ವಿಶೇಷ ಲೇಖನ
-ಡಾ. ನಾ. ಮೊಗಸಾಲೆ
ಇಂಗ್ಲಿಷಿನ ಮೂಲಕ ಕನ್ನಡಕ್ಕೆ ಬಂದ ಕಾವ್ಯ ಪ್ರಕಾರವನ್ನು ನಮ್ಮ ಜನ ‘ಕಾವ್ಯ’, ‘ಕವನ’, ‘ಪದ್ಯ’, ‘ಗೀತೆ’ ಮೊದಲಾದ ಹೆಸರಿನಲ್ಲಿ ಸ್ವೀಕರಿಸಿದರು. 1955ರ ಸುಮಾರಿಗೆ ಕನ್ನಡದಲ್ಲಿ ನವ್ಯಸಾಹಿತ್ಯ ಸೃಷ್ಟಿಯಾದ ಸಂದರ್ಭದಲ್ಲಿ ಯಾವುದನ್ನು ಕಾವ್ಯ, ಕವನ, ಗೀತೆ, ಪದ್ಯ ಎಂದು ಕರೆಯಬೇಕೆಂಬ ವಿಚಾರ ಮುನ್ನೆಲೆಗೆ ಬಂತು. ನವೋದಯ ಪ್ರಕಾರದಲ್ಲಿ ಬಂದವುಗಳನ್ನೆಲ್ಲ ವಿಮರ್ಶೆಯ ಸುಖಕ್ಕಾಗಿ ವಿಮರ್ಶಕರು ಪದ್ಯ, ಗೀತೆ ಎಂಬುದಾಗಿ ಕರೆದರು. ಅದೇ ಹೊತ್ತಿಗೆ ಮುಕ್ತಛಂದದಲ್ಲಿ ಬರುತ್ತಿದ್ದ ಕವಿತೆಗಳನ್ನೂ ಕವಿತೆ, ಕವನ, ಕಾವ್ಯ ಎಂದು ಹೇಳಲು ವಿಮರ್ಶಕರು ಮುಂದಾದರು.
ಒಬ್ಬ ಕವಿಗೆ ಒಂದು ನಿರ್ದಿಷ್ಟ ವಿಷಯದ ಕುರಿತು ಕವಿತೆ ಬರೆಯುವಂತೆ ಹೇಳುವುದು ಸರಿಯೇ? ಮತ್ತು ಅದು ಕವಿಗೆ ಸಾಧ್ಯವೇ? ಕವಿ ಯಾವತ್ತೂ ನಿರಂಕುಶಮತಿಯವನು. ಬುದ್ಧಿ-ಭಾವಗಳು ಒಂದಾಗಿ ಮೇಲಿಂದ ಮೇಲೆ ಕಾಡಿದಾಗ ಮಾತ್ರ ಬರೆಯಬಹುದು ಎಂಬುದು ನನ್ನ ನಂಬಿಕೆ. ಇದಕ್ಕೆ ಅಪವಾದ ಇಲ್ಲದೇ ಇಲ್ಲ. ಆದರೆ ಅದು ಅರಳದ ಮಲ್ಲಿಗೆಯನ್ನು ಸಂಜೆ ಹೊತ್ತು ನೇಯ್ದು ತಲೆಗಿಟ್ಟು ಖುಷಿಪಟ್ಟಂತೆಯೇ ಸರಿ. ಇದಕ್ಕೆ ಅಪವಾದವೆಂಬಂತೆ ‘ಕನ್ನಡದಲ್ಲಿ ಅಪರೂಪದ ಕವಿತೆ’ ಎಂದು ಮಾನ್ಯವಾಗಿರುವ ಅಡಿಗರ ‘ಭೂಮಿಗೀತ’ ಹುಟ್ಟಿದ್ದು ಮೈಸೂರು ಆಕಾಶವಾಣಿಯವರು ಒಂದು ವಿಷಯವನ್ನು ಮುಂದಿಟ್ಟು ನಡೆಸಿದ ಕವಿಗೋಷ್ಠಿಯಿಂದ.
ಕವನ ಅಥವಾ ಕಾವ್ಯವನ್ನು ಒಂದೆರಡು ಓದಿನಿಂದ ಬಗೆಯುವುದು, ಅರ್ಥೈಸುವುದು ಸುಲಭವಲ್ಲ. ಒಳ್ಳೆಯ ಕವನ ಮೊದಲ ಓದಿಗೆ ದಕ್ಕುವುದಿಲ್ಲ. ಮತ್ತೆ ಮತ್ತೆ ಓದಿದರೂ ತೆರೆದುಕೊಳ್ಳದಿರಬಹುದು. ಕವನ ಇರುವುದು ಹೀಗೆ. ಹೆಣ್ಣಿನ ಮನಸ್ಸಿನ ಹಾಗೆ, ಅರ್ಥ ಮಾಡಿಕೊಳ್ಳುವುದು ಕಷ್ಟ.
ಇಲ್ಲಿ ನಾನು ಕವಿತೆಗಳನ್ನು ವಿಮರ್ಶಿಸುವುದಕ್ಕೆ ಹೋಗದೆ ಕಾವ್ಯದ ಸಾಧ್ಯತೆಗಳನ್ನು ವಿಸ್ತರಿಸಲು ಮತ್ತು ತನ್ನ ಕಾಲದ ಕಾವ್ಯದ ನಿಲವು-ಒಲವುಗಳನ್ನು ತೆರೆದಿಡಲು ಪ್ರಯತ್ನಿಸುತ್ತೇನೆ.
ನಾವು ಕವಿತೆ ಎಂದರೇನು ಎಂದು ಹೇಳುವುದು ಬಹಳ ಸುಲಭ ಎಂದುಕೊಂಡಿದ್ದೇವೆಯೇನೋ! ಹೀಗಾಗಿ ಸಾಹಿತ್ಯದ ವಿವಿಧ ಪ್ರಕಾರಗಳಿಗಿಂತ (ಕಾದಂಬರಿ, ಸಣ್ಣಕತೆ, ನಾಟಕ, ವಿಮರ್ಶೆ, ಪ್ರಬಂಧ ಇತ್ಯಾದಿ) ಹೆಚ್ಚು ಕವನಸಂಗ್ರಹಗಳು ನಮ್ಮಲ್ಲಿ ಹೊರಬರುತ್ತಿವೆ – ಎಂಬ ಗುಮಾನಿ ನನ್ನನ್ನು ಕಾಡುತ್ತಿದೆ. ಪಿ. ಲಂಕೇಶರಿಂದ ‘ಒಂದು ಜನಾಂಗದ ಕಣ್ಣುತೆರೆಸಿದ ಕವಿ’ ಎಂದು ಮೆಚ್ಚುಗೆ ಪಡೆದ ಮಹಾಕವಿ ಗೋಪಾಲಕೃಷ್ಣ ಅಡಿಗರು ಜೀವಮಾನದಲ್ಲಿ ಪ್ರಕಟಿಸಿದ್ದು ಕೇವಲ ಹದಿಮೂರು ಕವನಸಂಗ್ರಹಗಳನ್ನು ಮಾತ್ರ. ಅವರ ಕಾವ್ಯಜೀವನದ ಪ್ರಾರಂಭದಲ್ಲಿ ಪ್ರಕಟವಾದ ಕವನಸಂಗ್ರಹಗಳಲ್ಲಿ ಹತ್ತಿಪ್ಪತ್ತು ಕವಿತೆಗಳಿದ್ದರೆ, ಮುಂದೆ ಪ್ರಕಟವಾದ ಅವರ ‘ಚೆಂಡೆಮದ್ದಳೆ’ಯಲ್ಲಿ ಏಳು, ‘ಭೂಮಿಗೀತ’ದಲ್ಲಿ ಎಂಟು ಮತ್ತು ‘ವರ್ಧಮಾನ’ದಲ್ಲಿ ಹತ್ತು ಕವಿತೆಗಳಿವೆ. ಇದನ್ನು ಉದ್ಧರಿಸಲು ಕಾರಣ, ಕವಿತೆಗಳನ್ನು ಬರೆಯಲು ತಮ್ಮ ಎಲ್ಲ ಬೌದ್ಧಿಕ ಸಾಮಥ್ರ್ಯವನ್ನು ಪಣಕ್ಕಿಡಬೇಕಾಗುತ್ತದೆ ಎಂದು ಅಡಿಗರು ಕಾವ್ಯಸೃಷ್ಟಿಯನ್ನು ಪರಿಗಣಿಸಿದ್ದರು ಎಂಬುದನ್ನು ಸೂಚಿಸಲು.
ಅಡಿಗರು ತಮ್ಮ ದೃಷ್ಟಿಯಲ್ಲಿ ಕವಿತೆಯೆಂದರೆ ಏನು ಎಂಬುದನ್ನು ತಮ್ಮ ಸಮಗ್ರ ಕಾವ್ಯ ಪ್ರಕಟನೆಯ ಸಂದರ್ಭದಲ್ಲಿ (1976) ಹೀಗೆ ದಾಖಲಿಸಿದ್ದಾರೆ:
1. ಮನಸ್ಸಿನ ಮೇಲ್ಪದರಿನಲ್ಲಿ ಕಾವ್ಯರಚನೆಯಾದರೆ ಉತ್ತಮ ಕಾವ್ಯ ಸೃಷ್ಟಿಯಾಗದು. ಪ್ರಜ್ಞೆಯ ಜೊತೆಗೆ ಅದರ ತಳಮಳ ಅಥವಾ ಮೇಲ್ಪದರೂ ಸೇರಿಕೊಂಡರೆ ಉತ್ತಮ ಕಾವ್ಯ ಸೃಷ್ಟಿ ಸಾಧ್ಯ. ಅದಕ್ಕೆ ತಾಳ್ಮೆ ಮತ್ತು ಪರಿಶ್ರಮ ಅಗತ್ಯ.
2. ಕವಿ ಸಾಧಿಸಬೇಕಾದದ್ದು ಇತರರಿಗೆ ಮನೋರಂಜನೆಯಾಗಬೇಕು ಎಂಬುದನ್ನಲ್ಲ. ಅದರಲ್ಲಿ ಕವಿಯ ವ್ಯಕ್ತಿವಿಶಿಷ್ಟತೆಯ ಮರುಹುಟ್ಟು ಪಡೆಯಬೇಕು.
3. ರೂಢಿಯಲ್ಲಿರುವ ಮೌಲ್ಯಗಳನ್ನು ಸ್ಫೋಟಿಸಿದರೂ, ಅದು ಹೊಸಕಾಲದ ಮೌಲ್ಯಗಳಿಗೆ ಅನುಗುಣವಾಗಿ ಪುನರ್ರೂಪಿಸಲ್ಪಡಬೇಕು.
4. ಬರೆಯಬೇಕು ಎನ್ನುವ ಒತ್ತಡವು ಸ್ಫೋಟಿಸುತ್ತದೆ ಎನ್ನುವ ತನಕ ಕಾಯಬೇಕು. ಸಂಖ್ಯಾದೃಷ್ಟಿಯಿಂದ ಬರೆಯಬಾರದು. ಹೆಚ್ಚುಹೆಚ್ಚು ಬರೆದಷ್ಟೂ ಕಾವ್ಯ ತನ್ನ ಉತ್ಕøಷ್ಟತೆಯನ್ನು ಕಳಚಿಕೊಳ್ಳಬಹುದು.
5. ಕವಿಯಾದವನು ಸೂಕ್ಷ್ಮಸಂವೇದಿಯಾಗಿರಬೇಕು. ಸಮಾಜಕ್ಕೆ, ಸಾಂಸ್ಕøತಿಕಕ್ಷೇತ್ರಕ್ಕೆ ಬದ್ಧನಾಗಿರುವ ಹಾಗೇ ಅನ್ಯರಿಗೆ ಹೊಳೆಯದ ಹೊಸಹೊಸ ಒಳನೋಟಗಳನ್ನು ಬಗೆಯಲ್ಲಿ ಹುದುಗಿಡುವವನಾಗಬೇಕು. ಹೆಚ್ಚು ಮಾತುಗಾರಿಕೆಗೆ ಬೀಳದೆ ಹೊಸಹೊಸ ಪ್ರತಿಮೆಗಳ ಮೂಲಕ ಕಾವ್ಯವನ್ನು ಸಿದ್ಧಿಸಿಕೊಳ್ಳಬೇಕು. ಸಮಕಾಲೀನತೆಯ ಹಾಗೆ ಸಾರ್ವಕಾಲಿಕವಾದ ಸತ್ಯವನ್ನೂ ಒಳಗಣ್ಣಿನಿಂದ ಹೊರಗಣ್ಣಿಗೆ ತರಬೇಕು.
