ವಿಶೇಷ ಲೇಖನ
- ಆರತಿ ಪಟ್ರಮೆ
ಕನ್ನಡದ ಉಳಿವಿಗಾಗಿ ನಡೆಸುವ ಹೋರಾಟಗಳ ಕುರಿತು ಅಬ್ಬರದ ಮಾತುಗಳು ಕೇಳಬಹುದು. ಇಡಿಯ ತಿಂಗಳು ಹಲವು ಕಡೆಗಳಲ್ಲಿ ಹಲವು ಬಗೆಯ ಕನ್ನಡಕ್ಕೆ ಪೂರಕವಾದ ಕಾರ್ಯಕ್ರಮಗಳು ನಡೆಯಬಹುದು. ‘ಕನ್ನಡವಲ್ಲ, ತಿಂಗಳು ನಡೆಸುವ ಗುಲ್ಲಿನ ಕಾಮನಬಿಲ್ಲು’ ಎಂಬ ಕವಿವಾಣಿ ಸದಾ ನೆನಪಿನಲ್ಲಿರಬೇಕಾದ ಸಮಯವಿದು. ಶಾಲಾಕಾಲೇಜುಗಳಲ್ಲಿ ಅನಿವಾರ್ಯವೆಂಬಂತೆ ಆಂಗ್ಲ ಮಾಧ್ಯಮಕ್ಕೆ ಮೊರೆಹೋಗಿರುವ ನಾವು ಕನ್ನಡವನ್ನು ಅಂತರಂಗದ ಭಾಷೆಯಾಗಿ ಉಳಿಸಿಕೊಳ್ಳುವ ಬದ್ಧತೆ ತೋರಬೇಕಿದೆ. ಮಕ್ಕಳು ಕನ್ನಡ ಕಲಿಯುತ್ತಿಲ್ಲವೆಂದೋ, ಶಾಲೆಗಳಲ್ಲಿ ಕನ್ನಡವನ್ನು ಸರಿಯಾಗಿ ಕಲಿಸುತ್ತಿಲ್ಲವೆಂದೋ ಪರಿತಪಿಸುವ ಪೋಷಕರಿಗೆ ನಾವು ಹೇಳಬಹುದಾದುದು ಇಷ್ಟೇ: ಮಕ್ಕಳಿಗೆ ತಾಳಮದ್ದಳೆ ಕೇಳುವುದನ್ನು ಕಲಿಸಿ. ಯಕ್ಷಗಾನದ, ತಾಳಮದ್ದಳೆಗಳ ಪ್ರೇಕ್ಷಕರಾಗಿ ಮಕ್ಕಳು ಬೆಳೆದರೂ ಸಾಕು ಉತ್ಕøಷ್ಟವಾದ ಕನ್ನಡವನ್ನು ಅವುಚಿಕೊಳ್ಳುತ್ತಾರೆ.
ಯಕ್ಷಗಾನವೆಂಬುದು ಆಂಗಿಕ, ವಾಚಿಕ, ಆಹಾರ್ಯ, ಸಾತ್ತ್ವಿಕಗಳೆಂಬ ನಾಲ್ಕೂ ಅಂಶಗಳನ್ನೊಳಗೊಂಡಿದ್ದು ರಂಗಭೂಮಿಯ ವಿಸ್ಮಯವೇ ಆಗಿ ಉಳಿದು ವಿಶಿಷ್ಟವಾದ ತನ್ನತನವನ್ನು ಕಾಯ್ದುಕೊಂಡು ಬಂದಿರುವಂಥ ಕಲೆಯೆಂಬುದರಲ್ಲಿ ಎರಡು ಮಾತಿಲ್ಲ. ಕನ್ನಡದ ಅಸ್ಮಿತೆಯ ಬಗೆಗೆ ಮಾತನಾಡ ಹೊರಟಾಗಲೆಲ್ಲ ನಮ್ಮೆದುರು ಭರವಸೆಯ ಹೊಂಬೆಳಕು ಯಕ್ಷಗಾನವೇ. ಇತರೆ ರಂಗಭೂಮಿಗಳು ಬೆಳೆಯುತ್ತಾ ವಿಸ್ತಾರಗೊಳ್ಳುತ್ತಾ ಬಂದಂತೆ ಯಕ್ಷಗಾನವೂ ತನ್ನದೆ ಆದ ರೀತಿಯಲ್ಲಿ ಬೆಳೆದಿರುವುದು ಹೌದಾದರೂ ಪಾಶ್ಚಾತ್ಯವೆನ್ನಬಹುದಾದ ಪ್ರಭಾವಕ್ಕೆ ಒಳಗಾಗದೆ ದೇಸೀ ಸಂಸ್ಕøತಿಯನ್ನು ಕಾಪಿಟ್ಟುಕೊಂಡು, ಶಾಸ್ತ್ರೀಯತೆಯ ಸ್ಥಾನವನ್ನೂ ಗಳಿಸಿಕೊಂಡು, ಅನಿವಾರ್ಯವೆನ್ನಬಹುದಾದ ಆಧುನಿಕತೆಯನ್ನೂ ಅವುಚಿಕೊಂಡು ಮೆರೆಯುತ್ತಿದೆ. ಹಾಗೆಂದು ಇತರ ಜನಪದ ಕಲೆಗಳಿಗೆ ಆವರಿಸುವಷ್ಟು ಸುಲಭವಾಗಿ ಹೊಸ ವಿದ್ಯಮಾನಗಳು ಯಕ್ಷಗಾನವನ್ನು ತಟ್ಟವು. ನಿಂತ ನೀರಾಗದೆ ಸದಾ ಸೃಜನಶೀಲ ಕಲೆಯಾಗಿ ಉಳಿದುಕೊಂಡು, ಸಮಾಜದ ವಿದ್ಯಮಾನಗಳಿಗೆ ಸ್ಪಂದಿಸುತ್ತಾ ಪುರಾಣದ ಚೌಕಟ್ಟಿನೊಳಗೆ ವರ್ತಮಾನವನ್ನು ಪರಿಕಿಸಬಲ್ಲ, ವರ್ತಮಾನದೊಳಗೆ ಪುರಾಣಲೋಕವನ್ನು ಮರುಸೃಷ್ಟಿಸಬಲ್ಲ ಯಕ್ಷಗಾನದ ಹಿರಿಮೆ ವರ್ಣನಾತೀತ.
ಸರ್ವ ಅಲಂಕಾರದೊಂದಿಗೆ ನಾಟ್ಯವನ್ನೂ ಅಭಿನಯವನ್ನೂ ಒಳಗೂಡಿ ಪ್ರದರ್ಶನಗೊಳ್ಳುವ ಯಕ್ಷಗಾನ ಬಯಲಾಟದೊಂದಿಗೆ ಮಳೆಗಾಲದ ನೆಪದಲ್ಲಿ ಅರಳಿ ಇಂದು ಮಹತ್ ಬೆಳ್ಗೊಡೆಯಾಗಿ ಅರಳಿರುವ ಯಕ್ಷಗಾನ ತಾಳಮದ್ದಳೆ ವಾಚಿಕವನ್ನೇ ಪ್ರಧಾನವಾಗಿರಿಕೊಂಡು ಅಲ್ಪ ಪ್ರಮಾಣದಲ್ಲಿ ಆಂಗಿಕ ಅಭಿನಯಗಳನ್ನು ಬೆರೆಸಿಕೊಂಡು ‘ಮಾತಿನ ಮಂಟಪ’ವಾಗಿ ಸಜ್ಜಾಗಿದೆ. ಹತ್ತಾರು ಬಾರಿ ಕೇಳಿದರೂ ಮತ್ತೆ ಮತ್ತೆ ಅದೇ ಪ್ರಸಂಗವನ್ನು ಅದೇ ಕಲಾವಿದರು ಆಶುಸಾಹಿತ್ಯವಾಗಿ ವಿಸ್ತರಿಸುವಾಗ ಹೊಸಹೊಳಹುಗಳೊಂದಿಗೆ ಮೂಡಿಬರುವ ತಾಳಮದ್ದಳೆ ನಿಜಕ್ಕೂ ಕನ್ನಡ ತಾಯಿ ಭುವನೇಶ್ವರಿಯ ಮಡಿಲ ಮೊಗ್ಗು, ಮುಡಿಯ ಹೂವು.
