ಮೆಚ್ಚುಗೆ ಬಹುಮಾನ ಪಡೆದ ಕಥೆ
ಓರಗೆಯವನಲ್ಲದ ಗಂಡ ಪಕ್ಕದಲ್ಲಿರುವಾಗ ಅದಾವಾಗಲೊ ಗಂಡ-ಹೆಂಡತಿ ಆಟ ಆಡಿದ ಆ ಹುಡುಗನನ್ನು ಮತ್ತೆ ಮತ್ತೆ ಖೋಡಿ ಮನಸ್ಸು ನೆನೆಯುವುದು ನನಗೆ ಅದೆಂಥ ಹುಚ್ಚೆಂದು ಯಾರಿಗೂ ಗೊತ್ತಾಗದಂತೆ ಹಣೆ ಹಣೆ ಬಡಿದುಕೊಳ್ಳುತ್ತೇನೆ. ಆದರೂ ಕಾಡಿಸುವ ಆ ಶನಿ ಹುಡುಗ ಅಲ್ಲೆಲ್ಲೂ ಕಾಣಿಸದೆ ತುಸು ನಿರಾಸೆಗೊಳ್ಳುತ್ತೇನೆ. ಹೌದು… ನನ್ನ ನಿಜದ ಮದುವೆಯ ನಂತರ ಗಂಡ ಪಾತ್ರ ವಹಿಸಿದ್ದ ಆ ಹುಡುಗ ಯಾಕೆ ಬಂದು ಮತ್ತೆ ನನ್ನನ್ನು ನೋಡಲಿಲ್ಲ? – ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟುಕೊಳ್ಳಲಾಗದೆ ಪ್ರಶ್ನೆಯನ್ನೂ ಗಂಡನ ಮನೆಗೆ ಹೊತ್ತೊಯ್ಯತೊಡಗುತ್ತೇನೆ.
ಭಾಗ – ೧
ಅಲ್ಲೆಲ್ಲೊ ಆಡಿಕೊಂಡಿದ್ದ ಎಳೆ ಹುಡುಗಿಯನ್ನು ಮದುವೆಯೆಂಬ ಹೆಸರು ಹೇಳಿ ಅನಾಮತ್ತಾಗಿ ಹಸೆಮಣೆಯ ಮೇಲೆ ಕೂಡ್ರಿಸಿಬಿಟ್ಟಿದ್ದರು. ಇನ್ನೂ ಚಿಕ್ಕವಳಿದ್ದಾಗ ಆಡಿದ ಮದುವೆ ಆಟ ನೆನಪಾಗಿ ನನ್ನದೇ ಮದುವೆ ನಿಜವಾಗಿ ಆಗುತ್ತಿದೆಯೆಂಬ ಕಾರಣದ ಬೆರಗಿಗೆ ಇನ್ನಿಲ್ಲದ ಹರುಷಕ್ಕೀಡಾಗಿದ್ದೆ.
ಗಂಡನ ಹೆಸರು ಹೊತ್ತು ಗಂಡಸಿನ ಆಕಾರದಲ್ಲಿರುವವನೊಬ್ಬನ ಪಕ್ಕದಲ್ಲಿ ಕೂತರೂ ಆತನ ಮುಖವನ್ನು ಎಷ್ಟೇ ಪ್ರಯತ್ನಪಟ್ಟರೂ ಈ ಮದುವೆ ಎಂಬ ನಾಟಕ ಮುಗಿಯುವವರೆಗೂ ನೋಡಲಾಗಿರಲೇ ಇಲ್ಲ.
ನನಗೆ ಗಂಡನಾಗಿ ಪಕ್ಕದ ಕೇರಿಯ ಚಂದನೆಯ ಆ ಓರಗೆಯ ಹುಡುಗನೊಬ್ಬ ನನ್ನ ಪಕ್ಕದಲ್ಲಿ ಕೂತಿರುವುದು ಬೇಕಾಗಿತ್ತು. ಆ ಹುಡುಗನೊಂದಿಗೆ ನಾನು ಆಟವಾಡಿದ್ದೆ, ಜಗಳವಾಡಿದ್ದೆ, ಕೂಡಿ ಕುಣಿದೂ ಇದ್ದೆ. ನಿಜದ ಮದುವೆಯಾಗುವ ಮೊದಲು ಗಂಡ-ಹೆಂಡತಿ ಆಟ ಆಡದೆ, ಕೂಡಿ ಕುಣಿಯದೆ, ಕೂಡಿ ಜಗಳವಾಡದೆ ಅದು ಹೇಗೆ ಮದುವೆಯಾಗುತ್ತದೆಂದೇ ನನಗೆ ತಿಳಿಯದ ವಿಷಯವಾಗಿತ್ತು.
ಅಷ್ಟರಲ್ಲಿ ಮದುವೆ ಊಟದ ರುಚಿ ನೋಡುವ ಆಸೆ ಶುರುವಾಗಿ ಆಗಾಗ ಅಡುಗೆಮನೆ ಕಡೆಯಿಂದ ಬರುವ ಹೊಗೆ; ಊಟ ಮಾಡಿ ಕೈ-ಬಾಯಿ ಒರೆಸಿಕೊಳ್ಳುತ್ತ ಬರುವ ಜನ ಕಾಣಿಸತೊಡಗಿದರು. ನನ್ನ ಮದುವೆಯಲ್ಲಿ ನನಗಿಂತ ಮೊದಲು ಉಂಡು ಬರುವವರ ಮೇಲೆ ಅಕಾರಣವಾಗಿ ಸಿಟ್ಟು ಬರತೊಡಗಿತು. ಅಲ್ಲಿ ಮಾಡಿರಬಹುದಾದ ಸಿಹಿತಿನಿಸುಗಳ ನೆನೆದು ಒಮ್ಮೆಯಂತೂ ಕೂತಲ್ಲಿಂದ ಎದ್ದೂಬಿಟ್ಟಿದ್ದೆ. ಪಕ್ಕದಲ್ಲಿದ್ದ ಅವ್ವ ಜಗ್ಗಿ ಕೂರಿಸಿ ಹಾಗೆಲ್ಲ ಹಸೆಮಣೆಯಿಂದ ಏಳಬಾರದೆಂಬಂತೆ ಕಣ್ಣಲ್ಲೇ ನಯವಾಗಿ ಗದರಿದ್ದಳು.
ಮದುವೆಯ ಹತ್ತುಹಲವು ಕಲಾಪಗಳು ಇಷ್ಟು ಬೇಗ ಮುಗಿಯದವೆನ್ನಿಸಿ ತಲೆ ಮೇಲಿಂದ ಜೋತುಬಿದ್ದ ಹೂಮಾಲೆ ಸರಿಸಿ, ‘ಅವ್ವ, ಹಸಿವು’ ಎಂದುಬಿಟ್ಟಿದ್ದೆ. ಯಾರಿಗೂ ಗೊತ್ತಾಗದಂತೆ ಕುಂಡಿ ಚಿವುಟಿ ನಕ್ಕು ಅವ್ವ ನನ್ನನ್ನು ಸುಮ್ಮಗಾಗಿಸಿದ್ದಳು. ಆವಾಗಲೆ ಈ ಮದುವೆಗೆ ನಾನು ಒಪ್ಪಿಕೊಳ್ಳಬಾರದಾಗಿತ್ತೆಂದು ನಿಜವಾಗಿಯೂ ಅನ್ನಿಸಿಬಿಟ್ಟಿತು ಮತ್ತು ಅವ್ವನ ಮೇಲೆ ಇನ್ನಿಲ್ಲದ ಕೋಪ ಕೂಡ ಬಂತು. ಆ ಕ್ಷಣದಲ್ಲಿ ಆಗೆಲ್ಲ ಪಕ್ಕದ ಕೇರಿಯ ಹುಡುಗನೊಂದಿಗೆ ಆಡಿದ ಮದುವೆಯ ಆಟವೇ ಹೆಚ್ಚು ಚಂದ ಮತ್ತು ಸುಖದಾಯಕವೆನ್ನಿಸಿಬಿಟ್ಟಿತು. ಮದುವೆಯ ಊಟ ಚಂದ, ಮದುವೆಯಲ್ಲ ಎಂಬ ತೀರ್ಮಾನಕ್ಕೆ ಅದಾಗಲೇ ಬಂದುಬಿಟ್ಟಿದ್ದೆ.
ಹೀಗೆ ಮದುವೆಗಿಂತ ಮದುವೆಯ ಊಟವೇ ಚಂದವೆನ್ನಿಸುವ ತೀರಾ ಎಳೆವಯಸ್ಸಿನಲ್ಲಿ ನನ್ನ ಮದುವೆಯಾಗಿ ಹೋಯಿತು.
* * *
ವಿಸ್ಮಯದ ಮದುವೆ ಮುಗಿಯಿತೆಂದು ಸಾರಿದ ಮೇಲೆ ಗಂಡನ ಮನೆಗೆ ಹೋಗಲು ಸಜ್ಜಾಗಿ ನಿಂತ ನನ್ನನ್ನು ನೋಡಿ ಅಲ್ಲಿದ್ದ ಹೆಂಗಸರೆಲ್ಲ ಮುಸಿಮುಸಿ ನಕ್ಕಿದ್ದರು. ನಾನು ಎಷ್ಟೇ ಹಟ ಮಾಡಿದರೂ ಗಂಡನೊಂದಿಗೆ ಕಳಿಸಿಕೊಡದೆ ಅವ್ವ ಮನೆಗೆ ಕರೆದುಕೊಂಡು ಬಂದಿದ್ದಕ್ಕೆ, ಮದುವೆ ಮಾಡಿಕೊಂಡರೂ ತನ್ನೊಂದಿಗೆ ಕರೆದೊಯ್ಯದ ಗಂಡನೆಂಬವನ ಮೇಲೆ ಮೊಟ್ಟಮೊದಲ ಬಾರಿ ಅಸಮಾಧಾನ ಹುಟ್ಟಿತು.
ಮದುವೆಯಾದರೂ ಗಂಡನ ಮನೆಗೆ ಕಳಿಸಿಕೊಡದಿದ್ದರೆ ಅದನ್ನೂ ಒಂದು ಮದುವೆಯೆಂದು ಹೇಗೆ ಕರೆಯುತ್ತಾರೆ ಎಂಬ ಪ್ರಶ್ನೆ ಹೊಸದಾಗಿ ಹುಟ್ಟಿಕೊಂಡಿತು. ಕೇರಿಯ ಆ ಹುಡುಗ ಅದೆಷ್ಟು ಅಚ್ಚುಕಟ್ಟಾಗಿ ಗಂಡನ ಪಾತ್ರ ನಿರ್ವಹಿಸಿ ಕೈಹಿಡಿದು ತನ್ನ ಮನೆಗೆ ಕರೆದುಕೊಂಡು ಹೋದವನಂತೆ ನಟಿಸುತ್ತಿದ್ದನಲ್ಲ! ಹಳೆಯದೆಲ್ಲ ನೆನಪಾಗಿ ಹೊಸದರ ಹೊಳಪು ಕಡಮೆಯಾಗುವುದು; ನಟನೆಗಳು ಬದುಕಿನೊಳಗಿನ ನಿಜ ಘಟನೆಗಳಾಗಲಾರವೆನ್ನಿಸುವುದು.