6. ಕವಿಯಾದವನು ತನಗೆ ನಿಜವಾಗಿ ಅನ್ನಿಸಿದ್ದಕ್ಕೆ ಪ್ರಾಮಾಣಿಕನಾಗಿರಬೇಕು ಮತ್ತು ಕಾವ್ಯಕ್ಕೂ ಬದುಕಿಗೂ ನಡುವೆ ಕಂದಕವನ್ನು ಸೃಷ್ಟಿಸದೆ ಇರಬೇಕು.
* * *
ಈ ನೆಲೆಯಲ್ಲಿ ಇಂದಿನ ನಮ್ಮ ಕಾವ್ಯ ಇದೆಯೇ? ಎಂದರೆ, ಖಂಡಿತವಾಗಿಯೂ ಇಲ್ಲ ಎನ್ನುವುದು ನಮಗೆಲ್ಲ ತಿಳಿದಿದೆ. ಹಾಗಾಗಿ ನಾವು ಕಾವ್ಯಸೃಷ್ಟಿಯ ಗುರಿಯನ್ನು ಪರಿಕಲ್ಪಿಸುವಾಗ ಮೇಲಿನ ಮಾತುಗಳನ್ನು ಅಂತಃಸ್ಥವಾಗಿಸಿಕೊಳ್ಳಬೇಕು.
ಇಂದಿನ ಕವಿಗಳಿಗೆ, ಮುಖ್ಯವಾಗಿ ಪೂರ್ವಸೂರಿಗಳ ಕಾವ್ಯ ಪರಿಚಯ ಕಡಮೆ ಅಥವಾ ಇಲ್ಲವೇ ಇಲ್ಲ ಎಂದರೂ ತಪ್ಪಲ್ಲ. ಕಳೆದ ನಲವತ್ತೈದು ವರುಷಗಳಿಂದ ಕಾಂತಾವರ ಕನ್ನಡ ಸಂಘದಿಂದ ‘ಮುದ್ದಣ ಕಾವ್ಯ ಸ್ಪರ್ಧೆ’ ಏರ್ಪಡಿಸಿರುವ ಅನುಭವದಿಂದ ನಾನು ಈ ಮಾತನ್ನು ಹೇಳುವ ಧೈರ್ಯ ತೋರಿದ್ದೇನೆ. ಅನೇಕ ಹೊಸಪೀಳಿಗೆಯ ಕವಿಗಳಿಗೆ ಮುದ್ದಣ ಹೇಗೂ ಗೊತ್ತಿಲ್ಲ. ಆಮೇಲಿನ ಬೇಂದ್ರೆ, ಪುಟ್ಟಪ್ಪ, ಪು.ತಿ.ನ., ಅಡಿಗ, ಜಿ.ಎಸ್.ಎಸ್., ಕಣವಿ, ಕೆ.ಎಸ್.ನ. ಮೊದಲಾದವರನ್ನೂ ಅವರು ಓದಿಯೇ ಇಲ್ಲ. ಓದಿದ್ದರೂ ಅದು ಗಂಭೀರ ಅಧ್ಯಯನ ದೃಷ್ಟಿಯಿಂದಲ್ಲ ಎನ್ನುವುದು ಅವರ ಕಾವ್ಯದಿಂದ ತಿಳಿಯುತ್ತದೆ. ಅವರು ಓದಿದ್ದು, ಅದು ನಮ್ಮ ಮಾಧ್ಯಮಗಳಲ್ಲಿ ಬರುವ ಕವಿತೆಗಳನ್ನಷ್ಟೆ. ಬುದ್ಧ, ಬಸವ, ಅಲ್ಲಮ, ಅಂಬೇಡ್ಕರ್ ಮೊದಲಾದವರನ್ನು ತಮ್ಮ ಕಾವ್ಯಕ್ಕೆ ಎಳೆದುತಂದರೆ ಸಾಕು ಎಂದು ಕೆಲವರು ತಿಳಿದಂತಿದೆ.
ಕಾವ್ಯದಲ್ಲಿ ಅಮೂರ್ತತೆಯನ್ನು ತಂದರೆ ಅದೇ ದೊಡ್ಡ ಸಾಧನೆ ಎಂಬ ಭಾವನೆ ಅನೇಕರಲ್ಲಿದೆ. ನಾನು ಅಮೂರ್ತತೆ, ರೂಪಾಂತರ (ಮೆಟಾಫರ್) ಬೇಡ ಎನ್ನುತ್ತಿಲ್ಲ. ಆದರೆ ಅದರ ಅನುಭವ ಅವರಿಗೆ ಇದೆಯೇ, ಅಥವಾ ಅದರ ಅನುಭಾವ ಅವರಿಗೆ ಆಗಿದೆಯೇ? ಎಂಬುದು ನನ್ನ ಪ್ರಶ್ನೆ. ಇದು ಅವರ ಮತ್ತು ಅವರ ಕಾವ್ಯದ ಪ್ರಾಮಾಣಿಕತೆಯನ್ನು ಪ್ರಶ್ನಿಸಿದಂತಾಗುತ್ತದೆ ಎನ್ನುವುದೂ ನನಗೆ ಗೊತ್ತು.
ಇನ್ನೊಂದು ಮಾತು. ಕಾವ್ಯವನ್ನು ಬರೆಯುವವರು ಒಂದು ಸಣ್ಣ ವಸ್ತು ಅಥವಾ ವಿಷಯವನ್ನು ಹಿಡಿದುಕೊಂದು ಅದನ್ನು ಎಷ್ಟು ಸಾಧ್ಯವೋ ಅಷ್ಟು ಹಿಂಜುವುದೇ ಕಾವ್ಯ ಎಂದು ಪರಿಗಣಿಸುವುದನ್ನೂ ಕಾಣಬಹುದು.
ಈ ಹಿನ್ನೆಲೆಯಲ್ಲಿ ಕಾವ್ಯದ ತಾತ್ತ್ವಿಕತೆಯ ಕಡೆಗೆ ಹೆಚ್ಚು ಒತ್ತು ಕೊಡಬೇಕಾಗಿದೆ.
* * *
ಈ ಲೇಖನದಲ್ಲಿ ನಾನು ಆಧುನಿಕ ಕನ್ನಡ ಕಾವ್ಯ ಎಂಥೆಂಥ ಮಜಲುಗಳನ್ನು ಹಾದುಬಂದಿದೆ ಎಂಬುದಕ್ಕೆ ಒತ್ತುಕೊಡಬಯಸಿದ್ದೇನೆ.
ಆಧುನಿಕ ಕನ್ನಡ ಸಾಹಿತ್ಯ ಅರ್ಥಾತ್ ನವೋದಯ ಸಾಹಿತ್ಯ ನಮ್ಮಲ್ಲಿ ಪ್ರಾರಂಭವಾದದ್ದು ಇಪ್ಪತ್ತನೇ ಶತಮಾನದ ಮೊದಲ ದಿನಗಳಲ್ಲಿ. ಆವರೆಗೆ ನಮ್ಮಲ್ಲಿ ಏನಿದ್ದರೂ ಅದು ಮಹಾಕಾವ್ಯಗಳ ಯುಗವಾಗಿತ್ತು. ಹನ್ನೆರಡನೇ ಶತಮಾನದಲ್ಲಿ ಮಹಾಕಾವ್ಯಗಳಿಂದ ಯಾವ ದರ್ಶನ ಸಿಗಬಹುದೋ ಅಂಥ ದರ್ಶನವನ್ನು ವಚನಗಳು ನೀಡಿದ್ದವು. ಒಂದರ್ಥದಲ್ಲಿ ನವೋದಯ ಸಾಹಿತ್ಯವು ಇಪ್ಪತ್ತನೇ ಶತಮಾನದಲ್ಲಿ ಹುಟ್ಟುವ ಸಂದರ್ಭದಲ್ಲಿ ವಚನಸಾಹಿತ್ಯದಲ್ಲಿ ವಿಜೃಂಭಿಸಿದ್ದ ದೇಸೀಯತೆ ಮತ್ತು ನಮ್ಮ ಮಾತಿಗೆ ಹತ್ತಿರವಿದ್ದ ‘ಮಾತಿ’ನ ಸಾತತ್ಯವು ‘ವಚನ’ಗಳೆಂದು ಅನ್ವರ್ಥನಾಮ ಪಡೆದದ್ದು ಒಂದು ಅಪರೂಪದ ವಿಸ್ಮಯ.
ನವೋದಯ ಸಾಹಿತ್ಯಕ್ಕೆ ಮತ್ತು ಅದರಲ್ಲಿನ ಬೇರೆ ಬೇರೆ ಪ್ರಾಕಾರಗಳಿಗೆ ಪ್ರೇರಣೆ ದೊರೆತದ್ದು ವಿದೇಶೀ ಸಾಹಿತ್ಯದಿಂದ. ಇಂಗ್ಲಿಷಿನಲ್ಲಿ ಆಗಲೇ ಬಂದಿದ್ದ ಕಾದಂಬರಿ, ಸಣ್ಣಕತೆ ಮತ್ತು ಭಾವಗೀತೆಯ ಪ್ರಕಾರಗಳ ಸಾಹಿತ್ಯ ಕನ್ನಡದ್ದೇ ಎಂಬಂತೆ ನಮ್ಮಲ್ಲೂ ಹೊರಬಂದುವು. (ಅವುಗಳು ಯಾವುವು ಯಾವಾಗ ಹೊರಬಂದುವು ಯಾರು ಅದರ ಕರ್ತೃ ಇತ್ಯಾದಿಗಳನ್ನು ಬದಿಗಿರಿಸಿ ಕಾವ್ಯಕ್ಕೆ ಮಾತ್ರ ನಾನು ಮಿತಿಗೊಳಿಸಿಕೊಳ್ಳುತ್ತಿದ್ದೇನೆ.)
ಭಾರತೀಯ ಸಾಹಿತ್ಯವು ಮೊದಲಿಗೆ ಗುರುತಿಸಲ್ಪಟ್ಟಿರುವುದು ರಾಮಾಯಣ ಮತ್ತು ಮಹಾಭಾರತದಂಥ ಸಂಸ್ಕøತ ಮಹಾಕಾವ್ಯಗಳ ಮೂಲಕ. ಆಮೇಲೆ ಅದೇ ಸಂಸ್ಕøತ ಕವಿಗಳಿಂದ ಮುಖ್ಯವಾಗಿ ಭಾಸ ಮೊದಲಾದವರಿಂದ ಸಂಸ್ಕøತ ನಾಟಕಗಳು ಬಂದರೂ ಅವು ಕಾವ್ಯಗಳೆಂದೇ ಕರೆಯಲ್ಪಟ್ಟವು. ಬಾಣಭಟ್ಟನ ಕಾದಂಬರಿಯೂ ಕೂಡಾ ಕಾವ್ಯದ ಮಾನದಂಡದಲ್ಲೇ ಗುರುತಿಸಲ್ಪಟ್ಟಿತು. ಈ ಮೇಲ್ಪಂಕ್ತಿಯನ್ನೇ ಕನ್ನಡವೂ ಅನುಸರಿಸಿದ್ದರಿಂದ, ಕವಿರಾಜಮಾರ್ಗದಿಂದ ಪ್ರಾರಂಭವಾಗಿ ಪಂಪ, ವಚನಕಾರರು, ದಾಸ ಪರಂಪರೆಯವರೆಗೆ ಶ್ರೀಮಂತಗೊಂಡ ಎಲ್ಲ ಸೃಜನಗಳೂ ಕಾವ್ಯವೇ ಅಂದರೆ ಕಾವ್ಯಧರ್ಮವನ್ನೇ ಮುಖವಾಗಿಸಿದವುಗಳು. ಇಂಥ ಸಾಹಿತ್ಯದ ಕುರಿತಾದ ಚಿಂತನೆಯು ‘ಕಾವ್ಯಮೀಮಾಂಸೆ’ ಎಂಬ ಮಾನದಂಡಕ್ಕೆ ಒಳಗಾಯಿತು. ಹೀಗೆ ಹದಿನೆಂಟನೇ ಶತಮಾನದ ಕೊನೆಯ ತನಕ ಸೃಷ್ಟಿಯಾದ ಎಲ್ಲ ಪ್ರಾಕಾರದ ಸೃಷ್ಟಿಗಳೂ ಅದು ‘ಕಾವ್ಯ’ವೇ ಆಗಿದೆ ಎಂಬಂತಿತ್ತು. ವಚನಸಾಹಿತ್ಯವನ್ನು ಕೂಡಾ ನಾವು ಕಾವ್ಯವೆಂದು ಒಪ್ಪಿಕೊಳ್ಳಬಹುದು.