ಕನ್ನಡದ ಝರಿ ಜಲಪಾತವಾಗಿ ಧುಮ್ಮಿಕ್ಕುವ, ಕಾರಂಜಿಯಾಗಿ ಚಿಮ್ಮುವ ತಾಳಮದ್ದಳೆಯು ಅತ್ಯಂತ ಸರಳವಾದ ರಂಗಕಲೆಯೆಂಬಂತೆ ಕಂಡುಬಂದರೂ ವಾಸ್ತವದಲ್ಲಿ ಪುರಾಣಗಳ ಆಳವಾದ ಜ್ಞಾನವನ್ನು ಪಡೆದುಕೊಳ್ಳುವುದಕ್ಕಿರುವ ವೇದಿಕೆ. ಪಾತ್ರವೊಂದನ್ನು ಕಟ್ಟುತ್ತಾ ಸಾಗುವ ಅರ್ಥಧಾರಿ (ಮಾತುಗಾರ!) ತನ್ನೆದುರು ಕುಳಿತವನನ್ನು ಪೋಷಿಸುತ್ತಾ, ಅವನಿಗೂ ಹೊಸ ದೃಷ್ಟಿಕೋನವನ್ನು ಒದಗಿಸುತ್ತಾ ಸಾಗುವುದರಿಂದ ತಾಳಮದ್ದಳೆಯೆಂಬುದು ಕೇವಲ ಮನರಂಜನೆಯ ಮಾಧ್ಯಮವಾಗದೆ ಪುರಾಣಗಳನ್ನು ಸದಾ ಬೆಳಗುವ ಪ್ರಭೆಯಾಗಿಯೂ ರೂಪಗೊಂಡಿದೆ. ಇಲ್ಲಿ ವರ್ಣಮಯ ವಸ್ತ್ರಾಭರಣಗಳಿಲ್ಲ, ಅಲಂಕಾರಗಳಿಲ್ಲ. ದಿನನಿತ್ಯದ ಶಿಷ್ಟ ಉಡುಪಿನಲ್ಲಿ ಎಂಬಂತೆ ಶುಭ್ರ ವಸನ, ಹೆಗಲ ಮೇಲೊಂದು ಶಲ್ಯ ಧರಿಸಿ ವೇದಿಕೆಯಲ್ಲಿ ಕುಳಿತುಕೊಳ್ಳುವ ಕಲಾವಿದರು ಮಾತಿನ ಮೂಲಕವೇ ತಾವು ಪಾತ್ರವಾಗಿ ಬದಲಾಗುತ್ತಾ ಹೋಗುತ್ತಾರೆ. ಮಾತಿನಲ್ಲಿಯೇ ಪುರಾಣಲೋಕವನ್ನು ಸೃಷ್ಟಿಸುತ್ತಾರೆ. ಪ್ರಸಂಗ ಸಾಹಿತ್ಯವನ್ನಾಧರಿಸಿ ಅರ್ಥ ವಿಸ್ತರಿಸುವ ಕಲಾವಿದರು ಪಾತ್ರವನ್ನು ನಿತ್ಯನೂತನವಾಗಿಸಬಲ್ಲ ಪರಿ ಬಹುಶಃ ಅನ್ಯ ರಂಗಭೂಮಿಯಲ್ಲಿ ಕಾಣಸಿಗುವುದಕ್ಕಿಲ್ಲ. ನವೋ ನವೋ ಭವತಿ ಜಾಯಮಾನಃ! ಒಬ್ಬನೇ ಕಲಾವಿದ ಒಂದೇ ಪಾತ್ರವನ್ನು ಹತ್ತು ಬಾರಿ ನಿರ್ವಹಿಸಿದಾಗ ಹತ್ತು ಹೊಸ ಹೊಳಹನ್ನು ಕೊಡಬಲ್ಲ. ದಾಖಲಿಸಬಲ್ಲೆವಾದರೆ ನಾಲ್ಕುಗಂಟೆಗಳ ಅವಧಿಯಲ್ಲಿ ಕಟ್ಟಲ್ಪಡುವ ಕಥಾನಕ ಒಂದೊಂದೂ ನೂರಾರು ಪುಟಗಳ ಪುಸ್ತಕವಾದೀತು. ಇದು ಮುಖ್ಯವೆನ್ನಿಸುವುದು ಕಲೆಯಾಗಿ ಇದು ಶ್ರೇಷ್ಠ ಎಂದಷ್ಟೇ ಅಲ್ಲ. ನಿರರ್ಗಳವಾಗಿ ಪ್ರವಹಿಸುವ ಈ ವಾಗ್ಝರಿ ಆಪ್ಯಾಯಮಾನವಾದ ಕನ್ನಡದಲ್ಲಿ ಇರುತ್ತದೆ ಎಂಬುದಕ್ಕಾಗಿ.
