ಸಂಪಾದಕೀಯ
ಆರೂಢ ಸರ್ಕಾರದ ಎಲ್ಲ ಕ್ರಮಗಳನ್ನೂ ವಿರೋಧಿಸುತ್ತಿರಬೇಕೆಂಬ ಏಕಾಂಶ ನೀತಿ ತಳೆದಿರುವ ವಿಪಕ್ಷಗಳು ‘ಅಗ್ನಿಪಥ್’ ಬಗೆಗೂ ಕೊಂಕು ತೆಗೆಯಹೊರಟಿದ್ದರೂ, ಅವುಗಳ ಕುತ್ಸಿತ ಟೀಕೆಗಳ ಪೊಳ್ಳುತನವನ್ನು ಜನತೆಯಿಂದ ಬಂದ ಅಪೂರ್ವ ಸ್ಪಂದನವೇ ಬಯಲು ಮಾಡಿದೆ. ದೇಶದ ಭದ್ರತೆಗೆ ಸವಾಲುಗಳು ಹೆಚ್ಚುತ್ತಿರುವ ಸನ್ನಿವೇಶದಲ್ಲಿ ದೇಶದಲ್ಲಿ ಶೇ. 18ಕ್ಕೂ ಮಿಗಿಲಾಗಿರುವ ಯುವಜನತೆಗೆ ಸೇನೆಯೊಡನೆ ಸಹಕರಿಸುವ ಅವಕಾಶವನ್ನು ‘ಅಗ್ನಿಪಥ್’ ಕಲ್ಪಿಸಿರುವುದು ಅಭೂತಪೂರ್ವವೂ ಪ್ರಶಂಸನೀಯವೂ ಆಗಿದೆ. ಸೇನೆಯ ಆಧುನಿಕೀಕರಣ, ರಕ್ಷಣೋಪಕರಣಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯ ಸಾಧನೆ ಮೊದಲಾದ ಕ್ರಮಗಳ ಜೊತೆಗೆ ಯುವಜನರ ಅಲ್ಪಾವಧಿ ನೇಮಕಾತಿ ವ್ಯವಸ್ಥೆಯನ್ನು ಕೇಂದ್ರಸರ್ಕಾರ ಯೋಜಿಸಿರುವುದು ಶ್ಲಾಘನೀಯ.
ಕಳೆದ (2022) ಜೂನ್ ಅಂತ್ಯದ ವೇಳೆಗೇ ಎರಡು ಲಕ್ಷಕ್ಕೂ ಅಧಿಕ ಮಂದಿ ತರುಣರು ನೋಂದಾಯಿಸಿಕೊಂಡಿದ್ದುದು ಉತ್ಸಾಹದಾಯಕ. ಹದಿನೇಳೂವರೆ ವರ್ಷದಿಂದ ಇಪ್ಪತ್ತೊಂದು ವರ್ಷಗಳವರೆಗಿನ ವಯೋಮಾನದ ಲಕ್ಷಾಂತರ ‘ಅಗ್ನಿವೀರ’ರ ಪಾಲ್ಗೊಳ್ಳುವಿಕೆಯಿಂದ ದೇಶದ ರಕ್ಷಣಾವ್ಯವಸ್ಥೆ ಸುದೃಢಗೊಳ್ಳುವುದು ನಿಶ್ಚಿತ. ಇಂಥವೇ ಯೋಜನೆಗಳು ‘ಟೂರ್ ಆಫ್ ಡ್ಯೂಟಿ’ ಮೊದಲಾದ ಹೆಸರುಗಳಲ್ಲಿ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಸ್ರೇಲ್ ಮೊದಲಾದ ದೇಶಗಳಲ್ಲಿ ಈ ಹಿಂದೆಯೇ ಸಂಚಾಲಿತವಾಗಿದ್ದು ಒಳ್ಳೆಯ ಪರಿಣಾಮಗಳನ್ನು ನೀಡಿವೆ.