-ಆರತಿ ಪಟ್ರಮೆ
ಹೊಸದಾಗಿ ಕಟ್ಟಿಸಿದಾಗ ಮನೆ ಹೇಗಿದ್ದಿತೋ ಹಾಗೆಯೇ ವರುಷಗಳು ಉರುಳಿದಂತೆ ಇರುವುದಕ್ಕೆ ಸಾಧ್ಯವಿಲ್ಲ, ನಿಜ. ಹಾಗೆಂದು ನಮಗೆ ನಾವೇ ಅಭ್ಯಾಸ ಮಾಡಿಕೊಂಡ ಕೆಲವು ಕ್ರಮಗಳಿಂದ ನಾವೇ ಕಳಚಿಕೊಳ್ಳುವುದೂ ಸಾಧ್ಯವಾಗುವುದಿಲ್ಲ. ಕೆಲವು ಕಡೆ ಅತೀವ ಕಾಳಜಿ, ಇನ್ನು ಕೆಲವೆಡೆ ತೀವ್ರ ನಿರ್ಲಕ್ಷ್ಯ. ಎಲ್ಲರೂ ಎಲ್ಲದರಲ್ಲೂ ಪರಿಪೂರ್ಣವಾಗಿರುವುದು ಸಾಧ್ಯವೇ?
ಥೋ… ಅಡುಗೆಮನೆ ಪೂರ್ತಿ ಸ್ವಚ್ಛವಿಲ್ಲದೆ ಹೋದರೆ ಬೆಳಗ್ಗೆ ಅಡುಗೆಮನೆಗೆ ಬರುವುದಕ್ಕೇ ಮನಸ್ಸಾಗುವುದಿಲ್ಲ ಎಂಬುದು ನನ್ನ ಪ್ರತಿನಿತ್ಯದ ಉವಾಚ. ಇದು ಮಕ್ಕಳಿಗೂ ಎಷ್ಟು ಅಭ್ಯಾಸವಾಗಿದೆಯೆಂದರೆ ಮಕ್ಕಳಲ್ಲಿ ತೊಳೆದ ಪಾತ್ರೆಗಳನ್ನು ಒರೆಸಿ ಜೋಡಿಸುವುದಕ್ಕೆ ಹೇಳಿದಾಗೆಲ್ಲ ಮಗನೂ ಅಕ್ಕನಿಗೆ ಇದೇ ಮಾತು ಹೇಳುವಷ್ಟು! ಅಕ್ಕಾ, ಅಮ್ಮಂಗೆ ಉದಿಯಪ್ಪಗ ತಲೆಕೆಡ್ತಡಾ, ಅಡುಗೆಮನೆ ಹೀಂಗಿದ್ದರೆ! ಅವರಿಬ್ಬರಿಗೂ ನಗು. ಬೆಳಗಿನ ಒತ್ತಡದ ನನ್ನ ಹಾರಾಟ ಕೂಗಾಟದ ಪ್ರಥಮ ಗುರಿಗಳು ಅವರೇ ಆಗುವುದರಿಂದ ಆ ಕೆಲಸವನ್ನು ಒಂದು ಹಂತಕ್ಕೆ ತಾವೇ ಸುಧಾರಿಸುತ್ತಾರೆ ಮಕ್ಕಳು, ಲಾಕ್ಡೌನ್ನಿಂದ ಕಲಿತ ವಿದ್ಯೆ.
ಅಡುಗೆಮನೆ ತನ್ನ ಮೂಲ ಸ್ವರೂಪ ಕಳೆದುಕೊಂಡಿದ್ದರೆ, ಕಟ್ಟೆಯ ತುಂಬಾ ಪಾತ್ರೆ, ಸಿಂಕ್ ಸುತ್ತ ನೀರಹನಿಗಳು, ಅತ್ತಿತ್ತ ತಟ್ಟೆಗಳಲ್ಲಿ ಇಷ್ಟಿಷ್ಟೇ ಉಳಿದುಕೊಂಡ ಸಂಜೆಯ ತಿಂಡಿಯ ಚೂರುಪಾರು, ಸಿಹಿತಿನಿಸಿಗೆ ಸಾಲುಗಟ್ಟಿ ಬಂದಿರುವ ಇರುವೆಗಳ ಸೈನ್ಯ, ಅರ್ಧ ಹೆಚ್ಚಿಟ್ಟ ಹಣ್ಣಿನ ಸುತ್ತ ನೆರೆದಿರುವ ಕೌಳಿನೊಣ… ಅಬ್ಬ್ಬಾ! ತಲೆ ಧಿಮ್ಮೆನ್ನುವುದಕ್ಕೆ ಇನ್ನೇನು ಬೇಕು? ಬಹುತೇಕ ಬೆಳಗಿನ ಧಾವಂತಕ್ಕೆ ಅರೆಬರೆ ಮುಗಿಸಿ ಬಂದಿರುವ ಕೆಲಸಗಳನ್ನೆಲ್ಲ ಒಂದು ಹಂತಕ್ಕೆ ತಲಪಿಸಲು ಸಂಜೆ ಮನೆ ತಲಪಿದ ಮೇಲೆ ಒಂದು ಗಂಟೆ ಹೊತ್ತಾದರೂ ಬೇಕಾಗುತ್ತದೆ; ಅದೇಕೋ ಗೊತ್ತಿಲ್ಲ, ಮನೆಮಂದಿಯೆಲ್ಲ ಕೈಜೋಡಿಸಿದರೂ ಈ ಸ್ವಚ್ಛತಾ ಕಾರ್ಯಕ್ರಮವು ದಣಿವಿನ ಮೂಲ. ಹಾಗೆಂದು ಅಷ್ಟು ಕೆಲಸವಾಗದೆ ವಿಶ್ರಾಂತಿ ತೆಗೆದುಕೊಳ್ಳಲೂ ಮನಸ್ಸು ಒಪ್ಪದು.
ಇದು ನನ್ನೊಬ್ಬಳ ಸಮಸ್ಯೆಯೇ ಎಂದರೆ ಖಂಡಿತಾ ಅಲ್ಲ. ತನ್ನ ಓದಿನ ಕೊಠಡಿಯನ್ನು ಬಹುಮುದ್ದಾಗಿ ಅಲಂಕರಿಸಿರುವ ಮಗಳು ಅಲ್ಲಿ ಒಂದು ಸಣ್ಣ ವಸ್ತು ಬೇರೆಯದು ಇದ್ದರೂ ಸಹಿಸಿಕೊಳ್ಳುವುದಿಲ್ಲ. ಮೊನ್ನೆ ಕಾಲೇಜಿಗೆ ಹೊರಡುವ ಗಡಿಬಿಡಿಯಲ್ಲಿ ನನ್ನ ನೀರಿನ ಬಾಟಲ್ ಹುಡುಕಿ ಪತ್ತೆ ಮಾಡಬೇಕಾದರೆ ಮೂರು ಸಲ ಕೆಳಗಿನಿಂದ ಮೇಲಿನ ಕೊಠಡಿಗೆ ಓಡಾಡಿದೆ. ಅದೇನಾಗಿತ್ತು ಎಂದರೆ ನಾನು ಯಾವುದೋ ಧ್ಯಾನದಲ್ಲಿ ಬಾಟಲನ್ನು ಮಗಳ ಓದಿನ ಮೇಜಿನ ಮೇಲೆ ಇರಿಸಿದ್ದೆ. ನಿರ್ಭಾವುಕಳಾಗಿ ಆ ಬಾಟಲನ್ನು ಅಲ್ಲಿಂದ ಎತ್ತಂಗಡಿ ಮಾಡಿದ್ದಳು ಮಗಳು. ಮೇಜಿನ ಅಡಿಯಲ್ಲಿ ನನ್ನ ಬಡಪಾಯಿ ಬಾಟಲು ಅಳುತ್ತಿತ್ತು. ಸಂಜೆ ಅವಳನ್ನು ಕೇಳಿದರೆ ಬಂದ ಉತ್ತರವಿಷ್ಟೇ; ನನಗೆ ಬರೆಯುವುದಕ್ಕೆ ನಿನ್ನ ಬಾಟಲ್ನಿಂದ ರಗಳೆ ಆಗ್ತಿತ್ತು, ಕೆಳಗಿಟ್ಟೆ, ಹೇಳುವುದು ಮರೆತುಬಿಟ್ಟೆ! ನನ್ನಲ್ಲಿ ಬೇರೆ ಮಾತಿರಲಿಲ್ಲ.
