ಎಲ್ಲ ಜನತೆಗೂ ಒಂದೇ ನಮೂನೆಯ ವರ್ತನೆಯನ್ನು ವಿಧಿಸಲು ಹೊರಟ ಪರಂಪರೆಯ ಅನ್ಯದೇಶ ಸಮಾಜಗಳು ಗಟ್ಟಿತನವನ್ನು ಉಳಿಸಿಕೊಳ್ಳಲಾಗಲಿಲ್ಲ. ಭಾರತದಲ್ಲಿ ಆಚರಣೆಗಳೂ ವಿಶ್ವಾಸಗಳೂ ಬಗೆಬಗೆಯವಾಗಿದ್ದರೂ ಬೇರೆಬೇರೆ ಸಮುದಾಯಗಳ ನಡುವೆ ಸುಸಂಘಟನೆಯನ್ನು ಏರ್ಪಡಿಸುವ ಒಂದು ಅಧಿ-ವ್ಯವಸ್ಥೆ ಇದ್ದಿತು. ಇಲ್ಲಿಯ ಧರ್ಮದೊಳಗಡೆಯೋ ಬಾಹ್ಯಮೂಲಗಳಿಂದಲೋ ಹೊಸ ವಿನ್ಯಾಸಗಳು ಎದುರಾದಾಗ ಇಲ್ಲಿಯ ಸಮಾಜ ತನಗೆ ಬೇಕಾದುದನ್ನು ಸ್ವೀಕರಿಸಿ ಬೇಡದುದನ್ನು ದೂರವಿರಿಸಿತು. ವೈದಿಕಧರ್ಮದ್ದೇ ವಿಸ್ತರಣೆಗಳಾದ ಬೌದ್ಧಮತ ಜೈನಮತಗಳನ್ನೂ ಜೀರ್ಣಿಸಿಕೊಳ್ಳುವುದು ಹಿಂದೂಧರ್ಮಕ್ಕೆ ಕಷ್ಟವಾಗಲಿಲ್ಲ. ಮಾತ್ರವಲ್ಲ, ಆ ಮತಗಳ ಎಷ್ಟೊ ಧೋರಣೆಗಳನ್ನು ಇಲ್ಲಿಯ ಸಮಾಜ ತನ್ನದನ್ನಾಗಿಸಿಕೊಂಡುಬಿಟ್ಟಿತು. ಹೀಗೆ ತೀವ್ರ ಸಂಘರ್ಷ ನಡೆಸುವ ಪ್ರಮೇಯ ಬರಲಿಲ್ಲ. ಇಸ್ಲಾಮೀಯರಿಂದ ದಾಳಿಯಾದಾಗ ಅದರ ಕೆಲವು ಆಚರಣೆಗಳನ್ನು ಇಲ್ಲಿಯ ಸಮಾಜ ಸ್ವೀಕರಿಸಿತೇ ಹೊರತು ಅದರ ಮತ-ರೀತಿಗಳನ್ನಲ್ಲ. ಇಸ್ಲಾಮೀಯರ ಪ್ರಭಾವ ದಿರಿಸು, ಸಂಗೀತ, ವಾಸ್ತುಶಿಲ್ಪ, ಚಿತ್ರಕಲೆ ಮೊದಲಾದವಕ್ಕೆ ಸೀಮಿತವಾಯಿತು, ಆದರೆ ಈ ಪ್ರಭಾವಗಳೂ ಹೆಚ್ಚುಕಾಲ ಉಳಿಯದೆ ಕ್ರಮೇಣ ವೈದಿಕಧಾರೆಯ ವಿನ್ಯಾಸಗಳದೇ ಮೇಲುಗೈಯಾಯಿತು. ಅಲ್ಲದೆ ಇಸ್ಲಾಮೀ ಪ್ರಭಾವ ಉತ್ತರಭಾರತದಲ್ಲಷ್ಟೆ ಇದ್ದಿತು; ದಕ್ಷಿಣಭಾರತದಲ್ಲಿ ಇಲ್ಲವೆಂದೇ ಹೇಳಬಹುದು.
ಅನಂತರದ ಕಾಲದಲ್ಲಿ ಐರೋಪ್ಯರ ಪ್ರಾಬಲ್ಯ ಏರ್ಪಟ್ಟಾಗ ಇಡೀ ದೇಶದಲ್ಲಿ ವೈದಿಕಧರ್ಮ ಕಳೆಗುಂದಿತು.