* * *
ಈ ನಿಜ-ಮದುವೆಯ ಕುರಿತು ತಿರಸ್ಕಾರ ಹುಟ್ಟಿದ್ದು ಮರುದಿನ ಅವ್ವ ನಾನು ಮದುವೆಯಾದ ಹೆಣ್ಣೆಂದು ಹೊರಗೆ ಆಟವಾಡಲು ಬಿಡದಿದ್ದುದಕ್ಕೆ. ಹತ್ತು ಸಲ ಹೇಳಿದ ಮಾತು ಮನಸ್ಸೊಳಗೆ ರಚ್ಚೆ ಹಿಡಿದು ಕೂತು ಮುಂದಿನ ನಾಲ್ಕು ದಿನಗಳಲ್ಲಿ ಆಟ ಆಡಲು ಹೊರಗೆ ಹೋಗುವುದನ್ನೇ ನಿಲ್ಲಿಸಿದ್ದು ನಾನು ಮದುವೆಯಾದವಳೆಂಬ ಕಾರಣಕ್ಕೆ ಆಗಿತ್ತು.
ಇವೆಲ್ಲವುಗಳ ನಡುವೆ ನನ್ನೊಂದಿಗೆ ಮದುವೆಯ ಆಟ ಆಡಿದ ಆ ಹುಡುಗ ಪದೇ ಪದೇ ನೆನಪಾಗುತ್ತಲೇ ಇರುತ್ತಿದ್ದ. ಆತ ಪ್ರತಿ ಸಲ ನನ್ನೊಂದಿಗೆ ಆಟಕ್ಕೆ ಬರುವಾಗೆಲ್ಲ ಕೈಯಲ್ಲಿ ಸಿಹಿಯೊಂದನ್ನು ನನಗಾಗಿ ಹಿಡಿದುಕೊಂಡೇ ಬರುತ್ತಿದ್ದ. ನನಗೆ ಅತ್ಯಂತ ಆಕರ್ಷಣೀಯವೆನಿಸಿದ್ದು ಮದುವೆಯಾಟದ ಕೊನೆಯ ಭಾಗವಾಗಿ ಬರುವ ಒಬ್ಬರಿಗೊಬ್ಬರು ಅಪ್ಪಿ ಮಲಗುತ್ತಿದ್ದುದು. ಆ ಹುಡುಗ ಗಂಡನ ಪಾತ್ರದಲ್ಲಿ ಅದೆಷ್ಟೊಂದು ನಾಜೂಕಿನಿಂದ ಗಲ್ಲ ಸವರಿ ಮುತ್ತಿಡುತ್ತಿದ್ದನಲ್ಲ. ಅದನ್ನೆಲ್ಲ ತನ್ನ ಅಪ್ಪ-ಅವ್ವರನ್ನು ನೋಡಿ ಕಲಿತಿದ್ದನಂತೆ! ನನಗೆ ಮತ್ತೆ ಮತ್ತೆ ಆ ಮುತ್ತಿನ ನೆನಪಾಗಿ ಆ ಹುಡುಗನನ್ನು ಹುಡುಕಿಕೊಂಡು ಹೋಗಬೇಕೆನ್ನಿಸುವುದು.
ನಿಜದ ಮದುವೆಯಾದವನು ನನ್ನ ಕೈಹಿಡಿದು ತನ್ನೊಂದಿಗೆ ಕರೆದೊಯ್ಯದೆ ಇಲ್ಲಿ ಯಾಕೆ ಹೀಗೆ ಬಿಟ್ಟು ಹೋದನೆಂದು ಆತನ ಮೇಲೆ ಸಿಟ್ಟು ಒದ್ದುಕೊಂಡು ಬರುವುದು.
ಇತ್ತೀಚೆಗೆ ಈ ಮದುವೆಯ ಭೂತ ಅದು ಹೇಗೆ ಬೆಳೆದು ಭೂಮ್ಯಾಕಾಶವಾಗಿ ನಿಂತುಬಿಟ್ಟಿತೆಂದರೆ ನನ್ನೊಳಗಿನ ಹೆಂಡತಿ ಸೀರೆ ಉಟ್ಟುಕೊಳ್ಳತೊಡಗುತ್ತಾಳೆ.
ಇದ್ದಕ್ಕಿದ್ದಂತೆ ಒಂದು ವಿಷಯದ ಕುರಿತು ವಿವರಣೆ ಬೇಕೆನ್ನಿಸಿ ಮರದ ಕೆಳಗೆ ಕೂತ ಅಜ್ಜಿಯ ಹತ್ತಿರ ಹೋಗಿ, ನನ್ನ ಗಂಡ ಯಾಕೆ ನನಗೆ ಓರಗೆಯವನಾಗಿಲ್ಲ? – ಎಂದು ಕೇಳುತ್ತೇನೆ. ಅದಕ್ಕೆ ಅಜ್ಜಿ ಸೀದ ಗತಕಾಲಕ್ಕೇ ಹೋದವಳೆಂಬಂತೆ ಕಾಣಿಸಿ ಬಾವಿಯ ಆಳದಿಂದ ಸೇದಿಕೊಂಡು ಬಂದಂಥ ಧ್ವನಿಯಲ್ಲಿ: ಓರೆಯವರಾರಾದರೂ ಗಂಡರಾಗ್ತಾರೆಯೆ? – ತಿರುಗಿ ಪ್ರಶ್ನಿಸುವಳು. ಹಾಗಾದರೆ ನನ್ನೋರಗೆಯವನಾದ ಪಕ್ಕದ ಕೇರಿಯ ಆ ಹುಡುಗ ನನಗೆ ಗಂಡನಾಗಲು ಆಗುವುದಿಲ್ಲವೆ? – ಮತ್ತೊಂದು ಪ್ರಶ್ನೆಯನ್ನು ಒಳಗಿಟ್ಟುಕೊಂಡು ಇನ್ನು ಮುಂದೆ ಓರಗೆಯ ಹುಡುಗರೊಂದಿಗೆ ಗಂಡ-ಹೆಂಡತಿ ಆಟ ಆಡದಿರುವುದಾಗಿ ಒಳಗೊಳಗೇ ತೀರ್ಮಾನಿಸಿಕೊಳ್ಳುತ್ತೇನೆ.
ಏನೇ… ಗಂಡನ ಮನೆಗೆ ಯಾವಾಗ ಹೋಗ್ತಿ? – ಎಂದು ಛೇಡಿಸುವ ಅಕ್ಕಪಕ್ಕದ ಮನೆಯ ಹೆಂಗಸರಿಗೆ ಉತ್ತರ ಏನು ಹೇಳುವುದೆಂದು ತಿಳಿಯದೆ ಗೊಂದಲದಲ್ಲಿ ಹಲ್ಲು ತೋರಿಸುತ್ತೇನೆ. ಆಗೆಲ್ಲ ನನಗೆ ನನ್ನ ಗಂಡನ ಮನೆಗೆ ಕಳಿಸದ ಅವ್ವ ಊರ್ಮಿಳೆಯನ್ನು ಲಕ್ಷ್ಮಣನಿಂದ ದೂರ ಮಾಡಿದ ಕೈಕೇಯಿಯ ಹಾಗೆ ಕಾಣಿಸುವಳು. ಯಾಕೆ ಹಾಗೆ ನೋಡ್ತೀಯೆ? – ಅವ್ವ ಕೇಳಿದ್ದಕ್ಕೆ ಅಲ್ಲಿಂದ ಸುಮ್ಮನೆ ಕಾಲುಕೀಳುತ್ತೇನೆ. ನನ್ನೊಳಗಿನ ತುಳುಕಾಟ ಅವ್ವನಿಗೆ ಅದಾಗಲೆ ಅರ್ಥವಾಗತೊಡಗಿತ್ತು. ಗಂಡನ ಮನೆಗೆ ಹೋಗಬೇಕಾದರೆ ನೀನು ದೊಡ್ಡವಳಾಗಿರಬೇಕು – ಎಂದು ಅಜ್ಜಿ ಹೇಳುವ ಸಮಾಧಾನಕ್ಕೆ ಸೀರೆ ಉಟ್ಟು ಉದ್ದಕ್ಕೆ ಅಜ್ಜಿಯ ಎದುರು ನಿಂತು: ಇಷ್ಟು ಎತ್ತರವಿರುವ ನಾನು ಅದು ಹೇಗೆ ಸಣ್ಣವಳು? – ಪ್ರಶ್ನಿಸುತ್ತೇನೆ. ದೊಡ್ಡವರಾಗುವುದೆಂದರೆ ಎತ್ತರ ಬೆಳೆಯೋದಲ್ಲ ಪೆದ್ದೆ – ಎನ್ನುವ ಅಜ್ಜಿಯೇ ನನಗೆ ಪೆದ್ದಿಯೆನಿಸುತ್ತಾಳೆ. ಹಾಗಿದ್ದಲ್ಲಿ ದೊಡ್ಡವಳಲ್ಲದ ನನ್ನನ್ನು ಆ ದೊಡ್ಡ ಗಂಡಸು ಮದುವೆ ಯಾಕಾದ? – ಮತ್ತೆ ಅಜ್ಜಿಯನ್ನು ಪ್ರಶ್ನಿಸುತ್ತೇನೆ. ಉತ್ತರಕ್ಕೂ ಕಾಯದೆ ಕುತೂಹಲದಿಂದ ‘ನಿನ್ನ ಮದುವೆಯಾದಾಗ ನೀನು ಎಷ್ಟು ದೊಡ್ಡವಳಿದ್ದಿ?’ – ಅಜ್ಜಿಯನ್ನು ಕೆದಕುತ್ತೇನೆ. ತನ್ನದೇ ಮದುವೆಯ ವಿಷಯ ಪ್ರಸ್ತಾಪಕ್ಕೆ ಬಂದಾಗ ಅಜ್ಜಿ ತುಸು ನಾಚಿದವಳಂತೆ ಕಾಣಿಸಿ, ‘ನನ್ನ ಮದುವೆ ತೊಟ್ಟಿಲಲ್ಲಿ ಆಗಿತ್ತು’ ಎನ್ನುವ ಆಘಾತಕಾರಿ ಸುದ್ದಿ ಕೇಳಿ ಯಾವುದೂ ಏನೆಂದರೆ ಏನೂ ಅರ್ಥವಾಗದೆ ನಿಜದ ಮದುವೆಯ ಗೊಡವೆಯನ್ನು ಅಲ್ಲಿಗೇ ಬಿಟ್ಟು ಪಕ್ಕದ ಕೇರಿಯ ಹುಡುಗನೊಂದಿಗೆ ಆಡಿದ ಮದುವೆ ಆಟ ನೆನಪಾಗಿ ಮನಸ್ಸು ಮುದಗೊಂಡು ಅಂಗಳದ ಕಟ್ಟೆಯ ಮೇಲೆ ನಿಂತು ದೂರ ದೂರದವರೆಗೆ ಕಣ್ಹಾಯಿಸಿ ಹಾಳಾದವನು ಅದೆಲ್ಲಿ ಹೋದನೆಂದು ಆ ಹುಡುಗನ ಮೇಲೆ ಸಿಡಿಮಿಡಿಗೊಳ್ಳುತ್ತೇನೆ. ಗಂಡನ ಮನೆಗೆ ಹೋಗುವುದನ್ನು ಮಾತ್ರ ತಲೆಗೆ ತುಂಬಿಸಿಕೊಂಡ ನನ್ನಲ್ಲಿ ಪಕ್ಕದ ಕೇರಿಯ ಆ ಹುಡುಗ ನನ್ನ ಕೆನ್ನೆಯನ್ನು ನವುರಾಗಿ ಸವರಿ ನಾಜೂಕಿನಲ್ಲಿ ಮುತ್ತಿಕ್ಕಿದ ನೆನಪು ದಿನೇ ದಿನೇ ಕಾಡತೊಡಗುವುದು.
