ಉತ್ಥಾನ ಕಥಾಸ್ಪರ್ಧೆ -೨೦೨೧
ಬಾಲ್ಯದಲ್ಲಿ ತಮ್ಮ ತವರಿನಲ್ಲಿ ಎಷ್ಟೊಂದು ಹರಿಕಥೆಗಳನ್ನು ಕೇಳಿ ಬೆಳೆದವರು ಅವರು. ಆದರೆ ತೀರಾ ಎಳವೆಯಲ್ಲಿ ಗಂಡನನ್ನು ಕಳಕೊಂಡು ಮಡಿಯಾದ ನಂತರ ಮನೆಯಿಂದ ಹೊರಗೆ ಕಾಲಿಟ್ಟವರಲ್ಲ. ಹಳ್ಳಿಕೊಂಪೆಯ ಈ ಊರಿನಲ್ಲಿ ಯಾವೊಂದು ಕಾರ್ಯಕ್ರಮಗಳೂ ನಡೆದಿರಲಿಲ್ಲ. ಈಗಲಾದರೂ ದೇವರು ತನಗೊಂದು ಹರಿಕಥೆ ಕೇಳುವ ಅವಕಾಶವನ್ನು ತಾನಾಗಿ ಒದಗಿಸಿಕೊಟ್ಟ – ಎಂದುಕೊಳ್ಳುತ್ತಲೇ ಅವರು ತಮ್ಮೂರ ದೇವಿಯ ಗುಡಿಯಲ್ಲಿ ಹರಿಕಥೆಯನ್ನು ಮಾಡಿಸುವುದು ಖಚಿತವೆಂದು ದಾಸರಿಗೆ ಮಾತುಕೊಟ್ಟು ವಿಶ್ರಾಂತಿಗೆ ಕಳುಹಿಸಿದರು. ತನ್ನ ಮಾತನ್ನೆಂದೂ ಮಗ ತೆಗೆದುಹಾಕಲಾರನೆಂಬ ನಂಬಿಕೆಯಿಂದ ಕಂಡ ಕಂಡ ಕೆಲಸದವರಿಗೆಲ್ಲ ನಾಳೆಯಿಂದ ತಮ್ಮೂರ ಗುಡಿಯಲ್ಲಿ ಹರಿಕಥೆಯಿದೆಯೆಂದು ಡಂಗೂರವನ್ನೂ ಸಾರಿಬಿಟ್ಟರು.
ಬಿಳಿಯ ಗಡ್ಡ ಬಿಟ್ಟು ದಾಸಯ್ಯನಂತೆ ಕಾಣುವ ಆ ವ್ಯಕ್ತಿ ಹೊಸೂರಿನ ನಿಲ್ದಾಣದಲ್ಲಿ ಬಸ್ನಿಂದ ಇಳಿದಾಗ ಕಾಲೇಜು ಹುಡುಗರು ಕೊಂಚ ಕಸಿವಿಸಿಗೊಂಡರು. ಅವರು ತಮ್ಮ ಹಳ್ಳಿಗೆ ಬರುವವರೆಂದು ಮೊದಲೇ ತಿಳಿದಿದ್ದರೆ ಬಸ್ಸಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಅವರೊಂದಿಗೆ ಜಗಳ ತೆಗೆಯುತ್ತಿರಲಿಲ್ಲ ಎಂದುಕೊಳ್ಳುತ್ತಿರುವಂತೆ ಆ ವ್ಯಕ್ತಿ ಅಲ್ಲೇ ಬಸ್ನಿಲ್ದಾಣದ ಬಳಿಯಿದ್ದ ಗೂಡಂಗಡಿಯಲ್ಲಿ ಸಿಗರೇಟ್ ಖರೀದಿಸಿ ಹೊಗೆಬಿಡುತ್ತಿದ್ದರು. ಪರವಾಗಿಲ್ಲ, ಆಸಾಮಿ ಸ್ವಲ್ಪ ಹರಾಮಿಯೇ ಎಂದು ತಮ್ಮೊಳಗೆ ಮಾತಾಡಿಕೊಂಡ ಹುಡುಗರು ಊರಿಗೆ ಹೊಸಬರಾದ ಅವರ ಪೂರ್ವಾಪರ ತಿಳಿದುಕೊಳ್ಳೋಣವೆಂದು ಅಲ್ಲಿಯೇ ಸುತ್ತತೊಡಗಿದರು.
ಹೊಸೂರಿಗೆ ಸಂಜೆಯ ವೇಳೆಗೆ ಬರುವ ಈ ಬಸ್ಸಿಗೆ ಕಾಲೇಜು ಬಸ್ ಎಂದೇ ಕರೆಯುತ್ತಿದ್ದರು. ಹೊಸೂರಿನಂತಹ ಮಲೆನಾಡಿನ ಕಾಡಿನೊಳಗಿಂದ ಮೊದಲ ಬಾರಿಗೆ ಕಾಲೇಜುಮೆಟ್ಟಿಲು ಹತ್ತಿದ್ದ ಹಳ್ಳಿಯ ಹೈಕಳು ತಾವು ಊರನ್ನು ಸೇರಲು ಒಂದು ಹೊಲ್ಟಿಂಗ್ ಬಸ್ ಬೇಕೇಬೇಕೆಂದು ಕಾಲೇಜಿನ ಯೂನಿಯನ್ ಸೆಕ್ರೆಟರಿಯ ಬೆನ್ನಿಗೆ ಬಿದ್ದು, ವಾರಗಟ್ಟಲೆ ಬಸ್ನಿಲ್ದಾಣದ ಎದುರು ಬಿಸಿಲಿನಲ್ಲಿ ಪ್ರತಿಭಟನೆಗೆ ಕುಳಿತು ಬಸ್ಸೊಂದನ್ನು ತಮ್ಮೂರಿಗೆ ಹಾಕಿಸಿಕೊಂಡಿದ್ದರು. ಸಂಜೆ ಆರರ ವೇಳೆಗೆ ತಾಲೂಕು ಕೇಂದ್ರವಾದ ಹೊನ್ನೂರನ್ನು ಬಿಡುವ ಬಸ್ ಎಂಟರ ಮೊದಲು ಹಳ್ಳಿಯನ್ನು ಸೇರಿ ರಾತ್ರಿ ಅಲ್ಲಿಯೇ ತಂಗುತ್ತಿತ್ತು. ಮಾರನೆಯ ದಿನ ಬೆಳಗ್ಗೆ ಏಳಕ್ಕೆ ಮತ್ತೆ ಕಾಲೇಜಿನ ಹುಡುಗರು-ಹುಡುಗಿಯರ ದಂಡನ್ನು ಹತ್ತಿಸಿಕೊಂಡು ಸವಾರಿ ಹೊರಡುತ್ತಿತ್ತು. ಕಾಲೇಜಿನಲ್ಲಿ ಓದಿ ತಮ್ಮ ಮಕ್ಕಳು ಏನನ್ನಾದರೂ ಸಾಧಿಸುವರೆಂಬ ಬಗ್ಗೆ ಊರಿನವರಿಗೆ ಅಂತಹ ಭರವಸೆಯೇನೂ ಇಲ್ಲದಿದ್ದರೂ, ದಿನವೂ ತಮಗೆ ಬೇಕಾದ ಸಾಮಾನುಗಳನ್ನೆಲ್ಲ ಹೊನ್ನೂರಿನಿಂದ ತಂದುಕೊಡಲು ಒಂದಿಷ್ಟು ಜನರಿದ್ದಾರೆಂಬ ಪ್ರೀತಿಯಿಂದಲೇ ಅವರನ್ನು ಬಹಳ ಮರ್ಯಾದೆಯಿಂದ ಕಾಣುತ್ತಿದ್ದರು. ಅದಕ್ಕೆ ತಕ್ಕಂತೆ ಆ ಮಕ್ಕಳೂ ಕೂಡ ಸಂಜೆ ನಾಲ್ಕಕ್ಕೆ ಕಾಲೇಜು ಮುಗಿದೊಡನೆ ಸೀದಾ ಬಸ್ನಿಲ್ದಾಣಕ್ಕೆ ಬಾರದೆ ಪೇಟೆಯ ದಾರಿ ಹಿಡಿದು ತಮ್ಮೂರಿನವರು ಹೇಳಿದ ಔಷಧ, ಹತಿಯಾರ, ಬೀಜ, ಗೊಬ್ಬರ – ಹೀಗೆ ಎಲ್ಲವನ್ನೂ ತೆಗೆದುಕೊಂಡು ಸಂಜೆಯ ಬಸ್ ಹಿಡಿಯಲು ಧಾವಿಸುತ್ತಿದ್ದರು.
ಬಸ್ಸು ನಿಲ್ದಾಣಕ್ಕೆ ಬರುತ್ತಿದ್ದಂತೆ ಈ ಗಂಡು ಹೈಕಳು ತಮ್ಮ ಕೈಯಲ್ಲಿದ್ದ ಒಂದೇ ಒಂದು ನೋಟ್ಬುಕ್ಕನ್ನು ಬಸ್ಸಿನ ಕಿಟಕಿಯ ಮೂಲಕ ಗಿರ್ರನೆ ತಿರುಗಿಸಿ ಸೀಟಿಗೆ ಎಸೆಯುತ್ತಿದ್ದರು. ಅದು ಹೋಗಿಬಿದ್ದ ಸೀಟು ಅವರಿಗೆ ಎಂದು ಲೆಕ್ಕ. ಮತ್ತೆ ತಮ್ಮತಮ್ಮ ಮೂಟೆಯನ್ನು ಬಸ್ಸಿನ ಮೇಲಕ್ಕೆ ಏರಿಸಿ ಒಳಗೆ ಪ್ರವೇಶಿಸುತ್ತಿದ್ದರು. ಆ ವೇಳೆಯಲ್ಲಿ ತಮ್ಮ ಚೀಲದ ತುಂಬಾ ಪಾಠಪುಸ್ತಕ, ಗೈಡು, ಜರ್ನಲ್ ಎಂದೆಲ್ಲಾ ತುಂಬಿಸಿಕೊಂಡ ಹೆಣ್ಣುಮಕ್ಕಳು ಬಸ್ ಹತ್ತಿ ಸೀಟಿಗಾಗಿ ಹುಡುಕುತ್ತಿದ್ದರು. ಹುಡುಗರು ಬಸ್ಸೇರಿ ಒಂದೊಂದೇ ನೋಟ್ಬುಕ್ಕನ್ನು ತೆಗೆದು ಅವರಿಗೆ ಜಾಗಮಾಡಿಕೊಡುತ್ತಾ ಮಹದುಪಕಾರ ಮಾಡುವಂತೆ ಪೋಸು ಕೊಡುತ್ತಿದ್ದರು. ತಮ್ಮ ಕೈಯಲ್ಲಿರುವ ನೋಟುಪುಸ್ತಕವನ್ನು ಅವರ ಕೈಗೆ ನೀಡಿ, ಹೆಣ್ಮಕ್ಕಳ ತೊಡೆಯ ಮೇಲೆ ಪವಡಿಸಿದ ಅದರ ಭಾಗ್ಯಕ್ಕೆ ಹೊಟ್ಟೆಕಿಚ್ಚುಪಡುತ್ತಾ, ಅವರೆಲ್ಲಿಯಾದರೂ ಕೊನೆಯ ಪುಟದಲ್ಲಿ ಬರೆದ ತಮ್ಮ ಪ್ರೇಮನಿವೇದನೆಯ ಚಿತ್ರಗಳನ್ನು ನೋಡಿಬಿಡುವರೋ ಎಂದು ಪರಿತಪಿಸುತ್ತಾ ನಿರಂತರ ಚಡಪಡಿಕೆಯಲ್ಲಿರುತ್ತಿದ್ದರು. ನಡುನಡುವೆ ತಾವು ತರಗತಿಯಲ್ಲಿಂದು ಎಳೆಯ ಶಿಕ್ಷಕರನ್ನು ಗೋಳು ಹೊಯ್ದುಕೊಂಡದ್ದರ ಬಗ್ಗೆ ಚೂರು ಜೋರುದನಿಯಲ್ಲೇ ಹೇಳುತ್ತಾ, ಡ್ರೈವರಣ್ಣನೊಂದಿಗೆ ಹೊಡಿ ಹಾರನ್ ಎಂದು ತಮಾಷೆ ಮಾಡುತ್ತಾ, ಪಾಸ್ ತೋರಿಸಲು ಕೇಳುವ ಕಂಡಕ್ಟರ್ ಕಡೆಗೆ ಕ್ರೂರ ನೋಟ ಬೀರುತ್ತಾ, ತಮ್ಮ ಸಂಗಡಿಗರು ಅವರವರ ಊರಿನಲ್ಲಿ ಇಳಿಯುತ್ತಿದ್ದಂತೆ ಕಿಟಕಿಯಿಂದ ಇಣುಕಿ ಬಾಯ್ ಎಂದು ಕಿರುಚುತ್ತಾ ಇಡಿಯ ಬಸ್ಸಿಗೆ ಯೌವನದ ಕಳೆಯೇರಿಸುತ್ತಿದ್ದರು. ಹೊನ್ನೂರಿನಲ್ಲಿ ಬಸ್ ಇನ್ನೇನು ಹೊರಡುವುದೆನ್ನುವಾಗ ಅವಸರದಲ್ಲಿ ಓಡಿಬಂದು ಹತ್ತಿದ ಈ ಬಿಳಿಗಡ್ಡದ ಜಂಗಮರು ಸೀಟಿಗಾಗಿ ಹುಡುಕಿ ನಿರಾಶರಾಗಿ ತಮ್ಮ ದೊಡ್ಡ ಜೋಳಿಗೆಯನ್ನು ಹೆಗಲಿಗೇ ನೇತಾಡಿಸಿಕೊಂಡು ನಿಂತೇ ಪ್ರಯಾಣಿಸುತ್ತಿದ್ದರು.
