ಮನೆಯಲ್ಲಿ ಹಿಸ್ಸೆಯಾದಾಗಿನಿಂದ ನೋಡ್ತಾನೇ ಇದ್ದ ಈ ಕುಸುಮನಿಗೆ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕಿದಾಗ ಆಗಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಖುಷಿಯಾದಂತಿತ್ತು. ಟಾನಿಕ್ ಕುಡಿದಂಗೆ ಕೆಲಸದಲ್ಲಿ ಉತ್ಸಾಹ ತರ್ಸೋದು ನೋಡ್ದಾಗ ‘ನನಗ್ಯಾಕೆ ಇವಳಂತೆ ಖುಷಿಯಾಗಿ ಇರೋದಕ್ಕೆ ಆಗುತ್ತಿಲ್ಲ?’ ಎನಿಸಿ ವಿಶ್ವಣ್ಣನ ಮುಖದಲ್ಲಿ ಚಿಕ್ಕ ವಿಷಾದದ ನಗುವೊಂದು ಬಂದು ಮಾಯವಾಯಿತು.
ಸಂ ಗಾಳಿ ಸುಂಯ್ ಎಂದು ಬೀಸುತ್ತಿತ್ತು. ಗಗನದ ಸರ್ಯ ತನ್ನ ಎಂದಿನ ಕೆಲಸ ಮುಗಿಸಿ ಹೊರಡುವ ತಯಾರಿ ಮಾಡುತ್ತಿರಬೇಕು. ಪಶ್ಚಿಮದಂಚಿನಲ್ಲಿ ಬಂಗಾರದ ನೀರನ್ನು ಎರಕ ಹೊಯ್ದಂತೆ ಭಾಸವಾಗುತ್ತಿತ್ತು. ತಂಗಾಳಿಯ ಸ್ಪರ್ಶ ವಿಶ್ವಣ್ಣನ ದೇಹ-ಮನಸ್ಸುಗಳೆರಡಕ್ಕೂ ಹಿತವೆನಿಸಿತು. ಮೊದಲೆಲ್ಲ ತೋಟ ಗದ್ದೆಗೆ ಹೋಗೋದು ದನ-ಕರು ಎಂದು ಸಾಕಷ್ಟು ಕೆಲಸ ಮಾಡುತ್ತಿದ್ದ ವಿಶ್ವಣ್ಣನಿಗೆ ಇತ್ತೀಚೆಗೆ ಆರೋಗ್ಯ ಕೆಟ್ಟಾಗಿನಿಂದ ಮೈಯಲ್ಲಿ ಶಕ್ತಿಯೇ ಇಲ್ಲದಂತಾಗಿತ್ತು. ಮಗ ಚಿನ್ನು ಕೂಡ ಅಪ್ಪನಿಗೆ ಕೆಲಸ ಮಾಡಲು ಕೊಡುತ್ತಿರಲಿಲ್ಲ. ಉಟ್ಟ ಮಾಸಿದ ಪಂಚೆ ಸಿಕ್ಕಿಸಿ ಹೆಗಲಿಗಿದ್ದ ಬೆವರು ಒರೆಸಿದ ಟವೆಲನ್ನೇ ಹಾಸಿಕೊಂಡು ವಿಶ್ವಣ್ಣ ಅಂಗಳದ ತುದಿಯ ದಿಂಬದ ಮೇಲೆ ಕುಳಿತ. ಅಲ್ಲೇ ಕಣ್ಣಳತೆಯ ದೂರದಲ್ಲಿ ಮರ್ನಾಲ್ಕು ಜೇನು ಪೆಟ್ಟಿಗೆಗಳಿದ್ದವು. ವಿಶ್ವಣ್ಣನ ಕಣ್ಣು ಆಕಡೆ ಹೋಯ್ತು. ಅವನೇ ಪ್ರೀತಿಯಿಂದ ಸಾಕಿದ ಜೇನು. ಮೊದಲಿನಿಂದಲೂ ಜೇನು ಸಾಕುವುದು ಅವನ ಹವ್ಯಾಸ. ಮನೆಯಲ್ಲಿ ಅಪರೂಪಕ್ಕೆ ತಿನ್ನುವುದಕ್ಕೆ, ಪೂಜೆ ಪುನಸ್ಕಾರ ಔಷಧಿಗೆ ಜೇನುತುಪ್ಪದ ಕೊರತೆಯಿರಲಿಲ್ಲ. ಇತ್ತೀಚೆಗೆ ಜೇನುಪೆಟ್ಟಿಗೆಯ ಕಡೆ ನೋಡುವುದಕ್ಕೇ ಹೋಗಿರಲಿಲ್ಲ. ಮೊದಲಿನ ಉಮೇದು ಕೂಡ ಇರಲಿಲ್ಲ.
ಅದೇಕೋ ವಿಶ್ವಣ್ಣನಿಗೆ ಕೆಲವು ದಿನಗಳಿಂದ ಮನಸ್ಸು ಸರಿಯಿರಲಿಲ್ಲ. ಅದಕ್ಕೆ ಪರೋಕ್ಷವಾಗಿ ಕಾರಣನೂ ಅವನೇ. ತಾನು ತೆಗೆದುಕೊಂಡ ನಿರ್ಧಾರ ಸರಿಯೋ ತಪ್ಪೋ ಎಂಬ ಗೊಂದಲದಲ್ಲಿದ್ದ. ಒಂದು ಮನಸ್ಸು ನೀನು ಮಾಡಿದ್ದು ಸರಿ ಎಂದು ಹೇಳಿದರೆ, ಇನ್ನೊಂದು ಮನಸ್ಸು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿತ್ತು.
ವಿಶ್ವಣ್ಣನದು ಮಧ್ಯಮವರ್ಗದ ದೊಡ್ಡ ಕುಟುಂಬ. ಮೂವರು ತಮ್ಮಂದಿರು, ಇಬ್ಬರು ತಂಗಿಯರು, ಅವರ ಮಕ್ಕಳು ಹೀಗೆ. ತಂದೆ-ತಾಯಿ ತೀರಿಕೊಂಡು ಸುಮಾರು ವರ್ಷಗಳೇ ಕಳೆದಿತ್ತು. ಅಣ್ಣತಮ್ಮಂದಿರು ಒಬ್ಬರಿಗೊಬ್ಬರು ಹೊಂದಿಕೊಂಡು ಇಷ್ಟು ವರ್ಷಗಳ ಕಾಲ ಕೂಡಿಯೇ ಇದ್ದರು. ಆದರೆ ಇತ್ತೀಚೆಗೆ ವಿಶ್ವಣ್ಣ ತನ್ನ ಸಲುವಾಗಿ ಎನ್ನುವುದಕ್ಕಿಂತ ಮಗನ ಸಲುವಾಗಿ ಬೇರೆಯಾಗುವ ಅನಿವಾರ್ಯತೆ ಬಂತು.
ವಿಶ್ವಣ್ಣ ಬೇರೆ ಇರಬೇಕೆಂದು ಪ್ರಸ್ತಾಪ ಮಾಡಿದಾಕ್ಷಣವೇ ಮನೆಯಲ್ಲಿ ಗುಸುಗುಸು ಶುರುವಾಗಿತ್ತು. ‘ಇಷ್ಟು ದಿವ್ಸ ಸರಿ ದುಡ್ಡು ಮಾಡ್ಕೊಂಡು ಈಗ ತಾನು ಪೈಟಾಗಿ ಬೇರೆ ಮನೆ ಮಾಡ್ತಿ ಅಂದ್ಬಿಟ್ಟ… ಎಷ್ಟೆಂದ್ರೂ ಕೂಡುಕುಟುಂಬದ ಯಜಮಾನ ಮನುಷ್ಯ. ಮನೆ ಎಲ್ಲ ವ್ಯವಹಾರ ನಡೆಸ್ತಾ ಇದ್ದಂವ. ದುಡ್ಡು ಬಂಗಾರ ಅಂತ ಸ್ವಲ್ಪನಾದ್ರೂ ಒಳಗ್ಹಾಕ್ಕದ್ದೇ ಹೋಗ್ತಾö್ನ. ಜೇನು ತೆಗೆಯಲು ಹೋದವ ಕೈ ನೆಕ್ಕದೇ ಇರಲಾರ ಅನ್ನೋದು ಹಿರಿಯರ ಅನುಭವದ ಮಾತು. ಈಗಂತೂ ಮಗ ಬೇರೆ ಅಮೆರಿಕದಲ್ಲಿದ್ದಾ. ಎಲ್ಲ ಅಂವ್ನ ದುಡ್ಡು ಅಂತ ಹೇಳಿದ್ರಾತ’ ಎಂದು ದಾಯಾದಿಗಳ ಒಂದೊಂದು ಕೊಂಕುಮಾತುಗಳು ಅಕ್ಕಪಕ್ಕದವರಿಂದ ತಿಳಿಯುತ್ತಲೇ ಇತ್ತು.
ಅಲ್ಲಾ ಮಾರಾಯಾ, ಮನೆ ಪರಿಸ್ಥಿತಿ ನಿಂಗೆ ಗೊತ್ತಿದ್ದು. ಸಣ್ಣತ್ತಿಗೆ ನೋಡಿದ್ರೆ ಹಾಂಗೆ. ಅವ್ಕೆ ಬರೀ ಹೆಣ್ಣು ಮಕ್ಕಳ್ ಬೇರೆ. ಮಾಬ್ಲಣ್ಣನ ಮಗನೂ ನೌಕರಿ ಅಂತ ಹೊರಗೆ ಹೋದಾ. ಮನೆಯಲ್ಲಿ ಇರದು ಚಿನ್ನು ಮಾತ್ರ. ಅಂವನ ಜೀವ್ನಕ್ಕೇನೂ ಇಲ್ಲಿ ಕರ್ತೆ ಇಲ್ಲೆ. ಆದ್ರೂ ಈಗ ಹಿಸ್ಸೆ ಅಪ್ಪದು ಎಂತಾ ಇದ್ದಿತ್ತು – ಎಂದು ವಿಶ್ವಣ್ಣನ ಅಕ್ಕ-ತಂಗಿ ಕೂಡ ಇವನನ್ನೇ ತಪ್ಪಿತಸ್ಥನನ್ನಾಗಿ ಮಾಡಿದ್ದರು.
ಮೊನ್ನೆ ಹಾಲು ಡೇರಿಯ ಕಡೆಗೆ ಹೋದಾಗ ಯಾವಾಗ್ಲೂ ಮಾತಾಡಿಸೋ ಜಗ್ಗಣ್ಣ ಪಕ್ಕದಲ್ಲಿದ್ದಂವನಿಗೆ ಏನೋ ಕಿವಿಗಚ್ಚಿ ತನ್ನನ್ನೇ ವಿಲನ್ ತರಹ ನೋಡಿದ್ದು ವಿಶ್ವಣ್ಣನಿಗೆ ಮತ್ತೂ ಬೇಸರದ ಸಂಗತಿಯಾಗಿತ್ತು. ಇವರೆಲ್ಲಾ ಇಷ್ಟೆಲ್ಲಾ ಕೆಟ್ಟ ದೃಷ್ಟಿಯಲ್ಲಿ ನೋಡುವಷ್ಟು ದೊಡ್ಡ ತಪ್ಪು ನಾನೆಂಥ ಮಾಡಿದ್ದು? – ಎಂಬ ಬೇಸರ ಇವನಿಗೆ. ವಿಶ್ವಣ್ಣ ಮನಸ್ಸಿನ ವಿಚಾರದ ಜೊತೆಯೇ ಜೇನುಪೆಟ್ಟಿಗೆಯತ್ತ ಬಂದ. ಪೆಟ್ಟಿಗೆಯ ಹತ್ತಿರದಲ್ಲಿ ಜೇನು ಹುಳುಗಳು ಹಾರುತ್ತಿದ್ದವು. ‘ಗುಂಯ್’ ಸದ್ದು ಕೇಳುತ್ತಿತ್ತು. ಆದರೆ ಒಂದು ಪೆಟ್ಟಿಗೆಯಿಂದ ಯಾವ ಸದ್ದೂ ಇಲ್ಲ. ಹುಳುಗಳೂ ಹಾರುತ್ತಿಲ್ಲ. ಅನುಮಾನ ಬಂತು. ಹತ್ತಿರ ಹೋಗಿ ನೋಡಿದ. ಹೌದು, ಅದರಲ್ಲಿದ್ದ ಜೇನುಹುಳುಗಳು ಹಾರಿಹೋಗಿದ್ದವು. ‘ಇವ್ಕೆ ಎಂಥಾ ತೊಂದ್ರೆ ಆತೇನ ಹಾರಿ ಹೋಗ್ಬಿಟ್ಟ’ ಎಂದು ಗುನುಗುತ್ತ ಮತ್ತೆ ಬಂದು ವಿಶ್ವಣ್ಣ ದಿಂಬದ ಮೇಲೆ ಕುಳಿತ.
ಅಷ್ಟರಲ್ಲಿ ಕಾಲು ಕುಂಟುತ್ತಾ ಹೊರಗೆ ಬಂದ ಕುಸುಮಕ್ಕ ‘ಅದೆಂಥ ಅಲ್ಲಿ ದಿಕ್ಕು ನೋಡ್ತಾ ಕುಂತಿದ್ದು? ಹಾಲು ಕರೆದಾತು. ದನಿಗೆ ಹುಲ್ಲುಹಾಕಿಕ್ಕೆ ಡೇರಿಗೆ ಹಾಲು ಕೊಟ್ಟಿಕ್ಕೆ ಬನ್ನಿ’ ಎಂದವಳೇ ಮತ್ತೆ ಒಳಗಡೆ ಹೋದಳು.