* * *
ಇಷ್ಟೆಲ್ಲದರ ಗುದುಮುರಿಗೆಯ ನಡುವೆ ಒಂದು ರಾತ್ರಿ ಮಲಗುವಾಗ ಹುಡುಗಿಯಾಗಿದ್ದ ನಾನು ಬೆಳಗಾಗುವಷ್ಟರಲ್ಲಿ ಏಕಾಏಕಿ ಹೆಂಗಸಾಗಿಬಿಟ್ಟಿದ್ದೆ.
ಈಗ ಮತ್ತೊಂದು ಸಂಭ್ರಮ ಮನೆಯಲ್ಲಿ. ಮೆತ್ತಿಕೊಂಡ ಅರಿಶಿಣ ತೊಳೆದುಕೊಂಡು ನೋಡಿದ ಮುಖದಲ್ಲಿ ಮದುಮಗಳ ಕಳೆಯಂತಹುದೊಂದು ಕಂಡಂತಾಗಿ ಕನ್ನಡಿಯೊಳಗೆ ಕಾಣಿಸಿದ ನನ್ನದೇ ಪ್ರತಿಬಿಂಬಕ್ಕೆ ನಾನೇ ನಾಚಿ ಕೆಂಪಾದ ವೇಳೆಯಲ್ಲಿ ಮದುವೆಯಾಗಿ ಬಿಟ್ಟು ಹೋದ ಗಂಡ ನೆನಪಾಗಿಬಿಡುವನು.
* * *
ತಿಂಗಳೊಪ್ಪತ್ತಿನಲ್ಲಿ ಬಂಡಿಯೇರಿ ಬಂದ ಗಂಡ ನನಗದೇಕೆ ಮದುಮಗನ ಹಾಗೆ ಕಾಣಿಸಲಿಲ್ಲವೆಂದು ಈಗಲೂ ಅರ್ಥವಾಗುತ್ತಿಲ್ಲ! ಎಷ್ಟು ಸಾರಿ ಕದ್ದು ನೋಡಿದರೂ ನನಗವನದು ಒಂದೇ ಬಾಜುವಿನ ಮುಖ ಮಾತ್ರ ಕಾಣಲು ಸಾಧ್ಯವಾಗುತ್ತಿತ್ತು. ಅದು ಯಾವ ಕಾರಣ ಹೇಳಿಕೊಂಡು ಆದ ನಿರಾಸೆಯಿಂದೀಚೆ ಬರಬೇಕೆಂದು ಅರ್ಥವಾಗದ ಹೊತ್ತಿನಲ್ಲಿ ಗಂಡನ ಮನೆಯ ಕಡೆ ಮುಖ ಮಾಡಿ ನಿಂತ ಬಂಡಿಯನ್ನು ಅಳುತ್ತ ಏರಿ ಓರಗೆಯವನಾಗಿರದ ಗಂಡನ ಪಕ್ಕದಲ್ಲಿ ಹಿಡಿಯಾಗಿ ಕವುಚಿ ಕುಳಿತಾಗಿತ್ತು. ಕೊನೆಯ ಬಾರಿಗೆಂಬಂತೆ ಪಕ್ಕದ ಕೇರಿಯ ಹುಡುಗ ಅಲ್ಲೆಲ್ಲಾದರೂ ಕಾಣಸಿಗುವನೇನೊ ಎಂದು ಅತ್ತ ಇತ್ತ ಅವನನ್ನು ಒಂದು ಕ್ಷಣಕ್ಕೆ ಎಲ್ಲರ ಕಣ್ಣು ತಪ್ಪಿಸಿ ಹುಡುಕಿಬಿಟ್ಟಿದ್ದೆ.
ಓರಗೆಯವನಲ್ಲದ ಗಂಡ ಪಕ್ಕದಲ್ಲಿರುವಾಗ ಅದಾವಾಗಲೊ ಗಂಡ-ಹೆಂಡತಿ ಆಟ ಆಡಿದ ಆ ಹುಡುಗನನ್ನು ಮತ್ತೆ ಮತ್ತೆ ಖೋಡಿ ಮನಸ್ಸು ನೆನೆಯುವುದು ನನಗೆ ಅದೆಂಥ ಹುಚ್ಚೆಂದು ಯಾರಿಗೂ ಗೊತ್ತಾಗದಂತೆ ಹಣೆ ಹಣೆ ಬಡಿದುಕೊಳ್ಳುತ್ತೇನೆ. ಆದರೂ ಕಾಡಿಸುವ ಆ ಶನಿ ಹುಡುಗ ಅಲ್ಲೆಲ್ಲೂ ಕಾಣಿಸದೆ ತುಸು ನಿರಾಸೆಗೊಳ್ಳುತ್ತೇನೆ. ಹೌದು… ನನ್ನ ನಿಜದ ಮದುವೆಯ ನಂತರ ಗಂಡ ಪಾತ್ರ ವಹಿಸಿದ್ದ ಆ ಹುಡುಗ ಯಾಕೆ ಬಂದು ಮತ್ತೆ ನನ್ನನ್ನು ನೋಡಲಿಲ್ಲ? – ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟುಕೊಳ್ಳಲಾಗದೆ ಪ್ರಶ್ನೆಯನ್ನೂ ಗಂಡನ ಮನೆಗೆ ಹೊತ್ತೊಯ್ಯತೊಡಗುತ್ತೇನೆ.
* * *
ಬಂಡಿಗಾಲಿಯ ಕೆಳಗೆ ಉದ್ದಕ್ಕೆ ಮಲಗಿದ ಜೀವನದ ಹಾದಿ ಸವೆಸಲು ಓರಗೆಯವನಲ್ಲದ ಗಂಡನೊಂದಿಗಿನ ನನ್ನೀ ಪಯಣ ಅಭೂತಪೂರ್ವವೆನ್ನಿಸುವುದು. ಆದರೂ ಆ ಹುಡುಗ ದೂರದಿಂದಲಾದರೂ ಸರಿ ಒಂದೇ ಒಂದು ಬಾರಿ ಕೈಯಾಡಿಸಿ ವಿದಾಯವನ್ನಾದರೂ ಹೇಳಿದ್ದರೆ ಚೆನ್ನಾಗಿರುತ್ತಿತ್ತೆಂದು ಮತ್ತೆ ಅನ್ನಿಸಲು ಶುರುವಾಗುತ್ತದೆ. ಪಕ್ಕದಲ್ಲಿ ಗಂಭೀರವಾಗಿ ಕುಳಿತ ನನಗಿಂತ ಅವೆಷ್ಟೋ ದೊಡ್ಡವನಾದ ಗಂಡನೊಂದಿಗೆ ಅದು ಹೇಗೆ ಜಗಳವಾಡುವುದು ಮತ್ತು ಅದು ಹೇಗೆ ಸಲುಗೆಯಿಂದ ಗಂಡ-ಹೆಂಡತಿಯಾಟವಾಡುವುದೆಂದು ತಿಳಿಯದೆ ದಿಗಿಲಾಗುತ್ತದೆ.
* * *
ಊರು ತಲಪಿ ಅಲ್ಲಿಯವರೆಗಿನ ಜನ್ಮದ ಕೊಳೆಯನ್ನು ತೊಳೆದುಕೊಳ್ಳುವವನಂತೆ ಜಳಕಕ್ಕೆಂದು ಹೊಳೆಗೆ ಹೋದ ಗಂಡ ನೀರಿನಲ್ಲಿ ಅಚಾನಕ್ಕಾಗಿ ಹೋದವ ಮತ್ತೆ ಮೇಲೆ ಏಳಲಿಲ್ಲವೆಂಬ ದುರ್ಘಟನೆಯ ವಾರ್ತೆ ಕೇಳಿ ಬವಳಿ ಬಸವಳಿದು ಮೂರ್ಛೆ ಹೋಗಿಬಿಟ್ಟೆ. ನನ್ನ ಕಾಲ್ಗುಣದ ಬಗ್ಗೆ ಅತ್ತೆಯ ಮನೆಯಲ್ಲಿ ಕೊಂಕುಮಾತುಗಳು ತಿವಿದು ನೋಯಿಸತೊಡಗಿದವು. ಸತ್ತ ಗಂಡನ ಗೋರಿಯನ್ನೂ ತೋರಿಸದೆ ಗಂಡನ ಮನೆಯಿಂದ ನನ್ನನ್ನು ಸಾಗಹಾಕಿದರು. ಗಂಡನ ಮನೆಯಲ್ಲಿ ನನಗೆ ಸೊಸೆಯ ಸ್ಥಾನ ಸಿಗದಿದ್ದುದಕ್ಕೆ ನಾನು ಕಿಂಚಿತ್ತೂ ತಲೆಕೆಡಿಸಿಕೊಳ್ಳಲಿಲ್ಲ. ಮದುವೆಯಾಯಿತೆಂಬುದಕ್ಕೆ ಪುರಾವೆಯಾಗಿ ಕಿತ್ತುಕೊಂಡ ತಾಳಿ, ಅಳಿಸಿಹಾಕಿದ ಸಿಂದೂರ ವೈಧವ್ಯಕ್ಕೆ ಸಾಕ್ಷಿ ಹೇಳುತ್ತವೆ. ಇವರು ಇವರಿಗೆ ಕಟ್ಟುವ ತಾಳಿಯೆಂದು ಮಾಡಿಸಿಕೊಂಡು ಬಂದರಷ್ಟೇ ಸಾಲದು; ಹಾಗೆ ಮಾಡಿಸಿಕೊಂಡು ಬಂದ ತಾಳಿ ಕೊರಳೊಳಗುಳಿವ ಭಾಗ್ಯವೂ ಬರೆದಿರಬೇಕಾಗುತ್ತದೆ.
ಹೇಳದೆ ಕೇಳದೆ ಅಗಲಿಹೋದವರೆಲ್ಲ ಕುತ್ತಿಗೆ ಹಿಸುಕುವ, ಕರುಳು ಬಗೆವ ನೆನಪುಗಳಾಗಿಬಿಡುತ್ತಾರೆ. ವಿಪರ್ಯಾಸವೆಂದರೆ ಅಂಥ ಯಾವ ನೆನಪುಗಳೂ ನಾಲಗೆಯ ರುಚಿ ಬದಲಿಸುವುದಿಲ್ಲ. ಸತ್ತವರನ್ನು ನೆನಪಿಸಿಕೊಳ್ಳಲು ಕ್ಯಾಲೆಂಡರ್ ತಿರುಗಿಸಬೇಕಾಗುತ್ತದೆ. ಮರಣದ ದಿನ ಹೋಳಿಗೆ ಪಾಯಸ ಸತ್ತವರಿಗಿಷ್ಟವೆಂದು ಹಬ್ಬದೂಟ ಮಾಡುವುದಿರುತ್ತದೆ!
* * *
ಭಾಗ – ೨
ನೀರಲ್ಲಿ ಮುಳುಗಿ ಸಾಯುವ ಗಂಡಂದಿರ ಹೆಂಡತಿಯರು ಮಾತ್ರ ವಿಧವೆಯರಾಗಿಬಿಡುತ್ತಾರೆಂಬ ಶಂಕೆ ಹುಟ್ಟಿ, ಮನೆಯ ಮುಂದಿನ ಮುಪ್ಪಾದ ಹುಣಸೆಮರದ ಕೆಳಗೆ ಕುಳಿತ ಮರದಷ್ಟೇ ಹಣ್ಣಾದ ಅಜ್ಜಿಯಲ್ಲಿ ಕೇಳುತ್ತೇನೆ: ಅಜ್ಜ ಹೇಗೆ ಸತ್ತ? – ಎಂದು.