ಅಲ್ಲೆಲ್ಲೋ ಮುರ್ಕಿಯಲ್ಲಿ ಬಸ್ ವಾಲಾಡಿತೋ ಅಥವಾ ಈ ಕಿಡಿಗೇಡಿ ಹುಡುಗರೇ ಅವರ ಜೋಳಿಗೆಯನ್ನು ಚೂರು ದೂಡಿದರೋ ಅಂತೂ ಅವರ ಕೋಪವೆಲ್ಲ ಮಾತಾಗಿ ಹೊರಳಿ, ಇವರೂ ತಮ್ಮ ಹುಡುಗಿಯರೆದುರು ಸುಮ್ಮನಿರಲಾರದೇ ಜೋಳಿಗೆಯನ್ನು ಲಗೇಜಿನೊಂದಿಗಿಡಬೇಕಿತ್ತೆಂದು ವಾದಿಸತೊಡಗಿದರು. ಇನ್ನಿದು ವಿಕೋಪಕ್ಕೆ ತಿರುಗಬಹುದೆಂಬುದನ್ನು ತನ್ನ ಅನುಭವಗಳಿಂದ ತಿಳಿದ ಕಂಡಕ್ಟರ್ ಹೇಗೋ ದಾರಿ ಮಾಡಿಕೊಂಡು ಅವರ ನಡುವೆ ನುಸುಳಿ, ಜಂಗಮಜೋಗಿಯನ್ನು ಸಮಾಧಾನಗೊಳಿಸಿ ತನ್ನ ಸೀಟಿನಲ್ಲಿ ಅವರನ್ನು ಸ್ಥಾವರಗೊಳಿಸಿದ.
ಹಾಗೆ ತಮ್ಮೊಂದಿಗೆ ತಗಾದೆ ತೆಗೆದ ಈ ಅಪರಿಚಿತ ವ್ಯಕ್ತಿ ತಮ್ಮೂರಿಗೆ ಬಂದಿಳಿದಿದ್ದನ್ನು ಕಂಡು, ಊರಿನಲ್ಲಿ ಪರಮಸಾತ್ತ್ವಿಕರೆಂದು ನಾಮಾಂಕಿತರಾದ ಕಾಲೇಜು ಹುಡುಗರು ತಮ್ಮನ್ನೆಲ್ಲಿಯಾದರೂ ಎಲ್ಲರೆದುರು ನಿಂದಿಸಿಬಿಡುವರೇನೋ ಎಂದುಕೊಂಡು ಅವರ ಸುತ್ತಲೇ ಗಿರಕಿ ಹೊಡೆಯತೊಡಗಿದರು. ಆದರೆ ಬಿಳಿಗಡ್ಡದ ಜಂಗಮರು ಹುಡುಗರ ಕಡೆಗೂ ನೋಡದೆ ಗೂಡಂಗಡಿಯವನೊಡನೆ ಊರ ಹೆಗಡೆಯವರ ಮನೆಗೆ ಹೋಗುವ ದಾರಿ ಕೇಳುತ್ತಿದ್ದರು. ಅದೇ ದಾರಿಯಲ್ಲಿ ಮನೆಗೆ ಹೋಗುವ ಹುಡುಗಿಯರಿಬ್ಬರನ್ನು ಕರೆದ ಅವರು ಇವರಿಗೆ ದಾರಿ ತೋರಿಸಲು ಜತೆಮಾಡಿಕೊಟ್ಟರು. ಆ ಹುಡುಗಿಯರೋ ತಾವು ಏನು ಮಾತನಾಡಿದರೂ ಇವರು ತಪ್ಪು ತಿಳಿದಾರೆಂದು ಕೀಲಿಕೊಟ್ಟ ಗೊಂಬೆಯಂತೆ ಅವರ ಮುಂದೆ ಸಾಗತೊಡಗಿದರು. ಬಸ್ಸನ್ನೇರಿ ತಮ್ಮೆಲ್ಲ ಸಾಮಾನುಗಳನ್ನು ಇಳಿಸಿಕೊಂಡ ಹುಡುಗರು ಅವನ್ನು ಮನೆಮನೆಗೆ ತಲಪಿಸಿ, ಅರೆ! ಜೋಗೀ..ಜೋಗೀ… ಜೋಗೀ… ಎಂದು ಸಿನೆಮಾ ಹಾಡು ಹಾಡುತ್ತಾ ತಮ್ಮ ಮನೆಯ ದಾರಿ ಹಿಡಿದರು.
ಊರ ಹೆಗಡೆಯವರ ಮನೆಯೆಂದರೆ ಅದೊಂದು ಅನ್ನಛತ್ರದಂತೆ ಇತ್ತು. ಊರಿಗೆ ಬರುವ ಜ್ಯೋತಿಷಿಗಳು, ಗಿಳಿಶಾಸ್ತ್ರದವರು, ಸಂಭಾವನೆಯ ಭಟ್ಟರು, ಬಸವನಾಡಿಸುವವರು, ಭಜನೆ ಹೇಳುವವರು ಎಲ್ಲರೂ ಅಲ್ಲಿ ಉಂಡು, ಮಲಗಿ, ಎದ್ದು ಹೋಗುತ್ತಿದ್ದರು. ಹೆಗಡೆಯವರ ಹೆಂಡತಿಯ ಆರೋಗ್ಯ ಅಷ್ಟಕ್ಕಷ್ಟೇ ಆದರೂ ಅನ್ನಪೂರ್ಣೆಯೆಂದು ಊರಿಗೇ ಹೆಸರಾದ ಅವರ ಅಮ್ಮ ಆಳುಕಾಳುಗಳ ನೆರವಿನೊಂದಿಗೆ ಬಂದವರ ಹೊಟ್ಟೆ ತುಂಬಿಸುತ್ತಿದ್ದರು. ಇಂದು ಹೊಸದಾಗಿ ತಮ್ಮ ಮನೆಗೆ ಬಂದವರು ತೆಂಕಲದ ಪ್ರಸಿದ್ಧ ಹರಿಕಥೆದಾಸರೆಂದು ತಿಳಿದೊಡನೆ ಅವರ ಖುಷಿಗೆ ಪಾರವೇ ಇರಲಿಲ್ಲ.
ಬಾಲ್ಯದಲ್ಲಿ ತಮ್ಮ ತವರಿನಲ್ಲಿ ಎಷ್ಟೊಂದು ಹರಿಕಥೆಗಳನ್ನು ಕೇಳಿ ಬೆಳೆದವರು ಅವರು. ಆದರೆ ತೀರಾ ಎಳವೆಯಲ್ಲಿ ಗಂಡನನ್ನು ಕಳಕೊಂಡು ಮಡಿಯಾದ ನಂತರ ಮನೆಯಿಂದ ಹೊರಗೆ ಕಾಲಿಟ್ಟವರಲ್ಲ. ಹಳ್ಳಿಕೊಂಪೆಯ ಈ ಊರಿನಲ್ಲಿ ಯಾವೊಂದು ಕಾರ್ಯಕ್ರಮಗಳೂ ನಡೆದಿರಲಿಲ್ಲ. ಈಗಲಾದರೂ ದೇವರು ತನಗೊಂದು ಹರಿಕಥೆ ಕೇಳುವ ಅವಕಾಶವನ್ನು ತಾನಾಗಿ ಒದಗಿಸಿಕೊಟ್ಟ – ಎಂದುಕೊಳ್ಳುತ್ತಲೇ ಅವರು ತಮ್ಮೂರ ದೇವಿಯ ಗುಡಿಯಲ್ಲಿ ಹರಿಕಥೆಯನ್ನು ಮಾಡಿಸುವುದು ಖಚಿತವೆಂದು ದಾಸರಿಗೆ ಮಾತುಕೊಟ್ಟು ವಿಶ್ರಾಂತಿಗೆ ಕಳಿಸಿದರು. ತನ್ನ ಮಾತನ್ನೆಂದೂ ಮಗ ತೆಗೆದುಹಾಕಲಾರನೆಂಬ ನಂಬಿಕೆಯಿಂದ ಕಂಡ ಕಂಡ ಕೆಲಸದವರಿಗೆಲ್ಲ ನಾಳೆಯಿಂದ ತಮ್ಮೂರ ಗುಡಿಯಲ್ಲಿ ಹರಿಕಥೆಯಿದೆಯೆಂದು ಡಂಗೂರವನ್ನೂ ಸಾರಿಬಿಟ್ಟರು. ಅಮ್ಮನಿಂದ ವಿಷಯ ತಿಳಿದ ಹೆಗಡೆಯವರು ಈ ಸುಗ್ಗಿಯ ಕೆಲಸದ ಕಾಲದಲ್ಲಿ ಊರಿನವರೆಲ್ಲ ಕಾರ್ಯಕ್ರಮವನ್ನು ನಡೆಸಲು ಒಪ್ಪುವರೋ ಇಲ್ಲವೋ ಎಂದು ಚಿಂತಿಸುತ್ತ, ಯಾವುದಕ್ಕೂ ನಾಳೆ ಬೀಣಗೌಡರನ್ನು ಕರೆಸಿ ಮಾತನಾಡಿ ನೋಡುವುದೆಂದು ತೀರ್ಮಾನಿಸಿ ಮಲಗಿದರು.