ಇತ್ತ ಒಂದು ದಿನ ಬೆಳ್ಳಂಬೆಳಗ್ಗೆ ಸಂಗಾತಿ ತನ್ನ ಮೇಜನ್ನು ಒತ್ತರೆ ಮಾಡುವ ಕೆಲಸದಲ್ಲಿದ್ದರು. ಹಳೆಯ ಬಿಲ್ಲುಗಳು, ಹಲವು ವೃತ್ತಪತ್ರಿಕೆಗಳು, ಅಪ್ಪ ಓದುವ ಮ್ಯಾಗಜಿನ್ಗಳು, ಷಾಯಿ ಮುಗಿದ ಕಡ್ಡಿಪೆನ್ನುಗಳು, ಒಂದೆರಡು ಪೆನ್ಸಿಲ್, ಸಾಲದ್ದಕ್ಕೆ ಬಾಚಣಿಕೆಗಳು ಎಲ್ಲ ಆ ಮೇಜಿನ ಮೇಲೆ ಆಶ್ರಯ ಪಡೆಯುವುದು ಸಾಮಾನ್ಯ. ಅಷ್ಟೇ ಏಕೆ, ಕೆಲವೊಮ್ಮೆ ಗಡಿಬಿಡಿಯ ಕೆಲಸವಿದ್ದಾಗ ಕಾಲೇಜಿಗೆ ಹಾಕಿದ ಕಿವಿಯೋಲೆಗೂ ನೆಲೆ ಅದೇ ಮೇಜು. ಇನ್ನು ಕನ್ನಡಕ, ವಾಚು, ಮೊಬೈಲು, ಚಾರ್ಜರು, ಪೆನ್ಡ್ರೈವು… ಕೇಳಬೇಕೇ! ಅಂತೂ ಇಂಥ ವಸ್ತುಗಳನ್ನೆಲ್ಲ ಸಿಕ್ಕಸಿಕ್ಕಲ್ಲಿ ಬಿಸಾಡುತ್ತೀ ಎಂದು ಎಷ್ಟು ಸಲ ರೇಗಿಸಿಕೊಂಡರೂ ಮತ್ತೆ ಮತ್ತೆ ಅಲ್ಲೇ ಇಟ್ಟು ಹಾಯಾಗಿ ಮರೆಯುವುದು ನನ್ನ ಅಭ್ಯಾಸ. ಇದೆಲ್ಲ ಇಟ್ಟು ನನ್ನ ಲ್ಯಾಪ್ಟಾಪಿಗೇ ಜಾಗ ಇಲ್ಲ ಎಂದು ಗಂಡ ಅವಲತ್ತುಕೊಳ್ಳುವುದಿದೆ. ನನ್ನ ಗಡಿಬಿಡಿಗೂ ಜೊತೆಗೆ ಸೋಂಬೇರಿತನಕ್ಕೂ ಕೆಲವೊಮ್ಮೆ ಜೊತೆ ಸರಿಹೊಂದುವುದಿದೆಯಲ್ಲ! ಹೇಳಿದಾಗೊಮ್ಮೆ ನಿನ್ನ ಮೇಜಿನ ಸಹವಾಸವೇ ಬೇಡ ಎಂದು ಎಲ್ಲವನ್ನೂ ಫ್ರಿಜ್ಜಿನ ಮೇಲೆ ಏರಿಸಿದಲ್ಲಿಗೆ ಸಮಾಧಾನ. ಒಳಗಿಂದೊಳಗೆ ಒಂದು ಬಗೆಯ ಖುಷಿ. ಅಡುಗೆಮನೆ ಸ್ವರೂಪ ಕಳೆದುಕೊಂಡರೆ ನನಗಾಗುವ ಹತಾಶೆಯ ಅದೇ ಅನುಭವ ಮನೆಯಲ್ಲಿ ಎಲ್ಲರಿಗೂ ತನ್ನದೇ ಆದ ರೀತಿಯಲ್ಲಿ ಆಗುವುದಕ್ಕೆ.
