-ರಾಧಾಕೃಷ್ಣ ಕಲ್ಚಾರ್
ಇದುವರೆಗಿನ ನನ್ನ ಜೀವನ ಅರ್ಥವನ್ನು ಕಳೆದುಕೊಂಡು ನಿಸ್ಸಾರವಾಗಿ ಗೋಚರಿಸಿತು. ಒಬ್ಬ ಕ್ಷತ್ರಿಯಕುಮಾರನಾಗಿ, ರಾಜಪುತ್ರನಾಗಿ ನನ್ನ ಸಾಧನೆಯೇನು? ಬರೇ ಜಂಭ ಕೊಚ್ಚುತ್ತ ಅದರಲ್ಲಿ ಆತ್ಮತೃಪ್ತಿಯನ್ನು ಹೊಂದುತ್ತಿದ್ದೆನಲ್ಲ, ಇಷ್ಟು ದಿನ! ಮುಂದಿನ ನನ್ನ ಬಾಳಿನಲ್ಲಿ ಏನು ಸ್ವಾರಸ್ಯ? ಅಯ್ಯೋ ಎಂಬ ಮರುಕವು ನನ್ನ ಕುರಿತು ನನ್ನಲ್ಲಿ ಹುಟ್ಟಿತು. ನನ್ನ ಭಂಡಬಾಳುವೆಗೆ ಧಿಕ್ಕಾರವಿರಲಿ ಎಂದುಕೊಂಡೆ. ಎಷ್ಟು ಹೊತ್ತಾದರೂ ನಿದ್ರೆ ಸುಳಿಯಲಿಲ್ಲ. ಎವೆ ಮುಚ್ಚಿದರೆ ರಣರಂಗದ ದೃಶ್ಯ ಕಾಣುತ್ತಿತ್ತು, ಅರ್ಜುನನ ಯುದ್ಧದ ವಿಜೃಂಭಣೆ ಹಾದುಹೋಗುತ್ತಿತ್ತು. ನಾನು ರಣಹೇಡಿಯಾಗಿ ರಥದಿಂದ ಧುಮ್ಮಿಕ್ಕಿ ಓಡಿದ ಸಂದರ್ಭ ಮತ್ತೆಮತ್ತೆ ನೆನಪಾಗುತ್ತಿತ್ತು. ಅರ್ಜುನನ ಪ್ರಚೋದನೆಯ ಮಾತುಗಳು ಕಿವಿಗಳಲ್ಲಿ ಅನುರಣಿಸುತ್ತಿದ್ದವು.
ಗೋಗ್ರಹಣ ಯುದ್ಧ ಮುಗಿಸಿ ನಾವು ನಗರಕ್ಕೆ ಮರಳಿದೆವು.
ಯುದ್ಧವನ್ನು ಗೆದ್ದವನು ನಾನು ಎಂದು ಪ್ರಚಾರವೂ ಅಯಿತು. ನನಗೆ ನಾಚುಗೆಯಾಗುತ್ತಿತ್ತು. ರಣಭೂಮಿಯಿಂದ ಹೇಡಿಯಾಗಿ ಓಡಲೆಳಸಿದವನಿಗೆ ಪ್ರಶಂಸೆಯು ದೊಡ್ಡ ಹೊರೆಯೇ! ಆದರೇನು ಮಾಡಲಿ? ಪಾಂಡವರ ರಹಸ್ಯವನ್ನು ನಾನು ಬಹಿರಂಗಗೊಳಿಸುವಂತಿರಲಿಲ್ಲ. ಹಾಗಾಗಿ ಬಾಯಿ ಮುಚ್ಚಿಕೊಂಡೆ.
ನನ್ನ ತಂದೆಯವರಿಗೊ ನನ್ನ ಕುರಿತು ಹೆಮ್ಮೆಯುಕ್ಕುತ್ತಿತ್ತು. ತನ್ನ ಮಗ ಏಕಾಂಗ ಸಾಹಸಿಯಾಗಿ, ಅಪ್ರತಿಮ ಬಲರಾದ ಕೌರವ ಸೇನೆಯ ಮಹಾಯೋಧರನ್ನು ಎದುರಿಸಿ ಗೆದ್ದನಲ್ಲ ಎಂಬ ಹೆಮ್ಮೆಯದು. ಎಲ್ಲರ ಸಮ್ಮುಖದಲ್ಲಿ ನನ್ನ ಯುದ್ಧದ ವಿವರಗಳನ್ನು ಕೇಳುವ ಹಂಬಲ ಅವರಿಗೆ. ನನಗೋ ತಲೆಯೆತ್ತಿ ಅವರನ್ನು ನೋಡಲಾರದ ಸ್ಥಿತಿ. ನಾನು ಗೆದ್ದುದಲ್ಲ ಎಂಬ ಸತ್ಯವನ್ನು ಅವರಲ್ಲಿ ಹೇಳುವಂತಿಲ್ಲ. ಮಾಡದ ಯುದ್ಧದ ವಿವರವನ್ನು ಹೇಳುವುದೆಂತು? ಹೇಗೋ ಒಂದಿಷ್ಟು ವರ್ಣಿಸಿದಂತೆ ಮಾಡಿ, ತಲೆತಗ್ಗಿಸಿ ಅವರಿಂದ ಪಾರಾದೆ. ನನ್ನ ಪರಿಸ್ಥಿತಿಯನ್ನು ನೋಡಿ ಬೃಹನ್ನಳೆಗೆ, ಅಲ್ಲ ಅರ್ಜುನನಿಗೆ ಒಳಗೊಳಗೆ ನಗೆಯುಕ್ಕುತ್ತಿದ್ದಿರಬೇಕು. ನಾನು ನಾಚಿಕೊಂಡು ಅಂತಃಪುರ ಸೇರಿದೆ.