ಊರಿನವರಿಂದ ಮಾದೇವಿಯೆಂದು ಕರೆಸಿಕೊಳ್ಳುತ್ತಿದ್ದ ದೇವಿಯ ಮೂರ್ತಿ ಸಿಕ್ಕಿದ್ದು ಗದ್ದೆನೆಟ್ಟಿ ಮಾಡುತ್ತಿದ್ದ ಗೌಡರ ಮನೆಯ ಹೆಣ್ಣುಗಳಿಗಂತೆ. ಇಡೀ ದಿನ ಬೇಸಾಯ, ಸೊಪ್ಪು, ಸೌದೆ ಎಂದು ಅಲೆಯುವ ತಮಗೆ ಪೂಜೆಗೆಲ್ಲ ಸಮಯವೆಲ್ಲಿ ಎಂದು ಅದನ್ನು ಪೂಜಾರಿಗಳಿಗೆ ನೀಡಿದರಂತೆ. ಅವರು ಅದನ್ನು ಗುಡಿಯಲ್ಲಿಟ್ಟು ಪೂಜಿಸುತ್ತಿದ್ದರಾದರೂ ಹಣಕಾಸಿನ ನಿರ್ವಹಣೆಯೆಲ್ಲವೂ ಗೌಡರ ಕುಟುಂಬಕ್ಕೇ ಸೇರಿತ್ತು. ಹಾಗೆಂದು ಅದೇನೂ ಲಕ್ಷಗಟ್ಟಲೆಯ ಬಾಬ್ತಿನ ವಿಷಯವಲ್ಲ. ಪ್ರತಿವರ್ಷವೂ ಊರಿನ ಎಲ್ಲ ಮನೆಗಳಿಗೂ ತಲೆಗೊಂದಿಷ್ಟು ಎಂದು ವರ್ಗಣಿ ಹಾಕುತ್ತಿದ್ದರು. ಊರೊಟ್ಟಿನ ಮೀಟಿಂಗಿನಲ್ಲಿ ಯಾರಾರದು ಎಷ್ಟೆಂದು ಹಣ ನಿಗದಿಯಾಗುತ್ತಿತ್ತು.
ಆ ಬಂಡವಾಳದಿಂದ ವರ್ಷದಲ್ಲಿ ಏನಾದರೊಂದು ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಸಾಮಾನ್ಯವಾಗಿ ಭಜನೆಯ ಕಾರ್ಯಕ್ರಮ ನಡೆಯುತ್ತಿದ್ದುದರಿಂದ ಮತ್ತು ಹೊರಗಿನ ಭಜನಾತಂಡಗಳನ್ನು ಪ್ರತಿಸಲ ಕರೆಸಲು ಕಷ್ಟವಾದುದರಿಂದ ಹೆಗಡೆಯವರ ಮಕ್ಕಳಿಬ್ಬರು ತಬಲಾ, ಹಾರ್ಮೋನಿಯಂ ಖರೀದಿಸಿ ತಕ್ಕಮಟ್ಟಿಗೆ ನುಡಿಸಲು ಕಲಿತಿದ್ದರು. ಜೊತೆಯಲ್ಲಿ ಹೊನ್ನೂರಿನ ಕಾಲೇಜಿನಲ್ಲಿ ಸಂಗೀತ ಕಲಿಯುತ್ತಿರುವ ಕಾಲೇಜು ಹುಡುಗರಿಗೆ ಭಜನೆಯಲ್ಲಿ ತಾಲೀಮು ಮಾಡಲು ಅದೊಂದು ಅವಕಾಶವಾಗುತ್ತಿತ್ತು. ಹೀಗಿರುವಾಗ ಹುಡುಗರಿಗೂ ಊರಿನ ರೀತಿನೀತಿ ತಿಳಿದಿರಲೆಂದು ಈ ಸಲದ ಗ್ರಾಮಜನರ ಮೀಟಿಂಗಿಗೆ ಅವರನ್ನೂ ಕರೆಯಲಾಗಿತ್ತು. ಕಳೆದ ವರ್ಷ ಖೋತಾ ಬಜೆಟ್ ಆದ್ದರಿಂದ ಈ ಸಲ ವರ್ಗಣಿಯನ್ನು ಸ್ವಲ್ಪ ಹೆಚ್ಚಿಸುವ ಮಾತನ್ನು ಗೌಡರು ತೆಗೆದಿದ್ದೇ ಈ ಹುಡುಗರು, ಅದ್ಯಾಕೆ ತಲೆಬಾಲಕ್ಕೆ ಮಾತ್ರ ಹಣ? ಪುಕ್ಕಕ್ಕೂ ಹಣ ಹಾಕೋಣ. ಕೋಳಿ ಸಾಕುವವರಿಗೆ ದೇವಿಯ ರಕ್ಷಣೆ ಬೇಡವೆ? ಎಂದು ಏನೇನೋ ವಿತಂಡವಾದ ಮಂಡಿಸಿದರು. ಮನುಷ್ಯರ ತಲೆಕಾಯುವುದು, ದನಕರುಗಳನ್ನು ಖಾಯಿಲೆಗಳಿಂದ ಕಾಯುವುದು ಮಾತ್ರವೇ ತಲೆತಲಾಂತರದಿಂದ ದೇವಿ ಮಾಡುತ್ತಿರುವ ಅನುಗ್ರಹವೆಂದು ಅವರ ಬಾಯಿ ಮುಚ್ಚಿಸಿದ ಮೇಲೂ, ವರ್ಗಣಿ ಹೆಚ್ಚು ಮಾಡುವುದಾದರೆ ಪಕ್ಕದೂರಿನಲ್ಲಿ ಮಾಡುವಂತೆ ತಮ್ಮ ಗುಡಿಯಲ್ಲಿಯೂ ಏನಾದರೊಂದು ವಿಶೇಷ ಕಾರ್ಯಕ್ರಮವನ್ನು ನಡೆಸೋಣವೆಂದು ಹಠಹಿಡಿದು ಕುಳಿತರು. ಪಕ್ಕದೂರಿನ ಗುಡಿಯಲ್ಲಿ ಅದೆಂಥದ್ದೋ ಭಯಂಕರವಾದ ಆರ್ಕೆಸ್ಟ್ರಾ ಎಂಬ ಕಾರ್ಯಕ್ರಮ ನಡೆಯುವುದೆಂಬುದನ್ನು ಹಿರಿಯರೆಲ್ಲ ಕೇಳಿದ್ದರೇ ಹೊರತು ನೋಡಿರಲಿಲ್ಲ. ಅಂತೂ ಇವರನ್ನೆಲ್ಲ ಸೇರಿಸಿದ್ದೇ ತಪ್ಪಾಯಿತೆಂದುಕೊಳ್ಳುತ್ತ ಹಿರಿಯರು ಅವರ ಮಾತಿಗೆ ಹೂಂಗುಟ್ಟಿದ್ದರು.
ಮರುದಿನ ಹೆಗಡೆಯವರು ಬೀಣಗೌಡರಿಗೆ ಕೀರ್ತನೆದಾಸರು ಬಂದಿರುವ ವಿಷಯವನ್ನು ತಿಳಿಸಿ, ಅವರ ಕಾರ್ಯಕ್ರಮವನ್ನು ನಡೆಸುವುದರಿಂದ ಊರ ಹುಡುಗರ ಬಾಯಿ ಮುಚ್ಚಿಸುವ ಅವಕಾಶವೊಂದು ತಮಗೆ ಒದಗಿ ಬಂದಿದೆ ಎಂಬುದನ್ನೂ ಸೂಕ್ಷ್ಮವಾಗಿ ತಿಳಿಸಿದರು. ಅದೇನೋ ಯೋಚನೆಯಲ್ಲಿರುವಂತೆ ಕಂಡ ಗೌಡರನ್ನುದ್ದೇಶಿಸಿ, ನೋಡಿ ಗೌಡ್ರೇ, ಕೊನೆಯ ತೀರ್ಮಾನ ಯಾವತ್ತಿದ್ರೂ ನಿಮ್ಮದೇ. ಸುಗ್ಗಿಯ ಕೆಲಸದ ಗಡಿಬಿಡಿಯಲ್ಲಿ ಈ ಕಾರ್ಯಕ್ರಮಗಳೆಲ್ಲ ಕಷ್ಟವೆಂದು ನನಗೂ ಗೊತ್ತು. ಆದರೆ ಹರಿಕಥೆಯ ವಿಷಯದಲ್ಲಿ ಮಾತ್ರ ಇವರು ಅಸಾಮಾನ್ಯರು ಎಂದರು.
ಸ್ವಲ್ಪ ಮುಂಗೋಪಿ ಅನ್ನೋದನ್ನ ಬಿಟ್ರೆ ಹಣಕಾಸಿನಲ್ಲೆಲ್ಲ ತಕರಾರು ಮಾಡೋರಲ್ಲ ಅಂತ ನನ್ನ ಬಾವ ಯಾವತ್ತೋ ಹೇಳ್ತಿದ್ದದ್ದು ನೆನಪಿದೆ. ಮತ್ತೆ ನನ್ನ ಅಮ್ಮನೂ ಈ ಪ್ರಾಯದಲ್ಲಿ ಹರಿಕಥೆ ಕೇಳಬೇಕೆಂಬ ಆಸೆಯಲ್ಲಿದ್ದಾರೆ. ಕರೆದರೆ ಬಾರದವರು ದೇವಿಯ ಅನುಗ್ರಹವೋ ಎಂಬಂತೆ ಮನೆಬಾಗಿಲಿಗೆ ಬಂದಿದ್ದಾರೆ. ನೀವು ಹೂಂ ಅಂದ್ರೆ ಮುಂದಿನ ತಯಾರಿ. ಇಲ್ಲಾ ಅಂದರೆ ಅಮ್ಮನ ಸಮಾಧಾನಕ್ಕೆ ನಾಳೆ ನಮ್ಮನೆಯ ಅಂಗಳದಲ್ಲೊಂದು ಕಥೆ ಹೇಳಿಸಿ ಅವರನ್ನು ಕಳಿಸುತ್ತೇನೆ ಎಂದರು. ಆಗ ಬೀಣಗೌಡರು ಸಂಕೋಚದಿಂದ ಅದು ಹಾಂಗಲ್ರಾ, ಗದ್ದಿ ಕೆಲಸ ಅದನ್ನೆಲ್ಲ ಹೆಂಗಾದ್ರೂ ನಡೆಸಬಹುದು. ಆದರೆ ಗೇರುಬೀಜದ ಸೀಸನ್ ನೋಡಿ. ಹಾಂಗಾಗಿ ಒಂಚೂರು ಸಾರಾಯಿ ಇಳಿಸುವಾ ಅಂತ ಕೊಳೆಮಡಿಕೆ ಮಾಡಿಟ್ಟಿದ್ದೆ. ಇಂದು ನಾಳೆ ಅಂತ ದಿನಾ ಕಳೀತಾ ಹೋಯ್ತು. ನಾಳೆಯಿಂದ ನಾಕುದಿನಾ ಭಟ್ಟಿ ಇಳಿಸದಿದ್ರೆ ಅದೆಂಥಕ್ಕೂ ಬರೂದಿಲ್ರಾ. ಬರೂದು ಮಳಿಗಾಲ. ಔಷಧಕ್ಕಾದ್ರೂ ಬೇಕಲ್ರಾ. ಅದೇ ಒಂದು ಯೋಚನೆ… ಎಂದು ರಾಗವೆಳೆದರು. ಅದಕ್ಕೆ ಹೆಗಡೆಯವರು ನಗುತ್ತಾ, ಅಯ್ಯಾ, ಅಷ್ಟಕ್ಕೆ ನೀವು ಇಷ್ಟು ಯೋಚನೆ ಮಾಡುದಾ? ಅದ್ಕೆ ಯವಸ್ಥೆ ಮಾಡುವ. ನಮ್ಮ ರಾಮ ಇಲ್ವಾ? ಭಾರೀ ನಂಬುಗೆಯ ಜನ. ಮತ್ತೆ ಅದರಲ್ಲೆಲ್ಲ ಸೀದಾಸಾಫ್. ಅವನ ಹತ್ರ ಹೇಳ್ತೆ ಗೌಡ್ರೆ. ನೀವು ಏನೇನೂ ಯೋಚನೆ ಮಾಡೋದು ಬ್ಯಾಡ ಎಂದು ಬೀಣಗೌಡರ ಚಿಂತೆಯನ್ನು ಕಳೆದು ಹರಿಕಥೆಯ ಪ್ರಸಂಗಕ್ಕೆ ದಾರಿ ಸುಗಮಗೊಳಿಸಿದರು. ರಾಮನ ಹೆಸರು ಹೇಳಿದ್ದೇ ಗೌಡರು ನಿರಾಳರಾದರು. ಇನ್ನುಳಿದದ್ದು ಹರಿಕಥಾ ಪ್ರಸಂಗದ ಆಯ್ಕೆ ಮಾತ್ರ. ಅದರ ಬಗ್ಗೆ ಗೌಡರನ್ನು ಕೇಳಿದಾಗ, ಅದೆಲ್ಲ ನಂಗೆಲ್ಲಿ ಗೊತ್ತದೆರಾ? ಆಸೆ ಪಟ್ಟೋರು ನಿಮ್ಮ ಅಮ್ಮ. ಅವರನ್ನೇ ಕೇಳಿಬಿಡುವಾ ಎಂದು ಅಡುಗೆ ಮನೆಯಲ್ಲಿರುವ ಅಮ್ಮನನ್ನು ಕರೆದುಬಿಟ್ಟರು. ಅಮ್ಮನ ಆಣತಿಯಂತೆ ರಾಮಾಯಣದ ಕಥೆಯನ್ನೇ ಹೇಳಿಸುವುದೆಂದು ನಿಗದಿಗೊಂಡು ಅದನ್ನು ದಾಸರಿಗೂ ತಿಳಿಸಿಯಾಯಿತು.
