರವಾಗಬೇಕಾಗಿರುವುದು ಮೂಲಭೂತ ಆವಶ್ಯಕತೆಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ.
ವಿಶ್ವಪ್ರಸಿದ್ಧ ಹೂಡಿಕೆದಾರರಾದ ವಾರೆನ್ ಬಫೆ, ಬಿಟ್ಕಾಯಿನ್ನಂತಹ ಕ್ರಿಪ್ಟೋಕರೆನ್ಸಿಗಳಿಗೆ ಸ್ಥಿರತೆಯ ಅಗತ್ಯವಿದೆ ಎನ್ನುತ್ತಾರೆ. ಹೂಡಿಕೆದಾರರಿಗೆ ಅವುಗಳಿಂದ ದೂರವಿರಲು ಸಲಹೆ ಕೊಡುತ್ತ, ಬಿಟ್ಕಾಯಿನ್ ಅನ್ನು ಕಾಗದದ ಚೆಕ್ಗಳಿಗೆ ಹೋಲಿಸಿದ್ದಾರೆ. ಅದು ಹಣವನ್ನು ರವಾನಿಸುವ ಪರಿಣಾಮಕಾರಿ ಮಾರ್ಗವಾಗಬಹುದು ಮತ್ತು ಅದನ್ನು ಅನಾಮಧೇಯವಾಗಿ ದುರ್ಬಳಕೆ ಮಾಡುವ ಸಾಧ್ಯತೆಗಳಿವೆ ಎನ್ನುತ್ತಾರೆ.
ಬ್ಲಾಕ್ಚೈನ್ ತಜ್ಞರುಗಳ ಪ್ರಕಾರ ಕ್ರಿಪ್ಟೋಕರೆನ್ಸಿಗಳ ನಿಷೇಧ ಕಷ್ಟಸಾಧ್ಯ. ದೊಡ್ಡ ದೇಶಗಳು ಅವನ್ನು ನಿಷೇಧಿಸಿದರೂ ಸಹ, ಸಣ್ಣ ದೇಶಗಳು ಕ್ರಿಪ್ಟೋ ಉದ್ಯಮಿಗಳನ್ನು ಅಲ್ಲಿಯ ವ್ಯವಹಾರಗಳಿಗೆ ತೊಡಗಿಸಿಕೊಳ್ಳುವ ಅವಕಾಶಗಳಿರುತ್ತವೆ.
ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳು (ಸಿಬಿಡಿಸಿ) ಅಥವಾ ಸರ್ಕಾರೀ ಕರೆನ್ಸಿಗಳ ಡಿಜಿಟಲ್ ಟೋಕನ್ಗಳು, ಇಂದು ಹಣಕಾಸು ವ್ಯವಹಾರಗಳಲ್ಲಿ ಅತ್ಯಂತ ಅಗತ್ಯವಾಗಿದೆ. ೨೦೨೧ರ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಸಮೀಕ್ಷೆಯ ಪ್ರಕಾರ ಪ್ರಪಂಚದ ೮೬ ಪ್ರತಿಶತ ಕೇಂದ್ರೀಯ ಬ್ಯಾಂಕ್ಗಳು ಸಿಬಿಡಿಸಿಗಳನ್ನು ಸಕ್ರಿಯವಾಗಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸುತ್ತಿವೆ. ಭಾರತೀಯ ರಿಜರ್ವ್ಬ್ಯಾಂಕ್ ಸಹ ಕರೆನ್ಸಿಯನ್ನು ಡಿಜಿಟಲ್ ರೂಪದಲ್ಲಿ ಸೇರಿಸುವ ಮತ್ತು ಬ್ಯಾಂಕ್ ನೋಟುಗಳ ವ್ಯಾಖ್ಯಾನದ ವ್ಯಾಪ್ತಿಯನ್ನು ಸುಧಾರಿಸುವ ಪ್ರಸ್ತಾವನೆಯನ್ನು ಕೈಗೆತ್ತಿಕೊಂಡಿದೆ.
‘ಫ್ಯೂಚರ್ ಆಫ್ ಮನಿ’ ಎಂಬ ಪುಸ್ತಕದಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಈಶ್ವರ್ ಪ್ರಸಾದ್ ಅವರು ‘ಸಿಬಿಡಿಸಿ’ಗಳ ಧನಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ತಿಳಿಸಿದ್ದಾರೆ.