ಎಂದಿನಂತೆ ಅಂತಃಪುರವಾಗಲಿ, ನನ್ನ ಸಖಿಯರ ಒಡನಾಟವಾಗಲಿ ಪ್ರಿಯವಾಗಲಿಲ್ಲ. ಇಲ್ಲಿಯವರೆಗೆ ಯಾವುದು ನನಗೆ ನೆಮ್ಮದಿಯ ತಾಣವಾಗಿ ಕಂಡಿತ್ತೋ ಅದು ಸೆರೆಯಂತೆ ಭಾಸವಾಗುತ್ತಿತ್ತು. ನನ್ನನ್ನು ಸುತ್ತುವರಿದಿದ್ದ ಸಖೀವೃಂದವು ನನ್ನ ಸಾಹಸದ ಕಥನದ ಕುತೂಹಲದಲ್ಲಿ ಕಾದಿತ್ತು. ಅವರ ಅರಳಿದ ಕಣ್ಣುಗಳು ನನ್ನನ್ನು ಹಂಗಿಸಿದಂತೆ ನನ್ನಗನಿಸಿತು. ಅವರಿಗೆ ಏನು ಹೇಳಲಿ? ಇದುವರೆಗೆ ಉಬ್ಬಿಕೊಂಡಿದ್ದ ನನ್ನ ದೊಡ್ಡಸ್ತಿಕೆಯ ಬುದ್ಬುದ ಗಾಳಿಯನ್ನು ಕಳೆದುಕೊಂಡು ಚಪ್ಪಟೆಯಾಗಿತ್ತು. ನನ್ನ ಸಾಹಸದ ಭ್ರಮೆಯೂ ಸಾಕು, ಅವರ ಹೊಗಳಿಕೆಯೂ ಸಾಕು. ಒಮ್ಮೆ ಏಕಾಂತ ಸಿಕ್ಕಿದರೆ ನಿರಾಳ ಭಾವ ಉಂಟಾಗುತ್ತಿತ್ತು. ಅಂತೂ ಅವರನ್ನು ನಿವಾರಿಸಿಕೊಂಡು ಒಬ್ಬನೇ ಶಯ್ಯಾಗೃಹವನ್ನು ಸೇರಿದಾಗ, ಎಲ್ಲವನ್ನೂ ಕಳೆದುಕೊಂಡ ಶೂನ್ಯತೆ ನನ್ನನ್ನಾವರಿಸಿತು.
ಇದುವರೆಗಿನ ನನ್ನ ಜೀವನ ಅರ್ಥವನ್ನು ಕಳೆದುಕೊಂಡು ನಿಸ್ಸಾರವಾಗಿ ಗೋಚರಿಸಿತು. ಒಬ್ಬ ಕ್ಷತ್ರಿಯ ಕುಮಾರನಾಗಿ, ರಾಜಪುತ್ರನಾಗಿ ನನ್ನ ಸಾಧನೆಯೇನು? ಬರೇ ಜಂಭ ಕೊಚ್ಚುತ್ತ ಅದರಲ್ಲಿ ಆತ್ಮತೃಪ್ತಿಯನ್ನು ಹೊಂದುತ್ತಿದ್ದೆನಲ್ಲ, ಇಷ್ಟು ದಿನ! ಮುಂದಿನ ನನ್ನ ಬಾಳಿನಲ್ಲಿ ಏನು ಸ್ವಾರಸ್ಯ? ಅಯ್ಯೋ ಎಂಬ ಮರುಕವು ನನ್ನ ಕುರಿತು ನನ್ನಲ್ಲಿ ಹುಟ್ಟಿತು. ನನ್ನ ಭಂಡಬಾಳುವೆಗೆ ಧಿಕ್ಕಾರವಿರಲಿ ಎಂದುಕೊಂಡೆ. ಎಷ್ಟು ಹೊತ್ತಾದರೂ ನಿದ್ರೆ ಸುಳಿಯಲಿಲ್ಲ. ಎವೆ ಮುಚ್ಚಿದರೆ ರಣರಂಗದ ದೃಶ್ಯ ಕಾಣುತ್ತಿತ್ತು. ಅರ್ಜುನನ ಯುದ್ಧದ ವಿಜೃಂಭಣೆ ಹಾದುಹೋಗುತ್ತಿತ್ತು. ನಾನು ರಣಹೇಡಿಯಾಗಿ ರಥದಿಂದ ಧುಮ್ಮಿಕ್ಕಿ ಓಡಿದ ಸಂದರ್ಭ ಮತ್ತೆಮತ್ತೆ ನೆನಪಾಗುತ್ತಿತ್ತು. ಅರ್ಜುನನ ಪ್ರಚೋದನೆಯ ಮಾತುಗಳು ಕಿವಿಗಳಲ್ಲಿ ಅನುರಣಿಸುತ್ತಿದ್ದವು. ಇಲ್ಲ, ಇಲ್ಲಿಯವರೆಗಿನ ಉತ್ತರಕುಮಾರ ಸತ್ತುಹೋದ. ಅವನ ಸ್ಥಾನದಲ್ಲಿ ಒಬ್ಬ ಧೀರನಾದ, ಸಾವಿಗೆ ಅಂಜದ ಗಂಡುಗಲಿ ಹುಟ್ಟಿಕೊಳ್ಳಬೇಕು. ನನ್ನ ತಂದೆ, ತಾಯಿ, ಪರಿಜನ, ಪುರಜನ ಅಷ್ಟೇ ಏನು, ನನ್ನ ನಾಡೇ ಕಲಿಯಾದ ಉತ್ತರಕುಮಾರನನ್ನು ಕಂಡು ಮೆಚ್ಚುವಂತಾಗಬೇಕು ಎಂದು ಅನಿಸತೊಡಗಿತು.