ಕಾರ್ಯಕ್ರಮ ನಿಗದಿಯಾಗುತ್ತಿದ್ದಂತೆ ದಾಸರು ಹೆಗಡೆಯವರ ಮಕ್ಕಳಿಬ್ಬರನ್ನು ಕೂಡಿಸಿಕೊಂಡು ತಮ್ಮ ಹಾಡುಗಳಿಗೆ ಪಕ್ಕವಾದ್ಯ ನೀಡಲು ತಾಲೀಮು ಪ್ರಾರಂಭಿಸಿದರು. ಆರ್ಥಿಕವಾಗಿ ಅಷ್ಟೇನೂ ಸ್ಥಿತಿವಂತರಲ್ಲದ ದಾಸರು ತಮ್ಮೊಂದಿಗೆ ಪಕ್ಕವಾದ್ಯದ ಪಟಾಲಂಅನ್ನು ಕಟ್ಟಿಕೊಂಡು ತಿರುಗುವವರಾಗಿರಲಿಲ್ಲ. ಹೆಗಡೆಯವರ ಮಕ್ಕಳು ತಮಗೆ ಸಿಕ್ಕ ಈ ಅಪರೂಪದ ಅವಕಾಶಕ್ಕೆ ಹೆಮ್ಮೆಪಡುತ್ತಾ, ಕಂಚಿನ ಕಂಠದ ಅವರ ದನಿಗೆ ತಮ್ಮ ಪಿಯಾನುಪೆಟ್ಟಿ ಮತ್ತು ತಬಲಾದ ನಾದವನ್ನು ಜೋಡಿಸುತ್ತಾ, ಎಲ್ಲಿಯಾದರೂ ಶ್ರುತಿ ತಪ್ಪಿತೇನೋ, ತಾಳ ಸೇರುತ್ತಿಲ್ಲವೇನೋ ಎಂದು ಅನುಮಾನಿಸುತ್ತಲೇ ಆಗಾಗ ದಾಸರ ಮೊಗವನ್ನು ನೋಡುತ್ತಿದ್ದರು. ಈ ದೃಶ್ಯವನ್ನು ನೋಡುತ್ತಾ ನಿಂತ ಹೆಗಡೆಯವರ ಅಮ್ಮ ತನ್ನ ಮೊಮ್ಮಕ್ಕಳು ವಿದ್ಯೆಯನ್ನು ಕಲಿತದ್ದು ಇಂದು ಸಾರ್ಥಕವಾಯಿತು ಎಂಬ ಭಾವದಿಂದ ಕಣ್ಣಂಚಿನ ನೀರನ್ನು ಒರೆಸಿಕೊಳ್ಳುತ್ತಿದ್ದರು. ಅಂಗಳದಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ದಿನದಂತೆ ತಮ್ಮ ಮಾತುಗಳನ್ನು ಬಯಲಿಗಿಡದೇ ಮನೆಯ ಸುತ್ತ ಹರಡಿದ ಹೊಸದೊಂದು ಶಬ್ದಲೋಕದಲ್ಲಿ ಮೈಮರೆತು ತಮ್ಮ ನಡಿಗೆಯ ವೇಗವನ್ನು ಅದರೊಂದಿಗೆ ಅವರಿಗರಿವಿಲ್ಲದಂತೆ ಶ್ರುತಿಗೊಳಿಸತೊಡಗಿದರು.
ಹರಿಕಥೆಯ ಸುದ್ದಿ ತಿಳಿದ ಕಾಲೇಜು ಹುಡುಗರು ಯಾಕೋ ತಮ್ಮ ಆರ್ಕೆಸ್ಟ್ರಾ ಕನಸು ಈ ಜಂಗಮನ ಜೋಳಿಗೆಯನ್ನು ಸೇರುವುದು ಖಚಿತವೆಂದುಕೊಂಡು ಹರಿಕಥೆಯನ್ನು ಬಹಿಷ್ಕರಿಸುವ ಅವಸರದ ತೀರ್ಮಾನಕ್ಕೆ ಬಂದಿದ್ದರು. ಆದರೆ ಅದಾಗಲೇ ಅವರ ಓರಗೆಯ ಹುಡುಗಿಯರು ಸಂಜೆಯ ಕಾರ್ಯಕ್ರಮಕ್ಕೆ ಮುಡಿಯಲು ಕನಕಾಂಬರವನ್ನು ಬಿಡಿಸುತ್ತಿದ್ದುದನ್ನು ಕಂಡಾಗ ಅದ್ಯಾಕೋ ತಮ್ಮ ತೀರ್ಮಾನ ಸರಿಯಲ್ಲ ಅನಿಸಿಬಿಟ್ಟಿತು. ಹೇಗಾದರೂ ಮಾಡಿ ಅವರನ್ನೂ ಕಾರ್ಯಕ್ರಮದಿಂದ ದೂರವಿಡಲು ಯತ್ನಿಸಿದರಾದರೂ ದಿನವೂ ಯೂನಿಫಾರಂನಲ್ಲಿ ಕಾಲೇಜಿಗೆ ಹೋಗಿ ಬೇಸತ್ತಿದ್ದ ಕನ್ಯಾಮಣಿಗಳು ತಮ್ಮ ಬಣ್ಣಬಣ್ಣದ ಬಟ್ಟೆಯನ್ನು ಧರಿಸಲು ಸಿಕ್ಕಿದ ಸಣ್ಣ ಅವಕಾಶವನ್ನು ಬಿಡಲು ಸುತರಾಂ ಸಿದ್ಧವಿರಲಿಲ್ಲ. ಅವರ ಉಡುಗೆಯ ಬಣ್ಣಗಳು ಹುಡುಗರ ಕಣ್ಣಿನೊಳಗೂ ಮಿನುಗಿ, ಬಹಿಷ್ಕಾರವನ್ನು ಬದಿಗಿಟ್ಟು ತಾವೂ ಹೊಸಬಟ್ಟೆಗಳನ್ನು ಹೊರತೆಗೆದರು.
ಇತ್ತ ಸಂಜೆಯಾಗುತ್ತಿದ್ದಂತೆ ಹೆಗಡೆಯವರ ಆಣತಿಯಂತೆ ರಾಮ ಸಾರಾಯಿ ಭಟ್ಟಿಯಿಳಿಸಲು ತಯಾರಿ ನಡೆಸತೊಡಗಿದ. ಹೊಳೆಯ ದಂಡೆಯಲ್ಲಿ ಹೂಡಿದ ದೊಡ್ಡ ಒಲೆಯ ಮೇಲೆ ಕೊಳೆಕಾಯಿಸುವ ಹಂಡೆಯನ್ನಿಟ್ಟು ಅದರ ಬಾಯಿಯನ್ನು ತಳಒಡೆದ ಮಣ್ಣಿನ ಗಡಿಗೆಯಿಂದ ಮುಚ್ಚಿ ಸುತ್ತಲೂ ಉಗಿಹೋಗದಂತೆ ಹಸಿಮಣ್ಣಿನ ಅಂಟನ್ನು ಮೆತ್ತಿದ. ಕೊಡದ ಬಾಯಿಂದ ಹೊರಟ ಕೊಳವೆಯನ್ನು ಹೊಳೆಯಲ್ಲಿ ತಣ್ಣಗೆ ಮುಳುಗಿಸಿರುವ ಇನ್ನೊಂದು ಪಾತ್ರೆಗೆ ಜೋಡಿಸಿದ. ಹಂಡೆಯಿಂದ ಆವಿಯಾಗುವ ಹಬೆಯು ಹೊಳೆಯ ನೀರಿನಿಂದ ತಂಪಾಗಿ ಸುರೆಯಾಗಿ ಶೇಖರವಾಗುತ್ತಿತ್ತು. ಇವೆಲ್ಲವೂ ಅಬಕಾರಿ ಅಧಿಕಾರಿಗಳ ಕಣ್ಣಿಗೆ ಬೀಳದಂತೆ ಗುಪ್ತವಾಗಿ ನಡೆಯುತ್ತಿದ್ದರೂ ಅದು ಹೇಗೋ ಇದರ ಬಗ್ಗೆ ತಿಳಿದುಕೊಂಡ ಹತ್ತಾರು ಜನರು ಅಲ್ಲಿಯೇ ಸುತ್ತ ಠಳಾಯಿಸುತ್ತ, ಒಲೆಗೆ ಬೆಂಕಿ ಮಾಡುವವರಂತೆ, ಕಟ್ಟಿಗೆ ಕಡಿಯುವವರಂತೆ ನಟಿಸುತ್ತ ತಾವೂ ಅದರ ಭಾಗವಾಗತೊಡಗಿದರು. ಕೊಳೆಯು ಇನ್ನೇನು ಕುದಿಯುತ್ತದೆನ್ನುವಾಗ ಗುಡಿಗೆ ಹೋಗುವ ತಯಾರಿಯೊಂದಿಗೆ ಮಖಮಲ್ಲು ಧೋತಿಯುಟ್ಟ ಗೌಡರು ಪರಿಶೀಲನೆಗೆಂದು ಅಲ್ಲಿಗೆ ಬಂದರು. ಎಲ್ಲ ತಯಾರಿಗಳೂ ಸುಸೂತ್ರವಾಗಿ ನಡೆಯುತ್ತಿರುವ ಬಗ್ಗೆ ಮೆಚ್ಚುಗೆ ಸೂಚಿಸಿದ ಅವರು ಅಲ್ಲಿ ಸುಮ್ಮನೆ ಸೇರಿದವರನ್ನು ಹೀಗೆ ಗುಂಪುಸೇರಿ ಅಬಕಾರಿಯವರ ಗಮನ ಸೆಳೆಯುವ ಬದಲು ಗುಡಿಗೆ ಹೋಗಿ ಹರಿಕಥೆ ಕೇಳಿ ಪುಣ್ಯಸಂಪಾದನೆ ಮಾಡಿರೆಂದು ಗದರಿಸಿ ಅಲ್ಲಿಂದ ಕಳಿಸಿದರು. ಭಟ್ಟಿ ಇಳಿಸಿದ ಬಿಸಿಸಾರಾಯಿಯನ್ನು ಗಂಟಲಿಗಿಳಿಸುವ ಸುಖದಿಂದ ವಂಚಿತರಾದ ಬಗ್ಗೆ ಗೊಣಗುತ್ತಲೇ ಅವರೆಲ್ಲ ಮನಸ್ಸಿಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಗೌಡರನ್ನು ಹಿಂಬಾಲಿಸಿದರು.