‘ಆತು ಮರಾಯ್ತಿ. ಡೇರಿ ಏಳುವರೆತನಕ ರ್ತು. ನೀ ಏನ್ ತಲೆಬಿಸಿ ಮಾಡಿಕ್ಯಂಬದು ಬ್ಯಾಡಾ’ ಎಂದು ವಿಶ್ವಣ್ಣ ಹೇಳಿದ್ದು ಕುಸುಮಕ್ಕನಿಗೆ ಕೇಳಿಸಲಿಲ್ಲ.
ಮನೆಯಲ್ಲಿ ಹಿಸ್ಸೆಯಾದಾಗಿನಿಂದ ನೋಡ್ತಾನೇ ಇದ್ದ ಈ ಕುಸುಮನಿಗೆ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕಿದಾಗ ಆಗಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಖುಷಿಯಾದಂತಿತ್ತು. ಟಾನಿಕ್ ಕುಡಿದಂಗೆ ಕೆಲಸದಲ್ಲಿ ಉತ್ಸಾಹ ತರ್ಸೋದು ನೋಡ್ದಾಗ ‘ನನಗ್ಯಾಕೆ ಇವಳಂತೆ ಖುಷಿಯಾಗಿ ಇರೋದಕ್ಕೆ ಆಗುತ್ತಿಲ್ಲ?’ ಎನಿಸಿ ವಿಶ್ವಣ್ಣನ ಮುಖದಲ್ಲಿ ಒಂದು ಚಿಕ್ಕ ವಿಷಾದದ ನಗುವೊಂದು ಬಂದು ಮಾಯವಾಯಿತು.
ಕುಸುಮಕ್ಕನಿಗೇನು ಹಿಸ್ಸೆಯಾಗಿದ್ದು ತುಂಬಾ ಖುಷಿ ಅಂತೇನಿಲ್ಲಾ. ಅವಳಿಗೂ ತುಂಬಾ ವರ್ಷಗಳಿಂದ ಮೈದುನರು, ತಂಗಿಯರು ಅವರ ಮಕ್ಕಳು ಎಂದು ಒಟ್ಟಿಗೆ ಇದ್ದು ಭಾವನಾತ್ಮಕ ಸಂಬಂಧ ಬೆಸೆದಿದ್ದರಿಂದ ಈಗ ಬೇರೆಯಾಗುತ್ತಿರುವುದಕ್ಕೆ ಬೇಸರ ಇದೆ. ಆದರೆ ಅದೇಕೋ ಮೊದಲಿನ ಒತ್ತಡದ ಬದುಕಿನಿಂದ ನಿರಾಳತೆ ಸಿಕ್ಕಿದೆ. ಅನ್ನವೋ ಗಂಜ್ಯೋ ನಮ್ದು. ನಮ್ಗೆ ಬೇಕಾದ್ಹಾಂಗೆ ಇರಬಹುದು… ಎಂಬ ಸಮಾಧಾನ. ಅದೂ ಅಲ್ಲದೆ ಪರಿಸ್ಥಿತಿಯ ಅನಿವರ್ಯತೆಯೂ ಬಂತಲ್ಲ – ಎಂಬ ವಾಸ್ತವವನ್ನು ಒಪ್ಪಿಕೊಂಡಿದ್ದಾಳೆ.
ವಿಶ್ವಣ್ಣನ ಮನೆಯಲ್ಲಿ ಎರಡೆಕರೆ ಅಡಿಕೆತೋಟ, ಎರಡೆÉಕರೆ ಗದ್ದೆ, ಒಂದಿಷ್ಟು ತೆಂಗು, ಬಾಳೆ, ಕಾಳುಮೆಣಸು ಎಂದು ಪಿತ್ರಾರ್ಜಿತವಾಗಿ ಬಂದ ಆಸ್ತಿ ಇತ್ತು. ಒಬ್ಬ ತಮ್ಮ ನೌಕರಿ ನಿಮಿತ್ತ ಮೈಸೂರಿನಲ್ಲಿ ಇದ್ದರೆ ಇನ್ನಿಬ್ಬರು ಮಾಬ್ಲು ಮತ್ತು ಶಂಭು ಇಬ್ಬರೂ ವಿಶ್ವಣ್ಣನ ಜೊತೆಯೇ ತೋಟ ಗದ್ದೆ ಎಂದು ಕೆಲಸ ಮಾಡಿಕೊಂಡಿದ್ದರು. ಇಬ್ರು ಅಕ್ಕ-ತಂಗಿಯರನ್ನು ನೌಕರಸ್ಥರಿಗೆ ಮದುವೆ ಮಾಡಿ ಕೊಟ್ಟಿದ್ದರು. ಆಗೆಲ್ಲ ಪ್ರಾಯವಿತ್ತು, ದುಡಿಯುವ ತಾಕತ್ತಿತ್ತು. ಆಳುಕಾಳುಗಳು ಬೇಕಾದಷ್ಟು ಸಿಗುತ್ತಿದ್ದರು. ಕಾಲಕಾಲಕ್ಕೆ ಮಳೆ-ಬೆಳೆ ಎಲ್ಲ ಸುಗಮವಾಗೇ ನಡೆಯುತ್ತಿತ್ತು. ಮದುವೆ-ಮುಂಜಿ ಪೂಜೆ ಹಬ್ಬ ಹರಿದಿನಗಳಲ್ಲಿ ನೆಂಟ್ರು ಇಷ್ಟ್ರು ಎಂದು ಯಾವಾಗ ನೋಡಿದರೂ ಮನೆಯಲ್ಲಿ ಸಮಾರಾಧನೆಯೇ ಸೈ.
ವಿಶ್ವಣ್ಣನ ಅಪ್ಪನದು ಪೌರೋಹಿತ್ಯವೂ ಇತ್ತು. ವಿಶ್ವಣ್ಣನೂ ಕಲಿತಿದ್ದ. ಅದರೆ ಎಲ್ಲೂ ಪೌರೋಹಿತ್ಯಕ್ಕೆ ಹೋಗುತ್ತಿರಲಿಲ್ಲ. ಹೋಗಿದ್ದರೆ ಅವನ ಬದುಕಿಗೆ ವೈಯಕ್ತಿಕವಾಗಿ ಆದಾಯ ಸಿಗುತ್ತಿತ್ತು. ಆದರೆ ಹಾಗೆ ಮಾಡಲಿಲ್ಲ. ಮನೆಕೆಲಸವೆಲ್ಲವೂ ತಮ್ಮಂದಿರ ಹೆಗಲ ಮೇಲೆ ಬೀಳುತ್ತದೆ. ನಾಳೆ ಮನೆಯಲ್ಲಿ ‘ತಮ್ಮಂದಿರನ್ನು ದುಡಿಯುವುದಕ್ಕೆ ಹಾಕಿ ಇಂವ ವೈದಿಕ ಅದು ಇದು ಅಂತ ದುಡ್ಡು ಮಾಡಿಕೊಂಡು ಆರಾಮ ರ್ತಾನೆ’ ಎಂದಾಗುತ್ತದೆ. ಅದೂ ಅಲ್ಲದೆ ಮನೆಯ ಹಿರಿಯ ಮಗ ಜವಾಬ್ದಾರಿಯೂ ಇದ್ದಿದ್ದರಿಂದ ಸುಮ್ಮನಿದ್ದ. ಇವನಿಗೂ ಇಬ್ಬರು ಗಂಡುಮಕ್ಕಳು. ಹಿರಿಯವ ಚೆನ್ನಾಗಿ ಓದಿ ಹೊರದೇಶದಲ್ಲಿ ನೌಕರಿ ಹಿಡಿದಿದ್ದ. ಒಳ್ಳೆಯ ಮನೆತನದ ಹುಡುಗಿಯನ್ನು ನೋಡಿ ವಿಶ್ವಣ್ಣ ಮದುವೆಯನ್ನೂ ಮಾಡಿದ್ದ. ವಿಶ್ವಣ್ಣ ಕುಸುಮಕ್ಕನಿಗೆ ಮಾತ್ರವಲ್ಲ ಮನೆಯವರೆಲ್ಲರಿಗೂ ತುಂಬಾ ಖುಷಿಯಾಗಿತ್ತು. ಸಂಬಂಧಿಕರೆದುರು ಮಾತು ಬಂದಾಗಲೆಲ್ಲ ಮಗ ಫಾರೆನ್ನಿನಲ್ಲಿ ಇದ್ದಾನೆ ಎಂದು ಹೇಳಿಕೊಳ್ಳುವುದೂ ಒಂದು ಹೆಮ್ಮೆಯ ವಿಚಾರವಾಗಿತ್ತು. ಹೊರದೇಶದಲ್ಲಿ ಮಗನದು ಮನೆ, ಮುದ್ದಾದ ಮೊಮ್ಮಕ್ಕಳು ಅವರ ಆಟ-ಪಾಠ ಎಂದು ಮೊಬೈಲ್ನಲ್ಲಿ ನೋಡಿದಾಗ ಸ್ವರ್ಗ ಸಿಕ್ಕಿದಷ್ಟೇ ಖುಷಿ.
ಇನ್ನು ಎರಡನೆಯ ಮಗ ಚಿನ್ನು. ಓದಿನಲ್ಲಿ ಅಷ್ಟೇನೂ ಚುರುಕಿರಲಿಲ್ಲ. ಸ್ವಲ್ಪದಿನ ಕಾಲೇಜಿಗೆ ಹೋದವನು ಮನೆಯಲ್ಲಿ ಅಪ್ಪ ಚಿಕ್ಕಪ್ಪಂದಿರ ಜೊತೆ ಜಮೀನು ನೋಡಿಕೊಳ್ಳುವುದಕ್ಕೆ ಸೇರಿಕೊಂಡ. ‘ಎಲ್ಲರೂ ಓದಿ ಪಟ್ನ ಸೇರಿಕೊಂಡ್ರೆ ಮನೆಕಡೆ ನೋಡುವರ್ಯಾರು? ಚಿನ್ನು ಮನೆಯಲ್ಲೇ ಇದ್ದಿದ್ದು ಒಳ್ಳೆಯದೇ ಆಯ್ತು’ ಎಂದು ಸಮಾಧಾನ ಮಾಡಿಕೊಂಡರು. ಯಾಕೆಂದರೆ ಶಂಭುವಿಗೆ ಇಬ್ಬರು ಹೆಣ್ಣುಮಕ್ಕಳು. ಮಾಬ್ಲುವಿನ ಮಗ ಬೆಂಗಳೂರಿನಲ್ಲಿದ್ದ. ಮಗಳು ಕಲಿಯುತ್ತಿದ್ದಳು. ಮೈಸೂರಿನಲ್ಲಿದ್ದ ದಿವಾಕರನಿಗೆ ಒಬ್ಬ ಮಗನಿದ್ದರೂ ಅಂವನೇನೂ ಹಳ್ಳಿಯ ಕಡೆ ಬರುವವನಲ್ಲ. ಒಟ್ಟಿನಲ್ಲಿ ಕುಟುಂಬ ಒಂದು ಹದದಲ್ಲಿ ನಡೆಯುತ್ತಿತ್ತು.
ಆದರೆ ಇದ್ದಕ್ಕಿದ್ದಂತೆ ಒಂದು ದಿನ ಶಂಭುವಿನ ಹೆಂಡತಿ ಮಾಲತಿಗೆ ತಲೆಯಲ್ಲೇನೋ ತ್ರಾಸವಾದಂತಾಗಿ ಎಚ್ಚರವಿಲ್ಲದಂತಾಯ್ತು. ಕೈಕಾಲ್ಲೆಲ್ಲ ಶಕ್ತಿ ಇಲ್ಲದೆ ಕಟ್ಟಿಗೆಯಂತಾಯ್ತು. ಕೂಡಲೇ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಟ್ರೀಟ್ಮೆಂಟ್ ಮಾಡಿದರೂ ಅವಳು ಮೊದಲಿನಂತೆ ಆಗಲೇ ಇಲ್ಲ. ಎಲ್ಲವೂ ಮಲಗಿದಲ್ಲೇ. ಅವಳ ಕೆಲಸ ಮಾಡುವುದಕ್ಕೆ ಒಬ್ಬರು ಬೇಕೇ ಬೇಕು ಎನ್ನುವಂತಾಯ್ತು. ಚಿಕ್ಕ ವಯಸ್ಸು. ಅವರಿವರು ಹೇಳಿದ ವೈದ್ಯರ ಬಳಿಯೆಲ್ಲ ಕರೆದುಕೊಂಡು ಹೋಗಿ ನೋಡಿದರೂ ಏನೂ ಮಾಡುವುದಕ್ಕೆ ಆಗಲಿಲ್ಲ. ಇಬ್ಬರು ಹೆಣ್ಣುಮಕ್ಕಳು ಹೈಸ್ಕೂಲು ಓದುವವರು. ಇನ್ನು ಮಾಬ್ಲುವಿನ ಹೆಂಡತಿ ಶೋಭಾ ಮೊದಲೇ ಸ್ವಲ್ಪ ಭಾವಾರ್ತಿ ಸ್ವಭಾವ. ಹೇಳಿದಷ್ಟು ಮಾಡುವವಳು. ಕೆಲವೊಮ್ಮೆ ಅದೂ ಇಲ್ಲ. ಮನೆಯಲ್ಲಿ ಎಲ್ಲ ಜವಾಬ್ದಾರಿಯೂ ಕುಸುಮಕ್ಕಳದೇ. ಮಾಲತಿಯ ಆರೋಗ್ಯ ಕೆಟ್ಟಾಗಿನಿಂದ ತನ್ನ ಬಲಗೈಯೇ ಮುರಿದಂತಾಗಿತ್ತು ಇವಳಿಗೆ. ಕುಸುಮಕ್ಕನಿಗೂ ಮೊಣಕಾಲು ನೋವು ಬಿ.ಪಿ. ಎಲ್ಲಾ ಶುರುವಾಗಿತ್ತು. ದಿನವೂ ಗುಳಿಗೆ ತಪ್ಪಿಸುವಂತಿಲ್ಲ. ಈಗಂತೂ ಅರವತ್ತರ ಸನಿಹ ಬಂದಿದ್ದರಿಂದ ಸಕ್ಕರೆ ರೋಗವೂ ವಕ್ಕರಿಸಿತ್ತು.