ಊರಿಗೆ ಬಂದವಳು ನೀರಿಗೂ ಬರುವಳು. ಮೊದಲೊಮ್ಮೆ ಗಂಡನ ಪಾತ್ರ ಧರಿಸಿದ ಅದೇ ಹುಡುಗ ಬಾವಿಯ ಹತ್ತಿರ ನನ್ನ ಗಂಡ ಸಾಯುವುದನ್ನೇ ಕಾದು ಕೂತವನಂತೆ ಅಚಾನಕ್ಕಾಗಿ ಕಾಣಸಿಗುತ್ತಾನೆ. ಹಾಳಾದವನು ಇಷ್ಟು ದಿವಸ ಅದೆಲ್ಲಿ ಹೋಗಿದ್ದನೊ ಏನೊ. ಹಾಗೆ ಒಮ್ಮೆ ಕಾಣಿಸಿದ ನಂತರ ಪ್ರತಿ ದಿನ ಅದೇ ಸಮಯದಲ್ಲಿ ಬಾವಿಯ ಹತ್ತಿರ ಕಾಣಸಿಗುವ ಅವನನ್ನು ಮಾತನಾಡಿಸದೆ ಇರಲಾಗುವುದಿಲ್ಲ. ನಾಲ್ಕು ಜನರೆದುರು ಹೇಗೆ ಮತ್ತು ಏನೂಂತ ಮಾತನಾಡುವುದೆಂದು ತಿಳಿಯದೆ ದಿನಗಳನ್ನು ತಳ್ಳುತ್ತೇನೆ. ನನ್ನ ಮದುವೆಯೊ ಅಥವಾ ನನ್ನ ಗಂಡನ ಸಾವೊ ಅವನನ್ನು ಮಾತನಾಡದೆ ಗಂಭೀರವಾಗಿಸಿದೆಯೆಂದು ನಾನಂದುಕೊಳ್ಳುತ್ತೇನೆ. ಅವನ ಕಣ್ಣಲ್ಲಿ ನನ್ನ ಕುರಿತಾಗಿ ಅದಾವ ಭಾವನೆಯಿದೆಯೆಂದು ತಿಳಿದುಕೊಳ್ಳುವಾಸೆಯಾಗುತ್ತದೆ. ಮಾತನಾಡದೆ ಇರಲು ನಮ್ಮಿಬ್ಬರ ನಡುವೆ ಈ ಹರೆಯದ ಗೋಡೆಯೊಂದಿರುವುದರ ಸ್ಪಷ್ಟ ಕಲ್ಪನೆ ಸಿಗುತ್ತದೆ.
ಒಮ್ಮೆ ಬಾವಿ ದಂಡೆಯಲ್ಲಿ ಯಾರೂ ಇಲ್ಲದಾಗ ನನ್ನ ಕೊಡಕ್ಕೆ ನೀರು ಸೇದಿ ಕೊಟ್ಟವ ಮಾತಾಡಲು ಶಬ್ದಗಳು ಸಿಗದೆ ತೊದಲುತ್ತಾನೆ. ಪ್ರಾಯಶಃ ಆತನಿಗೆ ನಾನು ದೂರದೂರಿನವನನ್ನು ಮದುವೆಯಾಗಿಬಿಟ್ಟಿದ್ದಕ್ಕೆ ತಕರಾರಿದ್ದಿರಬೇಕೆಂದುಕೊಳ್ಳುತ್ತೇನೆ. ಸತ್ತ ಗಂಡ ನಮ್ಮಿಬ್ಬರ ನಡುವೆ ಅಡ್ಡಗೋಡೆಯ ಹಾಗೆ ನಿಂತಿರುವುದರ ಸುಳುಹು ಇಬ್ಬರಿಗೂ ಸಿಗುತ್ತದೆ.
ಮತ್ತೊಂದು ದಿನ ಯಾರೂ ಇಲ್ಲದಾಗ, ಆಗೆಲ್ಲ ಪ್ರತಿಬಾರಿ ಭೇಟಿಯಾಗಲು ಬರುವಾಗ ಸಿಹಿ ತಂದು ತಿನ್ನಿಸುತ್ತಿದ್ದ ಹುಡುಗ ನೀನೆಯೆ? – ಎಂದು ನಾನೇ ಮಾತಿಗಿಳಿಯುತ್ತೇನೆ. ಅಚಾನಕ್ಕಾಗಿ ಆಡಿದ ನನ್ನ ಮಾತಿಗೆ ಹುಡುಗ ತಬ್ಬಿಬ್ಬಾದವನಂತೆ ಕಂಡರೂ ಮೊದಲಿನ ಸಲುಗೆ ನೆನೆದು ಹೌದೆಂದು ತುಸು ನಾಚಿಕೊಂಡು ನಸುನಗುತ್ತ ಗೋಣು ಹಾಕುತ್ತಾನೆ. ಅವನ ನಗು ಯಾತಕ್ಕೆಂದು ನನಗೆ ಅರ್ಥವಾಗಿಬಿಡುತ್ತದೆ. ಈಗೀಗ ಬಹಳಷ್ಟು ವಿಷಯಗಳು ಅರ್ಥವಾಗತೊಡಗಿ ಅಜ್ಜಿಯ ಮುಂದೆ ಯಾವುದೇ ಪ್ರಶ್ನೆ ಒಯ್ಯುವುದಿಲ್ಲ. ಹುಡುಗಿಯ ಹಾಗೆ ನಾಚಿ ಸಂಕೋಚದ ಮುದ್ದೆಯಾದವನನ್ನು: ಮತ್ತೇಕೆ ಈಗ ಏನೂ ತರುತ್ತಿಲ್ಲ? ಗಂಡ ಸತ್ತರೆ ಸಿಹಿ ತಿನ್ನಬಾರದಾ? – ಕೇಳುತ್ತೇನೆ. ನನ್ನ ಪ್ರಶ್ನೆಗೆ ಅದು ಯಾಕೋ ನಿಂತಲ್ಲೇ ಎಡವಿದಂತಾದ ಆತ ಮುಖ ಕೂಡ ನನ್ನ ಕಡೆ ತಿರುಗಿಸದೆ ತನ್ನ ನೆರಳಿನೊಂದಿಗೆ ಅಕಾರಣವಾಗಿ ನಡೆದು ಹೋಗಿಬಿಡುತ್ತಾನೆ. ಅವನು ಹಾಗೆಲ್ಲ ತಡವರಿಸಿ ಬಿಳಚಿಕೊಂಡಿದ್ದು ಯಾಕೆಂದು ತಿಳಿಯುವುದಿಲ್ಲ.
* * *
ಬಾವಿಯ ಇನ್ನೊಂದು ತುದಿಯಲ್ಲಿ ಎವೆಯಿಕ್ಕದೆ ನೋಡುತ್ತ ನಿಂತವನನ್ನು ಹಾಗೆಯೆ ನೋಡುತ್ತ ಗಂಡನ ಪಾತ್ರಧಾರಿಯಾಗಿ ಕೊಟ್ಟ ಹೂಮುತ್ತು ನೆನಪಾಗಿ ಅಷ್ಟು ಜನರೆದುರೇ ಕೆಂಪಾಗಿಬಿಟ್ಟ ಕೆನ್ನೆಯು ಎಲ್ಲಿ ಯಾರಿಗಾದರೂ ಕಾಣಿಸೀತೆಂದು ಕೆನ್ನೆಯು ಮೇಲೆ ಕೈಯಿಟ್ಟುಕೊಳ್ಳುತ್ತೇನೆ. ಅದೇ ಕ್ಷಣಕ್ಕೆ ಅವನೂ ನಾನು ನೆನಪಿಸಿಕೊಳ್ಳುತ್ತಿದ್ದುದನ್ನೇ ನೆನಪಿಸಿಕೊಳ್ಳುತ್ತಿದ್ದನೆಂಬಂತೆ ಹಾಗೆ ನಾನು ಕೆನ್ನೆಯ ಮೇಲೆ ಕೈಯಿಟ್ಟುಕೊಳ್ಳುವುದಕ್ಕೂ ಆತ ಚಿಗುರು ಮೀಸೆಯಡಿ ನಗುವುದಕ್ಕೂ ಸರಿಹೋಗುತ್ತದೆ. ಈಗ ನಾಚಿ ನೀರಾಗುವ ಸರದಿ ನನ್ನದಾಗುತ್ತದೆ. ಹೀಗೆ ಮಾತಿಲ್ಲದೆ ನಾವು ಬಹಳಷ್ಟನ್ನು ಮಾತನಾಡಿಕೊಳ್ಳುತ್ತೇವೆ.
ನಮ್ಮಿಬ್ಬರ ನಡುವೆ ಬೆಸೆದಿರಬಹುದಾದ ಕೊಂಡಿಯೆಂದರೆ ಆಗೆಲ್ಲ ನಾವಿಬ್ಬರೂ ಆಡಿದ ಗಂಡ-ಹೆಂಡತಿ ಆಟ ಎನ್ನುವುದು ಇಬ್ಬರಿಗೂ ನಮ್ಮಗಳ ಊಳಿಡುವ ಹರೆಯದಷ್ಟೇ ಸ್ಪಷ್ಟವಾಗಿದೆ.
* * *
ಜರ್ಜರಿತವಾದ ಮನಸ್ಸು ಶುರುವಿಗೂ ಮೊದಲೇ ಮುಗಿದುಹೋದ ಮದುವೆಯಲ್ಲಿ ತೊಡರಾಗಿ ಸಿಲುಕಿಕೊಳ್ಳುತ್ತದೆ. ಮದುವೆಯಾದರೂ ಒಮ್ಮೆಯೂ ಗಂಡ-ಹೆಂಡತಿ ಆಟ ಆಡದವ ಅದೆಂಥ ಗಂಡ? – ಎಂದೆನಿಸಿ ಒಂದು ಕ್ಷಣಕ್ಕೆ ನನ್ನ ಬದುಕಿನಲ್ಲಿ ನಿಜದ ಮದುವೆಯೊಂದು ಆಗಿರದೆ ಇದ್ದಿದ್ದರೆ ಆಟದ ಮದುವೆ ಆಡಿಕೊಳ್ಳುತ್ತ ಸುಖವಾಗಿ ಇದ್ದಿರುತ್ತಿದ್ದೆ ಎಂದು ನಿಡುಸುಯ್ಯುತ್ತೇನೆ. ಬದುಕಿನ ದಾರಿಯಲ್ಲಿ ನಜ್ಜುಗುಜ್ಜಾಗುವ ಕನಸುಗಳೆಲ್ಲ ಆಕಾರ ಕಳೆದುಕೊಂಡು ಹೊತ್ತುಗೊತ್ತಿಲ್ಲದೆ ಕುತ್ತಿಗೆ ಹಿಸುಕಲು ಏರಿ ಬರುತ್ತವೆ. ನನ್ನ ಜೀವನವೊಂದು ಕಾಗದದ ಹೂವಾಯಿತೆಂದು ಜೀವ ಹುರಪಳಿಸುತ್ತದೆ. ಎಲ್ಲೆಲ್ಲಿಂದಲೊ ಬರುವ ಅಲೆಗಳು ಸಂದೇಶ ಹೊತ್ತು ತರುತ್ತಿರಲಿ. ಏನೆಂದು ಹೋಗಿ ನೋಡುವಷ್ಟರಲ್ಲಿ ಕನಸುಗಳು ಅಳಿಸಿಹೋಗದಿರಲಿ – ನನಗೆ ನಾನೇ ಹಾರೈಸಿಕೊಳ್ಳುತ್ತೇನೆ.