ಊರ ಗುಡಿಯನ್ನು ಗೌಡರ ಆಣತಿಯಂತೆ ಬೆಳಗ್ಗೆಯೇ ಗುಡಿಸಿ, ಸಾರಿಸಿ ಓರಣಗೊಳಿಸಿಲಾಗಿತ್ತು. ಸಂಜೆ ಝಗಮಗಿಸುವ ವಿದ್ಯುತ್ತಿನ ಬೆಳಕಿನಲ್ಲಿ ಹೆಗಡೆಯವರ ಸ್ವಾಗತ ಮತ್ತು ಗೌಡರ ಮಾಲಾರ್ಪಣೆಯೊಂದಿಗೆ ಹರಿದಾಸರ ಕಥೆ ಆರಂಭಗೊಂಡಿತು. ಅಂದು ಬಸ್ಸಿನಲ್ಲಿ ಮುಂಗೋಪಿಯಂತೆ ಕಂಡಿದ್ದ ದಾಸರು ಇಂದು ಕಥೆ ಹೇಳಲು ನಿಂತೊಡನೆ ಪ್ರಾಜ್ಞರಂತೆ ಕಾಣತೊಡಗಿ ಕಾಲೇಜು ಹೈಕಳು ಮುಖಮುಖ ನೋಡಿಕೊಂಡರು. ಕಥಾಪ್ರಾರಂಭಕ್ಕೂ ಮೊದಲು ಲಘುಹಾಸ್ಯ ಧಾಟಿಯಲ್ಲಿ ಉಪಕಥೆಯನ್ನು ಹೇಳುವುದು ರೂಢಿ. ಉಪಕಥೆಯನ್ನು ಹೇಳುತ್ತಲೇ ದಾಸರು ಕಾಲೇಜು ಹುಡುಗರಿಗೆ ಅಲ್ಲಲ್ಲಿ ಹಗುರಾಗಿ ಚುಚ್ಚಿದರೆ, ಇವೆಲ್ಲವನ್ನೂ ಬಲ್ಲ ಹುಡುಗಿಯರು ಹುಡುಗರ ಮುಖವನ್ನು ಕದ್ದುನೋಡಿ ನಕ್ಕರು. ತಮ್ಮ ಅಮ್ಮಂದಿರ ಸೆರಗಿನಡಿಯಲ್ಲಿ ಬಚ್ಚಿಟ್ಟು ಕುಸುಕುಸು ಮಾಡುವ ಮಕ್ಕಳನ್ನು ದಾಸರು ಕೆಂಗಣ್ಣು ಬಿಟ್ಟು ಹೆದರಿಸಿ ಸುಮ್ಮನಾಗಿಸಿದರೆ, ಹಗಲಿನ ದುಡಿಮೆಯಿಂದ ಅಲ್ಲೇ ಕಣ್ಮುಚ್ಚುವ ಮಂದಿಯನ್ನು ತಮ್ಮ ಕೈಯ ಖಂಜಿರದ ಶಬ್ದದಿಂದಲೇ ಎಚ್ಚರಿಸಿದರು. ಹೀಗೆ ಮೊದಲ ದಿನವೇ ಪ್ರೇಕ್ಷಕವರ್ಗವನ್ನು ತನ್ನೆಡೆಗೆ ಸೆಳೆಯುವ ಸರ್ವ ಪ್ರಯತ್ನಗಳನ್ನೂ ಮಾಡುತ್ತಾ ರಾಮಾಯಣವೆಂಬ ಮಹಾ ಆಖ್ಯಾನವನ್ನು ಆರಂಭಿಸಿದರು. ದಶರಥನ ಮಕ್ಕಳಿಲ್ಲದ ಕೊರಗಿನೊಂದಿಗೆ ಆರಂಭವಾದ ಕಥೆ ರಾಮಲಕ್ಷ್ಮಣಾದಿಗಳ ಬಾಲಲೀಲೆಗಳೊಂದಿಗೆ ಕೊನೆಗೊಂಡಿತು. ದಾಸರು ಕಥೆ ಮುಗಿಸುವ ಮೊದಲು ಹರಿಕಥಾಶ್ರವಣದಿಂದ ಕೇಳುಗರಿಗೆ ಲಭಿಸುವ ಪುಣ್ಯಸಂಪಾದನೆಯ ಬಗ್ಗೆ ಹೇಳಲು ಮರೆಯಲಿಲ್ಲ.
ಪೂಜೆ ಮುಗಿದು ಮಂಗಳಾರತಿಯಾಗಿ ಎಲ್ಲರೂ ಮನೆಗೆ ತಲಪುವ ದಾರಿಯಲ್ಲಿ ಹೆಂಗಸರು ತಮ್ಮ ಖಾತೆಗೆ ಜಮೆಯಾದ ಪುಣ್ಯದ ಬಗ್ಗೆ ಚರ್ಚಿಸಿದರು. ಮತ್ತದೇ ಭಟ್ಟಿಸಾರಾಯಿಯ ಮಾಯೆ ಸೆಳೆದು ಕೆಲವು ಗಂಡಸರು ಹೊಳೆದಂಡೆಯ ದಾರಿ ಹಿಡಿದರು. ಸಾರಾಯಿಯನ್ನೆಲ್ಲ ಆರಿಸಿ ಬಾಟಲಿಗಳಲ್ಲಿ ತುಂಬಿ ರಾಮ ಅದಾಗಲೇ ಸೀಲು ಮಾಡಿದ್ದರಿಂದ ತಮಗಿನ್ನು ತೀರ್ಥ ದೊರಕದೆಂಬುದನ್ನು ಮನಗಂಡು, ತಾವು ಕೇಳಿದ ಹರಿಕಥೆಯ ವರ್ಣನೆಯನ್ನು ಇನ್ನಷ್ಟು ಹಿಗ್ಗಿಸಿ ಹೇಳಿದರು. ಗುಡಿಯಲ್ಲಿ ಅಂತಹ ಪುಣ್ಯಕಾರ್ಯ ನಡೆಯುವಾಗ ಈ ರೀತಿಯ ಹೀನ ಕೆಲಸದಲ್ಲಿ ಮುಳುಗಿಹೋದ ರಾಮನ ದುರ್ಗತಿಯ ಬಗ್ಗೆ ಕನಿಕರಿಸಿದರು. ರಾಮ ಅವರಾರಿಗೂ ಏನೊಂದೂ ಉತ್ತರಿಸದೆ ಒಲೆಯ ಬೆಂಕಿ ಹೊರಗೆಲ್ಲೂ ಹರಡದಂತೆ ಪೂರ್ಣವಾಗಿ ನಂದಿಸುವ ಕೆಲಸದಲ್ಲಿ ಮುಳುಗಿದ. ಮನೆಗೆ ಬಂದು ಊಟಮಾಡುವಾಗ ಹೆಂಡತಿ ಮಂಜಿಯೂ ಅವರೆಲ್ಲ ಹೇಳಿದ್ದನ್ನೇ ಹೇಳತೊಡಗಿದ್ದರಿಂದ ಕಿರಿಕಿರಿಯೆನಿಸಿ, ತಂಗಳೂಟ ಸರಿಯಿಲ್ಲವೆಂದು ತಗಾದೆ ತೆಗೆದು ಅರ್ಧ ಊಟ ಮಾಡಿ ಮುಸುಕೆಳೆದು ಮಲಗಿಬಿಟ್ಟ.
ಎಂದಿನಂತೆ ಹೆಗಡೆಯವರ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡುವಾಗ ಬಡಿಸುತ್ತಿದ್ದ ಹೆಗಡೆಯವರ ಅಮ್ಮನಲ್ಲಿ ರಾಮ ತನ್ನ ಮನದಾಳವನ್ನು ತೋಡಿಕೊಂಡ. ಅಲ್ರಾ ಅಮ್ಮಾ, ಈ ಹೆಗಡೀರ ಚಡಂಗ ನೋಡಿ. ಊರೋರೆಲ್ಲ ಕಥಿ ಕೇಳಿ ಪುಣ್ಯ ಮಾಡೂದು. ನಾ ಮಾತ್ರ ಕಳ್ಳನ ಹಾಂಗೆ ಹೊಳಿ ದಂಡೀಲಿ ಸಾರಾಯಿ ಇಳಿಸೂದು. ನಂಗೂ ಒಂಚೂರು ಪುಣ್ಯ ಬ್ಯಾಡ್ವಾ? ಎಂದ. ಅದಕ್ಕೆ ಅಮ್ಮ ಬೊಚ್ಚು ಬಾಯಗಲಿಸಿ, ಹೌದಲ್ಲೋ ರಾಮಾ, ಆ ಗೌಡರಿಗೆ ಈಗ್ಲೇ ಸಾರಾಯಿ ಕೊಳಿ ಕೊಳೀಬೇಕಾ? ನಿಂಗೊಂದು ಭಂಗಾ ಆಯ್ತು. ಎಂದವರೇ ಮತ್ತೇನೋ ನೆನಪಾದವರಂತೆ, ಇಗಾ ರಾಮಾ, ಒಂದು ಕೆಲಸಾ ಮಾಡು. ಹೆಂಗೂ ಊಟಮಾಡಿ ಒಂದ ಗಳಿಗಿ ಇಲ್ಲೇ ಮಲಗ್ತ್ಯಲೋ. ನಾ ನಿಂಗೆ ದಿನಾ ಆ ದಾಸರು ಹೇಳಿದ ಕಥೇನಾ ಹೇಳ್ತೆ. ದಾಸರೇ ನಿನ್ನೆ ಹೇಳಿದ್ರು. ಯಾರ ಬಾಯಲ್ಲಾದರೂ ಸರಿಯೆ, ಕಥೀ ಕೇಳಿದವರಿಗೆ ಪುಣ್ಯ ಖಾತ್ರಿ ಅಂತಾ. ರಾಮಾಯಣದ ಕಥಿ ಅಂದ್ರೆ ಬೆಲ್ಲದಾಂಗೆ ಸಿಹಿ ಮಾರಾಯ. ಕೇಳ್ತಿದ್ರೆ ಇನ್ನೂ ಕೇಳ್ವ ಅಂಬಂಗಿತ್ತು. ನೀನು ಹೋಗೀ ಹೋಗೀ ರಾಮ ಅಂತ ಹೆಸರಿಟ್ಕಂಡಿದ್ದೆ, ಕಥಿ ಕೇಳದಿದ್ರೆ ಹೇಂಗೆ? ಹೋಗಿ ಹೆಗಡೇರ ಹತ್ರ ಕವಳ ತೆಕಂಡು ಹಾಕಿಬಾ. ನಾನೂ ಒಳಗಿನ ಕೆಲಸ ಎಲ್ಲ ಮುಗಿಸಿ ಬತ್ತೆ. ನಿನ್ನೆ ಹೇಳಿದ ಕಥೆ ಹೇಳ್ತೆ ಎಂದು ಉತ್ಸಾಹದಿಂದ ಒಳಗೆ ಹೋದರು.