ವಿದೇಶೀ ಸಾಹಿತ್ಯದ ಪ್ರೇರಣೆಯಿಂದ ಹಟ್ಟಿಯಂಗಡಿ ನಾರಾಯಣರಾವ್, ಬಿ.ಎಂ.ಶ್ರೀ. ಮೊದಲಾದವರಿಂದ ಇಂಗ್ಲಿಷ್ ಭಾಷೆಯಲ್ಲಿನ ಆಧುನಿಕ ಇಂಗ್ಲಿಷ್ ಕಾವ್ಯಗಳು ಕನ್ನಡದಲ್ಲಿ ರೂಪಾಂತರಗೊಂಡವು. ಅಂಥ ಕಾವ್ಯಗಳು ಈ ನೆಲದÀ ಸತ್ತ್ವ ಮತ್ತು ಸ್ವÀತ್ವವನ್ನು ಅಳವಡಿಸಿಕೊಂಡು ‘ಇದು ಕನ್ನಡದ್ದೇ’ ಎಂಬಂತೆ ಕಾಣತೊಡಗಿದವು. ಸಾಹಿತ್ಯಾಸಕ್ತರು ಕೂಡಾ ಅದನ್ನು ಸಹಜವೆಂಬಂತೆ ಒಪ್ಪಿಕೊಂಡರು. ಉದಾಹರಣೆಗೆ, ಪಂಜೆಯವರಿಂದ ಅನುವಾದಿಸಲ್ಪಟ್ಟ ಒಂದು ‘ಶಿಶುಗೀತೆ’ ಕನ್ನಡದ್ದೇ ಆದಂತಿದೆ:
Twinkle Twinkle little star
How I wonder what you are
Up above the world so high
Like a diamond in the sky
ಎನ್ನುವುದು
ಮಿನುಗೆಲೆ ಮಿನುಗೆಲೆ ನಕ್ಷತ್ರ
ನನಗಿದು ಚೋದ್ಯವು ಬಲು ಚಿತ್ರ
ಘನ ಗಗನದಿ ಬಲು ದೂರದಲಿ
ಮಿನುಗುವೆ ವಜ್ರಾಕಾರದಲಿ
ಎಂದು ರೂಪಾಂತರ ಪಡೆಯಿತು.
ಇದು ಇಂಗ್ಲಿಷ್ ಕವಿತೆಯ ಭಾವಾನುವಾದವಾದರೂ ‘ಇದು ಕನ್ನಡದ್ದಲ್ಲ’ ಎಂದು ಹೇಳಲು ಸಾಧ್ಯವಿಲ್ಲದಷ್ಟು ಸಹಜವಾಗಿ ರೂಪಾಂತರಗೊಂಡಿದ್ದರಿಂದ ನಾವು ಅದನ್ನು ನಮ್ಮದೇ ಎಂದು ಒಪ್ಪಿಕೊಂಡೆವು.
ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ Twinkle ಎಂಬುದು ‘ಮಿನುಗೆಲೆ’ಯಾಗಿದ್ದಷ್ಟೇ ಅಲ್ಲದೆ, ಮೂಲಕಾವ್ಯದಲ್ಲಿದ್ದ ಲಯವೂ ಕನ್ನಡದ್ದಾಗಿಹೋಗಿದೆ. ಇದರಂತೆಯೇ ಕನ್ನಡಕ್ಕೆ ಕನ್ನಡದ್ದಾಗಿಯೇ ಎಂಬಂತೆ ಬಂದ ಇಂಗ್ಲಿಷ್ ಸಾಹಿತ್ಯವು ಕನ್ನಡದಲ್ಲಿ ಈ ಬಗೆಯ ಕಾವ್ಯಪ್ರಕಾರವು ಹುಲುಸಾಗಿ ಬೆಳೆಯಲು ಪ್ರೋತ್ಸಾಹಕವಾಯಿತು. ಇಪ್ಪತ್ತನೇ ಶತಮಾನದ ಆರಂಭದ ದಿನಗಳ ತನಕ ಕನ್ನಡದಲ್ಲಿ ಭಾವಗೀತೆಗಳಂತಹ ಒಂದು ಪ್ರಕಾರವು ಅಷ್ಟಾಗಿ ಇದ್ದದ್ದು ನನಗೆ ತಿಳಿದಿಲ್ಲ. ಆ ದಿನಗಳಲ್ಲಿ ಸಂಸ್ಕøತದ ಸುಭಾಷಿತಗಳ ನೇರ ಅನುವಾದಗಳಿದ್ದುವೇ ಹೊರತು, ಹಿಂದೆ ಹೇಳಿದಂತೆ ಮಹಾಕಾವ್ಯಗಳು ವಚನಗಳು ಮತ್ತು ದಾಸರ ಪದಗಳಿಗೇ ಅಗ್ರಸ್ಥಾನವಿತ್ತು.
ಇಂಗ್ಲಿಷಿನ ಮೂಲಕ ಕನ್ನಡಕ್ಕೆ ಬಂದ ಈ ಕಾವ್ಯ ಪ್ರಕಾರವನ್ನು ನಮ್ಮ ಜನ ‘ಕಾವ್ಯ’, ‘ಕವನ’, ‘ಪದ್ಯ’, ‘ಗೀತೆ’ ಮೊದಲಾದ ಹೆಸರಿನಲ್ಲಿ ಸ್ವೀಕರಿಸಿದರು.
1955ರ ಸುಮಾರಿಗೆ ಕನ್ನಡದಲ್ಲಿ ನವ್ಯಸಾಹಿತ್ಯ ಸೃಷ್ಟಿಯಾದ ಸಂದರ್ಭದಲ್ಲಿ ಯಾವುದನ್ನು ಕಾವ್ಯ, ಕವನ, ಗೀತೆ, ಪದ್ಯ ಎಂದು ಕರೆಯಬೇಕೆಂಬ ವಿಚಾರ ಮುನ್ನೆಲೆಗೆ ಬಂತು. ನವೋದಯ ಪ್ರಕಾರದಲ್ಲಿ ಬಂದವುಗಳನ್ನೆಲ್ಲ ವಿಮರ್ಶೆಯ ಸುಖಕ್ಕಾಗಿ ವಿಮರ್ಶಕರು ಪದ್ಯ, ಗೀತೆ ಎಂಬುದಾಗಿ ಕರೆದರು. ಅದೇ ಹೊತ್ತಿಗೆ ಮುಕ್ತಛಂದದಲ್ಲಿ ಬರುತ್ತಿದ್ದ ಕವಿತೆಗಳನ್ನೂ ಕವಿತೆ, ಕವನ, ಕಾವ್ಯ ಎಂದು ಹೇಳಲು ವಿಮರ್ಶಕರು ಮುಂದಾದರು.
ಇಂದಿನ ಕವಿಗೋಷ್ಠಿ ಎಂದು ಕರೆಸಿಕೊಳ್ಳುವ ಕವಿತೆಗಳ ವಾಚನದಲ್ಲಿ ಬಹುತೇಕ ಕವಿತೆಗಳು ಕಾವ್ಯ ಎಂದೇ, ಅಂದರೆ, ನವ್ಯಕಾವ್ಯ ಎಂದೇ ಬಿಂಬಿಸಲ್ಪಡುತ್ತಿವೆ. ಯಾರಾದರೂ ರಾಗದಿಂದ ಅಥವಾ ಸ-ರಾಗವಾಗಿ ಭಾವಗೀತೆಗಳನ್ನು ಓದಿದರೆ, ‘ಇವನಿನ್ನೂ ಯಾವ ಕಾಲದಲ್ಲಿದ್ದಾನೆ?’ ಎಂಬಂತೆ ನಾವು ಆ ಕವಿಯನ್ನು ಕೀಳಂದಾಜಿಸುತ್ತೇವೆ. ಅಂದರೆ ಈಗ ನಾವು ಭಾವಗೀತೆ ಪ್ರಕಾರವನ್ನು ಪೂರ್ತಿಯಾಗಿ ತಿರಸ್ಕರಿಸಿದ್ದೇವೆ.
ನವೋದಯದ ಕಾಲಘಟ್ಟದಲ್ಲಿ ಅಂದರೆ 1900-1950ರಲ್ಲಿ ಬೇಂದ್ರೆ, ಕುವೆಂಪು, ಪು.ತಿ.ನ. ಕಡೆಂಗೋಡ್ಲು, ಕೆ.ಎಸ್. ನರಸಿಂಹಸ್ವಾಮಿ, ಕಣವಿ, ಜಿ.ಎಸ್. ಶಿವರುದ್ರಪ್ಪ ಅವರಂಥವರು ನೆನಪಾಗುತ್ತಾರೆ. ಬೇಂದ್ರೆಯವರು ಮೊದಮೊದಲು ದೇಸೀ ಪರಂಪರೆಯ ಭಾಷೆಯಲ್ಲಿ ಆಧುನಿಕ ಬದುಕಿನ ಮುಖಗಳನ್ನು ಮುಖಾಮುಖಿಯಾಗಿಸಿದರೂ, ತಮ್ಮ ಇಳಿವಯಸ್ಸಿನಲ್ಲಿ ಅಂತರಂಗದೊಂದಿಗೆ ಸಂವಾದಿಸಲು ಹೊರಟು ‘ದಾರ್ಶನಿಕ ಕವಿ’ಯಾದರು. ಸಂಸ್ಕøತಭೂಯಿಷ್ಠ ಶೈಲಿಯ ಕವಿತೆಗಳ ರಚನೆಯಲ್ಲಿ ಹೆಚ್ಚು ಆಸಕ್ತಿ ತೋರಿದಂತಿರುವ ಕುವೆಂಪು ಅವರು ‘ರಾಮಾಯಣ ದರ್ಶನ’ದಂಥ ಮಹಾಕಾವ್ಯಕ್ಕೆ ಶರಣಾದರು. ಉಳಿದ ಕವಿಗಳು ತಮ್ಮ ತಮ್ಮ ಜೀವನಾನುಭವಗಳನ್ನು ಮುಕ್ತವಾಗಿ ಮತ್ತು ಆಪ್ತವಾಗಿ ಛಂದೋಬದ್ಧವಾಗಿ ತೆರೆದಿಟ್ಟರು.
ಇಂಥ ನವೋದಯ ಕಾವ್ಯ ಪಂಥದಲ್ಲಿ ಅಥವಾ ಕಾಲಘಟ್ಟದಲ್ಲಿ ಕಾವ್ಯಕ್ಕೆ ಒಂದು ಛಂದಸ್ಸು ಇದ್ದೇ ಇರುತ್ತಿತ್ತು. ಜೊತೆಗೆ ಲಯ ಮತ್ತು ಗೇಯತೆ ಇರಲೇಬೇಕೆಂಬಂತೆ ಅವುಗಳು ಹುಟ್ಟಿಕೊಳ್ಳುತ್ತಿದ್ದವು. ಇದಕ್ಕೆ ಸಾಂಕೇತಿಕ ಉದಾಹರಣೆ ಬೇಂದ್ರೆಯವರ ‘ಬೆಳಗು’ ಕವಿತೆ.