ಹೌದು, ರಣಭೂಮಿಯನ್ನು ಒಮ್ಮೆಯೂ ಕಾಣದ ನಾನು, ಈತನಕ ಒಂದು ಮಿಥ್ಯಾ ಜಗತ್ತಿನಲ್ಲಿ ಬದುಕಿದ್ದೆ. ಭ್ರಮೆಯ ಆ ಪೊರೆ ಇಂದಿಗೆ ಹರಿದುಹೋಯಿತು. ಇನ್ನು ಅಲ್ಲಿ ನನ್ನ ನೆಮ್ಮದಿಯನ್ನು ಕಾಣಲಾರೆ. ವಾಸ್ತವದ ಸತ್ಯದರ್ಶನವನ್ನು ನನಗಿಂದು ಅರ್ಜುನ ಮಾಡಿಸಿದ. ಅದನ್ನು ಒಪ್ಪಿಕೊಳ್ಳುವುದು ನನ್ನ ಪಾಲಿಗೆ ಅನಿವಾರ್ಯ. ಛಿದ್ರವಾದ ಹಡಗಿನ ಹಲಗೆಯನ್ನು ಹಿಡಿದುಕೊಂಡ ಪ್ರಯಾಣಿಕನಂತೆ ಆಗಿದ್ದೇನೆ. ಸುತ್ತ ಮೊರೆಯುತ್ತಿರುವ ಸಾಗರದ ಭಯಾನಕ ಅಲೆಗಳು. ಒಂದೋ ದಡವನ್ನು ಸೇರಬೇಕು ಅಥವಾ ಮುಳುಗಿ ಸಾಯಬೇಕು. ಅಸಹಾಯಕನಂತೆ ವಿಧಿಗೆ ನನ್ನನ್ನು ಒಪ್ಪಿಸಿಕೊಳ್ಳಲೆ? ಇಲ್ಲ, ಇಲ್ಲ… ಈಜಬೇಕು. ಪ್ರಚಂಡ ಅಲೆಗಳ ವಿರುದ್ಧ ಹೋರಾಡಬೇಕು. ಕೈ ಸೋತು ಸತ್ತರೆ ಹೋಗಲಿ. ಯಾರನ್ನೋ ಅವಲಂಬಿಸಿ ಅವರ ಹಂಗಿನಲ್ಲಿ ಪ್ರಾಣ ಉಳಿಸಿಕೊಳ್ಳುವುದಲ್ಲ. ಉತ್ತರ ಕುಮಾರ ಹೇಡಿಯಾಗಿ ಸತ್ತ ಎಂದಾಗಕೂಡದು. ಹೋರಾಡಿ ಸತ್ತ ಎಂದಾಗಬೇಕು. ಹೀಗೆಲ್ಲ ಚಿಂತಿಸುತ್ತ ಕೊನೆಗೊಂದು ನಿರ್ಣಯದ ನೆಲೆಗೆ ನಾನು ಮುಟ್ಟಿದಾಗ ನಸುಕು ಮೂಡಲು ಹೆಚ್ಚು ಕಾಲ ಉಳಿದಿರಲಿಲ್ಲ.