ಗಮಕಕಲೆಯು ಗಟ್ಟಿಯಾಗಿಯೇ ಬೇರೂರಿರುವ ತುಮಕೂರಿನಲ್ಲಿ ನಾವು ತಾಳಮದ್ದಳೆಯನ್ನು ಆಯೋಜಿಸುವ ಸಂದರ್ಭಗಳಲ್ಲಿ ಹೊಸಪ್ರೇಕ್ಷಕರನ್ನು ತಲಪುವ ಪ್ರಯತ್ನ ಸ್ವಲ್ಪ ಸವಾಲಿನದ್ದೇ ಆಗಿತ್ತು. ಮೊದಲ ಕಾರ್ಯಕ್ರಮದ ಸಂದರ್ಭ ಅನೇಕ ಮಂದಿ ಕನ್ನಡ ಉಪನ್ಯಾಸಕರೂ ‘ಯಕ್ಷಗಾನದ ಕನ್ನಡವೇ ನಮಗರ್ಥವಾಗದು. ಹೀಗಿರುವಾಗ ತಾಳಮದ್ದಳೆ ನಮಗರ್ಥವಾದೀತಾ?’ ಎಂಬ ಗೊಂದಲವನ್ನು ಹೊರಗೆಡಹಿದ್ದರು. ಬಲವಂತಕ್ಕೆ ಎಂಬ ಹಾಗೆ ಬಂದರೂ ಕೂಡಾ ಕೊನೆಯವರೆಗೂ ಇದ್ದು ಅವರು ನೀಡಿದ ಪ್ರತಿಕ್ರಿಯೆಯೆಂದರೆ ‘ಒಂದೇ ಒಂದು ಆಂಗ್ಲ ಭಾಷೆಯ ಪದ ಬಳಸದಂತೆ ಅಷ್ಟು ಸುಲಲಿತವಾಗಿ ಮಾತನಾಡುವುದು ಹೇಗೆ?’ ಮೊದಲಿಗೆ ಕಲಾವಿದರು ಆಡುವ ಮಾತುಗಳೆಲ್ಲ ಪೂರ್ವಯೋಜಿತ ಎಂದು ಭ್ರಮಿಸಿದ್ದ ಅವರು ಅಲ್ಲಿಯ ಸಂದರ್ಭಗಳನ್ನೂ ಸೇರಿಕೊಂಡಂತೆಯೇ ಅರ್ಥ ವಿಸ್ತರಿಸುವುದನ್ನು ಕಂಡು ‘ಇದು ಸಾಧ್ಯವಾಗುವುದು ಹೇಗೆ’! ಎಂದು ತಮ್ಮ ಬೆರಗನ್ನು ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ಪ್ರತಿಯೊಂದು ಕಾರ್ಯಕ್ರಮಕ್ಕೂ ತಪ್ಪದೆ ಬರುವುದನ್ನು ಅಭ್ಯಾಸ ಮಾಡಿಕೊಂಡರು. ಇನ್ನೂ ಅನೇಕರು ನಾಟ್ಯ ವೇಷಭೂಷಣಗಳಿಲ್ಲದೆ ಪಾತ್ರವಾಗಿ ಮೆರೆಯುವ ತಾಳಮದ್ದಳೆಯೇ ಹೆಚ್ಚು ಆಪ್ತ ಎಂದರು. ಆಡುಮಾತಿಗಿಂತ ಭಿನ್ನವಾದ ಕನ್ನಡ ಗ್ರಾಂಥಿಕವಾಗಿ ಅರಳಿಕೊಳ್ಳುತ್ತ ವಿಸ್ತರಿಸುವುದರಿಂದ ನಿಜಾರ್ಥದಲ್ಲಿ ತಾಳಮದ್ದಳೆಯೆಂದರೆ ಕನ್ನಡದ ಆಳ-ವಿಸ್ತಾರ.