ಗಂಡ ಸತ್ತುಹೋದುದಕ್ಕೆ ತಪ್ಪಿಹೋದ ಸುಖಗಳನ್ನು ನೆನೆದು ರೋದಿಸುತ್ತಿದ್ದ ನನಗೆ ಕಳೆದುಹೋದ ಬಾಲ್ಯದ ಹುಡುಗ ಹೊಸ ಹುರುಪು, ಜೀವನೋತ್ಸಾಹವ ಮೊಗೆದು ತಂದು ತುಂಬಿ ನನ್ನನ್ನು ಮೊದಲಿನ ಹುಡುಗಿಯನ್ನಾಗಿಸಿದ್ದ. ಆದರೆ ಮತ್ತೊಂದು ಘಳಿಗೆಗೆ ಅನಿಸುವುದೇನೆಂದರೆ: ಉದ್ದಕ್ಕೂ ಮೈಯಗಲಿಸಿಕೊಂಡು ಮಲಗಿದ ಜರೂರತ್ತುಗಳನ್ನು ಮುಂದಿಟ್ಟುಕೊಂಡು ಮನುಷ್ಯರು ಏನೆಲ್ಲ ಹೊಂದಾಣಿಕೆ ಮಾಡಿಕೊಳ್ಳಲು ತಯಾರಾಗುತ್ತಾರಲ್ಲ! ಮನುಷ್ಯರನ್ನು ಅನುಕೂಲತೆಗಳು ಅದು ಹೇಗೆ ಬಾಗಿಸುತ್ತವೆ, ಮಣಿಸುತ್ತವೆ ಎಂಬೂದನ್ನು ಯೋಚಿಸುತ್ತ ಹೋದಂತೆ ಅಸಹ್ಯದ ಅಲೆಯೊಂದು ನನ್ನಿರವನ್ನೇ ಮುಳುಗಿಸಿ ಏರಿ ಬರುತ್ತಿರುವಂತೆ ಭಾಸವಾಗುತ್ತದೆ. ಈ ಎಲ್ಲ ಗೊಂದಲಗಳ ನಡುವೆ ಕಾದ ಹಂಚಿನಂತಾಗಿದ್ದ ಜೀವ ಆರಿ ತಂಪಾಗತೊಡಗಿ ನನ್ನಲ್ಲಾದ ಬದಲಾವಣೆ ಮನೆಯಲ್ಲೂ ತುಸು ನೆಮ್ಮದಿ ತರಿಸತೊಡಗುವುದು!
* * *
ಭಾಗ – ೩
ಚಂದದ ಕನಸುಗಳನ್ನು ಕಟ್ಟಿಕೊಂಡು ರಂಗಿನ ಬದುಕಿನ ಬಂಡಿಯೇರಿ ಗಂಡನ ಮನೆಗೆ ಹೋದವಳು ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಕಾಲನ ತೆಕ್ಕೆಗೆ ಸಿಕ್ಕು ಬುಡಮೇಲಾದ ಜೀವನದ ನಾವೆಯಿಂದ ಸಿಕ್ಕ ಚೂರು-ಪಾರು ಹೆಕ್ಕಿ, ಕಾಲ್ಗುಣದ ಕರಿ ಮಚ್ಚೆ ಹೊತ್ತು ಮರಳಿ ಗೂಡು ಸೇರಿಯಾಗಿತ್ತು. ಈ ಅಪವಾದಗಳೊ ಬೆಂಬಿಡದ ಬೇತಾಳದಂತೆ ಬೆನ್ನೇರಿ ಜೀವ ಹಿಂಡುತ್ತವೆ.
ಯಾವುದಕ್ಕೆ ನಾನು ಜವಾಬುದಾರಳಾಗಿದ್ದೆ? ಉತ್ತರ ಕೊಡುವುದಾದರೂ ಯಾರಿಗೆ? ಮದುವೆಯೆಂದರೆ ರುಚಿಕಟ್ಟಾದ ಊಟವೆಂದು… ನನ್ನ ಮದುವೆಯಲ್ಲಿ ನನಗಿಂತ ಮೊದಲು ಉಂಡವರ ಮೇಲೆಯೇ ಮುನಿಸಿಕೊಂಡ ಪಾಪದ ಹುಡುಗಿ ನಾನು.
ಓರ್ವ ಮುಗ್ಧೆಯನ್ನು ಮದುವೆಯಾಟಕ್ಕೆ ಸಿಲುಕಿಸಿ ಘಟಿಸಿದ ಗಂಡನ ಸಾವಿಂದ ವೈಧವ್ಯದ ಸೆಳವಿಗೆ ನೂಕಿದ್ದಕ್ಕೆ ನಾನೇನೂ ವಿಚಲಿತಳಾಗಲಿಲ್ಲ! ಯಾಕೆಂದರೆ ಸತ್ತುಹೋದವ ನನ್ನ ಓರಗೆಯವನಾಗಿರಲಿಲ್ಲ, ನನ್ನೊಂದಿಗೆ ಕಾಲು ಕೆರೆದು ಜಗಳವಾಡಿದವನಾಗಿರಲಿಲ್ಲ, ಸಿಹಿ ತಂದು ತಿನ್ನಿಸಿದವನೂ ಆಗಿರಲಿಲ್ಲ. ಹೋಗಲಿ ಕೂಡಿ ಸವೆಸಿದ ಬಂಡಿಹಾದಿಯಲ್ಲಿ ಬೆರಳುಗಳೊಂದಿಗೆ ಬೆರಳು ಹೆಣೆದು ಎದೆಗೂಡಲ್ಲಿ ಅದೇ ತಾನೆ ಬೆಚ್ಚಗೆ ಅರಳಿಕೊಳ್ಳತೊಡಗಿದ ಪ್ರೀತಿಗೆ ಕಾವು ಕೊಟ್ಟು ಚಿತ್ತಾರ ಕೂಡ ಮೂಡಿಸಿದವನಾಗಿರಲಿಲ್ಲ.
* * *
ಮದುವೆಯಾದ ಮೊದಲ ರಾತ್ರಿಗೂ ಮುನ್ನ ಅಸುನೀಗಿದ ಗಂಡನದು ದುರದೃಷ್ಟವೊ? ಅಥವಾ ಉಳಿದ ಜನ್ಮದುದ್ದಕ್ಕೂ ಮದುವೆಯೆಂದರೆ ವೈಧವ್ಯವೆಂದು ಜರಿದುಕೊಳ್ಳುತ್ತ ಜೀವ ಸವೆಸುವ ನನ್ನದು ದುರದೃಷ್ಟವೊ? ಈ ಹೋಲಿಕೆಯ ಗೊಡವೆಗೆ ಹೋಗದೆ ದೂರುವುದಾದರೆ ಭಗವಂತನನ್ನೇ ದೂರಬೇಕು. ಭಗವಂತ ಕೊಟ್ಟು ಕಳಿಸಿದ ಈ ಪ್ರಸಾದರೂಪಿ ಜೀವನವನ್ನು ಅನುಭವಿಸದ ಹೊರತು ತಕರಾರುಗಳನ್ನು ಹೇಳುವವಳಲ್ಲ ನಾನು. ಕಾಲನ ಸೆಳೆತ ಎತ್ತ ಇದೆಯೊ ಯಾರು ಬಲ್ಲರು!
* * *
ತಲೆ ಮೇಲಿನ ಕಾರ್ಮೋಡಗಳು ಮಳೆ ಸುರಿಸಿ ಬರಿದುಗೊಳ್ಳುತ್ತವಾದರೂ ಆಗಸ ಹಸನಾಗುವುದಿಲ್ಲ. ಸದ್ದಿಲ್ಲದೆ ಸುರಿವ ಕಣ್ಣೀರುಗಳು ಮಾತ್ರ ಆಗಿಹೋದುದಕ್ಕೆ ನಿರಂತರವಾಗಿ ಕಪ್ಪ ಕಟ್ಟುತ್ತಿವೆ. ಈಗ ಬರುತ್ತೇನೆಂದು ಹೇಳಿ ಹೋದವರು ಬರುವ ಹಾದಿಯನ್ನೇ ಸುಳ್ಳು ಮಾಡಿದರೆ ಕಾಯುವುದಾದರೂ ಯಾರನ್ನು?
ಸಂಸಾರನೌಕೆ ನಟ್ಟ ನಡುನೀರಿನಲ್ಲಿ ತೇಲದೆ ನಿಂತರೆ ಆಸರೆಗೆ ಯಾರನ್ನು ಬೇಡಲಿ?
ನಿಂತ ನಾವೆಯನ್ನು ಕದಲಿಸಿ ನಡೆಸುವುದು ಅದು ಯಾವ ದಿಕ್ಕಿಗೊ?
ಅದು ಯಾಕೊ ಬೆಳದಿಂಗಳ ರಾತ್ರಿಗಳಲ್ಲಿ ದುಂಡನೆಯ ಚಂದ್ರನನ್ನು ನೋಡುವಾಗೆಲ್ಲ ಗಂಡ ಸತ್ತ ಕೂಡಲೆ ಆತನೊಂದಿಗೆ ಚಿತೆಯಲ್ಲಿ ಹಾರುವ ದಿನಗಳ ನೆನಪಾಗುತ್ತದೆ. ತನಗೂ ಅಂತಹುದೊಂದು ಸಾವು ಬಂದಿದ್ದರೆ ಒಳ್ಳೆಯದಿತ್ತೂಂತ ಅಜ್ಜಿ ಹಲವು ಬಾರಿ ಹೇಳಿದ್ದಾಳೆ. ಅಂದರೆ ಗಂಡನಿಲ್ಲದ ದಿವಸಗಳಲ್ಲಿ ಅಜ್ಜಿ ಜೀವಿಸಲಿಲ್ಲವೆಂದೆ? ಜೀವನವನ್ನು ಗಂಡನೊಂದಿಗೆ ಮಾತ್ರ ಜೀವಿಸುತ್ತ ಕಟ್ಟಿಕೊಳ್ಳುವುದಿರುತ್ತದೆಯೇ? ಗಂಡನ ಸಾವಿನೊಂದಿಗೇ ಹೆಣ್ಣಿನ ಜೀವನ ಕೂಡ ಮುಗಿದುಹೋಯಿತೆಂದು ಅಂದಿನ ದಿವಸಗಳು ಅಜ್ಜಿಯ ಮನಸ್ಸಿನ ವಿರುದ್ಧವಾಗಿ ಸಮರ ಸಾರಿದ್ದವೆ? ಅಜ್ಜಿಯ ಜೀವನದೊಂದಿಗೆ ತಳಕು ಹಾಕಿಕೊಂಡ ಪ್ರಶ್ನೆಗಳನ್ನೆಲ್ಲ ನನ್ನ ಜೀವನದ ಉತ್ತರಗಳಾಗಿ ಮಾರ್ಪಡಿಸಿಕೊಳ್ಳುವ ಕನಸು ಕಾಣುತ್ತೇನೆ.
ಮನೆ ಮುಂದಿನ ಮುಪ್ಪಾದ ಹುಣಸೆಮರದ ಕೆಳಗೆ ಕುಳಿತ ಮರದಷ್ಟೇ ಹಣ್ಣಾದ ಮತ್ತು ಯಾವಾಗಲೂ ಗತಕಾಲದಲ್ಲೇ ಜೀವಿಸುವ ಅಜ್ಜಿಯಲ್ಲಿ ಕೇಳುತ್ತೇನೆ: ಅಜ್ಜ ಸತ್ತ ನಂತರ ನೀನು ಮತ್ತೆ ಯಾಕೆ ಮದುವೆ ಮಾಡಿಕೊಳ್ಳಲಿಲ್ಲ? – ಎಂದು.