ಅವಳಾದ್ರೂ ಎಷ್ಟೂ ಅಂತ ಒದ್ದಾಡ್ತಾಳೆ. ಮುಂಜಾನೆ ಐದಕ್ಕೆಲ್ಲ ಎದ್ದರೆ ಬಾಗಿಲು ಸಾರಿಸಿ ಹೂ ಕೊಯ್ಯುವುದರಿಂದ ಕೆಲಸ ಶುರುವಾಗುತ್ತಿತ್ತು. ಕೊಟ್ಟಿಗೆಯಲ್ಲಿ ಹಾಲು ಹಿಂಡುವುದಕ್ಕೆ ಶಂಭಣ್ಣ ಹೋಗುತ್ತಿದ್ದರೂ ಹಾಲು ಕಾಯಿಸಿ ದೊಡ್ಡ ಬೊಡ್ಡೆಯಲ್ಲಿ ಮಜ್ಜಿಗೆ ಕಡೆದು ಬೆಣ್ಣೆ ತೆಗೆದು ಆ ಪಾತ್ರೆಗಳನ್ನೆಲ್ಲ ತೊಳೆಯುವ ಹೊತ್ತಿಗೆ ಆಗಲೇ ಗಡಿಯಾರದಲ್ಲಿ ಏಳೋ ಏಳುವರೆಯೋ ಆಗುತ್ತಿತ್ತು. ಈ ಮಕ್ಕಳೋ ರಾತ್ರಿ ಲೇಟಾಗಿ ಮಲಗುವವರು. ಓದುತ್ತಾರೋ ಮತ್ತೇನಾದ್ರೂ ನೋಡ್ತಾರೋ ತಿಳಿಯದು. ಒಟ್ಟಿನಲ್ಲಿ ಕೈಯಲ್ಲಿ ಮೊಬೈಲ್ ಹಿಡಿದೇ ಕುಂತಿರೋದನ್ನು ಮಾತ್ರ ಕುಸುಮಕ್ಕ ನೋಡೋದು. ಮುಂಜಾನೆ ತಿಂಡಿ ಸಿದ್ಧವಾದ ನಂತರವೇ ಇವರು ಎದ್ದು ಬರೋದು. ತಟ್ಟೆ ಹಾಕೋದೋ ದೋಸೆ ಮಗಚೋದೋ ಮಾಡಿಕೊಟ್ಟರೆ ಸ್ವಲ್ಪ ಹಗುರ ಆಗ್ತಿತ್ತು ಎಂಬ ಆಸೆ ಇವಳಿಗೆ. ಆದ್ರೆ ಇವರಿಗೆ ಅದಕ್ಕೆಲ್ಲ ಎಲ್ಲಿ ಪುರುಸೊತ್ತು? ಊಟ ತಿಂಡಿಗೆ ಕುಳಿತರೆ ಒಬ್ಬರಿಗೆ ಸಿಹಿ ಜಾಸ್ತಿ ಇನ್ನೊಬ್ಬರಿಗೆ ಖಾರ ಕಡಮೆ ಎಂದು ಒಬ್ಬೊಬ್ಬರದು ಒಂದೊಂದು ಪುಕಾರು. ಎಲ್ಲಾದರೂ ಶಾಲೆ ಕಾಲೇಜಿಗೆ ರಜೆ ಇದ್ದಾಗ ಏನೋ ಚೂರುಪಾರು ಸಹಾಯ ಸಿಕ್ತಿತ್ತು. ಮಕ್ಕಳು ದೊಡ್ಡವರು ಮುದುಕರು ದನ-ಕರು, ನಾಯಿ ಬೆಕ್ಕು ಎಂದು ತಿಂಡಿ ಮುಗಿಸಿ ಕುಸುಮಕ್ಕ ತಿಂಡಿಗೆ ಕುಳಿತುಕೊಳ್ಳುವುದಕ್ಕೂ ಕೆಲಸದ ಆಳುಗಳು ಹಾಜರು. ಮಾಬ್ಲುವಿನ ಹೆಂಡತಿ ಶೋಭಾ ಎಲ್ಲೋ ಒಮ್ಮೊಮ್ಮೆ ದೋಸೆ ಹೊಯ್ಯುವುದಕ್ಕೆ ಬರುತ್ತಿದ್ದಳು. ಇವಳಿಗೋ ಯಾವುದಾದರೂ ಕೆಲಸ ಹೇಳಿ ನಿಶ್ಚಿಂತೆಯಿಂದ ಇರುವ ಹಾಗೂ ಇಲ್ಲ. ಮಂದ ಬುದ್ದಿಯಾಗಿದ್ದರಿಂದ ಒಂದಕ್ಕೆ ಒಂಬತ್ತು ಮಾಡಿ ಕುಸುಮಕ್ಕನಿಗೆ ಮತ್ತಷ್ಟು ಇಗ್ಗೆಲ್ಸವೇ. ಅದಕ್ಕೇ ಇವಳ ಹತ್ತಿರ ಕೆಲಸ ಹೇಳುವುದಕ್ಕೇ ಹಿಂಜರಿಯುತ್ತಿದ್ದಳು.
ಇನ್ನು ತೋಟಗದ್ದೆಯ ಕೆಲಸಕ್ಕೆ ಬರುವವರೋ ಹೇಳಿದ ದಿವಸ ಬರುವುದಿಲ್ಲ. ಮಾರನೇ ದಿವಸವೋ ಅದಕ್ಕೂ ಮಾರನೆಯ ದಿವಸವೋ ಬಂದು ದಾಂಧಲೆ ಎಬ್ಬಿಸುತ್ತಿದ್ದರು. ತಿಂಡಿ ಊಟ, ಚಹಾ ಮಜ್ಜಿಗೆ ಎಂದು ಎಲ್ಲಾ ಹೆಗಡೇರ ಮನೆಯಲ್ಲೇ ಆಗಬೇಕು. ಇವತ್ತು ದೋಸೆ ಹಿಟ್ಟು ರುಬ್ಬಿಲ್ಲ. ನೀವು ಬರೋದು ಗೊತ್ತಿಲ್ಲ ಎಂದು ಅವಲಕ್ಕಿಯೋ ಇನ್ನೇನೋ ಮಾಡಿ ಅವರಿಗೆ ಕೊಡುವಂತಿಲ್ಲ. ದೋಸೆಯೇ ಅಗಬೇಕು. ಮನೆಯಲ್ಲಿ ತೊಂದ್ರೆ ಗಿಂದ್ರೆ ಅನಾರೋಗ್ಯ ಅದೆಲ್ಲಾ ಸಂಬಂಧವೇ ಇಲ್ಲ. ಎಷ್ಟೇ ಕಷ್ಟವಾದ್ರೂ ನಮ್ಮನೆಯ ಕೆಲಸ ಮಾಡುವವರು ಎಂದು ಪ್ರೀತಿಯಿಂದ ಮಾಡಿಕೊಟ್ಟರೆ ಆ ಊಟಕ್ಕೆ ಒಂದು ರೂಪಾಯಿಯ ಬೆಲೆಯೂ ಇಲ್ಲ. ಪೇಟೆಗೆ ಹೋದರೆ ಎಲ್ಲರಿಗೂ ಒಂದು ಸಾದಾ ಊಟಕ್ಕೇ ಏನಿಲ್ಲವೆಂದರೂ ನೂರು ರೂಪಾಯಿಯಂತೂ ಕೊಡಬೇಕು. ಹಾಗಿದ್ದರೆ ನಮ್ಮದೇನೂ ದುಡ್ಡಲ್ಲವೆ – ಎಂಬ ಬೇಸರ ಇವರಿಗೆ. ಈ ಗದ್ದೆ ಕೆಲಸ ನೋಡಿದರೆ ದುಡ್ಡುಕೊಟ್ಟು ಅಕ್ಕಿ ತಂದಿದ್ದಕ್ಕಿಂತ ಹೆಚ್ಚೇ ತುಟ್ಟಿ. ಬಿಟ್ಟುಬಿಡೋಣವೆಂದರೆ ಭೂಮಿತಾಯಿ ಬರಡು ಬಿಟ್ಟಂತಾಗುತ್ತ. ಮಾರಾಟ ಮಾಡುವುದಕ್ಕೂ ಮನಸ್ಸಿಲ್ಲ. ಅದೇನೋ ಭಾವನಾತ್ಮಕ ನಂಟು. ಆಳುಮಕ್ಕಳ ಬಳಿ ಗಟ್ಟಿಯಾಗಿ ಏನಾದರೂ ಮಾತಾಡಿದರೆ ಕೆಲಸಕ್ಕೇ ಬರುವುದಿಲ್ಲ. ಯಾಕೆಂದರೆ ಇವರಿಗೆ ಅಕ್ಕಿ ಬೇಳೆ ಎಣ್ಣೆ ಉಪ್ಪು ಮನೆ ಕಟ್ಟೋಕೆ ದುಡ್ಡು ಎಲ್ಲವೂ ಸರ್ಕಾರದಿಂದ ಸಿಗುತ್ತೆ. ಮಕ್ಕಳ ಶಾಲೆಯೂ ಪುಕ್ಕಟೆಯಾಗುತ್ತೆ. ಪ್ರತಿದಿನ ದುಡಿಯೋಕೆ ರ್ಲೇಬೇಕೆಂದೇನೂ ಇಲ್ಲ. ವಾರಕ್ಕೆ ಮೂರೋ ನಾಲ್ಕೋ ದಿವಸ ಬಂದ್ರೆ ಸಾಕು. ಇದರ ಮಧ್ಯೆ ಊರಲ್ಲಿ ಮತ್ತೆ ಯಾರಾದರೊಬ್ಬರು ತಮ್ಮ ಮನೆ ಕೆಲಸ ಬೇಗ ಮುಗಿಯಬೇಕು ಅಂತ ನೂರು ರೂಪಾಯಿ ಹೆಚ್ಚು ಕೊಡ್ತೀನಿ ಅಂತ ಆಸೆ ಹುಟ್ಟಿಸಿ ಕರೆದುಬಿಟ್ಟರೆ ಅಲ್ಲೇ ಹೋಗಿಬಿಡುವವರು. ವಿಶ್ವಣ್ಣನಂತಹ ಮಧ್ಯಮವರ್ಗದವರ ಮನೆಗೆ ಬರಬೇಕಾದರೆ ಇವರದ್ದು ಹಲವಾರು ಬೇಡಿಕೆ ಇದ್ದೇ ಇರುತ್ತೆ. ಅದಕ್ಕೇ ಇವರು ಬಂದ ದಿವಸ ಈ ಹೆಗಡೆಕ್ಕಳಿಗೆ ತುರಿಸುವುದಕ್ಕೂ ಸಮಯವಿರುವುದಿಲ್ಲ. ಇವರೋ ಜೊತೆಗಿದ್ದರೆ ಮಾತ್ರ ಸ್ವಲ್ಪವಾದರೂ ಕೆಲಸ ಮಾಡುತ್ತಾರೆ. ಇಲ್ಲವಾದ್ರೆ ತೋಟದಲ್ಲೇ ಮಲಗಿ ಎದ್ದು ಹೋದರೂ ಆಶ್ಚರ್ಯವಿಲ್ಲ. ಒಂದು ಆಳಿನ ಕೆಲಸದ ಲೆಕ್ಕ. ದಿನಕ್ಕೆ ಏಳ್ನೂರೋ ಎಂಟ್ನೂರೋ ಪಗಾರ ಕೊಟ್ಟು ಊಟ ತಿಂಡಿನೂ ಕೊಟ್ಟು ಹೀಗೆ ಆಳಿನ ಲೆಕ್ಕವಾದ್ರೆ ಸಾಲವಾಗದೇ ಇರುತ್ಯೇ? ಈ ಜಮೀನು ತೋಟ ಎಲ್ಲಾ ಆಳುಮಕ್ಳಿಗೇ ವಹಿಸಿ ನಾವೇ ಅವ್ರ ಹÀತ್ರ ಕೆಲ್ಸ ಮಾಡಿದ್ರೆ ನಮ್ಮ ಜೀವ್ನಕ್ಕೆ ಏನಾದ್ರೂ ಆದೀತು ಇಲ್ಲಾಂದ್ರೆ ಏನೂ ಗೀಟೋದಿಲ್ಲ ಎಂಬ ಲೆಕ್ಕಾಚಾರ ಇವರದ್ದು. ಮುಂದೆಲ್ಲ ನಮ್ಮ ಮನೆಯ ಕೆಲಸ ಮಾಡಿ ಬದುಕುತ್ತಿದ್ದವನೇ ನಮ್ಮ ಜಮೀನನ್ನೂ ಖರೀದಿ ಮಾಡೋ ಕಾಲ ಬಂದ್ರೆ ಅದನ್ನೂ ಇದೇ ಕಣ್ಣಿನಿಂದಲೇ ನೋಡೋದೇ ಎಂದು ಕುಸುಮಕ್ಕನೂ ವಿಶ್ವಣ್ಣನೂ ಎಷ್ಟೋ ದಿವಸ ಅಲವತ್ತುಕೊಂಡಿದ್ದಿದೆ.