ಮತ್ತೆ ನಡೆದುದೆಲ್ಲ ಇತಿಹಾಸ. ಪಾಂಡವರು ಪ್ರಕಟವಾದರು. ಅವರು ತಮ್ಮ ತೇಜಃಪೂರ್ಣ ವ್ಯಕ್ತಿತ್ವಗಳಲ್ಲಿ ಹೊಳೆಯುತ್ತಿರುವಾಗ ಒಬ್ಬೊಬ್ಬರನ್ನೇ ತಂದೆಗೆ ಪರಿಚಯಿಸಿದೆ. ತಂದೆಯವರು ದಿಗ್ಭ್ರಾಂತರಾದರು. ತನ್ನ ಸೇವಕರೆಂಬ ಭಾವದಿಂದ ತಾನು ಕಂಡದ್ದು ಲೋಕೋತ್ತರ ವೀರರಾದ ಪಾಂಡವರನ್ನು ಮತ್ತು ದ್ರೌಪದಿಯನ್ನು ಎಂಬ ಸತ್ಯವನ್ನು ಜೀರ್ಣಿಸಿಕೊಳ್ಳುವುದಕ್ಕೆ ಅವರಿಗೆ ಬಹಳ ಸಮಯ ಬೇಕಾಯಿತು. ತನ್ನ ರಾಜ್ಯ, ಕೋಶ ಸರ್ವಸ್ವವನ್ನೂ ಯುಧಿಷ್ಠಿರನ ಪದತಲದಲ್ಲಿ ಸಮರ್ಪಿಸುವುದಕ್ಕೆ ಸಿದ್ಧರಾದರು. ಆದರೆ ಯುಧಿಷ್ಠಿರ ಅದನ್ನಾವುದನ್ನೂ ಸ್ವೀಕರಿಸಲಿಲ್ಲ. ತಂದೆಯವರಿಗೇ ಬಿಟ್ಟುಕೊಟ್ಟ. ಇಷ್ಟುಕಾಲ ಆಶ್ರಯ ನೀಡಿದ್ದಕ್ಕೆ ತಾವು ಕೃತಜ್ಞರು ಎಂದ. ಇನ್ನೊಬ್ಬರ ರಾಜ್ಯವನ್ನು ನುಂಗುವುದಕ್ಕೆ ಯತ್ನಿಸುತ್ತಿರುವ ದುರ್ಯೋಧನನೆಲ್ಲಿ? ಅಯಾಚಿತವಾಗಿ ದೊರೆತ ಸಮೃದ್ಧ ರಾಜ್ಯವನ್ನು ನಿರಾಕರಿಸಿದ ಯುಧಿಷ್ಠಿರನೆಲ್ಲಿ?
ತಂದೆಯವರು ಇದರಿಂದ ತೃಪ್ತರಾಗಲಿಲ್ಲ. ನನ್ನ ಮಗಳಾದ ಉತ್ತರೆಯನ್ನು ಅರ್ಜುನ ವಿವಾಹವಾಗಲಿ. ಇದರಿಂದ ಪಾಂಡವರ ಬಂಧುತ್ವ ನನಗಾಗಲಿ ಎಂಬ ಅಪೇಕ್ಷೆಯನ್ನು ಮುಂದಿಟ್ಟರು. ನಮಗೆಲ್ಲ ಇದು ಅತ್ಯಂತ ಪ್ರಿಯವೆನಿಸಿತು. ಆದರೆ ಅರ್ಜುನ ಮಾತ್ರ ಈ ಬೇಡಿಕೆಯನ್ನು ಮಾನಿಸಲಿಲ್ಲ.
“ಉತ್ತರೆ ನನ್ನ ಶಿಷ್ಯೆ. ನನಗೆ ಮಗಳಂತೆ. ಅವಳನ್ನು ವಿವಾಹವಾಗಲಾರೆ. ಆದರೆ ನನ್ನ ಪುತ್ರ ಅಭಿಮನ್ಯುವಿಗೆ ಅವಳನ್ನು ವಧುವಾಗಿ ಸ್ವೀಕರಿಸುತ್ತೇನೆ” ಎಂದ. ಅವನ ಮೇಲೆ ನನಗಿದ್ದ ಗೌರವ ಇದರಿಂದ ಮತ್ತಷ್ಟು ಹೆಚ್ಚಿತು.
ಹೀಗೆ ಪಾಂಡವರು ನಮಗೆ ಬಂಧುಗಳಾದರು.