* * *
ಗಂಡನ ಮನೆಗೆ ಯಾವಾಗ ಹೋಗ್ತಿ – ಎಂದು ಛೇಡಿಸಿದ ಹೆಂಗಸರಿಂದು ನನ್ನ ರಾವು ಬಡಿದ ವೈಧವ್ಯದಷ್ಟೇ ಗಂಭೀರವಾಗಿಬಿಟ್ಟಿದ್ದಾರೆ. ನನ್ನಿಂದ ಅಂತರ ಕಾಯ್ದುಕೊಳ್ಳುವ ಹೆಂಗಸರ ಹತ್ತಿರ ಸರಿದು ಅವರ ಸಂಸಾರದ ಕಷ್ಟ-ಸುಖ ಕೇಳುವ ಉಮೇದೂ ನನ್ನೊಳಗುಳಿದಿಲ್ಲೀಗ.
* * *
ಭಾಗ – ೪
ಮುತ್ತಿನ ರಾತ್ರಿಗಳನ್ನು ಕತ್ತು ಹಿಸುಕಿ ಸಾಯಿಸುವ ಏಕಾಂತದ ವೇಳೆಯಲ್ಲಿ ನೆನಪಿಗೆ ಬರುತ್ತಿದ್ದುದು ಕೊನೆಗೂ ಪೂರ್ತಿಯಾಗಿ ಕಾಣಲು ಸಿಗದೆಹೋದ ಗಂಡನ ಮುಖವೆಂದು ಹೇಳಿದರೆ ಅದು ನನಗೆ ನಾನೇ ಮಾಡಿಕೊಂಡ ಆತ್ಮವಂಚನೆಯಾಗುತ್ತದೆ! ಅದು ಯಾಕೋ ಗಂಡನೆಂದರೆ ನೆನಪಾಗಿ ಬರುವುದು ಪಕ್ಕದ ಕೇರಿಯ ಆ ಹುಡುಗನೇ ಹೊರತು ತಾಳಿ ಕಟ್ಟಿದ ಗಂಡನಲ್ಲ! ಹಾಗೆಲ್ಲ ಚಪ್ಪರ ಹಾಕಿ, ಜತೆಯಲ್ಲಿ ಏಳು ಹೆಜ್ಜೆ ನಡೆದು, ನೆಂಟರನ್ನು ಕರೆದು ಊಟ ಹಾಕಿಸಿ ಮದುವೆ ಮಾಡಿಕೊಂಡರೆ ಮಾತ್ರ ತಾಳಿಕಟ್ಟಿದವನು ಗಂಡನಾಗುತ್ತಾನೆಯೇ? – ಹೊಸದೊಂದು ಪ್ರಶ್ನೆ ಜೀವದಾಳದಲ್ಲಿ ಮಥಿಸಿದ್ದು ನರನಾಡಿಗಳನ್ನು ವ್ಯಾಪಿಸಿ ಉಸಿರುಗಟ್ಟಿಸುತ್ತದೆ. ಇಲ್ಲಿಯವರೆಗೆ ನನಗೆ ಅರ್ಥವಾಗಿರುವುದೇನೆಂದರೆ ಮದುವೆಯೆಂದರೆ ಒಂದು ಹೂ ಮುತ್ತು, ಒಂದು ನಾಜೂಕಿನ ಅಪ್ಪುಗೆ, ಎರಡು ಕೈಗಳ ನಡುವೆ ಹುಟ್ಟುವ ಒಂದು ಬೆಚ್ಚಗಿನ ಬಿಸುಪು, ಜೀವಕ್ಕೆ ಜೀವವಾಗಿ ಏಳು ಹೆಜ್ಜೆ ನಡೆವ ಭರವಸೆ, ಹೂವಿನ ತೂಕದ ಹೆಣ್ಣನ್ನು ಹಗುರಾಗಿ ಜೀವನದುದ್ದಕ್ಕೂ ಹೊತ್ತೊಯ್ಯುವ ಒಂದು ಆಣೆ-ಭಾಷೆಯ ಭದ್ರತೆ. ಇಂಥ ಯಾವುದೂ ಇಲ್ಲದ ಒಂದು ಸಂಬಂಧವನ್ನು ಮದುವೆಯ ಮೂಲಕ ಗುರುತಿಸುವುದಾದರೂ ಹೇಗೆ? ಹೀಗೆಲ್ಲ ಆಲೋಚಿಸುತ್ತ ಹೋದಂತೆ ಜೀವಕ್ಕೆ ಚೈತನ್ಯ ಒದಗಿಸುವ ನೆನಪುಗಳ ಜಾತ್ರೆ ಒಮ್ಮೊಮ್ಮೆ ಜೀವವನ್ನು ಒಣಗಿಸಿ ಶುಷ್ಕವಾಗಿಸುತ್ತದೆ.
ಒಂದು ಕಡೆ ಸತ್ತುಹೋದ ಗಂಡ, ಮತ್ತೊಂದು ಕಡೆ ಮುನಿದು ರೌದ್ರಗೊಂಡ ಹರೆಯದ ಮೆರವಣಿಗೆ. ವೈಧವ್ಯ ಜೀವನದ ಸಂತೆಯಲ್ಲಿ ಆಸೆಗಳ ಆಗರ ಹೊತ್ತು ತಿರುಗುವವು ಉಸಿರು ನಿಲ್ಲಿಸಿದ ಸತ್ತ ಬಯಕೆಗಳೇ ಆಗಿರುತ್ತವೆ. ವಿಧಿಯಾಟದ ಮುಂದೆ ದೇವರಿಗೊಂದು ನಂದಾದೀಪ ಹಚ್ಚಿ ಸಂಬಂಧಗಳನ್ನು ಸುರಕ್ಷಿತವಾಗಿಡೆಂದು ಬೇಡಿಕೊಳ್ಳುವುದರಿಂದ ಯಾವ ಪ್ರಯೋಜನವಿದ್ದೀತು. ಹಚ್ಚಿಕೊಂಡ ನಂದಾದೀಪದ ಬೆಳಕಿನಲ್ಲಿ ಬೆಚ್ಚಗಿನ ಜೀವನ ಸಾಗಿಸುವ ಹವಣಿಕೆಯಲ್ಲಿರುವ ನಾವುಗಳು ವಿಧಿ ಕೊಡುವ ಏಟುಗಳಿಗೆ ಪ್ರೇಕ್ಷಕರಾಗಿಬಿಡುತ್ತೇವೆ. ಸೆಳವಿಗೆ ಬಿದ್ದ ನದಿಯಲ್ಲಿ ತೇಲಲು ಕೈ ಕಾಲು ಬಡಿಯುವುದು ಮಾತ್ರ ಇರುತ್ತದೆ. ಈಗ ನಾನು ಮಾಡುತ್ತಿರುವುದೂ ಅದನ್ನೇ ಆಗಿದೆ!
* * *
ಅಜ್ಜಿಯ ವಂಶದಲ್ಲಿ ಈ ವೈಧವ್ಯದ ಪರಂಪರೆಯನ್ನು ಯಾರಾದರೊಬ್ಬರು ಮುಂದುವರಿಸಿಕೊಂಡು ಹೋಗುವುದಿದೆಯೆಂದು ಬರೆದಿರಬೇಕೆಂದೆನಿಸುತ್ತದೆ. ಅಂಥ ಪರಂಪರೆ ಯಾಕೆಂದು ಅಜ್ಜಿಗಿಂತ ಹಳೆಯದಾದ ಆ ಮುದಿ ಮರವನ್ನೇ ಕೇಳಬೇಕು. ಅದಕ್ಕಾದರೂ ಗೊತ್ತಿದ್ದೀತು ತಲೆ, ತಲೆಮಾರುಗಳ ವೈಧವ್ಯಗಳ ಹಿಂದಿನ ಭಯಾನಕ ಕತೆಗಳು.
ಈ ಸಾವುಗಳು ಜೀವನವನ್ನು ನರಕವಾಗಿಸುತ್ತವೆ. ಅಜ್ಜಿ ಅಂದುಕೊಳ್ಳುವಂತೆ ಒಂದೊಮ್ಮೆ ನಾನೂ ಚಿತೆಯೇರಿದ್ದರೆ ಈ ಗೊಂದಲಗಳಿಗೆ ಅವಕಾಶವೇ ಇದ್ದಿರುತ್ತಿರಲಿಲ್ಲವೆಂದು ಈಗನಿಸುತ್ತಿದೆ. ಚಿತೆಯೆಂದರೆ ಹೋರಾಟವನ್ನು ಕೊನೆಗೊಳಿಸಿದಂತೆ. ಒಂದು ಹೋರಾಟವನ್ನು ಕೊನೆಗೊಳಿಸಲು ಈ ಚಿತೆಯೇ ಯಾಕಾಗಬೇಕು? – ಎಲ್ಲ ಪ್ರಶ್ನೆಗಳು ಕಾದ ಹಂಚಿನ ಮೇಲೆ ಹಾಕಿ ಹುರಿದಂತಾಗಿ ಜೀವ ವಿಲಗುಟ್ಟುತ್ತದೆ. ನೆಲಕ್ಕೆ ಬೇರು ಬಿಟ್ಟು ಒಂಚೂರು ಕದಲದೆ ಉಳಿದ ಜೀವನ ಮುಂದಿಟ್ಟುಕೊಂಡು ಏತಕ್ಕಾಗಿ ಬದುಕಬೇಕು? ಆದರೂ ನನ್ನ ಕೈಯಲ್ಲೇನಿದೆ? ಸಂಸಾರದ ಜೀವನ ಸ್ವಲ್ಪದರಲ್ಲೇ ತಪ್ಪಿಹೋದುದಕ್ಕೆ ಹಗಲಿರುಳೆನ್ನದೆ ವ್ಯಾಕುಲಗೊಳ್ಳುತ್ತೇನೆ.
ಗಂಡನ ಸಾವಿನಿಂದ ಎಲ್ಲ ಮುಗಿದು ಹೋಯಿತೆಂದುಕೊಂಡರೆ, ಪೂರ್ತಿಯಾಗಿ ಮುಖವನ್ನೂ ತೋರಿಸದೆ ಒಂದೇ ಒಂದು ಮಾತೂ ಕೂಡ ಆಡದ ಸತ್ತ ಗಂಡನನ್ನು ನೆನೆಸಿಕೊಳ್ಳುತ್ತ ಬದುಕುವುದೊ, ಅಥವಾ ಬಾಲ್ಯದಲ್ಲಿ ಗಂಡನ ಪಾತ್ರ ಧರಿಸಿ ಆಟವಾಡಿದ ಆ ಹುಡುಗನನ್ನು ನೆನಪಿಸಿಕೊಳ್ಳುವುದೊ – ಎಂದು ಒಂದೂ ತಿಳಿಯದಾಗುತ್ತದೆ. ಎಲ್ಲ, ಎಲ್ಲವೂ ನೆನಪಿನಂಗಳದಲ್ಲಿ ನಿಚ್ಚಳವಾಗಿರುವಾಗ ಮರೆಯಲು ಯತ್ನಿಸುವುದಾದರೂ ಏನನ್ನು?
* * *
ತಿಳಿವಳಿಕೆ ಬರುವ ಮುನ್ನ ಗಂಡ-ಹೆಂಡತಿ ಆಟ ಆಡಿದ್ದು ನಿಜ. ತಿಳಿವಳಿಕೆ ಬಂದ ಮೇಲೆ ನೇರವಾಗಿ ಗಂಡನ ಮುಖವನ್ನೂ ನೋಡದೆ ಆತನ ಹೆಸರಿನಲ್ಲಿ ವಿಧವೆಯಾಗಿದ್ದು ಮತ್ತೊಂದು ನಿಜ. ಜೀವನವನ್ನು ಸಂಬಂಧಗಳ ಮೂಲಕ ಗುರುತಿಸುವ ಈ ಸಮಾಜ ತೀರ ಸಂಕುಚಿತವಾಗಿದೆಯೆನಿಸತೊಡಗುತ್ತದೆ.