ಈ ಶಂಭುವಿಗೋ ಮುಂಜಾನೆಯಿಂದ ಮಧ್ಯಾಹ್ನದವರೆಗೂ ಹೆಂಡತಿಗೆ ತಿಂಡಿ ಸ್ನಾನ, ಬಟ್ಟೆ ತೊಳೆಯೋದು ಎಂದು ಅವಳ ಕೆಲಸವೇ ಆಗಿಬಿಡುತ್ತೆ. ಮಾಬ್ಲುವೇನೋ ಮೊದಲೆಲ್ಲ ದಷ್ಟಪುಷ್ಟವಾಗಿದ್ದು ಒಳ್ಳೆಯ ದುಡಿಮಾನಿಯೇ ಆಗಿದ್ದ. ವಿಶ್ವಣ್ಣನಿಗೂ ನಿಶ್ಚಿಂತೆಯಾಗಿತ್ತು. ಜಮೀನಿನ ಕೆಲಸದ ಜವಾಬ್ದಾರಿಯನ್ನು ಅವನೇ ವಹಿಸಿಕೊಳ್ಳುತ್ತಿದ್ದ. ಆದರೆ ಅವನಿಗೂ ಕುತ್ತಿಗೆಯ ನರದ್ದು ಏನೋ ಸಮಸ್ಯೆಯಾಗಿ ಆಪರೇಶನ್ ಆಗಿತ್ತು. ಆಗಿನಿಂದ ದೊಡ್ಡ ಕೆಲಸವೇನೂ ಆಗುತ್ತಿರಲಿಲ್ಲ. ಇದರ ಜೊತೆಗೆ ಮಕ್ಕಳನ್ನು ಶಾಲೆಗೋ ಕಾಲೇಜಿಗೋ ಬೈಕ್ನಲ್ಲಿ ಬಿಟ್ಟು ಬರಬೇಕು.
ಇನ್ನು ಹಬ್ಬಹರಿದಿನಗಳಲ್ಲಿ ನೆಂಟ್ರು ಇಷ್ಟರು ಬಂದರಂತೂ ಕುಸುಮಕ್ಕನಿಗೆ ಯಾಕಾದರೂ ಬರುತ್ತಾರೋ ಎನಿಸೋದು. ಎಲ್ಲರಿಗೂ ಅಡಿಗೆ ಆಸ್ರ ಕಡುಬು ಕಜ್ಜಾಯ ಎಂದು ರಾಶಿರಾಶಿ ಮಾಡಿ ಬಡಿಸಬೇಕಲ್ಲ. ಅದೇನು ಸಸಾರದ್ದೇ. ಪಾತ್ರೆ ತೊಳ್ದು ಮನೆ ಒರೆಸೋ ಕೆಲಸಕ್ಕಾದ್ರೂ ಯಾರಾದ್ರೂ ಇದ್ದಿದ್ರೆ ಹಗುರ ಆಗ್ತಿತ್ತು. ಇವಳಿಗೆ ಸಹಾಯಕ್ಕೆ ಯಾರೂ ಇರದಿದ್ದರೂ ಊಟತಿಂಡಿಗೆ ಹದಿನೈದೋ ಇಪ್ಪತ್ತೋ ಜನರು ಇದ್ದೇ ಇರುತ್ತಿದ್ದರು. ದೊಡ್ಡ ಮನೆ ಕುಣ್ದು ಕುಣ್ದು ಓಡಾಡಿ ಪಾಪ ಇವಳ ಕಾಲೋ ಬಾವು ಬಂದು ಬಾಳೆಕಂಬದಂತೆ ಕಾಣುತ್ತಿತ್ತು. ರಾತ್ರಿ ದಿಂಬಿಗೆ ತಲೆ ಇಟ್ಟರೆ ಸಾಕು ಕಾಲು ಪಾದದಿಂದ ತೊಡೆಯವರೆಗೆ ಕುಚುಕುಚು ಎಂದು ಸೆಳೆತ. ಎಣ್ಣೆಯೋ ಮುಲಾಮೋ ಎಂದು ತಾತ್ಪೂರ್ತಿಕವಾಗಿ ಹಚ್ಚಿ ಮಲಗೋದು. ಇಲ್ಲಾಂದ್ರೆ ಕಣ್ಣುಮುಚ್ಚುವ ಕೆಲಸವೇ ಇಲ್ಲ. ಪಾಪ ಕುಸುಮಕ್ಕನಿಗೆ ಯಾರ ಹತ್ರ ಹೇಳಿಕೊಳ್ಳೋದಕ್ಕೂ ಆಗಲ್ಲ. ಎಲ್ಲಾದರೂ ಮಾಲತಿ ಹತ್ರ ಹೇಳೋಣವೆಂದರೆ ‘ನನ್ನ ಕೈಯಲ್ಲಿ ಕೆಲಸ ಆಗಲ್ಲ. ನನ್ನ ಗಂಡ ಮಕ್ಕಳಿಗೆಲ್ಲ ಮಾಡಿ ಬಡಿಸ್ಬೇಕು. ಅದಕ್ಕೇ ಬೇಕಂತ ಇವಳು ಹೀಗೆ ಹೇಳ್ತಾಳೆ’ ಎಂದು ಇವಳು ಬೇಸರ ಮಾಡಿಕೊಂಡರೆ – ಎನಿಸಿ ಸುಮ್ಮನಿದ್ದುಬಿಡುತ್ತಿದ್ದಳು. ಹಾಗಂತ ಮಾಲತಿಯ ಬಗ್ಗೆ ಕುಸುಮಕ್ಕನಿಗೂ ಅನುಕಂಪವಿದೆ. ಇವಳೇನು ಬೇಕಂತ ಮಾಡಿಕೊಂಡಿದ್ದಲ್ಲ.. ಇಷ್ಟು ಚಿಕ್ಕ ವಯಸ್ಸಿನಲ್ಲಿ ಪರಸೇವೆಯಲ್ಲಿ ಬದುಕು ನಡೆಸುವುದೆಂದರೆ ಪಾಪ ಮನಸ್ಸಿಗೆಷ್ಟು ಹಿಂಸೆ. ಆ ಯಾತನೆ ಯಾವ ವೈರಿಗೂ ಬೇಡ. ಜೀವ ಇರೋತನ್ಕ ಜೀವ್ನ ನಡೆಸ್ಬೇಕಲ್ಲ. ಅನ್ನೋ ಸಂಕಟದ ಅರಿವಿದೆ.
ಮಾಲತಿಗೋ ಮನೆಯ ಪರಿಸ್ಥಿತಿ ಕುಸುಮಕ್ಕನಿಗೆ ಆಗುವ ಕಷ್ಟ ಎಷ್ಟು ಅರ್ಥವಾಗುತ್ತೋ ಗೊತ್ತಿಲ್ಲ. ತನ್ನ ಈ ಅವಸ್ಥೆಗೆ ಬೇಸರ ದುಃಖ ಇದೆ. ಆದರೆ ಕುಸುಮಕ್ಕನ ಬಗ್ಗೆ ಅನುಕಂಪದ ಮಾತೂ ಹೇಳುವುದಿಲ್ಲ. ಅದೇನೋ ಅಸೂಯೆ. ಬಂದವರೆದುರು ಕಿವಿಗಚ್ಚುವುದಂತೂ ಇತ್ತು. ಆದರೆ ಕುಸುಮಕ್ಕನಿಗೆ ತನಗಾಗುವ ತ್ರಾಸವನ್ನು ತಡೆದುಕೊಳ್ಳುವ ಶಕ್ತಿ ಇಲ್ಲ. ಗಂಟಲಲ್ಲಿ ಬಿಸಿತುಪ್ಪ. ಉಗುಳೋಕೆ ಮನಸ್ಸಿಲ್ಲ ನುಂಗೋಕೆ ಆಗ್ತಿಲ್ಲ. ಇವಳಿಗೆ ಅನುಭವಿಸೋದು ಮಾತ್ರ ತಪ್ಪುವುದಿಲ್ಲ. ‘ಅಯ್ಯಪ್ಪಾ… ತೋಟ ಗದ್ದೆ ಕೆಲಸಕ್ಕೆ ಹೋಗೋದಾದ್ರೂ ಬೇಕು; ಈ ಅಡುಗೆಮನೆಯ ಕೆಲಸ ಮಾತ್ರ ಬ್ಯಾಡಾ…’ ಅನ್ಸೋದು. ಕಣ್ಣಿಗೆ ಕಾಣದ ಲೆಕ್ಕಕ್ಕೆ ಸಿಗದ ಕೆಲಸಗಳು. ಹೇಳೋಕೆ ಹೋದರೆ ‘ಅಯ್ಯಯ್ಯ ಇದೆಲ್ಲಾ ಎಂಥಾ ಕೆಲ್ಸ’ ಎನ್ಸುತ್ತೆ. ಆದ್ರೆ ಬಿಡ್ವು ಮಾತ್ರ ಸಿಗೋದಿಲ್ಲ. ಒಂದಿನ ರಜೆ ಅಂತ ಘೋಷಣೆ ಮಾಡಿ ನಿಶ್ಚಿಂತೆಯಿಂದ ಇರೋಣ ಅಂದ್ರೂ ಆಗಲ್ಲ. ಸಿಟಿಯಲ್ಲಾದ್ರೆ ಇವತ್ತು ಯಾರು ಮಾಡ್ತಾರೆ ಅನಿಸಿದ್ರೆ ಹೋಟೆಲ್ಲಿಗಾದ್ರೂ ಹೋಗ್ಬಹುದು. ಆನ್ಲೆöÊನಲ್ಲಿ ಆರ್ಡರ್ ಮಾಡಿದ್ರೆ ಮನೆ ಬಾಗ್ಲಿಗೂ ತಂದುಕೊಟ್ಟು ಹೋಗ್ತಾರೆ. ನಮ್ಮ ಹಣೆಬರಹಕ್ಕೆ ಮುನ್ನೂರರವತ್ತೊಂದು ದಿವಸವೂ ಖಾನಾವಳಿ ಚಾಲೂ ಇಡೋದೇ ಸೈ ಎನಿಸಿತ್ತು. ಮಧ್ಯಾಹ್ನದ ಊಟದ ನಂತರವಾದರೂ ಸ್ವಲ್ಪ ಅಡ್ಡಾಗೋಣವೆಂದರೆ ಆಳುಮಕ್ಕಳಿಗೆ ಮತ್ತೆ ಚಹಾ ಆಗಬೇಕು. ಅದು ಮುಗಿಯೋ ಹೊತ್ತಿಗೆ ಮಕ್ಕಳಿಗೆ ಸಂಜೆಯ ತಿಂಡಿ, ಆಮೇಲೆ ಕೊಟ್ಟಿಗೆ ಕೆಲಸ – ಒಟ್ಟಿನಲ್ಲಿ ರಾತ್ರಿ ಹತ್ತರ ತನಕವೂ ಮುಗಿಯುವುದಿಲ್ಲ. ಏನೋ ಒಂದು ಚೂರು ಧಾರಾವಾಹಿನೋ ಸಿನೇಮಾನೋ ಹಾಡೋ ನೋಡಿ ಮಲಗೋಣವೆಂದರೆ ಸುಸ್ತಾಗಿ ತೂಕಡಿಕೆ ಶುರುವಾಗಿಬಿಡುತ್ತಿತ್ತು. ‘ಉಳ್ಳಾಗಡ್ಡೆ ತೂಕ ಹೊಡಿದಿದ್ದು ಸಾಕು ಹೋಗಿ ಮಲಕ್ಕೋ’ ಎಂದು ಗಂಡನೋ ಮಗನೋ ಎಚ್ಚರಿಸಿದಾಗ ಬೆಳಗ್ಗೆ ಬೇಗ ಏಳಬೇಕಲ್ಲ ಎಂದು ಹೋಗಿ ಮಲಗುತ್ತಿದ್ದಳು. ಒಟ್ಟಿನಲ್ಲಿ ಕುಸುಮಕ್ಕನಿಗೆ ಅಡುಗೆಮನೆಯೇ ಪ್ರಪಂಚವಾಗಿಬಿಟ್ಟಿದೆ.