ಬಂಧುಗಳೆನ್ನಿಸಿದ ಬಳಿಕ ಅವರ ಕಷ್ಟಸುಖಗಳಲ್ಲಿ ಭಾಗಿಗಳಾಗುವುದು ನಮ್ಮ ಕರ್ತವ್ಯವಾಯಿತು. ಅಜ್ಞಾತವಾಸದ ಅವಧಿಯನ್ನು ಪೂರ್ಣಗೊಳಿಸಿದ ಪಾಂಡವರು ತಮ್ಮ ರಾಜ್ಯಭಾಗವನ್ನು ಹೊಂದುವುದು ಅವರ ಹಕ್ಕು. ಆದರೆ ದುರ್ಯೋಧನ ಅದನ್ನು ಕೊಡುವುದಕ್ಕೆ ಒಪ್ಪಲಿಲ್ಲ. ಸಂಧಾನದ ಪ್ರಯತ್ನ ಮುರಿದು ಬಿತ್ತು. ಎರಡೂ ಪಕ್ಷಗಳಲ್ಲಿ ಬಲ ಸಂಗ್ರಹವಾಯಿತು. ಕೌರವರಿಗೆ ಹನ್ನೊಂದು ಅಕ್ಷೋಹಿಣಿ ಸೇನೆ ಸಂಗ್ರಹವಾಯಿತು. ಪಾಂಡವರು ಸಂಖ್ಯೆಯ ದೃಷ್ಟಿಯಿಂದ ಅಷ್ಟು ಸಂಪನ್ನರಾಗಲಿಲ್ಲ. ಅವರ ಬಂಧುಗಳು, ಮಿತ್ರರು ಒಟ್ಟಾಗಿ ಏಳು ಅಕ್ಷೋಹಿಣಿ ಸೇನೆ ಸಿದ್ಧವಾಯಿತು. ಪಾಂಡವರು ಧಾರ್ಮಿಕರೂ, ಸಚ್ಚಾರಿತ್ರ್ಯವುಳ್ಳವರೂ ಆಗಿದ್ದರು. ಇದನ್ನು ಜಗತ್ತು ತಿಳಿದಿತ್ತು. ಆದರೂ ಕೌರವರ ಕಡೆಯಲ್ಲಿ ಹೆಚ್ಚುಜನ ಸಂಗ್ರಹ. ಇದೊಂದು ಚೋದ್ಯವೇ. ಧರ್ಮವನ್ನು ಅನುಸರಿಸುವುದಕ್ಕೆ ಎಷ್ಟೋ ಮಂದಿ ಪ್ರಾಜ್ಞರೇ ಹಿಂಜರಿದರು. ಅವರಿಗೆಲ್ಲ ನಾನಾ ಬಗೆಯ ಹಂಗು, ದಾಕ್ಷಿಣ್ಯ, ಪಾಂಡವ ಪಕ್ಷೀಯರಲ್ಲಿ ಕೆಲವರ ವಿರೋಧ ಇತ್ಯಾದಿ ಕಾರಣಗಳಿದ್ದವು ಎನ್ನೋಣ. ಭೀಷ್ಮ, ದ್ರೋಣ ಮೊದಲಾದ ಮಹಾರಥಿಗಳೆಲ್ಲ ಧಾರ್ಮಿಕರಾದರೂ ಕೌರವನ ಕಡೆಯಿಂದ ಯುದ್ಧಕ್ಕೆ ಅಣಿಯಾಗಿದ್ದರು. ಇದಕ್ಕೂ ಮಿಗಿಲಾಗಿ ದುರ್ಯೋಧನ ತನ್ನ ತಂತ್ರಗಾರಿಕೆಯಿಂದ ಅನೇಕರನ್ನು ಸೆಳೆದುಕೊಂಡ. ಅವನಿಗೆ ಸೇನೆ ದೊಡ್ಡದಾದರೆ ಗೆಲ್ಲುವುದು ಸುಲಭ ಎಂಬ ಭ್ರಮೆ. ಅವನು ನಾಲ್ಕು ಅಕ್ಷೋಹಿಣಿ ಸೇನೆ ಸಂಗ್ರಹಿಸಿದ್ದೇ ತಂತ್ರದಿಂದ.
ಯುದ್ಧಪೂರ್ವದಲ್ಲಿ ದ್ವಾರಕೆಗೆ ಹೋಗಿದ್ದನಂತೆ ದುರ್ಯೋಧನ. ಅಲ್ಲಿ ಕೃಷ್ಣ ಮತ್ತು ಅವನ ಅತ್ಯಂತ ಆಪ್ತರ ಬಳಗ ಹಾಗೂ ಬಲರಾಮನ ನೇತೃತ್ವದ ಯಾದವ ಮಹಾ ಸೇನೆ ಹೀಗೆ ಎರಡು ವಿಭಾಗ ಮಾಡಿ ಬೇಕಾದುದನ್ನು ಆರಿಸಿಕೊ ಎಂದಾಗ ದುರ್ಯೋಧನ ಸೈನ್ಯಬಲವನ್ನು ನೆಚ್ಚಿದ. ಸಮರತಂತ್ರ ನಿಪುಣನಾದ ಕೃಷ್ಣನನ್ನು ಉಪೇಕ್ಷಿಸಿದ. ಮದ್ರದ ಶಲ್ಯ ರಾಜನ ವಿಚಾರದಲ್ಲಿ ದುರ್ಯೋಧನ ತಂತ್ರವಲ್ಲ, ಕುತಂತ್ರವನ್ನೇ ಮಾಡಿದ ಎನ್ನಬೇಕು. ಮದ್ರದಿಂದ ಶಲ್ಯರಾಜ ಪಾಂಡವರಿಗೆ ಸಹಾಯ ಮಾಡಲೆಂದು ಸೈನ್ಯ ಸಹಿತ ಹೊರಟಿದ್ದ. ಅವರು ಅವನ ಅಳಿಯಂದಿರು ತಾನೇ. ಹೀಗೆ ದೊಡ್ಡ ಸೇನೆ ಉಪಪ್ಲಾವ್ಯದತ್ತ ಪ್ರಯಾಣ ತೊಡಗಿತು. ಅನೇಕ ಮಜಲುಗಳ ಪ್ರಯಾಣ. ಹಾಗೆ ಬರುತ್ತಿರುವಾಗ ಅಷ್ಟು ಮಂದಿ ಸೈನಿಕರ ಊಟ, ಬಿಡಾರಗಳೆಲ್ಲ ದೊಡ್ಡ ಸಮಸ್ಯೆ. ಹೇಗೋ ವ್ಯವಸ್ಥೆ ಮಾಡಿಕೊಂಡು ಬರುತ್ತಿದ್ದ ಶಲ್ಯನ ಸೈನ್ಯಕ್ಕೆ ಗುಟ್ಟಾಗಿ ದುರ್ಯೋಧನ ಅನುಕೂಲ ವ್ಯವಸ್ಥೆಗಳನ್ನು ಕಲ್ಪಿಸಿದ. ಮಾಡಿದವರು ಯಾರೆಂದು ಗೊತ್ತಾಗದಂತೆ ಎಚ್ಚರ ವಹಿಸಿದ.