ಸತ್ತುಹೋದವರಿಗಾಗಿ ಯಾವ ಪ್ರಾರ್ಥನೆಯನ್ನೂ ಮಾಡುವುದಿರುವುದಿಲ್ಲ. ಇದ್ದವರು ಇನ್ನೊಬ್ಬರ ಪ್ರಾರ್ಥನೆಯಿಂದ ಬದುಕನ್ನು ಕಟ್ಟಿಕೊಳ್ಳಲಾಗುವುದಿಲ್ಲ.
ಅಜ್ಜಿಗೂ ಒಂದು ಕಾಲದಲ್ಲಿ ಯೌವನವಿತ್ತು, ಕನಸುಗಳಿದ್ದವು. ಎಲ್ಲ ಆಸೆಗಳನ್ನೂ ದೋಚಿಕೊಂಡು ಸಾವಾಗಿ ಹೋದ ಅವಳ ಗಂಡ ಅಜ್ಜಿಯ ನಿಜಜೀವನದ ಖಳನಾಯಕನಾಗಲಿಲ್ಲವೆ? ಸತ್ತುಹೋದವರು ನಮ್ಮ ಜೀವನವನ್ನು ನಿಯಂತ್ರಿಸುವುದಾದರೆ ಈ ಜೀವಕ್ಕಿರುವ ಜೀವಂತಿಕೆಯೇ ಹೊರಟುಹೋಗುತ್ತದೆ. ನನ್ನ ಹಸಿವು ನನ್ನದು. ನನ್ನ ನೀರಡಿಕೆ ನನ್ನದು.
ಗಂಡ ಬರೆದಿಟ್ಟು ಹೋದ ಹಾಡನ್ನು ಹಾಡುವ ಹೆಂಡತಿಯೊಳಗಿನ ತಲ್ಲಣವ ಅದಾರು ಬಲ್ಲರು?
ಬದುಕಿನ ಗೋಜಲುಗಳ ನಡುವೆ ಈ ಬದುಕೆನ್ನುವುದು ಎಲ್ಲೆಂದರಲ್ಲಿ ಮುಗಿದುಹೋದರೂ ನನ್ನದೇನೂ ತಕರಾರಿಲ್ಲ.
* * *
ಭಾಗ – ೫
ಅಚಾನಕ್ಕಾಗಿ ಒಂದು ದಿನ ಕೊಡಕ್ಕೆ ನೀರು ಸೇದಿ ಸೊಂಟದ ಮೇಲೆ ಕೊಡ ಇಡುವಾಗ ನನ್ನ ಕಣ್ಣಲ್ಲಿ ಕಣ್ಣಿಟ್ಟು, ಉಸಿರಿಗೆ ಉಸಿರು ತಾಕುವಷ್ಟು ಹತ್ತಿರ ಬಂದು: ಗಂಡ-ಹೆಂಡತಿ ಆಟ ಆಡೋಣ್ವಾ? – ಎಂದು ಬಾಯಿಬಿಟ್ಟು ಕೇಳಿದ ಹುಡುಗ ಅದು ಯಾಕೊ ಕುರೂಪವಾಗಿ ಕಾಣಿಸುತ್ತಾನೆ.
ಆ ದಿನಗಳಲ್ಲಿ ಯಾವ ಆಟವನ್ನು ಮದುವೆಯಾದರೂ ಕೂಡ ನೆನಪಿಸಿಕೊಂಡು ಅನಿರ್ವಚನೀಯ ಅನುಭೂತಿಯಂತಹುದನ್ನು ಹೊಂದುತ್ತಿದ್ದೆನೊ ಇಂದದೇ ಮಾತು ಮುಳ್ಳಿನ ಹಾಗೆ ಮೈಮೇಲೆಲ್ಲ ಹರಿದ ಹಾಗಾಗಿ ದಾಪುಗಾಲು ಹಾಕಿ ಮನೆ ಸೇರಿಕೊಳ್ಳುತ್ತೇನೆ. ಓರ್ವ ಗಂಡ ಸತ್ತವಳನ್ನು ಅದು ಬೇರೆ ಯಾರೂ ಆಗಿರದೆ ನಾನಿಷ್ಟಪಟ್ಟ ಹುಡುಗ ಗಂಡ-ಹೆಂಡತಿ ಆಟಕ್ಕೆ ಕರೆದುದಕ್ಕೆ ನನ್ನೊಳಗಿನ ವಿಧವೆ ತೀವ್ರವಾಗಿ ನೊಂದುಕೊಳ್ಳುತ್ತಾಳೆ.
ವೈಧವ್ಯದಾಚೆಗಿನ ಸುಖಗಳನ್ನು ದಕ್ಕಿಸಿಕೊಳ್ಳಲು ಬದುಕಿನ ಒಳಸತ್ಯಕ್ಕೆ ಮಣ್ಣುಕೊಡುವುದಿರುವುದಿಲ್ಲ. ಬೆವರಿನ ನದಿಯಲ್ಲಿ ಈಸುವಾಗ ಇನ್ನೂ ಬೆವರು ಯಾಕೆ ಬಂದಿಲ್ಲವೆಂದು ಹಣೆ, ಕತ್ತು ಮುಟ್ಟಿ ನೋಡಿಕೊಳ್ಳುವುದಿರುವುದಿಲ್ಲ.
ಓರಗೆಯವನೊಂದಿಗಿನ ಮದುವೆ ನಿಷಿದ್ಧವೆಂದು ಎಲ್ಲೂ ಹೇಳದಿರುವಾಗ ಆತ: ಮದುವೆಯಾಗೋಣ ಬಾ – ಎನ್ನಲಿಲ್ಲ. ಮದುವೆಗೆ ಕರೆದಿದ್ದರೆ ಹಣೆಯ ಮೇಲೆ ಕುಂಕುಮವಿಟ್ಟುಕೊಂಡು ಸತ್ತ ಗಂಡನ ನೆನಪಿಗೆ ಮೂರು ಹಿಡಿ ಮಣ್ಣು ಹಾಕಿ ಯಾವುದೇ ಪಾಪಪ್ರಜ್ಞೆಯಿಲ್ಲದೆ ಹುಡುಗ ಕರೆದಲ್ಲಿ ಸದ್ದಿಲ್ಲದೆ ನಡೆದುಹೋಗಿಬಿಡುತ್ತಿದ್ದೆನೇನೊ.
* * *
ಹಸಿರಿನ ಬದುಕಿಗೆ ಮದುವೆ ಹರುಷ ತರಲಿಲ್ಲ. ಹುರುಪು ಕೊಟ್ಟ ಬಾಲ್ಯ ಕೈಹಿಡಿಯಲಿಲ್ಲ. ಎಲ್ಲಿ ತಪ್ಪಾಯಿತೆನ್ನುವುದು ಇನ್ನೂ ತಿಳಿಯುತ್ತಿಲ್ಲ! ವಿಧಿಯನ್ನು ಹಳಿಯದೆ ಬೇರೆ ದಾರಿಯೇ ಉಳಿದುಕೊಳ್ಳುವುದಿಲ್ಲ.
ದೇವರೇನಾದರೂ ಪ್ರತ್ಯಕ್ಷನಾಗಿ ಕೇಳಿಕೊಳ್ಳಲು ಹೇಳಿದರೆ, ಖಂಡಿತವಾಗಿಯೂ ನಾನು ಓರಗೆಯವನಲ್ಲದ, ತನ್ನ ಮುಖವನ್ನೂ ಸರಿಯಾಗಿ ತೋರಿಸದ, ಬಂಡಿಗಾಡಿಯ ಪಯಣದಲ್ಲಿ ಕೈಯನ್ನೂ ಕೂಡ ಹಿಡಿದುಕೊಳ್ಳಲು ಮುಂದೆ ಬಾರದ ಸತ್ತುಹೋದ ಗಂಡ ಮತ್ತೆ ಬದುಕಿ ಬರಲೆಂದು ಕೇಳುವುದಿಲ್ಲ!
ಪಲ್ಲಟಗೊಂಡ ಬದುಕಿನಿಂದಾಗಿ ನನ್ನ ಮೇಲೆ ನನಗೇ ಬೇಸರವೆನ್ನಿಸತೊಡಗುವುದು. ಈ ಮನುಷ್ಯ ಸಂಬಂಧಗಳಾವವೂ ನನ್ನೊಳಗಿನ ಗಾಯಕ್ಕೆ
ಮುಲಾಮುಗಳಾಗಲಾರವೆನ್ನಿಸತೊಡಗಿದೆ. ಸಿಂಗರಿಸಿ ಬೀಳ್ಕೊಟ್ಟ ಹೆಣಗಳೆಂದೂ ಸಂಬಂಧ ಹೇಳಿಕೊಂಡು ಮರಳಲಾರವು. ಸಂಬಂಧ ಹೇಳುವ ಮನುಷ್ಯರೆಲ್ಲರ ಒಳಗುಗಳು ಫಾಯ್ದೆ ಕೇಳದಿರಲಾರವು.
ಚಂದ ಕಾಣಿಸದ ಹುಡುಗನ ಕಣ್ಣಲ್ಲಿ ಕಂಡ ದಾಹದಂತಹುದೊಂದು ನೆನಪಾಗಿ ಅನಿಸುತ್ತದೆ: ಕೊಯ್ದ ಕುತ್ತಿಗೆಯಿಂದುಕ್ಕುವ ಬಿಸಿ ನೆತ್ತರು ರಕ್ತಪಿಪಾಸುಗಳ ದಾಹ ಇಮ್ಮಡಿಸುತ್ತವೆ. ಹೆಗಲೇರಿಸಿಕೊಳ್ಳುವ ಪಾಪಗಳು ನೇರವಾಗಿ ನರಕದ ಬಾಗಿಲಿಗೇ ತಂದು ನಿಲ್ಲಿಸುತ್ತವೆ.
ಪ್ರೀತಿ ಮರೆತ ಹುಡುಗನ ನೆನೆದು ನೆನಪಾಗುವುದೇನೆಂದರೆ: ಬೆಳದಿಂಗಳ ಪ್ರೀತಿಗೆ ಸುಡುಬಿಸಿಲು ತಾಕಿಸುವುದಿರುವುದಿಲ್ಲ. ಉದುರಿದ ಪಕಳೆಗಳ ಮೇಲೂ ಪ್ರೀತಿ ಹೆಸರು ಬರೆವುದಿರುತ್ತದೆ.
* * *
ಮರುದಿನದಿಂದ ಬಾವಿಯಿಂದ ನೀರು ತರುವ ಕೆಲಸ ನಿಲ್ಲಿಸಿಬಿಡುತ್ತೇನೆ. ಅನಂತರದಲ್ಲಿ ಆ ಹುಡುಗ ಮತ್ತೆ ಕಾಣಸಿಗುವುದೇ ಇಲ್ಲ.
* * *
ಮೌನದ ಸೆರಗನ್ನು ತಲೆ ತುಂಬ ಹೊದ್ದು ಮುದಿಗಿಂತ ಮುದಿಯಾಗಿ ಹೋದ ಹುಣಸೆಮರದ ಕೆಳಗೆ ಭೀಕರ ವೈಧವ್ಯದ ಚೂಪು ಕೊಡಲಿಗೆ ತಲೆ ಬಗ್ಗಿಸಿ ಕೂತ ಅಜ್ಜಿಯ ಜತೆ ಸೇರಿಕೊಳ್ಳುತ್ತೇನೆ. ತಾಕತ್ತಿದ್ದರೆ ನನ್ನದೂ ಒಂದು ಕತೆಯನ್ನು ನಿನ್ನ ಕಥಾಮಾಲಿಕೆಯೊಳಗೆ ಸೇರಿಸೆಂದು ಮರಕ್ಕೆ ಸವಾಲೆಸೆಯುತ್ತೇನೆ.