ನಾವು ಚಿಕ್ಕವರಿದ್ದಾಗ ಅಮ್ಮನಿಗೆ ಹೀಗೇ ಕಾಟ ಕೊಡುವುದಿತ್ತು. ಅಮ್ಮನಿಗೆ ತನ್ನ ಹೊಲಿಗೆ ಮಷಿನ್ ಎಂದರೆ ಪಂಚಪ್ರಾಣ. ನಮಗೋ ಕುಳಿತು ಬರೆಯುವುದಕ್ಕೆ ಅಮ್ಮನ ಮರದ ಸ್ಟೂಲ್, ಹೊಲಿಗೆ ಮೇಜು ಸಿಕ್ಕಿದರೆ ಪರಮ ಸಂತೋಷ. ಹಾಗೆಂದು ಅಷ್ಟಕ್ಕೇ ಆದರೆ ಚಿಂತೆಯಿಲ್ಲ. ಮಳೆಹನಿಯ ಭರದಲ್ಲಿ ಅಂಗಳದ ತಂತಿಗಳಲ್ಲಿ ಹಾಕಿದ್ದ ಬಟ್ಟೆಗಳೆಲ್ಲವನ್ನೂ ಸೆಳೆದೊಯ್ದು ತಂದು ಥಟ್ಟನೇ ಒದರುವುದಕ್ಕೆ ಅದೇ ಮೇಜು. ಅಮ್ಮ ತನ್ನ ಇತರೆ ಕೆಲಸಗಳೆಲ್ಲವನ್ನೂ ಮುಗಿಸಿ ಇನ್ನೇನು ಹೊಲಿಯಬೇಕೆಂಬ ಭಾವಲಹರಿಯಲ್ಲಿ ಬಂದರೋ ಮೇಜು ನೋಡಿ ತಲೆತಿರುಗಿ ಬೀಳಬೇಕು. ಎಷ್ಟೋ ಸಲ ಅಮ್ಮ ನಮ್ಮಲ್ಲಿ ಥೋ… ನನ್ನ ಹೊಲಿಯುವ ಮೂಡೇ ಹೋಯ್ತು ಎಂದು ತನ್ನ ಪಾಡಿಗೆ ಹಟ್ಟಿಯ ಹಸುಗಳನ್ನು ಮಾತಾಡಿಸಲು ನಡೆದುಬಿಡುತ್ತಿದ್ದರು.