ಮಕ್ಕಳಿಲ್ಲದ ದಶರಥ ಪುತ್ರಕಾಮೇಷ್ಟಿ ಯಜ್ಞ ನಡೆಸಿ, ಯಜ್ಞಪುರುಷನಿಂದ ಪಾಯಸದ ಫಲ ಪಡೆದು ತನ್ನ ಮಡದಿಯರಿಗೆ ನೀಡಿದ್ದು, ಅದರ ಪ್ರಭಾವದಿಂದ ರಾಮಲಕ್ಷ್ಮಣಾದಿ ಮಕ್ಕಳು ಜನಿಸಿದ್ದು, ಅವರ ಬಾಲಲೀಲೆಗಳು – ಎಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ಅಮ್ಮ ರಾಮನಿಗೆ ವಿವರಿಸಿದರು. ಅಂದು ಸಂಜೆ ರಾಮನಿಗೆ ಹೊಳೆದಂಡೆಯ ಒಲೆಯಲ್ಲಿ ಉರಿವ ಉರಿ ಯಜ್ಞದ ಜ್ವಾಲೆಯಂತೆ ಕಾಣಿಸಿ, ಅದನ್ನೇ ದಿಟ್ಟಿಸುತ್ತಾ ಅವ್ವನ ಮಾತುಗಳನ್ನು ನೆನಪಿಸಿಕೊಂಡ. ಮದುವ್ಯಾಗಿ ಹತ್ವರ್ಸ ಆದರೂ ಬಸುರು ಹತ್ತಲಿಲ್ಲ ಕಾಣು. ಮತ್ತೆ ಗುಡ್ಡದ ಮೇಲಿನ ಸಿದ್ದರಾಮನ ಗುಡಿಗೆ ಹೋಗಿ ಅಮಾಸೆ ಸೇವೆಗಂತ ಕೂತೇಬುಟ್ಟೆ. ನಡುರಾತ್ರೀಲಿ ಸಿದ್ದಯ್ಯ ಬಂದು ನನ್ನ ಮೈದಡವಿ ಹರಸಿದ. ಮತ್ತೆ ನೀ ಹುಟ್ಟಿದ್ದು. ಹಂಗಾಗಿ ನಿನ್ನೆಸ್ರು ರಾಮ. ತಾನೂ ರಾಮನಂತೆ ದೇವರ ಪ್ರಸಾದದಿಂದಲೇ ಹುಟ್ಟಿದವನೆಂಬ ಹಮ್ಮು ಮೈತುಂಬ ತುಂಬಿ ಬೆಂಕಿಯ ಕೆನ್ನಾಲಿಗೆಗೆ ಇನ್ನಷ್ಟು ಸೌದೆಯ ಸಮಿದ ದೂಡಿದ.
ಹೀಗೆ ಇತ್ತ ಗುಡಿಯಲ್ಲಿ ರಾಮಾಯಣವೂ, ಹೊಳೆದಂಡೆಯಲ್ಲಿ ಸಾರಾಯಿಯ ತಯಾರಿಯೂ ನಡೆಯುತ್ತ ಮಧ್ಯಾಹ್ನದ ಅಮ್ಮನ ಕಥಾಸೃಷ್ಟಿಯೂ ಮುಂದುವರಿಯುತ್ತಲೇ ಹೋಯಿತು. ಅಂದು ವಾಲಿ ಮೋಕ್ಷದ ಕಥೆಯನ್ನು ಹೇಳುತ್ತಾ ಅಮ್ಮ, ಏನು ಮಾಡೋದು ಹೇಳು ರಾಮ, ರಾಮಕಥೆಯಲ್ಲಿ ವಾಲಿ ಗುಹೆಯೊಳಗೆ ಹೋದರೂ ಮರಳಿ ಬಂದ. ನಮ್ಮನೆಯಲ್ಲಿ ಹಾಗಾಗಲೇ ಇಲ್ಲ ನೋಡು ಎಂದು ನಿಡುಸುಯ್ದರು. ಅರೆ! ಇವರಾಕೆ ಹೀಗೆನ್ನುವರು ಎಂದುಕೊಳ್ಳುತ್ತಲೇ, ಅದ್ಯಾಕಮ್ಮ ಹಾಗಂತ್ರಿ? ವಾಲಿ ಬರಲಿಲ್ಲ ಅಂದ್ರೆ? ಎನ್ನುತ್ತಿದ್ದಂತೆ ಅಮ್ಮ ಏನನ್ನೋ ಧ್ಯಾನಿಸುತ್ತಾ, ಅದೆಲ್ಲ ಹಳೆಕಥೆ, ಬಿಡು ರಾಮ. ಹುಟ್ಟೋವಾಗ ಅಣ್ಣ, ತಮ್ಮ ಅಂಬೂದೆಲ್ಲ. ಬೆಳೆಯೋವಾಗ ದಾಯಾದಿಗಳೇ ಆಗಿಬಿಡೋದು ಲೋಕನಿಯಮ. ಸುತ್ತ ಹದಿನಾರಳ್ಳಿಗೆ ಒಳ್ಳೆಯ ಈಜುಗಾರರು ಅಂತ ಹೆಸರು ಪಡೆದೋರು ನಿನ್ನ ಹಳೆಯ ಒಡಿದೀರು. ದಿನಾ ಬೆಳಗಾದ್ರೆ ಎತ್ತಿನ ಜತೆಗೆ ಹೊಳೆಯಲ್ಲಿ ಈಜಿ ಹೋಗಿ ಹೊಳೆಯಾಚೆಯ ಗದ್ದೆಯಲ್ಲಿ ಬಿಸಿಲು ಕಣ್ಬಿಡುವ ಮೊದಲೇ ನೇಗಿಲಿನ ಗೆರೆ ಎಳೆಯೋರು. ಅಂತವರು ಹೊಳೆಯ ಸೆಳವಿಗೆ ಸಿಕ್ಕೋದುಂಟಾ? ಎಲ್ಲಾ ವಿಧಿಯ ಬರಹ. ಸುಗ್ರೀವ ಕಲ್ಲಿಟ್ಟದ್ದೇ ಖರೆ ಎನ್ನುತ್ತಾ ಇನ್ನೊಂದು ಮಾತನಾಡೆನೆಂಬಂತೆ ತಮ್ಮ ಮಲಗುವ ಕೋಣೆಗೆ ನಡೆದರು.
ತನ್ನ ಹಳೆಯ ಒಡೆದೀರು ಹೊಳೆಯಲ್ಲಿ ಬಳಿದು ಹೋಗಿದ್ದರು ಎಂಬುದಷ್ಟೇ ರಾಮನಿಗೆ ತಿಳಿದಿತ್ತು. ಇದೀಗ ಹೊಳೆಯಾಚೆಯ ಸಣ್ಣೊಡಿದೀರ ಮನೆಗೆ ಅಮ್ಮ ಎಂದಿಗೂ ಹೋಗದಿರುವುದರ ಹಿಂದಿನ ಸತ್ಯವೂ ಕಣ್ಣೆದುರು ಬಂದು ಅಂತಹಾ ದುಃಖದ ಕಾಲದಲ್ಲಿಯೂ ಮಂಡೆ ಬೋಳಿಸಿಕೊಂಡು, ಸೊಂಟಕ್ಕೆ ಸೆರಗು ಬಿಗಿದು ತಮ್ಮ ಪಾಲಿನ ಆಸ್ತಿಯನ್ನು ಸರ್ಪದಂತೆ ಕಾಯ್ದ ಅಮ್ಮನ ಚುರುಕುತನದ ಬಗ್ಗೆ ಊರಿನವರು ಹೇಳುತ್ತಿದ್ದುದೆಲ್ಲ ನೆನಪಾಗತೊಡಗಿತು. ಯಾಕೋ ಈ ರಾಮಾಯಣವೇ ಬೇಡ ಎನಿಸಿ ಮಲಗದೇ ಎದ್ದು ಕೆಲಸಕ್ಕೆ ನಡೆದ.
ಐದು ದಿನಗಳು ಕಳೆದು ಗೌಡರ ಮನೆಯ ಕೊಳೆಯೆಲ್ಲಾ ಮುಗಿದು ಇನ್ನೇನು ಸಾರಾಯಿ ಭಟ್ಟಿಯನ್ನು ತೆರವುಗೊಳಿಸಬೇಕೆನ್ನುವಾಗ ಊರಿನ ಮರಿಪುಡಾರಿಗಳೆಲ್ಲ ಠಳಾಯಿಸಿ ತಮ್ಮದೊಂದಿಷ್ಟು ಕೊಳೆಯನ್ನು ನಾಳೆ ಭಟ್ಟಿ ಇಳಿಸಿಕೊಡು ಎಂದು ರಾಮನನ್ನು ಒತ್ತಾಯಿಸಿದರು. ಇರಲಿ, ಇವರದೊಂದು ಬಿಟ್ಟಿ ಚಾಕರಿ – ಎಂದುಕೊಂಡ ರಾಮ ಗೌಡರಿಗೊಂದು ಮಾತು ತಿಳಿಸುವಂತೆ ಅವರಿಗೆ ಹೇಳಿ ತಯಾರಿ ಮಾಡತೊಡಗಿದ. ಎಲ್ಲರ ಮನೆಯ ಕೊಳೆಯನ್ನು ಒಟ್ಟಿಗೆ ಕಾಯಿಸುತ್ತಾ, ಸಾರಾಯಿ ಹಂಚಿಕೊಳ್ಳುವಾಗ ಜಗಳವೊಂದು ಆಗದಿದ್ದರೆ ಸಾಕು ಎಂದುಕೊಳ್ಳುತ್ತಲೇ ಬೆಂಕಿ ಜೋರುಮಾಡತೊಡಗಿದ. ಎಲ್ಲರೂ ಸೇರಿರುವುದರಿಂದ ದಿನದ ಮೌನ ಅಂದು ಇರಲಿಲ್ಲ. ಎಲ್ಲ ಲೋಕಾಭಿರಾಮ ಮಾತನಾಡುತ್ತ, ಮಾತುಕತೆಯ ನಡುವೆ ತಮ್ಮ ಹೆಂಡಿರು, ಅವರ ಅಪ್ಪ ಅಮ್ಮಂದಿರನ್ನೆಲ್ಲ ತರುತ್ತ ಮನಸಿಗೆ ಬಂದಂತೆ ಅವರನ್ನೆಲ್ಲ ತೆಗಳುತ್ತಿದ್ದರೂ ರಾಮ ಮಾತ್ರ ತುಟಿಪಿಟಕ್ಕೆನ್ನದೇ ತನ್ನ ಕೆಲಸದೊಳಗೇ ತಲ್ಲೀನನಾಗಿದ್ದ. ಇವನ ಮೌನ ಅವರನ್ನೆಲ್ಲ ಕೆಣಕಿ ಇವನನ್ನೇ ಲೇವಡಿ ಮಾಡತೊಡಗಿದರು, ರಾಮನ ಹೆಂಡತಿ ಮಂಜಿ ಬಿಡು, ಕೈ ತೊಳೆದು ಮುಟ್ಟಬೇಕಾದ ಚೆಲುವೆ. ಮಾತಾಡಿದರೆಲ್ಲಿ ಬಿಟ್ಟುಹೋಗ್ತಾಳೇನೋ ಅಂತ ರಾಮ ಮೌನವ್ರತ ಹಿಡಿದವ್ನೆ ಎಂದರೂ ರಾಮ ಮಾತ್ರ ಲಕ್ಷ್ಯವೇ ಕೊಡದೇ ಕೆಲಸಮಾಡುತ್ತಿದ್ದ.