ಮೂಡಣ ಮನೆಯ ಮುತ್ತಿನ ನೀರಿನ
ಎರಕವ ಹೊಯ್ದಾ/ನುಣ್ಣನ್ನೆರಕವ ಹೊಯ್ದಾ
ಬಾಗಿಲು ತೆರೆದು ಬೆಳಕು ಹರಿದು/
ಜಗವೆಲ್ಲ ತೊಯ್ದ/ ಜಗವೆಲ್ಲ ತೊಯ್ದ
ಇದೇ ರೀತಿ ಛಂದೋಬದ್ಧವಾಗಿ ಬರೆದ ಕುವೆಂಪು ಅವರ ಅನೇಕ ಕವಿತೆಗಳು ಸೌಂದರ್ಯಪ್ರಜ್ಞೆಯಲ್ಲಿ ಅಪರೂಪದವು. ಪು.ತಿ.ನ, ಕಣವಿ, ಜಿ.ಎಸ್.ಎಸ್., ನಿಸಾರ್ ಅಹಮದ್, ಕಡೆಂಗೋಡ್ಲು, ಎಕ್ಕುಂಡಿ, ಕಯ್ಯಾರ ಮೊದಲಾದವರ ಕವಿತೆಗಳು ಈ ಮಾದರಿಗೇ ಸೇರಿದವಾಗಿವೆ. ಇವರ ಜೊತೆಯಲ್ಲೇ ಗೋಪಾಲಕೃಷ್ಣ ಅಡಿಗರೂ ಅಪರೂಪವೆನ್ನಬಹುದಾದ ಅನೇಕ ನವೋದಯ ಗೀತೆಗಳನ್ನು ಆ ದಿನಗಳಲ್ಲಿ ಬರೆದಿದ್ದು ಅವುಗಳಲ್ಲಿ ‘ಮೋಹನಮುರಲಿ’ ಎನ್ನುವುದು ಪ್ರಸಿದ್ಧವಾದುದು.
ಯಾವ ಮೋಹನ ಮುರಳಿ ಕರೆಯಿತು ದೂರ
ತೀರಕೆ ನಿನ್ನನು?
ಯಾವ ವೃಂದಾವನವು ಕರೆಯಿತು ನಿನ್ನ
ಮಣ್ಣಿನ ಕಣ್ಣನು?
ಇದು ಲೌಕಿಕದ ಜೊತೆ ಅಲೌಕಿಕವನ್ನು ಮುಖಾಮುಖಿಯಾಗಿಸುವ ಅಪರೂಪದ ಕವಿತೆಯೆನಿಸಿತು.
ಆ ದಿನಗಳಲ್ಲಿ ಶಿಶುಸಾಹಿತ್ಯಕಾರರೂ ಕೂಡಾ ಸೊಗಸಾದ ಇಂಥ ಕವಿತೆಗಳನ್ನು ಬರೆದಿದ್ದರು. ಉದಾಹರಣೆಗೆ ಶಿಶುಸಾಹಿತಿಯೆಂದು ಪ್ರಖ್ಯಾತರಾದ ಪಂಜೆ ಮಂಗೇಶರಾಯರು ‘ಅದ್ಭುತ’ವೆನ್ನಬಹುದಾದ ಗೇಯಗುಣವುಳ್ಳ ಮತ್ತು ಲಯಬದ್ಧವಾದ ಅನೇಕ ಕವಿತೆಗಳನ್ನು ಬರೆದರು. ಹಾಗೆಯೇ ಇಂಗ್ಲಿಷಿನಿಂದಲೂ ಕನ್ನಡಕ್ಕೆ ಅನೇಕ ಕವಿತೆಗಳನ್ನು ತಂದರು. ಅವರು ಅನುವಾದಿಸಿದ ‘ತೆಂಕಣಗಾಳಿಯ ಸೊಗಸು’ ಕನ್ನಡದ್ದೇ ಆಗಿದೆ:
ಗಿಡಗಿಡದಿಂ ಚೆಲುಗೊಂಚಲು ಮಿಂಚಲು
ಮಿಡಿಯನು ಹಣ್ಣನು ಉದುರಿಸಿ ಕೆದರಿಸಿ
ಎಡದಲಿ ಬಲದಲಿ ಕೆಲದಲಿ ನೆಲದಲಿ
ಪಡುವಣ ಮೋಡವ ಬೆಟ್ಟಕೆ ಘಟ್ಟಕೆ
ಹೊಡೆದಟ್ಟುತ ಕೋಲ್ಮಿಂಚನು ಮಿರುಗಿಸಿ
ಗುಡುಗನು ಗುಡುಗಿಸಿ ನೆಲವನು ನಡುಗಿಸಿ
ಬಂತೈ ಬಂತೈ ಬೀಸುತ ಬಂತೈ
ಪಡುವಣ ಗಾಳಿಯು ಕೊಂಕಣ ಸೀಮೆಗೆ
ಇದರ ಸೊಗಸು ಮತ್ತು ನಾಟಕೀಯತೆ ಅದ್ಭುತವಾಗಿದ್ದು ವಾಸ್ತವವಾಗಿ ಇದು ಶಿಶುಗೀತೆಯೇ ಆಗಿದ್ದರೂ ಅದನ್ನು ಮೀರಿ ನಿಂತ ಭಾವಗೀತೆಯೇ ಆದಂತಾಗಿದೆ.
ಈ ರೀತಿ ನವೋದಯದ ಕವಿಗಳು ಕವಿತೆಗಳಲ್ಲಿ ಪ್ರಾಸ, ಅನುಪ್ರಾಸ, ಲಯ, ಗೇಯತೆಗಳೇ ಕಾವ್ಯದ ಜೀವಾಳ ಎಂಬ ಬಗೆಯಲ್ಲಿ ಮತ್ತು ಕಾವ್ಯಕ್ಕೆ ಕಾವ್ಯವೇ ಆದರ್ಶ ಹಾಗೂ ಉದ್ದೇಶವಾಗಿರಬೇಕೆಂಬ ಬಗೆಯಲ್ಲಿ ಬರೆದರು. ಹಾಗಾಗಿ ಈ ನೆಲ ಎನ್ನುವುದು ನವೋದಯ ಕಾಲಘಟ್ಟದ ಕವಿಗಳಿಗೆ ತಾಯಿಯಾಯಿತು. ರಾಷ್ಟ್ರೀಯತೆ ಎನ್ನುವುದು ಧ್ಯೇಯವಾಯಿತು. ದೇವರು, ಧರ್ಮ, ಪ್ರಕೃತಿ ಎನ್ನುವುದು ಬದುಕನ್ನು ಅರ್ಥೈಸಿಕೊಳ್ಳುವ ಮೂಲವಸ್ತುವಾಯಿತು. ಅವರು ತಮ್ಮ ಕಾವ್ಯಗಳಲ್ಲಿ ಇವೆಲ್ಲವನ್ನೂ ಧ್ವನಿ ಮತ್ತು ಪ್ರತಿಮೆಗಳ ರೂಪದಲ್ಲಿ ತಂದರು. ಕಾವ್ಯಶಿಖರದ ಕೊನೆಯ ಹಂತದಲ್ಲಿ ಒಂದು ಸಂದೇಶವೂ ‘ಪ್ರಬಂಧಗುಣ’ವಾಗಿ ಇರಬೇಕೆಂದು ಪರಿಭಾವಿಸಿಕೊಂಡರು. ಪಂಜೆ ಮಂಗೇಶರಾಯರ ಸೂರ್ಯೋದಯದ ವರ್ಣನೆಯ ಈ ಶಿಶುಗೀತೆ ಕೂಡಾ ಇದಕ್ಕೆ ಉದಾಹರಣೆಯ ಹಾಗಿದೆ.
ಮೂಡಿದನು ರವಿ ಮೂಡಿದನು
ಕತ್ತಲೊಡನೆ ಜಗಳಾಡಿದನು
ಮೂಡಣ ರಂಗಸ್ಥಳದಲಿ ನೆತ್ತರು
ಮಾಡಿದನು ಕುಣಿದಾಡಿದನು
ಇಲ್ಲಿ, ಮೂಡಣ ರಂಗಸ್ಥಳವೆನ್ನುವುದು ಒಂದು ಅದ್ಭುತ ಪ್ರತಿಮೆಯಾದರೆ, ಮುಂದಿನ ಸಾಲುಗಳಲ್ಲಿ
ಬೆಳಕಿನ ಕಣ್ಣುಗಳಿಂದ ಸೂರ್ಯನು
ನೋಡಿದನು ಬಿಸಿಲೂಡಿದನು
ಚಿಲಿಪಿಲಿ ಹಾಡನು ಹಾಡಿಸಿ ಹಕ್ಕಿಯ
ಗೂಡಿನ ಹೊರ ಹೊರ ದೂಡಿದನು
ಇಲ್ಲಿ, ಹಕ್ಕಿಗಳು ತಾವಾಗಿಯೇ ಹೊರಗೆ ಹೋಗಿಲ್ಲ, ಸೂರ್ಯನೇ ಅವುಗಳನ್ನು ಹೊರಗೆ ದೂಡಿದ – ಎನ್ನುವುದು ಒಂದು ಅದ್ಭುತ ಕಲ್ಪನೆಯಾಗಿದ್ದು ‘ಹೊರಹೊರ’ ಎನ್ನುವ ಶಬ್ದ ಮತ್ತೆ ಮತ್ತೆ ಪ್ರತಿಧ್ವನಿಸಿ ಹೊರದೂಡುವ ಪ್ರಕ್ರಿಯೆಗೆ ಹೆಚ್ಚಿನ ನಾಟಕೀಯತೆಯನ್ನು ತಂದುಕೊಡುತ್ತದೆ. ಇದು ಶಿಶುಗೀತೆಯಾದರೂ ಇದರ ವೈಶಿಷ್ಟ್ಯ ಇರುವುದು ಇಲ್ಲಿ ಕಾಣಸಿಗುವ ಪ್ರತಿಮೆ, ರೂಪಕ, ಧ್ವನಿ, ನಾಟಕೀಯತೆ ಮತ್ತು ಕೊನೆಯ ಪ್ರಬಂಧಗುಣದಿಂದ.
* * *
ಈ ರೀತಿ ನವೋದಯದ ಕವಿಗಳು, ಅಂತರಂಗದ ಅನ್ವೇಷಣೆಗಿಂತ ಹೊರಗೆನಿಂತು ಅಥವಾ ಹೊರಮುಖವಾಗಿ ನೋಡಿ ಪ್ರಕೃತಿ ದೇವರು ರಾಷ್ಟ್ರೀಯತೆ ಧರ್ಮ ಪ್ರೀತಿಪ್ರೇಮ ಇತ್ಯಾದಿಗÀಳ ಹೊರಮೈಯನ್ನು ನಯವಾಗಿ ಸ್ಪರ್ಶಿಸಿ ‘ಹಕ್ಕಿ ಹಾರುತಿದೆ ನೋಡಿದಿರಾ?’ ಎಂದ ಹಾಗೆ ‘ಇಳಿದು ಬಾ ತಾಯೆ ಇಳಿದು ಬಾ’ ಎಂದರು. ‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ’ ಎಂದು ಬಿನ್ನವಿಸಿದರು. ‘ಕಟ್ಟುವೆವು ನಾವು ಹೊಸನಾಡೊಂದನು ರಸದ ಬೀಡೊಂದನು’ ಎಂದು ಕನಸು ಕಟ್ಟಿದರು. ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಆದರ್ಶವನ್ನು ಮೆರೆದರು. ‘ಇದು ಬರಿ ಬೆಳಗಲ್ಲೋ ಅಣ್ಣಾ’ ಎಂದು ಬೆರಗಾದರು ‘ದೇವರ ದಯ ಮಾಣೋ’ ಎಂದು ತಲೆ ಬಾಗಿದರು.