ಡಾ. ರಮಾನಂದ ಬನಾರಿಯವರೆಂದಂತೆ ‘ತಾಳಮದ್ದಳೆ ಅರ್ಥಗಾರಿಕೆ ಯಕ್ಷಗಾನದ ಪ್ರತ್ಯೇಕ ಕಲಾಪ್ರಕಾರವಾಗಿ ಗುರುತಿಸಲ್ಪಡಬೇಕಾದ, ಗೌರವಿಸಲ್ಪಡಬೇಕಾದ ಎಲ್ಲ ಅರ್ಹತೆಯನ್ನೂ ಹೊಂದಿದೆ. ಯಾಕೆಂದರೆ ಮಾತನ್ನು ಕಲೆಯಾಗಿ ದುಡಿಸಿಕೊಳ್ಳುವ ಇನ್ನಿತರ ಮಾಧ್ಯಮಗಳಿಗಿಂತ (ಎಂದರೆ ಭಾಷಣ, ಹರಿಕಥೆ, ಪ್ರವಚನ, ನಾಟಕ ಇತ್ಯಾದಿಗಳಿಗಿಂತ) ತಾಳಮದ್ದಳೆ ಅರ್ಥಗಾರಿಕೆ ಭಿನ್ನವಾದುದು.’ ನಿಜವೇ. ತಾಳಮದ್ದಳೆಯು ಪ್ರಯೋಗಶೀಲ ಮಾತ್ರವಲ್ಲದೆ ಸ್ಪರ್ಧಾತ್ಮಕ ಕಲೆಯೂ ಹೌದು. ಉದಾಹರಣೆಗೆ ಸಾವಿರಾರು ಸಲ ಪ್ರದರ್ಶನಗೊಂಡಿರಬಹುದಾದ ಶ್ರೀಕೃಷ್ಣ ಸಂಧಾನ ಪ್ರಸಂಗವನ್ನು ತೆಗೆದುಕೊಂಡರೆ ಶ್ರೀಕೃಷ್ಣ ಮತ್ತು ಕೌರವರ ನಡುವಿನ ವಾಗ್ವಾದ ಪ್ರೇಕ್ಷಕರಿಗೆ ರಸದೌತಣ. ಕೆಲವೊಮ್ಮೆ ಇವರು ಪಾತ್ರವಾಗಿ ಮಾತನಾಡುತ್ತಾರೋ, ವೈಯಕ್ತಿಕವಾಗಿ ಇವರ ನಡುವೆ ಏನಾದರೂ ಮುನಿಸಿದೆಯೋ ಎಂದೇ ಅನ್ನಿಸುವಷ್ಟರ ಮಟ್ಟಿಗೆ ಚರ್ಚೆ ಬೆಳೆಯುತ್ತದೆ! ರಂಗದಿಂದ ಕೆಳಗಿಳಿಯುವಾಗ ಇಬ್ಬರೂ ಪರಸ್ಪರ ಮೆಚ್ಚುಗೆಯ ಮಾತಾಡಿಕೊಂಡು, ಪಾತ್ರವನ್ನು ಕಟ್ಟುವುದಕ್ಕೆ ಪೂರಕವಾಗಿ ಒದಗಿದ ಸಹಕಲಾವಿದರಿಗೆ ಧನ್ಯವಾದ ಹೇಳಿಕೊಂಡು ಅತ್ಯಂತ ಆತ್ಮೀಯವಾಗಿಯೇ ಮಾತನಾಡುತ್ತಿರುತ್ತಾರೆ. ನ್ಯಾಯಾಲಯದಲ್ಲಿ ವಕೀಲರಾದ ಆಪ್ತ ಸ್ನೇಹಿತರೇ ಎದುರುಬದುರಾಗಿ ವಾದಿಸಿ, ಹೊರನಡೆಯುವಾಗ ಹೆಗಲ ಮೇಲೆ ಕೈಯಿರಿಸಿಕೊಂಡು ಹೋದಂತೆಯೇ ಇದು.