ಸಾರಾಯಿಯ ಕೊಡದ ಮುಚ್ಚಳ ತೆರೆಯುತ್ತಿದ್ದಂತೆ ಸಾಗವಾನಿಯ ಎಲೆಯೊಂದಿಗೆ ಸುತ್ತ ನೆರೆದ ಅವರೆಲ್ಲರೂ ಅದಾಗಲೇ ತಂದಿದ್ದ ಉಪ್ಪಿನಕಾಯಿಯೊಂದಿಗೆ ಬಿಸಿಸಾರಾಯಿಯನ್ನೂ ಹೊಟ್ಟೆಗಿಳಿಸತೊಡಗಿದರು. ಜೊತೆಯಲ್ಲಿ ರಾಮನಿಗೂ ಒತ್ತಾಯಿಸಿ ಒಂದಿಷ್ಟು ಕುಡಿಸಿದರು. ಬಿಟ್ಟರೆ ಇವರು ಇಡಿಯ ಕೊಡವನ್ನೇ ಇಂದು ಮುಗಿಸಿಬಿಟ್ಟಾರು, ಮತ್ತಿವರನ್ನು ತಾನೇ ಹೊತ್ತುಕೊಂಡು ಹೋಗಿ ಮನೆಮುಟ್ಟಿಸಬೇಕಾದೀತೆಂದು ಎಚ್ಚೆತ್ತುಕೊಂಡ ರಾಮ ಸಾರಾಯಿಯನ್ನು ಅವರೊಡ್ಡಿದ ಎಲೆಯೊಳಗೆ ಹಾಕದೇ ಬಾಟಲಿಗಳಲ್ಲಿ ತುಂಬಿಸತೊಡಗಿದ. ಅದಾಗಲೇ ಏರಿದ ಸಾರಾಯಿಯ ನಶೆ ಅವರ ನಾಲಿಗೆಗೂ ತಲೆಗೂ ನಡುವಿರುವ ವಿವೇಕದ ಎಳೆಯನ್ನು ಕಡಿದುಹಾಕಿತು. ಸಾರಾಯಿಯನ್ನು ತಮಗೆ ಕೊಡದ ರಾಮನ ಮೇಲೆ ತಮ್ಮ ಮಾತಿನ ಬಾಣವನ್ನು ಬಿಡತೊಡಗಿದರು. ನೀ ರಾಮ ಖರೆ. ನಿನ್ನ ಹೆಂಡತಿ ಸೀತೆಯೇನೊ? ಅವಳೆಂತ ಸೀತೆ, ಅವಳು ಮಂಜಿ. ಚಂದದ ಮಂಜಿ.. ಎಂದೊಬ್ಬ ಹೇಳತೊಡಗಿದರೆ ಇನ್ನೊಬ್ಬ, ಮಂಜಿ ಚಂದ ಅಂದರೆ ಚಂದ, ಎಷ್ಟು ಚಂದ ಅಂದರೆ ಅಷ್ಟು ಚಂದ ಎಂದು ಅವಳ ರೂಪವನ್ನು ವರ್ಣಿಸತೊಡಗಿದ.
ರಾಮನ ಸಿಟ್ಟು ನೆತ್ತಿಗೇರಿತಾದರೂ ತುಟಿಕಚ್ಚಿ ಸೈರಿಸಿ ಸಾರಾಯಿಯ ಬಾಟಲಿಗಳನ್ನು ಮುಚ್ಚತೊಡಗಿದ. ಇವನ ಪ್ರತಿಕ್ರಿಯೆ ಬಾರದಿರುವುದನ್ನು ಕಂಡ ಇನ್ನೊಬ್ಬ ಕೈಬಾಯಿ ತಿರುಗಿಸುತ್ತಾ, ಇವನ ಹೆಣ್ತಿ ಚಂದ. ಗೌಡರಿಗೂ ರಾಮ ಬೇಕು, ಹೆಗಡೇರಿಗೂ ರಾಮ ಬೇಕು. ಮಂಜಿ ಬೇಕು ಎಂದು ಅಸ್ಪಷ್ಟವಾಗಿ ತೊದಲತೊಡಗಿದ. ರಾಮನ ಸಹನೆಯ ಕಟ್ಟೆಯೊಡೆದು ಅಬ್ಬರಿಸಿದ, ಬಾಯಿ ಮುಚ್ರೋ ಕಳ್ಳನನಮಕ್ಕಳ್ರಾ. ಪಾಪ ಅಂತ ಸಾರಾಯಿ ಕಾಯಿಸಿಕೊಟ್ರೆ ಬಾಯಿಗೆ ಬಂದದ್ದ ಮಾತಾಡ್ತಾರೆ. ಇಗೊಳ್ಳಿ ನಿಮ್ಮ ಸಾರಾಯಿ ಬುಂಡೆ. ಕುಡಕಂಡು ಇಲ್ಲೇ ಸಾಯ್ರಿ ಎನ್ನುತ್ತಾ ಸಾರಾಯಿಯ ಬಾಟಲಿಗಳನ್ನು ಅಲ್ಲಿಯೇ ಎಸೆದು ಮನೆಯ ಹಾದಿ ಹಿಡಿದ.
ಮಾರನೆಯ ದಿನ ಸಾರಾಯಿ ಕಾಯಿಸುವ ಕೆಲಸವಿಲ್ಲದ್ದರಿಂದ ಸಂಜೆಯಾಗುತ್ತಿದ್ದಂತೆ ರಾಮ ಗುಡಿಯ ದಾರಿ ಹಿಡಿದ. ಗುಡಿಯಲ್ಲಿ ಅಂದು ದಿನಕ್ಕಿಂತ ಹೆಚ್ಚು ಜನ ಸೇರಿದ್ದರು. ಎಲ್ಲರ ಬಾಯಲ್ಲೂ ದಾಸರ ಕೀರ್ತನೆಯ ಗುಣಗಾನವೇ. ಎಲ್ಲಕ್ಕಿಂತ ಆಶ್ಚರ್ಯವೆಂದರೆ ಈ ಏಳು ದಿನಗಳಲ್ಲಿ ಕಾಲೇಜು ಹುಡುಗರೊಂದಿಗೆ ದಾಸರಿಗೆ ಬೆಳೆದ ಸ್ನೇಹ. ಹರಿಕಥೆಯ ಎರಡನೆಯ ದಿನವೇ ಹೆಗಡೆಯವರ ಮಗನಿಗೆ ಮೈಬಿಸಿಯಾಗಿ ಪಿಯಾನುಪೆಟ್ಟಿ ನುಡಿಸಲು ಅಸಾಧ್ಯವಾದಾಗ ಅಲ್ಲೇ ಇರುವ ರವಿ ತಾನು ಅದನ್ನು ಬಾರಿಸಲು ಒಪ್ಪಿಕೊಂಡಿದ್ದ. ಅವನೊಂದಿಗೆ ಅವನ ಸ್ನೇಹಿತರ ಬಳಗವೂ ಅಭ್ಯಾಸಕ್ಕೆಂದು ಹೆಗಡೆಯವರ ಮನೆಯಲ್ಲಿ ಸೇರಿತ್ತು.
ಹೀಗೆ ಅವರ ನಡುವೆ ಸಂಗೀತವೆಂಬ ಕಲೆಯ ಬೆಸುಗೆಯಾಗಿ, ಅದರ ವಿವಿಧ ಸಾಧ್ಯತೆಗಳ ಬಗ್ಗೆ ಚರ್ಚಿಸುತ್ತಲೇ ಹೊಸದೊಂದು ಆವರಣ ಸೃಷ್ಟಿಯಾಗಿಬಿಟ್ಟಿತು. ಅಷ್ಟೇ ಅಲ್ಲ, ಮುಂದಿನ ತಿಂಗಳು ಪಕ್ಕದ ಊರಿನಲ್ಲಿ ನಡೆಯುವ ಹರಿಕಥಾ ಸಪ್ತಾಹಕ್ಕೆ ರವಿ ಮತ್ತು ಪಿಂಟೋವಿನದೇ ಪಕ್ಕವಾದ್ಯವೆಂದು ನಿಗದಿಯೂ ಆಗಿಹೋಯ್ತು. ಹಾಗೆ ಕೊನೆಯ ದಿನ ನಡೆದ ಸನ್ಮಾನ ಸಮಾರಂಭದಲ್ಲಿ ದಾಸರ ಬಗ್ಗೆ ರವಿ ಬಹಳ ಭಾವುಕನಾಗಿ ಭಾಷಣವನ್ನೂ ಮಾಡಿದ. ಮೊದಲ ದಿನದ ಬಸ್ಸಿನ ಘಟನೆಯನ್ನು ಹೇಳಿ ಕ್ಷಮೆಯಾಚಿಸುವುದನ್ನೂ ಮರೆಯಲಿಲ್ಲ. ಅವನ ಮಾತಿನ ಮಾರ್ದವತೆಗೆ ಸೋತ ಹರಿದಾಸರು ಕಣ್ಣಂಚನ್ನು ತಮ್ಮ ಚಿನ್ನದ ಬಣ್ಣದ ಶಾಲಿನಿಂದ ಒರೆಸಿಕೊಂಡರು. ಮುಂದೆ ಹರಿವಾಣದಲ್ಲಿ ಸಂಭಾವನೆಯನ್ನಿಟ್ಟು ಅವರಿಗೆ ಅರ್ಪಿಸಿ, ಶಾಲುಹೊದೆಸಿ, ದೇವಿಯ ಚಿತ್ರವನ್ನು ಕಾಣಿಕೆಯಾಗಿ ನೀಡಿ ಸನ್ಮಾನ ನಡೆಯಿತಲ್ಲದೇ ಪ್ರತಿವರ್ಷವೂ ಅವರು ತಮ್ಮೂರಿಗೆ ಬರಬೇಕೆಂಬ ಕಟ್ಟೊತ್ತಾಯದ ಆಹ್ವಾನವನ್ನೂ ನೀಡಲಾಯಿತು. ಮುಂದೆ ರಾಮಾಯಣದ ಕೊನೆಯ ಆಖ್ಯಾನವಾಗಿ ಅಗ್ನಿಪರೀಕ್ಷೆಯ ಕಥಾನಕವನ್ನು ದಾಸರು ಹೇಳತೊಡಗಿದರು. ಅಂತಹಾ ಪಾತಿವ್ರತೆ ಸೀತೆಯೂ ತನ್ನ ಪಾತಿವ್ರತ್ಯದ ಸಾಬೀತಿಗಾಗಿ ಬೆಂಕಿಹಾಯಬೇಕಾಯಿತೆಂದು ದಾಸರು ಬಣ್ಣಿಸುವಾಗ ಎಲ್ಲ ಹೆಂಗಸರ ಕಣ್ಣಂಚು ಒದ್ದೆಯಾಯಿತು.