ಇಂಥ ರಚನೆಗಳಿಂದ ಈ ನೆಲದ ಭಾಷೆಗೆ ಶ್ರೀಮಂತಿಕೆ ಬಂತು. ಜೊತೆಗೆ ಕನ್ನಡಭಾಷೆಯ ಸಾಧ್ಯತೆಗಳು ವಿಸ್ತರಿಸಿದವು. ಆದರೆ ಕೆಲ ಕಾಲದ ಮುಂದೆ ಇದು ‘ಸವೆದ ದಾರಿ’ಯಾದಂತೆ ಕಾಣತೊಡಗಿತು. ಕಾರಣ ‘ಸಿದ್ಧಶೈಲಿ’ಗೆÉ ಒಗ್ಗಿಹೋದ ಕಾವ್ಯ ಮತ್ತು ಪುನರಾವರ್ತನೆಗೊಂಡ ಅದೇ ಅದೇ ವಿಷಯಗಳು; ಅಂದರೆ ಹೊಸದಾಗಿ ಯಾವ ಕವನ ಬಂದರೂ ಅದು ಹಿಂದೆ ನಾವು ಓದಿದ್ದ ಭಾವ ಮತ್ತು ಭಾಷೆಯನ್ನೇ ಅದು ಮತ್ತೆ ಮತ್ತೆ ಹೇಳಿದಂತೆನಿಸಿತು. ಪ್ರಾಯಶಃ ಇದು ಹೊಸತಾಗಿ ತೆರೆದುಕೊಂಡ ಸಾಹಿತ್ಯಮಾರ್ಗವು ನಿಧಾನವಾಗಿ ಸವಕಲಾಗುವ ಸಹಜ ಸ್ಥಿತಿಯಿರಬಹುದು.
ಆಗಲೇ ಈ ಮಾರ್ಗದಲ್ಲಿ ನಡೆದ ಕಡೆಂಗೊಡ್ಲು ಶಂಕರಭಟ್ಟ ಮತ್ತು ಬೇಂದ್ರೆಯವರಿಂದ ವಿಶೇಷವಾಗಿ ಪ್ರಭಾವಿತರಾಗಿದ್ದ ಗೋಪಾಲಕೃಷ್ಣ ಅಡಿಗರಿಗೆ ಇದು ತನ್ನದಲ್ಲದ ಮಾರ್ಗ ಎನಿಸತೊಡಗಿತು. ಅವರು ಆಗಲೇ ‘ಭಾವತರಂಗ’ (1946), ‘ಕಟ್ಟುವೆವು ನಾವು’ (1948), ‘ನÀಡೆದು ಬಂದ ದಾರಿ’ (1952) ಎನ್ನುವ ಮೂರು ಕವನ ಸಂಗ್ರಹಗಳನ್ನು ನವೋದಯ ಪ್ರಕಾರದಲ್ಲೇ ಪ್ರಕಟಿಸಿದ್ದರು. ಇವುಗಳಲ್ಲಿನ ಮೊದಲಿನ ಮತ್ತು ಎರಡನೆಯ ಸಂಗ್ರಹಕ್ಕೆ ಕ್ರಮವಾಗಿ ಬೇಂದ್ರೆ ಮತ್ತು ಪು.ತಿ.ನ. ಮುನ್ನುಡಿ ಬರೆದು ಅಡಿಗರ ಕಾವ್ಯಪ್ರತಿಭೆಯನ್ನು ಮೆಚ್ಚಿದ್ದರು. ಹಾಗಿದ್ದರೂ ಅಡಿಗರಿಗೆ ತಾವು ಕಾವ್ಯ ಪ್ರವೇಶಿಸಿದ ದಿನಗಳಲ್ಲೇ ‘ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು/ಭಿನ್ನವಾಗಿದೆ ಮನವು’ ಎಂಬ ಮನಃಸ್ಥಿತಿ ಇತ್ತು. ಹಾಗಾಗಿ ನವೋದಯ ಕಾವ್ಯ ಮಾರ್ಗಕ್ಕಿಂತ ಭಿನ್ನವಾದ ದಾರಿಯೊಂದನ್ನು ತಾನು ಖಂಡಿತ ಬಳಸಿಕೊಳ್ಳದಿದ್ದರೆ, ತನ್ನ ಕಾವ್ಯವೂ ‘ಹತ್ತರೊಡನೆ ಹನ್ನೊಂದಾಗುತ್ತದೆ’ ಎಂಬ ಅಭಿಪ್ರಾಯಕ್ಕೆ ಅವರು 1950ರ ವೇಳೆಗೆ ಬಂದರೆನಿಸುತ್ತದೆ. ಹೀಗಾಗಿ ಅವರು ನವೋದಯಕ್ಕಿಂತ ಭಿನ್ನವಾಗಿ ಬರೆಯಲು ಮುಂದಾಗಿ, ‘ಭಾಷೆ ಪುನಃ ಪುನಃ ಸೃಷ್ಟಿಯಾದಾಗಲೇ ಅದು ಭಾವ, ವಿಚಾರಗಳನ್ನು ಯಥಾವತ್ತಾಗಿ ಪ್ರತಿಬಿಂಬಿಸಲು ಸಮರ್ಥವಾಗುತ್ತದೆ. ಗತಕಾಲದ ಭಾಷೆಯು ಭಾವವನ್ನು ಕೊಲ್ಲುತ್ತದೆ. ಮನಸ್ಸನ್ನು ಮಂಕಾಗಿಸುತ್ತದೆ. ಅರ್ಥಕ್ಕಿಂತ ಶಬ್ದಗಳ ಹಾರಾಟವೇ ಹೆಚ್ಚಿ ಅರ್ಥ ಮರೆಯುತ್ತದೆ. ಸಂಕೇತವು ಮೂಲರೂಪವನ್ನು ಮರೆಸುತ್ತದೆ. ಉತ್ಸವಮೂರ್ತಿಯು ತಾನೇ ಮೂಲವಿಗ್ರಹವೆಂದು ವಿಜೃಂಭಿಸುತ್ತದೆ. ಆದಕಾರಣವೇ ಹೊಸ ಜೀವನ ಭಾವನೆಗಳಿಗೆ ತಕ್ಕ ರೀತಿ ರೂಪುಗೊಳ್ಳಬೇಕಾದ ಕಾಲ ಈಗ ಸಾಹಿತಿಗಳನ್ನು ಎದುರಿಸಿ ನಿಂತಿದೆ’ ಎಂಬ ನಿಲವಿಗೆ ಬಂದಿದ್ದರು.
ಅಡಿಗರ ಈ ನಿರ್ಧಾರದ ಹಿಂದೆ, ವಿದೇಶಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿದ್ದ ರೊಮ್ಯಾಂಟಿಕ್ ಕಾವ್ಯಪಂಥವು ಹಿಂದೆ ಸರಿದು ‘ನವ್ಯಕಾವ್ಯ’ ಎಂಬ ಕಾವ್ಯಮಾರ್ಗವು ಪ್ರಾರಂಭವಾದ ಪ್ರಭಾವವೂ ಇತ್ತು. ಆಗ ನವೋದಯ ಮಾರ್ಗದಲ್ಲಿ ಬರೆಯುತ್ತಿದ್ದ ಕನ್ನಡದ ಕವಿಗಳಲ್ಲಿ ಅನೇಕರು ‘ಅಡಿಗರದ್ದು ಅತಿರೇಕದ್ದು. ಇದು ಈ ನೆಲಕ್ಕೆ ಸೇರಿದ್ದಲ್ಲ; ಸೇರುವಂಥದ್ದೂ ಅಲ್ಲ’ ಎಂಬ ಭಾವದಿಂದ ಅಡಿಗರ ಕಾವ್ಯವನ್ನು ಟೀಕಿಸಲು ಮುಂದಾದರು. ಅಡಿಗರು 1952ರಿಂದ 1954ರ ಅವಧಿಯಲ್ಲಿ ಬರೆದ ಏಳು ಕವನಗಳನ್ನು ‘ಚೆಂಡೆಮದ್ದಳೆ’ ಎನ್ನುವ ಹೆಸರಿನಲ್ಲಿ (1954ರಲ್ಲಿ) ಪ್ರಕಟಿಸಿದರು. ಇದು ಕನ್ನಡ ಸಾಹಿತ್ಯ ಪ್ರಕಾರದಲ್ಲಿ ನವಕ್ರಾಂತಿಯನ್ನೇ ಸೃಷ್ಟಿಸಿತು. ಅಡಿಗರ ಕಾವ್ಯವನ್ನು ವಿಶೇಷ ಅಧ್ಯಯನ ಮಾಡಿದ ಹಿರಿಯ ವಿಮರ್ಶಕ ಡಾ. ಸುಮತಿಂದ್ರ ನಾಡಿಗರು ಹೀಗೆ ಹೇಳುತ್ತಾರೆ:
“ಭಾರತದ ಅತ್ಯಂತ ಶ್ರೇಷ್ಠ ಕವಿಗಳಲ್ಲೊಬ್ಬರಾದ ಗೋಪಾಲಕೃಷ್ಣ ಅಡಿಗರು ಸ್ವಾತಂತ್ರ್ಯಪೂರ್ವ ನವೋದಯ ಕಾವ್ಯಮಾರ್ಗದ ಸಿದ್ಧಶೈಲಿಯಲ್ಲಿ ಕಾವ್ಯರಚÀನೆಗೆ ಆರಂಭಿಸಿದರು. ನವೋದಯ ಕಾವ್ಯದ ಭಾವವೂ ಅನುಭವವೂ ಅತಿ ಸರಳವಾಗಿ ಸತ್ಯದಿಂದ ದೂರ ಹೋಗುತ್ತಿದೆ, ಹೊಸ ಮನೋಧರ್ಮವನ್ನು ವ್ಯಕ್ತಪಡಿಸಲು ಹೊಸ ಸಾಲಿಗೆ ಹೊಸನುಡಿಕಟ್ಟು ರೂಪುಗೊಳ್ಳಬೇಕು ಎಂದು ಪ್ರಯೋಗದಲ್ಲಿ ತೊಡಗಿದರು. ಹೀಗೆ ನವ್ಯಕಾವ್ಯವು 1950ರ ದಶಕದಲ್ಲಿ ಪ್ರಾರಂಭವಾಯಿತು.
“ರಾಜಕೀಯ, ಶಿಕ್ಷಣ, ಸಾಹಿತ್ಯ, ಸಾಮಾಜಿಕ ಕ್ಷೇತ್ರಗಳ ಭ್ರಷ್ಟತೆಯನ್ನು ಚುರುಕಾದ ವ್ಯಂಗ್ಯ ನಾಟಕ ಮಾರ್ಗದಲ್ಲಿ ಖಂಡಿಸಿದ ಅಡಿಗರ ಕಾವ್ಯ ಛಂದಸ್ಸಿನಲ್ಲಿ ನುಡಿಕಟ್ಟಿನಲ್ಲಿ ಬದುಕಿನ ಚಿತ್ರಣದಲ್ಲಿ ಭಾಷೆಯಲ್ಲಿ ಪ್ರತಿಮೆಗಳಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ಅದರ ಪ್ರಭಾವ ಕಾವ್ಯ ಕಾದಂಬರಿ ವಿಮರ್ಶೆ ಸಣ್ಣಕತೆ ಮತ್ತು ನಾಟಕ ಪ್ರಕಾರಗಳಲ್ಲಿ ಕಂಡುಬಂತು. ಅಡಿಗರು ಪ್ರಾರಂಭಿಸಿದ ‘ಸಾಕ್ಷಿ’ ಸಾಹಿತ್ಯಪತ್ರಿಕೆಯಲ್ಲಿ ಹೊಸ ಬರಹಗಾರರಿಗೆ ಸಾಂಗತ್ಯವಿತ್ತು. ವೈಚಾರಿಕತೆಗೆ ಪ್ರಾಮುಖ್ಯ ಸಿಕ್ಕಿತು.”
ಈ ಮೇಲಿನ ಮಾತುಗಳಿಂದ ನವೋದಯ ಸಾಹಿತ್ಯ ಮಾರ್ಗಕ್ಕಿಂತ ನವ್ಯ ಸಾಹಿತ್ಯಮಾರ್ಗವು ಹೇಗೆ ಭಿನ್ನ ಮತ್ತು ಯಾಕೆ ಭಿನ್ನವಾಯಿತು ಎನ್ನುವುದು ನಮಗೆ ಅರ್ಥವಾಗುತ್ತದೆ. ಈ ರೀತಿಯ ಅರ್ಥ ಮತ್ತು ಅರ್ಥವಂತಿಕೆಯಿಂದ ‘ನವ್ಯ ಸಾಹಿತ್ಯ ಮಾರ್ಗವು’ ಸುಮಾರು ಎರಡು ದಶಕಗಳ ಕಾಲ ವಿಜೃಂಭಿಸಿತು. ಆ ದಿನಗಳಲ್ಲಿ ಅಡಿಗರ ಜೊತೆಗೆ ರಾಮಚಂದ್ರ ಶರ್ಮರು ಹೆಜ್ಜೆ ಹಾಕಿ, ತನ್ನ ಕೊನೆಯ ದಿನಗಳ ತನಕ ನವ್ಯ ಮಾರ್ಗವನ್ನೇ ಅನುಸರಿಸಿ ಬರೆದರೆ, ಅಡಿಗರು ತಮ್ಮ ಕೊನೆಯ ದಿನಗಳಲ್ಲಿ ತಾನೇ ಕರ್ಣಧಾರತ್ವ ವಹಿಸಿದ್ದ ನವ್ಯಮಾರ್ಗದಿಂದ ತುಸು ಹಿಂದೆಸರಿದು, ಆಗ ತಾನೇ ಹುಟ್ಟಿಕೊಂಡಿದ್ದ ಬಂಡಾಯ ಕಾವ್ಯಮಾರ್ಗಕ್ಕೂ ಸ್ಪಂದಿಸಿದ್ದಲ್ಲದೆ ಮತ್ತೆ ನವೋದಯಕ್ಕೆ ‘ಹತ್ತಿರ’ವಾದ ಕೆಲವು ಕವಿತೆಗಳನ್ನು ಬರೆದರು. ಇದು ಲೇಖಕನಾದವನು ಸ್ಥಿರವಾಗಿ ಒಂದು ಶೈಲಿಗೆ ತನ್ನ ಸಾಹಿತ್ಯವನ್ನು ಮೀಸಲಿಡಬಾರದು ಎನ್ನುವುದಕ್ಕೆ ಬರೆದ ಮೇಲ್ಪಂಕ್ತಿ ಎಂದರೆ ಪ್ರಾಯಶಃ ತಪ್ಪಾಗದು.
ಆ ದಿನಗಳಲ್ಲಿ ನವ್ಯಕಾವ್ಯ ಮಾರ್ಗದಲ್ಲಿ ಅಡಿಗರನ್ನು ಅನುಸರಿಸುವ ಒಂದು ಪಡೆಯೇ ಸೃಷ್ಟಿಯಾಗಿತ್ತು. ಅವರಲ್ಲಿ ಅನಂತಮೂರ್ತಿ, ಲಂಕೇಶ, ತಿರುಮಲೇಶ್, ಗಂಗಾಧರ ಚಿತ್ತಾಲ, ಚೆನ್ನಯ್ಯ, ರಾಮಚಂದ್ರ ಶರ್ಮ, ಚಂಪಾ, ಕಂಬಾರ ಮೊದಲಾದವರು ಮುಂಚೂಣಿಗೆ ಬಂದರೆ, ಹೊಸತಾಗಿ ಬರೆಯಲು ಪ್ರಾರಂಭಿಸಿದವರು ಕೂಡಾ ನವ್ಯಕಾವ್ಯದಾಚೆಗೆ ವಾಲತೊಡಗಿದರು. ದ. ಕನ್ನಡದ ಸುಬ್ರಾಯ ಚೊಕ್ಕಾಡಿ ಅವರು ಈ ನೆಲೆಯಲ್ಲಿ ಮುಂಚೂಣಿಗೆ ಬಂದವರಲ್ಲೊಬ್ಬರು. ಆದರೆ ಅಡಿಗರು ಮತ್ತು ಅವರನ್ನು ಬಲವಾಗಿ ಬೆಂಬಲಿಸಿದ ಈ ಮೇಲಿನ ಸಾಹಿತಿಗಳು ಅಡಿಗರು ಏರಿದ ಆ ಮೆಟ್ಟಿಲನ್ನು ಏರಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ ನವ್ಯಕಾವ್ಯ ಅಂದರೆ ಮುಕ್ತ ಛಂದಸ್ಸಿನದ್ದು; ಕಾವ್ಯಕ್ಕೆ ಛಂದಸ್ಸೇ ಬೇಕಿಲ್ಲ ಎಂದು ಕವಿ ಪರಿಭಾವಿಸುವುದು ಹೆಚ್ಚಾಯಿತು. ಗದ್ಯದ ವಾಕ್ಯಗಳನ್ನು ನಡುನಡುವೆ ತುಂಡರಿಸಿ ಕೆಳಕೆಳಗೆ ಬರೆದರೆ ಅದೂ ಕಾವ್ಯ ಎಂಬಂತೆ ಪರಿಭಾವಿಸುವವರೂ ಹುಟ್ಟಿಕೊಂಡರು. ಅಂಥವರು ನವ್ಯಕಾವ್ಯದ ಮೂಲಗುಣವಾಗಿದ್ದ ಪ್ರತಿಮೆ, ಸಂಕೇತ, ಲಯ, ವ್ಯಂಗ್ಯ, ನಾಟಕೀಯತೆಗಳನ್ನು ತಮ್ಮ ಕೃತಿಗಳಲ್ಲಿ ತರಲಾರದಾದರು. ಹಾಗೆಯೇ ನವ್ಯದ ಅನಾಥಪ್ರಜ್ಞೆ ಪರಕೀಯತೆ, ಅಸಂಗತತೆ ಮೊದಲಾದ ಸಂಗತಿಗಳು ಕಾವ್ಯದಲ್ಲಿ ಪಡಿಮೂಡದೆ ಕಾವ್ಯವು ದಿಕ್ಕುದೆಸೆ ತಪ್ಪುವಂತಾಯಿತು. ಇದರಿಂದ ನವ್ಯಕಾವ್ಯವು ಭಾಗಶಃ ಅಪಹಾಸ್ಯಕ್ಕೆ ಈಡಾಯಿತು ಮತ್ತು ಕಾವ್ಯವು ಕಾವ್ಯಾಸಕ್ತರಿಂದ ನಿಧಾನವಾಗಿ ದೂರಸರಿಯಿತು.
ಅಡಿಗರು ಮಾತ್ರ ತಮ್ಮ ಕಾವ್ಯಭಾಷೆಯನ್ನು ಮುಕ್ತಛಂದಸ್ಸಿಗೆ ಬದಲಿಸಿದರೂ ನವೋದಯ ಕಾಲಘಟ್ಟದಲ್ಲಿ ತಾವು ಬರೆದ ಕವನಗಳಲ್ಲಿದ್ದ ಲಯವನ್ನು ನವ್ಯ ಕಾವ್ಯದಲ್ಲೂ ಬಳಸಿಕೊಂಡರು. ಉದಾಹರಣೆಗೆ ನವೋದಯ ಕಾಲದಲ್ಲಿ ಅವರು ಬರೆದ ಬಹುಪ್ರಸಿದ್ಧ ‘ಕೆಂದಾವರೆ’ ಕವನ.
ಇಂದು ಕೆಂದಾವರೆ ದಳದಳಿಸಿ ದಾರಿಯಲಿ
ಗಂಧದೌತಣ ಹೋಗಿ ಬರುವ ಜನಕೆ
ಮಂದರ ಮಾರುತನಿರಲಿ, ಮರಿದುಂಬಿಯಿರಲಿ ಆ
ನಂದವಿರೆ ಅತಿಥಿಗಳ ಕರೆಯಬೇಕೇ?
ಇಲ್ಲಿ ಅದಿಪ್ರಾಸವಿದೆ, ಸುಂದರವಾದ ಲಯ ಇದೆ. ಗೀತಗುಣವೂ ಸಮೃದ್ಧವಾಗಿದೆ ಮತ್ತು ಇದು ವೀರಚೌಪದಿ ಪ್ರಕಾರಕ್ಕೆ (5 ಮಾತ್ರೆಗಳ 4 ಗಣ ಮೊದಲ ಸಾಲಲ್ಲಿ ಮತ್ತು 5 ಮಾತ್ರೆಗಳ 3 ಗಣ ಎರಡನೇ ಸಾಲಲ್ಲಿ ಮತ್ತು ಒಂದು ಲಘು ಮಾತ್ರೆ) ಸೇರಿದ ಕವನವಾಗಿದೆ. ಅಡಿಗರ ನವ್ಯಕವಿತೆ ‘ಶ್ರೀರಾಮನವಮಿ’ ಕೂಡಾ ಇದೇ ಬಗೆಯ ಛಂದಸ್ಸಿನಲ್ಲಿದೆ ಮತ್ತು ಅದರಲ್ಲಿನ ಬಿಗಿಬಂಧ ಮತ್ತು ಲಯಗಾರಿಕೆಯು ‘ಕೆಂದಾವರೆ’ಯ ಹಾಗೇ ಕಾಣುತ್ತದೆ.
ಷಟ್ಚಕ್ರ ರಾಕೆಟುಗಳ ಹಂತಹಂತಕ್ಕೆ
ಅಂಚೆ ತಲುಪಿತೇ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಆಂಥ ರೂಪ-ರೇಖೆ?
* * *
ಇಂಥ ನವ್ಯ ಕಾವ್ಯ ಪ್ರಕಾರವು ಕೂಡಾ 1975-1980ರ ಸುಮಾರಿಗೆ ಸವಕಲು ದಾರಿಯಲ್ಲಿದೆ ಅಥವಾ ‘ಸಿದ್ಧಶೈಲಿ’ಗೆ ಒಳಗಾಗಿದೆ ಎಂಬ ಹಂತಕ್ಕೆ ಬಂದು ತಲಪಿತು. ಆಗ ‘ಕಾವ್ಯ ಎನ್ನುವುದು ಬೀದಿಗೆ ಬರಬೇಕು’ ಎಂಬ ಪರಿಕಲ್ಪನೆ ನಮ್ಮ ಯುವಬರಹಗಾರರಲ್ಲಿ ಮೂಡಿತು. ಅಷ್ಟರಲ್ಲಿ ದೇಶದಲ್ಲಿ ರಾಜಕೀಯ ಸ್ಥಿತ್ಯಂತರವಾಗಿತ್ತು. ತುರ್ತುಪರಿಸ್ಥಿತಿಯ ಘೋಷಣೆಯಾಗಿತ್ತು. ನಿಧಾನವಾಗಿ ತುರ್ತುಪರಿಸ್ಥಿತಿಯನ್ನು ಇಂದಿರಾಗಾಂಧಿ ಹಿಂದೆಗೆದುಕೊಂಡು ಚುನಾವಣೆ ಘೋಷಿಸಿದಾಗ, ಅಡಿಗರು ಕಾಂಗ್ರೆಸೇತರ ಪಕ್ಷಗಳ ಅಭ್ಯರ್ಥಿಯಾಗಿ ಜನಸಂಘದಿಂದ ಕೆಂಗಲ್ ಹನುಮಂತಯ್ಯನವರ ವಿರುದ್ಧ ಚುನಾವಣೆಗಿಳಿದರು. ಅನೇಕ ಸಮಾಜವಾದಿ ಧೋರಣೆಯ ಲೇಖಕರು ಅಡಿಗರು ಸನಾತನ ಹಿಂದೂವಾದಿ ಬ್ರಾಹ್ಮಣಶಾಹಿ ಇತ್ಯಾದಿ ನೆಲೆಯಲ್ಲಿ ತರ್ಕಿಸಲು ಮುಂದಾಗಿ ಅಡಿಗರಿಂದ ದೂರ ಸರಿದರು.
