ಅಯಮುತ್ತಮೋsಯಮಧಮೋ
ಜಾತ್ಯಾ ರೂಪೇಣ ಸಂಪದಾ ವಯಸಾ |
ಶ್ಲಾಘ್ಯೋýಶ್ಲಾಘ್ಯೋ ವೇತ್ಥಂ
ನ ವೇತ್ತಿ ಭಗವಾನನುಗ್ರಹಾವಸರೇ ||
– ಪ್ರಬೋಧಸುಧಾಕರ
“ಜಾತಿ, ರೂಪ, ಸಂಪತ್ತು, ವಯಸ್ಸು – ಇಂತಹ ಅಂಶಗಳನ್ನು ಗಣಿಸಿ ಈ ವ್ಯಕ್ತಿ ಉತ್ತಮ, ಇವನು ಅಧಮ, ಇವನು ಎತ್ತರದವನು, ಇವನು ಕೆಳಗಿನವನು ಎಂದು ಭಗವಂತನು ಅನುಗ್ರಹ ಕರುಣಿಸುವ ಸಮಯದಲ್ಲಿ ಲೆಕ್ಕಾಚಾರ ಮಾಡುವುದಿಲ್ಲ.”
ಭಕ್ತಿಯ ಮತ್ತು ಭಗವದನುಗ್ರಹದ ಸಾಮ್ರಾಜ್ಯವು ವ್ಯಾವಹಾರಿಕರೀತಿಯ ಮೇಲು-ಕೀಳು ಎಂಬ ಪರಿಗಣನೆಗಳಿಂದ ಅತೀತವಾದ್ದು ಎಂದು ಬೋಧಿಸುವ ಪೌರಾಣಿಕ-ಜಾನಪದ ಪ್ರಸಂಗಗಳು ಹೇರಳವಾಗಿವೆ. ಅಂತಹ ಒಂದು ದಾರ್ಶನಿಕ ಕಥೆ ಇದು.
ಒಮ್ಮೆ ಶ್ರೀಕೃಷ್ಣನು ತನ್ನ ಪರಮಭಕ್ತ ಉದ್ಧವನ ಮನೆಗೆ ಬಂದ. ಉದ್ಧವನ ಆನಂದ ಹೇಳತೀರದು. ಕೃಷ್ಣನಿಗೆ ಸತ್ಕಾರ ಮಾಡಹೊರಟು ಕೆಲವು ಬಾಳೆಹಣ್ಣುಗಳನ್ನು ತಂದ. ಉದ್ಧವನ ಭಕ್ತಿಭರಿತತೆ ಎಷ್ಟಿತ್ತೆಂದರೆ ತಾನು ಏನು ಮಾಡುತ್ತಿದ್ದೇನೆಂಬುದರ ಪರಿವೆಯೇ ಇಲ್ಲದೆ ಹಣ್ಣನ್ನು ಬಿಸಾಡಿ ಬಾಳೆಸಿಪ್ಪೆಯನ್ನು ಕೃಷ್ಣನಿಗೆ ತಿನ್ನಿಸತೊಡಗಿದ! ಕೃಷ್ಣನು ಆನಂದದಿಂದ ಸಿಪ್ಪೆಯನ್ನೇ ಚಪ್ಪರಿಸಿಕೊಂಡು ತಿನ್ನತೊಡಗಿದ. ಒಂದಷ್ಟು ಸಮಯ ಕಳೆದ ಮೇಲೆ ಉದ್ಧವನಿಗೆ ಎಚ್ಚರಿಕೆಯುಂಟಾಗಿ ತಾನು ಮಾಡಿದ್ದ ಪ್ರಮಾದದ ಅರಿವಾಯಿತು. ಅವನು ಕೃಷ್ಣನ ಕ್ಷಮೆ ಕೋರಿ ಹಣ್ಣನ್ನು ಕೃಷ್ಣನಿಗೆ ನೀಡಿದ. ಆಗ ಕೃಷ್ಣ ಹೇಳಿದ: “ಇಷ್ಟು ಹೊತ್ತೂ ನೀನು ಪರಮಾತ್ಮಭಾವದಲ್ಲಿ ಇದ್ದದ್ದರಿಂದ ನೀನು ಕೊಟ್ಟ ಸಿಪ್ಪೆಯೇ ನನಗೆ ರುಚಿಕರವಾಗಿತ್ತು. ಈಗ ಹಣ್ಣು ಬೇರೆ ಸಿಪ್ಪೆ ಬೇರೆ ಎಂಬ ಭೇದಜ್ಞಾನ ನಿನ್ನನ್ನು ಶಬಲಿತಗೊಳಿಸಿದೆ. ಏನನ್ನು ಅರ್ಪಿಸುತ್ತಿದ್ದೇವೆಂಬುದು ಪ್ರಧಾನವಲ್ಲ, ಹೇಗೆ ಅರ್ಪಿಸುತ್ತಿದ್ದೇವೆಂಬುದೇ ಮುಖ್ಯ. ನಾನು ಅರ್ಪಿಸುತ್ತಿದ್ದೇನೆಂದುಕೊಂಡಲ್ಲಿ ಅದು ‘ನಾನು ಭಕ್ತ’ ಎಂಬ ಅಹಂಕಾರಭಾವವಾಗಿಬಿಡುತ್ತದೆ.”