‘ಭೌತಿಕ ನಗದಿನ ಉಪಯೋಗ ಆರ್ಥಿಕತೆಯಲ್ಲಿ ಕಡಮೆಯಾಗುತ್ತಿರುವ ಪ್ರಸ್ತುತ ಸಮಯದಲ್ಲಿ ಅಂತಿಮ ಬಳಕೆದಾರರಿಗಾಗಿ, ‘ಸಿಬಿಡಿಸಿ’ಗಳನ್ನು ಚಿಲ್ಲರೆ ಮಟ್ಟದಲ್ಲಿ ನೀಡುವುದರಿಂದ ಉಪಯುಕ್ತತೆ ಹೆಚ್ಚು. ಅವುಗಳಲ್ಲಿ ಮೊಬೈಲ್ ಫೋನ್ ಅಪ್ಲಿಕೇಶನ್ ಮೂಲಕವೂ ಸರಳವಾಗಿ ಹಣವನ್ನು ವರ್ಗಾಯಿಸಬಹುದು ಮತ್ತು ಬಳಸಬಹುದು’ ಎನ್ನುವುದು ಅವರ ಅಭಿಪ್ರಾಯ.
ಕೆಲವು ದೇಶಗಳ ಕೇಂದ್ರೀಯ ಬ್ಯಾಂಕುಗಳು ಇತ್ತೀಚೆಗೆ ಚಿಲ್ಲರೆ ಮತ್ತು ದೊಡ್ಡ ಮೌಲ್ಯದ ಪಾವತಿಗಳಿಗಾಗಿ ಕ್ರಿಪ್ಟೋಕರೆನ್ಸಿ ಮತ್ತು ಬ್ಲಾಕ್ಚೈನ್ ತಂತ್ರಜ್ಞಾನಗಳ ಅಳವಡಿಕೆಯ ಅನ್ವೇಷಣೆಗೆ ತೊಡಗಿವೆ.
‘ಪೀಪಲ್ಸ್ ಬ್ಯಾಂಕ್ ಆಫ್ ಚೀನಾ’ ರಾಷ್ಟ್ರವ್ಯಾಪಿಯಾಗಿ ಕ್ರಿಪ್ಟೋವನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದೆ.
ಬ್ಯಾಂಕ್ ಆಫ್ ಕೆನಡಾ ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರಗಳು ಬ್ಲಾಕ್ಚೈನ್ ತಂತ್ರಜ್ಞಾನದ ಆಧಾರದ ಮೇಲೆ ಡಿಜಿಟಲ್ ಕರೆನ್ಸಿ ಮತ್ತು ಅಂತರ ಬ್ಯಾಂಕ್ ಪಾವತಿ ವ್ಯವಸ್ಥೆಗಳಿಗೆ ಅದರ ಬಳಕೆಯ ಸಾಧ್ಯತೆಯನ್ನು ಕುರಿತು ಅಧ್ಯಯನ ಮಾಡುತ್ತಿವೆ.
‘ಕ್ರಿಪ್ಟೋ’ ಯುವ ಜನಾಂಗದ ಆಕರ್ಷಣೆ
ಭಾರತದಲ್ಲಿ ಕ್ರಿಪ್ಟೋಕರೆನ್ಸಿಯ ಆರಂಭಿಕ ವರ್ಷಗಳಲ್ಲಿ (೨೦೧೪ ಮತ್ತು ನಂತರ) ಕಂಪ್ಯೂಟರ್, ಅಂತರ್ಜಾಲ ಮತ್ತು ಕ್ರಿಪ್ಟೋ ಬಗೆಗೆ ಜ್ಞಾನವಿರುವ ಬಹಳಷ್ಟು ಯುವಕರು ಮೈನಿಂಗ್ ವಿಷಯದಲ್ಲಿ ಆಳ ಅಭ್ಯಾಸ ಮಾಡತೊಡಗಿದರು. ಅವರು ಕ್ರಿಪ್ಟೋದಲ್ಲಿ ಉಜ್ಜ್ವಲ ಭವಿಷ್ಯ ಕಂಡು ಅವುಗಳಲ್ಲಿ ಹೂಡಿಕೆ ಮಾಡತೊಡಗಿದರು. ಕೇವಲ ಕ್ರಿಪ್ಟೋವನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ಮಾತ್ರವಲ್ಲದೆ, ಹೊಸದಾದ ಈ ಆಸ್ತಿ ವರ್ಗ ಮತ್ತು ಅದರ ತಂತ್ರಜ್ಞಾನದ ಬಗೆಗೆ ಹೆಚ್ಚು ಹೆಚ್ಚು ಅರಿಯತೊಡಗಿದರು. ಇತ್ತೀಚೆಗೆ ಕ್ರಿಪ್ಟೋ ವ್ಯವಹಾರದ ಭಾಗವಾಗಲು ಭಾರತೀಯ ಯುವಕರಲ್ಲಿ ಭಾರೀ ಆಸಕ್ತಿ ಇರುವುದನ್ನು ಗಮನಿಸಬಹುದು.