ಇದೇ ಸಂದರ್ಭದಲ್ಲಿ ಖ್ಯಾತ ಕಾದಂಬರಿಕಾರ ವಿಶುಕುಮಾರ್ ಅವರು ಮೈಸೂರಿನಲ್ಲಿ ‘ಶೂದ್ರ ಸಮ್ಮೇಳನ’ವನ್ನು ನಡೆಸಲು ಮುಂದಾದರು. ಈ ಹಿನ್ನೆಲೆಯಲ್ಲಿ ಸೇರಿಕೊಂಡು ಅನೇಕ ಸಾಹಿತಿಗಳು ನವ್ಯಕ್ಕಿಂತ ಭಿನ್ನವಾದ ಸಾಹಿತ್ಯಮಾರ್ಗವೊಂದನ್ನು ಕಂಡುಕೊಳ್ಳಬೇಕು ಎಂದು ಚಿಂತಿಸತೊಡಗಿದರು. ಆ ನೆಲೆಯಲ್ಲಿ ಸಿದ್ಧಲಿಂಗಯ್ಯ, ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲರಂಥವರು ಈ ಚಿಂತನೆಗೆ ಚಾಲನೆ ನೀಡಿದರು. ಇದರಲ್ಲಿ ನೇರವಾಗಿ ಒಳಗೊಳ್ಳದಿದ್ದರೂ ಆಗ ಪ್ರಸಿದ್ಧಿಯ ತುತ್ತತುದಿಯಲ್ಲಿದ್ದ ಸಾಹಿತಿಗಳಾದ ಪಿ. ಲಂಕೇಶ್ ಮತ್ತು ಪೂರ್ಣಚಂದ್ರ ತೇಜಸ್ವಿಯವರೂ ಇವರಿಗೆ ಬೆಂಗಾವಲಾಗಿ ನಿಂತರು. ಇದರಿಂದಾಗಿ ಧರ್ಮಸ್ಥಳದಲ್ಲಿ ಅಡಿಗರ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿದ್ದ (1979) ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಸಮ್ಮೇಳನಕ್ಕೆ ಸಮಾನಾಂತರವಾಗಿ ಮತ್ತು ಅದನ್ನು ಧಿಕ್ಕರಿಸುವ ಬಂಡಾಯ ಸಾಹಿತ್ಯ ಸಮ್ಮೇಳನವು ನಡೆದು ‘ಬಂಡಾಯ ಸಾಹಿತ್ಯ’ ಮಾರ್ಗವು ಹುಟ್ಟಿಕೊಂಡಿತು.
ಬಂಡಾಯ ಸಾಹಿತ್ಯವೆಂದರೆ ನವೋದಯ ಸಾಹಿತ್ಯ ಕಾಲದಲ್ಲಿ ಅರಾಧನಾ ರೂಪದಲ್ಲಿದ್ದ ದೇಶ ಧರ್ಮ ಪ್ರಕೃತಿ ಪ್ರೀತಿ ಪ್ರೇಮ ಮೊದಲಾದವುಗಳಿಂದ ಹೊರಬರುವುದು ಮತ್ತು ಮನುಷ್ಯನ ಅಂತರಂಗದ ಒಳಗೆ ಸರ್ಚ್ಲೈಟನ್ನು ಬಿಟ್ಟು, ಅಲ್ಲಿ ಇರಬಹುದಾದ ಅನಾಥಪ್ರಜ್ಞೆ ಪರಕೀಯತೆಯೇ ಮೊದಲಾದ ಮನುಷ್ಯನ ಮೂಲಭೂತ ಗುಣಗಳನ್ನು ವಿಶ್ಲೇಷಿಸುವ ಅಥವಾ ಶೋಧಿüಸುವ ನವ್ಯಸಾಹಿತ್ಯವನ್ನು ಪೂರ್ತಿಯಾಗಿ ಧಿಕ್ಕರಿಸುವುದು. ಹಾಗೂ ಆ ನೆಲೆಯಲ್ಲಿ ದಂತÀಗೋಪುರದಲ್ಲಿ ಕುಳಿತು ತಾವು ಸೃಷ್ಟಿಸುವ ಸಾಹಿತ್ಯವೇ ಶ್ರೇಷ್ಠವೆಂದು ಸಾರುತ್ತಾ ಶ್ರೇಷ್ಠತೆಯ ವ್ಯಸನದಲ್ಲಿ ಮುಳುಗಿಹೋಗಿರುವ ಸಾಹಿತಿಗಳ ಬರಹಗಳನ್ನು ಪುನರ್ಮೌಲ್ಯಮಾಪನಕ್ಕೆ ಒಳಪಡಿಸುವುದು. ಸಾಹಿತ್ಯವು ಶೋಷಿತರ ಬೆವರಿನ ದನಿಯಾಗಬೇಕು. ಈ ನೆಲೆಯಲ್ಲಿ ಈ ಮನೋಭಾವದವರೆಲ್ಲ, ಮುಖ್ಯವಾಗಿ ಬ್ರಾಹಣೇತರರೆಲ್ಲ, ಅಥವಾ ಶೂದ್ರ ಸಾಹಿತಿಗಳೆಲ್ಲ ತಂತಮ್ಮ ಬದುಕು ಬವಣೆಗಳ ಹಿನ್ನೆಲೆಯ ಸಾಹಿತ್ಯವನ್ನು ಸೃಷ್ಟಿಸಿ ಅದನ್ನು ಮುನ್ನಲೆಗೆ ತರಬೇಕೆಂದು ಆ ಸಮ್ಮೇಳನ ಕರೆಕೊಟ್ಟಿತು.
ಇದು ಆ ದಿನಗಳಲ್ಲಿ ಜನರಿಂದ ದೂರ ಹೋದಂತಿದ್ದ ಸಾಹಿತ್ಯವನ್ನು ಸ್ವಲ್ಪಮಟ್ಟಿಗೆ ಮತ್ತೆ ಜನರ ಕಡೆ ಎಳೆದು ತಂದಂತಾಯಿತು ಮತ್ತು ಪರಸ್ಪರ ಪೋಷಿಸುತ್ತ ಗುಂಪುಗಾರಿಕೆಯಲ್ಲಿ ಮುಳುಗಿದ್ದ ಶ್ರೇಷ್ಠತೆಯ ವ್ಯಸನದಲ್ಲಿದ್ದ ನವ್ಯ ಸಾಹಿತಿಗಳ ಮುಖವಾಡಗಳನ್ನು, ಅತಿರೇಕಗಳನ್ನು ಬೆತ್ತಲುಗೊಳಿಸಿತು. ಹಾಗೆಂದು ನವ್ಯಸಾಹಿತ್ಯದ ಉಚ್ಛ್ರಾಯ ಕಾಲಘಟ್ಟದಲ್ಲಿ ರಚಿಸಲ್ಪಟ್ಟ ಕಾವ್ಯ ಕಾದಂಬರಿ ನಾಟಕ ಮೊದಲಾದವುಗಳಲ್ಲಿನ ಕೆಲವು ಕನ್ನಡದ ಶ್ರೇಷ್ಠ ಸಾಹಿತ್ಯಕೃತಿಗಳಾಗಿದ್ದವು ಎಂಬುದನ್ನು ಮರೆಯುವಂತಿಲ್ಲ.
* * *
ಬಂಡಾಯ ಸಾಹಿತ್ಯದ ಕಾವ್ಯ ಪ್ರಕಾರದಲ್ಲಿ ಮಹತ್ತ್ವದ ಹೆಸರು ಪಡೆದವರು ಪ್ರೊ| ಸಿದ್ಧಲಿಂಗಯ್ಯನವರು. ಅವರ ‘ನಮ್ಮ ದೇಶ ನಮ್ಮ ಜನ’ ಸಂಕಲನದ ಅನೇಕ ಕವನಗಳು, ತುಳಿತಕ್ಕೊಳಪಟ್ಟವರು, ಶತಮಾನಗಳ ಕಾಲದಿಂದ ಹಿಡಿದಿಡಲ್ಪಟ್ಟಿದ್ದ ನೋವನ್ನು ಒಮ್ಮೆಲೆ ಸ್ಟೋಟಿಸಿದಷ್ಟು ಪ್ರಖರವಾಗಿದ್ದವು. ಹೀಗೆ ಶೋಷಿತರು ಅನುಭವಿಸಿದ ನೋವು ಜ್ವಾಲಾಮುಖಿಯಾಗಿ ಸಿಡಿದು ಕಾವ್ಯವಾಗಿ ಹೊರಬಂದದ್ದರಲ್ಲಿ ಆಶ್ರ್ಚಯವೇನೂ ಇರಲಿಲ್ಲ. ಇದೂ ಕೂಡಾ ತನ್ನಿಂತಾನೇ ಕನ್ನಡದಲ್ಲಿ ಹುಟ್ಟಿದ ಸಾಹಿತ್ಯವಲ್ಲ. ಆಂಧ್ರದಲಿ ‘ಶ್ರೀ’ ಮೊದಲಾದವರಿಂದ ಕಾವ್ಯರೂಪದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ತೀರಾ ಕೆಳವರ್ಗದವರ ‘ಉಚಲ್ಯ’ದಂಥ ಆತ್ಮಚರಿತ್ರೆಗಳು ಆಗಲೇ ಪ್ರಕಟವಾಗಿತ್ತು. ಕನ್ನಡದಲ್ಲಿ ತುಸು ತಡವಾಗಿ ಬಂತು. ಇದೇ ಸಂದರ್ಭದಲ್ಲಿ ಸ್ತ್ರೀಶೋಷಣೆಯೂ ಪರೋಕ್ಷವಾಗಿ ಬಂಡಾಯ ಚಳವಳಿಯ ಭಾಗವಾಯಿತು.
1950ರ ನಂತರದ ದಿನಗಳಲ್ಲಿ ಹೊಸತಾಗಿ ಬರೆಯುವವರೆಲ್ಲರೂ ತಮ್ಮ ತಮ್ಮ ಹಿಂದಿನ ತಲೆಮಾರುಗಳ ಬದುಕಿನ ಬವಣೆಗಳನ್ನು ಕಾವ್ಯವಾಗಿಸಲು ಹೊರಟರು ಮತ್ತು ಅವರು ಬಂಡಾಯ ಕಾವ್ಯ ಅಥವಾ ಬಂಡಾಯ ಸಾಹಿತ್ಯವು ಬೆಚ್ಚಗಿನ ಮನೆಯ ಅಲಂಕೃತ ಅಲ್ಮೇರಾಗಳಲ್ಲಿ ಅಲಂಕಾರಕ್ಕಾಗಿ ಇರುವುದಲ್ಲ, ಅದು ಬೀದಿಗಳಲ್ಲ್ಲಿ, ಬಡವರ ಗುಡಿಸಲುಗಳಲ್ಲಿ, ದುಡಿಯುವವರ ಬೆವರಿನಲ್ಲಿ, ಕಾರ್ಖಾನೆಗಳ ಸದ್ದಿನಲ್ಲಿ, ಸುರಿಯುವ ಮಳೆಯ ಹಾಗೆ, ಬೀಸುವ ಗಾಳಿಯ ಹಾಗೆ, ಉರಿಯುವ ಬೆಂಕಿಯ ಹಾಗೆ ಇರುವವು – ಎಂಬುದನ್ನು ತಮ್ಮ ಸಾಹಿತ್ಯದಲ್ಲಿ ಹೇಳಲು ಮುಂದಾದರು.