ಅನೇಕ ಸಲ ಪಾತ್ರಗಳಿಗೆ ಸ್ವಗತ ಮಾತನಾಡುವ ಸಂದರ್ಭಗಳಿರುತ್ತವೆ. ಅದೇ ಪಾತ್ರವನ್ನು ಮತ್ತೆ ಮತ್ತೆ ವಹಿಸಿದರೂ ಏಕತಾನತೆ ಬಾರದು. ಪ್ರಸಂಗದ ಸಂದರ್ಭಕ್ಕನುಗುಣವಾಗಿ ವಿಷಯ ಅದೇ ಬರಬೇಕಾದರೂ ಅದು ಹೊರಹೊಮ್ಮುವ ರೀತಿಯಲ್ಲಿ ನಾವೀನ್ಯವನ್ನು ಕಲಾವಿದ ಕಾಯ್ದುಕೊಳ್ಳುತ್ತಾನೆ. ಸುತ್ತಲಿನ ಪರಿಸರವನ್ನು, ಪ್ರೇಕ್ಷಕರ ಮನಃಸ್ಥಿತಿಯನ್ನು ಆಧರಿಸಿಕೊಂಡು ಮಾತುಗಾರಿಕೆ ಬೆಳೆಯುತ್ತದೆ. ಸಣ್ಣ ಪ್ರತಿಕ್ರಿಯೆ, ಸ್ಪಂದನೆ ಪ್ರೇಕ್ಷಕರ ಕಡೆಯಿಂದ ಇದ್ದರಂತೂ ಮಾತನಾಡುವವರಿಗೆ ಉತ್ತೇಜನ ದೊರೆತೇ ದೊರೆಯುತ್ತದೆ. ಅಲ್ಲಿನ ಪ್ರೇಕ್ಷಕರೂ ತಮಗರಿಯದೆಯೆ ಕಥೆಯೊಳಗೆ ಬೆರೆತುಹೋಗುತ್ತಾರೆ. ಭಾವನಾತ್ಮಕವಾದ ಪ್ರಸಂಗಗಳಿದ್ದಾಗ ಕಲಾವಿದನ ಕಣ್ಣುಗಳು ನೆನೆದರೆ, ಅಲ್ಲಿರುವ ಪ್ರೇಕ್ಷಕರೂ ಕಂಬನಿಯಾಗಬಲ್ಲರು. ಅಷ್ಟರ ಮಟ್ಟಿಗೆ ಜನರನ್ನು ಹಿಡಿದಿಟ್ಟುಕೊಳ್ಳಬಲ್ಲ ಕಲೆ ಇದು.