ಶಲ್ಯ ಬಹು ಸಂತುಷ್ಟನಾದ. ಈ ಅನುಕೂಲಗಳಿಂದ ಅವನ ಪ್ರಯಾಣ ಸುಖಕರವಾಗಿತ್ತು. ಬಹುಶಃ ಪಾಂಡವರೇ ಇದನ್ನೆಲ್ಲ ಮಾಡಿಸಿರಬೇಕು ಎಂದು ಊಹಿಸಿಕೊಂಡ. ತನ್ನ ಸಂತೋಷದ ಪ್ರಕಟನೆಗೆ ಒಂದು ಘೋಷಣೆ ಹೊರಡಿಸಿದ. “ಯಾರು ನಮ್ಮ ಸೈನ್ಯಕ್ಕೆ ಇಂತಹ ವ್ಯವಸ್ಥೆಗಳನ್ನು ಕಲ್ಪಿಸಿದರೋ ಅವರು ಎದುರಿಗೆ ಬರಲಿ. ಅವರು ಕೇಳಿದ್ದು ಕೊಡುತ್ತೇನೆ” ಎಂದು ಡಂಗುರ ಸಾರಿಸಿದ. ಇದೇ ಸಮಯವನ್ನು ಕಾಯುತ್ತಿದ್ದ ದುರ್ಯೋಧನ ಹಾಗೂ ಕರ್ಣರು ಶಲ್ಯರಾಜನ ಎದುರಿಗೆ ಹೋದರು. ಶಲ್ಯನಿಗೆ ಅಚ್ಚರಿಯಾಗಿರಬೇಕು. ದುರ್ಯೋಧನ ಅವನಲ್ಲಿ ಹೇಳಿಕೊಂಡ, ‘ಇಷ್ಟೆಲ್ಲ ಅನುಕೂಲ ಮಾಡಿಕೊಟ್ಟದ್ದು ತಾನು. ಹಾಗಾಗಿ ಕೇಳಿದ್ದು ಕೊಡುತ್ತೇನೆ ಎಂದ ಮಾತಿನ ಪ್ರಕಾರ, ತನಗೆ ಬೇಕಾದ್ದನ್ನು ಶಲ್ಯ ಭೂಪತಿಗಳು ಕೊಡಬೇಕು’ – ಎಂದು.
ಶಲ್ಯನಿಗೆ ಅಸಹಾಯಕ ಸ್ಥಿತಿ. ಸರಿ ಕೇಳು ಎಂದ.
“ಮಹಾರಾಜ, ನೀವು ಕೊಡುವುದಾದರೆ ನಿಮ್ಮ ಸಂಪೂರ್ಣ ಬಲ ಸಹಿತ ನಮ್ಮ ಪಕ್ಷಕ್ಕೆ ಬಂದು ಪಾಂಡವರ ವಿರುದ್ಧ ಹೋರಾಡಬೇಕು” ಎಂದ ದುರ್ಯೋಧನ. ಶಲ್ಯನಿಗೆ ಬೆತ್ತ ಕೊಟ್ಟು ಹೊಡೆಸಿಕೊಂಡ ಅನುಭವವಾಗಿರಬಹುದು. ಉಪಾಯಗಾಣದೆ ಒಪ್ಪಿದ.