ಅನೇಕರು ಅಪ್ಲಿಕೇಶನ್ ಮತ್ತು ವೆಬ್ಸೈಟ್ ಡೆವಲಪರ್ ಮತ್ತು ‘ಮೈನರ್’ (ಗಣಿಗಾರಿಕೆ)ಗಳಾಗಿ ಹೊಸ ಕ್ರಿಪ್ಟೋ ನಾಣ್ಯಗಳನ್ನು ಮುದ್ರಿಸುವ ಪ್ರಕ್ರಿಯೆಯಲ್ಲಿ ತೊಡಗಿ ಲಕ್ಷಾಂತರ ರೂಪಾಯಿಗಳ ಒಡೆಯರಾಗತೊಡಗಿದ್ದಾರೆ.
‘ಗಣಿಗಾರಿಕೆ’ಗೆ ಸ್ವಂತ ಯಂತ್ರವನ್ನು ಬಳಸುತ್ತಿದ್ದ ಅನೇಕ ತಜ್ಞರು ಮತ್ತು ಹೂಡಿಕೆದಾರರು ಇತ್ತೀಚೆಗೆ ಡೇಟಾ ಕೇಂದ್ರಗಳನ್ನುs ಮತ್ತು ಕ್ಲೌಡ್ ಕಂಪ್ಯೂಟಿಂಗ್ ಅನ್ನು ಅವಲಂಬಿಸಿದ್ದಾರೆ. ಕಾರಣ, ಬಿಟ್ಕಾಯಿನ್ಗಳನ್ನು ಗಣಿಗಾರಿಕೆ ಮಾಡುವ ಕಂಪ್ಯೂಟಿಂಗ್ ಶಕ್ತಿಯು ಈಗ ಹಲವು ಪಟ್ಟು ಬೆಳೆದಿದೆ.
ಪ್ರಮುಖ ಕ್ರಿಪ್ಟೋಕರೆನ್ಸಿಗಳು
೨೦೦೯ರಲ್ಲಿ ಬಿಡುಗಡೆಯಾದ ‘ಬಿಟ್ಕಾಯಿನ್’ ಮೊದಲ ವಿಕೇಂದ್ರೀಕೃತ ಕ್ರಿಪ್ಟೋಕರೆನ್ಸಿಯೆನಿಸಿದೆ. ಇದು ಒಮ್ಮತದ ನೆಟ್ವರ್ಕ್ ಆಗಿದ್ದು ಹೊಸ ಪಾವತಿ ವ್ಯವಸ್ಥೆಯು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿರುತ್ತದೆ. ಕ್ರಿಪ್ಟೋ ತಜ್ಞರು ಇದರ ಪರವಾಗಿ ವಾದ ಹೀಗೆ ಮಂಡಿಸುತ್ತಾರೆ: “ಬಿಟ್ಕಾಯಿನ್ ಹಣವನ್ನು ಹೆಚ್ಚು ಸುರಕ್ಷಿತಗೊಳ್ಳುವಂತೆ ಮತ್ತು ಆರ್ಥಿಕ ಅಪರಾಧಗಳ ವಿರುದ್ಧ ಗಮನಾರ್ಹ ರಕ್ಷಣೆಯಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ, ಬಿಟ್ಕಾಯಿನ್ಗಳನ್ನು ನಕಲು ಮಾಡುವುದು ಸಂಪೂರ್ಣ ಅಸಾಧ್ಯ. ಬಳಕೆದಾರರು ತಮ್ಮ ಪಾವತಿಗಳ ಸಂಪೂರ್ಣ ನಿಯಂತ್ರಣ ಹೊಂದಿರುವುದರಿಂದ ಮತ್ತು ಅನುಮೋದಿತವಲ್ಲದ ಶುಲ್ಕಗಳನ್ನು ಸ್ವೀಕರಿಸಲು ಸಾಧ್ಯವಿಲ್ಲದಿರುವುದರಿಂದ ಬಿಟ್ಕಾಯಿನ್ ವಹಿವಾಟುಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಮತ್ತು ಮೋಸದ ಜಾಲಗಳಿಂದ ನಿರೋಧಿಸಬಹುದು. ಬ್ಯಾಕಪ್ಗಳು, ಎನ್ಕ್ರಿಪ್ಶನ್ ಮತ್ತು ಬಹು ಸಹಿಗಳಂತಹ ಬಲವಾದ ಮತ್ತು ಉಪಯುಕ್ತ ಕಾರ್ಯವಿಧಾನಗಳನ್ನು ಬಳಸಿಕೊಂಡು ಕಳ್ಳತನ ಮತ್ತು ನಷ್ಟದ ವಿರುದ್ಧ ಹಣವನ್ನು ಸುರಕ್ಷಿತವಾಗಿರಿಸಲು ಬಿಟ್ಕಾಯಿನ್ ಸಹಕಾರಿಯಾಗಿದೆ. ಅಸ್ತಿತ್ವದಲ್ಲಿರುವ ಟ್ರಿಪಲ್ ಎಂಟ್ರಿ ಬುಕ್ ಕೀಪಿಂಗ್ ವ್ಯವಸ್ಥೆಯಾಗಿ ಬಿಟ್ಕಾಯಿನ್ ಅನ್ನು ಕಾಣಬಹುದು.”
ಬಿಟ್ಕಾಯಿನ್ ನಂತರದಲ್ಲಿ ಇತರ ಅನೇಕ ಕ್ರಿಪ್ಟೋಕರೆನ್ಸಿಗಳು ಬಂದಿವೆ. ಎಂಟು ಸಾವಿರಕ್ಕೂ ಹೆಚ್ಚು ಕ್ರಿಪ್ಟೋಕರೆನ್ಸಿಗಳು ಈಗ ಸಕ್ರಿಯವಾಗಿದ್ದು ಅವುಗಳಲ್ಲಿ ಇಥರಿಯಮ್, ಲೈಟ್ ಕಾಯಿನ್, ಎಕ್ಸ್ಆರ್ಪಿ, ಕಾರ್ಡಾನೊ, ಪೊಲ್ಕಾಡಾಟ್, ಪಾಲಿಗಾನ್ ಇತ್ಯಾದಿ ಪ್ರಮುಖವೆನಿಸಿವೆ.
ಸಾಮಾನ್ಯ ಹಣದಿಂದ ಮಾಡಲಾಗುವ ಎಲ್ಲ ವ್ಯವಹಾರಗಳಿಗೆ ಕ್ರಿಪ್ಟೋಕರೆನ್ಸಿಯನ್ನು ಬಳಸಬಹುದು. ಅದು ಡ್ರಗ್ ಡೀಲರ್ಗಳಿಗೆ ಮತ್ತು ಭೂಗತ ಚಟುವಟಿಕೆಗಳಿಗೆ ನೆಚ್ಚಿನ ತಾಣವಾಗಬಹುದಾದ ಸಂಶಯಗಳಿದ್ದರೂ, ಕಳೆದ ಕೆಲವು ವರ್ಷಗಳಿಂದ ಕ್ರಿಪ್ಟೋಕರೆನ್ಸಿ ಜನಸಾಮಾನ್ಯರನ್ನು ಸೆಳೆದಿದೆ ಮತ್ತು ಅದು ಸರ್ಕಾರಗಳ ನ್ಯಾಯಸಮ್ಮತಿಯನ್ನೂ ಬಯಸಿದೆ. ಆರ್ಥಿಕ ಅಪರಾಧಗಳ ಮೇಲೆ ನಿಗಾ ವಹಿಸುವ, ಅವ್ಯವಹಾರಗಳಿಗೆ ಕಡಿವಾಣ ಹಾಕುವ ಜಾರಿ ನಿರ್ದೇಶನಾಲಯಗಳಂತಹ ಸಂಸ್ಥೆಗಳ ಉಪಯುಕ್ತತೆ ಅಂತಹ ಭಯವನ್ನು ಹೋಗಲಾಡಿಸುವ ಭರವಸೆಯನ್ನು ಇಲ್ಲಿ ಪರಿಗಣಿಸಬಹುದಾಗಿದೆ.