ನಿತ್ಯವೂ ಇದೇ ರಂಗದಲ್ಲಿ ತೊಡಗಿಸಿಕೊಂಡವರು ದಿನನಿತ್ಯದ ಸಂವಹನದಲ್ಲಿಯೂ ಆ ಕ್ಷಣದ ಝಲಕ್ ಎಂಬ ಮಾತುಗಳನ್ನು ಆಡುವುದರಲ್ಲಿ ನಿಷ್ಣಾತರೇ ಇರುತ್ತಾರೆ. ಅದು ಬೇಕುಬೇಕೆಂದೇ ಮಾತನಾಡುವುದೇನೂ ಆಗಿರುವುದಿಲ್ಲ. ಹಾಗೆಂದು ಸಾಹಿತ್ಯದ ಔನ್ನತ್ಯವನ್ನು ಹೊಂದಿಯೇ ಮೂಡುವ ಸಾಲುಗಳು ನಿಜಕ್ಕೂ ಬರೆದಿಡಬೇಕಾದುದು ಎನ್ನಿಸದಿರದು. ತಾಳಮದ್ದಳೆಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅನೇಕ ಮಂದಿ ಹಿರಿಯ ಕಲಾವಿದರು, ಮತ್ತು ವರ್ತಮಾನದಲ್ಲಿ ಮುಂಚೂಣಿಯಲ್ಲಿರುವವರಲ್ಲಿ ಹಲವರು ಶಿಕ್ಷಣ ಕ್ಷೇತ್ರದಲ್ಲಿ ಇರುವವರೇ ಆಗಿದ್ದಾರೆ. ಅವರೆಲ್ಲರ ತರಗತಿಗಳ ಕುರಿತು ಶಿಷ್ಯರಲ್ಲಿ ಕೇಳಿದರೆ ಅವರ ಪ್ರತಿಕ್ರಿಯೆ ಎಂದರೆ ‘ಅವರ ತರಗತಿಗಳೇ ಯಕ್ಷಗಾನ ತಾಳಮದ್ದಳೆಯಂತೆ ಇರುತ್ತವೆ’. ಅದಕ್ಕೆ ಕಾರಣವಿಲ್ಲದಿಲ್ಲ. ಮಾತಿನ ರೀತಿಯೇ ಅರ್ಥಗಾರಿಕೆಯ ರೀತಿಯಲ್ಲಿ ಇರುತ್ತದೆ ಎಂಬುದು ಒಂದು ಆಕರ್ಷಣೆಯಾದರೆ ಒಂದು ತರಗತಿಯಲ್ಲಿ ಬೋಧಿಸಿ ಇನ್ನೊಂದು ತರಗತಿಯಲ್ಲಿ ಬೋಧಿಸಬೇಕಾದರೆ ಅಲ್ಲೊಂದು ಹೊಸ ಹೊಳಹು ಕಾಣಿಸಿರುತ್ತದೆ. ತನ್ಮೂಲಕ ವಿಸ್ತರಿಸುತ್ತಾ ಹೋಗುತ್ತದೆ. ಪಠ್ಯದ ಕುರಿತ ವಿಶ್ಲೇಷಣೆ, ವಿವರಣೆ ಹೆಚ್ಚು ಆಕರ್ಷಣೀಯವಾಗಿರುತ್ತದೆ.
ಬರಿಯ ಮಾತಿಗೆಂದಷ್ಟೇ ಅಲ್ಲ, ಬರವಣಿಗೆಯನ್ನಾದರೂ ಅಗಾಧವಾಗಿ ಪ್ರಭಾವಿಸಬಲ್ಲ ಸಾಮಥ್ರ್ಯ ಯಕ್ಷಗಾನ ತಾಳಮದ್ದಳೆಗಿದೆ. ಅದರಲ್ಲಿ ತೊಡಗಿಸಿಕೊಂಡಂತೆ, ಬರವಣಿಗೆಯ ಭಾಷೆಯೂ ಸುಧಾರಿಸುತ್ತದೆ. ನೆನೆದಂತೆ ಸಾಂದರ್ಭಿಕವಾದ ಉದಾಹರಣೆಗಳೂ ಪುರಾಣದ ಎಳೆಗಳೂ ಒದಗುತ್ತಾ ಹೋಗುತ್ತವೆ. ‘ಉತ್ಥಾನ’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಹಿರಿಯ ಉಪನ್ಯಾಸಕರೂ, ಯಕ್ಷಗಾನ ಅರ್ಥಧಾರಿಗಳೂ ಆಗಿರುವ ರಾಧಾಕೃಷ್ಣ ಕಲ್ಚಾರರ ಪರಕಾಯ ಪ್ರವೇಶ ಅಂಕಣವೂ (ಭಾಗ 1 ಮತ್ತು 2 ಈಗಾಗಲೇ ಪ್ರಕಟಗೊಂಡು ಜನಪ್ರಿಯವಾಗಿವೆ) ಇದರದ್ದೊಂದು ಮಾದರಿ. ನಿರಂತರವಾಗಿ ಅವರು ಹಲವು ಪಾತ್ರಗಳನ್ನು ತಮ್ಮೊಳಗೆ ಆವಾಹಿಸಿಕೊಳ್ಳುವ ಪರಿಣಾಮ! ಪರಕಾಯ ಪ್ರವೇಶವಾಗಬೇಕಾದರೆ ಅಂಥದ್ದೊಂದು ಧ್ಯಾನಸ್ಥ ಸ್ಥಿತಿ ಅಗತ್ಯವಿದೆಯಲ್ಲ, ಅದನ್ನು ಸಾಧಿಸಿಕೊಳ್ಳುವುದಕ್ಕೂ ನೆರವಾಗಿ ನಿಂತಿರುವುದು ಅರ್ಥಗಾರಿಕೆಯೇ.