* * *
ಭಾಗ – ೬
ಮರದ ನೆರಳ ಗಾಢವಾದ ಮೌನವ ಉದ್ದಕ್ಕೂ ಬಳಿದುಕೊಂಡು ದಿವಿನಾಗಿ ಕುಳಿತ ಹುಡುಗಿ ದೈವವನ್ನೇ ಒರೆಗೆ ಹಚ್ಚಿದವಳಂತೆ ಕಾಣಿಸುತ್ತಾಳೆ. ಬದುಕಿನೆದೆಯೊಳಗಿನ ಉರಿಗೆ ಹಾಕಿದ್ದೆಲ್ಲವನ್ನೂ ಜೀವದ ನಾಲಗೆ ಬೇಯಿಸಿಕೊಂಡು ತಿಂದು ತೇಗಿ ಚಪ್ಪರಿಸಿಬಿಡುತ್ತದೆ.
ಹೆಣ್ಣೊಂದರ ಸವಾಲಿಗೆ ವಿಷಣ್ಣವಾಗಿ ಕಂಡುಬಂದ ಮರ ಸೀರೆಯನ್ನೂ ಸರಿಯಾಗಿ ಉಟ್ಟುಕೊಳ್ಳಲು ಬಾರದ ಎಳೆ ವೈಧವ್ಯವೇ ಆಭರÀಣವಾಗಿಹೋಯಿತಲ್ಲವೆಂದು ರೆಂಬೆಗಳು ಮೌನದಲ್ಲಿ ಮರುಗಿ ಸಂತಾಪಿಸುತ್ತವೆ. ರೇಜಿಗೆ ಹುಟ್ಟಿಸುವಷ್ಟು ದಿನಗಳನ್ನು ನೂಕಿದ ಅಜ್ಜಿಗೆ ವೈಧವ್ಯದ ಒಳಸರಿಕೆಯಿಂದ ಹೊರಬರಲಾಗದಿದ್ದುದೇ ಮರಕ್ಕೆ ಅಚ್ಚರಿ.
ಸಿಡಿದು ಚೂರಾದ ಹೆಣ್ಣೊಂದು ಹೆಣೆವ ಕಸೂತಿ ಪೂರ್ಣಗೊಂಡಾದ ಮೇಲೆ ಮೇಲಿನಿಂದ ನೋಡುವ ಮರಕ್ಕೆ ಚಿತ್ತಾರದಲ್ಲಿ ಕಾಣಿಸುವುದು ಒಡೆದುಹೋದ ಚಿತ್ರಗಳೇ! ಹೆಣ್ಣಿನ ಮನಸ್ಸಿಗಿಳಿದು ಅವಳ ಬೆರಳುಗಳ ಮೂಲಕ ಸುಖದ ಚಿತ್ರ ಬಿಡಿಸಲು ಆಗದಿದ್ದುದಕ್ಕೆ ಮರ ತನ್ನ ಅಸಹಾಯಕತೆಗೆ ತಾನೇ ಮಮ್ಮಲ ಮರುಗುತ್ತದೆ. ತಂಪಿನ ನೆರಳ ಕೆಳಗಿನವರೆಲ್ಲರೂ ತಂಪಾಗಿರುವುದಿಲ್ಲವೆನ್ನುವ ಸತ್ಯ ಮರಕ್ಕೆ ಮನವರಿಕೆಯಾಗುತ್ತದೆ. ಮರ ತನ್ನ ಕತೆಯೊಂದನ್ನು ಹೇಳಲು ಯತ್ನಿಸುತ್ತದೆ. ಎಳೆ ಜೀವಕ್ಕೊಂದಿಷ್ಟು ಸುಖದ ದಿವಸಗಳನ್ನು ದಕ್ಕಿಸಲು, ಶುಭ ಶಕುನ ನುಡಿಸಲೆಂದು ಶಕುನ ನುಡಿವ ಹಕ್ಕಿಗಾಗಿ ಮರ ದೂರ ದೂರದವರೆಗೂ ಕಣ್ಣು ಹಾಯಿಸುತ್ತದೆ. ತನ್ನ ಮೇಲೇ ಕುಳಿತು ಉಳಿದವರ ಶಕುನ ನುಡಿದು ಹೋದ ಹಕ್ಕಿಗಾಗಿ ಮರ ಕಾದು ಕಾದು ಉಸ್ಸೆನ್ನುತ್ತದೆ. ದಿನಗಳ ಮೇಲೆ ದಿನಗಳು ಕಳೆದರೂ ಬಾರದ ಶಕುನದ ಹಕ್ಕಿ ಮರಕ್ಕೆ ನಿಷ್ಕರುಣಿಯಾಗಿ ಕಾಣಿಸುವುದು.
ಇದೇ ನೆರಳಿನಡಿಯಲ್ಲಿ ಅವೆಷ್ಟು ತಲೆಮಾರುಗಳು ತಮ್ಮ ಕಷ್ಟ-ಸುಖ ಹೇಳಿಕೊಂಡು ಹಗುರವಾಗಿವೆಯಲ್ಲವೆಂದು ಮರ ಹಳೆ ನೆನಪುಗಳನ್ನು ತೇಲಿಸಿಕೊಂಡು ತನ್ನಷ್ಟಕ್ಕೆ ತಾನೇ ಹಿಂದೆ ಸರಿದುಹೋಗುತ್ತದೆ. ಎಳಸುಜೀವದ ಹುಡುಗಿಗೆ ನೆರಳು ಕೊಡಲು ಮರ ತನ್ನ ಕೊಂಬೆಗಳಲ್ಲಿ ಎಲೆಗಳನ್ನು ಚಿಗುರಿಸತೊಡಗುತ್ತದೆ. ತನ್ನ ನೆರಳಿನಲ್ಲಾಡಿ ಕನಸು ಕಂಡು ಬೆಳೆದ ಮಗುವನ್ನು ಗೆಲ್ಲಿಸುವುದದೆಂತೆಂದು ತಿಳಿಯದೆ ಮರ ಮರುಕಪಟ್ಟುಕೊಳ್ಳುತ್ತದೆ. ಕೀವು ಸೋರಿ, ಗಾಯ ಮಾದು, ಕಲೆ ಹೊತ್ತು ಕುಳಿತ ಎಳೆಜೀವಕ್ಕೆ ತಂಪು ತರಲು ತನ್ನ ಮೈಯಗಲಿಸಿ ಮರ ಸುಖದ ಗಾಳಿಯನ್ನು ಹಗುರಾಗಿ ಬೀಸುತ್ತದೆ. ಮೇಲೆ ನೋಡಿದ ಹೆಣ್ಣಿಗೆ ಸಾಂತ್ವನ ಹೇಳುವಂತೆ ಮರ ತನ್ನ ರೆಂಬೆಗಳನ್ನು ಒಂದಕ್ಕೊಂದು ಉಜ್ಜಿ ಬಿಸಿ ಹುಟ್ಟಿಸಿ ನಕ್ಕುಬಿಡುತ್ತದೆ.
ನೂರು ನೆನಪುಗಳಿಗೆ ನೂರು ಮುಖಗಳು. ಒಂದೇ ಸಮಸ್ಯೆಗೆ ಕಾಲಾಂತರದಲ್ಲಿ ಬೇರೆ ಬೇರೆ ಪರಿಹಾರಗಳು. ಯಾವುದನ್ನೂ ಸುಳ್ಳೆನ್ನಲಾಗುವುದಿಲ್ಲ. ಸಾವನ್ನು ನಟಿಸಿ ಮರಣವಾಗಿ ಹೋಗುವುದು ಒಂದೊಮ್ಮೆ ಇದ್ದೇ ಇದೆಯಾದರೂ ಮೈತುಂಬ ಎಳೆಸಿಕೊಂಡ ಮಣ್ಣಿನ ಕೆಳಗೆ ಬೆಚ್ಚಗಿನ ಸುಖನಿದ್ರೆಯೊಂದು ಕಾದಿಹುದೇ ಸೋಜಿಗವಾಗಿದೆ! ಸುಖಕ್ಕಾಗಿ ಕಷ್ಟಪಡುವ ಮನುಷ್ಯರ ನೋಡಿ ವೇದಾಂತಿಯಂತೆ ಮರ ನೆರಳಾಗಿ, ತಂಪಾಗಿ, ಬೆರಳಾಗಿ ಅರಿಯದ ಹೆಣ್ಣಿನ ತಲೆ ನೀವುತ್ತದೆ. ತನ್ನನ್ನು ಕಡಿದು ಕಟ್ಟಿಗೆಯಾಗಿಸಿದರೂ ಅವೇ ಕಟ್ಟಿಗೆಗಳಿಂದ ಎಳೆ ಹೆಣ್ಣ ಜೀವದ ತಲೆಯ ಮೇಲೊಂದು ಸೂರಾಗುವ ತಪನೆ ಮರಕ್ಕಿದೆ. ಕಠೋರ ವೈಧವ್ಯದೊಂದಿಗೆ ಅವಸಾನದ ಅಂಚಿಗೆ ಬಂದು ಜೀವ ಸವೆಸಲು ಸಜ್ಜಾಗಿ ನಿಂತ ಶಾಪಗ್ರಸ್ತ ಕನ್ನಿಕೆಯನ್ನು ಮೈದಡವುತ್ತ ಮರ ಕಣ್ಣೀರಾಗುತ್ತದೆ.
ಬಸವಳಿದು ಬೆಂಡಾಗಿಹೋದ ಎಳೆಯ ಜೀವದಲ್ಲೊಂದು ಹರುಷ ಚಿಗುರಿಸುವ ಹೊಣೆ ಹೊತ್ತಂತೆ ಮರ ಇನ್ನು ಮೇಲೆ ಹೆಣ್ಣಿನ ಜವಾಬ್ದಾರಿ ತನ್ನದೆನ್ನುವಂತೆ ಕೊಂಚ ಹರುಷಪಟ್ಟುಕೊಳ್ಳುತ್ತದೆ. ಹರಿದುಹೋದ ತಾಳದ ತಂತಿಯನ್ನು ಜೋಡಿಸಿ ಅಲ್ಲೊಂದು ಹೊಸ ರಾಗ ಹಾಡಿಸುವ ಪಣಕ್ಕೆ ಮರ ತನ್ನ ಮೈಯನ್ನು ಮತ್ತೆ ಮತ್ತೆ ಹಸಿರಾಗಿಸಿಕೊಳ್ಳತೊಡಗುತ್ತದೆ.
ಉಪಸಂಹಾರ ತುಂಬ ಅಪರೂಪವೆನ್ನುವಂತೆ ಎರಡು ವೈಧವ್ಯಗಳು ತಲೆ ತಲೆಮಾರುಗಳಿಂದ ಆತ್ಮಗಳನ್ನೇ ಹೊತ್ತು ನಿಂತಂತಿರುವ ಭವ್ಯ ಮರದ ಕೆಳಗೆ ಅಕ್ಕಪಕ್ಕ ಕೂತು ಅದೇನನ್ನೋ ಮಾತನಾಡಿಕೊಳ್ಳುತ್ತ ಒಬ್ಬರಿಗೊಬ್ಬರನ್ನು ಸಂತೈಸುತ್ತಿರುವಂತಿರುವ ಚಿತ್ರ ಅತ್ತ ಹಾದುಹೋಗುವವರಿಗೆ ರಮಣೀಯವಾಗಿ ಕಾಣಸಿಗುತ್ತದೆ.