ಈ ಹಿನ್ನೆಲೆಯಲ್ಲಿ ಎಲ್ಲ ಅವನತಿಗೂ ವರ್ಣಧರ್ಮವೇ ಕಾರಣವೆಂದು ಸತತ ಪ್ರಚಾರ ನಡೆದಿರುವುದರಲ್ಲಿ ಏನು ಅರ್ಥವಿದೆ? ಜಾತಿಯ ಹೆಸರನ್ನು ಹೇಳುವುದು ಅಪರಾಧವೆನಿಸಿರುವುದು ಏಕೆ?
ಇಲ್ಲಿರುವಂತಹ ಜಾತಿಗಳಿಲ್ಲದ ಸಂಪನ್ನ ದೇಶಗಳಲ್ಲೂ ಸಮಾಜವು ಬಲ್ಲಿದ-ದುರ್ಬಲರೆಂದು ವಿಭಜನೆಗೊಂಡಿದೆಯಷ್ಟೆ.
ಸ್ಥಾನಮಾನಗಳಮಟ್ಟಿಗೆ ನಮ್ಮ ದೇಶದಲ್ಲಿ ಭೇದಕಲ್ಪನೆಯೇನಿರಲಿಲ್ಲ. ಇದೆಯೆಂದು ವಾದಕ್ಕಾಗಿ ಇರಿಸಿಕೊಂಡರೂ ಅದಕ್ಕೆ ವರ್ಣಧರ್ಮದ ನಿರಸನವು ಪರಿಹಾರವಾಗಲಾರದು.
ಮನೆಗೆಲಸದವರೂ ಕಾರನ್ನು ಬಳಸುತ್ತಾರೆನ್ನುವ ಅಮೆರಿಕದಲ್ಲಿ ಅಷ್ಟು ಶ್ರೀಮಂತಿಕೆಯಿದ್ದರೂ ಅಲ್ಲಿಯ ಸಮಾಜ ಸಂತೃಪ್ತವಾಗಿದೆಯೆ, ಸಂಘರ್ಷಹೀನವಾಗಿದೆಯೆ? ಸರ್ವಸಮಾನತೆ ಇದೆಯೆನ್ನುವ ಕಮ್ಯೂನಿಸ್ಟ್ ದೇಶಗಳಲ್ಲಿ ಅಧಿಕಾರಿಗಳಿಗೂ ಗುಮಾಸ್ತರಿಗೂ ಸಮಾನ ಸ್ಥಾನಮಾನ ಇದೆಯೆ?
ಬೇರೆಬೇರೆ ಉದ್ಯೋಗಗಳಿರುವುದು ಎಲ್ಲರ ಸುಸ್ಥಿತಿಗೋಸ್ಕರ. ಪರಿಶ್ರಮದಲ್ಲಿ ಒಂದು ಮೇಲು ಇನ್ನೊಂದು ಕೀಳು ಎಂಬ ಭೇದ ಇರಬಾರದು.
ಎಲ್ಲರನ್ನೂ ಸಮಾನರನ್ನಾಗಿಸಹೊರಡುವುದು ವ್ಯರ್ಥಪ್ರಯಾಸ.
ಸ್ವಂತ ಆಚರಣೆಗಳು ಬೇರೆಬೇರೆಯಾಗಿದ್ದರೂ ಎಲ್ಲರೂ ಸಮಾನಹೃದಯರಾಗಿರಲಿ ಎಂದು ಪ್ರತಿಪಾದಿಸಿದ ಧರ್ಮಶಾಸ್ತ್ರಪರಂಪರೆಯ ಪ್ರತಿನಿಧಿಯಾಗಿ ನಾನು ಹೇಳಲಿಚ್ಛಿಸುವುದು ಇಷ್ಟನ್ನೇ: ಎಲ್ಲರೂ ವಿಹಿತ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಲ್ಲಿ ಯಾರಿಗೂ ಆತಂಕಕ್ಕೆ ಕಾರಣವಿರದು.?
[ಪೂಜ್ಯ ಪರಮಾಚಾರ್ಯರ ಪ್ರವಚನದಿಂದ ಸಂಗ್ರಹಿತ]