ಬಂಡಾಯ ಚಳವಳಿಯೂ ಕೂಡಾ ನಿಧಾನವಾಗಿ 2000 ಇಸವಿಯ ವೇಳೆಗೆ ಸಿದ್ಧಶೈಲಿಗೆ, ಸಿದ್ಧಾಂತಕ್ಕೆ ಬದ್ಧವಾಗಿ ಸವಕಲಾಯಿತು. ಆಗ ಸಾಹಿತ್ಯವು (ಕಾವ್ಯವು) ದಲಿತ ಸಾಹಿತ್ಯ ರೂಪದಲ್ಲಿ ಇನ್ನೊಂದು ತಿರುವು ಪಡೆಯಿತು. ಜಾತಿಯಿಂದ ದಲಿತರೆನಿಸಿಕೊಂಡವರು ಬರೆದ ಸಾಹಿತ್ಯವು ದಲಿತ ಸಾಹಿತ್ಯ ಎಂಬ ಹಣೆಪಟ್ಟಿಗೆ ಒಳಗಾಗಬೇಕೆಂಬ ಮಾತು ಕೇಳಿಬಂತು. ದಲಿತರ ಅನುಭವವನ್ನು ದಲಿತೇತರರು ಬರೆದರೆ ಅದು ಯಾಕೆ ದಲಿತ ಸಾಹಿತ್ಯವಾಗಲಾರದು, ಆಗಬಾರದು? – ಎಂಬ ಚರ್ಚೆಯೂ ಎದ್ದು ನಿಂತಿತು. ಶೋಷಣೆಗೆ ಒಳಗಾದ ಹೆಣ್ಣು ಬರೆದ ಸಾಹಿತ್ಯವೂ ದಲಿತ ಸಾಹಿತ್ಯಕ್ಕೆ ಸಮನಾದುದು ಎಂಬ ಭಾವವೂ ಮೂಡಿಬಂತು. ಈ ನೆಲೆಯಲ್ಲಿ ಸೃಷ್ಟಿಯಾದ ಕೃತಿಗಳಲ್ಲಿ ಶ್ರೇಷ್ಠತೆಯ ವ್ಯಸನ ಇರಬಾರದೆಂಬ ಮಾತಿದ್ದರೂ, ನಿಧಾನವಾಗಿ ಇಲ್ಲಿಯೂ ಪ್ರಶಸ್ತಿಯ ಆಕಾಂಕ್ಷೆಗಳು ಹುಟ್ಟಿ ಪ್ರಶಸ್ತಿ ಪಡೆದವರ ಸಾಹಿತ್ಯವು ಶ್ರೇಷ್ಠ ಎಂಬ ಮನೋಧರ್ಮ ವಿಜೃಂಭಿಸಿತು. ಇದರಿಂದ ಸಾಹಿತ್ಯವೇ ಬೇರೆ ಸಾಹಿತಿಗಳ ಬದುಕೇ ಬೇರೆ ಎಂಬುದನ್ನು ತೆರೆದಿಟ್ಟಂತಾಯಿತು.
* * *
ಹೀಗೆ ನವೋದಯದ ಹೆಸರಿನಲ್ಲಿ ಪ್ರಾರಂಭವಾದ ನಮ್ಮ ಕಾವ್ಯಮಾರ್ಗವನ್ನು ಹೊಸತಾಗಿ ಬರೆಯುವವರು ಹೇಗೆ ಪರಿಶೀಲಿಸಬೇಕು ಮತ್ತು ತಾನು ಹೇಗೆ ಬರೆಯಬೇಕು ಎಂದು ನಿಶ್ಚಯಿಸುವುದು ಇಂದಿನ ದೊಡ್ಡ ಸವಾಲು.
ನಮ್ಮ ಕನ್ನಡ ಕಾವ್ಯವು ನವೋದಯ, ನವ್ಯ, ಬಂಡಾಯ ಮತ್ತು ದಲಿತ ಎನ್ನುವ ಪಂಥಗಳಲ್ಲಿ ಟಿಸಿಲೊಡೆದು ಅರಳಿದ ಈ ಎಲ್ಲ ‘ಪಂಥ’ಗಳಲ್ಲಿ ಬಂದ ಕಾವ್ಯ ಅಥವಾ ಸಾಹಿತ್ಯದಲ್ಲಿ ಶ್ರೇಷ್ಠ ಕೃತಿಗಳು ಹಾಗೂ ಕಳಪೆ ಕೃತಿಗಳು ಇವೆ – ಎನ್ನುವುದು ಸತ್ಯ. ಹಾಗೆಂದು ಈ ಪಂಥಗಳಲ್ಲಿ ಯಾವುದು ದೊಡ್ಡದು, ಯಾವುದು ಶ್ರೇಷ್ಠ – ಎಂದು ನಾವು ಪ್ರಶ್ನಿಸುವುದು ಸರಿಯಲ್ಲ. ಕನ್ನಡ ಭಾಷೆಯು ಈ ನಾಲ್ಕೂ ಪಂಥಗಳ ಮೂಲಕ ತನ್ನನ್ನು ತಾನು ಮೀರಿದೆ ಮತ್ತು ಸಮೃದ್ಧಗೊಳಿಸಿಕೊಂಡಿದೆ.
* * *
ನವ್ಯಕಾವ್ಯವನ್ನು ಪ್ರಾರಂಭದಲ್ಲಿ ಒಪ್ಪಿಕೊಂಡ ಪೂರ್ಣಚಂದ್ರ ತೇಜಸ್ವಿಯವರು ನಿಧಾನವಾಗಿ ಅದರಿಂದ ಹೊರಬಂದು ತಮ್ಮದೇ ಆದ ವ್ಯಕ್ತಿವಿಶಿಷ್ಟ ಸಿದ್ಧಾಂತದಿಂದ ಕೃತಿಗಳ ರಚನೆಯಲ್ಲಿ ಯಶಸ್ವಿಯಾದರು. ಕಂಬಾರರು ದೇಸಿಯನ್ನೇ ತಮ್ಮ ಕೃತಿಗಳಲ್ಲಿ ನವ್ಯವಾಗಿಸುವ ಕಲೆಗಾರಿಕೆಯನ್ನು ಮೆರೆದರು. ಕೆ.ವಿ. ತಿರುಮಲೇಶರು ಮಾತ್ರ ತಮ್ಮ ‘ಮುಖಾಮುಖಿ’ ಕವನ ಸಂಗ್ರಹದಿಂದ ಈಚೆಗೆ ನವ್ಯದಿಂದ ಹೊರಬಂದು ತನ್ನದೇ ಆದ ಮಾರ್ಗವನ್ನು ಕಂಡುಕೊಂಡು ಕಾವ್ಯದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿರುವುದು ಉಲ್ಲೇಖನೀಯ. ಆದರೂ ಅವರ ‘ಅವಧ’ ಕವನ ಸಂಗ್ರಹದ ಕವನಗಳು ತಮ್ಮ ಉತ್ಕøಷ್ಟತೆಯಿಂದ ಬೀಗಿದ ಹಾಗೆ ಅನಂತರದ ಅವರ ಪ್ರಯೋಗಗಳು ನನ್ನ ದೃಷ್ಟಿಯಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಲಿಲ್ಲ.
ಇಲ್ಲಿ ಹೆಸರಿಸಬೇಕಾದ ಇನ್ನೊಬ್ಬ ಕವಿ ಎಸ್. ಮಂಜುನಾಥ್. ಅವರು ತಮ್ಮದೇ ಆದ ಅತಿವಿಶಿಷ್ಟವೂ ಮೋಹಕವೂ ಆದ ಕವನಗಳನ್ನು ಬರೆಯುತ್ತಾ ಬಂದವರು. ಯಾವುದೇ ಕಾವ್ಯಪಂಥವನ್ನು ಅವರು ಒಪ್ಪಲಿಲ್ಲ. ಆದರೆ ನವೋದಯ ಮತ್ತು ನವ್ಯದ ಎಲ್ಲ ಸಾಧ್ಯತೆಗಳನ್ನು ಅವರು ತಮ್ಮ ಕಾವ್ಯದಲ್ಲಿ ಹಿಡಿದಿಟ್ಟಿದ್ದರು ಮತ್ತು ಅವುಗಳಿಂದ ತಾನು ಹೇಗೆ ಭಿನ್ನವಾಗಿರಬೇಕು ಎಂದು ಕೂಡಾ ಕಂಡುಕೊಂಡಿದ್ದರು. ಇಂಥ ‘ಜೀವಯಾನ’ದ ಕವಿ ಈಚೆಗೆ ನಮ್ಮನ್ನು ಅಗಲಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಇಂದು ಬರೆಯುತ್ತಿರುವ ಹೊಸಬರು ಯಾವುದು ಕಾವ್ಯ, ಯಾವುದು ಕಾವ್ಯವಲ್ಲ ಎಂದು ನಿರ್ಧರಿಸುವುದು ಖಂಡಿತ ಕಷ್ಟ. ಕನ್ನಡ ಕಾವ್ಯವು ಹಾದುಬಂದ ಈ ಹಲವು ಘಟ್ಟಗಳಲ್ಲಿನ ಎಲ್ಲ ಸಾಧ್ಯತೆಗಳನ್ನು ಅವರು ಮೀರಿ ಬರೆಯಬೇಕು. ಅಂದರೆ, ಅಂಥ ವಾತಾವರಣವು ನಮ್ಮ ಮಾಧ್ಯಮಗಳಲ್ಲಾಗಲಿ, ವಿಶ್ವವಿದ್ಯಾನಿಲಯಗಳಲ್ಲಾಗಲಿ ಇದ್ದಂತಿಲ್ಲ. ಹಾಗಾಗಿ ಅಡಿಗರು ಹೇಗೆ ಕವನಗಳನ್ನು ಬರೆಯಲು ಪ್ರಾರಂಭಿಸಿದಾಗ ‘ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು ಭಿನ್ನವಾಗಿದೆ ಮನವು’ ಎಂಬ ಸ್ಥಿತಿ ಇತ್ತೋ ಅದೇ ಸ್ಥಿತಿ ಇಂದೂ ಇದೆ ಎಂದರೆ ತಪ್ಪಾಗದು. ಹಾಗೆ ನೋಡಿದರೆ ಹೊಸದಾಗಿ ಬರೆಯಲು ಪ್ರಾರಂಭಿಸುವವರಿಗೆ ಯಾವತ್ತೂ ಈ ಅವಸ್ಥೆ ಎದುರಾಗುವುದು ಸಹಜ.
ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೆ? ಅದು ಏನು? – ಎನ್ನುವುದನ್ನು ಹೊಸ ಬರಹಗಾರರೇ ನಿರ್ಧರಿಸಬೇಕಾಗಿದೆ. ಪ್ರತಿಯೊಬ್ಬ ಕವಿಯೂ ತಾನು ಬರೆಯಲು ಹೊರಟಾಗ ತಾನು ಬರೆಯುವ ವಸ್ತು ನಿಜವಾಗಿಯೂ ತನ್ನನ್ನು ಕಾಡುತ್ತಿದೆಯೆ – ಎಂದು ಮೊದಲು ಪ್ರಶ್ನಿಸಿಕೊಳ್ಳಬೇಕು. ಅನಂತರ ಆ ವಸ್ತುವಿನ ಕುರಿತು ಹಿಂದೆ ಯಾರಾರೆಲ್ಲ ಏನೇನೆಲ್ಲ ಹೇಳಿದ್ದಾರೆ ಎಂದು ಕನಿಷ್ಠ ತಿಳಿದುಕೊಳ್ಳಬೇಕು. ಈಗ ಇರುವ ಆ ಕಾವ್ಯ/ಸಾಹಿತ್ಯಕ್ಕಿಂತ ಭಿನ್ನವಾಗಿ ಬರೆಯುವುದು ಸಾಧ್ಯವೆ ಎಂದು ಚಿಂತಿಸಬೇಕು. ಕೊನೆಯದಾಗಿ ತನ್ನ ಅನುಭವವನ್ನು ಹೊರತರಲು ತನ್ನದೇ ಭಾಷೆ, ಶೈಲಿ ಮತ್ತು ತಂತ್ರವನ್ನು ಸ್ವತಃ ಸೃಷ್ಟಿಸಿಕೊಳ್ಳಬೇಕು.
ಅಡಿಗರು ‘ಪ್ರಾರ್ಥನೆ’ ಕವಿತೆಯಲ್ಲಿ ಹೇಳಿದ ಮಾತು ನೆನಪಾಗುತ್ತದೆ.
ಈ ಅರಿವು ಅರೆ ಹೊರೆದ ಮೊಟ್ಟೆ, ದೊರೆ; ಚಿಪ್ಪೊಡೆದು
ಬರಲಿ ಪರಿಪೂರ್ಣಾವತಾರಿ ವಿನತಾಪುತ್ರ-
ಗಾಳಿ ಕಡೆಯಲು ಸೆಟೆದ ಬೆಳ್ಳಿಮಂತು
ನಿನ್ನ ತೊಡೆ ಹೊರೆ ಕೆಳಗೆ ಮತ್ತೆ – ಸಡಿಲು