ಹಗಲಿಡೀ ಹೆಗಡೆಯವರ ಮನೆಯ ತೋಟದ ಕೆಲಸ, ರಾತ್ರಿ ಸಾರಾಯಿ ಭಟ್ಟಿಯ ಕಾವು, ನಿನ್ನೆ ನಡೆದ ಸಣ್ಣ ಜಗಳ ಹೀಗೆ ಎಲ್ಲವೂ ಸೇರಿ ರಾಮನಿಗೆ ಸಣ್ಣಗೆ ತಲೆನೋವು ಪ್ರಾರಂಭವಾಯಿತು. ಪೂಜೆಗೆ ನಿಲ್ಲದೆ ಮನೆಗೆ ಹೋಗಿ ಮಲಗೋಣವೆಂದು ಅಲ್ಲಿಂದ ಹೊರಟ. ಹೋಗುವ ದಾರಿಯಲ್ಲಿ ಸಾರಾಯಿ ಭಟ್ಟಿಯಿಳಿಸುವ ಜಾಗದಲ್ಲೇನಾದರೂ ವಸ್ತುಗಳನ್ನು ಮರೆತಿರುವೆನೋ ನೋಡಿಯೇ ಹೋಗೋಣವೆಂದು ಆ ಕಡೆಗೆ ಹೊರಟ. ಕುಡಿದ ಅಮಲಿನಲ್ಲಿ ಯಾರೋ ತುಂಬಿದ ಸಾರಾಯಿ ಬುಂಡೆಯನ್ನು ಅಲ್ಲೇ ಪೊದೆಗಳೆಡೆಯಲ್ಲಿ ಬೀಳಿಸಿ ಹೋಗಿದ್ದರು. ಮರಳಿ ಕೊಡೋಣವೆಂದರೆ ಯಾರದ್ದೆಂದು ಗುರುತು ಹತ್ತಲಿಲ್ಲ. ಸಾರಾಯಿ ಬುಂಡೆಯನ್ನು ಹಿಡಿದು ಒಂದರೆಗಳಿಗೆ ನಿಂತ ರಾಮ ತಲೆಭಾರ ಕಳೆದೀತೆಂದು ಒಂದಿಷ್ಟನ್ನು ತನ್ನ ಗಂಟಲಿಗೆ ಸುರುವಿಕೊಂಡ. ನಶೆಯೇರುವ ಮೊದಲೇ ಮನೆಸೇರುವ ಧಾವಂತದಿಂದ ಸರಸರನೆ ಹೆಜ್ಜೆಹಾಕತೊಡಗಿದ.
ರಾಮ ಮನೆಸೇರಿದರೂ ಮಂಜಿಯಿನ್ನೂ ಗುಡಿಯಿಂದ ಬಂದಿರಲಿಲ್ಲ. ಮನೆಯಲ್ಲಿದ್ದ ಮಕ್ಕಳು ಹಸಿವೆಯಿಂದ ಅಮ್ಮನನ್ನೇ ಕಾಯುತ್ತಿದ್ದವು. ನೀರೊಲೆಯಲ್ಲಿ ನೀರು ಕಾದಿರುವುದರಿಂದ ಮಿಂದು ಬರುವಂತೆ ಮಕ್ಕಳಿಗೆ ಹೇಳಿ ಊಟಕ್ಕೆ ತಾಟುಗಳನ್ನು ಇಡತೊಡಗಿದ. ಮೀಯಲು ಹೊರಟ ಮಕ್ಕಳು ಅದೇಕೋ ಅಂಗಿಯ ಜಗಳ ಶುರುಮಾಡಿಕೊಂಡಿದ್ದರು. ವರ್ಷಕ್ಕೊಂದರಂತೆ ಜತೆಜತೆಯಲ್ಲಿ ಹುಟ್ಟಿದ ಮೂವರು ಹುಡುಗರಿಗೆ ಅವರದೇ ಎಂಬ ಅರಿವೆಯೇನೂ ಇರಲಿಲ್ಲ. ಇದ್ದ ಒಂದಿಷ್ಟು ಅಂಗಿಯನ್ನು ಎಲ್ಲರೂ ತೊಟ್ಟುಕೊಳ್ಳುತ್ತಿದ್ದರು. ರಾಮನ ಎಚ್ಚರಿಕೆಗೂ ಹೆದರದೆ ಮುಂದುವರಿದ ಜಗಳ ಅವನ ತಲೆನೋವನ್ನು ಇನ್ನಷ್ಟು ಹೆಚ್ಚಿಸಿತ್ತು. ಇಷ್ಟು ಹೊತ್ತಾದರೂ ಬಾರದಿರುವ ಮಂಜಿಯ ಬಗ್ಗೆ ಮನಸ್ಸಿನಲ್ಲೇ ಕೋಪ ಹೊಗೆಯಾಡತೊಡಗಿತು. ಅಕ್ಕಪಕ್ಕದ ಮನೆಯವರೆಲ್ಲ ಮನೆಸೇರುತ್ತಿದ್ದುದು ಸೂಡಿಯ ಬೆಳಕಿನಲ್ಲೇ ಕಾಣುತ್ತಿತ್ತು. ಅಷ್ಟರಲ್ಲಿ ಅಂಗಿಯನ್ನು ಮೂವರೂ ಹಿಡಿದೆಳೆದ ರಭಸಕ್ಕೆ ಸಣ್ಣ ಮಗ ಮಾರುದೂರ ಹೋಗಿಬಿದ್ದು ಗೋಳೋ ಎಂದು ಅಳತೊಡಗಿದ. ಉಳಿದವರಿಬ್ಬರು ಅವನನ್ನು ಒಂದಿನಿತೂ ಗಮನಿಸದೇ ಅಂಗಿಯ ಜಗಳ ಮುಂದುವರಿಸಿದ್ದರು.
ಸಾರಾಯಿಯ ನಶೆ ರಾಮನ ತಲೆಯೊಳಗೆ ಕೆಲಸ ಮಾಡತೊಡಗಿತ್ತು. ನಿನ್ನೆ ಅವರೆಲ್ಲರೂ ಮಂಜಿಯ ಬಗೆಗೆ ಹೇಳಿದ ಮಾತುಗಳೆಲ್ಲ ತಲೆಯೊಳಗೆ ಸುಳಿಯತೊಡಗಿದವು. ಎಲ್ಲರಂತೆ ಪೂಜೆ ಮುಗಿದೊಡನೆ ಮನೆಸೇರಲು ಏನು ದಾಡಿ ಇವಳಿಗೆ ಎನಿಸಿ, ಸರಕ್ಕನೆ ಸಿಟ್ಟು ನೆತ್ತಿಗೇರಿ ಮಕ್ಕಳ ಕೈಯಲ್ಲಿರುವ ಅಂಗಿಯನ್ನು ಕಸಿದು ಅಂಗಳಕ್ಕೆಸೆದ. ದರವೇಸಗೆಟ್ಟ ಮಕ್ಕಳೆ, ಮೀಯಿರೆಂದರೆ ಅಂಗಿ ಹಿಡಿದು ಜಗಳ ಮಾಡ್ತೀರಾ? ಇರಿ ನಿಮಗೆ ಒಂದು ಗತಿ ಕಾಣಿಸ್ತೇನೆ. ಎಂದವನೇ ಅವರು ಹಾಕಿಕೊಂಡಿದ್ದ ಬಟ್ಟೆಯನ್ನೂ ಮತ್ತು ಒಳಗಿರುವ ಅವರೆಲ್ಲರ ಬಟ್ಟೆಯ ಗಂಟನ್ನೂ ಅಂಗಳಕ್ಕೆಸೆದವನೇ ಗಂಜಿಬಿಸಿಮಾಡಲೆಂದು ಒಟ್ಟಿದ್ದ ಒಲೆಯ ಉರಿಗೊಳ್ಳಿಯೊಂದನ್ನು ತಂದು ಬಟ್ಟೆಯ ರಾಶಿಯ ಮೇಲೆ ಎಸೆದುಬಿಟ್ಟ. ಹೊಳೆಯ ದಂಡೆಯಿಂದ ತಂದಿದ್ದ ಸಾರಾಯಿಯ ಬುಂಡೆಯನ್ನೆತ್ತಿ ಹನಿಬಿಡದಂತೆ ಗಟಗಟನೆ ಗಂಟಲಿಗೆ ಸುರಿದು ಅಂಗಳದಲ್ಲಿ ಬೆಂಕಿಯೆದುರು ಬಂದು ನಿಂತ.
ಅಪ್ಪನ ಹೊಸ ಅವತಾರವನ್ನು ಕಂಡು ಬೆಚ್ಚಿದ ಮಕ್ಕಳು ಬೆತ್ತಲೆಯಾಗಿ ಗುಡಿಸಲಿನ ಮೂಲೆಯಲ್ಲಿ ಸೇರಿ ಅವ್ವಿ ಆದಷ್ಟು ಬೇಗ ಬರಲೆಂದು ಪ್ರಾರ್ಥಿಸತೊಡಗಿದರು.
ಗುಡಿಸಲಿನೆದುರು ಬೆಂಕಿಯೇಳುತ್ತಿರುವುದನ್ನು ದೂರದಿಂದಲೇ ಕಂಡ ಮಂಜಿ ತನ್ನ ನಡಿಗೆಯ ವೇಗವನ್ನು ಹೆಚ್ಚಿಸಿ ಓಡಿ ಬರತೊಡಗಿದಳು. ಗುಡಿಯಲ್ಲಿ ಪೂಜೆ ಮುಗಿದ ಮೇಲೆ ತನ್ನನ್ನು ಒಂಚೂರು ಸಂಕ ದಾಟಿಸಿ ಹೋಗು ಎಂಬ ಹೆಗಡೆಯವರ ಅಮ್ಮನ ಮಾತಿಗೆ ಒಪ್ಪಿ ಅವಳು ಸ್ವಲ್ಪ ತಡಮಾಡಿಯೇ ಗುಡಿಯಿಂದ ಹೊರಟಿದ್ದಳು. ಅಂಗಳದಲ್ಲಿ ಉರಿಯುತ್ತಿರುವ ಬಟ್ಟೆಯ ರಾಶಿ, ಕುಡಿದು ತೂರಾಡುತ್ತಿರುವ ಗಂಡ, ಬೆತ್ತಲೆಯಾಗಿ ಗುಡಿಸಲಿನ ತಟ್ಟಿಗೊರಗಿ ತನ್ನನ್ನೇ ಅಸಹಾಯಕರಾಗಿ ದಿಟ್ಟಿಸುತ್ತಿರುವ ಮಕ್ಕಳು ಎಲ್ಲವನ್ನು ಕಂಡು ಒಂದುಕ್ಷಣ ಗರಬಡಿದು ನಿಂತುಬಿಟ್ಟಳು! ಮರುಕ್ಷಣದಲ್ಲಿಯೇ ಇನ್ನೂ ಪೂರ್ತಿಯಾಗಿ ಸುಡದಿರುವ ಬಟ್ಟೆಗಳನ್ನಾದರೂ ಈಚೆಗೆಳೆಯೋಣವೆಂದು ಬೆಂಕಿಗೆ ಕೈಹಾಕಿ ತಡಕಾಡತೊಡಗಿದಳು. ನಶೆಯೇರಿದ ರಾಮನ ಮಸುಕು ಕಣ್ಣುಗಳಿಗೆ ಅವಳು ಬೆಂಕಿಯನ್ನು ಹಾಯುತ್ತಿರುವ ಸೀತೆಯಂತೆ ಕಂಡು ತನ್ನ ಪೌರುಷಕ್ಕೆ ಮತ್ತಿಷ್ಟು ಹೆಮ್ಮೆಪಟ್ಟು ಕಣ್ಮುಚ್ಚಿ ಕುಸಿದ.