ದುರ್ಯೋಧನನ ಹನ್ನೊಂದು ಅಕ್ಷೋಹಿಣಿಯಲ್ಲಿ ಹೀಗೆ ಬಂದ ಸೈನ್ಯದ ಪ್ರಮಾಣವೂ ಸಾಕಷ್ಟಿತ್ತು. ಧರ್ಮಾಧರ್ಮಗಳ ವಿವೇಚನೆಗಿಂತ ಇಂತಹ ತಂತ್ರಗಳೂ ಬೆಂಬಲಿಗರ ಸಂಖ್ಯೆಯ ಹೆಚ್ಚಳಕ್ಕೆ ಕಾರಣ ಎನ್ನುವುದಕ್ಕೆ ಇದನ್ನೆಲ್ಲ ನೆನಪಿಸಬೇಕಾಯಿತು. ಅಂತೂ ಯುದ್ಧವೇ ನಿರ್ಣಯವಾದ ಮೇಲೆ ನಾವೆಲ್ಲ ಸೈನ್ಯ ಸಹಿತ ರಣಭೂಮಿಗೆ ಸಾಗಿದೆವು. ಪಾಂಡವ ಪಕ್ಷೀಯರಾದ ನಮಗೆ ಸಂಖ್ಯಾಬಲಕ್ಕಿಂತ ಮನೋಬಲವೇ ಅಧಿಕವಾಗಿತ್ತು. ಅದಕ್ಕೆ ಕಾರಣ ಯುಧಿಷ್ಠಿರನ ಧಾರ್ಮಿಕ ಪ್ರವೃತ್ತಿಯ ಕುರಿತು ಇದ್ದ ವಿಶ್ವಾಸ. ಅಲ್ಲದೆ ಸಾಕ್ಷಾತ್ ಭಗವಂತ ಎನಿಸಿದ ಕೃಷ್ಣ ನಮ್ಮ ಪಕ್ಷದಲ್ಲಿದ್ದ. ಯುದ್ಧಕ್ಕೆ ತೊಡಗಿದ ಬಳಿಕ ಜಯಾಪಜಯ ಹೇಗೂ ಸಂಭವಿಸಬಹುದು. ಆದರೆ ನಾವು ಗೆಲ್ಲುತ್ತೇವೆ ಎಂಬ ಭರವಸೆಯಿದ್ದಾಗ ಹೋರಾಟಕ್ಕೆ ತ್ರಾಣ ಹೆಚ್ಚು. ನಮಗಿದ್ದ ಬಲ ಅದು.
ನಮ್ಮ ಪಕ್ಷದಲ್ಲಿ ದೃಷ್ಟದ್ಯುಮ್ನ ಸೇನಾಪತಿಯಾದ. ಕೌರವರ ಸೇನಾಪತಿಯಾಗಿ ಭೀಷ್ಮರಿಗೆ ಪಟ್ಟವಾಯಿತು. ಅವರೇ ಯುದ್ಧದ ನಿಯಮಗಳನ್ನೂ ಘೋಷಿಸಿದರು. ಇನ್ನೇನು ಯುದ್ಧ ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಮಹಾವೀರನಾದ ಅರ್ಜುನನಿಗೆ ವಿಷಾದ ಉಂಟಾಯಿತು. ಅದನ್ನು ಹೋಗಲಾಡಿಸುವುದಕ್ಕೆ ಶ್ರೀಕೃಷ್ಣ ವಿಸ್ತಾರವಾದ ತತ್ತ್ವೋಪದೇಶವನ್ನು ಮಾಡಿದ. ಅದು ಅರ್ಜುನನಿಗೆ ಮಾತ್ರವಲ್ಲ, ಸಂದಿಗ್ಧದಲ್ಲಿದ್ದ ಅನೇಕ ಯೋಧರ ದೃಷ್ಟಿಯನ್ನು ನಿಚ್ಚಳವಾಗಿಸಿತು. ಸಾವು ಅಥವಾ ಗೆಲವು ಎಂಬುದು ನಮ್ಮೆಲ್ಲರ ಮಂತ್ರವಾಯಿತು. ರಣಕಹಳೆ ಮೊಳಗಿತು.
ಯುದ್ಧದ ಮೊದಲ ದಿನವೇ ನನ್ನ ಸಹೋದರರಲ್ಲಿ ಒಬ್ಬನಾದ ಶ್ವೇತ ಭೀಷ್ಮರೊಂದಿಗೆ ಹೋರಾಡಿ ಮರಣಿಸಿದ. ಭೀಷ್ಮರ ಸೇನಾಧಿಪತ್ಯದ ಯುದ್ಧದಲ್ಲೇ ನನ್ನ ಇನ್ನೊಬ್ಬ ಸೋದರ ಶಂಖನೂ ದ್ರೋಣರಿಂದ ಹತನಾದ.
ಯುದ್ಧ ಉಂಟುಮಾಡುವ ಭೀಕರ ಪರಿಣಾಮವು ಹಾಗೆ ನನ್ನ ಅನುಭವಕ್ಕೆ ಬಂತು. ಆಶ್ಚರ್ಯವೆಂದರೆ ಆಯುಧ ಹಿಡಿದು ಯುದ್ಧಕ್ಕೆ ತೊಡಗಿದ ನನಗೆ ಮೊದಲಿದ್ದ ಭಯದ ಸುಳಿವೂ ಈಗ ಇರಲಿಲ್ಲ. ಅರ್ಜುನನ ಮನೋಚಿಕಿತ್ಸೆಯೋ ಅಥವಾ ಶ್ರೀಕೃಷ್ಣನ ಉಪದೇಶವೋ, ಅಲ್ಲ ಎರಡೂ ಸೇರಿಯೋ ನನ್ನ ವ್ಯಕ್ತಿತ್ವವನ್ನೇ ಪರಿವರ್ತಿಸಿಬಿಟ್ಟಿದ್ದವು. ಸಾವು ಸಮೀಪವಿದ್ದಾಗಲೂ ಖಚಿತವಾದ ನಿರ್ಣಯವಿದ್ದಾಗ ಭೀತಿ ಸಮೀಪ ಸುಳಿಯುವುದಿಲ್ಲ ಎಂಬುದನ್ನು ಅನುಭವದಿಂದ ಕಲಿತೆ. ಒಮ್ಮೆ ರಣೋತ್ಸಾಹ ತುಂಬಿದರೆ ನಮ್ಮ ಆಪ್ತರು ಮರಣಿಸಿದರೂ ವ್ಯಥೆಯಾಗುವುದಿಲ್ಲ. ಪ್ರತಿಯಾಗಿ ಅವರನ್ನು ಕೊಂದವರ ನೆತ್ತರು ಹರಿಸುವ ಉದ್ದೇಶವೇ ಮುಖ್ಯವಾಗುತ್ತದೆ.