ಭವಿಷ್ಯದತ್ತ ಒಂದು ನೋಟ
ವಿಶ್ವದ ವಿವಿಧ ಭಾಗಗಳಲ್ಲಿ/ದೇಶಗಳಲ್ಲಿ ಕ್ರಿಪ್ಟೋಕರೆನ್ಸಿಗಳು ತಮ್ಮ ಬಾಹುಗಳನ್ನು ಚಾಚುತ್ತಿದ್ದು ಅದರ ಇರುವಿಕೆ ಅಥವಾ ಬೆಳವಣಿಗೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಬ್ಲಾಕ್-ಚೈನ್ ತಂತ್ರಜ್ಞಾನವು ಉಳಿಯುವ ಎಲ್ಲ ಲಕ್ಷಣಗಳೂ ಇವೆ. ಕ್ರಿಪ್ಟೋ ಉಪಕರಣ, ಅವುಗಳ ಅನುಕೂಲ ಮತ್ತು ನ್ಯೂನತೆಗಳು ಅನೇಕವಿವೆ. ಇದು ಆರ್ಥಿಕತೆಯ ಹಣಕಾಸು ವ್ಯವಸ್ಥೆಗಳಿಗೆ ಸವಾಲನ್ನು ಒಡ್ಡುವ ಸಾಧ್ಯತೆಗಳಿವೆ. ಹ್ಯಾಕಿಂಗ್ ಮತ್ತು ಅನಾಮಧೇಯತೆಯ ವ್ಯವಹಾರಗಳ ಕಾರಣಗಳಿಂದ ದುರುಪಯೋಗದ ಅಪಾಯಗಳಿವೆ.
ಈ ಸಮಸ್ಯೆಗಳ ನಿವಾರಣೆಗೆ ಹೆಚ್ಚಿನ ಪಾರದರ್ಶಕತೆ, ಸ್ಪಷ್ಟತೆ ಮತ್ತು ನಿಯಮಾವಳಿಗಳ ಅಗತ್ಯವಿದೆ.
೧. ಎಲ್ಲ ದೇಶಗಳೂ ಜಾಗತಿಕ ಮಟ್ಟದಲ್ಲಿ ಕ್ರಿಪ್ಟೋ ಉಪಕರಣಗಳ ಬಳಕೆಗಾಗಿ ರೂಢಿಗಳು ಮತ್ತು ನಿಯಮಗಳನ್ನು ಸ್ಥಾಪಿಸುವುದು.
೨. ಕೆವೈಸಿ (ಗ್ರಾಹಕರ ಬಗೆಗೆ ಅರಿವು) ಮೂಲಕ ವಹಿವಾಟುಗಳನ್ನು ಪರಿಶೀಲಿಸುವುದು ಮತ್ತು ವಹಿವಾಟುಗಳಿಗೆ ತೆರಿಗೆ ವಿಧಿಸುವ ಪದ್ಧತಿಯನ್ನು ಅಭಿವೃದ್ಧಿಪಡಿಸುವುದು.
೩. ಕ್ರಿಪ್ಟೋ ಎಕ್ಸ್ಚೇಂಜ್ಗಳನ್ನು ಅಭಿವೃದ್ಧಿಪಡಿಸುವುದು ಮತ್ತು ನಿಯಂತ್ರಿಸುವುದು.
೪. ದತ್ತಾಂಶವನ್ನು (ಸಂಪೂರ್ಣ ಮಾಹಿತಿ) ಸಂಗ್ರಹಿಸುವುದು ಮತ್ತು ಹಣ ವರ್ಗಾವಣೆಯ ಮಾರ್ಗಗಳ ವಿಸ್ತರಣೆಯ ಬಗೆಗೆ ಸಂಶೋಧನೆ ನಡೆಸುವುದು.