ಕನ್ನಡ ರಾಜ್ಯೋತ್ಸವದ ಈ ಹಂತದಲ್ಲಿ ಕನ್ನಡದ ಉಳಿವಿಗಾಗಿ ನಡೆಸುವ ಹೋರಾಟಗಳ ಕುರಿತು ಅಬ್ಬರದ ಮಾತುಗಳು ಕೇಳಬಹುದು. ಇಡಿಯ ತಿಂಗಳು ಹಲವು ಕಡೆಗಳಲ್ಲಿ ಹಲವು ಬಗೆಯ ಕನ್ನಡಕ್ಕೆ ಪೂರಕವಾದ ಕಾರ್ಯಕ್ರಮಗಳು ನಡೆಯಬಹುದು. ‘ಕನ್ನಡವಲ್ಲ, ತಿಂಗಳು ನಡೆಸುವ ಗುಲ್ಲಿನ ಕಾಮನಬಿಲ್ಲು’ ಎಂಬ ಕವಿವಾಣಿ ಸದಾ ನೆನಪಿನಲ್ಲಿರಬೇಕಾದ ಸಮಯವಿದು. ಶಾಲಾಕಾಲೇಜುಗಳಲ್ಲಿ ಅನಿವಾರ್ಯವೆಂಬಂತೆ ಆಂಗ್ಲ ಮಾಧ್ಯಮಕ್ಕೆ ಮೊರೆ ಹೋಗಿರುವ ನಾವು ಕನ್ನಡವನ್ನು ಅಂತರಂಗದ ಭಾಷೆಯಾಗಿ ಉಳಿಸಿಕೊಳ್ಳುವ ಬದ್ಧತೆ ತೋರಬೇಕಿದೆ. ಮಕ್ಕಳು ಕನ್ನಡ ಕಲಿಯುತ್ತಿಲ್ಲವೆಂದೋ, ಶಾಲೆಗಳಲ್ಲಿ ಕನ್ನಡವನ್ನು ಸರಿಯಾಗಿ ಕಲಿಸುತ್ತಿಲ್ಲವೆಂದೋ ಪರಿತಪಿಸುವ ಪೋಷಕರಿಗೆ ನಾವು ಹೇಳಬಹುದಾದುದು ಇಷ್ಟೇ: ಮಕ್ಕಳಿಗೆ ತಾಳಮದ್ದಳೆ ಕೇಳುವುದನ್ನು ಕಲಿಸಿ. ಯಕ್ಷಗಾನದ, ತಾಳಮದ್ದಳೆಗಳ ಪ್ರೇಕ್ಷಕರಾಗಿ ಮಕ್ಕಳು ಬೆಳೆದರೂ ಸಾಕು ಉತ್ಕøಷ್ಟವಾದ ಕನ್ನಡವನ್ನು ಅವುಚಿಕೊಳ್ಳುತ್ತಾರೆ. ಕನ್ನಡಾಂಬೆ ಮೈಕೈ ತುಂಬಿಕೊಂಡು ಸಾಲಂಕೃತೆಯಾಗಿ ಶೋಭಿಸುತ್ತಾಳೆ.
(ಚಿತ್ರಗಳು: ಆರತಿ ಪಟ್ರಮೆ)