ನನ್ನ ಸಾವು ಕೂಡ ಸಮೀಪದಲ್ಲಿ ಇದೆ ಎಂದು ನಾನು ಗ್ರಹಿಸಿದೆ. ಆ ದಿನ ಯುದ್ದಸನ್ನದ್ಧನಾಗಿ ರಥವೇರಿದಾಗ ಒಂದು ಸಾರ್ಥಕತೆಯ ಭಾವನೆ, ಆತ್ಮತೃಪ್ತಿ ಮನಸ್ಸನ್ನು ತುಂಬಿತ್ತು. ಅಂತಃಪುರದಲ್ಲಿ ಗೆಳತಿಯರ ಮುಂದೆ ನನ್ನ ಪರಾಕ್ರಮವನ್ನು ಕೊಚ್ಚಿಕೊಳ್ಳುತ್ತಿದ್ದಾಗ ಬಿಡಿಸಿದ ಚಿತ್ರ ಕಲ್ಪನೆಯದು. ಅದೇ ಇಂದು ವಾಸ್ತವವಾಗಿ ಮೈದಳೆಯಿತು. ಹೋರಾಡುತ್ತ, ಯುದ್ಧರಂಗದಲ್ಲಿ ಶವವಾಗಿ ಮಲಗಿದರೆ, ಉತ್ತರ ಕುಮಾರ ಹೇಡಿಯಲ್ಲ, ಸಾವಿಗೆ ಅಂಜದ ಭಟನಾಗಿ ಚರಿತ್ರೆಯಲ್ಲಿ ಸ್ಥಾನ ಪಡೆಯುತ್ತಾನೆ ಎಂಬ ಹೆಮ್ಮೆಯೂ ಇತ್ತು. ಕವಚಾದಿಗಳನ್ನು ಧರಿಸಿ ಹೊರಟು ನಿಂತಾಗ, ಅರ್ಜುನನ ಮೆಚ್ಚುಗೆಯ ನೋಟವೊಂದು ನನ್ನಲ್ಲಿ ಪುಳಕವನ್ನು ಉಂಟುಮಾಡಿತು.
ರಣಭೂಮಿಯಲ್ಲಿ ಜೀವದ ಹಂಗುತೊರೆದು ಅನೇಕ ಸೈನಿಕರನ್ನು ಕೊಂದು ಕೆಡವಿದೆ. ಆಗ ನನಗೆ ಎದುರಾದವನು ಮದ್ರದ ಅರಸ ಶಲ್ಯ ಭೂಪತಿ. ಮಹಾಬಲಿಷ್ಠ ಎಂಬ ಪ್ರಖ್ಯಾತಿ ಅವನಿಗೆ. ಅವನನ್ನು ಕೆಣಕಿ ಹೋರಾಟಕ್ಕೆ ತೊಡಗಿದೆ. ಅಪಾರ ಅನುಭವವಿದ್ದ ಅವನೆದುರು ಹೊಸದಾಗಿ ಯುದ್ಧಕ್ಕೆ ತೊಡಗಿದ ನನ್ನ ಕೈಸಾಗಲಿಲ್ಲ. ಅವನ ಬಾಣಗಳ ಹತಿಗೆ ನಿಶ್ಶಕ್ತನಾಗುತ್ತ ಬರುತ್ತಿದ್ದೆ. ಮೈಯಿಂದ ರಕ್ತದ ಧಾರೆಯೇ ಹರಿಯುತ್ತಿತ್ತು. ಆದರೆ ಒಮ್ಮೆಯೂ ಹಿಂದೆಗೆಯೋಣ ಅನಿಸಲಿಲ್ಲ. ಓಡಿಹೋಗಬೇಕು ಅನಿಸಲಿಲ್ಲ. ನನ್ನ ಅಂತಃಪುರದ ನೆನಪೇ ಬರಲಿಲ್ಲ. ಬಾಯಿಮಾತಿನಲ್ಲಿ ವೀರನೆನಿಸಿದ್ದ ಈ ಉತ್ತರಕುಮಾರ ನಿಜವಾದ ವೀರನೆಂದು ಚರಿತ್ರೆ ಗುರುತಿಸಿದರೆ ಸಾಕು. ಶಲ್ಯನ ಬಾಣ ನನ್ನೆದೆಯನ್ನು ಭೇದಿಸುವಾಗ ಇದೊಂದೇ ಹಂಬಲ ನನ್ನೊಳಗಿದ್ದುದು.