ಈ ಕೂಡುಕುಟುಂಬ ನೋಡೋಕೆ ಚೆಂದವೇ. ಏನಾದ್ರು ಮಾತಾಡಿದ್ರೆ ಕೆಟ್ಟವರಾಗಿ ಕಾಣ್ತೇವೆ. ಆದ್ರೆ ಎಷ್ಟೂ ಅಂತ ಸಹಿಸಿಕೊಳ್ಳೋದು. ಎಲ್ಲದಕ್ಕೂ ಮಿತಿ ಬೇಡ್ವೇ. ಪ್ರಾಯದಲ್ಲಾದ್ರೆ ಹೇಗೋ ಹೆಚ್ಚುಕಡಮೆ ಸುಧಾರಿಸಿಕೊಳ್ಳಬಹುದು. ವಯಸ್ಸಾದಂತೆ ಊಟ-ತಿಂಡಿಯಲ್ಲಿ ಸ್ವಲ್ಪ ಹೊಂದಾಣಿಕೆ ಮಾಡ್ಕೋಬಹುದು. ಕೆಲ್ಸದಲ್ಲಿ ಹೇಗೆ ಮಾಡಿಕೊಳ್ಳೋದು? – ಎಂಬ ಬೇಸರ ಕುಸುಮಕ್ಕನಿಗೆ. ವಿಶ್ವಣ್ಣನಿಗೂ ಹೆಂಡತಿಯ ಕಷ್ಟ ಅರ್ಥವಾಗುತ್ತಿತ್ತು. ತನ್ನ ಅಸಹಾಯಕತೆಗೆ ಒಳಗೊಳಗೇ ಸಂಕಟಪಡುತ್ತಿದ್ದ. ಪಾಪ ಹೇಗೋ ಕುಸುಮಕ್ಕನ ಕಾಲಿನಂತೆ ಕುಟುಂಬವೂ ಕುಂಟುತ್ತಲೇ ತೂಗಿಕೊಂಡು ಹೋಗುತ್ತಿತ್ತು.
ಇದೇ ಕಾರಣಕ್ಕೇ ಎರಡನೆಯ ಮಗ ಚಿನ್ನುವಿಗೆ ಮದುವೆ ಮಾಡುವ ಯೋಚನೆ ಬಂದಿತ್ತು. ಆದ್ರೆ ಅದೇನು ನಾವು ಎಣಿಸಿದಷ್ಟು ಸಸಾರದ್ದೇ? ಅದೂ ಅಲ್ದೆ ಚಿನ್ನು ಅಷ್ಟೇನೂ ಕಲ್ತವನಲ್ಲ. ಹಳ್ಳಿ ಮನೆಯಲ್ಲಿ ಕೊಟ್ಟಿಗೆ ಜಮೀನು ಅಂತ ಕೆಲ್ಸ ಮಾಡಿಕೊಂಡಿದ್ದವ. ಜಾತಕವೇ ಬರುವುದಿಲ್ಲ. ನೆಂಟ್ರೋ ಇಷ್ಟರೋ ಯಾರಾದ್ರೂ ಸಿಕ್ಕಿದಾಗ ಮಗನ ಮದವೆ ಮಾಡ್ಬೇಕು ಅಂದ್ರೆ ‘ಹುಡುಗ ಏನ್ ಮಾಡ್ತಾನೆ? ಎಷ್ಟು ಸಂಬಳ. ಸ್ವಂತ ಮನೇನಾ?’ ಎನ್ನೋರು. ‘ಹಳ್ಳಿಯಲ್ಲಿ ಇದ್ದಾನೆ’ ಅಂದರೆ ಮಾತು ಮುಂದುವರಿಯುವುದೇ ಇಲ್ಲ. ಅದ್ರಲ್ಲೂ ಕೂಡು ಕುಟುಂಬ ಎಂದರಂತೂ ಮುಗಿಯಿತು.
ಇನ್ನು ಬಡವರ ಮನೆಯದೋ ಅಷ್ಟೇನೂ ಚೆಂದವಿಲ್ಲದ ಹುಡುಗಿಯನ್ನು ಯಾರೋ ಹೇಳಿದರು ಅಂತ ಮನೆಬಾಗಿಲಿಗೆ ಹೋಗಿ ವಿಚಾರಿಸಿ ಜಾತಕ ತಂದು ‘ಎಲ್ಲಾ ಕೂಡಿಬರುತ್ತೆ ಮುಂದುವರಿಯೋಣ’ ಎಂದರೆ, ದೊಡ್ಡ ಕುಟುಂಬ ಇಲ್ಲಿದ್ದವರೆಲ್ಲಾ ಪೇಷಂಟುಗಳೇ ಎಂದು ದೂರದಿಂದಲೇ ವಿಚಾರಿಸಿಕೊಂಡು ‘ನಮ್ಮ ಮಗಳನ್ನ ನಿಮ್ಮ ಮಗನ ಹೆಂಡತಿಯಾಗಿ ಕಳಿಸುವುದೋ ಆ ಮನೆಯ ದಾದಿಯಾಗೋ? ನಿಮ್ಮನೆಯಲ್ಲಿದ್ದ ರೋಗಿಗಳನ್ನ ನೋಡಿಕೊಳ್ಳೋಕೆ ಅಡುಗೆ ಮಾಡುವುದಕ್ಕೆ ಕೆಲಸದ ಆಳು ಬೇಕಾಗಿದೆ ಅಂತ ಕಾಣ್ಸುತ್ತೆ. ಏನೇ ಆಗ್ಲಿ ಒಟ್ಟು ಕುಟುಂಬಕ್ಕೆ ನಮ್ಮನೆ ಮಗಳನ್ನ ಕೊಡಲ್ಲಪ್ಪಾ. ಮೊದ್ಲೆಲ್ಲಾ ನಾವೆಲ್ಲಾ ನೋಡಿದ್ದೇ ಅಲ್ವಾ… ರಾತ್ರಿ ಕಂಡ ಬಾವಿಗೆ ಹಗಲು ಗುದುಕುಕೋಕೆ ನಮಗೇನು ಮಳ್ಳಾ? ಅವ್ಳೇನು ನಮ್ಗೆ ಹೆಚ್ಚಲ್ಲ. ಹೇಗಿದ್ರೂ ನಾಲ್ಕಕ್ಷರ ಕಲ್ಸಿದ್ದೀವಿ. ಮದ್ವೆ ಆಗದಿದ್ರೆ ದುಡ್ಕೊಂಡು ಅವ್ಳ ಜೀವ್ನ ಅವ್ಳು ನೋಡ್ಕೋತಾಳೆ’ ಎನ್ನುತ್ತಿದ್ದರು. ಮದುವೆ ಖರ್ಚು ಕೊಡ್ತೀವಿ. ಅಷ್ಟೋ ಇಷ್ಟೋ ಹಣ ಕೊಡ್ತೀವಿ ಅಂದ್ರೂ ಯಾರೂ ಒಪ್ಪುತ್ತಿರಲಿಲ್ಲ.
ಹೀಗೇ ಕುಂತು ಆಲೋಚ್ನೆ ಮಾಡಿದ್ರೆ ಅವ್ರು ಹೇಳೋದ್ರಲ್ಲೂ ತಪ್ಪಿಲ್ಲ. ಎಲ್ಲಾ ಹೆಣ್ಣುಮಕ್ಕಳಿಗೂ ಆಸೆ ಕನಸು ಅಂತ ಇರುತ್ತೆ. ಅದನ್ನೆಲ್ಲ ಬದಿಗಿಟ್ಟು ಅತ್ತೆ ಮಾವ ಗಂಡ ಮನೆಮಂದಿಗೆಲ್ಲ ಸೇವೆ ಮಾಡೋದು ಪುಣ್ಯದ ಕೆಲಸ ಎಂದೆಲ್ಲ ತಿಳ್ಕೊಂಡು ಯಾರು ರ್ತಾರೆ? ಹೆಣ್ಣಿನವರ ಸ್ಥಾನದಲ್ಲಿ ನಾವಿದ್ರೆ ನಮ್ಮ ಮಗಳನ್ನ ಕೊಡುವುದಕ್ಕೆ ಮುಂದೆ ರ್ತೀವಾ? ಎಲ್ಲ ತಂದೆ-ತಾಯಂದಿರೂ ತಮ್ಮ ಮಗಳು ಸುಖವಾಗರ್ಬೇಕು ಅಂತಾನೇ ಆಸೆ ಪಡೋದಲ್ವಾ? ‘ಮಾಣಿ ಹಣೆಯಲ್ಲಿ ಮದುವೆ ಬರೆದಿದ್ರೆ ಹೇಗಾದ್ರೂ ಆಗುತ್ತೆ’ ಎಂದು ಕುಸುಮಕ್ಕ ಅಲ್ಲೇ ಸಮಾಧಾನ ಮಾಡಿಕೊಳ್ಳುತ್ತಿದ್ದಳು.
ಇತ್ತೀಚೆಗೆ ಶಂಭುವಿನ ಹಿರಿಮಗಳು ಮತ್ತು ಮಾಬ್ಲುವಿನ ಮಕ್ಕಳದ್ದೂ ಮದುವೆಯಾಗಿತ್ತು. ವಿಶ್ವಣ್ಣನೇ ಒಳ್ಳೆಯ ಹುಡುಗನನ್ನು ಹುಡುಕಿ ವಿಜೃಂಭಣೆಯಿಂದಲೇ ಮುದುವೆ ಮಾಡಿಸಿದ್ದ. ಇನ್ನು ಉಳಿದವರು ಶಂಭುವಿನ ಎರಡನೆಯ ಮಗಳು ಮತ್ತು ಚಿನ್ನು ಇಬ್ಬರೇ. ಚಿನ್ನುನೋ ನೋಡುವುದಕ್ಕೆ ರಾಜಕುಮಾರನೆ. ಬೆಂಗಳೂರಿನಲ್ಲಿ ನೌಕರಿ ಇದ್ದರೆ ಮದುವೆಯಾಗಿಬಿಡುತ್ತಿತ್ತು. ಹಾಗಂತ ವಿಶ್ವಣ್ಣನೇನೂ ಸುಮ್ಮನೆ ಕುಂತಿಲ್ಲ. ಊರಿನ ಕಡೆ ಹೆಣ್ಣು ಕೊಡುವುದಿಲ್ಲವೆಂದು ದಲ್ಲಾಳಿ ಕೆಲಸ ಮಾಡುವವರಿಗೆಲ್ಲ ಖುದ್ದಾಗಿ ಮಾತಾಡಿ ಒಂದಿಷ್ಟು ಹಣವನ್ನು ಮೊದಲೇ ಕೊಟ್ಟು ಮಗನ ಜಾತಕ ಫೋಟೋ ಎಲ್ಲಾ ಕೊಟ್ಟಿದ್ದ. ಒಂದಿಷ್ಟು ವಧೂವರರ ಕೇಂದ್ರಕ್ಕೂ ಹೋಗಿ ಹೆಸರು ನೊಂದಾಯಿಸಿ ಬಂದಿದ್ದ. ಆಗಾಗ ಹೆಸರು ನವೀಕರಿಸುವುದು ಬಿಟ್ಟರೆ ಅವರಿಂದ ಯಾವ ಫೋನೂ ಬರುತ್ತಿರಲಿಲ್ಲ. ಇನ್ನು ಈ ದಲ್ಲಾಳಿಗಳೋ ಬಯಲುಸೀಮೆ, ಭದ್ರಾವತಿ ಕಡೆಯ ಹುಡುಗಿಯರು ಅನ್ಯ ಜಾತಿಯ ಅನೇಕ ಸಂಬಂಧಗಳನ್ನು ತರುತ್ತಿದ್ದರು. ಇನ್ನಷ್ಟು ಹಣ ಕೇಳುತ್ತಿದ್ದರು. ಇವನಿಗೋ ಒಂದು ಮನಸ್ಸು ಇಂತÀಹ ಹುಡುಗಿಯನ್ನಾದರೂ ತರುವ ಆಸೆ. ಆದರೆ ಇನ್ನೊಂದು ಮನಸ್ಸು ಅವರು ಇಲ್ಲಿ ಬಂದು ಈ ಮನೆಗೆ ಹೊಂದಾಣಿಕೆ ಮಾಡಿಕೊಳ್ಳದೇ ಓಡಿಹೋಗುವುದೋ ಆತ್ಮಹತ್ಯೆ ಮಾಡಿಕೊಳ್ಳುವುದೋ ಅಥವಾ ಡೈವೋರ್ಸೋ ಮಾಡಿದರೆ ಆಮೇಲೆ ಯಾಕಾದ್ರೂ ಈ ಮಾಣಿಗೆ ಮದುವೆ ಮಾಡಿದೆವೋ ಎಂಬಂತಾದ್ರೆ ಎಂಬ ಭಯ. ಮನೆಯಲ್ಲೋ ‘ಬೇರೆ ಜಾತಿಯವೆಲ್ಲ ಸರಿಹೋಗ್ತಿಲ್ಲೆ ಇಶೀ… ಹಾಂಗೆಲ್ಲಾ ಮದ್ವೆ ಆಗುವುದಕ್ಕಿಂತ ಆಗ್ದೇ ಉಳಿಯೋದೇ ಒಳ್ಳೇದು’ ಎಂದು ಬಾಯೆಳೆದು ಹಣೆ ಸಿಂಡರಿಸುತ್ತಿದ್ದರು.