೫. ಸಮತೋಲನ ನಿಯಂತ್ರಣವನ್ನು ಕಂಡುಹಿಡಿಯುವುದು ಮತ್ತು ವಿವಿಧ ಉದ್ದೇಶಗಳಿಗಾಗಿ ಕ್ರಿಪ್ಟೋ ಉಪಕರಣಗಳನ್ನು ಪರಿಶೀಲಿಸುವುದು.
ಈ ವಿಷಯದ ಬಗೆಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದ್ದು, ಸರ್ಕಾರಗಳು ಮತ್ತು ಜಾಗತಿಕ ಸಂಸ್ಥೆಗಳು ಹೆಚ್ಚು ಸಕ್ರಿಯ ಪಾತ್ರ ವಹಿಸಿದಲ್ಲಿ ಸ್ವೀಕಾರಾರ್ಹ ಪರಿಹಾರಗಳನ್ನು ಕಂಡುಹಿಡಿಯಲು ಸಹಾಯವಾಗುತ್ತದೆ. ಪ್ರಾಯೋಗಿಕ ನಿಯಮಗಳು ಮತ್ತು ಪಾರದರ್ಶಕತೆ ಖಂಡಿತವಾಗಿಯೂ ದೀರ್ಘಾವಧಿಯಲ್ಲಿ ಪ್ರಯೋಜನವಾಗುವ ಸಾಧ್ಯತೆ ಹೆಚ್ಚಿವೆ.
ಬಿಟ್ಕಾಯಿನ್
“ಬಿಟ್ಕಾಯಿನ್” ಎಂಬುದು ಕ್ರಿಪ್ಟೋಕರೆನ್ಸಿ ಪರಿಕಲ್ಪನೆಯ ಮೊದಲ ಕೂಸು. ಕ್ರಿಪ್ಟೋಗ್ರಫಿಯ ವಿವರಣೆ ಮತ್ತು ಸ್ಪಷ್ಟ ಭಾವರೂಪ ‘ಸತೋಶಿ ನಕಾಮೊಟೊ’ ಎನ್ನುವ ಪ್ರಕಾಶಕ್ಕೆ ಬರೆದಿರುವ ವ್ಯಕ್ತಿ/ಸಂಸ್ಥೆಯ ಮೂಲಕ ೨೦೦೮ರಲ್ಲಿ ಪ್ರಕಟವಾಯಿತು.
ಬಿಟ್ಕಾಯಿನ್ ವಿಕೇಂದ್ರೀಕೃತ ಡಿಜಿಟಲ್ ಕರೆನ್ಸಿಯಾಗಿದೆ, ಅಂದರೆ ಪ್ರತಿ ಬಾರಿ ಹಣವನ್ನು ಕಳುಹಿಸಿದಾಗ ಅಥವಾ ಸ್ವೀಕರಿಸಿದಾಗ, ಆ ವ್ಯವಹಾರವನ್ನು ಸಾರ್ವಜನಿಕ ದಾಖಲೆಯಲ್ಲಿ ಇರಿಸಲಾಗುತ್ತದೆ. ಪ್ರತಿ ವಹಿವಾಟನ್ನು ಪರಿಶೀಲಿಸುವ ಜವಾಬ್ದಾರಿ ಬಿಟ್ಕಾಯಿನ್ ನೆಟ್ವರ್ಕ್ನಲ್ಲಿ ‘ಗಣಿಗಾರ’ರಾಗಿ (ಮೈನರ್ಸ್) ಭಾಗವಹಿಸುವ ಮಂದಿಗೆ ಬರುತ್ತದೆ. ವಹಿವಾಟುಗಳನ್ನು ಪರಿಶೀಲಿಸಲು, ಗಣಿಗಾರರು ಕಂಪ್ಯೂಟರ್ಗಳ ನೆಟ್ವರ್ಕ್ ಬಳಸಿ ಅತಿ ಸಂಕೀರ್ಣ ಗಣಿತದ ಒಗಟುಗಳನ್ನು (ಪಝಲ್) ಬಿಡಿಸಿ ಪರಿಹರಿಸುತ್ತಾರೆ. ಬಿಟ್ಕಾಯಿನ್ ಗಣಿಗಾರಿಕೆಗೆ ಪರಿಹಾರ ಕಂಡುಹಿಡಿಯಲು ಅಗತ್ಯವಿರುವ ಸಂಸ್ಕರಣ ಶಕ್ತಿಯನ್ನು ಸಾಧಿಸಲು ಬಹು ವಿಶೇಷ ಕಂಪ್ಯೂಟರ್ ಮತ್ತು ಹೆಚ್ಚಿನ ವಿದ್ಯುಚ್ಛಕ್ತಿ ಬೇಕಾಗುತ್ತದೆ.