ಹೊಸದಾಗಿ ಕಟ್ಟಿಸಿದಾಗ ಮನೆ ಹೇಗಿದ್ದಿತೋ ಹಾಗೆಯೇ ವರುಷಗಳು ಉರುಳಿದಂತೆ ಇರುವುದಕ್ಕೆ ಸಾಧ್ಯವಿಲ್ಲ, ನಿಜ. ಹಾಗೆಂದು ನಮಗೆ ನಾವೇ ಅಭ್ಯಾಸ ಮಾಡಿಕೊಂಡ ಕೆಲವು ಕ್ರಮಗಳಿಂದ ನಾವೇ ಕಳಚಿಕೊಳ್ಳುವುದೂ ಸಾಧ್ಯವಾಗುವುದಿಲ್ಲ. ಕೆಲವು ಕಡೆ ಅತೀವ ಕಾಳಜಿ, ಇನ್ನೂ ಕೆಲವೆಡೆ ತೀವ್ರ ನಿರ್ಲಕ್ಷ್ಯ. ಎಲ್ಲರೂ ಎಲ್ಲದರಲ್ಲೂ ಪರಿಪೂರ್ಣವಾಗಿರುವುದು ಸಾಧ್ಯವೇ? ನನ್ನ ಪೆನ್ನು ತೆಗೆದಲ್ಲೇ ಇಡಬೇಕು ಎಂದು ಗೊತ್ತಾಗುವುದಿಲ್ಲ ನಿಮಗೆಲ್ಲ ಎಂದು ಸಣ್ಣಧ್ವನಿಯಲ್ಲಿ ಗುರುಗುಟ್ಟುವ ಗಂಡನಿಗೆ ತಾನು ಅಡುಗೆಮನೆಯಲ್ಲಿ ಸಕ್ಕರೆ, ಚಹಾಪುಡಿಯ ಡಬ್ಬಿ ಉಲ್ಟಾಪಲ್ಟಾ ಮಾಡುವುದು ಅನುಭವಕ್ಕೆ ಬರುವುದು ವಿರಳ! (ಹೇಳಿ ಜಗಳವಾಡಹೊರಟರೆ ಬೆಳ್ಳಂಬೆಳಗ್ಗೆ ಸಮಾಧಾನವಾಗಿ ಕುಡಿಯಬಲ್ಲ ಚಹಾಕ್ಕೆ ಕತ್ತರಿ ಬಿದ್ದರೆ ಎಂಬ ಭಯ!) ನನ್ನ ಬ್ಯಾಗ್ ಯಾಕೆ ಮುಟ್ಟಿದ್ದು ನೀನು? ಇದ್ದ ಹಾಗೆ ಇಡು ಎಂದು ತಮ್ಮನಿಗೆ ಗದರುವ ಅಕ್ಕನಿಗೆ ತಾನು ಅಮ್ಮನ ಬ್ಯಾಗಿಂದ ಮೊಬೈಲ್ ತೆಗೆದವಳು ಬ್ಯಾಗನ್ನು ಸುಸ್ಥಿತಿಯಲ್ಲಿ ಇಟ್ಟಿಲ್ಲ ಎಂಬುದು ಗೊತ್ತೇ ಆಗುವುದಿಲ್ಲ. ಬಹುತೇಕ ಎಲ್ಲವೂ ಹೀಗೆಯೇ.
ತಮ್ಮನಿಗಾದರೋ ಕೊಂಚ ನನ್ನ ಅಭ್ಯಾಸವೇ ಹೆಚ್ಚು ಪುಸ್ತಕ ಪೆನ್ನುಗಳ ವಿಚಾರಕ್ಕೆ ಬಂದರೆ. ಎಲ್ಲಿ ಓದಿದನೋ ಎಲ್ಲಿ ಬರೆದನೋ ಅಲ್ಲೇ ಬಿಟ್ಟು ಎದ್ದುಬರುವುದು ಸಾಮಾನ್ಯ. ಬೆಳಗ್ಗೆ ಶಾಲೆಗೆ ಹೊರಡುವ ಅವಸರದಲ್ಲಿ ನನ್ನ ಪೆನ್ಸಿಲು ಕಾಣ್ತಿಲ್ಲ, ಇರೇಸರ್ ಇಲ್ಲ… ಕನ್ನಡ ಪಾಠ ಪುಸ್ತಕ ಇಲ್ಲ ಎಂದು ಅವನು ಕಣ್ಣೊರೆಸಿಕೊಂಡರೆ ಅಕ್ಕ ಮೌನವಾಗಿ ಹುಡುಕಿಕೊಟ್ಟಾಳು, ಕೆಲವೊಮ್ಮೆ ಇದಕ್ಕೇ ಹೇಳುವುದು, ಒಂದೇ ಕಡೆ ಬರೆಯಬೇಕು ಅಂತ. ರಾತ್ರಿಯೇ ಬ್ಯಾಗ್ ಜೋಡಿಸಿ ಇಡಬೇಕು ಅಂತ ಎಂದು ಸೇರಿಸಿಕೊಂಡಾಳು. ಇವನು ಆಗ ಪ್ರತಿಕ್ರಿಯಿಸುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಸಂಜೆ ನೆನಪಿಸಿಕೊಂಡು, ಅಮ್ಮಾ, ಅಕ್ಕ ನಂಗೆ ಆಗ ಹಾಗೆ ಹೇಳಿದಳಲ್ಲ, ನಿನ್ನೆ ನಾನು ಅವಳಿಗೆ ಕನ್ನಡಕ ತಂದ್ಕೊಟ್ಟಿದ್ದೆ ಗೊತ್ತಾ, ಬಿಸ್ಕೆಟು, ಮಿಕ್ಸರ್ ಎಲ್ಲ ಬೌಲಲ್ಲಿ ಹಾಕಿ ಅವಳು ಟಿವಿ ನೋಡ್ತಾ ಕೂತಿದ್ದಲ್ಲಿಗೆ ಹೋಗಿ ಕೊಟ್ಟಿದ್ದೆ ಗೊತ್ತಾ? ಎಂದು ತಾನು ಮಾಡಿದ ಉಪಕಾರಗಳ ಪಟ್ಟಿ ಒಪ್ಪಿಸಿಯಾನು.
ಅಸ್ತವ್ಯಸ್ತವಾಗಿರುವುದೂ ಕೆಲವೊಮ್ಮೆ ಜೀವಂತಿಕೆಯ ಸಂಕೇತವಂತೆ. ಹಾಗೆಂದು ಅದೇ ಅವ್ಯವಸ್ಥೆ ಕೆಲವೊಮ್ಮೆ ಮನಸ್ಸಿನ ಎಲ್ಲ ಉಲ್ಲಾಸವನ್ನೂ ಕಿತ್ತೆಸೆಯುವುದಿದೆ. ಮನೆಯೊಳಗೆ ಕಟ್ಟಿದ ಜೇಡರ ಬಲೆ ಮನೆಗೆ ಅಶುಭವಂತೆ. ಒಪ್ಪ ಓರಣವಿಲ್ಲದ ಕೊಠಡಿಗಳೂ ನಮ್ಮ ಮನದೊಳಗೆ ನೂರು ಗೊಂದಲಗಳನ್ನು ಸೃಷ್ಟಿಸಿಯಾವು. ಒತ್ತಡಗಳನ್ನು ತುಂಬಿಯಾವು. ಹಾಗೆಂದು ಜೀವಸಂಚಾರವೇ ಇಲ್ಲವೇನೋ ಎನ್ನಿಸುವಂತಹ ಸ್ವಚ್ಛತೆ ಮನೆಯೊಳಗೊಂದು ಖಾಲಿತನವನ್ನೂ ತೋರಿಸಬಹುದು. ಅದಕ್ಕೇ ಇರಬೇಕು, ಅನಾಮಿಕನೋರ್ವ ಹೇಳಿದ್ದು: ಮನೆ ಮಕ್ಕಳ ಸದ್ದು ಗದ್ದಲಗಳ ಜೊತೆ, ಅಲ್ಲಿಲ್ಲಿ ಮುರಿದು ಬಿದ್ದ ಆಟಿಕೆಗಳ ಜತೆ ತನ್ನ ಪಾಡಿಗೆ ಸಂಭ್ರಮಿಸುತ್ತಿರಲಿ ಬಿಡಿ, ಮುಂದೊಂದು ದಿನ ಅವರೆಲ್ಲ ತಮ್ಮ ಓದು ಉದ್ಯೋಗವೆಂದು ದೂರ ಸರಿದ ಮೇಲೆ ಮನೆ ಮೌನವಾಗಿರುವುದು ಇದ್ದೇ ಇದೆ. ಹೌದಲ್ಲ! ಈಗ ನೋಡಿ, ಎಲ್ಲರ ಮನೆ ಹೇಗಿದೆ?!