ಮಗನನ್ನು ಕೇಳಿದರೆ ಪಾಪ ಅವನಿಗೆಂಥ ಅನುಭವ ಇದ್ದಿದ್ದು. ‘ನಿಂಗವೆಲ್ಲಾ ಹೆಂಗೆ ಹೇಳ್ತ್ರೋ ಹಾಂಗೆ ಹಣೆಯಲ್ಲಿ ಬರೆದಾಂಗೆ ಆಗ್ತು’ ಎಂದು ಬಾಯಲ್ಲಿ ಹೇಳುತ್ತಿದ್ದರೂ ಅವನಿಗೂ ಪ್ರಾಯ. ವಯೋಸಹಜ ಆಸೆ ಆಕಾಂಕ್ಷೆ ಇರೋದಿಲ್ವೆ? ಒಂದು ಮನಸ್ಸು ಹುಡುಗಿ ಯಾವ ಜಾತಿಯಾದರೇನು ಒಳ್ಳೆಯ ಜನರಾದರೆ ಸರಿ ಎನಿಸಿದರೂ, ಮನೆಯಲ್ಲಿ ಅದಕ್ಕೇ ರಾದ್ಧಾಂತ ಆಗುವುದು ಬೇಡವೆನಿಸಿ ಸುಮ್ಮನಿದ್ದುಬಿಡುತ್ತಿದ್ದ. ಆದ್ರೆ ಎಷ್ಟು ದಿನ ಅಂತ ಹೀಗೇ ಬಿಡೋದು. ಚಿನ್ನುವಿಗೆ ಆಗಲೇ ನಲವತ್ತರ ಸನಿಹ ಬಂದಿತ್ತು. ವಿಶ್ವಣ್ಣ ಕುಸುಮಕ್ಕ ಇರೋತನಕ ಸರಿ ಹೇಗೋ ನಡೆಯುತ್ತೆ. ಆಮೇಲೆ ಯಾರ ಕಥೆ ಹೇಗೋ ಯಾರಿಗೆ ಗೊತ್ತು? ಮುಂದೆ ಚಿನ್ನುವಿನ ಭವಿಷ್ಯ? ಪರಿಸ್ಥಿತಿ ಹೀಗೇ ಇರೋದಿಲ್ಲ. ಇನ್ನೊಬ್ಬ ಮಗ ಹೊರದೇಶದಲ್ಲೇ ಇರೋನು. ಚಿನ್ನುವಿನ ಕಷ್ಟ ಸುಖದ ಜೊತೆ ಆತುಕೊಳ್ಳೋಕೆ ಅವನವರು ಅಂತ ಯಾರಾದರೂ ಬೇಕಲ್ಲ ಎಂಬ ಕೊರಗು ಕುಸುಮಕ್ಕ ವಿಶ್ವಣ್ಣನನ್ನು ಕಾಡುತ್ತಿತ್ತು. ಎಷ್ಟೋ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಚಿಂತೆ ಮಾಡಿಮಾಡಿಯೇ ಒಂದು ದಿನ ಇದ್ದಕ್ಕಿದ್ದಂತೆ ವಿಶ್ವಣ್ಣನಿಗೆ ಬಿಪಿ, ಶುಗರು ಎಲ್ಲಾ ಹೆಚ್ಚಾಗಿ ಮಂಗಳೂರಿಗೆ ಒಯ್ದು ಅಂತೂ ಹೇಗೋ ಬಚಾವಾಗಿ ಒಂದು ತಿಂಗಳು ಅಲ್ಲೇ ಇದ್ದು ಬಂದಿದ್ದ. ಗಟ್ಟಿಮುಟ್ಟಾದ ಆಳಾಗಿದ್ದ ವಿಶ್ವಣ್ಣ ಬೇಲಿಗುಟ್ಟದ ತರಹ ಆಗಿದ್ದ. ಈಗ ಮನೆಯಲ್ಲಿ ಗಟ್ಟಿಯಾಗಿದ್ದವನು ಚಿನ್ನು ಮಾತ್ರ.
ಅಪ್ಪಯ್ಯ ಸತ್ತಾಗಿನಿಂದ ವಿಶ್ವಣ್ಣನೇ ಮನೆಯ ಹಿರಿಯವನಾಗಿ ಯಜಮಾನಿಕೆ ವಹಿಸಿಕೊಂಡಿದ್ದ. ಆವತ್ತಿನಿಂದ ಇವತ್ತಿನವರೆಗೂ ತನ್ನ ತಮ್ಮಂದಿರನ್ನು ಮಕ್ಕಳಂತೆ ನೋಡಿದ್ದ. ತನ್ನ ಸಂಸಾರಕ್ಕೆ ಕಡಮೆ ಮಾಡಿದರೂ ತಮ್ಮಂದಿರು ಅವರ ಮಕ್ಕಳಿಗೆ ಓದು ಮುಂಜಿ ಮದುವೆ ಎಂದು ಎಲ್ಲವನ್ನೂ ಸರಿಯಾಗೇ ಮಾಡಿದ್ದ. ಹೊರಗಿದ್ದ ತಮ್ಮನಿಗೂ ಜಮೀನಿನಲ್ಲಿ ಹಕ್ಕಿದೆ. ಅವ್ನ ಋಣದಲ್ಲಿ ಇರಬಾರದೆಂದು ಬಂದಾಗಲೆಲ್ಲ ಅಕ್ಕಿ, ಕಾಯಿ, ಬೆಲ್ಲ, ಬಾಳೆಗೊನೆ ಅದು ಇದು ಎಂದು ಕಾರು ತುಂಬಿಸಿಯೇ ಕಳಿಸುತ್ತಿದ್ದ. ಅಂವ ಮನೆ ಕಟ್ಟುವಾಗ ಮಕ್ಕಳ ಓದಿನ ವೇಳೆ ಮನೆಯದೆಂದು ತನ್ನ ಕೈಲಾದಷ್ಟು ಹಣವನ್ನೂ ಕೊಟ್ಟಿದ್ದ. ಮಾಲತಿಯ ಔಷಧಕ್ಕಂತೂ ಲೆಕ್ಕವಿಲ್ಲದಷ್ಟು ಖರ್ಚು ಮಾಡಿದ್ದ. ಬ್ಯಾಂಕಿನಲ್ಲಿ ಸಾಲವಾದರೂ ಜಮೀನಿನ ಕೆಲಸ ಮಾಡಿಸುವುದು ಬಿಡಲಿಲ್ಲ. ಹಳೆಕಾಲದ ಮನೆಯಾದರೂ ಗಟ್ಟಿಯಾಗೇ ಇದ್ದಿದ್ದರಿಂದ ಹೊಸಮನೆ ಕಟ್ಟದಿದ್ದರೂ ಆಧುನಿಕ ವ್ಯವಸ್ಥೆಗಳನ್ನೆಲ್ಲವನ್ನೂ ಮಾಡಿದ್ದ. ಇವನ ವ್ಯವಹಾರದಲ್ಲಿ ಯಾರೂ ಕೊಂಕು ತೆಗೆಯದಂತೆ ನ್ಯಾಯವಾಗೇ ಕುಟುಂಬವನ್ನು ನಿರ್ವಹಿಸಿದ್ದ. ಆದರೂ ಮಗನ ಮದುವೆಯನ್ನು ಮಾಡುತ್ತೇನೆ ಎಂದಾಗ ಒಬ್ಬೊಬ್ಬರು ಒಂದೊಂದು ತರಹ ಮಾತಾಡಿದ್ದು… ಹಿಸ್ಸೆಯಾಗುತ್ತೇನೆ ಎಂದಾಗ ತಪ್ಪಿತಸ್ಥನನ್ನಾಗಿ ಮಾಡಿದ್ದು ವಿಶ್ವಣ್ಣನಿಗೆ ತುಂಬಾ ಬೇಸರಕ್ಕೆ ಎಡೆಮಾಡಿತ್ತು.
ಹಾಗಂತ ವಿಶ್ವಣ್ಣನ ತಮ್ಮಂದಿರಿಗೇನೂ ಚಿನ್ನು ಮದುವೆಯಾಗಬಾರದೆಂಬುದೇನೂ ಇಲ್ಲದಿದ್ದರೂ ಹಿಸ್ಸೆಯಾದರೆ ತಮಗೆ ಸಂಸಾರದ ಜವಾಬ್ದಾರಿ ಹೆಚ್ಚಾಗುತ್ತದೆ. ತಮ್ಮ ಮಕ್ಕಳಿಗೆ ತ್ರಾಸವಾಗುತ್ತದೆ. ಹೇಗಿದ್ದರೂ ಚಿನ್ನು ಜಮೀನಿನ ಜವಾಬ್ದಾರಿ ವಹಿಸುತ್ತಿದ್ದಾನೆ, ಆದಷ್ಟು ದಿವಸ ಹೀಗೇ ಸಂಸಾರ ದೂಡೋಣ ಎಂಬಾಸೆ. ಈ ಅಕ್ಕತಂಗಿಯರು ನೆಂಟರಿಷ್ಟರಿಗೆಲ್ಲ ಮಾಲತಿ ಶೋಭಾಳ ಬಗ್ಗೆ ಮಾಬ್ಲು ಶಂಭುವಿನ ಬಗ್ಗೆ ಅನುಕಂಪವೇ ಹೊರತು ವಿಶ್ವಣ್ಣ ಕುಸುಮಕ್ಕನ ಸಮಸ್ಯೆ ಅರ್ಥವೇ ಆಗುವುದಿಲ್ಲ. ಇವರಿಗೂ ವಯಸ್ಸಾಗಿದೆ, ಆರೋಗ್ಯ ಹದಗೆಟ್ಟಿದೆ. ಮಗನಿಗೆ ಮದುವೆಯಾಗಿಲ್ಲ. ಇದ್ಯಾವುದೂ ಬೇಕಿಲ್ಲ. ಫೋನು ಮಾಡಿದರೆ ಮಾಲತಿ ಆರೋಗ್ಯ ಶಂಭು ಮಾಬ್ಲು ವಿಚಾರ ಕೇಳಿ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳುತ್ತಿದ್ದರೇ ಹೊರತು ಇವರ ಬಗ್ಗೆ ವಿಚಾರಿಸೋದೇ ಇಲ್ಲ. ಮಗ ಫಾರಿನ್ನಲ್ಲಿ ಇದ್ದಾನೆ. ಒಟ್ಟು ಸಂಸಾರದ ಯಜಮಾನಿಕೆ ಮಾಡಿದವ, ಇವಂಗೇನು ಕಡಮೆ ಎಂದು ಹಗುರವಾಗಿ ಮಾತನಾಡುವುದು. ಇನ್ನು ಚಿನ್ನುವಿನ ವಿಚಾರ ಬಂದರಂತೂ ‘ಹಳ್ಳಿಮನೇಲಿ ಇದ್ದಂವಂಗೆ ಹೆಣ್ಣು ಕೊಡಲ್ಲ. ಮದುವೆಯಾಗ್ದೇ ಇದ್ರೂ ಅಡ್ಡಿಲ್ಲ. ಬೇರೆ ಜಾತಿ ಹುಡುಗಿ ಮಾತ್ರ ಬ್ಯಾಡಾ. ಅವ್ರಿಗೂ ನಮಗೂ ಹೊಂದಿಕೆ ಆಗಲ್ಲ, ಮನೆ ಒಡ್ದುಹೋಗುತ್ತೆ. ಇಷ್ಟು ದಿನ ಒಟ್ಟಿದ್ದು ಬರುವವಳ ಸಲುವಾಗಿ ಹಿಸ್ಸೆಯಾಗೋಕೆ ಆಗುತ್ತಾ?’ ಎನ್ನೋರು.
ಅಲ್ಲಾ ಇವ್ರಿಗೆಲ್ಲಾ ಏನಾಗಿದೆ? ಚಿನ್ನುವಿನ ಭವಿಷ್ಯದ ಬಗ್ಗೆ ಯಾರೂ ಯಾಕೆ ಯೋಚನೆ ಮಾಡಲ್ಲ? ಇವರ ಮಕ್ಕಳಿಗೆಲ್ಲ ಅವರಿಷ್ಟದಂತೆ ಓದಿಸಿ ಅವರಿಗೆಲ್ಲಾ ವಿಶ್ವಣ್ಣನೇ ನೆಲೆ ಮಾಡಿದ್ದಾನೆ. ಚಿನ್ನುವಿಗೂ ಮದ್ವೆ ಸಂಸಾರವಾಗಿ ಖುಷಿಯಾಗರ್ಲಿ ಎಂದು ಯಾಕೆ ಬಯಸುವುದಿಲ್ಲ? ಬರುವವಳು ಹೊಂದಾಣಿಕೆ ಮಾಡಿಕೊಳ್ಳಬೇಕು ಎನ್ನುತ್ತಾರೆಯೇ ಹೊರತು, ಇವತ್ತಿನ ಕಾಲಮಾನಕ್ಕೆ ತಕ್ಕಂತೆ ತಾವೂ ಬದಲಾಗಬೇಕು ಅಂತ ಯಾಕೆ ಯಾರೂ ಯೋಚಿಸುವುದಿಲ್ಲ? ಸ್ವಾರ್ಥವೋ ಅಸೂಯೆಯೋ… ಅಥವಾ ದಾಯಾದಿಗಳೇ ಹೀಗೋ ತಿಳಿಯಲಿಲ್ಲ ವಿಶ್ವಣ್ಣನಿಗೆ.