ಯಾರು ಮೊದಲು ‘ಪಝಲ್’ ಬಿಡಿಸುತ್ತಾರೋ ಅವರು ಜಾಗತಿಕ ಪುಸ್ತಕಕ್ಕೆ (ಲೆಡ್ಜರ್) ವಹಿವಾಟುಗಳ “ಬ್ಲಾಕ್” ಅನ್ನು ಸೇರಿಸಲು ಅನುಮತಿ ಪಡೆಯುತ್ತಾರೆ. ಈ ಕಾರ್ಯಕ್ಕೆ ಪ್ರತಿಯಾಗಿ ಬಿಟ್ಕಾಯಿನ್ನಿನ ಸಣ್ಣ ಮೊತ್ತವನ್ನು ಸಂಭಾವನೆಯಾಗಿ ನೀಡಲಾಗುತ್ತದೆ.
ಮೇ ೨೨, ೨೦೧೦ರಂದು, ಫ್ಲೋರಿಡಾದಲ್ಲಿ ವ್ಯಕ್ತಿಯೊಬ್ಬರು ೪೦ ಡಾಲರ್ ಬೆಲೆಯ ಎರಡು ಪೀಟ್ಜಾಗಳಿಗೆ ೧೦,೦೦೦ ಬಿಟ್ಕಾಯಿನ್ಗಳನ್ನು ಪಾವತಿಸಿದ್ದು ಮೊದಲ ವಾಣಿಜ್ಯ ವಹಿವಾಟು ಎಂದು ಗುರುತಿಸಲ್ಪಟ್ಟಿದೆ.
೨೦೧೪ರಲ್ಲಿ ೨೦೦ ಡಾಲರ್ ಮುಖಬೆಲೆಯ ಬಿಟ್ಕಾಯಿನ್ ೨೦೨೧ ಡಿಸೆಂಬರ್ ಹೊತ್ತಿಗೆ ೪೮೭೦೦ ಡಾಲರ್ಗಳಷ್ಟು ಮೌಲ್ಯವನ್ನು ಮುಟ್ಟಿದೆ.
ಬಿಟ್ಕಾಯಿನ್ ಪ್ರಾರಂಭದಲ್ಲಿ ೨೧ ಮಿಲಿಯನ್ ಮಿತಿಯಲ್ಲಿ ಗಣಿಗಾರಿಕೆ ಮಾಡಲಾಗಿದ್ದು ಆ ಮಿತಿಯಲ್ಲಿಯೇ ಇಡಲಾಗಿದೆ. ನವೆಂಬರ್ ೨೦೨೧ರ ಹೊತ್ತಿಗೆ, ಕೆಲವು ಅಂದಾಜಿನ ಪ್ರಕಾರ ಬಿಟ್ಕಾಯಿನ್ ಚಲಾವಣೆಯಲ್ಲಿರುವ ಒಟ್ಟು ಪ್ರಮಾಣ ಸುಮಾರು ೧೯ ಮಿಲಿಯನ್.
ಎಲ್ಸಾಲ್ವಡಾರ್ ದೇಶವು ಬಿಟ್ಕಾಯಿನ್ ಅನ್ನು ಕಾನೂನುಬದ್ಧಗೊಳಿಸಿದ ಮೊದಲ ದೇಶವೆನಿಸಿದೆ. ಆಸ್ಟ್ರೇಲಿಯಾ, ಫ್ರಾನ್ಸ್, ಸ್ಪೇನ್, ಜರ್ಮನಿ, ಜಪಾನ್, ಮೆಕ್ಸಿಕೊ, ಬ್ರಿಟನ್ ದೇಶಗಳಲ್ಲಿ ಬಿಟ್ಕಾಯಿನ್ ಅನ್ನು ಭಾಗಶಃ ಕಾನೂನುಬದ್ಧಗೊಳಿಸಲಾಗಿದೆ.