ಇದೇ ವೇಳೆಯಲ್ಲೇ ವಿಶ್ವಣ್ಣನ ಸ್ನೇಹಿತ ಪಾಟೀಲರು ಬಂದವರು ‘ಅಲ್ರೀ ಹೆಗಡೇರ ನೀವ್ಯಾಕ ಅನಾಥಾಶ್ರಮದ ಹುಡುಗಿಯರ ಬಗ್ಗೆ ವಿಚಾರ ಮಾಡ್ಬರ್ದು? ಆಶ್ರಮದಲ್ಲಿ ಒಳ್ಳೇ ಸಂಸ್ಕಾರವೂ ರ್ತೆöÊತಿ, ಅವ್ರಿಗೂ ಒಂದು ಒಳ್ಳೇ ಬದ್ಕು ಸಿಕ್ದಾಂಗ ಆತು’ ಎಂದು ಪ್ರಸ್ತಾಪ ಮಾಡಿದ್ದರು. ವಿಶ್ವಣ್ಣ ಮಾತನಾಡಲಿಲ್ಲ. ಆದ್ರ ‘ನೀವು ಎಲ್ರೂ ಒಟ್ಟಿಗೇ ಇದ್ರ ಒಪ್ಪಿಕೊಳ್ಳೂದು ಅನುಮಾನ. ಪಾಪ ಅವ್ರಿಗೂ ಹಳ್ಳೀ ಜೀವ್ನ ಹೊಸ್ತು. ಎಲ್ಲಾ ಕಲ್ತೊಕೋಬೇಕು. ಇಲ್ಲಿ ತಾಳ್ಮೆ ಪ್ರೀತಿ ವಿಶ್ವಾಸನೇ ಮುಖ್ಯ ಆಗರ್ತೈತಿ’ ಎಂದಾಗ ವಿಶ್ವಣ್ಣನಿಗೆ ಉಭಯಸಂಕಟವಾಗಿತ್ತು. ಆಗ ಪಾಟೀಲರೇ ‘ಮಗನ ಭವಿಷ್ಯಕ್ಕೋಸ್ಕರ ನೀವು ಬ್ಯಾರೇನ ಇದ್ರ ಏನ್ ತಪ್ಪೆöÊತಿ?’ ಎಂದೂ ಪ್ರಶ್ನೆ ಮಾಡಿದ್ದರು. ಆದರೆ ಮನೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದರೆ ಅವರ ಪ್ರತಿಕ್ರಿಯೆ ಹೇಗಿರುತ್ತದೆಯೋ ಎಂಬ ಯೋಚನೆ ಇವನಿಗೆ. ಇದೇ ಆಲೋಚನೆಯಲ್ಲಿದ್ದಾಗಲೇ ವಿಶ್ವಣ್ಣನಿಗೆ ತಾನು ಮಂಗಳೂರಿನ ಆಸ್ಪತ್ರೆಯಲ್ಲಿದ್ದಾಗ ಪರಿಚಯವಾದ ಹುಡುಗಿ ನಿವೇದಿತಾಳ ನೆನಪಾಗಿದ್ದು.
ನಿವೇದಿತಾ ತುಂಬಾ ಸುಂದರವಲ್ಲದಿದ್ದರೂ ಲಕ್ಷಣವಿರುವ ಚೆಂದದ ಹುಡುಗಿ. ತುಂಬಾ ಚುರುಕಿನವಳು. ಯಾವುದೇ ಕೆಲಸವಾಗಲಿ ಬಾಯಿ ಮುಚ್ಚುವುದರಲ್ಲಿ ಬಂದು ಮಾಡಿ ಹೋಗುತ್ತಿದ್ದಳು. ರೋಗಿಯ ರೋಗದ ಬಗ್ಗೆ ಅವುಗಳ ಟ್ರೀಟ್ಮೆಂಟ್ ಕುರಿತೆಲ್ಲ ಚೆನ್ನಾಗಿ ಹೇಳುತ್ತಿದ್ದಳು. ವಿಶ್ವಣ್ಣ ಅವಳ ಚುರುಕುತನ ಬುದ್ದಿವಂತಿಕೆ ಕೆಲಸದಲ್ಲಿ ಶ್ರದ್ಧೆ ನೋಡಿ ಅವಳೂ ಈ ದೊಡ್ಡ ಆಸ್ಪತ್ರೆಯಲ್ಲಿ ಡಾಕ್ಟರ್ ಇರಬೇಕು. ಹೊಸದಾಗಿ ಸೇರಿರಬಹುದು ಎಂದುಕೊಂಡಿದ್ದ. ಆಮೇಲೆ ತಿಳಿಯಿತು. ಅಲ್ಲಿ ನರ್ಸ ಆಗಿ ಕೆಲಸ ಮಾಡುತ್ತಿದ್ದ ವಿಚಾರ.
ವಿಶ್ವಣ್ಣ ಮಂಗಳೂರಿನಲ್ಲಿದ್ದಾಗ ಚಿನ್ನುವೇ ಅವನ ಜೊತೆ ಇದ್ದಿದ್ದು. ಆದರೆ ಅದೇ ವೇಳೆಯಲ್ಲೇ ಮನೆಯಲ್ಲಿ ಅಡಿಕೆ, ಭತ್ತ ಎಂದು ಎಲ್ಲವೂ ಒಟ್ಟಿಗೇ ಕೊಯ್ಲಿಗೆ ಬಂದಿತ್ತು. ಚಿನ್ನುವಿಲ್ಲದಿದ್ದರೆ ಅಲ್ಲಿ ಕೆಲಸ ಮುಂದುವರಿಯುವುದಿಲ್ಲ.
ಈ ಕೆಲಸದವರು ತಾವು ಹೇಳಿದ ದಿವಸ ಒಪ್ಪಿಕೊಳ್ಳದಿದ್ದರೆ ಮತ್ತೆ ಬರುವುದೇ ಇಲ್ಲ. ಈ ಹಳ್ಳಿಗಳಲ್ಲಿ ಈಗ ಮಾನವೀಯತೆಯೆಲ್ಲ ಹರಿದು ಚೂರಾದ ಗಾಳಿಪಟದಂತೆ ದಿಕ್ಕುಪಾಲಾಗಿವೆ. ಅದೂ ಅಲ್ಲದೆ ತೋಟದ ಕೆಲಸವನ್ನಾದರೂ ಸ್ವಲ್ಪ ದಿನ ಬಿಡಬಹುದು ಆದರೆ ಗದ್ದೆ ಕೊಯ್ಲನ್ನು ಮುಂದಕ್ಕೆ ಹಾಕಿ ಎಲ್ಲಾದರೂ ಅಕಾಲದ ಮಳೆಗೆ ಸಿಕ್ಕಿದರೆ ಒಂದು ವರ್ಷದ ಬೆಳೆಯೇ ಹಾಳು. ಆಮೇಲೆ ವರ್ಷ ಪೂರ್ತಿ ಹೊಟ್ಟೆಗೆ ಬೇಕಲ್ಲ. ವಿಶ್ವಣ್ಣನ ಆರೋಗ್ಯವೂ ಸ್ವಲ್ಪ ಸುಧಾರಿಸಿದ್ದರಿಂದ ನರ್ಸಗಳಿಗೆ ಜವಾಬ್ದಾರಿ ವಹಿಸಿ ಚಿನ್ನು ನಾಲ್ಕೈದು ದಿನಗಳ ಮಟ್ಟಿಗೆ ಊರಿಗೆ ಬಂದಿದ್ದ.
ವಿಶ್ವಣ್ಣನಿಗೆ ದಿನದ ಊಟ ತಿಂಡಿಯನ್ನು ತಂದು ಕೊಡುವುದಕ್ಕೆ ಚಿನ್ನು ಪರಿಚಯದವರಿಗೆ ಹೇಳಿದ್ದರಿಂದ ಮಾತ್ರೆ ಕೊಡುವುದು ಯೋಗಕ್ಷೇಮ ನೋಡಿಕೊಳ್ಳುವುದಕ್ಕೆ ನಿವೇದಿತಾಳೇ ಬರುತ್ತಿದ್ದಳು. ಹಾಗೇ ಬಂದಾಗ ಅದು ಇದು ಮಾತಾಡುತ್ತಾ ಅವಳ ವೈಯಕ್ತಿಕ ವಿಚಾರ ಕೇಳಿದ್ದ ವಿಶ್ವಣ್ಣ.
ನಿವೇದಿತಾ ಚಿಕ್ಕವಳಿದ್ದಾಗಿನಿಂದಲೂ ಕೇರಳದ ಅನಾಥಾಶ್ರಮದಲ್ಲಿ ಬೆಳೆದವಳು. ಮಂÀಗಳೂರಿನ ಇದೇ ಜೈನ್ ಆಸ್ಪತ್ರೆಯಲ್ಲಿ ನರ್ಸ ಆಗಿ ಸೇರಿಕೊಂಡವಳು. ಆಸ್ಪತ್ರೆಯ ಹತ್ತಿರವೇ ಒಂದು ಪುಟ್ಟ ರೂಮು. ಯಾಕೋ ಗೊತ್ತಿಲ್ಲ ಚಿನ್ನು ಊರಿಗೆ ಬಂದಾಗಿನಿಂದ ವಿಶ್ವಣ್ಣನ ಬಗ್ಗೆ ಸ್ವಲ್ಪ ಹೆಚ್ಚಾಗೇ ಕಾಳಜಿ ಮಾಡುತ್ತಿದ್ದಳು. ಅವಳ ಕಾಳಜಿಗೆ ಸ್ವಂತದವರಂತೆ ತೋರಿಸುವ ಅಕ್ಕರೆಗೆ ವಿಶ್ವಣ್ಣ ಸೋತುಹೋಗಿದ್ದ. ತನಗೆ ಮಗಳೇ ಇದ್ದಿದ್ದರೂ ಇಷ್ಟು ಪ್ರೀತಿ ತೋರಿಸುತ್ತಿದ್ದಳೋ ಇಲ್ಲವೋ ಎಂಬ ಭಾವ ಇವನಿಗೆ. ನಿವೇದಿತಾಳಿಗೂ ಅಷ್ಟೆ. ತಂದೆಯನ್ನೇ ನೋಡದ್ದಕ್ಕೋ ಏನೋ ಅವರ ಒಂದು ಆತ್ಮೀಯ ಮಾತು ಏನೋ ಕಳೆದುಕೊಂಡ ದೊಡ್ಡ ನಿಧಿ ಸಿಕ್ಕಿದಷ್ಟೇ ಆನಂದ ಕೊಡುತ್ತಿತ್ತು. ಎಷ್ಟೋ ದಿವಸ ತಾನು ಮಾಡಿದ ಅಡುಗೆಯನ್ನೇ ವಿಶ್ವಣ್ಣನಿಗೆ ತಂದು ಊಟ ಮಾಡಿಸುತ್ತಿದ್ದಳು. ಚಿನ್ನು ಊರಿಂದ ತಿರುಗಿ ಬರುವಷ್ಟರಲ್ಲಿ ಯಾವುದೋ ಒಂದು ಸೆಳೆತ ಅವರನ್ನು ಮತ್ತಷ್ಟು ಹತ್ತಿರ ಮಾಡಿ ನಿಜವಾಗಲೂ ತಂದೆ-ಮಗಳೇನೋ ಎಂಬಷ್ಟರಮಟ್ಟಿಗೆ ಬಂಧ ಬೆಸೆದಿತ್ತು.
ವಿಶ್ವಣ್ಣನಿಗೂ ತನ್ನ ಮಗನಿಗೆ ಇಂತÀಹ ಸೊಸೆ ಸಿಕ್ಕರೆ ಎಂದು ಒಂದು ಯೋಚನೆ ಮನಸಲ್ಲಿ ಬಂದಿದ್ದರೂ, ಮನೆಯವರು ಒಪ್ಪಿಕೊಳ್ಳದಿದ್ದರೆ? – ಎಂದು ಸುಮ್ಮನಿದ್ದುಬಿಟ್ಟಿದ್ದ. ಈಗ ಪಾಟೀಲರು ಈ ವಿಷಯ ಪ್ರಸ್ತಾಪ ಮಾಡಿದಾಗಿನಿಂದ ತಾನೇಕೆ ಅವಳ ಬಗ್ಗೆ ವಿಚಾರಿಸಬಾರದು? ಅವಳು ಒಪ್ಪಿಗೆಕೊಟ್ಟರೆ ತಮ್ಮ ಮಗನ ಅದೃಷ್ಟವೇ ಅಲ್ಲವೆ? – ಎನಿಸಿತ್ತು. ಆದರೆ ಒಂದು ಮನಸ್ಸು, ನಮ್ಮ ಮಗನಿಗೆ ಮದುವೆಯಾಗಬೇಕು ಅನ್ನೋ ಕಾರಣಕ್ಕೆ ಇಷ್ಟು ವರ್ಷ ಜೇನುಗೂಡಿನಂತೆ ಕೂಡಿದ್ದ ಕುಟುಂಬವನ್ನು ಒಡೆಯುವುದೆ? ಅದರಲ್ಲೂ ಮನೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಈ ಸಂದರ್ಭದಲ್ಲಿ ನಾವು ಬೇರೆ ಇರುತ್ತೇವೆ ಎಂದರೆ ತಾನು ಸ್ವಾರ್ಥಿ ಎನಿಸುವುದಿಲ್ಲವೆ? ಮೊದಲೇ ಮನೆಯ ಯಜಮಾನ. ತಮ್ಮಂದಿರಿಗೆ ಅನ್ಯಾಯ ಮಾಡಿದ ಎಂದು ಜನ ಹೇಳೋದು ಗ್ಯಾರಂಟಿ. ಎಲ್ಲರ ದೃಷ್ಟಿಯಲ್ಲಿ ತಾನು ಕೆಟ್ಟವನಾಗುವುದಿಲ್ಲವೆ? ಎಂದು ಪ್ರಶ್ನಿಸಿಕೊಂಡ. ಆದರೆ ಇನ್ನೊಂದು ಮನಸ್ಸು ಅವನನ್ನು ಎಚ್ಚರಿಸಿತ್ತು. ತಮ್ಮಂದಿರ ಮಕ್ಕಳೆಲ್ಲ ಕೈಗೆ ಬಂದಿದ್ದಾರೆ. ಕಲಿತಿದ್ದಾರೆ. ಮದುವೆಯೂ ಆಗಿದೆ. ಅವರವರ ತಂದೆತಾಯಂದಿರ ಹೊಣೆ ಅವರು ವಹಿಸಿಕೊಳ್ಳಲಿ. ನೀನು ನಿನ್ನ ಸಂಸಾರದ ಬಗ್ಗೆ ಯೋಚಿಸು ಎಂದು. ಮುಂದೆ ಚಿನ್ನುವಿಗೆ ಯಾರು? ನಮ್ಮ ಕರ್ತವ್ಯದ ಬಗ್ಗೆಯಾಗಲಿ ಚಿನ್ನುವಿನ ಭವಿಷ್ಯದ ಬಗ್ಗೆಯಾಗಲಿ ಯಾರು ಯೋಚಿಸುತ್ತಾರೆ? ಸ್ವಾರ್ಥವಿಲ್ಲದೆ ಸಂಸಾರ ನಡೆಯುತ್ತದೆಯೆ? ಎಲ್ಲರೂ ಅವರವರ ಸಂಸಾರದ ಬಗ್ಗೆ ಯೋಚಿಸುವಾಗ ತಾನೇಕೆ ಯೋಚಿಸಬಾರದು? ಎಂಬ ಪ್ರಶ್ನೆ ಕಾಡುವುದಕ್ಕೆ ಶುರುವಾಯ್ತು.
ಮನೆಯವರಿಗೆ ಬೇಸರವಾಗಬಾರದು, ಕುಟುಂಬ ಒಡೆಯಬಾರದು ಅಂತ ಎಷ್ಟು ದಿವಸ ಸುಮ್ಮನೆ ಕೂಡುವುದು? ಹಿರಿಮಗನಿಗೆ ಓದಿಸಿದ್ದು ಬಿಟ್ಟರೆ ವಿಶ್ವಣ್ಣ ತನಗೇ ಅಂತ ಏನೂ ಮಾಡಿಕೊಂಡಿರಲಿಲ್ಲ. ಇನ್ನು ಕುಸುಮಕ್ಕನಿಗೋ ಔಷಧಿ ಗುಳಿಗೆ ಬಿಟ್ಟರೆ ಒಂದು ರೇಶಿಮೆ ಸೀರೆಯೋ ಬಂಗಾರವೋ ಮಾಡಿಸಿದ್ದೇನೂ ಇಲ್ಲ. ಎಲ್ಲರಿಗೆ ಹೇಗೋ ಹಾಗೇ ಇವಳಿಗೂ ಮಾಡಿದ್ದು. ಮದುವೆಯಲ್ಲಿ ಮಗನೇ ಒಂದು ಚೆಂದದ ಸೀರೆ ತಂದಿದ್ದ. ಆದ್ರೂ ಯಜಮಾನ ಎಂಬ ಕಿರೀಟ ಹೊತ್ತ ತಪ್ಪಿಗೆ ಏನೇನೋ ಮಾತಾಡಿ ಎಲ್ಲರೂ ತಪ್ಪನ್ನೆಲ್ಲಾ ಇವ್ನ ತಲೆಮೇಲೆ ಹೇರೋದು ನೋಡಿದಾಗ ವಿಶ್ವಣ್ಣನಿಗೆ ನಿಜಕ್ಕೂ ಬೇಸರವೇ ಬಂದಿತ್ತು.
ಅಲ್ಲಾ ಈ ಮನುಷ್ಯರನ್ನು ತೃಪ್ತಿಪಡಿಸುವುದಕ್ಕೆ ಸಾಧ್ಯವಿದೆಯೆ? ನನ್ನ ಇಷ್ಟು ವರ್ಷದ ಅವಧಿಯಲ್ಲಿ ಈ ಕುಟುಂಬಕ್ಕೆ ಯಾವ ಅನ್ಯಾಯ ಮೋಸವನ್ನೂ ಮಾಡಿಲ್ಲ. ಅದು ನನ್ನ ಆತ್ಮಕ್ಕೆ ಗೊತ್ತಿದೆ. ಈಗ ಯಾರು ಏನೇ ಹೇಳಲಿ ಆ ಮಗು ಚಿನ್ನು ನಿವೇದಿತಾಳನ್ನು ಒಪ್ಪುವುದಾದರೆ ಹಿಸ್ಸೆಯಾಗಿಬಿಡಬೇಕು ಎಂದು ಮೊದಲಬಾರಿಗೆ ವಿಶ್ವಣ್ಣ ತನ್ನ ಸಂಸಾರದ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದ.
* * *
ಅದೊಂದು ದಿನ ವಿಶ್ವಣ್ಣ ಚಿನ್ನುವನ್ನು ಕರೆದುಕೊಂಡು ಮಂಗಳೂರಿಗೆ ಹೊರಟೇಬಿಟ್ಟ. ನಿವೇದಿತಾಳನ್ನು ಭೇಟಿಯಾಗಿ ಮದುವೆಯ ವಿಚಾರವನ್ನೂ ಮುಂದಿಟ್ಟ. ವಿಶ್ವಣ್ಣನ ಅಕ್ಕರೆ ಚಿನ್ನುವಿನ ಸ್ನೇಹದ ಸ್ವಭಾವ ಅವಳ ಮನಸ್ಸನ್ನು ಗೆದ್ದಿತ್ತು. ಕೊನೆಗೂ ನಿವೇದಿತಾ ಚಿನ್ನುವನ್ನು ಮದುವೆಯಾಗುವುದಕ್ಕೆ ಖುಷಿಯಿಂದಲೇ ಒಪ್ಪಿಕೊಂಡಳು. ಕೂಡಲೇ ಅನಾಥಾಶ್ರಮಕ್ಕೆ ಹೋಗಿ ಮದುವೆಯ ಮಾತುಕತೆ ಮಾಡಿಕೊಂಡು ಮನೆಗೆ ಬಂದವನೇ ವಿಶ್ವಣ್ಣ ತಮ್ಮ ಸಂಸಾರ ಬೇರೆ ಇರುವುದಾಗಿ ಘೋಷಿಸಿಬಿಟ್ಟ.
ಕೆಲವೇ ದಿವಸಗಳಲ್ಲಿ ಕೂಡುಕುಟುಂಬ ಪಾಲಾಯಿತು. ಅಣ್ಣತಮ್ಮಂದಿರು ಅಕ್ಕತಂಗಿಯರೆಲ್ಲ ಇವನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರೂ ವಿಶ್ವಣ್ಣ ಬಿಡಲಿಲ್ಲ. ಎಲ್ಲರೂ ಕೂಡಿದ್ದ ಮೂಲಮನೆ ಒಡೆಯುವುದು ಬೇಡವೆಂದು ಅದನ್ನು ತಮ್ಮಂದಿರಿಗೆ ಬಿಟ್ಟು ಕೊಟ್ಟಿಗೆಯ ಮಾಡಿನಲ್ಲೇ ತಾನು ಮನೆ ಕಟ್ಟುವ ತನಕ ಉಳಿಯುವ ವ್ಯವಸ್ಥೆ ಮಾಡಿಕೊಂಡ. ಆದರೂ ಅದೇಕೋ ಮನಸ್ಸು ತಾನು ತಪ್ಪು ಮಾಡಿದೆನೇನೋ ಎಂದು ಆಗಾಗ ಪ್ರಶ್ನೆಗೆ ಒಡ್ಡುತ್ತಿತ್ತು.
‘ಅಯ್ಯಾ… ಕತ್ತಲಾತು ಕ್ಯಾನಿಗೆ ಹಾಲು ತುಂಬ್ಸಿ ಆಗ್ಲೇ ಅರ್ಧ ತಾಸಾತು. ಅದೆಂಥ ಯೋಚನೆ ಮಾಡ್ತಾ ಕುಂತಿದ್ದು ಮಾರಾಯ್ರೇ’ – ಎಂದಾಗಲೇ ವಿಶ್ವಣ್ಣ ತನ್ನ ನೆನಪಿನಿಂದ ಹೊರಗೆ ಬಂದಿದ್ದು.
‘ಜನ ಹೇಳಿದ್ದಕ್ಕೆಲ್ಲಾ ಚಿಂತೆ ಮಾಡ್ತಾ ಕೂತ್ರೆ ಬದ್ಕು ಆಗ್ತಾ? ಯಾವಾವ ಕಾಲಕ್ಕೆ ಏನೇನು ಆಗ್ಬೇಕೋ ಅದೆಲ್ಲಾ ಆಗೋದೆ. ಎಲ್ಲವೂ ಋಣಾನುಬಂಧ ಅಂತ ನೀವೇ ಹೇಳ್ತಾ ಇದ್ರಿ. ಆ ಮನೆಯ ಋಣ ಮುಗಿದಿತ್ತು ಅಷ್ಟೆ. ಎಲ್ಲಾ ದೈವೇಚ್ಛೆ. ಇದೊಂದು ನೆಪ ಅಷ್ಟೆ. ನಾವೇನು ಜಗಳ ರಂಪ ಮೋಸ ವಂಚನೆ ಮಾಡಿದ್ದಲ್ಲ. ನಮ್ಮ ಉದ್ದೇಶ ಒಳ್ಳೆಯದು ಅಂದ್ಮೇಲೆ ಎಲ್ಲಾ ಒಳ್ಳೆಯದೇ ಆಗೋದು. ಒಂದನ್ನ ಪಡಕೊಳ್ಳೋಕೆ ಮತ್ತೊಂದನ್ನ ಕಳ್ಕೊಳ್ಳಲೇಬೇಕಲ್ದಾ. ಸ್ವಲ್ಪ ದಿನ ಕಳ್ದ ಮೇಲೆ ಎಲ್ಲಾ ಸರಿ ಹೋಗ್ತು. ಅದ್ರಲ್ಲಿ ತಲೆಕೆಡಿಸಿಕಂಬುದು ಎಂಥಾ ಇದ್ದು…’ ಎಂದ ಕುಸುಮಕ್ಕ ದೀಪ ಹಚ್ಚುವುದಕ್ಕೆ ಒಳಗೆ ಹೋದಳು.
ಕುಸುಮಕ್ಕನನ್ನೇ ನೋಡಿದ ವಿಶ್ವಣ್ಣನಿಗೆ ಇವಳನ್ನು ಏನೋ ಅಂದ್ಕೊಂಡಿದ್ದೆ. ಬದುಕನ್ನ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ ಎನಿಸಿ ಹೆಮ್ಮೆಯೆನಿಸಿತು.
ದಿಂಬದ ಮೇಲಿಂದ ಎದ್ದ ವಿಶ್ವಣ್ಣ ಮಣ್ಣಾದ ಪಂಚೆ ಕೊಡವಿಕೊಳ್ಳುತ್ತ ಆಕಸ್ಮಿಕವಾಗಿ ಹೊನ್ನೆಮರದತ್ತ ಕಣ್ಣು ಹಾಯಿಸಿದ. ಮೇಲಿನ ದೊಡ್ಡ ಹೆಣೆಗೆ ಎರಡು ಭರ್ಜರಿಯಾದ ಜೇನುಗೂಡು ಕಂಡಿತು. ಅರೆ! ಇದೇನು ಪೆಟ್ಟಿಗೆಯ ಜೇನೇ ಇದಕ್ಕೆ ಗೂಡು ಕಟ್ಟಿದ್ದಾ? ಅಥವಾ ಎಲ್ಲಿಂದಲೋ ಹೊಸದಾಗಿ ಬಂದು ಗೂಡು ಕಟ್ಟಿದ್ದೋ? ಎಂದು ಆಶ್ಚರ್ಯಪಟ್ಟ. ಬಹುಶಃ ಪೆಟ್ಟಿಗೆಯ ಜೀನಿಗೆ ಏನೋ ತೊಂದರೆ ಆಗಿರಬೇಕು. ಅದಕ್ಕೇ ಹಾರಿ ಹೋಗಿದೆ. ಮತ್ತೆ ಇನ್ನಾವುದೋ ಜೇನು ಬಂದು ಸೇರಬಹುದು ಎಂದು ಸಮಾಧಾನ ಮಾಡಿಕೊಂಡ.
ಇದೇ ಅಲ್ಲವೇ ಬದುಕು. ಬದುಕಿಗೋಸ್ಕರವೇ ಬದಲಾವಣೆ. ಪರಿಸ್ಥಿತಿಗಳು ಬದಲಾದಾಗ ಹೊಸ ಬದುಕಿಗೆ ಹೊಂದಿಕೊಳ್ಳುವುದೇ ಪ್ರಕೃತಿಯ ನಿಯಮ – ಎಂದುಕೊಂಡ ವಿಶ್ವಣ್ಣ ಒಮ್ಮೆ ಮುಗುಳುನಕ್ಕ. ಆ ನಗುವಿನಲ್ಲಿ ಹಲವಾರು ಅರ್ಥಗಳು ಬೆಸೆದುಕೊಂಡಿದ್ದವು.